• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗತವೈಭವ : ವಿಜಯನಗರದಿಂದ ಮೈಸೂರಿನವರೆಗೆ

By Staff
|


ವಿಜಯನಗರ ಪಾಳುಬಿದ್ದಮೇಲೆ ಕನ್ನಡಿಗರ ಸಂಸ್ಕೃತಿ ಮೈಸೂರಿನಲ್ಲಿ ಹೇಗೆ ಬೆಳೆಯಿತು? ಈ ಪ್ರಶ್ನೆಯನ್ನು ತಮಗೆ ತಾವೇ ಕೇಳಿಕೊಂಡವರು ಮತ್ತು ಅದಕ್ಕೆ ಉತ್ತರ ಹುಡುಕುತ್ತ ಕಾರ್ಯೋನ್ಮುಖರಾದವರು ಹ್ಯೂಸ್ಟನ್‌ ಕನ್ನಡ ವೃಂದದ ಮುಂದಾಳುಗಳು.

  • ಡಾ. ಮೈ. ಶ್ರೀ. ನಟರಾಜ, ಪೊಟೋಮೆಕ್‌, ಮೇರೀಲ್ಯಾಂಡ್‌
    mysreena@aol.com
Royal Legacy: Vijayanagara to Mysoreಮಣ್ಣುಗೂಡಿದ ಕಲ್ಲಿನ ವೈಭವ

ದಕ್ಷಿಣಭಾರತದ ಚರಿತ್ರೆಯಲ್ಲಿ ಸುವರ್ಣಯುಗವೆನ್ನಿಸಿಕೊಳ್ಳುವ ವಿಜಯನಗರ ಸಾಮ್ರಾಜ್ಯದ ವೈಭವದ ಬಗ್ಗೆ ತಿಳಿಯದ ಕನ್ನಡಿಗರಾರು?

ವಿದ್ಯಾರಣ್ಯರ ಆದೇಶದಂತೆ ಹಕ್ಕ-ಬುಕ್ಕರು ಸಂಸ್ಥಾಪಿಸಿದ ಹಿಂದೂಸಾಮ್ರಾಜ್ಯ ಇನ್ನೂರು-ಮುನ್ನೂರು ವರ್ಷಗಳ ಕಾಲ ವೈಭವದಿಂದ ಬಾಳಿ ಕ್ರಿ.ಶ. 1565ರಲ್ಲಿ ತಾಳಿಕೋಟೆ ಯುದ್ಧದಲ್ಲಿ ನುಚ್ಚುನೂರಾಯಿತು. ಕಲೆಯ ಉತ್ತುಂಗವನ್ನು ಕಂಡ ಆ ಸಾಮ್ರಾಜ್ಯದಲ್ಲಿ ಶಿಲ್ಪ, ಸಂಗೀತ, ನಾಟ್ಯ, ಕಾವ್ಯಗಳೆಲ್ಲ ಬೆಳೆದವು. ಆದರೆ, ಈ ರಾಜ್ಯಕ್ಕೆ ಮುತ್ತಿಗೆ ಹಾಕಿ ಸೋಲಿಸಿದ ಸುಲ್ತಾನರು ಅಲ್ಲಿನ ಸಂಪತ್ತನ್ನು ಕೊಳ್ಳೆಹೊಡೆಯುವುದರ ಜತೆಗೆ ಇಡೀ ರಾಜಧಾನಿಯನ್ನು ಪುಡಿಪುಡಿ ಮಾಡಿಬಿಟ್ಟರು.

