ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಯಭಾರಿಗಳ ಭವನದಲ್ಲಿ ನಾಟ್ಯಾಚಾರ್ಯ

By Staff
|
Google Oneindia Kannada News


ಇಡೀ ಭಾರತವನ್ನೆಲ್ಲ ಆಕ್ರಮಿಸಿರುವ ಈ ಕಲೆ, ಭರತಮುನಿಯ ಭರತನಾಟ್ಯ ಮಾತ್ರವಲ್ಲ, ಇಡೀ ಭಾರತದ ನೃತ್ಯಕಲೆಯನ್ನು ಪ್ರತಿನಿಧಿಸುವ ‘‘ಭಾರತನಾಟ್ಯ’’ವೂ ಹೌದು ಎಂಬ ಅವರ ವಿವರಣೆ ಮಾರ್ಮಿಕವೂ ಅರ್ಥಪೂರ್ಣವೂ ಆಗಿತ್ತು!

ಕೇರಳದಲ್ಲಿ ಪ್ರಸಿದ್ಧವಾಗಿರುವ ಕಥಕ್ಕಳಿಯನ್ನೂ ಶಾಸ್ತ್ರೀಯವಾಗಿ ಅಭ್ಯಸಿಸಿರುವ ಧನಂಜಯನ್‌, ಅಭಿನಯದಲ್ಲಿ ಸಿದ್ಧಹಸ್ತರು. ಮುಖದ ವಿವಿಧ ಮಾಂಸಖಂಡಗಳನ್ನು ಸಂದರ್ಭಕ್ಕೆ ತಕ್ಕಂತೆ ಕುಣಿಸುವ ಕಲೆ ಕಥಕ್ಕಳಿಯಲ್ಲಿ ಹೆಚ್ಚು ಪ್ರಾಧಾನ್ಯತೆ ಪಡೆಯುತ್ತದೆ. ಭರತನಾಟ್ಯದ ಕೌಶಲಗಳೊಂದಿ ಹದವಾಗಿ ಕಥಕ್ಕಳಿಯ ಕೌಶಲಗಳನ್ನು ಮಿಶ್ರಮಾಡಿ ಬೇರಿನ್ನಾರಿಗೂ ಸಾಧ್ಯವಾಗದ ರಸಾಭಿನಯ ಮತ್ತು ಸಂಕೀರ್ಣ ಮುಖಭಾವಗಳ ಪ್ರದರ್ಶನ ಧನಂಜಯನ್‌ ಅವರಿಗೆ ಹಸ್ತಗತವಾಗಿದೆ.

ಮುದ್ರೆಗಳ ಮತ್ತು ಅಭಿನಯದ ಸಹಾಯದಿಂದ ಹೇಗೆ ಕಥೆಯಾಂದನ್ನು ನೃತ್ಯದ ಭಾಷೆ ಗೊತ್ತಿಲ್ಲದವರಿಗೂ ಅರ್ಥವಾಗುವಹಾಗೆ ಪ್ರಸ್ತುತ ಪಡಿಸಬಹುದು ಎಂಬುದನ್ನು ಅವರು ತೋರಿಸಿಕೊಟ್ಟರು. ಇದಕ್ಕೆ ನಿದರ್ಶನ, ಅಲ್ಲಿ ನೆರೆದಿದ್ದ ಸಭಾಸದರಲ್ಲಿ, ಜಿಂಕೆಯ ಕಥೆಯನ್ನು ಎಂದೂ ಕೇಳದಿದ್ದವರೂ ಸಹ ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದು.

