• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗೂಳಿ ತೊಪ್ಪೆಯೋ ಕತ್ತೆ ಲದ್ದಿಯೋ?

By Super
|

ಗೂಳಿ ತೊಪ್ಪೆಯೋ ಕತ್ತೆ ಲದ್ದಿಯೋ?

(ನ್ಯೂಕ್ಲಿಯರ್‌ ತ್ಯಾಜ್ಯವಸ್ತುಗಳ ಬಗ್ಗೆ ಸಂಶೋಧಿಸುವುದನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡ ಲೇಖಕರಿಂದ ‘ಬಯೋ-ಲಾಜಿಕಲ್‌ ಕಕ್ಕ’ ಕುರಿತ ಪದಾರ್ಥ ಚಿಂತಾಮಣಿ ಇಲ್ಲುಂಟು. ಇದನ್ನು ಓದಿದ ನಂತರವಾದರೂ ನೀವು ಕರೆಕ್ಟಾಗಿ, ಸಮಯೋಚಿತವಾಗಿ, ಲೆಕ್ಕಾಚಾರ ಹಾಕಿ ಬಯ್ಯುವುದನ್ನು ಕಲಿಯುತ್ತೀರೆಂಬ ಆಶಯದಿಂದ ಈ ವಿದ್ವತ್‌ಪೂರ್ಣ ಹರಟೆಯನ್ನು ಸಾದರಪಡಿಸಲಾಗುತ್ತಿದೆ -ಸಂಪಾದಕ)

ಮೊನ್ನೆ ನಮ್ಮ ವಿಚಿತ್ರಾನ್ನದ ಭಟ್ಟ -ಶ್ರೀವತ್ಸ ಜೋಶಿ ಅವರು ಬಡಿಸಿದ ವೃಷಭ ವಿಸರ್ಜಿತದಿಂದ ಒಂದಿಷ್ಟು ಹಳೆಯ ನೆನಪು ಮರುಕಳಿಸುವುದರ ಜೊತೆಗೆ ಮತ್ತೊಂದಿಷ್ಟು ಹೊಸ ಚಿಂತನೆಗೂ ಅವಕಾಶವಾಯಿತು. ಜಾಲತರಂಗದ ಓದುಗರೊಂದಿಗೆ ಹಂಚಿಕೊಳ್ಳೋಣವೆನಿಸಿತು. ಇದೋ ಓದಿ.

ನಾನಿನ್ನೂ ಈದೇಶಕ್ಕೆ ಹೊಸಬನಾಗಿದ್ದಾಗಿನ ಮಾತು. ಪಿಟ್ಸ್‌ಬರ್ಗ್‌ ವಿಶ್ವವಿದ್ಯಾನಿಲಯದಲ್ಲಿ ಪದವಿಯೋತ್ತರ ವಿದ್ಯಾರ್ಥಿಯಾಗಿದ್ದ ಕಾಲ. ನನ್ನ ಅಡ್ವೈಸರ್‌ ಊರಿನಲ್ಲಿಲ್ಲದಿದ್ದಾಗಲೆಲ್ಲ ಅವರ ಕೆಲವು ತರಗತಿಗಳನ್ನು ನಾನೇ ತೆಗೆದುಕೊಳ್ಳುತ್ತಿದ್ದೆ. ಒಂದು ದಿನ ಕೊನೇ ವರ್ಷದ ಸಿವಿಲ್‌ ಇಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿದ್ದೆ. ವಿದ್ಯಾರ್ಥಿಗಳಿಗೆ ಹಿಂದಿನ ವಾರದ ಹೋಂ ವರ್ಕ್‌ ಹಿಂದಿರುಗಿಸಿದ್ದೆ. ಒಬ್ಬ ವಿದ್ಯಾರ್ಥಿ ತನಗೆ ಸಿಕ್ಕ ಅಂಕಗಳು ಸರಿಯಿಲ್ಲವೆಂದು ನನ್ನೊಡನೆ ವಾದಿಸಲು ಬಂದ. ಅವನಿಗೆ ಹೇಳುವಷ್ಟು ಹೇಳಿ ಕೊನೆಗೆ ಸ್ವಲ್ಪ ತಾಳ್ಮೆಗೆಟ್ಟು ‘ ಬುಲ್‌ಶಿಟ್‌’ ಎಂಬ ಮಾತನ್ನು ಉಪಯೋಗಿಸಿಬಿಟ್ಟೆ.

