ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರ್ಗಮನ 2006- ಆಗಮನ 2007

By Staff
|
Google Oneindia Kannada News


ಇನ್ನು ನನ್ನ ಮಗನ ವಿಶ್ವವಿದ್ಯಾಲಯದ ಘಟಿಕೋತ್ಸವದ ವಿಷಯ. ಮಗನ ಪದವೀದಾನ ಸಮಾರಂಭವನ್ನು ವೀಕ್ಷಿಸುತ್ತ ನನ್ನ ಘಟಿಕೋತ್ಸವಗಳ ನೆನಪು ಸುಳಿಯಿತು. ನನ್ನ ಮೊದಲ ಪದವಿ ಬೆಂಗಳೂರು ವಿಶ್ವವಿದ್ಯಾಲಯದ ಮೊದಲನೇ ಬ್ಯಾಚಿನಲ್ಲಿ. ಪದವೀದಾನ ಸಮಾರಂಭದಂದು ನಾನು ಬೆಂಗಳೂರು ಬಿಟ್ಟಾಗಿತ್ತು. ನಾನು ಮುಂಬೈ ಐ. ಐ. ಟಿಯಲ್ಲಿ ಎಮ್‌.ಟೆಕ್‌ ತರಗತಿಗೆ ಸೇರಿಕೊಳ್ಳಬೇಕಾಗಿದ್ದುದರಿಂದ ಘಟಿಕೋತ್ಸವದ ಸಮಾರಂಭದಲ್ಲಿ ಭಾಗವಹಿಸಲಾಗಲಿಲ್ಲ.

ಲಾಲ್‌ ಬಾಗಿನ ಗಾಜಿನ ಮನೆಯಲ್ಲಿ ನಡೆದ ಸಮಾರಂಭಕ್ಕೆ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್‌ ಮುಖ್ಯ ಅತಿಥಿಯಾಗಿ ಬಂದಿದ್ದರೆಂಬುದನ್ನು ಪೇಪರಿನಲ್ಲಿ ಓದಿ ತಿಳಿದುಕೊಂಡೆ. ನನ್ನ ಎರಡನೇ ಪದವಿ ಮುಂಬೈ ಐ.ಐ.ಟಿ ಯಿಂದ. ಪದವೀದಾನ ಸಮಾರಂಭ ನಡೆದಂದು ನಾನು ಅಮೆರಿಕಾದಲ್ಲಿದ್ದೆ, ಹೀಗಾಗಿ ಎರಡನೆಯ ಪದವಿಯ ಘಟಿಕೋತ್ಸವವನ್ನೂ ತಪ್ಪಿಸಿಕೊಂಡೆ.

ಮೂರನೆಯ ಪದವಿ ಪಿಟ್ಸ್‌ಬರ್ಗ್‌ ವಿಶ್ವವಿದ್ಯಾಲಯದಿಂದ. ಪಿಎಚ್‌ಡಿ ಪದವಿಯ ಘಟಿಕೋತ್ಸವಕ್ಕಾದರೂ ಹೋಗಲೇಬೇಕೆಂದು ತಪ್ಪದೇ ಹಾಜಿರಾಗಿದ್ದೆನಾದರೂ ಅಂದು ನಡೆದ ಯಾವ ವಿಷಯವೂ ಮನಸ್ಸಿನಲ್ಲಿ ಉಳಿದಿಲ್ಲ. ಮಗನ ಪದವೀದಾನ ಸಮಾರಂಭದ ಕಾರಣದಿಂದ ಈ ಎಲ್ಲ ನೆನಪುಗಳು ಮತ್ತೆ ಮರುಕಳಿಸಿದವು. ಮಕ್ಕಳು ಓದಿ ದೊಡ್ದವರಾಗಿ ಪದವಿಗಳನ್ನು ಪಡೆದುಕೊಂಡಾಗಿನ ಸಂತೋಷವೇ ಬೇರೆ. ಅದು ಎಲ್ಲ ತಂದೆ ತಾಯಿಗಳಿಗೂ ಹೆಮ್ಮೆಯ ಸಮಯ.

