• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ನೋಡಲಾರೆ ನಾ ಕನ್ನಡ ಚಿತ್ರ’

By Staff
|
Dr.M.S.Nataraj ಡಾ. ಮೈ.ಶ್ರೀ. ನಟರಾಜ

ಪೊಟೊಮೆಕ್‌, ಮೇರೀಲ್ಯಾಂಡ್‌

Mysreena@aol.com

ಅಮೆರಿಕದಲ್ಲಿನ ಕನ್ನಡಿಗರಿಗೆ ಚಿತ್ರಮಂದಿರದ ದೊಡ್ಡ ಪರದೆಯ ಮೇಲೆ ಕನ್ನಡಚಿತ್ರವನ್ನು ನೋಡುವ ಅವಕಾಶ ಅಷ್ಟೇನು ಸಿಗುವುದಿಲ್ಲ. ಕಾರಣ, ಕನ್ನಡ ಚಿತ್ರಗಳನ್ನು ತರಿಸಿ ಪ್ರದರ್ಶಿಸಿ ಉದ್ಧಾರವಾದ ವ್ಯಾಪಾರಿಗಳು ಯಾರೂ ಇದ್ದಂತಿಲ್ಲ. ಯಾರೋ ಒಬ್ಬಿಬ್ಬರು ಅಭಿಮಾನದಿಂದ ಅಥವಾ ತಪ್ಪು ಲೆಕ್ಕಾಚಾರದಿಂದ ಮುಂದೆ ಬಂದವರು ಕೈಸುಟ್ಟುಕೊಂಡಿದ್ದಾರೆ(ಅಮೆರಿಕನ್ನಡದಲ್ಲಿ ಹೇಳುವುದಾದರೆ, ತಮ್ಮ ಷರಟು ಕಳೆದುಕೊಂಡಿದ್ದಾರೆ). ಕನ್ನಡಿಗರು ನಿರಭಿಮಾನಿಗಳು ಎನ್ನುವಿರೋ? ಹಾಗಾದರೆ ಇವರು ಚಿತ್ರಗಳನ್ನೇ ನೋಡುವುದಿಲ್ಲವೆ? ನೋಡುತ್ತಾರೆ. ಇವರಲ್ಲನೇಕ ರು ಮನೆಯಲ್ಲೂ ಮತ್ತು ಚಿತ್ರಮಂದಿರಗಳಲ್ಲೂ ಇತರಭಾಷೆಗಳ ಚಿತ್ರಗಳನ್ನು ತಪ್ಪದೇ ನೋಡುತ್ತಾರೆ.

‘ಏಕೆ ಸ್ವಾಮೀ ಹೀಗೆ’ ಎಂದರೆ, ‘ಕನ್ನಡದಲ್ಲಿ ಒಳ್ಳೆ ಚಿತ್ರಗಳಿಲ್ಲವಲ್ಲ, ಏನು ಮಾಡೋದು?’ ಎನ್ನುತ್ತಾರೆ. ಫೆಬ್ರವರಿ 20ರಂದು ಕಾವೇರಿ ಕನ್ನಡ ಸಂಘದವರು ‘ತುಂಟಾಟ’ ಎಂಬ ಚಿತ್ರವನ್ನು ಪ್ರದರ್ಶಿಸಿದರು. ನಾನು ನನ್ನ ಮಗಳೊಂದಿಗೆ ಹೋಗಿ ಚಿತ್ರವನ್ನು ನೋಡಿಬಂದೆ. ನಲವತ್ತೆೈವತ್ತು ಜನಗಳೂ ಇದ್ದಂತಿರಲಿಲ್ಲ. ಅಧ್ಯಕ್ಷರು ನಿರಾಸೆಯಿಂದ ಇನ್ನು ಮುಂದೆ ಕನ್ನಡ ಚಿತ್ರಗಳನ್ನು ಪ್ರದರ್ಶಿಸಬೇಕೋ ಬೇಡವೋ ಎಂಬ ನಿರ್ಧಾರವನ್ನು ಕುರಿತು ಮಾತಾಡುತ್ತಿದ್ದರು. ಖರ್ಚೂ ಹುಟ್ಟದಿದ್ದರೆ ಹೇಗೆ ಎಂದು ಕಾರ್ಯಕಾರಿ ಸಮಿತಿಯವರು ನೊಂದುಕೊಳ್ಳುತ್ತಿದ್ದರು.

