ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಖ-ಸಂತೋಷ-ಖುಷಿ

By Staff
|
Google Oneindia Kannada News

ಸುಖ-ಸಂತೋಷ-ಖುಷಿ
ಮದುವೆ ಆದ ಹೊರತು ಖುಷಿಯಿಲ್ಲ ಎಂಬ ತಪ್ಪು ಭಾವನೆಯಿಂದ ಮದುವೆ ಆಗಿ ಭ್ರಮನಿರಸನ ಆದವರು ಕೆಲವರಾದರೆ, ಖುಷಿಯಿಲ್ಲದೇ ಮದುವೆ ಏಕಾಗಬೇಕೆಂದು ಸಂಗಾತಿಗಳಾಗಿ ಇದ್ದು ಬಿಡುವ ಜಾಣರ ಸಂಖ್ಯೆ ಅಮೆರಿಕಾದಲ್ಲಿ ಹೆಚ್ಚಾಗುತ್ತಿದೆ. ಅದು ಏನೇ ಇರಲಿ, ಮದುವೆ, ವಿಚ್ಛೇದನ, ಸಹಜೀವನ ಇವೆಲ್ಲವುಗಳ ನಡುವೆ, ಅಂತೂ, ಅಮೇರಿಕನ್ನರು ಸುಖಿಗಳು!

Dr.M.S.Nataraj ಡಾ. ಮೈ.ಶ್ರೀ. ನಟರಾಜ, ಪೊಟೊಮೆಕ್‌, ಮೇರೀಲ್ಯಾಂಡ್‌
[email protected]

ಇತ್ತೀಚಿನ ಒಂದು ಅಧ್ಯಯನದ ಪ್ರಕಾರ ಅಮೇರಿಕನ್ನರು ಒಳ್ಳೇ ಖುಷಿ ಜನ ಎಂದು ತಿಳಿದು ಬಂದಿದೆ. ವಾಷಿಂಗ್‌ಟನ್‌ ಪೋಸ್ಟ್‌ ಪತ್ರಿಕೆಯ ಮೈಕೆಲ್‌ ಪೊವೆಲ್‌ ಎಂಬ ಒಬ್ಬ ಲೇಖಕ ಮೊನ್ನೆ ವರದಿ ಮಾಡಿದ ಪ್ರಕಾರ ಮದುವೆ ಆದ ಮಂದಿ ಮದುವೆ ಆಗದ ಮಂದಿಗಿಂತ ಖುಷಿಯಾಗಿದ್ದಾರಂತೆ, ಅಷ್ಟೇ ಅಲ್ಲ, 2:1 ಪ್ರಮಾಣದಲ್ಲಿ! ಆದರೆ, ರೌಲ್‌ ಫೆಲ್ಡರ್‌ ಎಂಬ ವಿಚ್ಛೇದನ-ತಜ್ಞ (ಈತ ಪ್ರಸಿದ್ಧ ತಾರೆಗಳಿಗೆ ವಿಚ್ಛೇದನ ಕೊಡಿಸುವುದರಲ್ಲಿ ಹೆಸರು ಮಾಡಿದ ವಕೀಲ), ಈ ಅಧ್ಯಯನದ ಫಲಿತಾಂಶವನ್ನು ಪ್ರಶ್ನಿಸಿದ್ದಾನಂತೆ.