ಮಗನಿಗೆ ಪದವಿ ಸಿಕ್ಕ ಈ ಘಟಿಕೋತ್ಸವವೂ ನಮ್ಮ ಇಬ್ಬರು ಹೆಣ್ಣು ಮಕ್ಕಳ ಪದವೀದಾನ ಸಮಾರಂಭದಂತೆಯೇ ಇದ್ದವು. ಆದರೆ ಮನಸ್ಸಿನಮೇಲೆ ಪರಿಣಾಮ ಬೀರಿದ ಒಂದು ವಿಷಯ ಹೀಗಿತ್ತು. ಕೊರಿಯಾ ದೇಶದಿಂದ ಅಮೆರಿಕೆಗೆ ಬಂದು ಇಂಗ್ಲಿಷ್‌ ಭಾಷೆಯ ಪರಿಚಯವಿಲ್ಲದೇ, ಕಾಲೇಜಿಗೆ ಶುಲ್ಕ ತೆರಲು ಕಾಸಿಲ್ಲದೇ ಪಡಬಾರದ ಪಾಡು ಪಟ್ಟರೂ ಪರದೇಶದಲ್ಲಿ ಧೃತಿಗೆಡದೇ ಹೆಣಗಿ ವಿದ್ಯಾಭ್ಯಾಸಮಾಡಿದ ವಿದ್ಯಾರ್ಥಿನಿಯೊಬ್ಬಳನ್ನು ಅಂದಿನ ಪ್ರಮುಖ ಭಾಷಣಗಾರರ ಪೈಕಿ ಒಬ್ಬಳಾನ್ನಾಗಿ ಆಯ್ದುಕೊಂಡಿದ್ದು ಒಂದು ವಿಶೇಷವಾಗಿತ್ತು.

ಆ ಹುಡುಗಿ, ಪಾಪ, ಮಾತನಾಡಲು ಪ್ರಾರಂಭಿಸಿ, ಗದ್ಗದಕಂಠದಿಂದ ಮೂಕವಾದಳು, ಗೊಳೋ ಎಂದು ಅತ್ತುಬಿಟ್ಟಳು. ಮಿಷಿಗನ್ನಿನ ಕಮ್ಯೂನಿಟಿ ಕಾಲೇಜೊಂದರಲ್ಲಿ ಮೊದಲ ದಿನವೇ ಮೂರಡಿ ಹಿಮಪಾತದಲ್ಲಿ ನಡೆಯುತ್ತ ಕೈಕಾಲು ಹೆಪ್ಪುಗಟ್ಟಿದ ಸಮಯವನ್ನು ನೆನೆಸಿಕೊಂಡು ಬಿಕ್ಕಿದಳು. ದೇಶಬಿಟ್ಟು ಬಂದು ನಾಲ್ಕುವರ್ಷಗಳಾದರೂ ಹಿಂದಿರುಗಲು ಕಾಸಿಲ್ಲದೇ ತಿಣುಕಿದ್ದನ್ನು ನೆನೆದು ಮತ್ತೆ ಅತ್ತಳು.

ಎಲ್ಲಕ್ಕಿಂತ ಮೊದಲು ಕೆಲಸವೊಂದನ್ನು ಹುಡುಕಿ ಅದು ಸಿಕ್ಕ ಕೂಡಲೇ ವಾಯುನಿಯಂತ್ರಣ ಇರುವ ಹೊಸ ಕಾರೊಂದನ್ನು ಕೊಳ್ಳುವಂಥ ತನ್ನ ‘‘ಚಿನ್ನ-ಚಿನ್ನ’’ ಆಸೆಗಳನ್ನು ಎಲ್ಲರೊಂದಿಗೆ ಹಂಚಿಕೊಂಡದ್ದು ಮನಮುಟ್ಟುವಂತಿತ್ತು. ಅಂತೂ, ಅಂಥ ಕಷ್ಟಗಳನ್ನೇನೂ ಅನುಭವಿಸದ ನನ್ನ ಮಗನಿಗೆ ತಾನು ಎಷ್ಟು ಅದೃಷ್ಟವಂತ ಎಂಬುದು ಮನವರಿಕೆಯಾಯಿತೋ ಇಲ್ಲವೋ ಗೊತ್ತಿಲ್ಲ. ದೂರದಿಂದ ನೋಡಿದಾಗ, ನನ್ನ ಮಗ ಭಾಷಣದಲ್ಲಿ ತಲ್ಲೀನನಾಗಿರಲಿಲ್ಲ ಎಂದು ತಿಳಿಯಲು ಕಷ್ಟವಾಗಲಿಲ್ಲ!