A still from Tuntataಸರಿ ‘ತುಂಟಾಟ’ ಶುರುವಾಯಿತು. ಶುರುವಾದ ಕೆಲವೇ ನಿಮಿಷಗಳಲ್ಲಿ, ಇದೆಂಥ ಚಿತ್ರ, ಇದನ್ನು ನೋಡಿದರೇನು ಬಿಟ್ಟರೇನು ಎಂಬ ಭಾವನೆ ಬರಲಾರಂಭಿಸಿ ಸ್ವಲ್ಪ ಬೇಸರವಾಯಿತು. ಚಿತ್ರದ ಮಧ್ಯಂತರದಲ್ಲಿ ಅಲ್ಲಿಯವರೆಗೂ ನಡೆದ ಕಥೆಯನ್ನುದ್ದೇಶಿಸಿ, ನನ್ನ ಮಗಳು no wonder, people in India think we are retarded ಅಂದಳು(ಇಲ್ಲಿಂದ, ಅಂದರೆ ಅಮೇರಿಕದಿಂದ ಹೋದ ಹುಡುಗಿಯಾಬ್ಬಳು ಈ ಚಿತ್ರದ ಕಥಾನಾಯಕಿ ಎಂದು ತಿಳಿಸದಿದ್ದರೆ ಅವಳ ಪ್ರಶ್ನೆಯ ತಲೆ-ಬುಡ ನಿಮಗೆ ಕಾಣಿಸದೇ ಹೋಗಬಹುದು).

ಚಿತ್ರ ಮುಗಿದ ಮೇಲೆ give me one good reason why we should waste four hours on a Sunday afternoon on a movie like this? ಎಂಬ ನನ್ನ ಮಗಳ ಸವಾಲನ್ನು ಎದುರಿಸ ಬೇಕಾಯಿತು. ನಿಜ, ಸರಾಸರಿ ಒಂದು ಅಥವಾ ಒಂದೂವರೆ ಗಂಟೆ ಕಾರ್‌ಯಾನ, ಮತ್ತು ಎರಡು-ಎರಡೂವರೆ ಘಂಟೆಯ ಚಿತ್ರ ಅಂದುಕೊಂಡರೂ ಇಡೀ ಮಧಾಹ್ನ ಫಟ್‌. ಸವಾಲಿಗೆ ತಕ್ಷಣ ಜವಾಬು ಹೊಳೆಯಲಿಲ್ಲ. ನಿಜವಾಗಿ ಮೆಚ್ಚುವಂಥ ಒಂದಂಶವಾದರೂ ಆ ಚಿತ್ರದಲ್ಲಿತ್ತೆ ಎಂದು ಎಷ್ಟು ಯೋಚಿಸಿದರೂ ಹೊಳೆಯಲೇ ಇಲ್ಲ. ಚಿತ್ರಮಂದಿರವನ್ನು ಬಿಟ್ಟ ಮರುಗಳಿಗೆಯೇ ಅಲ್ಲಿ ನೋಡಿದ್ದೆಲ್ಲ ಮರೆತು ಹೋಗುವಷ್ಟು ಪ್ರಭಾವರಹಿತ ಚಿತ್ರವದು ಎನಿಸಿತ್ತು.

