• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರ ಇಳಿದರೂ ಹಗುರವಾಗದ ಮನಸ್ಸು

By Staff
|

ಭಾರ ಇಳಿದರೂ ಹಗುರವಾಗದ ಮನಸ್ಸು
ಮೂರು ದಿನಗಳ ವಿಶ್ವಕನ್ನಡ ಸಮ್ಮೇಳನದ ಬಗ್ಗೆ ಸಾಕಷ್ಟು ವರದಿಗಳು ಈಗಾಗಲೇ ಬಂದಿವೆ. ಸಮ್ಮೇಳನ ಹೇಗಿತ್ತು? ಹೇಗಿರಲಿಲ್ಲ? ಎಂಬ ಅನಿಸಿಕೆಗಳು ವ್ಯಕ್ತವಾಗಿವೆ. ಆದರೆ ಇದು ಭಿನ್ನ. ಹನಿಗವನಗಳನ್ನು ಫೋಣಿಸಿ, ನುಡಿಜಾತ್ರೆಯನ್ನು ವಿವರಿಸುವ ಪ್ರಯತ್ನ ಇಲ್ಲಿದೆ.

Dr.M.S.Nataraj ಡಾ. ಮೈ.ಶ್ರೀ. ನಟರಾಜ
ಪೊಟೊಮೆಕ್‌, ಮೇರೀಲ್ಯಾಂಡ್‌

Mysreena@aol.com

ಕಾವೇರಿಯ ಆಶ್ರಯದಲ್ಲಿ ನಡೆದ ನಾಲ್ಕನೇ ಅವಿಕಸ (ಅಕ್ಕ ವಿಶ್ವ ಕನ್ನಡ ಸಮ್ಮೇಳನ) ವಿಕಸಿಸಿತು, ಬಂದವರೆಲ್ಲರಿಗೂ ಒಂದಿಷ್ಟು ಸುಗಂಧವನ್ನೂ ಖುಷಿಯನ್ನೂ ಕೊಟ್ಟಿತು. ಹಲವು ಸಣ್ಣ-ಪುಟ್ಟ ತಪ್ಪುಗಳಿಂದ ಕೆಲವರಿಗೆ ಕಿರಿ-ಕಿರಿಯನ್ನು ಉಂಟುಮಾಡಿದ್ದರೂ ಅಚ್ಚರಿ ಏನಲ್ಲ. ಇಂಥಾ ಒಂದು ಪ್ರಮಾಣದ ಚಟುವಟಿಕೆಯಲ್ಲಿ ಕೇವಲ ಸಣ್ಣ-ಪುಟ್ಟ ತಪ್ಪುಗಳೇ ಆದರೆ ಅದು ನಮ್ಮ ಭಾಗ್ಯವೆಂದುಕೊಂಡು ಸಮಾಧಾನದ ಉಸಿರನ್ನು ಎಳೆದುಕೊಳ್ಳಬೇಕು. ಅಂತೂ ಎರಡು ವರ್ಷಗಳ ಸಿದ್ಧತೆಯ ಫಲ, ಕಾರ್ಯಕ್ರಮದ ಒಟ್ಟಾರೆ ಜಯ-ಅಪಜಯ, ಸರಿ-ತಪ್ಪುಗಳೆಲ್ಲವನ್ನೂ ಇತರರು ತೀರ್ಮಾನಿಸಬೇಕು.