ಬಾಲ ಕತ್ತರಿಸಿಹೋದ ನರಿ ಇತರ ನರಿಗಳೊಂದಿಗೆ ತಮ್ಮ ಮೋಟುಬಾಲದ ಅನುಕೂಲಗಳಬಗ್ಗೆ ಭಾಷಣ ಬಿಗಿದು ಮಿಕ್ಕೆಲ್ಲ ನರಿಗಳೂ ತಮ್ಮ ಬಾಲಗಳನ್ನು ಕತ್ತರಿಸಿಕೊಳ್ಳುವಂತೆ ಪುಸಲಾಯಿಸಿದ ಕತೆ ನಿಮಗೆ ನೆನಪಿರಬಹುದು. ಅದೇ ರೀತಿ ಮದುವೆ ಆದ ಜನ ತಮ್ಮ ತಮ್ಮಲ್ಲೇ ಮಾತಾಡಿಕೊಳ್ಳುತ್ತ ಇಲ್ಲದ ಖುಷಿಯನ್ನು ಕಲ್ಪಿಸಿಕೊಳ್ಳುತ್ತಾ ಭ್ರಮೆಯಲ್ಲಿರುವ ಜನಗಳಿಂದ ಇಂಥ ಸುದ್ದಿ ಹರಡಿರಬಹುದೇ ಎಂಬುದು ಈ ವಕೀಲನ ಅಂಬೋಣ. ಮದುವೆ ಆದಹೊರತು ವಿಚ್ಛೇದನ ಸಾಧ್ಯವಿಲ್ಲ, ವಿಚ್ಚೇದನವಾದ ಹೊರತು ಮದುವೆ ಸಾಧ್ಯವಿಲ್ಲ, ಈ ಎರಡು ಕ್ರಿಯೆಗಳ ನಡುವಿನ ಸತ್ಯ ಈ ವಕೀಲನ ಜಗತ್ತು. ಹೆಸರಾಂತ ದೊಡ್ಡ ದೊಡ್ಡ ನಟ ನಟಿಯರಿಗೆ ವಿಚ್ಛೇದನ ಕೊಡಿಸುವುದರಲ್ಲೇ ಹಣ ಮಾಡಿದ ಖದೀಮ ಈತ.

ಮದುವೆ ಆದ ಹೊರತು ಖುಷಿಯಿಲ್ಲ ಎಂಬ ತಪ್ಪು ಭಾವನೆಯಿಂದ ಮದುವೆ ಆಗಿ ಭ್ರಮನಿರಸನ ಆದವರು ಕೆಲವರಾದರೆ, ಖುಷಿಯಿಲ್ಲದೇ ಮದುವೆ ಏಕಾಗಬೇಕೆಂದು ಸಂಗಾತಿಗಳಾಗಿ ಇದ್ದು ಬಿಡುವ ಜಾಣರ ಸಂಖ್ಯೆ ಇಲ್ಲಿ ಹೆಚ್ಚಾಗುತ್ತಿದೆ. ಭಾರತದಲ್ಲಿ ಸಮಾಜದ ಕೆಳವರ್ಗದವರು ಹಿಂದೆ ಇದನ್ನೇ ಕೂಡಿಕೆ ಎಂದು ಕರೆಯುತ್ತಿದ್ದರು. ಭಾರತದಲ್ಲಿ ಮೇಲ್ವರ್ಗದ ವಿದ್ಯಾವಂತ ಗಂಡು-ಹೆಣ್ಣುಗಳೂ ಸಹ ಇಂಥ ‘ಜೊತೆ-ಜೀವನ’(living together) ದ ಹವ್ಯಾಸಕ್ಕೆ ಬಿದ್ದಿದ್ದಾರೆಂದು ಕೇಳಿಬರುತ್ತಿದೆ. ಇದು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿಲ್ಲವೆಂದು ನಂಬೋಣ.

ಅದು ಏನೇ ಇರಲಿ, ಮದುವೆ, ವಿಚ್ಛೇದನ, ಜೊತೆ-ಜೀವನ ಇವಲ್ಲವುಗಳ ನಡುವೆ, ಅಂತೂ, ಅಮೇರಿಕನ್ನರು ಖುಷಿವಂತರು. ನಗುತ್ತ ಇರುವುದು ಅವರ ಸ್ವಭಾವ. ರಸ್ತೆಯಲ್ಲಿ ಅಥವಾ ಮಾಲಿನಲ್ಲಿ ಎದುರಿಗೆ ಸಿಗುವ ಅನೇಕರು ನಿಮ್ಮ ದೃಷ್ಟಿ ಅವರ ದೃಷ್ಟಿಯೊಂದಿಗೆ ಬೆರೆತ ಘಳಿಗೆ ದೊಡ್ಡದೊಂದು ನಗುವನ್ನು ಬೀರುತ್ತಾರೆ, ನಿಮಗೆ ಪರಿಚಿತರಲ್ಲದಿದ್ದರೂ ನಗೆ ಬೀರುವುದಕ್ಕೆ ಸಂಕೋಚಪಡುವುದಿಲ್ಲ. ಅದರಲ್ಲೂ, ಇಲ್ಲಿನ ಹುಡುಗಿಯರು ಮಹಾ ಹಸನ್ಮುಖಿಗಳು.