ಅಲ್ಲಿನ ಪಾತ್ರಗಳು ಕನ್ನಡನಾಡಿನ ಪಾತ್ರಗಳಂತೆ ಕಾಣಲಿಲ್ಲ. ಕನ್ನಡಿಗರ ಪಾತ್ರಗಳನ್ನು ಕನ್ನಡಿಗರು ನೋಡಲು ಇಷ್ಟಪಡು ವುದಿಲ್ಲವೋ ಏನೋ ಯಾರಿಗೆ ಗೊತ್ತು ? ಅವರು ಧರಿಸಿದ ಬಟ್ಟೆಗಳೂ ಅಲ್ಲಿನವಲ್ಲ. ಬೆಂಗಳೂರಿನ ಮಧ್ಯೆ ಯಾವುದೋ ಪಾಶ್ಚಿಮಾತ್ಯವೆನಿಸುವ ಊಹಾನಗರಿಯಲ್ಲಿ ನಡೆಯುವ ಕಥೆ ಎನಿಸುತ್ತದೆ. ‘ಕಥೆ’ ಎನ್ನೋಣವೆಂದರೆ ಅಲ್ಲಿ ಯಾವ ಕಥೆಯೂ ಇರಲಿಲ್ಲ. ಅದೇ ಮುಗ್ಗಲು ಪ್ರೇಮ-ತ್ರಿಕೋಣ. ಅಮೆರಿಕದಲ್ಲಿ ಬೆಳೆದು ಬಂದ ಹದಿಹರೆಯದ ಹುಡುಗಿಯಾಬ್ಬಳು ಇದ್ದಕ್ಕಿದ್ದಂತೆ ಬೆಂಗಳೂರಿನ ಕಾಲೇಜಿಗೆ ಸೇರಿ ಇಬ್ಬರು ಯುವ ಸ್ನೇಹಿಗಳ ಮಧ್ಯೆ ನುಸುಳುತ್ತಾಳೆ. ಹಿಂದಿನ ಕೆಲವು ಚಿತ್ರಗಳಲ್ಲಿ ಕನ್ನಡದ ಹುಡುಗ ಅಥವಾ ಹುಡುಗಿ ಇದ್ದಕ್ಕಿದ್ದಂತೆ ಅಮೇರಿಕೆಯಲ್ಲೋ ಫ್ರಾನ್ಸಿನಲ್ಲೋ ಬಂದಿಳಿದು ನಡೆಸಿದ ರಂಪವನ್ನೇ ತಿರುಗು-ಮುರುಗು ಮಾಡಿಬಿಟ್ಟರೆ ತುಂಟಾಟದ ಕಥೆಯಾಗುತ್ತದೆ, ಎಂದರೂ ಉತ್ಪ್ರೇಕ್ಷೆಯಲ್ಲ! ಆದರೆ ನಿಜವಾದ ಮಜ ಸಿಗುವುದು, ಅವಳು ಕನ್ನಡದಲ್ಲಿ ಎಲ್ಲರಿಗಿಂತ ಹೆಚ್ಚು ಅಂಕಗಳನ್ನು ತೆಗೆದಾಗ! ಅಷ್ಟೇ ಅಲ್ಲ, ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ ಎಂದು ಸವಾಲು ಹಾಕುತ್ತಾಳೆ. ತುಟಿಯನ್ನು ಕೊಂಕಿಸಿ ಪ್ರೇಕ್ಷಕರನ್ನು ಪ್ರಚೋದಿಸಲು ಯತ್ನಿಸುವ ಈ ಬೆಡಗಿ ಉಡುವ ವಸ್ತ್ರಗಳಂಥ ನಾಚಿಕೆಗೇಡಿನ ತುಂಡು ಸ್ಕರ್ಟ್‌ಗಳನ್ನು ಅಮೆರಿಕದಲ್ಲಿ ಹುಟ್ಟಿ ಬೆಳೆದ ನಮ್ಮ ಹೆಣ್ಣು ಮಕ್ಕಳು ಉಟ್ಟರೆ ಅವನ್ನು slut ಧರಿಸುವ ಬಟ್ಟೆ ಅನ್ನುತ್ತಾರೆ.

