• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯುದ್ಧ ಬೇಕೇ ಯುದ್ಧ?

By Staff
|

ಯುದ್ಧ ಬೇಕೇ ಯುದ್ಧ?

ಯುದ್ಧ ಅಂದ್ರೆ ಗೆದ್ದವನು ಸೋತ, ಸೋತವನು ಸತ್ತ ಎಂದರ್ಥ! ಪ್ರಪಂಚದಲ್ಲಿ ಕೆಲವರಿಗಂತೂ ಯುದ್ಧ ಬೇಕೇ ಬೇಕು? ಯುದ್ಧ ಎಂಬುದು ಯಾರಿಗೆ ತಮಾಷೆ, ಯಾರಿಗೆ ವ್ಯಾಪಾರ, ಯಾರಿಗೆ ಪೀಕಲಾಟದ ವಸ್ತುವಾಗಿದೆ ಅನ್ನೋದು ನಿಮಗೆ ಗೊತ್ತೆ? ಓದಿ ; ಒಂದು ಸುಲಲಿತ ಪ್ರಬಂಧ.

Dr.M.S.Nataraj ಡಾ. ಮೈ.ಶ್ರೀ. ನಟರಾಜ

ಪೊಟೊಮೆಕ್‌, ಮೇರೀಲ್ಯಾಂಡ್‌

Mysreena@aol.com

ಏನ್‌ಸಾರ್‌, ಒಂದು ಯುದ್ಧ ಪ್ರಾರಂಭಿಸೋಣವೇ? ಯಾರು ಬೇಕಾದ್ರೂ ಶುರು ಮಾಡಬಹುದು ಸ್ವಾಮಿ. ಯುದ್ಧ ಶುರು ಮಡೋಕ್ಕೇನೇನ್‌ ಬೇಕು ಗೊತ್ತಾ? ಮೊದಲು ಒಬ್ಬ ಶತ್ರು ಬೇಕು. ಅವನು ಒಳಗಿನವ ಅಥವಾ ಹೊರಗಿನಿವ ಆಗಿರಬಹುದು. ಯಾರೂ ಶತ್ರು ಇಲ್ಲದಿದ್ರೆ, ಒಬ್ಬನ್ನ ಉಂಟುಮಾಡಬೇಕಾಗತ್ತೆ, ನೋಡಿ. ಅವನಿಗೆ ಸೇರಿದ್ದನ್ನ ನೀವು ದೋಚೋದಕ್ಕೆ ಯತ್ನಿಸಿ ಅಥವಾ ಅವನೇ ನಿಮಗೆ ಸೇರಿದ್ದನ್ನ ದೋಚೋದಕ್ಕೆ ಯತ್ನಿಸಿದ್ರೂ ಸರಿ. ಹಾಗೇನೂ ಆಗದಿದ್ರೆ, ನಿಮ್ಮದನ್ನ ಅವನು ದೋಚೋಕೆ ಯತ್ನಮಾಡೋಹಾಗೆ ಒಂದು ಅವಕಾಶ ಕಲ್ಪಿಸಿದ್ರೆ, ಅವನು ಬರ್ತಾನೆ ದೋಚೋಕೆ, ಅವಾಗ ಅವನ್ನ ನೀವು ಶತ್ರು ಅಂತ ಕರೆಯೋದು ಸುಲಭ ಆಗತ್ತೆ. ಅಂತೂ ನೀವಿಬ್ರೂ ಶತ್ರುಗಳು ಅನ್ನೋ ವಿಚಾರ ಮಿಕ್ಕವರಿಗೆಲ್ಲ ತಿಳಿಯೋಹಾಗೆ ನಡ್ಕೋಬೇಕು, ಅದು ಮುಖ್ಯ.

ಒಬ್ಬ ಶತ್ರು ಸಿಕ್ಕಿದ್ನೋ, ಸರಿ, ಇನ್ನು ಯುದ್ಧ ಮಾಡೋಕ್‌ ಏನಡ್ಡಿ? ಹಾಗಂತ ಬರೀ ಕೈಯಲ್ಲಿ ಯುದ್ಧ ಮಾಡೋಕ್ಕಾಗತ್ಯೇ? ಒಂದಿಷ್ಟು ಶಸ್ತ್ರಾಸ್ತ್ರಗಳು ಬೇಕಲ್ಲ. ಆಗ್ನೇಯಾಸ್ತ್ರ, ಪಾಶುಪತಾಸ್ತ್ರ, ಸರ್ಪಾಸ್ತ್ರ, ಬ್ರಹ್ಮಾಸ್ತ್ರ, ಅವೆಲ್ಲ ರಾಮಾಯಣ-ಮಹಾಭಾರತಗಳ ಕಾಲಕ್ಕಾಯ್ತು. ಈಗ, ಮಿಸೈಲುಗಳು, ಬಜೂಕಗಳು, ಬಾಂಬುಗಳು, ಮೆಷೀನ್‌ ಗನ್ನುಗಳು, ಟ್ಯಾಂಕುಗಳು, ಇತ್ಯಾದಿ, ಇತ್ಯಾದಿ. ಅಸ್ತ್ರಗಳು ಬೇಕಾದ್ರೆ, ಹಿಂದೆ ದೇವತೆಗಳನ್ನ ಕುರಿತು ತಪಸ್‌ ಮಾಡ್ತಾ ಇದ್ರಲ್ಲಾ, ಹಾಗೇ, ನೀವು ಅಮರರನ್ನು ಕುರಿತು ತಪ್ಪಸ್ಸು ಮಾಡಬೇಕು.