ಶಿಲ್ಪಿಗಳ ದೀರ್ಘ ತಪಸ್ಸಿನ ಬಲದಿಂದ ಆಕಾರಗೊಂಡು, ಕುಶಲ ಕಲೆಗಾರರ ಶ್ರಮದ ಫಲದಿಂದ ಎದ್ದುನಿಂತ ಸುಂದರ ಸೌಧಗಳನ್ನು, ಭವ್ಯವಾದ ದೇಗುಲಗಳನ್ನು, ನೋಡುಗರಿಗೆ ಅಚ್ಚರಿ ತರುವಂಥ ಅರಮನೆಗಳನ್ನು ನಾಶಮಾಡಿದರು. ಮನಮೋಹಕವಾದ ಕಲ್ಲಿನ ಮೂರ್ತಿಗಳನ್ನು ವಿರೂಪಗೊಳಿಸಿ ತೃಪ್ತಿಪಟ್ಟುಕೊಂಡರು. ಸೌಂದರ್ಯೋಪಾಸನೆ ಎಂದರೇನು ಎಂಬ ಅರಿವಿಲ್ಲದ, ವಿಕೃತ ಮನಸ್ಸಿನ ಸೈನಿಕರನ್ನೂ ಅವರಿಗೆ ಮುಂದಾಳುಗಳಾಗಿ ನಿಂತು ಆ ವಿನಾಶಕಾರೀ ಕೃತ್ಯವನ್ನು ನಿರ್ದೇಶಿಸಿದ ಸೈನ್ಯಾಧಿಕಾರಿಗಳನ್ನೂ ನೆನೆಸಿಕೊಂಡರೆ ಹೊಟ್ಟೆ ತೊಳಸುತ್ತದೆ, ಮೈ ಉರಿಯುತ್ತದೆ, ಮನಸ್ಸು ರೋಸಿಹೋಗುತ್ತದೆ. ಅಯ್ಯೋ, ಮನುಷ್ಯನೇಕೆ ಇಷ್ಟು ಅವವೇಕಿ ಎಂಬ ಜುಗುಪ್ಸೆ ಉಂಟಾಗುತ್ತದೆ.

ಅಂದಿನ ವೈಭವದ ವಿಜಯನಗರ ಇಂದಿನ ಹಾಳು ಹಂಪೆಯಾದ ವಿಷಾದನೀಯ ಕಥೆಯ ಹಿಂದೆ ಅಡಗಿರುವ ಇತಿಹಾಸ, ಭೂಗೋಳ, ವಾಣಿಜ್ಯ, ಅರ್ಥಶಾಸ್ತ್ರ, ರಾಜಕೀಯ, ಧರ್ಮ, ಅಧರ್ಮ, ಕಲೆ, ಕೊಲೆ, ಕಳೆ, ಕೊಳೆ ಇವನ್ನೆಲ್ಲಾ ಇಂದಿನ ಪುರಾತತ್ವಶಾಸ್ತ್ರಜ್ಞರು ಅಭ್ಯಸಿಸುತ್ತಲೇ ಇದ್ದಾರೆ.

ಇಂದಿನ ಕರ್ನಾಟಕ, ಆಂಧ್ರ ಮತ್ತು ತಮಿಳುನಾಡಿನ ಹೆಚ್ಚಿನ ಪ್ರದೇಶಗಳನ್ನೊಳಗೊಂಡಿದ್ದ ವಿಜಯನಗರ ಸಾಮ್ರಾಜ್ಯವನ್ನು ತಮ್ಮ ಸಂಶೋಧನೆಯ ವಸ್ತುವನ್ನಾಗಿಸಿಕೊಂಡು ಇಡೀ ಜೀವನವನ್ನೇ ಕಳೆದ ಹಲವು ವಿದ್ವಾಂಸರಿದ್ದಾರೆ. ಅಂಥಾ ವಿದ್ವಾಂಸರಲ್ಲಿ ಅನೇಕರು ಭಾರತದ ಹೊರಗಿನವರು ಎಂದರೆ ಅಚ್ಚರಿ ಎನಿಸಬಹುದು. ಹೀಗೆ ದಕ್ಷಿಣ ಭಾರತದ ಪ್ರಮುಖ ರಾಜವಂಶಗಳಾಗಿದ್ದ ‘‘ಗಂಗ-ಕದಂಬಾದಿ ಚಾಲುಕ್ಯ-ರಾಷ್ಟ್ರಕೂಟ, ಯಾದವ-ಬಲ್ಲಾಳರ ವಿಜಯನಗರ ವೀರರ ಗತವೈಭವ ಸಾರುವ ಸಂದೇಶ’’ವನ್ನು ಕುರಿತು ಚಿಂತಿಸುವುದು ಕನ್ನಡಿಗರ ಕರ್ತವ್ಯವಲ್ಲವೇ? ವಿಜಯನಗರ ಪಾಳುಬಿದ್ದಮೇಲೆ ಕನ್ನಡಿಗರ ಸಂಸ್ಕೃತಿ ಮೈಸೂರಿನಲ್ಲಿ ಹೇಗೆ ಬೆಳೆಯಿತು? ಈ ಪ್ರಶ್ನೆಯನ್ನು ತಮಗೆ ತಾವೇ ಕೇಳಿಕೊಂಡವರು ಮತ್ತು ಅದಕ್ಕೆ ಉತ್ತರ ಹುಡುಕುತ್ತ ಕಾರ್ಯೋನ್ಮುಖರಾದವರು ಹ್ಯೂಸ್ಟನ್‌ ಕನ್ನಡ ವೃಂದದ ಮುಂದಾಳುಗಳು.

