ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಸ್ತಕರೂಪದಲ್ಲಿ ಬರಲಿದೆ ‘ಜಾಲತರಂಗ’

By Super
|
Google Oneindia Kannada News

'ದಟ್ಸ್‌ ಕನ್ನಡ"ದಲ್ಲಿ ಪ್ರಕಟವಾದ 'ಜಾಲತರಂಗ" ಅಂಕಣಕ್ಕೆ ಪುಸ್ತಕ ರೂಪ ಪ್ರಾಪ್ತಿಯಾಗಿದ್ದು, ವಿಶ್ವಕನ್ನಡ ಸಮ್ಮೇಳನದಲ್ಲಿ ಲೋಕಾರ್ಪಣೆಯಾಗಲಿದೆ. ಈ ಬಗ್ಗೆ ಒಂದೆರಡು ನಲ್ನುಡಿ.

ಡಾ. ಮೈ.ಶ್ರೀ. ನಟರಾಜ
ಪೊಟೊಮೆಕ್‌, ಮೇರೀಲ್ಯಾಂಡ್‌

ಪ್ರಿಯ ಓದುಗರೇ,

ಕೆಲ ವಾರಗಳಿಂದ ನನ್ನ ಅಂಕಣದಲ್ಲಿ ಹೊಸ ಲೇಖನಗಳು ಪ್ರಕಟವಾಗಿಲ್ಲವೆಂಬುದನ್ನು ನಿಮ್ಮಲ್ಲಿ ಹಲವರು ಗಮನಿಸಿದ್ದೀರಿ. ಹಲವರು ಅಂಚೆ ಕಳಿಸಿ 'ಏಕೆ ಹೀಗೆ?" ಎಂದು ವಿಚಾರಿಸಿದ್ದೀರಿ. ನಿಮ್ಮ ಕಳಕಳಿಗೆ ನನ್ನ ಧನ್ಯವಾದಗಳು. ಕಾರಣ ಹಲವು: ಮೊಟ್ಟ ಮೊದಲನೆಯದಾಗಿ, ಕಾವೇರಿ ಮತ್ತು ಅಕ್ಕ ಸಂಸ್ಥೆಗಳು ಹವಣಿಸಿಕೊಂಡಿರುವ ನಾಲ್ಕನೇ ವಿಶ್ವಕನ್ನಡ ಸಮ್ಮೇಳನ ಇನ್ನೇನು ಹತ್ತಿರ ಬರುತ್ತಿದೆ. ಈ ಸಮ್ಮೇಳನದ ಸಂದರ್ಭದಲ್ಲಿ ಬಿಡುಗಡೆಯಾಗಲಿರುವ ಸ್ಮರಣ ಸಂಚಿಕೆ ಮತ್ತು ಜೊತೆಗೆ ಕಥಾ ಸಂಕಲನ, ತಾಂತ್ರಿಕ ಮತ್ತು ವೈಜ್ಞಾನಿಕ ಲೇಖನಗಳ ಸಂಕಲನ ಮತ್ತು ಸಮ್ಮೇಳನಕ್ಕಾಗಿ ಏರ್ಪಡಿಸಿದ ಒಂದು ಸ್ಪರ್ಧೆಯಲ್ಲಿ ಗೆದ್ದ ಕಾದಂಬರಿಯೊಂದರ ಪ್ರಕಟನೆಯೇ ಮುಂತಾದ ಕೆಲಸಗಳಲ್ಲಿ ಇದ್ದ ಸಮಯವೆಲ್ಲ ಕಳೆದು ಹೋಯಿತು.

