ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಕನ್ನಡ ಸಮ್ಮೇಳನ : ಅಮೆರಿಕಾದಲ್ಲಿ ಕನ್ನಡ ರಥೋತ್ಸವ

By ಡಾ. ಮೈ.ಶ್ರೀ. ನಟರಾಜಪೊಟೊಮೆಕ್‌, ಮೇರೀಲ್ಯಾಂಡ್‌
|
Google Oneindia Kannada News

ಹಳ್ಳಿಯಲ್ಲಿ ಜಾತ್ರೆ, ದೇವರ ರಥೋತ್ಸವ ಮಾಡಿದ್ದರಿಂದ ಏನುದ್ಧಾರವಾಯ್ತು, ಯಾರಿಗಾಗಿ, ಏನುದ್ದೇಶ ಎಂಬ ಪ್ರಶ್ನೆಗಳನ್ನು ಹೇಗೆ ಕೇಳಿ ಪ್ರಯೋಜನವಿಲ್ಲವೋ, ಹಾಗೇ ವಿಶ್ವಕನ್ನಡ ಸಮ್ಮೇಳನದ ಬಗ್ಗೆಯೂ ಇಂತಹ ಪ್ರಶ್ನೆಗಳನ್ನು ಕೇಳುವುದರಲ್ಲಿ ಅರ್ಥವಿಲ್ಲ!

ವಿಶ್ವ ಕನ್ನಡ ಸಮ್ಮೇಳನಕ್ಕಾಗಿ ಅಮೆರಿಕಾ ಭೇಟಿ ಮಾಡಿದ ವಿಜಯ ಕರ್ನಾಟಕದ ಮುಖ್ಯ ಸಂಪಾದಕ ವಿಶ್ವೇಶ್ವರ ಭಟ್ಟರು ಮತ್ತು 'ಅದುವೆಕನ್ನಡ’ದ ಶಾಮಸುಂದರ್‌ ಬೆಂಗಳೂರಿಗೆ ಹಿಂದಿರುಗುವ ಮುನ್ನ ನನ್ನೊಂದಿಗೆ ಒಂದೆರಡು ತಾಸುಗಳನ್ನು ಕಳೆಯಲು ಅನುವು ಮಾಡಿಕೊಟ್ಟವರು ಅವರ ಅತಿಥೇಯರಾಗಿದ್ದ ಶ್ರೀವತ್ಸ ಜೋಶಿಯವರು.

WKC : Mega Festival of Kanandigas!

ಮದ್ರಾಸ್‌ ಪ್ಯಾಲೆಸ್ಸಿನ ಮಧ್ಯಾಹ್ನದೂಟದ ಸಮಯದಲ್ಲಿ ಒಂದಿಷ್ಟು ಲೋಕಾಭಿರಾಮವಾಗಿ ಹರಟುತ್ತಿದ್ದಾಗ ನಮ್ಮ ಮಾತುಕತೆ ಸಹಜವಾಗಿಯೇ ಇದೇ ಕಳೆದ ಸಮ್ಮೇಳನದ ಆಗುಹೋಗುಗಳ ಕಡೆ ತಿರುಗಿತು. ಅಲ್ಲಿ ವ್ಯಕ್ತವಾದ ಹಲವು ಅಭಿಪ್ರಾಯಗಳು ಜಾಲತರಂಗದ ಈ ಲೇಖನಕ್ಕೆ ನಾಂದಿ.

ThatsKannada editor Sham, VK editor Vishweshwar Bhat with Srivathsa Joshi of Vichitrannaಅಲ್ಲಿ ಅವರೆತ್ತಿದ ಪ್ರಶ್ನೆಗಳ ಮೊದಲ ಕಂತು : ನೀವು (ಅಂದರೆ ಅಮೆರಿಕನ್ನಡಿಗರು) ಇಂಥಾ ಒಂದು ದುಬಾರಿ ಸಮ್ಮೇಳನವನ್ನು ಏಕೆ ಆಚರಿಸುತ್ತೀರಿ? ಅದರಿಂದ ಏನನ್ನು ಸಾಧಿಸುತ್ತೀರಿ? ಇದು ಯಾರಿಗಾಗಿ, ಏಕಾಗಿ? ಹಿಂದಿನ ಸಮ್ಮೇಳನಗಳಿಂದ ಏನು ಪ್ರಯೋಜನವಾಯಿತು? ನಿಮ್ಮ ಮೂಲ ಉದ್ದೇಶಗಳೇನು? ಹೀಗೆ ಪ್ರಶ್ನೆಗಳ ಸುರಿಮಳೆಯೇ ಬಂದಿತು.