ನನಗೆ ಈಗಲೂ ನೆನಪಿದೆ, ಹೊಸದಾಗಿ ಈ ದೇಶಕ್ಕೆ ಓದಲು ಬಂದಾಗ, ಪರದೇಶದ ವಿದ್ಯಾರ್ಥಿಗಳಿಗಾಗೇ ಏರ್ಪಡಿಸಿದ್ದ ಓರಿಯಂಟೇಷನ್‌ ಸಮಯದಲ್ಲಿ ಹೇಳಿದ ಮೊದಲ ಮಾತು : ‘‘ಭಾರತ, ಮುಂತಾದ ದೇಶಗಳಲ್ಲಿ ಗಂಡು ಹೆಣ್ಣುಗಳಲ್ಲಿ ಸಲಿಗೆ ಕಮ್ಮಿ, ಅರಬ್‌ ದೇಶಗಳಲ್ಲಿ ಹೆಣ್ಣುಗಳ ಮುಖದಮೇಲೆ ಬುರ್ಖಾ ಇರುತ್ತದೆ, ಆದರೆ ಇಲ್ಲಿ ಹಾಗಲ್ಲ. ಹುಡುಗಿಯರು ಹುಡುಗರನ್ನು ಕಂಡ ಕೂಡಲೆ ‘ಹೈ’ ಎಂದು ತುಟಿ ತೆರೆದು ನಗೆ ಬೀರುತ್ತಾರೆ, ಹಾಗೆಂದ ಮಾತ್ರಕ್ಕೆ ಅಪಾರ್ಥ ಮಾಡಿಕೊಂಡೀರಿ, ಎಚ್ಚರಿಕೆ.’’

ಇಲ್ಲಿನ ಜನರ ನಗುಮುಖವನ್ನು ನೋಡಿ ಅಭ್ಯಾಸವಾದಮೇಲೆ ಮೊದಲಬಾರಿ ಭಾರತಕ್ಕೆ ಹಿಂದಿರುಗಿದಾಗ, ನಮ್ಮ ದೇಶದ ಜನ ಏಕೆ ಇಷ್ಟು ಸಿಡುಕುಮೋರೆಯವರು ಅನ್ನಿಸಿತ್ತು. ಹುಡುಗಿಯರು ನಾಚಿಕೆಯಿಂದಲೋ ಭಯದಿಂದಲೋ ಗಂಭೀರವದನೆಯರಾಗಿದ್ದಿರಬಹುದು, ಆದರೆ, ಈ ಗಂಡಸರೇಕೆ ಒಳ್ಳೆ ಇಡೀ ಭೂಭಾರವನ್ನೇ ಹೊತ್ತ ಆದಿಶೇಷನಿಗಿಂತ ಹೆಚ್ಚು ‘ತಿಣುಕಿದನು ಫಣಿರಾಯ’ನ ಶೈಲಿಯಲ್ಲಿ ಮುಖ ಗಂಟಿಕ್ಕಿಕೊಂಡು ಓಡಾಡುತ್ತಾರೆ ಎಂಬ ಪ್ರಶ್ನೆ ನನ್ನನ್ನು ಅನೇಕ ಬಾರಿ ಕಾಡಿದೆ. ಅದು ಹಾಗಿರಲಿ.

