ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಯಭಾರಿಗಳ ಭವನದಲ್ಲಿ ನಾಟ್ಯಾಚಾರ್ಯ

By Staff
|
Google Oneindia Kannada News


ಯಾವ ಭಾಷೆಯ ಶಬ್ದಗಳನ್ನೂ ಬಳಸದೇ ಕೇವಲ ಅಭಿನಯದಿಂದಲೇ ಎಲ್ಲರಿಗೂ ಅರ್ಥವಾಗುವಂತೆ ಕಥೆಯನ್ನು ವಿವರಿಸಬಲ್ಲ ಕಲಾವಿದರಿದ್ದಾರೆ ಗೊತ್ತೆ? ಅವರೇ ದಕ್ಷಿಣ ಭಾರತದ ಸುಪ್ರಸಿದ್ಧ ನಾಟ್ಯಾಚಾರ್ಯ ಧನಂಜಯನ್‌.

  • ಡಾ. ಮೈ. ಶ್ರೀ. ನಟರಾಜ, ಪೊಟೋಮೆಕ್‌, ಮೇರೀಲ್ಯಾಂಡ್‌
    [email protected]
Classical dancer Dhananjayan with his wife Shantaಈ ಕಥೆಯನ್ನು ನೀವು ಕೇಳಿದ್ದೀರಾ? ಗರ್ಭಿಣಿ ಜಿಂಕೆಯಾಂದು ಆನಂದದಿಂದ ವಿಹರಿಸುತ್ತ ತನ್ನಷ್ಟಕೆ ತಾನು ವನದಲ್ಲಿ ಹುಲ್ಲು ಮೇಯುತ್ತಿದೆ. ಅಷ್ಟರಲ್ಲಿ, ಅತ್ತಕಡೆ ದೂರದಲ್ಲಿ ಇದ್ದಕ್ಕಿದ್ದಂತೆ ಹುಲಿಯಾಂದು ಆರ್ಭಟಿಸುತ್ತ ತನ್ನತ್ತ ಓಡಿ ಬರುತ್ತಿರುವುದು ಜಿಂಕೆಗೆ ಕಾಣುತ್ತದೆ. ಭಯದಿಂದ ನಡುಗುತ್ತಿರುವ ಜಿಂಕೆಗೆ ಗರ್ಭದಲ್ಲಿರುವ ಮರಿಯ ಭಾರ ಒಂದುಕಡೆ, ತಾನು ಹುಲಿಯ ಬಾಯಿಗೆ ಸಿಕ್ಕು ಸತ್ತರೆ ಇನ್ನೂ ಹೊಟ್ಟೆಯಲ್ಲಿರುವ ತನ್ನ ಮರಿಯೂ ಸಾಯುವುದಲ್ಲ ಎಂಬ ದುಃಖ ಇನ್ನೊಂದು ಕಡೆ.

ಇನ್ನೇನು ಹುಟ್ಟಲಿರುವ ಮರಿಯ ಮೇಲಿನ ಮಮತೆ ಒಂದುಕಡೆ, ಜೀವನ್ಮರಣದ ಪ್ರಶ್ನೆ ಮತ್ತೊಂದುಕಡೆ. ಚಿಂತಿಸಲೂ ಸಮಯವಿಲ್ಲ. ತಕ್ಷಣ ಕಂಗೆಟ್ಟ ಜಿಂಕೆ ತಪ್ಪಿಸಿಕೊಳ್ಳಲು ಓಡುತ್ತದೆ, ಆದರೆ ದಾಟಲಸಾಧ್ಯವಾಗುವಷ್ಟು ತುಂಬಿ ಹರಿಯುತ್ತಿರುವ ನದಿಯನ್ನು ಕಂಡು, ಕೊಚ್ಚಿಹೋದೇನು ಎಂಬ ಭಯದಿಂದ ಮತ್ತೊಂದು ದಿಕ್ಕಿನಲ್ಲಿ ಓಡುತ್ತದೆ.