ಇಂಥಾ ಒಂದು ಮಹಾಪ್ರಮಾಣದ ಕಾರ್ಯಕ್ರಮ ನೂರಾರು ಸ್ವಯಂಸೇವಕರ ನೆರವಿನಿಂದ, ಅವಿಶ್ರಾಂತ ದುಡಿಮೆಯಿಂದ ನಡೆಯುತ್ತದೆ. ಬೇರೆಬೇರೆ ಅಂಶಗಳ ಜವಾಬ್ದಾರಿ ಹೊತ್ತವರು ಇಡೀ ಸಮ್ಮೇಳನದ ಗುರಿಯಬಗ್ಗೆ ಮಾತನಾಡುವುದು ಕಷ್ಟ. ಕುರುಡರು ಆನೆಯನ್ನು ಬಣ್ಣಿಸಿದಂತೆ, ಒಬ್ಬೊಬ್ಬರಿಗೆ ಒಂದು ಚಿತ್ರ ಗೋಚರಿಸಿದರೆ ಆಶ್ಚರ್ಯವೇನಿಲ್ಲ. ಹೀಗಾಗಿ, ಇಂಥಾ ಸಮ್ಮೇಳನಗಳನ್ನು ಕುರಿತ ಪ್ರಶ್ನೆಗಳಿಗೆ ಅಷ್ಟೊಂದು ಸುಲಭವಾಗಿ ಜವಾಬು ಸಿಕ್ಕುವುದಿಲ್ಲ.

ವೈಯಕ್ತಿಕವಾಗಿ ಹೇಳುವುದಾದರೆ, ಇಂಥಾ ಸಮ್ಮೇಳನಗಳು ಆಗಿಂದಾಗ್ಗೆ ನಡೆಯುತ್ತಿರಬೇಕು. ಇದು ಊರಿನ ರಥೋತ್ಸವ ಇದ್ದಹಾಗೆ. ವರ್ಷಕ್ಕೊಮ್ಮೆ ತೇರನ್ನು ಎಳೆಯುವಾಗ ''ಪ್ರತಿವರ್ಷ ಏಕೆ ತೇರು?’’ ಎಂಬ ಪ್ರಶ್ನೆಯನ್ನು ಯಾರೂ ಕೇಳುವುದಿಲ್ಲವಲ್ಲ. ಎಳೆಯಲೇ ಬೇಕು ಎಂಬುದನ್ನು ಎಲ್ಲರೂ ಒಪ್ಪಿಬಿಡುತ್ತೇವಲ್ಲ, ಹಾಗೆ. ಇದು ಪುರಾತನ ಕಾಲದಿಂದಲೂ ಬಂದಿರುವ ಒಂದು ಸಂಪ್ರದಾಯ.

Kannada rathaಸಂಗೀತಗಾರರು ಸಂಗೀತೋತ್ಸವ ನಡೆಸುತ್ತಾರೆ, ಸಾಹಿತಿಗಳು ಸಾಹಿತ್ಯ ಸಮ್ಮೇಳನಗಳನ್ನು ನಡೆಸುತ್ತಾರೆ. ಹೀಗೆ, ನಾಟಕೋತ್ಸವ, ಚಲನಚಿತ್ರೋತ್ಸವ, ರಾಜ್ಯೋತ್ಸವ, ಅಂತೂ ಏನೋ ಒಂದು ಕಾರಣಕ್ಕಾಗಿ ಒಂದು ಭಾಷೆಯ, ಒಂದು ಸಂಸ್ಕೃತಿಯ, ಒಂದು ಪ್ರದೇಶದ ಅಥವಾ ದೇಶದ ಜನರೆಲ್ಲ ಒಟ್ಟು ಗೂಡಿ ಸಂಭ್ರಮದಿಂದ ಆಚರಿಸುವ ಹಬ್ಬಗಳು ಎಷ್ಟೋ ಇವೆ.

ಅಮೆರಿಕದ ನಾನಾ ಮೂಲೆಗಳಲ್ಲಿ ಚದುರಿದ್ದರೂ, ಕನ್ನಡ ನುಡಿಯ ಕಾರಣದಿಂದ ಬಂಧಿಸಲ್ಪಟ್ಟ ಅಮೆರಿಕನ್ನಡಿಗರು ಒಂದು ಛಾವಣಿಯಡಿ ಕೂಡಿ ಆಚರಿಸುವ ಹಬ್ಬ ಈ ಸಮ್ಮೇಳನ, ಇದಕ್ಕೆ ಒಂದು ಸಣ್ಣ ಚೌಕಟ್ಟನ್ನು ಹಾಕುವುದು ಸಾಧ್ಯವಿಲ್ಲ. ಮುಂದಾಳತ್ವ ವಹಿಸಿದ ಜನರು ತಮಗೆ ತೋಚಿದ ಹಾಗೆ ಧ್ಯೇಯ-ಧೋರಣೆಗಳನ್ನು ಕಲ್ಪಿಸಿಕೊಳ್ಳುತ್ತಾರೆ. ಹಿಂದಿನವರಿಗಿಂತ ಭಿನ್ನವಾಗಿ ಹಾಗೂ ಮಿಗಿಲಾಗಿ ತಮ್ಮ ಸರದಿಯ ನೆನಪು ಎಲ್ಲರಿಗೂ ಇರಬೇಕೆಂಬ ಉಮೇದಿನಲ್ಲಿ ಕೆಲವು ಹಳೆಯ ತಪ್ಪುಗಳ ಜೊತೆಗೆ ಹೊಸ ಹೊಸ ತಪ್ಪುಗಳನ್ನೂ ಮಾಡುತ್ತಾರೆ. ಚಕ್ರವನ್ನು ಮತ್ತೆ ಮತ್ತೆ ಸಂಶೋಧಿಸಿ ಚರಿತ್ರೆಯನ್ನು ಪುನರಾವರ್ತಿಸುತ್ತಾರೆ.