ಅಷ್ಟೇ ಸಾಲದೋ ಎಂಬಂತೆ, ಇದೇ ಸಮ್ಮೇಳನದ ಶುಭಸಂದರ್ಭದಲ್ಲಿ ನನ್ನದೇ ಒಂದು ಪುಸ್ತಕವನ್ನೂ ಬಿಡುಗಡೆಮಾಡಬೇಕೆಂಬ ನಿರ್ಧಾರಮಾಡಿದ್ದರಿಂದ, ಅದಕ್ಕೂ ಸಾಕಷ್ಟು ಸಮಯ ಬೇಕಾಯಿತು. 'ಜಾಲತರಂಗ" ಅಂಕಣ ಪ್ರಾರಂಭವಾದಾಗಿನಿಂದ ಹಿಡಿದು (ಅಂದರೆ, ಜೂನ್‌ 2003), ಮೂರು ವರ್ಷಗಳ ಅವಧಿಯಲ್ಲಿ 'ಅದುವೆಕನ್ನಡ"ದಲ್ಲಿ ಪ್ರಕಟವಾದ ಮತ್ತು ಹಿಂದೆ ಅಲ್ಲಿ ಇಲ್ಲಿ ಪ್ರಕಟವಾದ ಬಿಡಿ ಬಿಡಿ ಲೇಖನಗಳನ್ನೂ ಸೇರಿಸಿ, ಸುಮಾರು ಅರವತ್ತು ಲೇಖನಗಳು (ಹಲವು ಕವನಗಳೂ ಒಳಗೊಂಡಂತೆ), 'ಜಾಲತರಂಗ" ಎಂಬ ಹೆಸರಿನಲ್ಲೇ ಪುಸ್ತಕವೊಂದು ಗೀತಾ ಬುಕ್‌ಹೌಸ್‌ ಪ್ರಕಾಶನದಲ್ಲಿ ಅಚ್ಚಾಗಿದೆ.

ಬಿಡಿ ಬಿಡಿಯಾಗಿ ಓದಿ ಆನಂದಿಸಿದ ಸಹೃದಯರು ಇಡೀ ಪುಸ್ತಕವನ್ನೂ ಕೊಂಡು ಓದುವರೆಂಬ ಆಶಯ ನನ್ನದು. ಈ ಪುಸ್ತಕಕ್ಕೆ ಮುನ್ನುಡಿಯ ರೂಪದಲ್ಲಿ 'ನಲ್ನುಡಿ"ಯನ್ನು ನನ್ನ ಹಳೆಯ ಮತ್ತು ಹಿರಿಯ ಮಿತ್ರರಾದ ನಿವೃತ್ತ ಕನ್ನಡ ಪ್ರಾಧ್ಯಾಪಕ, ಪ್ರೊ. ಜಿ. ಅಶ್ವತ್ಥನಾರಾಯಣ ಅವರು ಬರೆದುಕೊಟ್ಟಿದ್ದಾರೆ. ಈ ನಲ್ನುಡಿಯನ್ನು ನನ್ನ ಅಂಕಣದಲ್ಲಿ ಹೃತ್ಪೂರ್ವಕ ಕೃತಜ್ಞತೆಗಳೊಂದಿಗೆ ಪ್ರಕಟಿಸುವುದರ ಮೂಲಕ ಬರಲಿರುವ ಪುಸ್ತಕವನ್ನು ಪರಿಚಯಮಾಡಿಕೊಡಲು ನನಗೆ ಅತ್ಯಂತ ಹರ್ಷವಾಗುತ್ತಿದೆ. ಹಿಂದೆ ಪ್ರಕಟಿಸಿದ ನನ್ನ ಪುಸ್ತಕಗಳಿಗೆ ದೊರೆತಂತೆ ಈ ನನ್ನ ಪುಸ್ತಕಕ್ಕೂ ತಮ್ಮೆಲ್ಲರ ಪ್ರೋತ್ಸಾಹ ದೊರಕುವುದೆಂಬ ಭರವಸೆಯೊಂದಿಗೆ ವಿರಮಿಸುವೆ ಮುಂದಿನ ಕಂತಿನವರೆಗೆ.

*

ನಲ್ನುಡಿ (ಬರಲಿರುವ 'ಜಾಲತರಂಗ"ಕ್ಕೆ ಒಂದು ಮುನ್ನುಡಿ)