ಅಂತೂ ಅಮೇರಿಕನ್ನರು ಖುಷಿ ಜನ ಅಂತ ಮೊದಲೇ ಹೇಳಿದ್ದೇನೆ. ಅಧ್ಯಯನದ ಬಗ್ಗೆ ಹೇಳಿದೆನಲ್ಲ, ಅದರ ಪ್ರಕಾರ, ದೈನಂದಿನ ಜೀವನದಲ್ಲಿ ಬೆಳಗಾಗೆದ್ದು ತರಾತುರಿಯಲ್ಲಿ ಓಡಬೇಕಾಗಿಲ್ಲದ ಜನರು ತಾವು ಅತ್ಯಂತ ಖುಷಿ ಜನ ಎಂದು ಹೇಳಿಕೊಂಡರಂತೆ. ಈ ಅಧ್ಯಯನದ ಪ್ರಕಾರ ದೊಡ್ಡ ದೊಡ್ದ ಊರುಗಳಲ್ಲಿನ ಹೆದ್ದಾರಿಗಳ ಮೇಲೆ ಘಂಟೆಗಟ್ಟಲೆ ಕಾರ್ಸಂದಣಿಯಲ್ಲಿ ಸಿಕ್ಕಿಕೊಂಡು ಕೆಲಸದ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ತಲುಪಬೇಕಾದ ನತದೃಷ್ಟರು ಯಾರೂ ಸುಖಿಗಳಲ್ಲ. ಪ್ರಶ್ನೆಗಳಿಗೆ ಉತ್ತರ ಕೊಟ್ಟವರಲ್ಲಿ ಸುಮಾರು ಅರ್ಧದಷ್ಟು ಜನ ತಾವು ಸುಖಿಗಳಲ್ಲ ಎಂದು ಹೇಳಿದರಲ್ಲ, ಅವರೆಲ್ಲ ಈ ರೀತಿ ರಸ್ತೆಯಮೇಲೆ ನಿಧಾನವಾಗಿ ಕಾರೋಡಿಸುತ್ತಾ ಸುತ್ತಲಿನ ಎಲ್ಲ ಚಾಲಕರಿಗೂ ಶಾಪಹಾಕುತ್ತ ದಿನಗಳೆಯುವ ಪಾಪಿಷ್ಟರು.

ಅದೇರೀತಿ ಯಾರು ತಮ್ಮ ಆರೋಗ್ಯ ಉತ್ತಮವಾಗಿದೆ ಎಂದು ತಿಳಿದುಕೊಂಡಿದ್ದಾರೋ ಅವರೆಲ್ಲ ತಮ್ಮನ್ನು ಅತ್ಯಂತ ಸುಖಿಗಳೆಂದು ಹೇಳಿಕೊಂಡರು (ಸುಮಾರು ಅರ್ಧದಷ್ಟು ಜನ). ನಮ್ಮ ವಕೀಲನಿಗೆ ತೊಂದರೆ ಕೊಟ್ಟ ಉತ್ತರವೆಂದರೆ ಇದು: ಮದುವೆ ಆದ ಜನಗಳಲ್ಲಿ ಸುಮಾರು ಅರ್ಧದಷ್ಟು ಜನ ತಮ್ಮನ್ನು ಅತ್ಯಂತ ಸುಖಿಗಳೆಂದು ಭಾವಿಸಿರುವುದು. ಅದೇ ಪ್ರಶ್ನಾವಳಿಯಲ್ಲಿ, ಮದುವೆ ಆಗದ ಜನರಲ್ಲಿ ಸುಮಾರು ಕಾಲುಭಾಗ ತಾವು ಅತ್ಯಂತ ಸುಖಿಗಳೆಂದು ಭಾವಿಸಿದ್ದಾರೆ.

ಮದುವೆ ಆದ ಜನರಲ್ಲಿ ಅರ್ಧದಷ್ಟು ಅಂದರೆ, ಇಬ್ಬರಲ್ಲಿ ಒಬ್ಬರು ಪರಮಸುಖಿಗಳು ಎಂದರೆ ಏನರ್ಥ? ಗಂಡನೋ ಅಥವಾ ಹೆಂಡತಿಯೋ, ಇಬ್ಬರಲ್ಲಿ ಒಬ್ಬರು ಮಾತ್ರ ತಮ್ಮನ್ನು ತಾವು ಪರಮಸುಖಿ ಎಂದು ತಿಳಿದುಕೊಂಡಿದ್ದಾನೆ(ಳೆ) ಎಂಬ ಅರ್ಥವೂ ಆಗಬಹುದಲ್ಲವೇ? ಇಂಥಾ ಸರ್ವೇ ಪ್ರಶ್ನಾವಳಿಗಳ ಫಲಿತಾಂಶವನ್ನು ಸರ್ವೇಸಾಧಾರಣ ಜನರಿಗೆ ಅನ್ವಯಿಸುವುದು ಅನೇಕ ಬಾರಿ ಕಷ್ಟವಾಗುತ್ತದೆ. ಅದೂ ಹಾಗಿರಲಿ.