ಕಥೆಯನ್ನು ವಿಸ್ತರಿಸುವಾಗ, ಹರಿಯುವ ನೀರು, ಪ್ರವಾಹದ ರಭಸ, ಉರಿಯುವ ಬೆಂಕಿ, ಅದರ ಪ್ರಖರತೆ, ವ್ಯಾಘ್ರನ ಕ್ರೌರ್ಯ, ಜಿಂಕೆಯ ಬೆದರುಗಣ್ಣುಗಳಲ್ಲಿ ಕಾಣುವ ಅಸಹಾಯಕತೆ, ಬಸಿರಿನ ಭಾರ, ಹೆರಿಗೆಯ ನೋವು, ಬೇಡನ ಬಾಣಪ್ರಯೋಗ, ಮಿಂಚಿನ ಹೊಳಪು, ಸಿಡಿಲಿನ ಬಡಿತ, ಕಾರ್ಮೋಡದ ಕರಾಳತೆ, ಮಳೆಯ ಬಿರುಸು, ಮರಿಯ ಜನನ, ತಾಯ ಪ್ರೀತಿ, ಕಣ್ಮುಚ್ಚಿ ತಾಯಮೊಲೆಯನ್ನು ತಡಕಾಡುತ್ತ ಒಂದೊಂದೇ ಗುಟುಕನ್ನು ಹೀರುವ ಅಮೃತಾಸ್ವಾದನೆ, ಒಂದೇ ಎರಡೇ, ಎಷ್ಟೊಂದು ಭಾವತರಂಗಗಳು ಈ ಕತೆಯಲ್ಲಿ. ಧನಂಜಯನ್‌ ವಿವರಿಸುತ್ತ, ಇಂಥ ಒಂದು ಕಥೆಯನ್ನು ಐದು ನಿಮಿಷಗಳಲ್ಲಿ, ಅಥವಾ ಹದಿನೈದು ನಿಮಿಷಗಳಲ್ಲಿ, ಹೆಚ್ಚು ಸಮಯವಿದ್ದರೆ ನಲವತ್ತೈದು ನಿಮಿಷಗಳು ಬೇಕಾದರೂ ಅಭಿನಯಿಸಬಹುದು ಎಂಬ ವಿಷಯವನ್ನು ವಿಷದಪಡಿಸಿದರು.

ಹಿಂದೊಮ್ಮೆ ಈ ಕಥಾಭಿನಯವನ್ನು ಕಂಡ ಒಬ್ಬಾಕೆ ಕೇಳಿದ್ದರಂತೆ, ‘‘ಗಂಡಸಾದ ತಾವು ಹೆರಿಗೆಯ ನೋವನ್ನು ಎಷ್ಟೊಂದು ಸಹಜವಾಗಿ ವ್ಯಕ್ತಪಡಿಸಿದಿರಿ, ಅದು ನಿಮಗೆ ಹೇಗೆ ತಾನೇ ಸಾಧ್ಯವಾಯಿತು?’’ ಎಂದು! ಒಟ್ಟಿನಲ್ಲಿ ಧನಂಜಯನ್‌ ಅವರಂಥ ನಾಟ್ಯಾಚಾರ್ಯರ ಪ್ರಾತ್ಯಕ್ಷಿಕೆ ಕಣ್ಣಿಗೆ ಹಬ್ಬ, ಮನೋರಂಜನೆಯ ಜೊತೆಗೆ ಚಮತ್ಕಾರದಿಂದ ಕೂಡಿದ ಕಲಾಪ್ರದರ್ಶನ.

ಅಂದಿನ ಪ್ರಾತ್ಯಕ್ಷಿಕೆಗೆ ಸಹಾಯ ಒದಗಿಸಲು ಯಾವ ಸಂಗೀತಗಾರರ ಅಥವಾ ವಾದ್ಯವೃಂದದ, ಅಥವಾ ಧ್ವನಿಮುದ್ರಿಕೆ ಸಹ ಇರಲಿಲ್ಲವಾದರೂ ಯಾವ ಕೊರತೆಯೂ ಇಲ್ಲದಂತೆ ನಡೆಸಿಕೊಟ್ಟದ್ದು ಗಮನಿಸಬೇಕಾದ ಅಂಶ. ತಮ್ಮೊಡನೆ ಬಂದಿದ್ದ ಅನೇಕ ಶಿಷ್ಯ-ಶಿಷ್ಯೆಯರ ಸಹಾಯದೊಂದಿಗೆ, ಇನ್ನೂ ಹಲವು ನೃತ್ತ, ನೃತ್ಯ ಮತ್ತು ನಾಟ್ಯಗಳ ತುಣುಕುಗಳನ್ನು ಉದಾಹರಣಾರ್ಥವಾಗಿ ಪ್ರದರ್ಶಿಸಿ ಪಾಮರರನ್ನು ಮತ್ತು ಪಂಡಿತರನ್ನೂ ರಂಜಿಸಿದರು.

ತಾವು ಹದಿಹರೆಯದವರಾಗಿದ್ದಾಗ ತಮ್ಮ ಪ್ರಥಮ ಗುರು ಚಂದು ಪಣಿಕ್ಕರ್‌ ಅವರೊಂದಿಗೆ ಕಲಾಕ್ಷೇತ್ರಕ್ಕೆ ವಿದ್ಯಾರ್ಥಿಯಾಗಿ ಬಂದು ಸೇರಿದ ಸಂದರ್ಭ ಮತ್ತು ಅದೇ ಸಮಯದಲ್ಲಿ ಇನ್ನೂ ಪುಟ್ಟ ಬಾಲೆಯಾಗಿದ್ದ ತಮ್ಮ ಭಾವೀ ಪತ್ನಿಯನ್ನು ಭೇಟಿಮಾಡಿದ ರಸಮಯ ಸನ್ನಿವೇಶಗಳನ್ನೂ ಸಭಿಕರೊಂದಿಗೆ ಹಂಚಿಕೊಂಡರು.