Prof. G. Ashwathnarayanaಅಮೆರಿಕೆಯಲ್ಲಿರುವ ಕನ್ನಡಿಗರಿಗೆ ಕನ್ನಡ ಸಾಹಿತ್ಯದ ಉಣಿಸನ್ನು ನೀಡುತ್ತಿರುವ ಕನ್ನಡ ಜಾಲತಾಣ (ವೆಬ್‌ಸೈಟ್‌)ಗಳಲ್ಲಿ ಶಾಮಸುಂದರವರ ದಟ್ಸ್‌ಕನ್ನಡ.ಕಾಂ ಜನಪ್ರಿಯ ತಾಣವಾಗಿದೆ. ಇದರಲ್ಲಿ 'ಅಂಕಣಗಳು" ವಿಭಾಗದಲ್ಲಿ ಬರುವ ವಿವಿಧ ಲೇಖಕರ ಅಂಕಣಗಳು, ಸಾಹಿತ್ಯಪ್ರಿಯರಿಗೆ ರಸಕವಳ ನೀಡುತ್ತದೆ. ಈ ಅಂಕಣಗಳ ವಿಭಾಗದಲ್ಲಿ ಡಾ. ಮೈ.ಶ್ರೀ. ನಟರಾಜರ ''ಜಾಲತರಂಗ""ದ ಲೇಖನಗಳು ಎಲ್ಲರ ಗಮನ ಸೆಳೆದಿವೆ. ಇವರ ಅಂಕಣ ಬರಹಗಳನ್ನು ಬಿಡಿಬಿಡಿಯಾಗಿ ಓದಿರುವವರಿಗೆ ಈಗೊಂದು ಸುವರ್ಣಾವಕಾಶ ಒದಗಿಬಂದಿದೆ. ಅದೆಂದರೆ, ಆ ಎಲ್ಲ ಬರಹಗಳು ಒಂದೆಡೆ ಅಚ್ಚುಕಟ್ಟಾಗಿ ಗ್ರಂಥರೂಪದಲ್ಲಿ ಹೊರಬರುತ್ತಿವೆ. ನಾಲ್ಕನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಬಿಡುಗಡೆ ಆಗಲಿದೆ.

ಜಾಲತರಂಗದ ಅಂಕಣ ಬರಹಗಳ ಲೇಖಕರಾದ ಮೈ. ಶ್ರೀ. ನಟರಾಜ್‌ ಅವರೂ ನಾನೂ ವಿದ್ಯಾರ್ಥಿದೆಸೆಯಲ್ಲಿಯೇ ಪರಿಚಿತರಾದವರು. ಸಮಾನಮನಸ್ಕರಾಗಿ ಕನ್ನಡ ಕಾರ್ಯಕ್ರಮಗಳಲ್ಲಿ , ವಿಶೇಷವಾಗಿ ಅಂತರ ಕಾಲೇಜು ಕನ್ನಡ ಚರ್ಚಾಕೂಟಗಳಲ್ಲಿ ಭಾಗವಹಿಸುತ್ತಿದ್ದೆವು. ಕಿರಿಯ ವಾಗ್ಮಿಗಳ ಸಂಘ, ಉಲ್ಲಾಳ್‌ ಅಂತರ ಕಾಲೇಜು ನಾಟಕ ಸ್ಪರ್ಧೆ, ಕನ್ನಡ ಚಳುವಳಿ, ಮೊದಲಾದವುಗಳಲ್ಲಿ ಭಾಗವಹಿಸುತ್ತಿದ್ದೆವು.

ವಿದ್ಯಾಭ್ಯಾಸದ ನಂತರ ಅವರ-ನನ್ನ ಕಾರ್ಯಕ್ಷೇತ್ರಗಳು ಬೇರೆಯಾಗಿ ಹತ್ತಾರು ವರ್ಷಗಳು ನಾವು ಭೇಟಿ ಆಗಲೇ ಇಲ್ಲ. ಕಳೆದ ಬಾರಿ 2003ರಲ್ಲಿ ನಾನು ಅಮೇರಿಕೆಗೆ ಬಂದಾಗ, ಅವರ ಭೇಟಿ 'ಭೂಮಿಕಾ" ಕಾರ್ಯಕ್ರಮದಲ್ಲಿ ಆಯಿತು. ಆದರೆ ಆಗ ಕಾಲಾಭಾವದಿಂದ ಮತ್ತೆ ಭೇಟಿ ಆಗಲಿಲ್ಲ. ಈಗ 2006ರಲ್ಲಿ ಎರಡನೆಯ ಬಾರಿ ಅಮೆರಿಕೆಗೆ ಬಂದಿರುವಾಗ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಪ್ರಕಟಣೆಗಳ ಸಂಪಾದನಾಕಾರ್ಯದಲ್ಲಿ ಪಾಲ್ಗೊಳ್ಳುವ ಅವಕಾಶ ದೊರತಿದ್ದರಿಂದ, ಮಿತ್ರರೊಂದಿಗೆ ಹೆಚ್ಚುಕಾಲ ಕಳೆಯುವಂತಾಯಿತು. ಈ ಸಂದರ್ಭದಲ್ಲಿ ಅವರು ಅಚ್ಚಿಗೆ ಸಿದ್ಧವಾಗಿದ್ದ ಅಂಕಣ ಬರಹಗಳ ಮತ್ತು ಇತರ ಬರಹಗಳನ್ನೊಳಗೊಂಡ ''ಜಾಲತರಂಗ""ದ ಕರಡುಪ್ರತಿ ನೀಡಿ 'ಓದಿ ನಿಮ್ಮ ಅನಿಸಿಕೆ ತಿಳಿಸಿ" ಎಂದರು.