ರಥೋತ್ಸವದ ಸಂದರ್ಭದಲ್ಲಿ ನಡೆಯುವ ಚಟುವಟಿಕೆಗಳನ್ನೇ ತೆಗೆದುಕೊಳ್ಳಿ. ಒಂದು ಕಡೆ ದೇವಸ್ಥಾನದ ಕಡೆಯಿಂದ ಹಲವಾರು ತಯಾರಿಗಳಾಗುತ್ತವೆ, ಅರ್ಚಕರಿಂದ ಹಿಡಿದು ಧರ್ಮದರ್ಶಿಗಳ ವರೆಗೆ ಅವರವ ಮೂಗಿನ ನೇರಕ್ಕೆ ಅವರವರು ಕಾರ್ಯಾಸಕ್ತರಾಗುತ್ತಾರೆ. ಊರೊಟ್ಟಿನ ಜನರೆಲ್ಲ ಸೇರಿ ಅಡುಗೆ, ಊಟಗಳ ಏರ್ಪಾಟನ್ನು ಮಾಡುತ್ತಾರೆ. ಮನೆಗಿಬ್ಬರಂತೆ ಅಡುಗೆ ಶಾಲೆಯಲ್ಲಿ ಸ್ವಯಂಸೇವಕರಾಗುತ್ತಾರೆ. ಆಂಬೊಡೆಗೆ ಬೇಳೆ ರುಬ್ಬುವ, ತರಕಾರಿ ಕತ್ತರಿಸುವ, ಕಾಯಿ ತುರಿಯುವ, ಎಲೆ ಹಚ್ಚುವ, ದೊನ್ನೆ ಕಟ್ಟುವ, ಹೀಗೆ ನೂರಾರು ಕೆಲಸಗಳಿರುತ್ತವೆ. ಈ ಕಾರಣದಿಂದ ಹಳ್ಳಿಯ ಜನ ಒಂದಾಗುತ್ತಾರೆ, ಅದೇಸಂದರ್ಭದಲ್ಲಿ ಸಣ್ಣ-ಪುಟ್ಟ ಜಗಳಗಳನ್ನೂ ಆಡುತ್ತಾರೆ, ಮತ್ತೆ ಸಮಾಧಾನವನ್ನೂ ಮಾಡಿಕೊಳ್ಳುತ್ತಾರೆ.

Ganesha Pooje before the conferenceಅತ್ತ ಒಂದು ಗುಂಪು ತೇರನ್ನು ತೊಳೆದು ಸಿದ್ಧಪಡಿಸುತ್ತದೆ. ಹಲವರು ಬಿದುರನ್ನು ಉಪಯೋಗಿಸಿ ತೇರಿನ ಉಪ್ಪರಿಗೆಗಳನ್ನು ಬಿಗಿದು ಕಟ್ಟುತ್ತಾರೆ. ಬಾಳೆ ಕಂದು ತರುವವರು ಹಲವರಾದರೆ, ತೋರಣ ಕಟ್ಟುವವರು ಹಲವರು. ಹೂವಿನ ಸಿಂಗಾರ, ಎಲೆಯ ಸಿಂಗಾರ, ಒಂದೇ ಎರಡೇ? ಮತ್ತೊಂದು ಗುಂಪು ಊರನ್ನು ಸ್ವಚ್ಛಗೊಳಿಸುತ್ತದೆ. ಮನೆಗಳ ಮುಂದೆ ಗುಡಿಸಿ, ಸಾರಿಸಿ ರಂಗೋಲಿ ಇಡುತ್ತಾರೆ. ರಥದ ಮಾರ್ಗ ಹಳ್ಳಿಯ ನಾಲ್ಕು ಮುಖ್ಯ ಬೀದಿಗಳು, ಈ ಕಾರಣದಿಂದ ಸ್ವಚ್ಛಗೊಳುತ್ತವೆ. ಚರಂಡಿಯಲ್ಲಿ ಅನೇಕ ತಿಂಗಳಿಂದ ಕಟ್ಟಿಕೊಂಡಿದ್ದ ಜಿಗಟೆಲ್ಲ ಹೊರಬರುತ್ತದೆ.