Dr. M.S. Natarajಆಗ ಅವನ ಮುಖ ಕೆಂಪಾಯಿತು. ತರಗತಿಯಲ್ಲಿ ಒಂದು ರೀತಿಯ ಮೌನ ಕವಿಯಿತು. ಅವನೊಬ್ಬನೇ ಅಲ್ಲದೇ ಇತರ ವಿದ್ಯಾರ್ಥಿಗಳಿಗೂ ನನ್ನ ಮಾತಿನಿಂದ ಅಸಮಾಧಾನವಾಗಿತ್ತೆಂದು ನನಗೆ ಮನದಟ್ಟಾಯಿತು. ಅಮೇರಿಕನ್ನರು ಸಾಕಷ್ಟು ಅನೌಪಚಾರಿಕವಾಗಿ ಮಾತನಾಡುವವರು, ಇದೇನು ಈ ಮಾತಿಗೆ ಇಷ್ಟೊಂದು ರಂಪ ಎಂದು ನನಗೆ ಸ್ವಲ್ಪ ವಿಸ್ಮಯ, ಅದಕ್ಕಿಂತ ಹೆಚ್ಚು ಗೊಂದಲವಾಯಿತು. ಒಂದೆರಡು ನಿಮಿಷಗಳಲ್ಲಿ ಘಂಟೆ ಮುಗಿದು ಎಲ್ಲಾ ವಿದ್ಯಾರ್ಥಿಗಳೂ ಚದುರಿದರು.

ತರಗತಿಯಿಂದ ಹಿಂದಿರುಗಿ ಇತರ ಗ್ರ್ಯಾಜುಯೇಟ್‌ ಸ್ಟುಡೆಂಟ್ಸ್‌ ಬಳಿ ನಡೆದದ್ದನ್ನು ಹಂಚಿಕೊಂಡಾಗ ಪರದೇಶಿಗಳೇ ಹೆಚ್ಚಾಗಿದ್ದ ವಿದ್ಯಾರ್ಥಿಗಳಲ್ಲನೇಕರಿಗೆ ನನ್ನ ಅನುಭವದಲ್ಲಿ ಅಂಥಾ ವಿಶೇಷವೇನೂ ಕಾಣಿಸಲಿಲ್ಲ. ಕೆನಡಾದವನಾಗಿದ್ದ ಟಾಂ ಎಂಬ ಒಬ್ಬ ವಿದ್ಯಾರ್ಥಿಯ ಹೇಳಿಕೆಯ ಪ್ರಕಾರ ‘ಬುಲ್‌ಶಿಟ್‌’ ಎಂಬ ಪದ ತರಗತಿಯಲ್ಲಿ ಉಪಯೋಗಿಸಲು ಲಾಯಕ್ಕಲ್ಲದ್ದು ಎಂದಾಗಿತ್ತು. ‘ಬುಲ್‌ಶಿಟ್‌’ ಎಂಬ ಶಬ್ದ ‘ಅನ್‌ಪಾರ್ಲಿಮೆಂಟರಿ’ ಎಂದು ತಿಳಿಸಿದ. ಅವನ ಮಾತಿಗೆ ಪೋಷಣೆ ಕೊಡುತ್ತ ಅಮೆರಿಕದವನೇ ಆದ ಬಿಲ್‌ ನನಗೆ ಕೊಟ್ಟ ಸಲಹೆ ಏನೆಂದರೆ, ನಾನು ‘ಬಿ.ಎಸ್‌’ ಎಂಬ ಚುಟುಕು ಶಬ್ದವನ್ನು ಉಪಯೋಗಿಸಬೇಕಿತ್ತು, ಆದರೆ, ಅದನ್ನು ತಿಳಿಸುವಾಗ ಅವನು ಉಪಯೋಗಿಸಿದ ಭಾಷೆ ಇನ್ನೂ ನನ್ನ ಕಿವಿಯಲ್ಲೇ ಇದೆ ‘ಡ್ಯಾಮಿಟ್‌, ಯು ಶುಡ್‌ ಹ್ಯಾವ್‌ ನೋನ್‌ ಇಟ್‌ ಈಸ್‌ ಫ‚ಇಂಗ್‌ ಇನ್‌ಅಪ್ರೋಪ್ರಿಯೇಟ್‌.’