ವಿಚಾರಸಂಕಿರಣದ ಆವಿರ್ಭಾವ :

ಹಿಂದೊಮ್ಮೆ ಭೂಮಿಯಮೇಲೆ ಕಂಗೊಳಿಸಿ ಈಗ ಭೂಗತವಾಗಿರುವ ಅವಶೇಷಗಳನ್ನು ಹುಡುಕಿ ತೆಗೆದು ಮುರಿದ ಚೂರುಗಳನ್ನು ಒಟ್ಟುಗೂಡಿಸಿ ಚರಿತ್ರೆಯನ್ನು ಪುನಃ ಸೃಷ್ಟಿ ಮಾಡುವ ಕಲೆಯಲ್ಲಿ ಆಸಕ್ತಿಯುಳ್ಳ ಪಂಡಿತರನ್ನು ಒಂದೆಡೆ ಸೇರಿಸಿ ವಿಚಾರ ಸಂಕಿರಣ ಒಂದನ್ನು ಏರ್ಪಡಿಸಿದರೆ ಹೇಗೆ ಎಂದು ಯೋಚಿಸಿದ ಹ್ಯೂಸ್ಟನ್‌ ಕನ್ನಡಿಗರಲ್ಲಿ ಅಗ್ರಗಣ್ಯರು, ಶ್ರೀಯುತ ವತ್ಸ ಕುಮಾರ್‌. ಅವರ ಅವಿರತ ಶ್ರಮದ ಫಲವೇ ಅವರು ಕ್ರಮವಾಗಿ 2004 ಮತ್ತು 2005ರಲ್ಲಿ ನಡೆಸಿದ ‘ಹೊಯ್ಸಳ’ ಮತ್ತು ‘ಸಂಗಮ’ ವಿಚಾರಸಂಕಿರಣಗಳು.

ಇದೇ ಪರಂಪರೆಯನ್ನು ಮುಂದುವರೆಸಿ, ಹ್ಯೂಸ್ಟನ್ನಿನ ವಸ್ತುಸಂಗ್ರಹಾಲಯದ ಸಹಕಾರವನ್ನು ಪಡೆದುಕೊಂಡು ವಿಶ್ವದ ನಾನಾ ಮೂಲೆಗಳಿಂದ ಸಂಶೊಧಕರನ್ನು ಆಹ್ವಾನಿಸಿ, ಡಿಸೆಂಬರ್‌ 1, 2, 3, 2006 ರಂದು ನಡೆಸಿದ ವಿಚಾರಸಂಕಿರಣ ಮೂರನೆಯದು. ವಿಜಯನಗರ ಮತ್ತು ಅದರ ನಾಶದ ನಂತರ ತಲೆ ಎತ್ತಿದ ಮೈಸೂರಿನ ಒಡೆಯರ ಪರಂಪರೆಗಳ ಚರ್ಚೆ ಈ ಸಂಕಿರಣದ ಮುಖ್ಯ ವಸ್ತು. ಈ ಸಂಕಿರಣದಲ್ಲಿ ಆಹ್ವಾನಿತನಾಗಿ ಭಾಗವಹಿಸುವ ಸದವಕಾಶ ದೊರೆತದ್ದು ನನ್ನ ಲಾಭ.