ತೇರೆಳೆಯಲು ನೂರಾರು ಭಕ್ತರು ಸಿದ್ಧರಾಗುತ್ತಾರೆ. ಹಲವರು ಸುಮ್ಮನೆ ಹಗ್ಗವನ್ನು ಮುಟ್ಟಿ ನಮಸ್ಕರಿಸಿ ತಮಗೆ ಪುಣ್ಯಬಂತೆಂಬ ಸಮಾಧಾನಪಟ್ಟುಕೊಳ್ಳುತ್ತಾರೆ. ಎಳೆಯುವ ಜನರಿಗೆ ಉತ್ತೇಜನಕೊಟ್ಟು ''ಶ್ರೀಮದ್ರಮಾರಮಣ ಗೋವಿಂದಾ’’ ಕೂಗಿಸುವುದಕ್ಕೇ ಕೆಲವರು ಕಾದಿರುತ್ತಾರೆ. (ಅವರು ಕೂಗುವುದಕ್ಕೆ ಉಪಯೋಗಿಸುವಷ್ಟು ಶಕ್ತಿಯನ್ನು ಎಳೆಯುವುದಕ್ಕೆ ಉಪಯೋಗಿಸುವುದಿಲ್ಲ!) ಎಲ್ಲರೊಡನೆ ಕೈಗೂಡಿಸಿ ನೇರವಾಗಿ ಎಳೆಯುವುದು ಅಷ್ಟೇನೂ ಕಷ್ಟದ ವಿಷಯವಲ್ಲ, ಆದರೆ, ಚಚ್ಚೌಕವಾಗಿ 90 ಡಿಗ್ರಿ ತಿರುಗುವಾಗ, ಪಡುವ ಪಾಡು ಅಷ್ಟಿಷ್ಟಲ್ಲ.

Meravanige at WKC, Baltimoreಹಗ್ಗ ಹಿಡಿದ ಜನ ಯಾರದೋ ಮನೆಯ ಜಗಲಿಯನ್ನೇರಿಬಿಡುತ್ತಾರೆ, ಮತ್ತಾರದೋ ಮನೆಯ ಬೇಲಿಯನ್ನು ಮುರಿದು ಅವರ ಹಿತ್ತಲಿಗೆ ನುಗ್ಗಿ ಬಿಡುತ್ತಾರೆ. ಗುಂಪಿನಲ್ಲಿ ಗೋವಿಂದಾ ಎಂದರೆ ಇದೆ. ಸ್ವಲ್ಪ ಹೆಚ್ಚು-ಕಮ್ಮಿ ಆದರೆ ರಥ ಚರಂಡಿಗೆ ತಿರುಗಿ ಅನಾಹುತವಾಗಬಹುದು. ವಿದ್ಯುತ್‌ ಕಂಬಕ್ಕೋ ಮತ್ತೊಂದಕ್ಕೋ ಡಿಕ್ಕಿ ಹೊಡೆಯಬಹುದು. ಈ ಗುಂಪಿನ ಶಕ್ತಿಯ ಹಿಂದೆ ಇರುವ ಅಮಿತ ಉತ್ಸಾಹದ ಜೊತೆಗೆ ಅನಿರೀಕ್ಷಿತ ಮತ್ತು ಅನುಚಿತ ಕ್ರಿಯಾಶಕ್ತಿಗಳೂ ಇಚ್ಛಾಶಕ್ತಿಗಳೂ ಕೆಲಸ ಮಾಡುತ್ತಿರುತ್ತವೆ.

ಏನೇ ಆದರೂ ತೇರು ಹಳ್ಳಿಯ ಇಕ್ಕಟ್ಟಾದ ರಸ್ತೆಯ ಮಧ್ಯದಲ್ಲೇ ಮುನ್ನಡೆಯುವಂತೆ ಮಾಡಲು ಊರ ಮುಂದಾಳು (ಸಾಧಾರಣವಾಗಿ ಅದು ಊರ ಪಟೇಲನ ಕೆಲಸ) ಮುಂಜಾಗ್ರತೆ ವಹಿಸದಿದ್ದರೆ ಅನಾಹುತ ಖಂಡಿತ. ಈ ಕೆಲಕ್ಕೆ ಆತನ ಬಳಿ ಒಂದು 'ಹೆದ್ನ’ ಇರುತ್ತದೆ (ಇದು ರಥದ ಚಕ್ರಕ್ಕೆ ಬ್ರೇಕು, ಮತ್ತು ಚಲನೆಯ ದಿಕ್ಕನ್ನು ನಿಯಂತ್ರಿಸುವ ಒಂದು ಅತಿ ಮುಖ್ಯ ಸಾಧನ). ರಥ ಹೊರಡುವ ಮುನ್ನ ಕಾಯೊಡೆದು, ಹಣ್ಣಿನ ಬಲಿ ಕೊಟ್ಟು ಎಷ್ಟೆಲ್ಲ ನಿಗಾ ವಹಿಸಿದರೂ ಒಮ್ಮೊಮ್ಮೆ ನರಬಲಿಯೇ ಆಗಿರುವ ಅನಾಹುತದ ಸುದ್ದಿಗಳನ್ನು ನೀವು ಓದಿರಬಹುದು.

