• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗತವೈಭವ : ವಿಜಯನಗರದಿಂದ ಮೈಸೂರಿನವರೆಗೆ

By Staff
|

ಸೌಂದರ್ಯಾರಾಧಕರು - - ಸತ್ಯಶೋಧಕರು :

ಇವರಲ್ಲಿ ಹಲವರು ಹಾಳುಹಂಪೆಗೆ ಹತ್ತಾರುಬಾರಿ ಭೇಟಿಯಿತ್ತವರು. ನೂರಾರು ಛಾಯಾಚಿತ್ರಗಳನ್ನು ತೆಗೆದುಕೊಂಡವರು. ಒಂದೊಂದು ಕಲ್ಲನ್ನೂ ಮಾತನಾಡಿಸಿ ಬಂದವರು. ಸೂರ್ಯನ ತಾಪದಲ್ಲಿ ಬೆಂದವರು. ಕುಡಿಯಲು ನೀರಿಲ್ಲದೇ, ವಿಸರ್ಜನೆಗೆ ಸ್ಥಳವಿಲ್ಲದೇ ಅಲೆದವರು. ತಮ್ಮ ಸಂಸ್ಕೃತಿಯನ್ನು ಅರಿಯದ, ತಮ್ಮ ಚರಿತ್ರೆಯಬಗ್ಗೆ ಅಜ್ಞರಾದ ನೂರಾರು ಸ್ಥಳೀಯರನ್ನು ಸಂಪರ್ಕಿಸಿ ಅವರ ನಿರಭಿಮಾನವನ್ನು ಕಂಡು ಕೆರಳಿದವರು. ತಮಿಳುನಾಡಿನ ದೇವಾಲಯದ ಯಾವುದೋ ಶಿಲ್ಪವನ್ನು ಹಂಪಿಯ ಮತ್ಯಾವುದೋ ದೇಗುಲದ ಕಂಬವೊಂದಕ್ಕೆ ಹೋಲಿಸಿ ಸಾಮ್ಯವನ್ನು ಕಂಡು ಚರಿತ್ರೆಯ ಯಾವುದೋ ಸತ್ಯವನ್ನು ಕಂಡುಹಿಡಿದು ಕುಣಿದಾಡಿದವರು. ತುಮಕೂರಿನ ಬಳಿಯ ಹಳ್ಳಿಯೊಂದರ ನರಸಿಂಹದೇವಾಲಯದ ಸೂರಿನಲ್ಲಿ ಮಾಸಿಹೋಗುತ್ತಿರುವ ಅಪೂರ್ವ ವರ್ಣಚಿತ್ರಕ್ಕೆ ಬೆರಗಾದವರು. ‘‘ಅಯ್ಯಾ ಪುಣ್ಯಾತ್ಮ, ಒಂದು ಪೊರಕೆಯನ್ನು ತಾ, ಕೊಂಚ ಧೂಳು ಹೊಡೆ, ಸ್ಪಷ್ಟವಾಗಿ ಕಂಡರೆ ಅದರ ಸೌಂದರ್ಯ ಮತ್ತಷ್ಟು ಹೆಚ್ಚುತ್ತದೆ’’ ಎಂದು ಗೋಗರೆದವರು.