ಅಂದೇ ಮಧ್ಯಾಹ್ನ ಅದೇ ವಿದ್ಯಾರ್ಥಿಗಳು ಲ್ಯಾಬ್‌ನಲ್ಲಿ ಮುಖಾಮುಖಿಯಾದಾಗ ಮತ್ತೊಮ್ಮೆ ಒಂದಿಷ್ಟು ‘ಟೆಂಶನ್‌’ ಅನುಭವವಾಯಿತು. ‘ಬುಲ್‌ಶಿಟ್‌’ ಅನ್ನಿಸಿಕೊಂಡ ವಿದ್ಯಾರ್ಥಿ ಮತ್ತೊಮ್ಮೆ ನನ್ನೊಡನೆ ವಾದಕ್ಕೆ ಇಳಿದ. ನಾನು ಅವನೊಂದಿಗೆ ಕ್ಷಮೆ ಕೇಳಿಕೊಳ್ಳಬೇಕಾಯಿತು! ನಾನೊಬ್ಬ ಪರಕೀಯ ಎಂಬ ಕಾರಣದಿಂದ ನನ್ನೊಂದಿಗೆ ಹಾಗೆ ವರ್ತಿಸಿದನೋ ಹೇಳುವುದು ಕಷ್ಟ. ಅದು ಹೇಗೇ ಇರಲಿ, ಮತ್ತೆಂದೂ ತರಗತಿಯಲ್ಲಿ ಆ ಶಬ್ದವನ್ನು ನಾನು ಉಪಯೋಗಿಸಲಿಲ್ಲ. ಇದಿಷ್ಟೂ ಹಳೆಯ ನೆನಪಿನ ಸಾರಾಂಶ.

ಇನ್ನು ಸಲೀಸಾಗಿ ಮಾತನಾಡಬಹುದು :

ಇನ್ನು ಬುಲ್‌ಶಿಟ್‌ ಬಗ್ಗೆ ಒಂದಿಷ್ಟು ವ್ಯಾಖ್ಯಾನವನ್ನು ಮುಂದುವರೆಸೋಣ. ಬುಲ್‌ಶಿಟ್‌ ಶಬ್ದಕ್ಕೆ ಹಲವು ಪರ್ಯಾಯ ಪ್ರಯೋಗಗಳಿವೆ: ‘ಬುಲ್‌ ಕ್ರ್ಯಾಪ್‌’ ಎಂಬುದು ಒಂದು, ‘ಹಾರ್ಸ್‌ ಶಿಟ್‌’ ಎಂಬುದು ಮತ್ತೊಂದು. ಕೆಲವರು ಶಿಟ್‌ ಎಂಬ ಶಬ್ದವನ್ನು ಉಪಯೋಗಿಸಲು ಬಯಸದವರು ಸುಮ್ಮನೆ ‘ಬುಲ್‌’ ಎನ್ನುತ್ತಾರೆ. ಅರ್ಥ ಮಾತ್ರ ಅದೇ. ನಮ್ಮಲ್ಲಿ ಶಿವಭಕ್ತರಾದವರಿಗೆ ಶಿವನ ವಾಹನನಾದ ನಂದಿಯು ಪೂಜ್ಯನಾದುದರಿಂದ ‘ವೃಷಭ-ವಿಸರ್ಜಿತ’ ಎಂದಾಗ ಅವರಿಗೆ ಅಸಮಾಧಾನವಾಗುವುದು ಖಂಡಿತ. ಕೌಶಿಟ್‌ ಅನ್ನೋಣವೆಂದರೆ, ಹಸು ಮತ್ತು ಹಸುವಿನ ಸಗಣಿ ಸಹ ಹಿಂದೂಗಳಿಗೆ ಪೂಜ್ಯವೇ ಆಗಿರುವುದರಿಂದ ಹಸುವಿನ ಸಗಣಿ ಎಂಬ ಪದಗುಚ್ಛವೂ ಆಕ್ಷೇಪಣೀಯವೇ.