ಮಿತಿಮೀರಿದ ಅಂಗಾಂಗ ಪ್ರದರ್ಶನ, ಕತ್ತು ಸೊಂಟ ಉಳುಕುವಂಥ ಹುಚ್ಚು ಕುಣಿತ, ಪೌರ್ವಾತ್ಯವೂ ಅಲ್ಲದ ಪಾಶ್ಚಿಮಾತ್ಯವೂ ಅಲ್ಲದ ಅಸಹ್ಯ ಸಂಗೀತ, ಅನೈಜಕತೆಯ ಪ್ರತೀಕವೋ ಎಂಬಂಥ ಸಂದರ್ಭಗಳನ್ನು ಜೋಡಿಸಿದ್ದಾರೆ. ಈ ಚಿತ್ರದಲ್ಲಿ ಮನರಂಜನೆಯಾದರು ಇದೆಯೇ ಎಂದು ಹುಡುಕಿದರೂ ಯಾವ ಮನರಂಜನೆಯೂ ಕಾಣಸಿಗಲಿಲ್ಲ. ಅಲ್ಲಿ ತೋರಿಸುವ ವಿದ್ಯಾರ್ಥಿಜೀವನದ ತುಣುಕುಗಳು ವಾಸ್ತವ ಪರಿಸ್ಥಿತಿಯನ್ನು ಪ್ರತಿನಿಧಿಸಿದ್ದೆ ಆದಲ್ಲಿ ಭಾರತ ಮುಳುಗಿಹೋಗುವುದರಲ್ಲಿ ಸಂಶಯವಿಲ್ಲ. ಸವೆದು ಸವೆದು ಸಾಕಾದ ಪ್ರೇಮ-ತ್ರಿಕೋಣದ ಸಮಸ್ಯೆಯನ್ನು ಬಗೆಹರಿಸುವ ರೀತಿಯೂ ಸವಕಲೇ. ಅದೇ ಅಪಘಾತ, ಅದೇ ಆಸ್ಪತ್ರೆದೃಶ್ಯ. (ನಾಯಕಿಗೆ ಬೇಕಾದ ರಕ್ತವನ್ನು ಆಸ್ಪತ್ರೆ ಹೊಂದಿಸುವುದಿರಲಿ, ನಾಯಕ ಹಳದೀ ಪುಟಗಳನ್ನು ತಿರುವುತ್ತ ರಕ್ತಕ್ಕಾಗಿ ಅಲೆಯುವ ಪರಿಸ್ಥಿತಿ ಎಷ್ಟು ಶೋಚನೀಯ!)

ಇನ್ನು ಚಿತ್ರದಲ್ಲಿ ಬಳಸಿರುವ ಹಾಸ್ಯವಾದರೂ ಎಂಥದು? ನಾಯಿಗೆ ವಯಾಗ್ರ ತಿನ್ನಿಸುವ ದೃಶ್ಯ ಇಲ್ಲಿನ ಹಾಸ್ಯದ ದೊಡ್ಡ ಉದಾಹರಣೆ. ಸದ್ಯ ಮನುಷ್ಯನಿಗೇ ಕೊಟ್ಟು ಪರಿಣಾಮವನ್ನು ತೋರಿಸಲಿಲ್ಲ, ಅದೇ ನಮ್ಮ ಪುಣ್ಯ. ಇನ್ನು ನಾಯಕಿಯ ತಾಯಿ ಅನ್ನಿಸಿಕೊಳ್ಳುವ ಅಮೆರಿಕನ್ನಡತಿ (ಕರ್ಣಾಟಕದಲ್ಲಿ ಜನಿಸಿ ವಯಸ್ಕಳಾಗಿ ಅಮೇರಿಕೆಗೆ ಬಂದಾಕೆ ಕನ್ನಡವನ್ನು ಮಾತಾಡುವ ರೀತಿ ಯಾವ ಸೀಮೆಯಿಂದ ಬಂದದ್ದೋ ಆ ಭಗವಂತನಿಗೇ ಗೊತ್ತು. ಅಮೇರಿಕದ ಕನ್ನಡಿಗರು ಈ ರೀತಿ ಕನ್ನಡ ಮಾತಾಡುತ್ತಾರೆ ಎಂಬ ಭ್ರಮೆ ನಿರ್ದೇಶಕರಿಗೆ ಹೇಗೆ ಉಂಟಾಯಿತೋ ಕಾಣೆ. ವಿಚಿತ್ರವೆಂದರೆ, ಅವಳ ಮಗಳು ಅಮೆರಿಕದಲ್ಲಿ ಇಂಗ್ಲಿಷ್‌ ಭಾಷೆಯಲ್ಲಿ ವಿದ್ಯೆಪಡೆದವಳು, ಶುದ್ಧವಾಗಿ ಕನ್ನಡ ಮಾತಾಡುತ್ತಾಳೆ!).