ಸಂಚಾಲಕರ ಗುಂಪಿಗೆ ಸೇರಿದವರು ಇತರರು ಹೇಳುವ ಟೀಕೆ ಟಿಪ್ಪಣಿಗಳನ್ನು ಹೊಗಳಿಕೆ-ತೆಗಳಿಕೆಗಳನ್ನು ಸಮಚಿತ್ತದಿಂದ ಸ್ವೀಕರಿಸಬೇಕೇ ಹೊರತು ನಾವಿನ್ನೇನುತಾನೇ ಮಾಡಬಲ್ಲೆವು? ನಮ್ಮನಮ್ಮ ಪಾಲಿನ ಕೆಲಸಗಳಲ್ಲಿ ನಿರತರಾಗಿದ್ದ ನಮಗೆ ಒಟ್ಟಾರೆ ಏನು ನಡೆಯಿತು, ಹೇಗೆ ನಡೆಯಿತು ಎಂಬುದರಬಗ್ಗೆ ಕಲ್ಪನೆಯೇ ಇಲ್ಲ. ಹೀಗಾಗಿ ಅಲ್ಲಿಲ್ಲಿ ಕೇಳಿಬಂದ ಮಾತುಗಳಲ್ಲಿ ಹಲವನ್ನು, ಜಾಲತರಂಗದ ಓದುಗರೊಂದಿಗೆ ಹಂಚಿಕೊಳ್ಳುತ್ತಿದ್ದಿದ್ದೇನೆ. ಇದು ಸಮಗ್ರ ನೋಟವಲ್ಲ ಎಂದು ಬೇರೆ ಹೇಳಬೇಕಾಗಿಲ್ಲ. ಮುಂದೆ ಎಂದಾದರೂ ಅಂಥ ಒಂದು ಸಮಗ್ರ ನೋಟವನ್ನು ತಮ್ಮ ಮುಂದಿಡುವ ಯತ್ನ ಮಾಡಿದರೂ ಮಾಡಬಹುದು. ಈಗ ಸದ್ಯಕ್ಕೆ ಗದ್ಯರೂಪ ದೀರ್ಘವಾಗಬಹುದೆಂಬ ಭಯದಿಂದ, ಕೇಳಿಬಂದ ಮಾತುಗಳನ್ನು ಹನಿಗವನರೂಪದಲ್ಲಿ ಭಟ್ಟಿ ಇಳಿಸಿದ್ದೇನೆ. (ತಯಾರು ಮಾಡಿಕೊಂಡಿದ್ದ ಕೆಲವು ಹನಿಗವನಗಳನ್ನು ಓದಲೂ ಕವಿಗೋಷ್ಠಿಯಲ್ಲಿ ಸಮಯವಿಲ್ಲದೇ ಹೋಯಿತು, ಅದು ಹಾಗಿರಲಿ!) ಮತ್ತೊಂದು ಮಾತು, ಇವನ್ನು ಓದಿ ನಗು ಬಂದರೆ ನಕ್ಕು ಬಿಡಿ, ತುಂಬಾ ಗಂಭೀರವಾಗಿ ತೆಗೆದುಕೊಂಡು ತಲೆ ಕೆಡಿಸಿಕೊಳ್ಳಬೇಡಿ.

ಅವಿಕಸದಿ ವಿಕಸಿಸಿದ ಕಸಿವಿಸಿ ಪಿಸುಮಾತುಗಳು

(1) ಅಕ್ಕ-ಪಕ್ಕ (ಕಾವೇರಿಯ ಹಳೆಯ ತಲೆಯೊಂದರ ಅಂಬೋಣ)

ಸರಿಯಪ್ಪ ಪಕ್ಕ
ಬಂದಿಹಳು ಅಕ್ಕ
ನೀನ್ಯಾವ ಲೆಕ್ಕ?
ಹೆಚ್ಚು ಮಾತಾಡಿದರೆ
ಬಿಡಿಸುವೆನು ಸೊಕ್ಕ!

(2) ಪೆದ್ದ-ಬಿದ್ದ (ಪೋಟೋ ಸೆಷನ್‌ ಮಿಸ್‌ ಮಾಡಿಕೊಂಡ ನತದೃಷ್ಟನೊಬ್ಬನ ಅಂಬೋಣ)

ಯಾರಿವನು ಮುದ್ದ?
ಫೋಟೊಗಳಲಿ ಬಿದ್ದ
ಯಾವ ಕೆಲಸಕು ಸಿಕ್ಕದೆ
ಊರ ಬಿಟ್ಟೆದ್ದ

ಯಾರಿವನು ಪೆದ್ದ?
ಹಿಂಬದಿಯಲಿದ್ದ
ಕ್ಯಾಮರಗಳಿಗೆ ಸಿಕ್ಕದೆ
ಚಾಕರಿಗೆ ಬಿದ್ದ!