ಇತರ ಪ್ರಾಣಿಗಳು ಮತ್ತು ಅವುಗಳ ವಿಸರ್ಜಿತವನ್ನು ಪರೀಕ್ಷಿಸೋಣ. ಕನ್ನಡ ಭಾಷೆ ಇಂಗ್ಲೀಷಿಗಿಂತ ಒಂದು ದೃಷ್ಟಿಯಿಂದ ಶ್ರೀಮಂತ. ಆ ಭಾಷೆಯಲ್ಲಿ ಬೇರೆ ಬೇರೆ ಪ್ರಾಣಿಗಳ ವಿಸರ್ಜಿತ ತ್ಯಾಜ್ಯವಸ್ತುವಿಗೆ ಬೇರೆ ಬೇರೆ ಹೆಸರುಗಳಿವೆ. ಉದಾಹರಣೆಗೆ, ಆನೆ, ಕುದುರೆ ಮತ್ತು ಕತ್ತೆ ಇವುಗಳ ತ್ಯಾಜ್ಯ ವಸ್ತು ಲದ್ದಿ. ನಾಯಿ ಅಥವಾ ಬೆಕ್ಕಿನ ಅಮೇದ್ಯವನ್ನು ಲದ್ದಿ ಎನ್ನಲಾಗುವುದಿಲ್ಲ, ಸುಮ್ಮನೆ ಕಕ್ಕ ಅನ್ನಬಹುದೇನೋ? ಹುಲಿ, ಸಿಂಹ, ತೋಳ, ಜಿಂಕೆ ಮುಂತಾದ ಕಾಡುಪ್ರಾಣಿಗಳಿಗೆಲ್ಲ ಅನ್ವಯವಾಗುವ ಬೇರೆ ಬೇರೆ ಶಬ್ದಗಳು ಇದ್ದರೂ ಇರಬಹುದು. ಸಗಣಿ ಎಂಬುದು ಹಸು, ಎತ್ತು, ಗೂಳಿ, ಎಮ್ಮೆ, ಕೋಣ ಇವುಗಳಿಗೆ ಮಾತ್ರ ಅನ್ವಯ. ಕುರಿ, ಮೇಕೆ, ಠಗರು, ಹೋತ ಇವುಗಳದ್ದು ಹಿಕ್ಕೆ. ಇಂಗ್ಲೀಷಿನ ಬುಲ್‌ಶಿಟ್‌ ಶಬ್ದಕ್ಕೆ ಕನ್ನಡದಲ್ಲಿ ಸಮಾನ ಶಬ್ದವನ್ನು ಹುಡುಕುವಾಗ ಈ ಎಲ್ಲ ಮಾತಿನ ಹಿನ್ನೆಲೆಯನ್ನೂ ಗಮನದಲ್ಲಿಡಬೇಕು.