ಸುಖ ಮತ್ತು ಸಂತೋಷ, ಇವೆರಡೂ ಒಂದೇ ಅಲ್ಲ. ‘‘ನಮ್ಮ ಮಗಳನ್ನು ಶ್ರೀಮಂತ ಕುಟುಂಬಕ್ಕೆ ಕೊಟ್ಟಿದ್ದೇವೆ, ತುಂಬ ಸುಖವಾಗಿಟ್ಟುಕೊಂಡಿದ್ದಾರೆ’’ ಎಂದರೆ, ಅವಳಿಗೆ ದುಡ್ಡಿನ ಕೊರತೆ ಇಲ್ಲ, ಕೈಗೊಬ್ಬ, ಕಾಲಿಗೊಬ್ಬ ಆಳು, ಅಡುಗೆ ಕೆಲಸಕ್ಕೆ, ಪಾತ್ರೆ ಬಟ್ಟೆಗೆ ಎಲ್ಲಾದಕ್ಕೂ ಸಹಾಯ ಇದೆ, ಎಲ್ಲಿಗಾನೋ ಹೋಗ ಬೇಕಾದರೆ ಕಾರಿದೆ, ಡ್ರೈವರ್‌ ಇದ್ದಾನೆ ಮುಂತಾದ ಭೌತಿಕ ‘ಸುಖ’ದ ಕಲ್ಪನೆ ಬರುತ್ತದೆ. ಆದರೆ, ಸಂತೋಷ ಎಂಬುದೇ ಬೇರೆ, ಅದು ಮನಸ್ಸಿನ ವ್ಯಾಪಾರ. ಅದಕ್ಕೇ " happiness is a state of mind ಅನ್ನುವುದು.

ಸುಖ ಇದ್ದ ಮಾತ್ರಕ್ಕೆ ಸಂತೋಷವೂ ಇರಲೇ ಬೇಕಿಂದಿಲ್ಲ. ಸಂತೋಷವಾಗಿರುವುದಕ್ಕೆ ಸುಖದ ಅಗತ್ಯವಿಲ್ಲ ಎಂದಲ್ಲ, ಆದರೆ ಇವೆರಡೂ ಬೇರೆ ಬೇರೆ. ಅನೇಕ ಬಡವರು ಅಲ್ಪ ಸುಖದಲ್ಲೇ ಸಂತೋಷವಾಗಿರುವುದನ್ನು ನೋಡಬಹುದು. ಈ ಸರ್ವೇ ಮಾಡುವ ಜನ ‘‘ Are you happy ಎಂಬ ಪ್ರಶ್ನೆ ಕೇಳಿದಾಗ ಸುಖ ಸಂತೋಷ ಎರಡನ್ನೂ ಮಿಶ್ರಣ ಮಾಡುತ್ತಾರೆ ಎನ್ನಿಸುತ್ತೆ. ಉದಾಹರಣೆಗೆ ವಾರ್ಷಿಕ ಆದಾಯ 150,000 ಡಾಲರುಗಳಿಗಿಂತ ಹೆಚ್ಚಾಗಿರುವವರಲ್ಲಿ ಶೇಖಡಾ 50ರಷ್ಟು ಜನ ತಮ್ಮನ್ನು ತಾವು "" very happy ಗುಂಪಿಗೆ ಸೇರಿಸಿಕೊಂಡು ತಾವು ಪರಮಸುಖಿಗಳೆಂದು ಜವಾಬು ಕೊಟ್ಟಿದ್ದಾರಂತೆ. ಹಾಗಾದರೆ ಮಿಲಿಯನ್‌ ಗಟ್ಟಲೆ ಆದಾಯ ಇರುವವರು ಇನ್ನೆಷ್ಟು ಸುಖಿಗಳಿರಬಹುದು? ಸಂತೋಷವೆಂಬುದು ಅಂಗಡಿಯಲ್ಲಿ ದುಡ್ಡು ಕೊಟ್ಟು ಖರೀದಿಸುವ ವಸ್ತು ಆಗಿದ್ದಿದ್ದರೆ ಎಷ್ಟು ಸುಖ ? (ಅಥವಾ ಎಷ್ಟು ಸಂತೋಷ ಎನ್ನ ಬೇಕೇ? ಇಲ್ಲ ಇನ್ನೂ ಸುಲಭವಾದ ಭಾಷೆಯಲ್ಲಿ ಎಷ್ಟು ಖುಷಿ ಎನ್ನೋಣವೇ?)