ಓದಿದ ಮೇಲೆ ಅದರ ಬಗ್ಗೆ ಕೆಲವು ಮಾತುಗಳನ್ನು ಹೇಳಿದಾಗ, ''ಈ ಮಾತುಗಳನ್ನೇ ಬರೆದುಕೊಡಿ"" ಎಂದರು. ಹೀಗೆ ಬರೆದದ್ದೇ ಈ ನಲ್ನುಡಿ, ಆತುರದಲ್ಲಿ ಬರೆದುಕೊಟ್ಟ ಸಹೃದಯ ಓದುಗನೊಬ್ಬನ ಪ್ರಾಮಾಣಿಕ ಅನಿಸಿಕೆಗಳು.

'ಜಾಲತರಂಗ" ಅಂಕಣಗಳ ಸಂಗ್ರಹಗ್ರಂಥ. ಎಂದರೆ ಈಗಾಗಲೇ ಪ್ರಕಟವಾದ ಬರಹಗಳ ಸಂಕಲನ. ಇದರ ವಿಶೇಷ ಎಂದರೆ ಈ ಲೇಖನಗಳು ಹಾಳೆಗಳಲ್ಲಿ ಅಚ್ಚಾದವಲ್ಲ. (ದಿನ, ವಾರ ಪತ್ರಿಕೆಗಳಲ್ಲಿ ಪ್ರಕಟವಾದವಲ್ಲ; ಒಂದೆರಡನ್ನು ಬಿಟ್ಟರೆ) ವಿದ್ಯುನ್ಮಾನ ಮಾಧ್ಯಮದಲ್ಲಿ ಜಾಲತಾಣ (ವೆಬ್‌ಸೈಟ್‌)ದಲ್ಲಿ ಪ್ರಕಟವಾದ ಲೇಖನಗಳು.

ಪತ್ರಿಕೆಗಳಲ್ಲಿ ಪ್ರಕಟವಾದ ಅಂಕಣ ಬರಹಗಳಿಗೆ ಕಾಲಂ ಮಿತಿ ಇರುತ್ತದೆ. ಬರಹದ ಕೆಲವು ಭಾಗಗಳು 'ಕಾಲಂ"ಗೆ ತಕ್ಕಂತೆ ಕಟ್‌ ಆಗಿರುತ್ತವೆ. ಮತ್ತು ಆದಿನ ಬಂತೆಂದರೆ, ಲೇಖಕನಿಗೆ ಏನೇ ಆಗಿರಲಿ, ಆರೋಗ್ಯ ಕೆಟ್ಟಿರಲಿ, ಊರು ಬಿಟ್ಟಿರಲಿ, ಲೇಖನ ಸಿದ್ಧವಾಗಿರಬೇಕು. ಇಲ್ಲವೇ, ನಾಳೆ ಜ್ವರ ಬರುತ್ತೆ ಅಂತ ಈವತ್ತೇ ಮಾತ್ರೆ ತೆಗೆದುಕೊಂಡಂತೆ, ಮೊದಲೇ ಹಲವು ವಾರಗಳ ಅಂಕಣಬರಹ ಸಿದ್ಧಪಡಿಸಿರಬೇಕು. ಅಮೆರಿಕೆಯಲ್ಲಿ ಹಲವುದಿನಗಳಿಗೆ ಊಟ ಸಿದ್ಧಪಡಿಸಿ ತಂಗಳುಪೆಟ್ಟಿಗೆಯಲ್ಲಿ ಇಡುತ್ತಾರಲ್ಲಾ, ಹಾಗೆ. ಆದರೆ, ಜಾಲತರಂಗದ ನಟರಾಜರು ಅಂಕಣದ ಬರಹಗಳನ್ನು ಕಾಲದ ಮಿತಿ ಆಗಲೀ ಕಾಲಂನ ಮಿತಿಯಾಗಲೀ ಇಲ್ಲದೇ ಬರೆದಿದ್ದಾರೆ. ಈ ಭಾಗ್ಯ ವಿದ್ಯುನ್ಮಾನ ಜಾಲತಾಣದ ಅಂಕಣಗಳಿಗೆ ಮಾತ್ರ ಲಭ್ಯ. ಅಚ್ಚಿನ ಪತ್ರಿಕೆಗಳ ಪುಟಗಳಿಗೆ ಅಶಕ್ಯ.