ಆಹ್ವಾನಿತ ಭಾಷಣಕಾರರಲ್ಲಿ ಹಲವರು ಸುಪ್ರಸಿದ್ಧ ಸಂಶೋಧಕರು :

ಆಹ್ವಾನಿತ ಸಂಶೋಧಕರ ಪೈಕಿ ಮಿಶಿಗನ್‌ ವಿಶ್ವವಿದ್ಯಾಲಯದ ಕಾರ್ಲಾ ಸಿನೊಪೊಲಿ ಎಂಬಾಕೆ ಪ್ರಾಚೀನವಸ್ತು ಮತ್ತು ಪ್ರಾಚೀನ ಶಿಲ್ಪಗಳ ಅಭ್ಯಾಸದಲ್ಲಿ ನಿಷ್ಣಾತರು. ಈಕೆಯೇ ಸಂಕಿರಣದ ಸಂದೇಶಭಾಷಣವನ್ನು ಮಾಡಿದವರು. ಇನ್ನೊಬ್ಬರು ಪ್ರಧಾನ ಭಾಷಣಕಾರರು, ಜೆರ್ಮನಿಯ ಹೈಡೆಲ್‌ಬರ್ಗಿನಲ್ಲಿ ಸ್ನಾತಕೋತ್ತರ ವ್ಯಾಸಂಗಮಾಡಿ ಇಂಗ್ಲೆಂಡಿನ ಎಡಿನಬರೋ ವಿಶ್ವವಿದ್ಯಾಲಯದಲ್ಲಿ ಸಂಶೋಧಕ-ಪ್ರಾಧ್ಯಾಪಕಿಯಾಗಿರುವ ಆನ ಡಲ್ಲಪಿಕ್ಕೋಲ ಎಂಬ ಇಟ್ಯಾಲಿಯನ್‌ ಮೂಲದ ತಜ್ಞೆ. ಈಕೆ, ವಿಶ್ವದ ನಾನಾ ಭಾಗಗಳಲ್ಲಿ ಶಿಲ್ಪ ಮತ್ತು ವರ್ಣಚಿತ್ರಗಳನ್ನು ಆಳವಾಗಿ ಅಧ್ಯಯನ ಮಾಡಿದವರು.

ಮುಂಬೈನಲ್ಲಿರುವ ಸೊಫಿಯಾ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಅನಿಲಾ ವರ್ಗಿಸ್‌ ಎಂಬ ಪಂಡಿತೆ ಭಾರತದಿಂದ ಬಂದಿದ್ದ ಮುಖ್ಯ ಸಂಶೋಧಕಿ. ಇವರು, ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯನ್ನು ಆಳವಾಗಿ ಅಧ್ಯಯನ ಮಾಡಿರುವವರು. ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ಓದಿ ಅರಿಜೋನ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ನಡೆಸಿದ ಅಲೆಕ್ಸ್ಯಾಂಡ್ರ ಮ್ಯಾಕ್‌ ಎಂಬ ಕಿರಿಯ ಸಂಶೋಧಕಿ ಮತ್ತೊಬ್ಬಳು.

ಭಾರದಲ್ಲಿರುವ ಪಳೆಯುಳಿಕೆಗಳನ್ನು ಏಕೆ ಜೋಪಾನಮಾಡಬೇಕು ಎಂಬ ವಿಷಯವನ್ನು ಕುರಿತು ಅತ್ಯಂತ ಕಾಳಜಿಯಿಂದ ಮಾತನಾಡಿ ಎಲ್ಲರ ಮನಸ್ಸನ್ನೂ ಸೂರೆಗೊಂಡ ಕಾರ್ನೆಲ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮೈಕೇಲ್‌ ಟಾಮ್‌ಲನ್‌ ಸಹ ಒಬ್ಬರು. ಇವರಲ್ಲದೇ ಸೋಕಾ ವಿಶ್ವವಿದ್ಯಾಲಯದಲ್ಲಿ ಕಲಾಸಂಶೋಧಕಿಯಾಗಿರುವ ನಳಿನಿ ರಾವ್‌, ಬೆಂಗಳೂರಿನ ಕಲಾ ಸಂಸ್ಥೆಯೊಂದರ ಅಧ್ಯಕ್ಷೆ ಗೀತಾ ರಾವ್‌, ಮೈಸೂರು ಅರಸರ ಮನೆತನದ ರಾಜಕುವರಿ ಊರ್ಮಿಳಾ ದೇವಿ ಮತ್ತು ನಾನು. ರಾಜಕುಮಾರಿ ತಮ್ಮ ಬಾಲ್ಯದಲ್ಲಿ ಅರಮನೆಯಲ್ಲಿ ಕಳೆದ ದಿನಗಳನ್ನು ನೆನೆಸಿಕೊಂಡು ಹಲವಾರು ಅಪರೂಪದ ಚಿತ್ರಗಳನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದು ಅರ್ಥಪೂರ್ಣವಾಗಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more