ಇದೇ ಅಧ್ಯಯನದ ಪ್ರಕಾರ, ಶ್ವೇತವರ್ಣೀಯರೂ ಹಿಸ್ಪ್ಯಾನಿಕರೂ ಸುಮಾರಾಗಿ ಒಂದೇ ಮಟ್ಟದಲ್ಲಿ ತಾವು ಸುಖಿಗಳು ಎಂದು ಹೇಳಿಕೊಳ್ಳುತ್ತಾರೆ (ಸುಮಾರು ಮೂರರಲ್ಲೊಬ್ಬರು ತಾವು ತುಂಬಾ ಸುಖಿಗಳೆಂದು ಈ ಎರಡೂ ಗುಂಪಿನವರು ತಿಳಿದಿದ್ದಾರೆ). ಆದರೆ. ಶ್ಯಾಮಲವರ್ಣದ ಅಮೆರಿಕನ್ನರು ತಮ್ಮನ್ನು ತಾವೇ ಸ್ವಲ್ಪ ಅಸುಖಿಗಳ ಗುಂಪಿಗೆ ಸೇರಿಸಿಕೊಳ್ಳುವ ಪೈಕಿಯವರಂತೆ. ಭೂಗೋಳದ್ದೂ ಕೊಂಚ ಪ್ರಭಾವ ಉಂಟು ಎನ್ನುತ್ತಾರೆ ಅಧ್ಯಯನ ನಡೆಸಿದವರು. ಉತ್ತರದವರಿಗಿಂತ (ಅಂದರೆ ಹೆಚ್ಚು ಛಳಿಯಿರುವ ಉತ್ತರ ಅಮೇರಿಕದ ಉತ್ತರಭಾಗದಲ್ಲಿರುವವರಿಗಿಂತ) ಬಿಸಿಲಿನ ಝಳದಲ್ಲಿ ಹೊಳೆಯುವ ದಕ್ಷಿಣದ ಜನ ಕೊಂಚ ಹೆಚ್ಚು ಸುಖಿಗಳಂತೆ (ಸುಂಟರಗಾಳಿ ಕಾಲವನ್ನು ಬಿಟ್ಟರೆ ಮಾತ್ರ!). ಈ ಫಲಿತಾಂಶ ಭಾರತದ ಭೂಗೋಳಕ್ಕೆ ಅನ್ವಯಿಸುವುದಿಲ್ಲವೆಂದು ತೋರುತ್ತದೆ. ಅಲ್ಲಿನ ದಾಕ್ಷಿಣಾತ್ಯರು ಕೊಂಚ ಅಗತ್ಯಕ್ಕಿಂತ ಹೆಚ್ಚು ಬಿಗಿಮೊಗದವರು!

ಈ ಸುಖ/ಸಂತೋಷವೆನ್ನುವುದನ್ನು ಅಷ್ಟು ಸುಲಭವಾಗಿ ಅಳತೆ ಮಾಡಲಾಗುವುದಿಲ್ಲ. ತಾವು ಸುಖಿಗಳೆಂದು ಹೇಳಿಕೊಳ್ಳುವವರೆಲ್ಲ ತಾವು ಸುಖಿಗಳಲ್ಲ. ಅಥವಾ ಹಾಗೆ ಹೇಳಿಕೊಂಡ ಮಾತ್ರಕ್ಕೆ ತಾವು ಸುಖಿಗಳೆಂದು ತಿಳಿದುಕೊಂಡಿರುವುದೂ ಇಲ್ಲ. ತೋರಿಕೆಗೆ ತಾವೇನು ಕಮ್ಮಿ, ತಾವೂ ಎಲ್ಲರಂತೆ ಸುಖಿಗಳೇ ಎಂಬ ಹುಸಿ-ಸುಖದ ಮುಖವಾಡ ಹಾಕಿಕೊಂಡಿರುವ ಜನ ಸಾಕಷ್ಟಿದ್ದಾರಂತೆ. ಆದಿಮಾನವ, ಪ್ರಾಣಿಗಳ ಜೊತೆ ಸ್ಪರ್ಧಿಸಿ ತನ್ನ ಅನ್ನವನ್ನು ಹುಟ್ಟಿಸಿಕೊಳ್ಳಬೇಕಿದ್ದ ಕಾಲದಲ್ಲಿ ಪೆಚ್ಚುಮೋರೆ ಹಾಕಿಕೊಂಡು ತೆಪ್ಪನೆ ಬಿದ್ದಿದ್ದಿದ್ದರೆ ಅವನ ಸಂತತಿಯೇ ನಾಶವಾಗುತ್ತಿತ್ತೋ ಏನೋ. ಹಾಗಾಗಿ ಅವನು ಯಾವಾಗಲೂ ಸ್ವಲ್ಪ ಉತ್ಸಾಹಿಯಾಗೇ ಇರಬೇಕಾದ ಅಗತ್ಯವಿತ್ತು. ಆಶಾವಾದವನ್ನು ಬಿಡದೇ ಅವನು ಬದುಕಿ ಉಳಿದ. ಕೆಲವು ಶತಮಾನಗಳ ಹಿಂದೆ ಮನುಷ್ಯ ಏನೆಲ್ಲ ಭೀತಿಗಳನ್ನು ಎದುರಿಸಬೇಕಿತ್ತು.