ಕಾಲೇಜಿನ ಪ್ರಿನ್ಸಿಪಾಲ ಮೆಣಸಿನಕಾಯಿಗೂ ಗೂಂಡಾ ಮುತ್ತಪ್ಪ ರೈಗೂ ಏನು ಸಂಬಂಧ? ಅವನು ಹೆದರಿ ಹತ್ತು ಲಕ್ಷ ಹಣ ಕೊಡಲು ಕಾರಣವೇನು? ಇರಲಿ, ಚಲನಚಿತ್ರ ಸಕಾರಣವಾಗಿರಬೇಂಬ ನಿಯಮ ಎಲ್ಲುಂಟು? ಬಣ್ಣಬಣ್ಣದ ಬಟ್ಟೆಗಳನ್ನು ತೊಟ್ಟು, ಕುಣಿದು ಮೈಕೈ ಮುರಿದುಕೊಳ್ಳುವ ಎಕ್ಸ್‌ಟ್ರಾಗಳನ್ನು ನೆನೆಸಿಕೊಂಡರೆ ದುಃಖವಾಗುತ್ತದೆ. ಪಾಪ ಹಿಂಬದಿಯಲ್ಲಿ ಕುಣಿಯುವ ಅವರ ಮುಖಗಳು ಯಾರಿಗೂ ಕಾಣುವುದಿಲ್ಲ. ಕಂಡ ಮುಖಗಳು ಬೇಕೆಂತಲೇ ಆಯ್ದುಕೊಂಡ ಕೆಟ್ಟ ಮುಖಗಳು, ಏಕೆಂದರೆ ಹೋಲಿಕೆಯ ದೃಷ್ಟಿಯಲ್ಲಿ ನಾಯಕ ನಾಯಕಿ ಅವರಿಗಿಂತ ಉತ್ತಮರಾಗಿರಬೇಕಲ್ಲ! ಹೊಕ್ಕಳನ್ನೂ ತೊಡೆಗಳನ್ನು ಅಮೋಘವಾಗಿ ಪ್ರದರ್ಶಿಸುತ್ತ , ವಲ್ಗರ್‌ಅನ್ನಿಸುವ ಅಂಗ ಚಲನೆಗಳನ್ನು ಮಾಡುತ್ತ ಜೀವ ಸವೆಸುವ ಈ ನರ್ತಕ/ನರ್ತಕಿಯರಿಗೆ ಕೆಲವೇ ವರ್ಷಗಳಲ್ಲಿ ಮೂಳೆಗಳ ಮಣಿಕಟ್ಟುಗಳಿಗೆ ಸಂಬಂಧಪಟ್ಟ ಹೊಸ ಹೊಸ ಜಾಡ್ಯಗಳು ಬರುವುದಂತೂ ಖಂಡಿತ (ಆಸ್ಥಿಯೋಡಿಸ್ಕೋಸಿಸ್‌? ಅಂಗಾಂಗಭಂಗಶೂಲೆ?).