ಅಮರರು ಅಂದ್ರೆ ಗೊತ್ತಲ್ಲ, ಅಮರ ದೇಶದವರು -ಅಮೇರಿಕಾ ದೇಶದವರು. ಅಮರದೇಶದವರು ಶಸ್ತ್ರಾಸ್ತ್ರಗಳ ಒಂದು ದೊಡ್ಡ ಅಂಗಡಿಯನ್ನೇ ತೆರೆದಿಟ್ಟಿದ್ದಾರೆ. ಆದರೆ, ಎಲ್ಲರಿಗೂ ಮಾರುತ್ತಾರೆ ಅಂದುಕೊಳ್ಳಬೇಡಿ. ಬೇಕಾದ್ದನ್ನು, ಬೇಕಾದವರಿಗೆ, ಬೇಕಾದ ಬೆಲೆಗೆ ಮಾರುವ ಚಾಣಾಕ್ಷ ವರ್ತಕರೆಂದರೆ ಅವರೇ. ಹಾಗೊಂದುವೇಳೆ, ನಿಮಗೆ ಬೇಕಾದ ಅಸ್ತ್ರ, ನಿಮಗೆ ಬೇಕಾದ ಸಮಯಕ್ಕೆ, ನೀವು ತೆರಬಹುದಾದ ಬೆಲೆಗೆ ಅವರ ಬಳಿ ದೊರಕದಿದ್ದರೆ, ನೀವು ರಕ್ಕಸರ ಬಳಿ ಓಡಬಹುದು.

ರಕ್ಕಸರು ಅಂದರೆ, ರೂಸ್ಕಿ ದೇಶದ - ರಷ್ಯಾ ದೇಶದ ಜನ. ಈ ರೂಸ್ಕೀ ರಕ್ಕಸರಾದರೋ ಅಮರರಿಗಿಂತ ಕಮ್ಮಿ ಏನಲ್ಲ, ವಿಶ್ವದ ಎರಡನೇ ಅತಿ ದೊಡ್ಡ ಶಸ್ತ್ರಾಸ್ತ್ರಗಳ ಅಂಗಡಿಯನ್ನು ತೆರೆದು ಕೂತಿದ್ದಾರೆ. ಅವರೂ ಅಷ್ಟೆ, ಎಲ್ಲರಿಗೂ ಸುಲಭವಾಗಿ ಮಾರುವವರಲ್ಲ. ಅಮರರು ಯಾರಿಗೆ ಮಾರಲು ಇಷ್ಟ ಪಡುವುದಿಲ್ಲವೋ ಅವರಿಗೆ ರಕ್ಕಸರಂಗಡಿ ಸದಾ ತೆರೆದಿರುತ್ತದೆ.

ಇವೆರಡೂ ಅಂಗಡಿಗಳು ನಿಮಗೆ ತೆರೆಯದಿದ್ದರೆ, ಅಥವಾ ಅವರ ಬೆಲೆ ನಿಮಗೆ ದುಬಾರಿ ಎನಿಸಿದರೆ, ಇನ್ನೂ ಕೆಲ ಅಂಗಡಿಗಳಿವೆ. ಅವುಗಳ ಯಜಮಾನರ ಪೈಕಿ ಹಲವರು ಅಮರರ ಅಥವಾ ರಕ್ಕಸರ ಗುಂಪಿಗೆ ಸೇರಿದವರು, ಹಲವರು ಇಬ್ಬರ ಗುಂಪಿಗೂ ಸೇರಿದವರು ಅಥವಾ ಇಬ್ಬರ ಗುಂಪಿಗೂ ಸೇರದವರು. ಅವರು ಸಹ ಎಲ್ಲರಿಗೂ ಬೇಕಾಬಿಟ್ಟಿ ಅಸ್ತ್ರಗಳನ್ನು ಹಂಚಿಬಿಡುವವರಲ್ಲ. ಕೆಲವು ಯುದ್ಧಗಳು ನಡೆದು ಎರಡು ಪಕ್ಷಗಳಲ್ಲಿ ಒಬ್ಬರು ಸೋತು, ಅಥವಾ ಸತ್ತು, ಅಥವಾ ಬೇಸತ್ತು ಓಡಿದರೆ, ಅಲ್ಲಿ ಮಿಕ್ಕ ಶಸ್ತ್ರಾಸ್ತ್ರಗಳು ಧಂಡಿಯಾಗಿ ದೊರೆಯುತ್ತವೆ. ಉದಾಹರಣೆಗೆ, ಬಾಸ್ನಿಯಾ, ಪಾಕೀಸ್ತಾನ, ಆಫ್ಘಾನಿಸ್ತಾನ, ಲೆಬನಾನ್‌, ಇರಾಕ್‌ ಮುಂತಾದ ದೇಶಗಳ ಒಳಗೂ ಹೊರಗೂ.

