ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಲತರಂಗ : ವಿಷಯ ವೈವಿಧ್ಯ, ವಿಚಾರ ಸಮೃದ್ಧ

By Staff
|
Google Oneindia Kannada News

ಇಡಿಯ ಸಂಗ್ರಹವನ್ನು ಓದುತ್ತ ಹೋದಂತೆ, ಡಾ.ನಟರಾಜ ಅವರ ವಿಶಾಲ ದೃಷ್ಟಿಕೋನದ ಬಗ್ಗೆ ಓದುಗನಲ್ಲಿ ಅಭಿಮಾನ ಮೂಡುತ್ತದೆ.

ಡಾ.ಬಿ.ಎ.ಸನದಿ (ಬಿಡದಿ, ಟೆಕ್ಸಸ್‌)

ಕನ್ನಡ ವೆಬ್‌ ಸೈಟ್‌ವೊಂದರಲ್ಲಿ ನಿಯಮಿತವಾಗಿ ಪ್ರಕಟವಾದ ವಿವಿಧ ವಿಷಯಗಳನ್ನು ಕುರಿತಾದ ಲೇಖನಗಳ ಇಂಥ ಸಂಗ್ರಹವೊಂದನ್ನು ನಾನೋದಿದ್ದು ಇದೇ ಮೊದಲ ಬಾರಿ. ಈ ಮೊದಲು ಇಂಥ ಕೃತಿಗಳು ಕನ್ನಡದಲ್ಲಿ ಬಂದಿವೆಯೋ ಇಲ್ಲವೋ, ನನಗೆ ತಿಳಿಯದು. ಡಾ. ನಟರಾಜ ಅವರ ಹೊಸ ಕೃತಿ 'ಜಾಲತರಂಗ" ವನ್ನು ಬಲು ಕುತೂಹಲದಿಂದಲೇ ಓದಿದೆ.

ಒಬ್ಬ ನುರಿತ ಹಾಗೂ ಲೋಕದ ವಿವಿಧ ವಿಷಯಗಳನ್ನು ಅರಿತ ಇಂಜಿನಿಯರ್‌-ಕವಿ, ವೈದ್ಯಕೀಯ ವೃತ್ತಿಗೆ ಸಂಬಂಧಿಸಿರದ ಓರ್ವ ಡಾಕ್ಟರ್‌-ಲೇಖಕ ಅಮೇರಿಕಾದಂಥ ವಿಕಸಿತ ರಾಷ್ಟ್ರದ ರಾಜಧಾನಿಯಲ್ಲಿದ್ದು-ಅರ್ಥಾತ್‌ ಕನ್ನಾಡಿನಿಂದ ಬಲು ದೂರದಲ್ಲಿದ್ದು- 'ದಟ್ಸ್‌ ಕನ್ನಡ " ಜಾಲನಿವೇಶನದಲ್ಲಿ ಮೂಡಿಸಿದ ಈ ಲೇಖನಗಳ ವಿಷಯವ್ಯಾಪ್ತಿಯೇ ಮೊದಲು ಅಚ್ಚರಿ ಮೂಡಿಸುವಂತಿದೆ.

ಸಂದರ್ಭಕ್ಕೆ ತಕ್ಕ ವಿಷಯದ ಆಯ್ಕೆ, ವಿಷಯಕ್ಕೆ ತಕ್ಕ ವಿವರಗಳ ಸಂಗ್ರಹಣೆ, ವಿಷಯಕ್ಕೆ ಬಂದೋಬಸ್ತಾಗಿ ಹೊಂದಿಕೊಳ್ಳುವ ನಿರೂಪಣಾಶೈಲಿ, ನಡುನಡುವೆ ಸೇರಿಕೊಳ್ಳುವ ನವಿರಾದ ಹಾಸ್ಯ-ವಿನೋದ, ಪರೋಕ್ಷ ಹಾಗೂ ಅಪರೋಕ್ಷ ಸಲಹೆ-ಸೂಚನೆಗಳು, ಸಾಮಾನ್ಯವಾಗಿ ಲೇಖನದ ಕೊನೆಯಲ್ಲಿ ಸಾರಭೂತವಾಗಿ ಬರುವ ಒಂದಾದರೂ ಕವನ-ಇತ್ಯಾದಿ ಗುಣಗಳಿಂದಾಗಿ ಈ ಲೇಖನಗಳು ಬೇಸರ ಬಾರದಂತೆ ಓದಿಸಿಕೊಂಡು ಹೋಗುತ್ತವೆ. ವೆಬ್‌ ಸೈಟ್ನಲ್ಲಿ ಪ್ರಕಟವಾದ 46 ಅಂಕಣ ಬರಹಗಳ ಹೊರತಾಗಿ,ಈ ಪುಸ್ತಕದ 2ನೆಯ ಭಾಗದಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಡಾ. ನಟರಾಜ ಅವರು ಬರೆದ ಕೆಲವು ಲೇಖನ-ಸಂದರ್ಶನಗಳು ಹಾಗೂ ಡಾ. ನಟರಾಜ ಅವರ ಬಗ್ಗೆ ಇತರರು ಬರೆದ ಕೆಲವು ಲೇಖನ-ಸಂದರ್ಶನಗಳಲ್ಲದೆ ಕೆಲವು ಕವನಗಳೂ ಸೇರಿಸಲ್ಪಟ್ಟಿವೆ.