ಮೈಸೂರಿನ ಬಳಿಯ ಯಾವುದೋ ಗೋಳುಸುರಿಯುವ ಹಳೆಯ ಮನೆಯೊಂದರಲ್ಲಿ ಅಡಗಿಸಿಟ್ಟಿರುವ ಅರಸರ ಭವ್ಯವಾದ ವರ್ಣಚಿತ್ರಗಳನ್ನು ಕಂಡು ಚಕಿತರಾದವರು. ಶಿಲ್ಪಗಳನ್ನು, ವರ್ಣಚಿತ್ರಗಳನ್ನು ಅರ್ಥಮಾಡಿಕೊಳ್ಳುವುದಕ್ಕಾಗಿಯೇ ಭಾರತೀಯ ಭಾಷೆಗಳನ್ನು ಕಲಿತು ರಾಮಾಯಣ ಮಹಾಭಾರತದ ಕಥೆಗಳನ್ನು ಓದಿದವರು. ಕಿರಾತನಾಗಿ ಬಂದ ಶಿವನಿಗೂ ತಪಸ್ಸಿಗೆ ಬಂದ ಅರ್ಜುನನಿಗೂ ನಡೆಯುವ ಕಾಳಗದ ಹಿನ್ನೆಲೆಯನ್ನು ಹುಡುಕಿದವರು. ಹಂಪಿಯಲ್ಲಿ ಪಾಳುಬಿದ್ದ ಬನ್ನಿ ದಿಬ್ಬಕ್ಕೂ ಮೈಸೂರಿನ ಅರಸರ ಜಂಬೂಸವಾರಿಯ ಬನ್ನಿಮಂಟಪಕ್ಕೂ ಸಂಬಂಧವನ್ನು ಹುಡುಕಿದವರು. ಇವರು ಹುಟ್ಟಿನಿಂದ ನಮ್ಮ ಭಾಷೆಗೆ ಅಪರಿಚಿತರು, ಭಾರತ ದೇಶಕ್ಕೆ ಹೊರಗಿನವರು, ಭಾರತೀಯ ಚರಿತ್ರೆ ಮತ್ತು ಸಂಸ್ಕೃತಿಯ ರಹಸ್ಯವನ್ನು ಅರಿಯದವರು. ಆದರೂ ಅವರ ಶ್ರದ್ಧೆ ಪ್ರಶ್ನಾತೀತ, ಉತ್ಸಾಹ ಅಮಿತ!

ಈ ಸಂಶೋಧಕರ ತನ್ಮಯತೆಯನ್ನು ನೆನೆಸಿಕೊಂದರೆ ಅಚ್ಚರಿಯಾಗುತ್ತದೆ. ಇವರೆಲ್ಲ ಸೌಂದರ್ಯಾರಾಧಕರು, ಸತ್ಯಶೋಧಕರು. ಅವರಿಗೆ ದೇಶ ಕಾಲ ರಾಜಕೀಯ ಯಾವುದರ ಬಂಧನವೂ ಇಲ್ಲ. ತಿರುಪತಿಯ ದೇವಾಲಯಕ್ಕೆ ಅವರು ಹೋಗಲು ಕಾರಣ ತಿಮ್ಮಪ್ಪನ ದರ್ಶನ ಮಾಡಬೇಕೆಂಬ ಭಕ್ತಿಯಲ್ಲ, ಗರ್ಭಗುಡಿಯಬಳಿ ಇರುವ ಕೃಷ್ಣದೇವರಾಯ ಮತ್ತು ಅವನ ಇಬ್ಬರು ರಾಣಿಯರ ಮೂರ್ತಿಗಳ ದರ್ಶನ ಮಾಡಬೇಕೆಂಬ ಕಲಾಸಕ್ತಿ.

ತಿರುವನಂತಪುರದ ಅನಂತಪದ್ಮನಾಭನ ದೇವಾಲಯದೊಳಕ್ಕೆ ತಾವು ಹಿಂದುಗಳಲ್ಲವೆಂಬ ಕಾರಣಕ್ಕೆ ಒಳಗೆ ಏಕೆ ಬಿಡುವುದಿಲ್ಲ ಎಂದು ರೋಸಿ, ವ್ಯವಸ್ಥಾಪಕರನ್ನು ಪ್ರಶ್ನಿಸಲು ಅವರು ಲವಲೇಶವೂ ಹಿಂಜರಿಯುವುದಿಲ್ಲ. ಆ ದೇಗುಲದ ಶಿಲ್ಪವನ್ನು ಕಂಡು ಕಣ್ಣಾರೆ ತಣಿಯುವುದಕ್ಕೆ ಅವರಿಗೆ ಅಧಿಕಾರವಿಲ್ಲದಿದ್ದರೆ ಮತ್ತಾರಿಗೆ ಇರಬೇಕು? ವಿಶ್ವಸಂಸ್ಥೆಗೆ ಇವರು ಭೇಟಿ ಕೊಡುವುದು ಕಚ್ಚಾಡುವ ನೆರೆಹೊರೆ ದೇಶಗಳ ಸಮಸ್ಯೆಯ ಪರಿಹಾರಕ್ಕಲ್ಲ, ಹಂಪಿಯ ಜೀರ್ಣೋದ್ಧಾರದ ಖರ್ಚಿನ ಹಣಸಂಗ್ರಹ ಮಾಡುವುದಕ್ಕಾಗಿ. ಇವರೆಲ್ಲ ಒಂದು ರೀತಿಯಲ್ಲಿ ಋಷಿ-ಮುನಿಗಳಿದ್ದಂತೆ.