‘‘ಇವಕ್ಕೆಲ್ಲ ಬೆಲೆ ತೆತ್ತು ಕೊಳ್ಳುವುದಕ್ಕೆ ನಾವೇನೂ ಅಷ್ಟು ಹಣವಂತರಲ್ಲ ಸಾರ್‌, ಯುದ್ಧವನ್ನೇನೋ ಮಾಡುವ ಚಪಲ ಇದೆ, ಕಾರಣವೂ ಇದೆ ಆದರೆ ಕಾಸಿಲ್ಲ’’ ಎನ್ನುವಿರೋ? ಒಮ್ಮೊಮ್ಮೆ ಕೆಲವು ಅಸ್ತ್ರಗಳು ಅರ್ಧ ಬೆಲೆಗೆ, ಇನ್ನು ಕೆಲವು ಬಿಟ್ಟಿ ಕೂಡ ದೊರಕಬಹುದು. ಬಿಟ್ಟಿ ಅಂದರೆ ಬಿಟ್ಟಿ ಅಲ್ಲ, ಅಮರರು ಮತ್ತು ರಕ್ಕಸರು ಇಬ್ಬರೂ ಕೊರಮರೇ. ಇವರಿಬ್ಬರಿಗೂ ಆಟ ಆಡಿಸುವ ಚೀನಿಗಳು, ಫ್ರೆಂಚರು ಇವರುಗಳ ಪೈಕಿ ಯಾರಾದರೂ ನಿಮಗೆ ಮುಫತ್ತಾಗಿ ಅಥವಾ ಸುಲಭ ದರದ ಬಡ್ಡಿಯ ಸಾಲವನ್ನು ಕೊಡುವುದರ ಮೂಲಕ ನಿಮ್ಮ ಶಸ್ತ್ರಾಸ್ತ್ರಗಳ ಬೇಡಿಕೆಯನ್ನು/ಅಗತ್ಯವನ್ನು ಪೂರೈಸುತ್ತಾರೆ. ಆದರೆ, ನೀವು ಮಾಡ ಹೊರಟ ಯುದ್ಧದಿಂದ ಅವರಿಗೆ ಕೊಂಚವಾದರೂ ಉಪಯೋಗವಾಗಬೇಕು, ಅಷ್ಟೆ.

ಇನ್ನು ಕೆಲವರಿಗೆ ಸೌದಿಗಳು ದಯತೋರುತ್ತಾರೆ. ಅವರ ಬಳಿ ಅಸ್ತ್ರ ಇಲ್ಲದಿದ್ದರೂ ಎಣ್ಣೆ ಇದೆ. ಈ ಕಾಲದಲ್ಲಿ ಅದಕ್ಕಿಂತ ದೊಡ್ಡ ಅಸ್ತ್ರ ಇನ್ನೇನು ಬೇಕು? ಎಣ್ಣೆಯಿಂದ ಬಂದ ಹೇರಳವಾದ ಹಣದ ಒಂದಿಷ್ಟು ಭಾಗವನ್ನು ಅವರು ಬಡ (ಮುಸಲ್ಮಾನ) ದೇಶಗಳಿಗೇ ಮುಡಿಪಾಗಿಟ್ಟಿದ್ದಾರೆ. ಅಂತೂ ನಿಮಗೆ ಬೇಕಾದ ಶಸ್ತ್ರಾಸ್ತ್ರಗಳು ದೊರೆತಮೇಲೆ, ಅವುಗಳನ್ನು ಹೊತ್ತು ಹಾರಲು, ಹಾರಿ ವೈರಿಯಮೇಲೆ ಸಿಡಿಸಲು ಬೇಕಾದ ಜೆಟ್ಟಿವಿಮಾನಗಳು (ಅಂದರೆ ಜೆಟ್ಟುಗಳು) ಸಹ ನಿಮಗರಿವಿಲ್ಲದಂತೆ ಬಂದು ಸೇರುತ್ತವೆ. (ನಿಮ್ಮ ಶತ್ರುವಿಗೂ ಇದೇ ಸಲಕರಣೆ ಇದ್ದೇ ಇದೆ ಎಂಬುದನ್ನು ನೀವು ಮರೆತಿರೋ, ಕೆಟ್ಟಿರಿ.)