(3) ಊಟೋಪಚಾರ (ಮದುವೆಗೆ ಬಂದ ಬೀಗರ ಪೈಕಿ ಒಬ್ಬರ ಅಂಬೋಣ)

‘‘ಸಾಂಬಾರಿನಲಿ ತರಕಾರಿಯಿಲ್ಲ’’
‘‘ರೊಟ್ಟಿ ಇದ್ದಾಗ ಪಲ್ಯವಿಲ್ಲ’’
‘‘ಪಲ್ಯವಿದ್ದಾಗ ರೊಟ್ಟಿಯೇ ಇಲ್ಲ’’
‘‘ಲಾಡುವಿನಲ್ಲಿ ಲವಂಗವಿಲ್ಲ’’
ಎಂದೆಲ್ಲ ರಂಧ್ರಾನ್ವೇಷಣೆ
ಮಾಡಬೇಡವೋ ಎಂದರೆ
‘‘ಲಾಡುವೇ ಇಲ್ಲ’’ ಎಂದನಲ್ಲ!

(4) ಅಕ್ಕ-ತಂಗಿ (ತನಗೂ ತುರಾಯಿ ಸಿಕ್ಕುವುದೆಂದು ನಂಬಿದ್ದ ಹಿರಿಯ ಕಾವೇರಿಗನೊಬ್ಬನ ಅಂಬೋಣ)

ಮನೆಗೆ ಬಂದಕ್ಕನಿಗೆ
ಉಡಿಸಿದೆವು ಜರತಾರಿ
ತಂಗಿಯ ಸರದಿ ಬರಲೇ ಇಲ್ಲ
ತುರಾಯಿ ತುಂಬಾ ದುಬಾರಿ!

(5) ಕಾಫಿ-ತಿಂಡಿ (ಅನೇಕರ ಅಂಬೋಣ)

ತಿಂಡಿ-ಊಟಕ್ಕಿಂತ
ಕಾಫಿಯೇ ಮುಖ್ಯ ಎಲ್ಲರಿಗೆ
ಕ್ಯೂ-ನಿಂತ ನಮಗೆಲ್ಲ
ಮಿಸ್ಸಾಯ್ತು ಮೆರವಣಿಗೆ!

(6) ಈಕೆ-ಆಕೆ-ಯಾಕೆ? (ಚಂಪಾ ಅಂಬೋಣವನು ಕೇಳಿದವನೊಬ್ಬನ ಅಂಬೋಣ)

ಕಾಲೇಜು ಹುಡುಗರು
ಒಬ್ಬರಿಗೊಬ್ಬರು
ಮಾತಾಡಿಕೊಂಡರು
ಇಬ್ಬರು ಹುಡುಗಿಯರ ಬಗ್ಗೆ :

‘‘ಈಕೆ? ಓಕೆ,
ಆಕೆ? ಜೋಕೆ!’’

ಮೇಲಿನ ಚಂಪಾ ಕವನದ ರೂಪದಲ್ಲಿ ಇನ್ನೊಂದು -

ಪ್ರೇಕ್ಷಕರಿಬ್ಬರು
ಮಾತಾಡಿಕೊಂಡರು
ಇಬ್ಬರು ಕಲಾವಿದೆಯರ ಬಗ್ಗೆ :

ಈಕೆ? ಓಕೆ
ಆಕೆ? ಯಾಕೆ?

(7) ಅಯ್ಯೋ ಸ್ವಾಮಿ ಹೀಗೇಕೆ? (ಹಲವು ಅತಿಥಿಗಳ ಅಂಬೋಣ)

ಅತಿಥಿಗಳಿಬ್ಬರು
ಮಾತಾಡಿಕೊಂಡರು
ಕಾರ್ಯಕ್ರಮಗಳ ಬಗ್ಗೆ :

ಹಾಡು-ಕುಣಿತ-ಮಾತು-ಗೀತು
ಮೃಷ್ಟಾನ್ನಕ್ಕಿಂತ ಬೇಕೆ?
ತುಂಬಾ ಜಾಸ್ತಿ ಐಟಂ ಮಧ್ಯೆ
ಗೋಷ್ಠಿ-ಪಾಷ್ಠಿ ಯಾಕೆ?

ಮಾರ್ಗಸೂಚೀ ಬೋರ್ಡುಗಳಿಲ್ಲ
ಕೊಠಡಿ ಎಲ್ಲಿದೆ ಹೇಳುವರಿಲ್ಲ
ಹುಡುಕುವುದರಲೆ ಕಾಲ ಕಳೆಯಿತಲ್ಲ
ಕಾರಣರಾರಿದಕೆ?