ರಾಜಧಾನಿಯ ಸುತ್ತಮುತ್ತ ನೆಲೆಸಿರುವ ಅವರ ಅಪಾರ ಶಿಷ್ಯವರ್ಗ ಮತ್ತು ಹಿತೈಷಿಗಳ ಹಿಂಡೇ ಅಲ್ಲಿ ಬಂದಿದ್ದನ್ನು ನೋಡಿದರೆ ಅವರ ಬಗ್ಗೆ ಗೌರವ ಮತ್ತು ಕೃತಜ್ಞತೆ ಉಳ್ಳ ಮಿತ್ರವರ್ಗ ಎಷ್ಟು ದೊಡ್ಡದು ಎಂಬ ಅನುಭವವಾಗುತ್ತದೆ. ಸಾಧಾರಣವಾಗಿ ಅವರ ಅಭಿಮಾನಿಗಳು ಮತ್ತು ಶಿಷ್ಯರೂ ಅವರನ್ನು ‘ಅಣ್ಣ’ ಎಂತಲೂ ಶಾಂತಾ ಅವರನ್ನು ‘ಅಕ್ಕ’ ಎಂತಲೂ ಸಂಬೋಧಿಸುವುದೇ ರೂಢಿ.

ಅಮೇರಿಕದಲ್ಲಿ ಹುಟ್ಟಿ ಬೆಳೆದ ಶಿಷ್ಯೆಯರು ತಮ್ಮ ಸ್ವಂತ ತಂದೆ ತಾಯಿಗಳಿಗೆ ಕಾಲುಮುಟ್ಟಿ ನಮಸ್ಕರಿಸುವಂತೆ ಆ ನರ್ತಕ-ನರ್ತಕಿ ಜೋಡಿಗೆ ನಮಸ್ಕರಿಸಿ ಗೌರವ ತೋರುತ್ತಾರೆ. ಅದಕ್ಕೆ ಪ್ರತಿಯಾಗಿ ಅವರು ಸ್ವಂತ ಮಕ್ಕಳಿಗೆ ತೋರುವ ಪ್ರೀತಿವಾತ್ಸಲ್ಯಗಳನ್ನು ತೋರುತ್ತಾರೆ. ಒಟ್ಟಿನಲ್ಲಿ, ಅವರು ಉತ್ತಮ ಕಲಾವಿದರಾಗಿರುವಂತೆಯೇ ಉತ್ತಮ ಮಾನವರೂ ಹೌದು. ಅವರು ನಿಜಕ್ಕೂ ಭಾರತದ ಸಾಂಸ್ಕೃತಿಕ ರಾಯಭಾರಿಗಳು. ಅಂಥವರಿಗೆ ಗೌರವಕೂಟವನ್ನು ಏರ್ಪಡಿಸಿದ ರಾಯಭಾರಿಗಳ ಕಛೇರಿಯ ಸಿಬ್ಬಂದಿವರ್ಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ.

ಅಮೇರಿಕದ ನಾನಾ ನಗರಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ‘‘ಏಕಾಂತ ಸೀತಾ’’ ಎಂಬ ನೃತ್ಯರೂಪಕವನ್ನು ವಾಷಿಂಗ್‌ಟನ್ನಿನ ಲಿಂಕನ್‌ ಥಿಯೇಟರಿನಲ್ಲಿ ನೋಡುವ ಅವಕಾಶ ನನಗೆ ದೊರಕಿತು. ಪುರಾಣದ ಸೀತೆ, ಇತಿಹಾಸದ ಝಾನ್ಸಿರಾಣಿ ಲಕ್ಷ್ಮೀಬಾಯಿ ಮತ್ತು ಸಮಕಾಲೀನ ಮಹಿಳೆ ಅಪರಾಜಿತಾ, ಹೀಗೆ ಮೂರು ಪ್ರಾತಿನಿಧಿಕ ಪಾತ್ರಗಳ ಮೂಲಕ ಹೆಣ್ಣಿನ ಬವಣೆಯನ್ನು ಮತ್ತು ಹೆಣ್ಣು ತನಗೆದುರಾಗುವ ಸಮಸ್ಯೆಗಳನ್ನು ಎದುರಿಸುವ ಬಗೆಯನ್ನು ಪ್ರದರ್ಶಿಸುವ ಒಂದು ನೀಳ್ಗತೆ ಈ ರೂಪಕದ ವಸ್ತು.