ಒಟ್ಟಾರೆ, ಡಾ. ನಟರಾಜ ಅವರ ಅನುಭವವ್ಯಾಪ್ತಿಯನ್ನೂ, ಕನ್ನಡದ ಬಗೆಗಿರುವ ಅವರ ಕಳಕಳಿಯನ್ನೂ, ವಿಚಾರಧಾರೆಯನ್ನೂ ಅವರ ಭಾವಲಹರಿಯನ್ನೂ ಅರ್ಥೈಸಿಕೊಳ್ಳಲು ಈ ಸಂಗ್ರಹ ಕೈಗನ್ನಡಿಯಾಗಿ ನೆರವಾಗುತ್ತದೆ. ಈ ಸಂಗ್ರಹಕ್ಕೆ ನಲ್ನುಡಿಯ'ನತ್ತು" ತೊಡಿಸಿರುವ ಪ್ರೊ. ಜಿ.ಅಶ್ವತ್ಥನಾರಾಯಣ ಅವರು ಬಲು ಸೂಕ್ಷ್ಮವಾಗಿ ಹೇಳಿದಂತೆ ಈ ಸಂಗ್ರಹವೆಂದರೆ 'ಮೃಷ್ಟಾನ್ನಭೋಜನ"ದ ತಟ್ಟೆಯೇ ಸರಿ.

'ಜಾಲತರಂಗ " ದಲ್ಲಿ ಋಷಿಯ ದೃಷ್ಟಿ-ಕವಿಯ ಸೃಷ್ಟಿ, ಬಾಯ್ಕಿಣ್ಣ ಬಾಯ್ಬಿಟ್ಟ, ಆರು ಹಿತವರು ನಿನಗೆ-ದೇವರೋ ದೇಶವೋ?, ನಂಬಿದಂತಿರಬೇಕು, ನಂಬದಲೆ ಇರಬೇಕು, ಜೀವನಪ್ರೀತಿ ಮತ್ತು ಜೀವದ ಪ್ರೀತಿ, ಲಾಮಾಮೃತಸಿಂಚನ, ನೀನಾರಿಗಾದೆಯೋ ಎಲೆ ಬ್ರಾಹ್ಮಣ?, ಸುಖ-ಸಂತೋಷ-ಖುಷಿ, ಇತ್ಯಾದಿ ಲೇಖನಗಳು ಲೇಖಕರ ಜಿಜ್ಞಾಸೆಯ ಮನೋಭಾವವನ್ನು ಪ್ರಕಟಿಸಿದರೆ, ಕೊನೆ ಮೊದಲಿಲ್ಲದ ಯುದ್ಧ, ಮರಣದಂಡನೆಯೋ ಜೀವಾವಧಿ ಶಿಕ್ಷೆಯೋ?, ಭೇಟಿ- ಪರಿಚಯ-ಪ್ರೀತಿ-ಒಪ್ಪಂದ-ಮದುವೆ-ಇತ್ಯಾದಿ, ಆಕಾಶಮಾರ್ಗದಲಿ ಕಠೋಪನಿಷತ್‌, ಮಾನವ ಜೀವಕ್ಕೇನು ಬೆಲೆ?, ಅಗ್ನಿಸಾಕ್ಷಿಗೆ ಬದಲು ಮನಸ್ಸಾಕ್ಷಿ-ಹೀಗೊಂದು ಮದುವೆ, ಕಟ್ರೀನಾ ಸುತ್ತ ಸುಳಿದ ವಿಚಾರಗಳ ಸುಳಿ, ಇತ್ಯಾದಿ ಮನುಷ್ಯ ಜೀವನದ ವಿಕಾಸ, ವಿಪ್ಲವ, ವಿತಂಡವಾದಗಳ ಕುರಿತು ವಿಶ್ಲೇಷಣೆಯ ಲೇಖನಗಳು ನಮ್ಮನ್ನು ಗಂಭೀರ ಆಲೋಚನೆಗೆ ತೊಡಗಿಸುತ್ತವೆ.