ಈ ಸಂದರ್ಭದಲ್ಲಿ ನಡೆದ ಮತ್ತಿಷ್ಟು ಪ್ರಕರಣವನ್ನು ಹಂಚಿಕೊಂಡು ಈ ಕಲಸು-ಅನಿಸಿಕೆಗಳನ್ನು ಮುಗಿಸುತ್ತೇನೆ. ಘಟಿಕೋತ್ಸವದಲ್ಲಿ ತೆಗೆದುಕೊಂಡ ಛಾಯಾಚಿತ್ರಗಳನ್ನು ತೊಳೆದು ಮುದ್ರಿಸಲೆಂದು ನಮ್ಮೂರಿನ ಲೇಕ್‌ಫಾರೆಸ್ಟ್‌ ಮಾಲಿನ ರಿಟ್ಸ್‌ ಕ್ಯಾಮೆರಾ ಅಂಗಡಿಗೆ ಭೇಟಿ ಕೊಟ್ಟೆ. ಅಲ್ಲಿ ಗಲ್ಲಾದಮೇಲೆ ಕುಳಿದ್ದವ ನನ್ನ ಹೆಸರು ಕುಲ ದೂರವಾಣಿ ಸಂಖ್ಯೆ ಎಲ್ಲಾ ವಿಚಾರಿಸಿ ಕಂಪ್ಯೂಟರಿನಲ್ಲಿ ಟೈಪಿಸಿದ. ನನ್ನ ಹೆಸರಿನಲ್ಲಿರುವ ‘‘ಮೈಸೂರ್‌’’ ಅವನ ಕಿವಿಗಳನ್ನು ನಿಮಿರಿಸಿದವೋ ಏನೋ! ತಕ್ಷಣ ಕೇಳಿದ. ‘‘ವಾಟ್‌ ಡು ಯು ಥಿಂಕ್‌ ಆಫ್‌ ಬೆಂಗಳೂರು ಇನ್‌ಸ್ಟೆಡ್‌ ಆಫ್‌ ಬ್ಯಾಂಗಲೋರ್‌?’’ ನನಗೆ ಆಶ್ಚರ್ಯವಾಯಿತು.

ನಮ್ಮ ನಾಡಿನಲ್ಲೇ ಹಲವರು ಬೆಂಗಳೂರು ಎಂಬ ಹೆಸರನ್ನು ವಿರೋಧಿಸುತ್ತಿರುವಾಗ ಈ ಅಪ್ಪಟ ಬಿಳೀ ಅಮೆರಿಕನ್‌ ಶುದ್ಧವಾದ ಉಚ್ಚಾರಣೆಯಲ್ಲಿ ಬೆಂಗಳೂರು ಎಂದನಲ್ಲದೇ ‘ಸಿಟಿ ಆಫ್‌ ಬೀನ್ಸ್‌’ ಎಂಬ ಭಾಷಾಂತರವನ್ನೂ ಕೊಟ್ಟ! ಎಲಾ ಇವನ ಎಂದುಕೊಂಡೆ. ಅವನು ಅಷ್ಟಕ್ಕೇ ನಿಲ್ಲಿಸಲಿಲ್ಲ, ಬಾಂಬೆ ಮುಂಬೈ ಆಗಲಿಲ್ಲವೇ, ಪೂನಾ ಪುಣೆ ಆಗಲಿಲ್ಲವೇ, ಕಲ್ಕಟ ಕೊಲ್ಕೊತ್ತಾ ಆಗಲಿಲ್ಲವೇ, ಮದ್ರಾಸ್‌ ಹೋಗಿ ಚೆನ್ನೈ ಆದಂತೆ ಬ್ಯಾಂಗಲೋರ್‌ ಬೆಂಗಳೂರು ಆಗಿದೆ ಎಂದ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X