ಇದರ ಫಲವಾಗಿ ಕಾಲಂ ಮಿತಿಯಿಂದ ಇಲ್ಲಿಯ ಅಂಕಣ ಬರಹಗಳಿಗೆ ಕತ್ತರಿ ಪ್ರಯೋಗ ಆಗಿಲ್ಲ. ಆ ದಿನಕ್ಕೆ ಬರಲೇಬೇಕೆಂಬ ನಿರ್ಬಂಧದಿಂದ ಅವಸರದ ರುಚಿಗೆಟ್ಟ ಅಡಿಗೆ ಆಗಿಲ್ಲ. ಅವರು ಬರೆಯುವ ರೀತಿ ಎಂದರೆ, ಅವರೇ ಹೇಳಿಕೊಂಡಂತೆ, ''ಯಾವುದೋ ಒಂದು ಸಂದರ್ಭದಲ್ಲಿ, ಮನಸ್ಸಿನಲ್ಲಿ ಮಿಂಚಿ ಮಾಯವಾಗಿಬಿಡುವ ಭಾವನೆಗಳು, ಒಮ್ಮೊಮ್ಮೆ ಮತ್ತೆಮತ್ತೆ ಮರುಕಳಿಸಿ ಕಾಡಿದಾಗ, ಉತ್ಕಟವಾದ ವಿಚಾರಮಂಥನ ನಡೆದುಹೋದಂತಾಗಿ, ಆ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಕೆನಿಸಿದಾಗ, ನಾನು ಬರೆಯಲು ಕೂಡುತ್ತೇನೆ"" ಎಂದಿದ್ದಾರೆ (ಎಮ್‌. ಆರ್‌. ದತ್ತಾತ್ರಿ ಅವರು ಮಾಡಿದ ಸಂದರ್ಶನ).

ಎರಡನೆಯ ವಿಶೇಷವೆಂದರೆ, ಇಲ್ಲಿಯ ಬರಹಗಳು, ತಾತ್ಕಾಲಿಕ, ಸಮಕಾಲಿಕ ಕಾರ್ಯಕ್ರಮ, ಘಟನೆ, ಸಂಗತಿಗಳನ್ನು ಒಳಗೊಂಡ ಲೇಖನಗಳಾಗಿದ್ದರೂ, ಪತ್ರಿಕಾಸುದ್ದಿಯಂತೆ ಅಂದಿಗೇ ಸಾಯುವ ಬರಹಗಳಲ್ಲ. ಈ ಬರಹಗಳ ಹೊರಪದರ ನಡೆದುಹೋದ ಕಾರ್ಯಕ್ರಮ, ಘಟನೆಯ ವರದಿ ಆಗಿದ್ದರೂ, ವರ್ತಮಾನದಿಂದ ಸ್ಫೂರ್ತಿ ಪಡೆದಿದ್ದರೂ, ಯಾವುದೋ ಒಂದು ಸಾರ್ವಕಾಲಿಕ, ಸಾರ್ವದೇಶಿಕ ಸತ್ಯವನ್ನು ಅರಸುವುದನ್ನು ಕಾಣುತ್ತೇವೆ. ಹೀಗಾಗಿ, ಪ್ರತಿ ಬರಹದಲ್ಲೂ ಶಾಶ್ವತ ಸತ್ಯವೊಂದು ಅಡಗಿದೆ.