ಅಮೇರಿಕಾದಲ್ಲಿರುವ ಕನ್ನಡ ಸಂಘ-ಸಂಸ್ಥೆಗಳ ಹುಟ್ಟು-ಬೆಳವಣಿಗೆಯ ಬಗೆಗೆ ಬರೆದ ಹಲವು ಲೇಖನಗಳು ಹೊರದೇಶಗಳಲ್ಲಿ ವಾಸವಾಗಿರುವ ಕನ್ನಡಿಗರ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆಯ ಕಷ್ಟ-ಸುಖಗಳನ್ನು ತೆರೆದು ತೋರಿಸುತ್ತವೆ. ಸಂಗೀತ ಹಾಗೂ ಸಂಗೀತಕಾರರ ಕುರಿತಾದ ತಮ್ಮ ಅಭಿಮಾನ-ಅಕ್ಕರತೆಗಳನ್ನು ಸೂಸುವ ಬರಹಗಳಂತೆ, ಇನ್ನು ಕೆಲವು ಲೇಖನಗಳಲ್ಲಿ ಕುವೆಂಪು, ಮಾಸ್ತಿ, ಪು.ತಿ.ನ., ಡಿ.ವಿ.ಜಿ., ರಾಜಕುಮಾರ, ಪ್ರೇಮಾ, ಉಷಾ ಚಾರ್‌, ಕೆ.ಜಿ.ವಿ.ಕೃಷ್ಣ ಮುಂತಾದವರ ಕುರಿತು ತಮಗಿರುವ ವ್ಯಕ್ತಿಗೌರವವನ್ನು ಬಲು ಆತ್ಮೀಯವಾಗಿ ನಿರೂಪಿಸಿದ್ದುಂಟು. ಅಂಥದೇ ವ್ಯಕ್ತಿಗೌರವವನ್ನು ಕೇವಲ ಮುಲಾಜಿಗಾಗಿ ಒಮ್ಮೆ ತಮ್ಮ ಗುರುಗಳೇ ಆಗಿದ್ದ 'ಜ್ಞಾನಪೀಠಿಗ " ಡಾ. ಯೂ.ಆರ್‌.ಅನಂತಮೂರ್ತಿ ಅವರ ಬಗೆಗೆ ತೋರಿಸಿಲ್ಲವೆಂಬ ಸಂಗತಿಯೂ ಗಮನಾರ್ಹವಾಗಿದೆ. ('ಲೋಕನಿಷ್ಠುರ ಶರಣನಾರಿಗಂಜುವನಲ್ಲ!").

ಆಹಾ ರಾಮಪ್ರಿಯ, ಹಾಹಾ ಹನುಮಂತ!, ಗಣಕಾ-ಗಣಿಕಾ, ಜಾಲಭಿಕ್ಷುಕಿ ಬಂದಳೊ ಬಿಕ್ಷಕೆ..., ಅಮೇರಿಕದ ಎದೆಗಾರ್ತಿಯರು, ಕೂಟವನ್ನು ಕೊಲ್ಲುವುದು ಹೇಗೆ?, ಇತ್ಯಾದಿ ಲೇಖನಗಳಲ್ಲಿ ಲೇಖಕರ ಹಾಸ್ಯಪ್ರಜ್ಞೆಗೆ ಸಾಕಷ್ಟು ಇಂಬು ದೊರೆತಿದ್ದರೆ, ಅಮೇರಿಕೆಯ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದ ಚರ್ಚೆಗಳು, ಹಲವೊಂದು ಅಧ್ಯಕ್ಷರ ಭಾಷಣಗಳಿಂದಾಯ್ದ ಅಣಿಮುತ್ತುಗಳನ್ನು ಬಿತ್ತರಿಸಿದ ಲೇಖನಗಳು ಬಹಳಷ್ಟು ಮಾಹಿತಿಯನ್ನು ಒದಗಿಸುವಲ್ಲಿ ಸಫಲಗೊಂಡಿವೆ.