ಇನ್ನು, ರಥ ಎಳೆಯುವ ನೂರಿನ್ನೂರು ಕೈ ಗಳಿಗೆ ಒಂದೆರಡಾದರೂ ಕಿಸೆಗಳ್ಳರ ಕೈಗಳಿರುತ್ತವೆ. ಅಷ್ಟೇ ಏಕೆ, ಅಲ್ಲಲ್ಲಿ ಕೆಲವು ಕಾಮುಕ ಕೈಗಳು, ''ಗೋವಿಂದಾ’’ ಕೂಗಲು ಕೈ ಎತ್ತಿದ ಹೆಣ್ಣುಗಳೊಂದಿಗೆ ಅಸಭ್ಯ ವರ್ತನೆ ತೋರುವುದೂ ಆಗಾಗ್ಗೆ ವರದಿಯಾಗುತ್ತವೆ. ರಥದ ತುದಿಯ ಕಲಶಕ್ಕೆ ಗುರಿಯಿಟ್ಟು ಬಾಳೇ ಹಣ್ಣನ್ನು ಎಸೆಯುವ ಪದ್ಧತಿ ಕೆಲವೆಡೆ ಉಂಟು. ಆ ನೆಪದಲ್ಲಿ ತಮಗೆ ಕಂಡರಾಗದವರ ಮೇಲೆ ಬಾಳೇ ಹಣ್ಣುಗಳನ್ನು ಎಸೆದು ಸೇಡು ತೀರಿಸಿಕೊಳ್ಳುವವರೂ ಇರುತ್ತಾರೆ. ಈ ಮಧ್ಯೆ, ಬತ್ತಾಸು, ಕಳ್ಳೇಪುರಿ/ಮಂಡಕ್ಕಿ, ಟೇಪು, ಬಳೆ, ಬಾಚಣಿಗೆ ಮುಂತಾದವುಗಳ ಮಾರಾಟದವರೂ ಒಂದೆರಡು ಕಾಸುಮಾಡಲು ಯತ್ನಿಸುತ್ತಾರೆ. ಪಾನಕ ಕೋಸುಂಬರಿ ಕೊಟ್ಟು ಬಿಸಿನಲ್ಲಿದ್ದ ಭಕ್ತರಿಗೆ ದಣಿವಾರಿಸುವ ಯತ್ನವೂ ಏಕಕಾಲದಲ್ಲಿ ನಡೆಯುತ್ತಿರುತ್ತದೆ.

ಮೇಲ್ಕಂಡ ಚಿತ್ರವನ್ನು ಕರ್ನಾಟಕದ ಒಂದು ಹಳ್ಳಿಯಿಂದ ಅಮೇರಿಕದ ಬಾಳ್ಟಿಮೋರ್‌ ನಗರಕ್ಕೆ ವರ್ಗಾಯಿಸಿದರೆ ಅದು ಅಮೇರಿಕನ್ನಡ ರಥೋತ್ಸವವಾಗುತ್ತದೆ. ಆ ಹಳ್ಳಿಯಲ್ಲಿ ನಡೆಯುವ ಸಮಸ್ತ ರಾಜಕೀಯವೂ ಇಲ್ಲಿಯೂ ನಡೆಯುತ್ತದೆ. ರಥೋತ್ಸವ ಮುಗಿದ ಮೇಲೆ ಅದೊಂದು ನೆನಪಾಗಿ ಉಳಿಯುತ್ತದೆ. ಮುಂದಿನ ರಥೋತ್ಸವ ಬರುವುದನ್ನು ಕಾಯುತ್ತಾ ಹಿಂದಿನ ನೆನಪನ್ನು ಮೆಲಕು ಹಾಕುವ ಭಕ್ತರಂತೆ ಕನ್ನಡಿಗರು ತಮ್ಮತಮ್ಮ ಊರುಗಳಿಗೆ ಹಿಂದಿರುಗುತ್ತಾರೆ.

ಏನುದ್ಧಾರವಾಯ್ತು, ಯಾರಿಗಾಗಿ, ಏನುದ್ದೇಶ ಎಂಬ ಪ್ರಶ್ನೆಗಳನ್ನು ರಥೋತ್ಸವದ ಸಂದರ್ಭದಲ್ಲಿ ಹೇಗೆ ಕೇಳಿ ಪ್ರಯೋಜನವಿಲ್ಲವೋ, ಹಾಗೇ ಇಲ್ಲೂ ಎಂದು ನಾನು ಕೊಟ್ಟ ಸಮಾಧಾನದಿಂದ ಸಂಪಾದಕದ್ವಯರಿಗೆ ಎಷ್ಟು ತೃಪ್ತಿ ಸಿಕ್ಕಿತೋ ನಾನರಿಯೆ!

ಒಂದು ಪ್ರಶ್ನೆ :