ಎತ್ತಣ ವಿಚಾರಸಂಕಿರಣ ಎತ್ತಣ ಕನ್ನಡ ಸಂಘ?

ಕನ್ನಡ ಸಂಘಗಳು ಇಂಥ ವಿಚಾರಸಂಕಿರಣಗಳನ್ನು ಏರ್ಪಡಿಸುವುದು ಅಪರೂಪ. ಉಗಾದಿ, ದೀವಳಿಗೆ, ಸಿನಿಮಾ, ನಾಟಕ, ಮನರಂಜನಾತ್ಮಕ ಸಂಗೀತ-ನೃತ್ಯ, ಊಟ ಉಪಚಾರ ಮುಂತಾದ ಮಾಮೂಲಿನ ಚಟುವಟಿಕೆಗಳಿಗೇ ಮೀಸಲಾದ ನಮ್ಮ ಸಂಘಗಳು ಸಾಹಿತ್ಯ, ಶಾಸ್ತ್ರೀಯ ಸಂಗೀತ, ನೃತ್ಯ, ಶಿಲ್ಪ, ಚರಿತ್ರೆ, ಸಂಸ್ಕೃತಿ ಮುಂತಾದ ವಿಷಯಗಳಿಗೆ ಬಾಯ್ಮಾತಿನ ಒಣ ಉಪಚಾರ ಮಾಡುವುದನ್ನು ಬಿಟ್ಟರೆ ಹೆಚ್ಚಿನ ಬೆಲೆಕೊಡುವುದಿಲ್ಲ ಎಂಬುದು ಸಂಘಗಳ ಚಟುವಟಿಕೆಯಲ್ಲಿ ಭಾಗವಹಿಸಿದರಿಗೆಲ್ಲ ಗೊತ್ತಿರುವ ವಿಷಯವೇ. ಈ ನಿಟ್ಟಿನಲ್ಲಿ, ಇಂಥಾ ಹರಸಾಹಸಕ್ಕೆ ಕೈಹಾಕಿದ ಹ್ಯೂಸ್ಟನ್‌ ಕನ್ನಡ ವೃಂದದ ಕಾರ್ಯಕಾರೀ ಸಮಿತಿಗೆ, ಅದರಲ್ಲೂ ಮುಂದಾಳತ್ವ ವಹಿಸಿದ ವತ್ಸ ಕುಮಾರ್‌ ಅವರಿಗೆ ಮತ್ತು ಅವರ ಬೆನ್ನಹಿಂದೆ ನಿಂತು ಸಹಕರಿಸಿದ ತರುಣ ತರುಣಿಯರಿಗೆ ಶಹಭಾಷ್‌ಗಿರಿ ಕೊಡಲೇ ಬೇಕು.