ಕೆ.ಎಸ್‌.ನ. ಅವರ ಕವನವೊಂದರ ನೆನಪು ಮಾಡಿ ಕೊಡುವ ಇವರ 'ಮನೆಯಿಂದ ಮನೆಗೆ" ಲೇಖನ ತುಂಬಾ ಆತ್ಮೀಯವಾಗಿ ಮೂಡಿ ಬಂದಿದ್ದು ಅವರ ಕೌಟುಂಬಿಕ ಸಂರಚನೆಯ ಸೂಕ್ಷ್ಮ ಚಿತ್ರಣ ಕೊಡುತ್ತಲೇ ಈ ಲೇಖಕರು ಕನ್ನಡ ಸಾಂಸ್ಕೃತಿಕ ವಿಕಾಸದ ಬಗೆಗಿರಿಸಿಕೊಂಡಿರುವ ಕಾಳಜಿಯನ್ನೂ ಬಿಂಬಿಸುತ್ತದೆ.ಹೊರದೇಶದಲ್ಲಿದ್ದೂ ಹಲವು ಸಾಹಿತ್ಯಕ ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿರುವ ಡಾ.ನಟರಾಜ ಅವರು ತಮ್ಮ ಲೇಖನಗಳಲ್ಲಿ ಕರ್ನಾಟಕ ಸರ್ಕಾರವು ಹೊರಬೇಕಾದ ಜವಾಬುದಾರಿಯ ಕುರಿತು ಸೂಚಿಸುವುದಲ್ಲದೆ, ಇಡಿಯ ಅಮೇರಿಕೆಯಲ್ಲಿ ಕನ್ನಡತನವನ್ನು ಉಳಿಸುವ -ಬೆಳೆಸುವ ಕುರಿತು ಬರೆದ ಹಲವು ಲೇಖನಗಳ ಹೊರತಾಗಿ, ತಮ್ಮ 'ಅಮೆರಿಕೆಯಲ್ಲಿ ಕನ್ನಡ ಸಂಘಗಳು" ಲೇಖನದಲ್ಲಿ ಸಮಗ್ರವಾಗಿ ವಿವರಿಸಿದ್ದಾರೆ.

ಇಡಿಯ ಸಂಗ್ರಹವನ್ನು ಓದುತ್ತ ಹೋದಂತೆ, ಡಾ.ನಟರಾಜ ಅವರ ವಿಶಾಲ ದೃಷ್ಟಿಕೋನದ ಬಗ್ಗೆ ಓದುಗನಲ್ಲಿ ಅಭಿಮಾನ ಮೂಡುತ್ತದೆ. ಅಲ್ಲಲ್ಲಿ ಅವರು ದೇವರು-ದಿಂಡಿರು, ಗುಡಿ-ಗುಂಡಾರ, ಧರ್ಮ-ಕರ್ಮಗಳ ಬಗ್ಗೆ ಎಸೆಯುವ ನಗೆಬಾಣಗಳು, ಕಟಕಿಗಳು, ವ್ಯಂಗ್ಯ ಟಿಪ್ಪಣಿಗಳು ಅವರ ವಸ್ತುನಿಷ್ಠ ಧೋರಣೆಗೆ ಸಾಕ್ಷಿ ನುಡಿಯುತ್ತವೆ. ಅವರು ಯಾವ ಲೇಖನದಲ್ಲೂ ಯಾವ ನಿರ್ದಿಷ್ಟ ಧರ್ಮದ ಬಗೆಗೂ ಅವಹೇಳನದ ಮಾತುಗಳನ್ನಾಡಿದಂತೆ ಕಾಣುವುದಿಲ್ಲ. ಎಲ್ಲಿಯಾದರೂ ವ್ಯಂಗ್ಯವಾಡಿದ್ದರೆ, ಅದು ಸಮಾನಭೋಗ್ಯದ ಪ್ರಸಾದವಾಗಿಯೇ ಬಂದದ್ದು.

ಪುಸ್ತಕದ ಎರಡನೆಯ ಭಾಗದಲ್ಲಿ ಬರುವ ಅಮೇರಿಕೆಯಲ್ಲಿ ಹಿಂದೂ ಧರ್ಮ,ಪರಮಹಂಸ, ವಿವೇಕಾನಂದ ಮತ್ತು ಕುವೆಂಪು, ವಚನಾಮೃತಧಾರೆ, ವ್ಯಕ್ತಿ ಮತ್ತು ಸಮಾಜ- ಮುಂತಾದ ಲೇಖನಗಳು ಲೇಖಕರು ಹೊರದೇಶದಲ್ಲಿ ನಿಂತು ಮಾಡಿದ ಗಂಭೀರ ಆಲೋಚನೆಗಳಾಗಿದ್ದು ಓದುಗರನ್ನೂ ಆ ದಿಶೆಯಲ್ಲಿ ಚಿಂತನೆಗೆ ತೊಡಗಿಸುವಂತಿವೆ. ಇಂಥದೊಂದು ವೈವಿಧ್ಯಪೂರ್ಣ ಲೇಖನಗಳ ಸಂಗ್ರಹವನ್ನು ಒಳ-ಹೊರದೇಶಗಳ ಕನ್ನಡಿಗರ ಕೈಗಿತ್ತ ಡಾ. ಮೈ.ಶ್ರೀ.ನಟರಾಜ ಅವರು ಅಭಿನಂದನಾರ್ಹರು.

'ಜಾಲತರಂಗ " : ಆಸಕ್ತರಿಗೆ ಪುಸ್ತಕ ಈಗ ಲಭ್ಯ!

ಪೂರಕ ಓದಿಗೆ

'ಜಾಲತರಂಗ"ಕ್ಕೆ ನಲ್ನುಡಿಯ ಕನ್ನಡಿ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X