ನೀವು ಕೊಂಡ ಅಸ್ತ್ರಗಳನ್ನು ಉಪಯೋಗಿಸಲು ಬೇಕಾದ ತಯಾರಿ ಮತ್ತು ತರಬೇತಿ ಸಹ ನಿಮಗೆ ಸುಲಭಬೆಲೆಯಲ್ಲಿ ದೊರಕುತ್ತದೆ. ಅಮರರು ಕೊಟ್ಟ ಅಸ್ತ್ರಗಳಿಗೆ ಅಮರರೇ ಮಂತ್ರಗಳನ್ನೂ ತಿಳಿಸಬೇಕು, ರಕ್ಕಸರು ಕೊಟ್ಟದ್ದಕ್ಕೆ ರಕ್ಕಸರು. ಇವರಿಬ್ಬರಿಂದ ಕದ್ದ ಮೂರನೆಯವರೂ ಖದೀಮರೇ, ಅವರು ಎರಡೆರಡು ಮಂತ್ರಗಳನ್ನು ಬೆರೆಸಿ ತಮ್ಮದೇ ಒರಿಜಿನಲ್‌ ಎನಿಸುವ ಮೂರನೆಯ ಮಂತ್ರಗಳನ್ನೂ ತಂತ್ರಗಳನ್ನು ತಾವು ಮಾರುವ ಯಂತ್ರಗಳ ಜೊತೆ ಮುಫತ್ತಾಗೇ ಕೊಡುತ್ತಾರೆ. ಅದಕ್ಕೆ ಪ್ರತಿಯಾಗಿ ಒಂದಿಷ್ಟು ಸ್ವಾಮಿನಿಷ್ಠೆಯನ್ನು ನೀವು ತೋರುವಿರೆಂದು ಅವರು ನಿರೀಕ್ಷಿಸಿದರೆ ನೀವು ತಪ್ಪು ತಿಳಿಯಲಾಗದು.

ಈಗ ಒಂದು ಮುಖ್ಯ ವಿಷಯ. ಒಳ್ಳೆ ಯುದ್ಧ ಬೇಕಿದ್ದರೆ ಒಳ್ಳೇ ಬೇಹುಗಾರಿಕೆ ಅಗತ್ಯ. ಬೇಹುಗಾರರು ತುಂಬಾ ಸಭ್ಯತೆಯನ್ನು ತೋರಬೇಕೆಂಬ ಹುಚ್ಚು ಕಲ್ಪನೆಯಲ್ಲಿ ಬಾಳಬೇಡಿ. ಅವರು ಚಿತ್ರಹಿಂಸೆ ಮಾಡಿಯಾದರೂ ತಮಗೆ ಬೇಕಾದ ಶತ್ರುರಹಸ್ಯಗಳನ್ನು ಕಂಡುಹಿಡಿಯುತ್ತಾರೆ. ಕುಳಿತಲ್ಲೇ ಎಲ್ಲಾ ವಿಷಯಗಳನ್ನು ದಿವ್ಯದೃಷ್ಟಿಯಿಂದ ನೋಡುವ ವಿಶಿಷ್ಟ ಶಕ್ತಿ ಅಮರರಿಗಿದ್ದೇ ಇದೆಯಲ್ಲ. ಅವರು ಬಾಹ್ಯಾಕಾಶದಲ್ಲಿ ಹಾರಿಸಿಟ್ಟಿರುವ ಕ್ಶಿಪಣಿಗಳು ಒಂದೇ ಸಮನೆ ಭೂಮಿಯ ಸುತ್ತ ತಿರುಗುತ್ತ ಅಮರದೇಶದ ಋಷಿಗಳ ದಿವ್ಯದೃಷ್ಟಿಗೆ ಸಹಾಯಕವಾಗುವ ಛಾಯಾಚಿತ್ರಗಳನ್ನು ಒಂದೇ ಸಮ ರವಾನಿಸುತ್ತವೆ. ನೀವೂ ಹಾಗೇ ಮಾಡಬೇಕು.

