• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾನು ಪುತ್ರರತ್ನನ ಕಾಲ್ಚೆಂಡಿನಾಟವಾದೆನಯ್ಯ...

By Staff
|


ಇಷ್ಟೆಲ್ಲ ಅಜ್ಞಾನದಿಂದ ಕೂಡಿದ ನನ್ನನ್ನು ಪಂದ್ಯನೋಡಲು ನನ್ನ ಮಗ ಫೆಡೆಕ್ಸ್‌ ಮೈದಾನಕ್ಕೆ ಕರೆದುಕೊಂಡು ಹೋದ. ನಾನು ಹೋಗಿ ನೋಡಿ ಆನಂದಿಸಿದೆ (ಅನುಭವಿಸಿದೆ?). ಫುಟ್‌ಬಾಲ್‌ ಆಟ ನೋಡಲು ಹೋಗುವುದೆಂದರೆ ಅದು ಬರಿ ಆಟವಲ್ಲೋ ಅಣ್ಣ, ಅದೊಂದು ಇಡೀ ಕುಟುಂಬಕ್ಕೆ ಪಿಕ್‌ನಿಕ್‌ ಇದ್ದಹಾಗೆ. ಆಟ ನೋಡುವುದು ಅಂಥಾ ಒಂದು ವಿಹಾರದ ಸಣ್ಣ ಭಾಗವಷ್ಟೆ.

ಆಟ ಪ್ರಾರಂಭವಾಗುವುದಕ್ಕೆ ಒಂದೆರಡು ಘಂಟೆ ಮೊದಲೇ ನಡೆಯುವ ಸ್ಥಳಕ್ಕೆ ಹೋಗಿ ಸೇರಿ, ಅಲ್ಲೊಂದು ಡೇರೆ ಹಾಕಿ, ಪಾನೀಯಗಳನ್ನು ಮಂಜುಗಡ್ಡೆಯಾಳಗೆ ನೆನೆಗುದಿಗೆ ಹಾಕಲು ತರುಣರು ಉತ್ಸಾಹದಿಂದ ಕಾದಿರುತ್ತಾರೆ. ಕೋಳಿಕಾಲುಗಳನ್ನು ಮಸಾಲೆಯಲ್ಲಿ ‘ಮ್ಯಾರಿನೇಟಿ’ಸಿ, ಉಷ್ಣಶುನಕಗಳನ್ನು (ಅರ್ಥಾತ್‌ ‘ಹಾಟ್‌ ಡಾಗ್‌’ ಗಳನ್ನು) ಬಿಡಿಸಿ ಬೇರ್ಪಡಿಸಿ ಅದಕ್ಕೆ ಬೇಕಾದ ಬನ್ನು ಮುಂತಾದ ಪರಿಕರಗಳನ್ನು ಅಣಿ ಮಾಡಿಕೊಳ್ಳಲು ಹೆಂಗೆಳೆಯರು ಮುಂದಾಗುತ್ತಾರೆ.