ಮತ್ತೊಂದು ಮುಖ್ಯಾಂಶವನ್ನೂ ಮರೆಯುವಂತಿಲ್ಲ. ‘ಬುಲ್‌ ಶಿಟ್‌’ ಎಂಬುದು ಸುಳ್ಳನ್ನೂ, ಅಪದ್ಧವನ್ನೂ, ಹಾಸ್ಯಾಸ್ಪದವಾದ ವಾದಸರಣಿಯನ್ನೂ ಪ್ರತಿನಿಧಿಸುತ್ತಾದ್ದರಿಂದ ಭಾರತೀಯರ ಭಕ್ತಿಗೆ ಪಾತ್ರವಾದ ಹಸು ಮತ್ತು ಈಶ್ವರನ ವಾಹನವಾದ ನಂದಿಯನ್ನು ಮುಟ್ಟುವಂತಿಲ್ಲ. ಹಾಗಾದರೆ ಕುದುರೆ? ಅದು ಆಶ್ವಮೇಧ ಯಾಗದಲ್ಲಿ ರಾಜರು ಕಟ್ಟುವ ಪ್ರಾಣಿ, ಆದ್ದರಿಂದ ಅದೂ ಸಲ್ಲ. ಇನ್ನು ಆನೆ? ಜಂಬೂಸವಾರಿಯಲ್ಲಿ ಮಹಾರಾಜರನ್ನು ಬನ್ನಿ ಮಂಟಪಕ್ಕೆ ಕರೆದೊಯ್ಯುವ ಆನೆ ಕನ್ನಡಿಗರ ದೃಷ್ಟಿಯಲ್ಲಿ ಹಾಸ್ಯಾಸ್ಪದವಾಗುವುದು ಅಸಾಧ್ಯ. ಇನ್ನು ಅಜ, ಅಂದರೆ ಮೇಕೆ, ಅದೂ ಸಹ ಯಜ್ಞ ಯಾಗಗಳಲ್ಲಿ ಬಲಿಪಶು. ಅಷ್ಟೇ ಅಲ್ಲದೇ ಕುರಿ-ಮೇಕೆ ಬಕ್ರೀದ್‌ ಹಬ್ಬದ ಬಲಿ, ಜಾತ್ಯತೀತರಾಷ್ಟ್ರದವರಾದ ಭಾರತೀಯರು ಕುರಿ-ಮೇಕೆಗಳನ್ನು ಅಲ್ಲಗಳೆದರೆ ರಂಪವಾದೀತು, ಹೀಗಾಗಿ ಅವನ್ನೂ ಮುಟ್ಟುವಂತಿಲ್ಲ. ಇನ್ನು ಹುಲಿ, ಸಿಂಹ, ಚಿರತೆಗಳನ್ನು ನೆನೆಸಿಕೊಂಡರೇ ಭಯವಾಗುವಾಗ ಅವುಗಳ ಪಿಷ್ಠೆಯನ್ನು ಅಪಹಾಸ್ಯಮಾಡಲು ಯಾರಿಗಿದೆ ಎದೆ? ಇದಕ್ಕಾಗಿಯೇ ಇರಬೇಕು, ಸಂಸ್ಕೃತದ ಸುಭಾಷಿತಕಾರ ಒಬ್ಬ ಹೇಳುತ್ತಾನೆ:

ಅಶ್ವಂ ನೈವ, ಗಜಂ ನೈವ, ವ್ಯಾಘ್ರಂ ನೈವ ಚ ನೈವ ಚ

ಅಜಾ ಪುತ್ರಂ ಬಲಿಂ ದಧ್ಯಾತ್‌, ದೈವೋ ದುರ್ಬಲ ಘಾತುಕಃ

ಅಂದರೆ, ಕುದುರೆ ಆನೆಗಳನ್ನು ಯಾರೂ ಬಲಿಕೊಡುವುದಿಲ್ಲ, ಹುಲಿಯ ತಂಟೆಗಂತೂ ಯಾರೂ ಹೋಗುವುದಿಲ್ಲ, ಬಲಿಗೆ ಮನುಷ್ಯ ಹುಡುಕುವ ಪ್ರಾಣಿ ಯಾವುದು? ಆ ಪಾಪದ ಕುರಿ ಮರಿ! ದೇವರೂ ದುರ್ಬಲರನ್ನೇ ಬಲಿಯಾಗಿ ಪಡೆದುಕೊಳ್ಳುತ್ತಾನೆ ಎಂದು ಉದ್ಗಾರ ತೆಗೆಯುತ್ತಾನೆ, ಕವಿ.