ಶತ್ರುಪಡೆಯ ಬೇಹುಗಾರರು ಸೆರೆ ಸಿಕ್ಕಿದರೆ, ಅದರ ಸದುಪಯೋಗ ಪಡೆದುಕೊಳ್ಳುವುದು ನಿಮ್ಮ ತಕ್ಷಣಕರ್ತವ್ಯವು. ನಿಮ್ಮ ಕೈಗೆ ಸಿಕ್ಕಿಬಿದ್ದ ಬಡಪಾಯಿ ಬಾಯ್ಬಿಡದಿದ್ದರೆ, ಸಣ್ಣ ಪುಟ್ಟ ಹಿಂಸೆಯನ್ನು ಮೊದಲು ಪ್ರಯೋಗಿಸಿ. ನೀವು ತುಂಬಾ ಸಭ್ಯದೇಶದವರಾಗಿದ್ದರೆ, ಚಿತ್ರಹಿಂಸೆ ಮಾಡುವುದು ನಿಮ್ಮ ನೀತಿಗೆ ವಿರುದ್ಧವಾಗಿದ್ದರೆ, ಚಿತ್ರಹಿಂಸೆ ಮಾಡಲು ಮನಸ್ಸಾಗದಿದ್ದರೆ, ಚಿತ್ರಹಿಂಸೆ ಮಾಡುವುದರಲ್ಲಿ ಪಾರಂಗತರಾದವರ ದೇಶಗಳು ಸಾಕಷ್ಟಿವೆ. ಅಲ್ಲಿಗೆ ಕಳಿಸಿ ನಿಮಗೆ ಬೇಕಾದ ಮಾತುಗಳನ್ನು ಆ ನತದೃಷ್ಟ ಅಭ್ಯಾಪಾರಿಗಳಿಂದ ಹೊರಡಿಸಬಹುದು. ಅದೂ ಸಾಧ್ಯವಾಗದಿದ್ದರೆ, ಅವರನ್ನು ಹಾರುತ್ತಿರುವ ನಿಮ್ಮ ವಿಮಾನದಿಂದ ಆಚೆ ದೂಕಿದರೆ ಅವರನ್ನು ನೀವು ಹಿಡಿದಿದ್ದಿರೆಂಬ ಸುಳಿವು ಯಾರಿಗೂ ಸಿಕ್ಕುವುದಿಲ್ಲ. ಅಂಥಾ ಪರಿಸ್ಥಿತಿಯಲ್ಲಿ, ನಿಮ್ಮ ದೃಷ್ಟಿಕೋನಕ್ಕೆ ಸಹಾಯಕವಾಗುವಂಥ ಗೂಢಚರ್ಯೆಯ ಫಲಿತಾಂಶವನ್ನು ನೀವೇ ಹುಟ್ಟಿಸಬಹುದು. (ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದವರು ಸಿದ್ಧೇಶ್ವರ ಐಯ್ಯಪ್ಪ ಏಕಾಂಬರನಾಥ ಸ್ವಾಮಿಗಳನ್ನು -ಚುಟುಕದಲ್ಲಿ ಹೇಳುವುದಾದರೆ -ಸಿ.ಐ.ಏ. ಸ್ವಾಮಿಗಳನ್ನು ಸಂಪರ್ಕಿಸಬಹುದು.)

ಯುದ್ಧ ಎಂದ ಮೇಲೆ, ಶತ್ರು ಸೈನ್ಯದ ಸಾಕಷ್ಟು ಯೋಧರನ್ನು ಕೊಲ್ಲುವುದು ಅಂತ ತಾನೆ? ಯೋಧರ ಜೊತೆಗೆ ಒಂದಿಷ್ಟು ಮುಗ್ಧ ಮಕ್ಕಳನ್ನೂ ನಿರಪರಾಧಿ ಗಂಡಸರನ್ನೂ ಮನೆಯಲ್ಲಿದ್ದ ಮಹಿಳೆಯರನ್ನೂ ಕೊಂದರೂ ಚಿಂತೆಯಿಲ್ಲ. ಏಕೆಂದರೆ, ‘ಆದರಂತಹುದೆಷ್ಟೋ ಆಗಲೇ ಬೇಕಲ್ಲ, ಈ ದೊಡ್ಡ ಜಯದೊಳಗೆ?’ ಸರಿ, ಇದರ ಫಲಿತಾಂಶ ಏನಾಗುತ್ತದೆ? ಸಹಸ್ರಾರು ಮಂದಿ ನಿರಾಶ್ರಿತರಾಗುತ್ತಾರೆ, ತಮ್ಮ ಮನೆ ಮಠ ಕಳೆದುಕೊಂಡು ಪಕ್ಕದ ರಾಜ್ಯಕ್ಕೆ ಹೊರಡುತ್ತಾರೆ, ಆದರೆ ಇವರಿಗೆ ಅಲ್ಲಿ ಸ್ವಾಗತ ಸಿಗುತ್ತದೆಂದು ಬಗೆದಿದ್ದರೆ ನಿರಾಶೆಯೇ ಗತಿ. ಒಂದು ಮಾತು ಗಮನದಲ್ಲಿರಲಿ. ಆ ನಿರಾಶ್ರಿತರ ಬಗ್ಗೆ ನೀವು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಭಾರೀ ಯುದ್ಧದ ಮಧ್ಯದಲ್ಲಿ ಇಂಥ ಚಿಕ್ಕ ಪುಟ್ಟ ವಿಚಾರಗಳಿಗೆ ಪುರುಸೊತ್ತೆಲ್ಲಿರುತ್ತದೆ?

ಜಗತ್ತಿನ ಸಮಸ್ತ ಆಗುಹೋಗುಗಳನ್ನೂ ನೋಡಿಕೊಂಡು, ದುಷ್ಟರನ್ನು ಶಿಕ್ಷಿಸದೇ, ಶಿಷ್ಟರನ್ನು ಪರಿಪಾಲಿಸದೇ, ಕಣ್ಮುಚ್ಚಿ ಕುಳಿತಿರುವ ತನ್ನ ಸಿಬ್ಬಂದಿವರ್ಗಕ್ಕೆ ತಿನ್ನಲು ಬೇಕಾದ ‘ಕಳ್ಳೇಕಾಯನ್ನು’ ಸರಬರಾಜುಮಾಡಲೋಸುಗ ವರ್ಷಕ್ಕೆ ಕೋಟ್ಯಂತರ ಡಾಲರುಗಳನ್ನು ಖರ್ಚುಮಾಡುತ್ತ ಕಾಲಹರಣಮಾಡುತ್ತಿರುವ ‘‘ವಿಶ್ವಸಂಸ್ಥೆ’’ ಎಂಬ ನಗೆಪಾಟಲು ಸಂಸ್ಥೆಯಬಗ್ಗೆ ನೀವು ಕೇಳಿರಲೂಬಹುದು. ಆ ವಿಶ್ವಸಂಸ್ಥೆ ನೀವು ಪ್ರಾರಂಭಿಸಿದ ಯುದ್ಧವನ್ನು ಖಂಡಿಸಿದರೂ ಖಂಡಿಸಬಹುದು. ಅದಕ್ಕೆ ಯಾವಗಮನವನ್ನೂ ಕೊಡಬೇಡಿ.