ನಿಮ್ಮ ಕನ್ನಡ ರಥೋತ್ಸವಕ್ಕೆ ಹೆದ್ನ ಹಿಡಿದಿದ್ದವರಾರು ಎಂಬ ಪ್ರಶ್ನೆ ಬಂತು. ಹಳ್ಳಿಯ ರಥಕ್ಕೆ ಒಬ್ಬ ಪಟೇಲ, ಒಂದು ಹೆದ್ನ, ಇಲ್ಲಿಯ ರಥಕ್ಕೆ ಎರಡೆರಡು ಪಟೇಲರು, ಎರಡೆರಡು ಹೆದ್ನಗಳು. ಹೆದ್ನ ಹಿಡಿಯದೇ ಬ್ರೇಕುಹಾಕುವ ಪಟೇಲರೂ ಇದ್ದರು. ದೂರನಿಯಂತ್ರಣ 'ರಿಮೋಟ್‌’ ಹೆದ್ನಗಳೂ ಇದ್ದವು. ಆದರೆ, ''ಹಗ್ಗವನ್ನು ಹಿಡಿದಿದ್ದ ಕಾವೇರಿಯ ನೂರಾರು ನಿಸ್ವಾರ್ಥ ಭಕ್ತರೇ ಈ ರಥೋತ್ಸವದ ನಿಜವಾದ ಶಕ್ತಿ ಎಂಬುದನ್ನು ನೀವು ಮನಗಂಡಿರಬಹುದು’’ ಎಂಬುದು ನನ್ನ ಉತ್ತರ.

ಸೂಕ್ಷ್ಮವಾಗಿ ಗಮನಿಸಿದರೆ, ನಮ್ಮ ಸಮ್ಮೇಳನವೂ ಇಂಥ ಒಂದು ರಥೋತ್ಸವ, ಕನ್ನಡಮ್ಮನ ತೇರೆಳೆಯುವ ಯತ್ನ ಎಂಬುದು ಮನದಟ್ಟಾಗುತ್ತದೆ. ರಥೋತ್ಸವದಲ್ಲಿ ನಡೆಯುವುದೆಲ್ಲ ದೇವರ ಕೆಲಸವಲ್ಲ. ದೇವರ ಕೆಲಸದ ಜೊತೆ ಜೊತೆಗೇ ಇನ್ನೂ ಹಲವು ಹತ್ತು ಉದ್ದೇಶಗಳು ನೆರವೇರುತ್ತವೆ. ಊಟ ಉಪಚಾರ, ನೆಂಟರಿಷ್ಟರ ಭೇಟಿ, ಹೆಣ್ಣು ಗಂಡುಗಳ ಬೇಟೆ, ಹಬ್ಬ, ನೆಂಟ, ಗೊರವಯ್ಯ..ಇದೇ ರೀತಿ, ನಮ್ಮ ಸಮ್ಮೇಳನ ಕೂಡ. ಒಂದು ಜಾತ್ರೆ.

ಕರ್ನಾಟಕದಲ್ಲಿ ನಡೆಯುವ ಪ್ರತಿ ಸಮ್ಮೇಳನಕ್ಕೂ ಒಬ್ಬ ಅಧ್ಯಕ್ಷನಿರುತ್ತಾನೆ, ನೀವೇಕೆ ಒಬ್ಬ ಉದ್ದಾಮ ಸಾಹಿತಿಯನ್ನು ಅಧ್ಯಕ್ಷನಾಗುವಂತೆ ಕೇಳಿಕೊಳ್ಳಬಾರದು? ಎದ್ದ ಪ್ರಶ್ನೆಗಳಲ್ಲಿ ಇದು ಮತ್ತೊಂದು.

ನಾನು ಮೊದಲೇ ಹೇಳಿದಂತೆ, ನಮ್ಮದು ''ಕನ್ನಡ ಸಾಹಿತ್ಯ ಸಮ್ಮೇಳನ’’ವಲ್ಲ. ಇದು ಕನ್ನಡ ಸಮ್ಮೇಳನ ಮೊದಲೇ ಅಲ್ಲ, ಇದು ಕನ್ನಡಿಗರ ಸಮ್ಮೇಳನ ಅಥವಾ ಮೇಳ ಅನ್ನಬಹುದು. ರಥೋತ್ಸವದ ಅಂದರೆ ದೇವರ ಹೆಸರಿನಲ್ಲಿ ನಡೆದುಹೋಗುವ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಮತ್ತು ವ್ಯಾಪಾರೀ ಚಟುವಟಿಕೆಗಳಂತೆ, ಇಲ್ಲೂ ಕನ್ನಡದ ಹೆಸರಿನಲ್ಲಿ, ವಾಣಿಜ್ಯ, ಆಧ್ಯಾತ್ಮಿಕ, ಸಾಹಿತ್ಯಿಕ, ಸಂಗೀತ-ನೃತ್ಯ-ನಾಟಕಗಳೇ ಮೊದಲಾದ ಸಾಂಸ್ಕೃತಿಕ ಚಟುವಟಿಕೆಗಳ ಒಂದು ಮೇಳ ನಡೆಯಿತು. ಮಹಿಳೆಯರು ತಮಗಾಗಿಯೇ ನಿಯೋಜಿಸಿಕೊಂಡ ಕಾರ್ಯಕ್ರಮಗಳೂ ನಡೆದವು.