ಅತ್ತ, ‘ಆಚೆ-ಒಲೆ’ಯಾಂದನ್ನು (ಗ್ರಿಲ್‌ ಅನ್ನು) ಹೂಡಿ ಕಲ್ಲಿದ್ದಿಲಿನಂಥ ಕರಿಗೆಂಡಗಳನ್ನು ಪೇರಿಸಿ ಅದರಮೇಲೊಂದಿಷ್ಟು ಸೀಮೆ ಎಣ್ಣೆಯಂಥ ತೈಲವನ್ನು ಸುರಿದು ಬೆಂಕಿ ಹಚ್ಚುವುದಕ್ಕೆ ಗಂಡಸರು ಮುಂದಾಗುತ್ತಾರೆ. ಏತನ್ಮಧ್ಯೆ, ತಣ್ಣಗಾದ ಪೀತರಸವನ್ನು (ಬೀರು) ಬಾಟಲಿಗಳಿಂದ ಸುರುವಿಕೊಳ್ಳುತ್ತಾ ಆರಂಭವಾಗುತ್ತದೆ ಅಮೇರಿಕನ್ನರ ಮಧ್ಯಾಹ್ನದೂಟದ ತಯಾರಿ. ಆ ‘ಪಾಟಿ’ ಪೀತರಸವನ್ನು ಹೀರುವ ಮದಿರಾಪ್ರಿಯರ ವಿಸರ್ಜನಾವಶ್ಯಕತೆಗಳನ್ನು ಗಮನಿಸಿ ಅಲ್ಲಲ್ಲೆ ಸ್ಥಾಪಿತವಾದ ತಾತ್ಕಾಲಿಕ ಶೌಚಾಲಯಗಳು (ಪೋರ್ಟಬಲ್‌ ಪಾಟಿ) ಇಲ್ಲದಿದ್ದರೆ ಭಗವಂತನೇ ಗತಿ! ಅಂತೂ ತಿಂದು ತೇಗಿ ಕುಡಿದು ವಿಸರ್ಜಿಸಿ ತಯಾರಾಗುತ್ತಾರೆ ಕ್ರೀಡಾಂಗಣದೊಳಕ್ಕೆ ಹೆಜ್ಜೆ ಇಡಲು. ಸ್ಟೇಡಿಯಮ್ಮಿನ ಸುತ್ತಲೂ ದೊಡ್ಡ ಜಾತ್ರೆ. ತಮ್ಮ ನೆಚ್ಚಿನ ಪಂಗಡದವರ ಹೆಸರುಗಳನ್ನು ಸೂಚಿಸುವ ನಿಲುವಂಗಿಗಳೇನು, ವಿವಿಧವೇಷಗಳಿಂದ ಅಲಂಕೃತರಾದ ಕ್ರೀಡಾಭಿಮಾನಿಗಳ ಅಮಿತೋತ್ಸಾಹವೇನು? ಜನರು ಸ್ವಸ್ಥಾನವನ್ನು ಸ್ವೀಕರಿಸುವ ಹೊತ್ತಿಗೆ ಉಭಯಪಕ್ಷದ ಆಟಗಾರರು ಮೈದಾನದಲ್ಲಿ ಹಾಜರಾಗುತ್ತಾರೆ.

ಅಷ್ಟು ಹೊತ್ತಿಗೆ, ಅಮೇರಿಕನ್ನರ ರಾಷ್ಟ್ರಭಕ್ತಿ ಉಕ್ಕಿ ಸುರಿಯುತ್ತಿರುತ್ತದೆ. ರಾಷ್ಟ್ರಗೀತೆಯನ್ನು ಹಾಡಿ ಎಲ್ಲರಿಗೂ ರೋಮಾಂಚನಗೊಳಿಸಲೆಂದೇ ಒಬ್ಬ ಉತ್ತಮ ಹಾಡುಗಾರ/ಗಾರ್ತಿ ಬಂದಿರುತ್ತಾನೆ/ಳೆ. ರಾಷ್ಟ್ರಗೀತೆಯನ್ನು ಕೇಳಿ ರಣ ದುಂದುಭಿ ಮೊಳಗುತ್ತದೆ. ಎರಡೂ ಪಕ್ಷದ ಹುರಿಯಾಳುಗಳು ಸನ್ನದ್ಧರಾದಾಗ ಆಯಾ ಪಕ್ಷದ ಪ್ರೋತ್ಸಾಹಕರು ಗಂಟಲು ಕಿತ್ತು ಹೋಗುವಹಾಗೆ ಕಿರುಚುತ್ತಾರೆ. ಏನು ಕಿರುಚಬೇಕೆಂಬುದನ್ನೂ ಹೊಳೆಯುವ ದೀಪದ ಬೋರ್ಡುಗಳಿಂದ ತಿಳಿದುಕೊಂಡರೆ ಒಗ್ಗೊರಳಿನಿಂದ ಕೂಗಲು ಸಹಾಯವಾಗುತ್ತದೆ.