ಸ್ಮರಣ ಗ್ರಂಥಗಳು-ಸಂಚಿಕೆಗಳು :

2004ರಲ್ಲಿ ‘ಹೊಯ್ಸಳ’ ಎಂಬ ಸಂಚಿಕೆ 2005ರಲ್ಲಿ ‘ಸಂಗಮ’ ಎಂಬ ಗ್ರಂಥ ಈ ಹಿಂದೇ ಬಿಡುಗಡೆ ಆಗಿವೆ ಎಂಬುದು ಹಲವರಿಗಾದರೂ ತಿಳಿದಿರಬಹುದು. 2006ರ ಈ ವಿಚಾರಸಂಕಿರಣದ ಅಂಗವಾಗಿ ‘‘ಜಯ-ವಿಜಯ’’ ಎಂಬ ಒಂದು ಸ್ಮರಣ ಸಂಚಿಕೆಯೂ ಲೋಕಾರ್ಪಣೆಗೊಂಡಿದೆ. ಉತ್ತಮವಾದ ಆಹ್ವಾನಿತ ಲೇಖನಗಳನ್ನೊಳಗೊಂಡು, ಉತ್ತಮ ದರ್ಜೆಯ ವರ್ಣಚಿತ್ರಗಳಿಂದ ಮತ್ತು ಛಾಯಾಚಿತ್ರಗಳಿಂದ ಕೂಡಿದ ಈ ಸಂಚಿಕೆಯನ್ನು ಹೊರತರುವಲ್ಲಿ ಸಂಪಾದಕಮಂಡಲಿ (ಮುಂದಾಳತ್ವ -- ವಾಸು ಐತಾಳರು) ಪಟ್ಟಿರುವ ಶ್ರಮ ಮತ್ತು ಶ್ರಮದ ಹಿಂದಿರುವ ಶ್ರದ್ಧೆ ಇವು ತಕ್ಷಣವೇ ಓದುಗರ ಮನಸ್ಸನ್ನು ತಟ್ಟುತ್ತವೆ.

ಸಾಂಸ್ಕೃತಿಕ ಕಾರ್ಯಕ್ರಮ :

ವಿಚಾರಸಂಕಿರಣ ಪ್ರಾರಂಭವಾಗುವ ಹಿಂದಿನ ದಿನ ಸಂಜೆ ಸ್ಥಳೀಯ ಕಲಾವಿದರನ್ನು ಒಂದುಗೂಡಿಸಿ ಹಲವಾರು ವೃಂದಗಳಿಂದ ಶಾಸ್ತ್ರೀಯ ಸಂಗೀತವನ್ನೂ ಏರ್ಪಡಿಸಿದ್ದುದು ಗಮನೀಯವಾಗಿತ್ತು. ವಿದುಷಿ ರಾಜರಾಜೇಶ್ವರಿ ಭಟ್‌ ಅವರ ವೃಂದದಿಂದ ಮತ್ತು ಆಶಾ ನರಸಿಂಹನ್‌-ವೈಷ್ಣವೀ ತಾಯಿಮಗಳ ಜೋಡಿಯಿಂದ ಒಡೆಯರು ರಚಿಸಿದ ಹಲವು ಕೃತಿಗಳ ಹಾಡುಗಾರಿಕೆ ಅತ್ಯಂತ ಸಮಂಜಸವಾಗಿತ್ತು. ಭಾಗವಹಿಸಿದ ಪುಟ್ಟ ಬಾಲಕ ಬಾಲಕಿಯರು ಸಭಾಸದರನ್ನು ಮನರಂಜಿಸಿದ್ದಲ್ಲದೇ ಹತ್ತು ವರ್ಷದ ಪುಟ್ಟ ಬಾಲಕಿ ಕೃತಿ ಭಟ್‌ ಮನೋಧರ್ಮಸಂಗೀತವನ್ನು ಪ್ರಸ್ತುತಿಗೊಳಿಸಿ ಎಲ್ಲರ ಹೃನ್ಮನಗಳನ್ನೂ ಕದ್ದುಬಿಟ್ಟಳು! ಜಮುನಾ ಮುರಳಿ ಅವರು ಹಿಂದೂಸ್ಥಾನೀ ಶೈಲಿಯಲ್ಲಿ ಹಾಡಿದ ದಾಸಕೃತಿಗಳೂ ಇಂಪಾಗಿ ಮೂಡಿಬಂದವು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more