‘‘ಕಾಫಿಯಿಲ್ಲದೇ ಕಂಗಾಲಾಗಿ
ತಲೆಬಿಸಿ’’ ಎನ್ನುವ ಟೀಕೆ
ಊಟಕಾದರು ಹೋಗೋಣವೆಂದರೆ
ಜಡಿಮಳೆ ಸುರಿಯಲುಬೇಕೆ?

(8) ಹುಡುಕಾಟ (ಆಧ್ಯಾತ್ಮಿಕದೃಷ್ಟಿಯುಳ್ಳ ಒಬ್ಬ ಆಗಂತುಕರು ಸೂಕ್ಷ್ಮವಾಗಿ ಗಮನಿಸಿ ತಯಾರಿಸಿದ ಅಂಬೋಣ)

ಭಾರತದೇಶದ ಅತಿಥಿಗಳೆಲ್ಲರು
ಹೋಟೆಲ್‌ ಹುಡುಕಿದರಪ್ಪ
ಸಭಾಂಗಣದಲಿ ಪ್ರೇಕ್ಷಕರೆಲ್ಲ
ಕೊಠಡಿಯ ಹುಡುಕಿದರಪ್ಪ

ಕಾಲಕಾಲಕೆ ‘ಕುಡಿಯುವ’ ಜನರು
ಕಾಫಿಯ ಹುಡುಕಿದರಪ್ಪ
ಸಭಾಸದರೊಂದಿಗೆ ಸಂವಾದದಲಿ
ಸತ್ಯ ಹುಡಿಕಿದರು ಭೈರಪ್ಪ

ಕವಿಗೋಷ್ಠಿಯ ಅಧ್ಯಕ್ಷರಾಗಿ
ಕವಿಗಳ ಹುಡುಕಿದರು ಚೆನ್ನಪ್ಪ
ಆರು ನಿಮಿಷದ ಇತಿ-ಮಿತಿಗಳಲಿ
ಅರ್ಥ ಹುಡುಕಿದರು ಚಂಪಪ್ಪ

ಗೋಷ್ಠಿಯ ನಡೆಸುವ ಸಂಚಾಲಕರು
ಸಭಿಕರ ಹುಡುಕಿದರಪ್ಪ
ಭಾಷಣ ಮಾಡಲು ಹೆಸರು ಕೊಟ್ಟವರು
‘ಆಚೀಚೆ’ ಹೊರಟದ್ದು ಏಕಪ್ಪ?