ರಾಜನಿಗೆ ಕೋಪಬಂದರೆ ತಲೆ ಕತ್ತರಿಸಿ ಹಾಕುತ್ತಿದ್ದ. ಪ್ರಕೃತಿಗೆ ಕೋಪ ಬಂದರೆ, ಆಧುನಿಕ ಪರಿಹಾರಗಳಿರಲಿಲ್ಲ, ರೋಗ ರುಜಿನಗಳು ಬಂದರೆ ಪ್ರಭಾವೀ ಮದ್ದುಗಳಿರಲಿಲ್ಲ. ಅದಕ್ಕೇ ಸ್ವರ್ಗದಲ್ಲಿ ಮಾತ್ರ ನಿಜವಾದ ಸುಖವಿದೆ ಎಂಬ ನಂಬಿಕೆ ಮನುಷ್ಯನಲ್ಲಿ ಹುಟ್ಟಿದ್ದರೂ ಇರಬಹುದು. ಬದುಕಿರುವಾಗಲೇ ಸುಖ ಸಾಧ್ಯ ಎಂಬ ನಂಬಿಕೆ ಇತ್ತೀಚಿನದು, 18ನೇ ಶತಮಾನದ್ದು ಎನ್ನುತ್ತಾನೆ ಮೆಕ್‌ಮಹನ್‌ ಎಂಬ ತಜ್ಞ. ಈತ ಸುಖ-ಸಂತೋಷಗಳ ಇತಿಹಾಸವನ್ನು ಆಳವಾಗಿ ಅಭ್ಯಾಸಮಾಡಿ ಫ್ಲಾರಿಡಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿದ್ದಾನೆ. ಅವನ ಹೇಳಿಕೆ ಪ್ರಕಾರ, ಯೂರೋಪಿಯನ್ನರಿಗಿಂತ ಅಮೇರಿಕನ್ನರು ಆಶಾವಾದಿಗಳು, ಸುಖದಲ್ಲಿ ನಂಬುಗೆ ಉಳ್ಳವರು. ""Dont worry, Be happy ಎಂಬ ಘೋಷಣೆ ಕೂಡ ಅಮೆರಿಕನ್ನರದ್ದೇ.