ಆದರೆ ಆ ದಿಕ್ಕಿನಲ್ಲಿ ಕಾಡಿನ ಬೆಂಕಿ ಎದುರಾಗಬೇಕೆ? ಅಯ್ಯೋ ದಿಕ್ಕುಗಾಣದಲ್ಲ. ಮಗದೊಂದು ದಿಕ್ಕಿನಲ್ಲಿ ತನ್ನ ಮೈಯ ಭಾರವನ್ನೂ ಲೆಕ್ಕಿಸದೆ ಮರಿಯನ್ನು ಹೇಗಾದರೂ ರಕ್ಷಿಸಿಕೊಳ್ಳಬೇಕೆಂಬ ವ್ಯಾಮೋಹದಿಂದ ಓಡುತ್ತದೆ ಆ ಬಡ ಜಿಂಕೆ. ಆದರೆ, ನೋಡಿ ವಿಧಿಯ ಆಟವನ್ನು. ತಾನು ಓಡುವ ದಿಕ್ಕಿನಲ್ಲಿ, ಅಲ್ಲೊಬ್ಬ ಬೇಟೆಗಾರ! ತನ್ನ ಬಿಲ್ಲಿನ ಹೆದೆ ಏರಿಸಿ ಬಾಣ ಹೂಡಿ ತನ್ನೆಡೆಗೇ ಗುರಿ ಇಟ್ಟಿದ್ದಾನೆ.

ಗಬ್ಬದ ಜಿಂಕೆಯನ್ನು ಕೊಲ್ಲಬಾರದೆಂಬ ನಿಯಮವನ್ನು ತಿಳಿದೂ ನಿಷ್ಕರುಣಿಯಾಗಿದ್ದಾನೆಯೇ? ಅಯ್ಯೋ ಭಗವಂತ, ಇದೆಂಥ ಕಠಿಣ ಪರೀಕ್ಷೆಗೆ ನನ್ನನ್ನು ಗುರಿಮಾಡಿಬಿಟ್ಟೆ, ನನ್ನ ಕಂದ ಹುಟ್ಟುವ ಮೊದಲೇ ಬೇಡನ ಬಾಣಕ್ಕೋ, ಕಾಡಿನ ಬೆಂಕಿಗೋ, ಹಸಿದ ಹೆಬ್ಬುಲಿಯ ಬಾಯಿಗೋ ಅಥವಾ ಭೋರ್ಗರೆವ ನದಿಯ ಪ್ರವಾಹಕ್ಕೋ ಬಲಿಯಾಗಬೇಕೇ? ‘ಕಾಪಾಡು’ ಎಂದು ಮೊರೆ ಇಡುತ್ತಿರುವಾಗಲೇ, ಒಂದು ಪವಾಡ ನಡೆದುಹೋಗುತ್ತದೆ!

ಕಾಡಿನಲ್ಲಿ ಇದ್ದಕ್ಕಿದ್ದಂತೆ ಕಾರ್ಮೋಡ ಕವಿಯುತ್ತದೆ, ಮಿಂಚು ಝಳುಪಿಸುತ್ತದೆ, ಆಕಾಶದಿಂದ ಭಯಂಕರ ಮುಸಲಧಾರೆ ಸುರಿಯಲಾರಂಭಿಸುತ್ತದೆ. ಎಂಥ ವಿಚಿತ್ರ! ಮಿಂಚಿನ ಹಿಂದೆ ಒಂದರ ನಂತರ ಒಂದರಂತೆ ಬರಸಿಡಿಲು ಬಡಿದು ಬೇಟೆಗಾರನನ್ನು ಕೆಡವಿ ಹಾಕುತ್ತದೆ. ವ್ಯಾಧ ಸಿಡಿಲಿಗೆ ತುತ್ತಾಗುವ ಮುನ್ನ ಜಿಂಕೆಗೆ ಗುರಿಯಿಟ್ಟು ಬಿಟ್ಟ ಬಾಣ ಆಯ ತಪ್ಪಿ ಮತ್ತೆಲ್ಲೋ ಹೊರಟು ಹೆಬ್ಬುಲಿಯ ಎದೆಯನ್ನು ಸೀಳಿ ಹಾಕುತ್ತದೆ. ಕ್ರೂರವ್ಯಾಘ್ರ ನೆಗೆದು ಪ್ರಾಣ ಬಿಡುತ್ತದೆ.