ಇನ್ನೂ ಹೀಗೆ ಅನೇಕ ಅಂಬೋಣಗಳನ್ನು ಕೇಳಿದ್ದಾಯಿತು. ಸಂಪಾದಕ ಸಮಿತಿಯ ಪರವಾಗಿ ಹೇಳುವುದಾದರೆ, ಹಿಂದೆಂದೂ ಮಾಡದಷ್ಟು ಪ್ರಮಾಣದಲ್ಲಿ ಕನ್ನಡದಲ್ಲಿ ಪ್ರಕಟಣೆಗಳನ್ನು ಮಾಡಿದ್ದೇವೆ. ಅದನ್ನು ಓದಿ ಸಹೃದಯರು ತಮ್ಮ ಅಭಿಪ್ರಾಯವನ್ನು ತಿಳಿಸುವರೆಂದು ನಂಬಿದ್ದೇವೆ. ಇನ್ನು ಸಾಹಿತ್ಯ ಸಮಿತಿಯ ವಿಷಯಕ್ಕೆ ಬರೋಣ. ಅದೊಂದು ರೀತಿಯಲ್ಲಿ ‘‘ಏಕ-ಸದಸ್ಯ-ಸಮಿತಿ’’ಯಾಗಿದ್ದು ಏಕೆಂದರೆ ಅದರಲ್ಲಿ ಮಿಂಚುವ ಬೆಳಕಿಲ್ಲ, ಥಳ-ಥಳ ಹೊಳೆಯುವ ಗ್ಲ್ಯಾಮರ್‌ ಇಲ್ಲ, ಛಾಯಾಗ್ರಾಹಕರಿಲ್ಲ. ಅದು ಹಾಗಿರಲಿ. ನಾವು ಯೋಜಿಸಿದ್ದ ಎಲ್ಲ ಕಾರ್ಯಕ್ರಮಗಳ ಪೈಕಿ, ‘‘ಭೈರಪ್ಪನವರೊಂದಿಗೆ ಸಂವಾದ’’ ಕಾರ್ಯಕ್ರಮ ನನಗೆ ಹೆಚ್ಚು ಸಂತೋಷ ಮತ್ತು ಸಮಾಧಾನ ಕೊಟ್ಟಿತು. ಇತರರ ಪ್ರತಿಕ್ರಿಯೆ ಸಹ ಅದೇ ರೀತಿ ಇದ್ದಂತಿದೆ. ಮಾಧ್ಯಮದವರು ‘‘ಮಧ್ಯಮ-ವ್ಯಾಯೋಗ’’ ಮಾಡಿ ಬಿಟ್ಟದ್ದು ಕೊಂಚ ಕಸಿವಿಸಿ ಉಂಟುಮಾಡಿತು. ಅವರಿಗೆ ಮೀಸಲಾಗಿಟ್ಟಿದ್ದ ಒಂದುಘಂಟೆಯನ್ನು ಕವಿಗೋಷ್ಠಿಗೆ ಕೊಡಬಹುದಿತ್ತು. ಮಿಕ್ಕೆಲ್ಲಾ ಸಾಹಿತ್ಯಿಕ ಕಾರ್ಯಕ್ರಮಗಳಿಗೂ ಸಮಯ ಸಾಲದೇ ಹಲವರಿಗೆ ನಿರಾಸೆಯಾಯಿತು. ಮುಂದೆ ಈ ಬಗ್ಗೆ ತಿದ್ದಿಕೊಳ್ಳಬೇಕು.

ಮುಗಿಸುವ ಮುನ್ನ ಒಂದು ಮಾತು ಹೇಳದಿದ್ದರೆ ಕರ್ತವ್ಯಹೀನನಾಗುತ್ತೇನೆ. ಅದೇನೆಂದರೆ, ನಮ್ಮ ಕಾವೇರಿಯ ಸ್ವಯಂಸೇವಕರ ನಿಸ್ವಾರ್ಥ ಸೇವೆ. ಅವರ ಅವಿರತ ದುಡಿಮೆಯನ್ನು ಎಷ್ಟು ಕೊಂಡಾಡಿದರೂ ಸಾಲದು. ಅವಿಕಸದ ಬಗ್ಗೆ ಇನ್ನೂ ಅನೇಕ ಪ್ರತಿಕ್ರಿಯೆಗಳು ಪ್ರಕಟವಾಗುವುವು ಎಂಬ ನಿರೀಕ್ಷೆಯಿಂದ ವಿರಮಿಸುವೆ ಮುಂದಿನ ಕಂತಿನವರೆಗೆ.


ನುಡಿ ಹಬ್ಬದ ಚಿತ್ರಪಟಗಳು :
ಮತ್ತೆ ಸಿಗೋಣ - 3ನೇ ದಿನ
ಮೆರವಣಿಗೆಯ ನೋಟ- 2ನೇ ದಿನ
ಎಲ್ಲೆಲ್ಲೂ ಹಸನ್ಮುಖಿಗಳು - 1ನೇ ದಿನ
ಎಸ್ಪಿ ಬಾಲಸುಬ್ರಮಣ್ಯಂ ಗಾನ ಸುರಭಿ

ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :
ವಿಶ್ವಕನ್ನಡ ನುಡಿಹಬ್ಬದ ನೇರಪ್ರಸಾರಕ್ಕೆ ಸುಸ್ವಾಗತ
ನುಡಿ ಹಬ್ಬದ ಹಿಂದೆ ಏನೆಲ್ಲಾ ಕಷ್ಟ-ಸುಖಗಳಿವೆ ಗೊತ್ತೆ?
ತೆರೆ ಸರಿದ ಕ್ಷಣಗಳು : ಚಿತ್ರ ಚಿತ್ತಾರ - ಚುಟುಕು ವಿಚಾರ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more