ಮತ್ತೊಂದು ಗಮನಾರ್ಹ ಪ್ರಶ್ನೆ :

''ನೀವು ಹೇಗೆ ಪ್ರಾರಂಭಿಸಿದಿರಿ ಎಂಬುದು ತಿಳಿಯಿತು, ಆದರೆ, ಮುಕ್ತಾಯ ಅಥವಾ ಸಮಾರೋಪವೇ ನಡೆಯಲಿಲ್ಲ. ಠರಾವುಗಳನ್ನು ಮಂಡಿಸಲಿಲ್ಲ, ನಿರ್ಣಯಗಳನ್ನು ಮಾಡಲಿಲ್ಲ, ಈ ಮೂರು ದಿನ ಏನು ನಡೆಯಿತು ಎಂದು ಯಾರಾದರೋ ತಿಳಿಸಿದ್ದರೆ ಅದನ್ನು ಮೆಲಕು ಹಾಕುತ್ತಾ ಎಲ್ಲರೂ ಹಿಂದಿರುಗುತ್ತಿದ್ದರೇನೋ? ಆದರೆ, ಈಗ, ನಾವು ಗುರುಕಿರಣನ ಸಂಗೀತವನ್ನು ಮನಸ್ಸಿನಲ್ಲಿಟ್ಟುಕೋಂಡು ಹಿಂದಿರುಗಬೇಕೇ? ನೀವೆಲ್ಲ ಒಗ್ಗೊರಳಿನಿಂದ ಕರ್ನಾಟಕ ಸರ್ಕಾರಕ್ಕೆ ಏನು ಸಂದೇಶ ಕೊಡುತ್ತೀರಿ? ಅಮೆರಿಕಾ ಸರ್ಕಾರಕ್ಕೆ ನಿಮ್ಮ ಸಂದೇಶವೇನು? ಉದಾಹರಣೆಗೆ, ಅಮೇರಿಕದ ಖಾಸಗೀ ವಿಮಾನ ಸಂಸ್ಥೆಗಳು ನೇರವಾಗಿ ಬೆಂಗಳೂರಿಗೆ ಹಾರುವಂತೆ ಪ್ರೇರೇಪಿಸುವ ಠರಾವನ್ನು ಮಂಡಿಸಬಹುದಿತ್ತು. ಅಮೆರಿಕಾ ಸರ್ಕಾರ ಬೆಂಗಳೂರಿನಲ್ಲಿ ಒಂದು ಅಮೆರಿಕನ್‌ ಕಾಂಸುಲೇಟ್‌ ತೆಗೆಯುವಂತೆ ಪ್ರಚೋದಿಸಬಹುದಿತ್ತು. ಕರ್ನಾಟಕ ಸರ್ಕಾರ ಕರ್ನಾಟಕದ ಶಾಲೆಗಳಲ್ಲಿ ಕನ್ನಡದ ಕಲಿಕೆಯನ್ನು ಕಡ್ಡಾಯಗೊಳಿಸುವಂತೆ ಒತ್ತಾಯಮಾಡಬಹುದಿತ್ತು. ಕನ್ನಡ ಆಡಳಿತ ಭಾಷೆಯಾಗಿ ಸಫಲಗೊಳಿಸಲು ಸರ್ಕಾರ ಏನು ಮಾಡಿದೆ ಎಂದು ಅಮೆರಿಕನ್ನಡಿಗರು ಕೇಳಬಹುದಿತ್ತು. ಒಂದೇ ಎರಡೇ ಅಮೆರಿಕನ್ನಡಿಗರು ಮಾಡಬಹುದಾದ ಸಲಹೆಗಳು?’’

ಹೌದು, ನಿರ್ಣಯಗಳನ್ನು ಮಾಡಬಹುದಿತ್ತು, ಅನ್ನಿಸುತ್ತದೆ. ಆದರೆ, ನಾವು ಮಂಡಿಸುವ ಠರಾವುಗಳಿಂದ ಏನು ಬದಲಾವಣೆ ಸಾಧ್ಯವೋ ಹೇಳುವುದು ಕಷ್ಟ. ಪ್ರತಿವರ್ಷ ಕರ್ನಾಟಕದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಗಳಲ್ಲಿ ಮಂಡಿಸಲ್ಪಡುವ ಠರಾವುಗಳಿಂದ, ತೆಗೆದುಕೊಳ್ಳುವ ನಿರ್ಣಯಗಳಿಂದ ಏನು ಸಾಧನೆ ಆಗಿದೆಯೋ ನನಗೆ ಮಾಹಿತಿ ಇಲ್ಲ. ಆದರೂ, ನಮ್ಮ ಬೇಡಿಕೆಗಳ ಪಟ್ಟಿಯನ್ನೂ, ಸಲಹೆಗಳ ಪಟ್ಟಿಯನ್ನೂ ತಯಾರಿಸಬಹುದಿತ್ತೇನೊ?

ಇನ್ನೊಂದು ಮುಖ್ಯವಾದ ಪ್ರಶ್ನೆ :

''ಈ ಸಮ್ಮೇಳನದಿಂದ ನೀವೇನು ಕಲಿತಿರಿ? ಮುಂದಿನ ಸಮಿತಿಯವರಿಗೆ ನಿಮ್ಮ ಸಲಹೆಗಳೇನು? ನೀವು ಪಟ್ಟಿ ಮಾಡಿದ್ದ ಮೌಲ್ಯಗಳನ್ನು ಆಚರಣೆಗೆ ತರಲು ಸಾಧ್ಯವಾಯಿತೇ? ನಿಯಮಾವಳಿಗಳನ್ನು ನೀವು ಎಷ್ಟರಮಟ್ಟಿಗೆ ಅನುಸರಿಸಿದಿರಿ?’’