ಗಗನವನ್ನು ಛೇದಿಸಿಕೊಂಡು ಸುರಿದ ‘ಶ್ವಾನ-ಮಾರ್ಜಾಲ-ವರ್ಷಾ’ ಕಾಡಿನ ಬೆಂಕಿಯನ್ನು ತಣ್ಣಗಾಗಿಸುತ್ತದೆ. ನಾಲ್ಕೂ ದಿಕ್ಕಿನಿಂದ ಒಮ್ಮೆಲೇ ಬೆಟ್ಟವಾಗಿ ಬಂದ ಕಂಟಕ-ಚತುಷ್ಟಯಗಳು ಸಕಾಲಿಕವಾಗಿ ಬಂದೊದಗಿದ ದೈವ ಸಹಾಯದಿಂದ ಮಂಜಾಗಿ ಕರಗಿ ಹೋಗುತ್ತವೆ! ಹೊಳೆವ ಮಿಂಚಿನ ಖಡ್ಗದಿಂದ, ಬಡಿದ ಸಿಡಿಲಿನ ಆಘಾತದಿಂದ, ಸುರಿವ ಮಳೆಯ ಜಲಪಾತದಿಂದ ಅಕಸ್ಮಾತ್ತಾಗಿ ಬಂದ ವಿಪತ್ತು ಮಾಯವಾಗುತ್ತದೆ.

ಭಯದಿಂದ ನಡುಗುತ್ತಿದ್ದ ಗರ್ಭಿಣಿ ಜಿಂಕೆಗೆ ಕಂಟಕವೆಲ್ಲ ಕಳೆದಮೇಲೆ ಹೆರಿಗೆ ಸಂಕಟದ ಅನುಭವ ಗಮನಕ್ಕೆ ಬರುತ್ತದೆ. ಕಿಂಕರ್ತವ್ಯಮೂಢವಾಗಿದ್ದ ಆ ಬಡ ಪ್ರಾಣಿ ನೋವಿನಿಂದ ಚೀರುತ್ತದೆ. ಗರ್ಭದಿಂದ ಪುಟ್ಟ ಮರಿ ಪಿಳಿಗಣ್ಣು ಬಿಡುತ್ತ ಅಪಾಯದಿಂದ ಕೂಡಿದ ಈ ಜಗತ್ತನ್ನು ಪ್ರವೇಶಿಸುತ್ತದೆ. ಹೆತ್ತು ದಣಿದಿದ್ದರೂ ಆ ತಾಯಿ ಜಿಂಕೆ ತನ್ನ ನೋವನ್ನೆಲ್ಲ ಮರೆತು ಮುದ್ದು ಮರಿಗೆ ಮೊಲೆಯೂಡಿಸುತ್ತದೆ. ಮರಿಯ ಮೈಯ್ಯನ್ನು ನೆಕ್ಕಿ ಸ್ವಚ್ಛಗೊಳಿಸುತ್ತದೆ. ಮರಿಗೆ ಇನ್ನೂ ಕಣ್ಣು ಬಿಡಲಾಗದಿದ್ದರೂ ತಾಯ ಮೊಲೆಯನ್ನು ಸ್ವಭಾವಜನ್ಯವಾದ ತಿಳುವಳಿಕೆಯಿಂದಲೇ ಹುಡುಕಿ ಚೀಪುವ ಶಕ್ತಿಯನ್ನು ಪ್ರಕೃತಿಯೇ ಮರಿಗೆ ದಯಪಾಲಿಸುತ್ತದೆ.