ಹಾಗಾದರೆ ಬುಲ್‌ಶಿಟ್‌ಗೆ ತತ್ಸಮಾನ ಪದಗುಚ್ಛ? ‘ಗೂಳಿ ಸಗಣಿ’ ಆಗಬಹುದೇ? ಆದರೂ ಆಗಬಹುದು. ಆದರೆ, ಅದು ಆಕರ್ಷಕ ತತ್ಸಮಾನವೆಂದು ಕಂಡುಬಂದರೂ, ಸಾರಿಸಲು ಉಪಯೋಗಿಸುವ ಸಗಣಿ ಸಹ ಪವಿತ್ರವೇ ಅಂದಮೇಲೆ, ಅದನ್ನೂ ಪರಿಗಣಿಸಲು ಸಾಧ್ಯವಿಲ್ಲ. ಆದರೆ ‘ಗೂಳಿ ತೊಪ್ಪೆ’ ಎಂಬ ಗುಚ್ಛದಲ್ಲಿ ಒಂದಷ್ಟು ಸಾರ್ಥಕ್ಯವನ್ನು ಕಾಣಬಹುದಾಗಿದೆ. ಗೂಳಿ ಎಂಬುದು ನಂದಿಯ ಅಪರಾವತಾರವೇ ಆದರೂ, ನಂದಿ ಎನ್ನುವಾಗಿನ ಭಕ್ತಿಭಾವವಾಗಲೀ, ಅಥವಾ ಬಸವಣ್ಣ ಎನ್ನುವಾಗಿನ ಪ್ರೀತಿಭಾವವಾಗಲೀ ಅದಕ್ಕಿಲ್ಲ. ಆದ್ದರಿಂದ ಅದನ್ನು ಉಪಯೋಗಿಸಲು ಅಡ್ಡಿಯಿಲ್ಲ. ಅದು ಒಳ್ಳೆಯ ಅನುವಾದವೂ ಹೌದು. ಅದೂ ಅಲ್ಲದೇ ಸಗಣಿಯ ಪಾವಿತ್ರ್ಯಕ್ಕೆ ಧಕ್ಕೆ ಬಾರದಂತೆ ‘ತೊಪ್ಪೆ’ ಎಂಬ ಶಬ್ದದ ಉಪಯೋಗ ಬುದ್ಧಿವಂತಿಕೆಯ ಪ್ರತೀಕವಾಗುತ್ತದೆ. ಆದ್ದರಿಂದ ‘ಗೂಳೀತೊಪ್ಪೆ’ ಎಲ್ಲರಿಗೂ ಒಪ್ಪಿಗೆಯಾಗಬಹುದೇ?

ಪ್ರಾಯಶಃ ಇದರಲ್ಲೂ ತೊಂದರೆ ಉಂಟು. ಗೂಳಿ ಎಂಬುದು ಶಕ್ತಿಯ ಪ್ರತೀಕ, ಒಂದಷ್ಟು ದರ್ಪ, ಅಹಂಕಾರ ಮತ್ತು ನಿಷ್ಕಾರಣವಾಗಿ ಗುಮ್ಮಲು ಬರುವ ಚಿತ್ರ ಮನಸ್ಸಿಗೆ ಬಂದು ತೊಪ್ಪೆ ಎಂಬ ಸುಂದರವೂ ಅತಿ ಆಪ್ಯಾಯಮಾನವೂ ಆದ ಶಬ್ದ ಕೂಡ ಗೂಳಿಯ ಸಹವಾಸದಿಂದ ತನ್ನ ಸಹಜ-ಶಬ್ದ-ಸೌಂದರ್ಯವನ್ನು ಕಳೆದುಕೊಳ್ಳುತ್ತದೆ. ಅಂತೂ, ಹಸು, ಗೂಳಿ, ಆನೆ, ಕುದುರೆ, ಕುರಿ, ಮೇಕೆ, ಹುಲಿ, ಸಿಂಹ ಮುಂತಾದವೆಲ್ಲ ಕೈಬಿಡಲ್ಪಡಬೇಕಾದವು ಎಂದು ಖಚಿತ ಪಡಿಸಿಕೊಂಡಂತಾಯಿತು.