ಕಲಿತ ಪಾಠಗಳು ಹಲವು, ಆದರೆ ಮುಖ್ಯವಾದವು ಇವು :

  1. ಪ್ರಕೃತಿ ಸಹಕರಿಸದಿದ್ದರೆ, ಮಾಡಿಕೊಂಡ ತಯಾರಿ ಹೆಚ್ಚು ಉಪಯೋಗಕ್ಕೆ ಬರುವುದಿಲ್ಲ.
  2. ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬರುವುದಿಲ್ಲ
  3. ಎಲ್ಲರೂ ಶಿಸ್ತಿನಿಂದ ನಡೆದುಕೊಳ್ಳದಿದ್ದರೆ ಸಮಯವನ್ನು ಪಾಲಿಸುವುದು ಸಾಧ್ಯವಾಗುವುದಿಲ್ಲ
  4. ಊಟ ತಿಂಡಿ, ಕಾರ್ಯಕ್ರಮ ಎಲ್ಲವೂ ಒಂದೇ ಚಾವಡಿಯಡಿ ನಡೆಯದಿದ್ದರೆ ಕಲಾಪಗಳು ಅಸ್ತವ್ಯಸ್ತವಾಗುತ್ತವೆ.
  5. ಎಲ್ಲರನ್ನೂ ಸಂತೋಷಗೊಳಿಸಬೇಕೆಂಬ ಭ್ರಮೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಯೋಜಿಸಿದಾಗ ಯಾವುದೂ ಸಮರ್ಪಕವಾಗಿ ನಡೆಯುವುದಿಲ್ಲ.

ನಾವು ಒಮ್ಮತದಿಂದ ತಯಾರಿಸಿದ್ದ ಮೌಲ್ಯಗಳು ಮತ್ತು ನಿಯಮಗಳು ಸಮ್ಮೇಳನದಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಅನ್ವಯಿಸುತ್ತವೆ. ಯಾರು ಯಾರು ಎಷ್ಟೆಷ್ಟು ನಿಯಮಗಳನ್ನು ಪಾಲಿಸಿದರು, ಎಷ್ಟೆಷ್ಟು ನಿಯಮಗಳನ್ನು ಉಲ್ಲಂಘಿಸಿದರು ಎಂಬುದನ್ನ ಅವರವರೇ ನಿರ್ಧರಿಸಿಕೊಳ್ಳಬೇಕು.

ಕೊನೆಯದಾಗಿ, ಒಂದು ಮಾತು. ಹಿಂದೊಮ್ಮೆ ಕಾವೇರಿ ಕನ್ನಡ ಸಂಘಕ್ಕೆ ರಾಜ್ಯೋತ್ಸವ ಪ್ರಶಸ್ತಿ ದೊರಕಬೇಕೆಂಬ ಪ್ರಸ್ತಾಪವನ್ನು ಕರ್ನಾಟಕ ಸರ್ಕಾರದೊಂದಿಗೆ ಮಾಡಿದ್ದೆವು. ಕಾರಣಾಂತರಗಳಿಂದ ಅದು ಆಗ ಫಲಿಸಲಿಲ್ಲ. ಪ್ರಾಯಶಃ ಇಂಥಾ ಒಂದು ದೊಡ್ಡ ಪ್ರಮಾಣದಲ್ಲಿ ನಾಲ್ಕೈದು ಸಹಸ್ರ ಕನ್ನಡಿಗರನ್ನು ಒಂದೆಡೆ ಸೇರಿಸಿ ಯಶಸ್ವೀ ವಿಶ್ವಕನ್ನಡ ಸಮ್ಮೇಳನವನ್ನು ನಡೆಸಿ ಜಯಭೇರಿ ಹೊಡೆದ, ಅಮೆರಿಕದಲ್ಲಿ ಅತ್ಯಂತ ಹಿರಿಯ ಕನ್ನಡ ಸಂಸ್ಥೆಗಳಲ್ಲಿ ಒಂದಾದ ಕಾವೇರಿಗೆ, ಸುವರ್ಣ ಸಂಭ್ರಮದ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ದೊರಕಲೆಂಬ ಆಶಯವನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತ, ಇದಕ್ಕೆ ಬೇಕಾದ ಪ್ರಚಾರಕಾರ್ಯವನ್ನು ಕಾವೇರಿ ಮತ್ತು ಅಕ್ಕ ಸಂಸ್ಥೆಗಳ ಪದಾಧಿಕಾರಿಗಳು ಮಾಡುವರೆಂಬ ನಂಬಿಕೆಯೊಂದಿಗೆ ವಿರಮಿಸುವೆ ಮುಂದಿನ ಕಂತಿನವರೆಗೆ.

English summary
Jalataranta Columnist Dr. M.S.Nataraj writes about necessity and impartance of World Kannada Conference in USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X