ಅಮೆರಿಕಾದಲ್ಲಿರುವ ಲೇಖಕರು ಬರೆದ ಬರಹಗಳಲ್ಲಿ ಕೆಲವರು ಅಮೆರಿಕನ್ನಡಿಗರಿಗಾಗಿ ಬರೆದರೆ ಮತ್ತೆ ಕೆಲವರು ಕರ್ನಾಟಕದ ಕನ್ನಡಿಗರಿಗಾಗಿ ಬರೆದಿದ್ದಾರೆ. ನಟರಾಜ್‌ ಅವರು ಮೊದಮೊದಲು ''ನಾನೂ ಅಮೆರಿಕನ್‌ ಆಗಿಬಿಟ್ಟೆ"" ಎಂದು ಅಮೆರಿಕನ್ನರಿಗೆ ಬರೆಯತೊಡಗಿದಾಗ, ಪ್ರಸಿದ್ಧ ಕನ್ನಡ ಕಾದಂಬರಿಕಾರರಾದ ಡಾ. ಎಸ್‌. ಎಲ್‌. ಭೈರಪ್ಪನವರನ್ನು ಕಂಡ ಸಂದರ್ಭದಲ್ಲಿ ಅವರು ಹೇಳಿದ ಮಾತು ''ನೀವು ಕೇವಲ ಅಮೆರಿಕನ್ನಡಿಗರಿಗಾಗಿ ಬರೆಯಬೇಕಿಲ್ಲ; ಎಲ್ಲ ಓದುಗರನ್ನೂ (ವಿಶ್ವದ ಎಲ್ಲ ಕನ್ನಡ ಓದುಗರನ್ನೂ) ಗಮನದಲ್ಲಿಟ್ಟುಕೊಂಡು ಬರೆಯಿರಿ."" ಈ ಮಾತನ್ನು ಗಮನದಲ್ಲಿಟ್ಟುಕೊಂಡು ಬರೆದ ಬರಹಗಳು ಜಾಲತರಂಗದಲ್ಲಿವೆ. ಇದರಿಂದ ಇಲ್ಲಿಯ ಬರಹಗಳಿಗೆ ಸಾರ್ವತ್ರಿಕಮೌಲ್ಯ ಲಭ್ಯವಾಗಿದೆ.

ಇಲ್ಲಿರುವ ಅಂಕಣಬರಹಗಳು ಎಲ್ಲ ಬಗೆಯ ಓದುಗರ ಮನಸೆಳೆಯುತ್ತವೆ: ಏಕೆಂದರೆ, ಅಂಕಣಕಾರರಾದ ನಟರಾಜ್‌ ಅವರು ತಮ್ಮ ಲೇಖನಗಳ ವಿಷಯವ್ಯಾಪ್ತಿಯನ್ನು ಕೇವಲ ಸಾಹಿತ್ಯಕ್ಕಾಗಲಿ, ಕಲೆಗಾಗಲಿ, ರಾಜಕೀಯ, ಸಾಮಾಜಿಕ, ಧಾರ್ಮಿಕರಂಗಗಳಿಗಾಗಲೀ, ಕೃತಿವಿಮರ್ಶೆ, ಕಾರ್ಯಕ್ರಮ ಪರಿಚಯಗಳಿಗಾಗಲೀ, ಯಾವುದೇ ಒಂದು ವಿಷಯಕ್ಕೆ ಸೀಮಿತಗೊಳಿಸಿಲ್ಲ. ಕವಿಗಳು, ನಾಟಕಕಾರರು, ಸಂಘಸಂಸ್ಥೆಗಳಲ್ಲಿ ವಿಶೇಷ ಅನುಭವ ಹೊಂದಿದವರೂ, ಚಿಂತಕರೂ, ವಿಶಾಲವ್ಯಾಪ್ತಿಯ ಓದಿನ ಚಟಗಾರರೂ ಆಗಿರುವುದರಿಂದ, ಅವರ ಬರಹಗಳು ಷಡ್ರಸಾನ್ನಭೋಜನವನ್ನು ನೆನಪಿಸುತ್ತದೆ. ಇದು ಪ್ರತಿ ಅಂಕಣಕಾರನಿಗೂ ಇರಬೇಕಾದ ಅರ್ಹತೆಯಾಗಿದೆ.

ಬಹುಶ್ರುತತ್ವ ಇಲ್ಲದವ; ತೆರೆದಮನ-ತೆರೆದ ಕಣ್‌ ಇಲ್ಲದವ, ಶ್ರೇಷ್ಠ ಅಂಕಣಕಾರ ಆಗಲಾರ. ಅಂಕಣಗಳ ಆಕರ್ಷಣೆ ಎಂದರೆ, ನಿರೂಪಣಾವೈಖರಿ, ಸಂಕ್ಷಿಪ್ತತೆ, ಸ್ವಂತವಿಚಾರಲಹರಿ, ಮಾಹಿತಿಸಂಗ್ರಹ, ಸಕಾಲಿಕತೆ, ಎಲ್ಲಕ್ಕಿಂತ ಮಿಗಿಲಾಗಿ, ನಿಷ್ಪಕ್ಷಪಾತ ಪ್ರಾಮಾಣಿಕ ಸಹೃದಯ ಧೋರಣೆ ಅತ್ಯಗತ್ಯವಾಗಿರುತ್ತದೆ. ಆಗ ಅಂಕಣ ಲೋಹಚುಂಬಕ ಆಗುತ್ತದೆ. ಅಂಕಣ ಬರಹಗಳು ಮನವನ್ನು ಅರಳಿಸುವಂತೆಯೇ ಕೆರಳಿಸಲೂಬಲ್ಲದು. ಉದಾಹರಣೆಗೆ, ಈ ಗ್ರಂಥದಲ್ಲಿರುವ '' ನೋಡಲಾರೆ ನಾ ಕನ್ನಡಚಿತ್ರ"" ಬರಹಕ್ಕೆ ಬಂದ ಓದುಗರ ಪ್ರತಿಕ್ರಿಯೆಗಳನ್ನು ಗಮನಿಸಬೇಕು.