ಶಾಸ್ತ್ರೀಯ ನೃತ್ಯದ ಜೊತೆಗೆ ಸಮರ ನೃತ್ಯ (ಮಾರ್ಷಲ್‌ ಆರ್ಟ್ಸ್‌), ಜಾನಪದ ಮತ್ತು ಆಧುನಿಕ ಮುಂತಾದ ನೃತ್ಯ ವಿಧಾನಗಳನ್ನು ಬಳಸಿಕೊಂಡಿರುವ ಈ ಪ್ರಯೋಗ ಮಿಶ್ರಪ್ರತಿಕ್ರಿಯೆಗೆ ಒಳಗಾಗಿದೆ. ಈ ರೂಪಕದಬಗ್ಗೆ ಹಲವಾರು ರಸಿಕರು, ತಜ್ಞರು, ವಿಮರ್ಶಕರು ತಮ್ಮ ಅಭಿಪ್ರಾಯಗಳನ್ನು ಈಗಾಗಲೇ ಮಂಡಿಸಿದ್ದಾರೆ. ಹಾಗೂ, ಆ ವಿಮರ್ಶೆಗಳನ್ನು ಆಸಕ್ತರು ಜಾಲತಾಣಗಳಲ್ಲಿ ಓದಬಹುದು ಎಂಬ ಅಂಶವನ್ನು ಜಾಲತರಂಗದ ಓದುಗರೊಂದಿಗೆ ಹಂಚಿಕೊಳ್ಳುತ್ತ ವಿರಮಿಸುವೆ ಮುಂದಿನ ಕಂತಿನವರೆಗೆ.

ಬಾಲಂಗೋಚಿ : ಧನಂಜಯನ್‌ ಮತ್ತು ಅವರ ಧರ್ಮಪತ್ನಿ ಶಾಂತಾ, ಇಬ್ಬರೂ ಕಲಾಕ್ಷೇತ್ರದ ಸಂಸ್ಥಾಪಕಿ ಮತ್ತು ಪ್ರಸಿದ್ಧ ನೃತ್ಯ ಗುರು ರುಕ್ಮಿಣೀದೇವಿಯವರ ಪ್ರಮುಖ ಶಿಷ್ಯರು. ‘‘ಭರತಕಲಾಂಜಲಿ’’ ಎಂಬ ನೃತ್ಯಶಾಲೆಯನ್ನು ಚೆನ್ನೈನಲ್ಲಿ ಸುಮಾರು ನಾಲ್ಕು ದಶಕಗಳಿಂದ ನಡೆಸುತ್ತಾ ನೂರಾರು ನರ್ತಕ-ನರ್ತಕಿಯರನ್ನು ತಯಾರು ಮಾಡುತ್ತಿರುವ ಈ ಕಲಾವಿದರ ಬಗ್ಗೆ ಹೆಚ್ಚು ತಿಳಿಯ ಬಯಸುವವರು http://www.bharatakalaanjali.org ಎಂಬ ಜಾಲತಾಣಕ್ಕೆ ಭೇಟಿ ಕೊಡಿ.

ಸುಮಾರು ಹದಿನೆಂಟು ವರ್ಷಗಳಿಂದ ಈ ದಂಪತಿಗಳಿಬ್ಬರೂ ವರ್ಜೀನಿಯಾದಲ್ಲಿರುವ ಯೋಗವಿಲ್‌ ಎಂಬ ಸ್ಥಳದಲ್ಲಿ ಭರತನಾಟ್ಯದ ಶಿಬಿರಗಳನ್ನು ಪ್ರತಿವರ್ಷವೂ ತಪ್ಪದೇ ನಡೆಸುತ್ತ ಬಂದಿದ್ದಾರೆ. ಅಮೇರಿಕದಲ್ಲೇ ಹುಟ್ಟಿ ಬೆಳೆದ ನೂರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಅವರಲ್ಲಿ ಕಲಿತಿರುವರಲ್ಲದೇ, ಇಲ್ಲಿನ ಅನೇಕ ನೃತ್ಯ ಉಪಾಧ್ಯಾಯ ಉಪಾಧ್ಯಾಯಿನಿಯರು ಇವರಲ್ಲಿ ಶಿಷ್ಯವೃತ್ತಿ ಮಾಡಿ ತಮ್ಮ ವಿದ್ಯೆಯನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ/ಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X