ಇನ್ನು ನಮ್ಮ ಪಾಲಿಗೆ ಉಳಿದಿರುವುದು ಎಮ್ಮೆ, ಕೋಣ ಮತ್ತು ಕತ್ತೆ. ಕೋಣ ಎಂಬುದು ದಡ್ಡತನದ ಪ್ರತಿನಿಧಿ ಎನಿಸಿದರೂ ಮಾರಿಗೆ ಪ್ರಿಯವಾದ ಬಲಿ ಆಗಿರುವುದರಿಂದ ಮತ್ತು ‘ಮಾರಿ’ ಕತ್ತು ಮುರಿಯುವ ಕ್ಷುದ್ರದೇವತೆಯಾದ್ದರಿಂದ ಅವಳ ತಂಟೆಗೆ ಹೋಗದಿರುವುದೇ ಲೇಸು. ಹಾಗಾದರೆ ಬುಲ್‌ಶಿಟ್‌ಗೆ ತತ್ಸಮ, ‘ಮಹಿಷ ವಿಸರ್ಜಿತ’ ವೆಂಬ ಸೂಕ್ತವೆಂದು ಕಾಣಿಸುವ ಗುಚ್ಛವೂ ವರ್ಜ್ಯ ಎಂದಂತಾಯಿತು. ಮಹಿಷನನ್ನು ಬಿಟ್ಟರೆ ಮಹಿಷಿ ಆಗಬಹುದೆ? ಅಪ್ಪಟ ಕನ್ನಡದ ‘ಎಮ್ಮೆ ಸಗಣಿ’ ಎಂಬುದು ಒಂದು ಒಳ್ಳೇ ಕ್ಯಾಂಡಿಡೇಟ್‌ ಆಗಬಹುದು ಎಂದು ಉತ್ತೇಜಿತರಾಗುವ ಮೊದಲು ಹಿಂದೆ ಮಂಡಿಸಿದ ವಾದಸರಣಿಯನ್ನು ಮರೆಯದೇ ಜ್ಞಾಪಿಸಿಕೊಳ್ಳಿ. ಸಗಣಿ ಪೂಜ್ಯ, ಆದ್ದರಿಂದ ಬಿಡಿ ಅದರ ತಂಟೆ.

ಕೊನೆಗೆ ಉಳಿಯುವ ‘ಕತ್ತೆ ಲದ್ದಿ’ ಹೆಚ್ಚು ಹೆಚ್ಚು ಆಶಾದಾಯಕ ಎನಿಸಲಾರಂಭಿಸುತ್ತದೆ. ನಿಜಕ್ಕೂ ಕತ್ತೆ ನಮ್ಮಲ್ಲಿ ಅಪಹಾಸ್ಯಕ್ಕೆ ಗುರಿಯಾಗುವ ಪ್ರಾಣಿ. ಈ ಅಗಸನ ಬಂಧು ಕಷ್ಟ ಪಟ್ಟಷ್ಟೂ ಮತ್ತಷ್ಟು ಭಾರ ಹೊರುತ್ತಾ ಯಾರ ಮೆಚ್ಚುಗೆಯೂ ಇಲ್ಲದೇ ದೈನ್ಯದಿಂದ ಜೀವನ ನಡೆಸಿ ಕಣ್ಮುಚ್ಚುವ ಬಡಪ್ರಾಣಿ. ನಾವು ಬುಲ್‌ಶಿಟ್‌ ಎನ್ನಬೇಕಾದಾಗೆಲ್ಲ ಕತ್ತೆ ಲದ್ದಿ ಎಂಬ ಪ್ರಯೋಗವನ್ನು ಮಾಡುವುದೇ ಸೂಕ್ತವೆನಿಸುತ್ತದೆ. ‘ವೃಷಭ’ ‘ಮಹಿಷ’ ‘ವಿಸರ್ಜಿತ’ ಇವೆಲ್ಲ ದೇವಭಾಷೆಯಾದ ಸಂಸ್ಕೃತ ಶಬ್ದಗಳಾದ್ದರಿಂದ, ಮಡಿವಂತರಿಗೆ ಮನನೋಯಿಸುವ ಪ್ರಸಂಗ ಬರಬಹುದು. ಇವೆಲ್ಲ ಕಾರಣಗಳಿಂದ ಕತ್ತೆ ಲದ್ದಿಗೇ ಶರಣಾಗೋಣ. ಕತ್ತೆಯ ಪರ ವಾದಿಸುವ (ದಡ್ಡ) ವಕೀಲರು ಯಾರೂ ಇರಲಾರರು ಎಂದೇ ನನ್ನ ನಂಬಿಕೆ. (ಆಫಿ‚ೕಸಿನಲ್ಲಿ ಕತ್ತೆಯಂತೆ ದುಡಿಯುವ ದಡ್ಡರಿಗೆ ಪ್ರಮೋಷನ್‌ ಆಗಲೀ ಬಡ್ತಿಯಾಗಲೀ ಪ್ರಶಸ್ತಿಯಾಗಲೀ ದೊರೆತಿದ್ದನ್ನು ನೀವ್ಯಾರಾದರೂ ನೋಡಿದ್ದರೆ ತಿಳಿಸಿ, ಮತ್ತೆ.)