ಈ ದೃಷ್ಟಿಯಿಂದ ಅಚ್ಚಿನ ಪತ್ರಿಕೆಗಳ ಅಂಕಣಗಳ ಪ್ರತಿಕ್ರಿಯೆಯ ಓದುಗರ ಓಲೆಗಿಂತ ವಿದ್ಯುನ್ಮಾನ ಜಾಲತಾಣದ ಅಂಕಣಗಳ ಪ್ರತಿಕ್ರಿಯೆ ತೀವ್ರ, ಅಪಾರ ಮತ್ತು ಶೀಘ್ರಗತಿಯುಳ್ಳವು. ನಟರಾಜರ ಅಂಕಣಬರಹಗಳು ಓದುಗರ ಮನಗಳನ್ನು ಅರಳಿಸಬಲ್ಲವು; ಕೆರಳಿಸಲೂ ಬಲ್ಲವು.

ಜಾಲತರಂಗದಲ್ಲಿ ಎರಡು ಬಗೆಯ ಬರಹಗಳಿವೆ. ಅಂಕಣಕ್ಕಾಗಿಯೇ ಬರೆದವು; ಅಂಕಣವಿಭಾಗದಲ್ಲಿ ಪ್ರಕಟವಾದ ಬೇರೆ ಸಂದರ್ಭಗಳ ಲೇಖನಗಳು. ಉದಾಹರಣೆಗೆ, ಅಮೇರಿಕೆಯಲ್ಲಿರುವ ಕನ್ನಡ ಸಂಘಗಳ ಸಮೀಕ್ಷಾಲೇಖನ, ಲೇಖಕರು ಶ್ರಮಪಟ್ಟು ಸಿದ್ಧಪಡಿಸಿದ ಬರಹ; ಅಳವಡಿಕೆ, ವಚನಾಮೃತಧಾರೆ, ಪರಮಹಂಸ ವಿವೇಕಾನಂದ ಕುವೆಂಪು ಮುಂತಾದ ಲೇಖನಗಳು ಅಂಕಣದಲ್ಲಿ ಬಂದರೂ ಅಂಕಣಕ್ಕಾಗಿಯೇ ಬರೆದವಲ್ಲ. ಈ ಎರಡೂ ಬಗೆಯ ಲೇಖನಗಳಿಂದ ಓದುಗನಿಗೆ ಹೆಚ್ಚು ಲಾಭವಾಗಿದೆ.

ಹಲವಾರು ವಿನೂತನ ಬರಹಗಳು ಇಲ್ಲಿವೆ; ನಿದರ್ಶನಕ್ಕೆ, ಹೇಳುವುದಾದರೆ, ನಿರೂಪಣಾಸಾಹಿತ್ಯದ ಬರಹಗಳು. ಒಂದು ಕಾಲದಲ್ಲಿ ಕಾರ್ಯಕ್ರಮಗಳಿಗೆ ನಿರೂಪಕರು ಇರುತ್ತಿರಲಿಲ್ಲ. ಸಭಾಧ್ಯಕ್ಷರೇ ಮುಂದಿನ ಕಾರ್ಯಕ್ರಮ ಏನು ಎಂದು ಹೇಳುತ್ತಿದ್ದರು. ಅದು ಅಧ್ಯಕ್ಷರ ಕರ್ತವ್ಯವಾಗಿತ್ತು. ಇಂದು ಪ್ರತ್ಯೇಕವಾಗಿ ಕಾರ್ಯಕ್ರಮಕ್ಕೆ ನಿರೂಪಕರಿರುತ್ತಾರೆ. ಈ ನಿರೂಪಕರ ಹಾವಳಿ ಬೆಂಗಳೂರಿನ ಕಾರ್ಯಕ್ರಮಗಳಲ್ಲಿ ಹೆಚ್ಚು.