ಆಟ ಸಾಗುತ್ತಿರುವಾಗ, ಮಧ್ಯೆಮಧ್ಯೆ ಒಳ್ಳೆ ಮಾಟವಾದ ಮಯ್ಯಿನ ಒಂದೇ ಎತ್ತರದ ಕರಿ-ಬಿಳಿ-ಕಂದು ಬಣ್ಣದ ಖುಷಿ-ಹುಡುಗಿಯರು (ಚೀರ್‌ ಗರ್ಲ್ಸ್‌) ವಸ್ತ್ರಲೋಭಿಗಳಾಗಿ ಅಂಗಸೌಷ್ಠವದ ಉಬ್ಬು-ತಗ್ಗುಗಳನ್ನು ಪ್ರದರ್ಶಿಸುತ್ತ ಮಣಿಕಟ್ಟಿನ ಮೂಳೆಗಳು ಸವೆದುಹೋಗುವುವೋ ಅನ್ನುವಷ್ಟು ಬಿರುಸಿನಿಂದ ಕುಣಿಯುತ್ತ, ಹೊಳೆಯುವ ಕುಚ್ಚುಗಳನ್ನು (ಪಾಂ-ಪಾಂ) ತಿರುಗಿಸುತ್ತ ಆಡುಗರನ್ನು, ಅದಕ್ಕಿಂತ ಹೆಚ್ಚಾಗಿ, ನೋಡುಗರನ್ನು ಪ್ರಚೋದಿಸುತ್ತಾರೆ. ರಸಿಕ ಟೀವಿ ಛಾಯಾಗ್ರಾಹಕರು ಸುಂದರಿಯರ ಕೋಮಲ ಭಾಗಗಳಿಗೆ ಗುರಿಯಿಟ್ಟು ಫೋಕಸಿಸುತ್ತಾರೆ.

ತಮ್ಮಮೇಲೆ ಕ್ಯಾಮರಾ ಗುರಿಯಿಟ್ಟದ್ದು ಗೊತ್ತಾದ ಕೂಡಲೆ ಮತ್ತಷ್ಟು ಹಾವಭಾವಗಳಿಂದ ಕೋಮಲಬಾಲೆಯರು ಅಂಗಭಂಗಿಗಳನ್ನು ಪ್ರದರ್ಶಿಸುತ್ತಾ ವಿಕಸಿಸುತ್ತಾರೆ. ಪೀತರಸೋನ್ಮತ್ತರಾದ ತರುಣರು ಹುಚ್ಚೆದ್ದು ಕುಣಿಯುತ್ತಾರೆ. ನಿಜಕ್ಕೂ ಫುಟ್‌ಬಾಲ್‌ ಆಟ ನೋಡಲು ಮಜಾ ಬರುತ್ತದೆ! ದೊಡ್ಡ ದೊಡ್ಡ ಕಂಪನಿಯ ಮೇಲಧಿಕಾರಿಗಳಿಗಾಗಿಯೇ ಕಾದಿರಿಸಿರುವ ‘ಸಿಹಿ-ಕೋಣೆ’ ಗಳು (ಸ್ವೀಟ್‌) ಇದ್ದವರಿಗಂತೂ ಸ್ವರ್ಗಕ್ಕೆ ಮೂರೇ ಗೇಣು! ಅವರಿಗೆ ಕೂತಲ್ಲೆ ಕುಡಿಯಲು, ತಿನ್ನಲು ಸರಬರಾಜಾಗುತ್ತದೆ, ಅವರು ವಿಸರ್ಜನೆಗೆ ಕ್ಯೂ ನಿಲ್ಲುವ ಅಗತ್ಯವಿಲ್ಲ, ಕೋಣೆಗೇ ಅಂಟಿಕೊಂಡ ಶೌಚಾಲಯ, ಮಳೆ, ಬಿಸಿಲು ಮತ್ತು ಹಿಮದಿಂದ ಕಾಪಾಡಲು ಸುತ್ತಲಿನ ಗಾಜಿನ ಗೋಡೆ, ಕೈಕಾಲು ಚಾಚಲು ಸೋಫಾ! ಓಂ ಕಾರ್ಪೊರೇಟ್‌ ಅಮೇರಿಕಾಯನಮಃ!