ಯುದ್ಧ ಶುರುವಾದದ್ದೇ ತಡ, ಕ್ಷಿಪಣಿಗಳನ್ನು ಹಾರಿಸಿ. ಬಾಂಬುಗಳ ಮಳೆಸುರಿಸಿ. ನೀವು ಕೊಂಡಿದ್ದ ಅಸ್ತ್ರಗಳು ಸರಿಯಾಗಿ ಕೆಲಸ ಮಾಡುತ್ತವೋ ಇಲ್ಲವೋ ಎಂದು ತಿಳಿದುಕೊಳ್ಳಲು ನಿಮ್ಮಷ್ಟೇ ಕುತೂಹಲ ನಿಮಗೆ ಅಸ್ತ್ರಗಳನ್ನು ಮಾರಿದವರಿಗೂ ಇರುತ್ತದೆ. ಏಕೆಂದರೆ, ಮುಂದಿನ ಘಟ್ಟದ ತಯಾರಿಕೆಯಲ್ಲಿ ತಪ್ಪುಗಳನ್ನು ತಿದ್ದಿಕೊಂಡು ಹೆಚ್ಚು ಶಕ್ತಿಯ, ಹೆಚ್ಚು ಪರಿಣಾಮಕಾರಿಯಾಗಿ ಗುರಿಮುಟ್ಟುವ ಸಾಧನೆಗಳನ್ನು ಜೋಡಿಸಿ ಇನ್ನೂ ಮಾರಕವಾದ ಶಸ್ತ್ರಾಸ್ತ್ರಗಳನ್ನು ತಯಾರಿಸಲು ಅಮರರೂ ರಕ್ಕಸರೂ ಕಾಯುತ್ತಿರುತ್ತಾರಲ್ಲ. ಸರಿ, ಗುರಿ ಇಟ್ಟು ಸೌಧಗಳನ್ನೂ ಸೇತುವೆಗಳನ್ನೂ ಧ್ವಂಸಮಾಡಿ. ಯಾರು ಸತ್ತರೂ ಸರಿ, ಯಾರು ನಿರಾಶ್ರಿತರಾದರೂ ಸರಿ, ನಿಮ್ಮ ಗುರಿ ತಲುಪುವವರೆಗೂ ಹೊಡೆದು ಚಚ್ಚಿಬಿಡಿ. ಇಷ್ಟರಲ್ಲಿ ಒಂದಿಷ್ಟು ಸೈನಿಕರನ್ನೂ ಟ್ಯಾಂಕುಗಳನ್ನೂ ಹೊರಡಿಸಿ ಪರರ ನೆಲವನ್ನು ಆಕ್ರಮಿಸಿಕೊಳ್ಳಿ. ಅವಾಗಲೇ ನಿಮಗೆ ‘‘ಪರಾಕ್ರಮಿ’’ ಎಂಬ ಬಿರುದು ಸಿಕ್ಕುವುದು.