ವಿಷಯಕ್ಕೆ, ವ್ಯಕ್ತಿಗೆ ತಕ್ಕಂತೆ ನಿರೂಪಣೆ ಮಾಡುವಬದಲು, ತಮ್ಮ ಪಾಂಡಿತ್ಯಪ್ರದರ್ಶನಕ್ಕೇ ತೊಡಗಿರುತ್ತಾರೆ. ವಿಚಾರಗೋಷ್ಠಿಗಳಿಗೆ ಪರಿಚಯನಿರೂಪಣೆ ಮಾಡಿದಂತೆ, ಸಂಗೀತ, ನೃತ್ಯ, ನಾಟಕಗಳಿಗೆ ಮಾಡುವುದು ಸುಲಭವಲ್ಲ. ನಿರೂಪಕನಿಗೆ ಆ ಕ್ಷೇತ್ರಗಳಲ್ಲಿ ಪರಿಣತಿ ಇಲ್ಲದಿದ್ದರೂ ಪ್ರವೇಶ ಇರಬೇಕು. ನಟರಾಜ್‌ ಅವರು ಈ ವಿಷಯಗಳಲ್ಲಿ ಸಿದ್ಧಹಸ್ತರು. ಅಷ್ಟೇ ಅಲ್ಲ, ಸಮಯಪ್ರಜ್ಞೆ, ಸಭಾಪ್ರಜ್ಞೆ ಉಳ್ಳವರು ಮತ್ತು ಪೂರ್ವಸಿದ್ಧತೆ ಮಾಡಿಕೊಳ್ಳುವವರು. ಇದು ಅವರ ಯಶಸ್ಸಿನ ಗುಟ್ಟೂ ಹೌದು. ಈ ಗ್ರಂಥದಲ್ಲಿರುವ ಎರಡು ಬರಹಗಳು ಇದಕ್ಕೆ ಸಾಕ್ಷಿಯಾಗಿವೆ. ಮೊದಲನೆಯದು; ಸಂಗೀತವಿದುಷಿ ಉಷಾಚಾರ್‌ ಇತರರೊಡನೆ ನಿರ್ದೇಶಿಸಿದ ಡಿವಿಜಿಅವರ ಅಂತಃಪುರಗೀತೆಗಳ ಗೋಷ್ಠಿಗಾನಕ್ಕೆ ಇವರು ನೀಡಿದ ವ್ಯಾಖ್ಯಾನ, ಕೃತಿಪರಿಚಯ ಮತ್ತು ನಿರೂಪಣಾ ಬರಹ ಗಮನಾರ್ಹವಾಗಿದೆ. ಪರಿಚಯಕಾರ ಹಿತಮಿತವಾಗಿ ಮಾತನಾಡುವ ಮಾದರಿ ಇಲ್ಲಿದೆ. ಎರಡನೆಯದಾಗಿ 'ವಚನಾಮೃತಧಾರೆ" ಬರಹವನ್ನು ಗಮನಿಸಬೇಕು.

ಶ್ರೀ ಶಿವವಿಷ್ಣು ದೇವಾಲಯದಲ್ಲಿ ಕ್ರಿ.ಶ. 2000ದಲ್ಲಿ ನಡೆದ ಬಸವಜಯಂತಿಯಲ್ಲಿ ನಾದೋಪಾಸನ ಸಂಗೀತಶಾಲೆಯ ಕಲಾವಿದರು ಆಯ್ದ ವಚನಗಳನ್ನು ಹಾಡಿದಾಗ ವಚನಗಳಿಗೆ ನಿರೂಪಣೆ ನೀಡಿದವರು ನಟರಾಜ್‌ ಅವರು. ಅಂದು ಈ ವಿವರಣೆ ಕೇಳಿದವರು ಇಂದಿಗೂ ನೆನೆಯುತ್ತಾರೆ. ಕನ್ನಡದ ಅನೇಕ ಕಾರ್ಯಕ್ರಮಗಳಲ್ಲಿ ನಿರೂಪಣೆಗಳು ನಡೆಯುತ್ತವೆ, ಆದರೆ ಅಚ್ಚಾಗಿರುವುದು ಅತ್ಯಲ್ಪ. ಈ ದೃಷ್ಟಿಯಲ್ಲಿ ನಿರೂಪಣೆಗೆ ಮಾದರಿ ಆದ ಈ ಬರಹಗಳು ನಿಜಕ್ಕೂ ಶ್ಲಾಘನೀಯ.

ಮುಂದಿನ ವಾರ ಮುಂದುವರೆಯಲಿದೆ..

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X