ಪ್ರಪಂಚದ 45 ರಾಷ್ಟ್ರಗಳ ಪ್ರಜೆಗಳ ಅಭಿಪ್ರಾಯ ಸಂಗ್ರಹಣೆ ಮಾಡಿದಾಗ ಹಲವು ಸ್ವಾರಸ್ಯಕರ ಸಂಗತಿಗಳು ಮನದಟ್ಟಾಗಿವೆ. ಅಮೇರಿಕನ್ನರೂ ಕೆನೇಡಿಯನ್ನರೂ ಖುಷಿಯಾಗಿರುವ ಜನಗಳ ಪಟ್ಟಿಯಲ್ಲಿ ಅಗ್ರಗಣ್ಯರಂತೆ. ಅಲೆಮಾರಿಗಳು ಹಾಗು ಇತರರ ದೃಷ್ಟಿಯಲ್ಲಿ ಸ್ವಲ್ಪ ಎಡಬಿಡಂಗಿಗಳಂತೆ ಕಾಣುವ ‘‘ಎಕ್ಸೆಂಟ್ರಿಕ್‌’’ ಜನರೇ ಮಾಮೂಲೀ ಜನಕ್ಕಿಂತ ಹೆಚ್ಚು ಸುಖಿಗಳಂತೆ. ವಯಸ್ಸು 65 ಮೀರಿದವರು 18 ರಿಂದ 30ರ ವರೆಗಿನ ತರುಣರಿಗಿಂತ ಖುಷಿಜನ ಅಂದರೆ ನಂಬುತ್ತೀರಾ? ಅದನ್ನು ಕೇಳಿದ ಫೆಲ್ಡರ್‌ ಎಂಬ ತಜ್ಞನ ಅಂಬೋಣ ಹೀಗಿದೆ: ‘‘ಗಾಲಿ ಕುರ್ಚಿಯಲ್ಲಿ ಕುಳಿತ ಮತ್ಯಾವ ಸಾಮರ್ಥ್ಯವೂ ಇಲ್ಲದ ಮುದುಕನಿಗೆ ತಾನು ಸುಖಿ ಎಂಬ ಭ್ರಮೆಗಿಂತ ಮತ್ತೇನು ದಾರಿ ಇದೆ? ತಾನು ಸುಖಿ ಎಂಬ ಭ್ರಮೆಯ ಖುಷಿಯೂ ಇಲ್ಲದಿದ್ದರೆ ಅವನು ಹೇಗೆ ಬದುಕಿದ್ದಾನು?’’ ಅಂತೂ ಒಂದಂತೂ ನಿಜ, ಸುಖ, ಖುಷಿ ಇವೆಲ್ಲ ಇರಬೇಕಾದರೆ, ಕೊನೆಯಿಲ್ಲದ ತಾರುಣ್ಯ, ಅನುದಿನದ ಆರೋಗ್ಯ ಮತ್ತು ಅಪರಿಮಿತ ಐಶ್ವರ್ಯ ಇದ್ದರೆ ಸಾಲದು. ಇವೆಲ್ಲ ಇರುವವರೂ ಅನೇಕರಿದ್ದಾರೆ, ಆದರೆ ಅವರಲ್ಲನೇಕರಿಗೆ ಸಂತೋಷವೂ ಇಲ್ಲ ಶಾಂತಿ ಸಮಾಧಾನಗಳೂ ಇಲ್ಲ. ಆದ್ದರಿಂದ, ದೇವರು ತನಗೆ ಕೊಟ್ಟ ಸಣ್ಣ ಪುಟ್ಟ ಸಂತೋಷದ ಘಳಿಗೆಗಳನ್ನು ಅನುಭವಿಸುವ ಸಾಮರ್ಥ್ಯವಿರಬೇಕಷ್ಟೇ ಎಂಬ ಸತ್ಯವನ್ನು ಮನಗಾಣುವ ಶಕ್ತಿ ಎಲ್ಲರಿಗೂ ದೊರಕಲೆಂದು ಪ್ರಾಥಿಸುತ್ತಾ ವಿರಮಿಸುವೆ ಮುಂದಿನ ಕಂತಿನವರೆಗೆ.

ಟಿಪ್ಪಣಿ : ಫೆಬ್ರವರಿ 14, 2006ರಂದು ವಾಷಿಂಗ್‌ಟನ್‌ ಪೋಸ್ಟ್‌ ಪತ್ರಿಕೆಯಲ್ಲಿ ಮೈಕೆಲ್‌ ಪೊವೆಲ್‌ ಎಂಬಾತ ಬರೆದ ""A study Finds Americans Unrelentingly Cheerful ಎಂಬ ಲೇಖನದ ಅಂಕಿ-ಅಂಶಗಳನ್ನು ನನ್ನ ಈ ಲೇಖನದಲ್ಲಿ ಕೃತಜ್ಞತೆಯೊಂದಿಗೆ ಧಾರಾಳವಾಗಿ ಬಳಸಿಕೊಂಡಿದ್ದೇನೆ. ಆದರೆ ನನ್ನ ಈ ಲೇಖನದ ಮುಖ್ಯ ವಿಚಾರಧಾರೆ ಮೂಲತಃ ಸ್ವತಂತ್ರವಾದದ್ದು.

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X