ಇನ್ನೊಂದು ಮುಖ್ಯಾಂಶ. ನೀವು ಶತ್ರುಗಳ ಕೋಟೆಯನ್ನು ಧ್ವಂಸಮಾಡುತ್ತಿರುವಾಗ ದೂರದರ್ಶನದವರನ್ನು ನಿಮ್ಮೊಡನೆ ಕರೆದೊಯ್ಯುವುದನ್ನು ಮರೆಯಬೇಡಿ. ನೀವು ಶತ್ರುವಿಗೆ ಹೇಗೆ, ಎಲ್ಲಿ ಎಷ್ಟು ಹಾನಿ ಮಾಡುವಿರೆಂಬುದನ್ನು ನಿಮ್ಮೊಡನೆ ಬರುವ ವೀಡಿಯೋ ಕ್ಯಾಮರಾದವರಿಗೆ ಮುಂಗಡವಾಗಿ ತಿಳಿಸಿದ್ದರೆ ಧ್ವಂಸವನ್ನು ಇಡೀ ಪ್ರಪಂಚಕ್ಕೆ ಒಳ್ಳೇ ಕೋಣದಿಂದ ತೆಗೆದು ಶತ್ರುಗಳು ವಿಲವಿಲಗುಟ್ಟುವುದರಿಂದ ಮೊದಲ್ಗೊಂಡು, ರಕ್ತ ಸೋರುತ್ತಿರುವ ದೇಹಗಳನ್ನು ಪ್ರಥಮಚಿಕಿತ್ಸೆಯ ವಾಹನಗಳು ಹೊತ್ತು ಓಡುವ ಥ್ರಿಲ್ಲಿಂಗ್‌ ದೃಶ್ಯಗಳನ್ನು ನಡೆದ ಘಳಿಗೆಯಲ್ಲೇ ಇಡೀ ಪ್ರಪಂಚಕ್ಕೆ ಪ್ರಸಾರಮಾಡುವ ವಿಧಾನ ಇಂದಿನ ಯುದ್ಧಕಲೆಯ ಒಂದು ಮುಖ್ಯಾಂಗ. ಅಂತೂ ಯುದ್ಧದ ಸನ್ನದ್ಧತೆ ಎಷ್ಟು ಮುಖ್ಯವೋ ದೂರದರ್ಶನದ ತಯಾರಿಯೂ ಅಷ್ಟೇ ಮುಖ್ಯ. ಒಂದು ರೀತಿಯಲ್ಲಿ ಇದು ಅಂಥಾ ಹೊಸ ವಿಷಯವೇನಲ್ಲ. ನಮ್ಮ ಮಹಾಭಾರತ ಯುದ್ಧವಾದಾಗ, ಸಂಜಯನೆಂಬ ದೂರದರ್ಶನದವನು ಶತ್ರು ಸೈನ್ಯಗಳ ನಡುವೆ ‘ಎಂಬೆಡ್‌’ ಆಗಿದ್ದುಕೊಂಡು ಧೃತರಾಷ್ಟ್ರನೆಂಬ ಕುರುಡನಿಗೆ, ಯಾವ ವಿವರವನ್ನೂ ಬಿಡದೆ, ಯಾರು ಸತ್ತರು, ಯಾರು ಸೋತು ಓಡಿದರು ಎಂಬುದನ್ನು ಚಾಚೂ ತಪ್ಪದೆ ವಿವರಿಸಿದ್ದು ನೆನಪಿದೆಯಷ್ಟೆ?

ಯಾವ ಯುದ್ಧವೂ ತುಂಬಾ ದಿನಗಳು ನಡೆದರೆ ಅದು ಯುದ್ಧವೆನಿಸುವುದಿಲ್ಲ. ನಿಮ್ಮ ಕಾರ್ಯಸಾಧನೆ ಆದಕೂಡಲೆ, ಯುದ್ಧನಿಲುಗಡೆಗೆ ಕರೆ ಕೊಟ್ಟುಬಿಡಿ. ಏಕೆಂದರೆ, ಯಾರು ‘‘ಸೀಸ್‌-ಫೈರ್‌’ ಎಂದು ಕೂಗಿ ಸಾರುತ್ತಾರೋ ಅವರೇ ಶಾಂತಿದೂತರು. (ಸೀಸ್‌-ಫೈರ್‌ ಆದಮೇಲೂ ಶ್ತತ್ರುಗಳ ಕೆಲವು ಮುಖ್ಯ ಕಟ್ಟಡಗಳನ್ನೂ ಅಣೆಕಟ್ಟುಗಳನ್ನೂ ಸ್ಥಾವರಗಳನ್ನೂ ನಾಶಮಾಡುವುದನ್ನು ಮರೆಯಬೇಡಿ. ಏಕೆಂದರೆ, ಒಮ್ಮೆ ನಿಂತ ಯುದ್ಧವನ್ನು ಅಷ್ಟು ಸುಲಭವಾಗಿ ಪುನಃ ಪ್ರಾರಂಭಿಸುವುದು ಸಾಧ್ಯವಾಗುವುದಿಲ್ಲ.) ಇನ್ನು ನೀವು ಕೊಂಡೊಯ್ದ ಶಸ್ತ್ರಾಸ್ತ್ರಗಳ ಪೈಕಿ ಉಪಯೋಗಿಸದೇ ಉಳಿದವನ್ನು ಹಿಂದೆ ತರಲು ಸಾಧ್ಯವಿಲ್ಲದಿದ್ದರೆ, ಚಿಂತೆ ಬೇಡ. ಮುಂದಿನ ಯುದ್ಧಕ್ಕೆ ಅದರ ಅಗತ್ಯ ಇದ್ದೇ ಇರುತ್ತದೆ. ನೀವಲ್ಲದಿದ್ದರೆ, ಮತ್ಯಾರೋ ಅದಕ್ಕಾಗಿ ಕಾಯುತ್ತಲೇ ಇರುತ್ತಾರೆ.