ಈ ಕತೆಯನ್ನು ನೀವು ಕೇಳಿರಬಹುದು/ಓದಿರಬಹುದು. ಭಾಷೆಯ ಪರಿಚಯ ಇಲ್ಲದಿದ್ದರೆ ನೀವು ಓದಿ ಕಥೆಯನ್ನು ತಿಳಿಯುವುದು ಸಾಧ್ಯವಿಲ್ಲ. ಇತರರು ಓದಿ ಹೇಳಿದರೂ ಕೇಳಿ ಅರ್ಥಮಾಡಿಕೊಳ್ಳುವುದೂ ಸಾಧ್ಯವಿಲ್ಲ. ಆದರೆ, ಯಾವ ಭಾಷೆಯ ಶಬ್ದಗಳನ್ನೂ ಬಳಸದೇ ಕೇವಲ ಅಭಿನಯದಿಂದಲೇ ಎಲ್ಲರಿಗೂ ಅರ್ಥವಾಗುವಂತೆ ಕಥೆಯನ್ನು ವಿವರಿಸಬಲ್ಲ ಕಲಾವಿದರಿದ್ದಾರೆ ಗೊತ್ತೆ? ಹೀಗೆ ಅಭಿನಯದ ಮೂಲಕ ಈ ಕಥೆಯನ್ನು ಅತ್ಯಂತ ಸ್ವಾರಸ್ಯಕರವಾಗಿ ಪ್ರಸ್ತುತ ಪಡಿಸಿದವರು ಇನ್ಯಾರೂ ಅಲ್ಲ, ದಕ್ಷಿಣ ಭಾರತದ ಸುಪ್ರಸಿದ್ಧ ನಾಟ್ಯಾಚಾರ್ಯ ಧನಂಜಯನ್‌. ಸಂದರ್ಭ ಯಾವುದೆಂದರೆ, ಅಮೇರಿಕದ ರಾಜಧಾನಿಯಾದ ವಾಷಿಂಗ್‌ಟನ್ನಿನಲ್ಲಿರುವ ಭಾರತೀಯ ರಾಯಭಾರಿಗಳ ಭವನದಲ್ಲಿ ಕಳೆದ ಅಕ್ಟೋಬರ್‌ ಕೊನೆಯಲ್ಲಿ, ಶಾಂತಾ ಮತ್ತು ಧನಂಜಯನ್‌ ನೃತ್ಯ-ದಂಪತಿಗಳಿಗೆ ಏರ್ಪಡಿಸಿದ್ದ ಒಂದು ಗೌರವಕೂಟ.

ಭಾರತದ ಮತ್ತು ಅಮೇರಿಕದ ನರ್ತಕ-ನರ್ತಕಿಯರ ಸಹಕಾರದಿಂದ ತಯಾರಾದ ‘‘ಏಕಾಂತ ಸೀತಾ’’ ಎಂಬ ನೃತ್ಯರೂಪಕದಲ್ಲಿ ಭಾಗವಹಿಸಲು ಧನಂಜಯನ್‌ ದಂಪತಿಗಳು ತಮ್ಮ ತಂಡದವರೊಂದಿಗೆ ಬಂದಿದ್ದರು. ನೃತ್ಯಕಲೆಯಲ್ಲಿ ಆಸಕ್ತಿಯುಳ್ಳ ಆಹ್ವಾನಿತ ಅತಿಥಿಗಳಲ್ಲಿ ಭಾರತೀಯರು ಹಾಗೂ ಅಮೇರಿಕನ್ನರೂ ಇದ್ದರು. ಭರತ ಮುನಿಯು ಬರೆದನೆನ್ನಲಾದ ನಾಟ್ಯಶಾಸ್ತ್ರದ ಆಧಾರದ ಮೇಲೆ ಹೇಗೆ ಭಾರತದ ವಿವಿಧ ಪ್ರದೇಶಗಳಲ್ಲಿ ಭರತನಾಟ್ಯ, ಕೂಚಿಪುಡಿ, ಮಣಿಪುರಿ, ಕಥಕ್‌, ಒಡಿಸ್ಸಿ ಮುಂತಾದ ಶಾಸ್ತ್ರೀಯ ನೃತ್ಯಗಳು ಬೆಳೆದು ಬಂದಿವೆ ಎಂಬುದನ್ನು ನಿದರ್ಶನಗಳೊಂದಿಗೆ ವಿವರಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X