ನಮ್ಮ ಹೊಸ ಶಬ್ದಗುಚ್ಛಕ್ಕೆ ಮತ್ತೊಂದು ಪೋಷಣೆ ಎಂದರೆ, ತಲೆ ಖಾಲಿ ಇರುವವರ ಬಗ್ಗೆ ಮಾತನಾಡುವಾಗ, ನಾವೇನೆನ್ನುತ್ತೇವೆ? ತಲೆಯಲ್ಲಿ ಲದ್ದಿ ತುಂಬಿಕೊಂಡಿದ್ದೀಯೋ ಹೇಗೆ? ಎಂದು ಕೇಳುವುದಿಲ್ಲವೇ? ದಡ್ಡರನ್ನು ಬಯ್ಯುವಾಗ ‘ಕತ್ತೆ ಮುಂಡೇದೆ’ ಅನ್ನುವುದು ರೂಢಿ. ಒಟ್ಟಿನಲ್ಲಿ ಭಾಷಾಶಾಸ್ತ್ರಜ್ಞರೂ ಒಪ್ಪುವಷ್ಟು ಪೋಷಣೆ ನಮ್ಮ ಪ್ರಯೋಗಕ್ಕೆ ಸಿಕ್ಕಿದಂತಾಯಿತು. ಇನ್ನು ಮುಂದೆ ಕನ್ನಡದಲ್ಲಿ ಮಾತಾಡುವಾಗ ಅದೆಷ್ಟೇ ಅಪರೂಪವಾಗಿರವಲ್ದ್‌-ಯಾಕೆ? ಬುಲ್‌ಶಿಟ್‌ ಅನ್ನಬೇಕಾದ ಪ್ರಸಂಗಗಳಲ್ಲೆಲ್ಲ ‘ಕತ್ತೆ ಲದ್ದಿ’ ಅನ್ನೋಣ ಎಂಬ ಸಲಹೆಯೊಂದಿಗೆ ವಿರಮಿಸುವೆ ಮುಂದಿನ ಕಂತಿನವರೆಗೆ.

ಪಿ.ಎಸ್‌ : ಆ ನನ್ನ ಅಮೇರಿಕನ್‌ ವಿದ್ಯಾರ್ಥಿಗೆ ನಾನು ಬುಲ್‌ಶಿಟ್‌ ಬದಲು ಕತ್ತೆ ಲದ್ದಿ ಎಂದಿದ್ದರೆ ಎಷ್ಟೊಂದು ಮೋಜಿರುತ್ತಿತ್ತು? ನನ್ನ ಮಾತು ಅವನಿಗೆ ಅರ್ಥವಾಗುತ್ತಿರಲಿಲ್ಲ, ಅವನಿಗೆ ಅಸಮಾಧಾನವೂ ಆಗುತ್ತಿರಲಿಲ್ಲ. ಬಹುಶಃ, ಕತ್ತೆ ಲದ್ದಿ ಎಂಬ ಪ್ರಯೋಗ ಅಮೆರಿಕನ್‌ ವೊಕ್ಯಾಬುಲೆರಿಯಲ್ಲಿ ಈ ವೇಳೆಗೆ ಸೇರಿಹೋಗುತ್ತಿತ್ತೇನೋ! ಓದುಗ ಮಹಾಶಯರೇ ನೀವೇನೆನ್ನುವಿರಿ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bullshit can be used in a deprecating sense! How to Choose the write word to snub! A commentary on bio-shit by a scientist busy researching about nuclear waste, M.S. Nataraj.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more