ಯುದ್ಧ ಪ್ರಾರಂಭಿಸಲೇ ಬೇಕೆಂದು ಯಾರೂ ನಿಮಗೆ ಸಲಹೆ ನೀಡುತ್ತಿಲ್ಲ ಸ್ವಾಮಿ. ಆದರೆ, ಯುದ್ಧದಿಂದ ಅನೇಕರಿಗೆ ಲಾಭವಿದೆ. ಹೀಗಾಗಿ, ಅಮರರೂ ರಕ್ಕಸರೂ ರಕ್ತವನ್ನು ಕುಡಿಯಲು ಹೊಂಚುತ್ತಿರುವ ಮಿಕ್ಕುಳಿದ ನರಿಗಳೂ, ತೋಳಗಳೂ, ಮಾಂಸಕ್ಕಾಗಿ ಕೊಕ್ಕನ್ನು ಮಸೆಯುತ್ತಾ ಕುಳಿತಿರುವ ರಣಹದ್ದುಗಳೂ ನಿಮ್ಮನ್ನು ಯುದ್ಧಕ್ಕೆ ತಳ್ಳಿಯೇ ತೀರುತ್ತಾರೆ. ಈ ದಂಧೆಯಲ್ಲಿ, ತಮಗೆ ಉಪಯೋಗಕ್ಕೆ ಬಾರದ ಮದ್ದು-ಗುಂಡುಗಳನ್ನು ಇತರ ದೇಶಗಳಿಗೆ ಮಾರಿ ತಮಾಷೆನೋಡುವುದರ ಜೊತೆಗೆ ಒಳ್ಳೇ ಲಾಭವನ್ನೂ ಮಾಡಿಕೊಳ್ಳಬಹುದು ಎಂಬ ಪರಮಸತ್ಯವನ್ನು ಮನಗಂಡ ಹಲವು ಮುಂದುವರೆದ ದೇಶಗಳ ಸರ್ಕಾರಗಳು ಮಾನವೀಯತೆಯಬಗ್ಗೆ ಬಿಸಿಬಿಸಿಯಾಗಿ ಚರ್ಚಿಸಿ ಮಸೂದೆಗಳನ್ನು ಮಂಡಿಸುತ್ತಾ ಸಮಾಧಾನಪಟ್ಟುಕೊಳ್ಳುತ್ತವೆ.

ಅತ್ತ ಮಕ್ಕಳು ತಬ್ಬಲಿಗಳಾಗುತ್ತವೆ. ತಂದೆತಾಯಿಗಳು ಮಕ್ಕಳನ್ನು ಮಣ್ಣುಮಾಡುತ್ತಾ ಕಣ್ಣೀರಿಡುತ್ತಾರೆ. ದಿಕ್ಕೆಟ್ಟವರು ಧರ್ಮಾಂಧರಾಗುತ್ತಾರೆ. ಹಲವು ನತದೃಷ್ಟರು ವೃಥಾ ಪ್ರಾಣ ತೆತ್ತು ವೀರಸ್ವರ್ಗದಲ್ಲಿ ಕೈಗೆಟುಕದ ಕನ್ನೆಯರ ಭೇಟಿಗಾಗಿ ಕಾಯುತ್ತಾರೆ. ಪರರ ಮಕ್ಕಳನ್ನು ಭಾವಿಗೆ ತಳ್ಳಿ ಆಳವನ್ನು ನೋಡುತ್ತಾ ಅಮಾಯಕ ಯುವಕರಲ್ಲಿ ದ್ವೇಶವನ್ನು ಪ್ರಚೋದಿಸುತ್ತ ನೆರೆಹೊರೆಯ ದೇಶಗಳ ಜನರಲ್ಲಿ ಎಂದೆಂದೂ ಸೌಹಾರ್ದವೇರ್ಪಡದಂತೆ ವಿಷಬೀಜವನ್ನು ಬಿತ್ತುತ್ತಾ ಕಾಲಕಳೆಯುತ್ತಾರೆ, ಧರ್ಮದ ಪ್ರತಿನಿಧಿಗಳೆನಿಸಿಕೊಳ್ಳುವ ಗಡ್ಡದ ಜೋಗಿಗಳು. ‘‘ಯುದ್ಧ ಬೇಕೇ ಯುದ್ಧ?’’ ಎಂಬ ಪ್ರಶ್ನೆಗೆ ನಿಮ್ಮ ಉತ್ತರವೇನು ಎಂದು ಕೇಳುತ್ತ ವಿರಮಿಸುವೆ ಮುಂದಿನ ಕಂತಿನವೆರೆಗೆ.

(ಟಿಪ್ಪಣಿ : ಈ ಲೇಖನಕ್ಕೆ ಪ್ರಚೋದನೆ ಮತ್ತು ಆಧಾರ, ಆರ್ಟ್‌ ಬುಕ್‌ವಾಲ್ಡ್‌ ಎಂಬ ಪ್ರಸಿದ್ಧ ಅಂಕಣಕಾರ ಆಗಸ್ಟ್‌ 3, 2006ರಂದು ‘ವಾಷಿಂಗ್‌ಟನ್‌ ಪೋಸ್ಟ್‌’ನ ಸ್ಟೈಲ್‌ ವಿಭಾಗದಲ್ಲಿ ಬರೆದ ‘‘ವಾರ್‌ ಫಾರ್‌ ಡಮ್ಮೀಸ್‌’’ ಎಂಬ ಲೇಖನ. ಇದು ಯಥಾವತ್‌ ಅನುವಾದವಲ್ಲ. ಸಾಕಷ್ಟು ವ್ಯತ್ಯಾಸ ಮಾಡಿಕೊಂಡಿದ್ದೇನೆ.)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more