ತಮ್ಮೂರಿನ ತಂಡ ಗೆದ್ದರೆ ಅಗದೀ ಭಯಂಕರವಾದ ಸಂತೋಷ. ಸೋತರೆ ಹಿಡಿಶಾಪ. ಮದಿರೆಯ ಪ್ರಭಾವವೂ ಸೇರಿ ‘ಸಂಸ್ಕೃತ’ ಶಬ್ದಗಳನ್ನು ಪ್ರಯೋಗಿಸುತ್ತ ಎಂಬತ್ತು-ತೊಂಬತ್ತು ಸಾವಿರದಷ್ಟು ಜನ ಇದ್ದಕ್ಕಿದ್ದಂತೆ ಕ್ರೀಡಾಂಗಣವನ್ನು ಖಾಲಿ ಮಾಡುತ್ತಾರೆ. ಆದರೆ, ಅದೊಂದು ಚಕ್ರವ್ಯೂಹ, ಒಳಗೆ ಹೋದಷ್ಟು ಸುಲಭವಾಗಿ ಹೊರಗೆ ಬರಲು ಸಾಧ್ಯವಾಗುವುದಿಲ್ಲ. ಕಾರುಗಳು ಪಾರ್ಕಿಂಗ್‌ ಲಾಟನ್ನು ಬಿಡಲು ಒಂದು ಘಂಟೆಯಾದರೂ ಬೇಕಾಗುತ್ತದೆ. ಹೊರಗೆ ಬಂದರೂ ಕಾರ್ಸಂದಣಿ ಎಷ್ಟರಮಟ್ಟಿಗಿರುತ್ತದೆಂದರೆ ಹತ್ತಿಪ್ಪತ್ತು ಮೈಲು ಪ್ರಯಾಣಿಸಲು ಎರಡು ಘಂಟೆಯಾದರೂ ಬೇಕಾಗುತ್ತದೆ. ಈ ರಹಸ್ಯವನ್ನು ಮನಗಂಡ ಜಾಣರು ತಮ್ಮ ಪಿಕ್‌ನಿಕ್ಕನ್ನು ಮುಂದುವರೆಸುತ್ತಾರೆ. ಆಚೆ-ಒಲೆಗಳು ಮತ್ತೆ ಹತ್ತಿಕೊಳ್ಳುತ್ತವೆ, ಉಳಿದ ಕೋಳೀಕಾಲುಗಳೂ ಉಷ್ಣಶುನಕಗಳೂ ಕಾರಿನಿಂದ ಹೊರಬರುತ್ತವೆ.

ಸಂಜೆಯ ಊಟವೂ ಅಲ್ಲೇ ನಡೆಯುತ್ತದೆ. ಶೀತಪೆಟ್ಟಿಗೆಯಲ್ಲಿ ಮಿಕ್ಕ ಪೀತರಸದ ಬಾಟಲಿಗಳು ಒಂದೊಂದಾಗಿ ಖಾಲಿಯಾಗುತ್ತವೆ. ಅಂತೂ ಇಡೀ ಭಾನುವಾರ ಸಂಸಾರಸಮೇತ, ಗಂಡ ಹೆಂಡತಿ ಮಕ್ಕಳು ಮರಿಗಳು ಅಜ್ಜ ಅಜ್ಜಿಯರೂ ಕೂಡಿ ವಿಹರಿಸುತ್ತಾರೆ. ಮಾರನೆಯ ದಿನ ಕೆಲಸಕ್ಕೆ ಬಂದಾಗ ಕಣ್ಣಾರೆ ನೋಡಿದ ಹಿಂದಿನ ದಿನದ ಪಂದ್ಯದ ವಿವರಗಳನ್ನು ಮತ್ತೊಮ್ಮೆ ಮೆಲಕುತ್ತಾ, ನೋಡದೇ ಇದ್ದ ಇತರ ಪಂದ್ಯಗಳಬಗ್ಗೆ ಮಿತ್ರರಿಂದ ಕೇಳಿ ತಿಳಿದುಕೊಳ್ಳುತ್ತಾ ಸೋಮವಾರಕ್ಕೆ ಹೊಸದೊಂದು ಅರ್ಥವನ್ನು ಕೊಡುವ ಅಮೇರಿಕದ ಕ್ರೀಡಾಪ್ರಿಯರ ಜಾತಿಗೆ ಸೇರಬೇಕಿದ್ದರೆ ನೀವು ಸೀಸನ್‌ ಟಿಕೆಟ್ಟನ್ನು ಪಡೆಯದೇ ವಿಧಿಯಿಲ್ಲ. ನನ್ನಂತೆ ಫುಟ್‌ಬಾಲ್‌ ಪಂದ್ಯದಿಂದ ವಂಚಿತರಾಗಿದ್ದವರೆಲ್ಲ ಆದಷ್ಟು ಬೇಗ ನಿಮಗೆ ಸಿಗುವ ಅವಕಾಶವನ್ನು ಉಪಯೋಗಿಸಿಕೊಳ್ಳುವಿರೆಂದು ನಂಬುತ್ತ ವಿರಮಿಸುವೆ ಮುಂದಿನ ಕಂತಿನ ವರೆಗೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more