ನಾವು ಚಿಕ್ಕವರಾಗಿದ್ದಾಗ ನೋಡಿದ ಅನೇಕ ಚಿತ್ರಗಳು ಈಗಲೂ ಕಣ್ಣಿಗೆ ಕಟ್ಟಿದಂತೆ ನೆನಪಿನಲ್ಲಿ ಅಚ್ಚಾಗಿ ಉಳಿದಿವೆ. ಪಾತ್ರಧಾರಿಗಳ ಹೆಸರುಗಳೂ, ಚಿತ್ರದ ಹಾಡುಗಳು ಮುಂತಾದವೆಲ್ಲ ನೆನಪಿನಲ್ಲಿವೆ. ಆದರೆ ಇತ್ತೀಚೆಗೆ ನೋಡಿದ ಚಿತ್ರಗಳ ಕಥೆಗಳಾಗಲೀ, ಹಾಡುಗಳಾಗಲಿ, ನಟ-ನಟಿಯರಾಗಲೀ ನೆನಪಿಲ್ಲ. ಕಾರಣ ವಯಸ್ಸು ಮಾತ್ರವೇ ಅಥವಾ ನೆನಪಿನಲ್ಲಿಟ್ಟುಕೊಳ್ಳುವಂಥ ಅಂಶಗಳು ಈ ಚಿತ್ರಗಳಲ್ಲಿಲ್ಲವೇ? ಹೌದು, ಇತ್ತೀಚಿನ ಚಿತ್ರಗಳಲ್ಲಿ ಛಾಯಾಗ್ರಹಣ ಮತ್ತು ಧ್ವನಿ ಮುಂತಾದ ತಾಂತ್ರಿಕ ಗುಣಗಳು ಹಿಂದಿಗಿಂತ ಉತ್ತಮವಾಗಿವೆ ಎಂಬ ವಿಚಾರದಲ್ಲಿ ಯಾವ ಸಂಶಯವೂ ಇಲ್ಲ. ನಾಯಕ-ನಾಯಕಿಯರಲ್ಲಿ ಕನ್ನಡ ಬಾರದವರೇ ಅನೇಕರು ಇರುವುದರಿಂದ. ಮತ್ಯಾರೋ ಮಾತಾಡಿ ಧ್ವನಿಮುದ್ರಣ ಮಾಡಿರುತ್ತಾರೆ. ಆದ್ದರಿಂದ ಎಲ್ಲ ಸ್ಪಷ್ಟವಾಗಿ ಕೇಳುತ್ತದೆ. ಆದರೂ, ಎಲ್ಲಾ ನಾಯಕಿಯರ ಕಂಠಧ್ವನಿಯೂ ಒಂದೇ ಎನ್ನಿಸಿ ಬಿಡುತ್ತೆ!

ಮನೆಗೆ ಹಿಂದಿರುಗುವಾಗ, ನನ್ನ ಮಗಳ ಸವಾಲಿಗೆ ನನಗೆ ಹೊಳೆದ ಉತ್ತರ ಹೀಗಿತ್ತು: ‘ನನಗೆ ಕಾವೇರಿಯ ಸಂಕ್ರಾಂತಿ ಕಾರ್ಯಕ್ರಮದಂದು ಲಕ್ಕಿ ಡಿಪ್‌ನಲ್ಲಿ ಎರಡು ಪುಕ್ಕಟ್ಟೆ ಟಿಕೆಟ್‌ಗಳು ಸಿಕ್ಕಿದ್ದನ್ನು ಉಪಯೋಗಿಸಿಕೊಳ್ಳದಿದ್ದರೆ ಅದು ದಂಡವಾಗುತ್ತಿತ್ತಲ್ಲ, ಆದ್ದರಿಂದ ಬಂದದ್ದೇ ಸರಿ’ ಎಂಬುದು ನನ್ನ ಸಮಾಧಾನವಾಗಿತ್ತು.

ಅದಕ್ಕೆ ಪ್ರತಿಯಾಗಿ, ’ಇಂಥ ಚಿತ್ರಗಳೇ ಕನ್ನಡದಲ್ಲಿ ಮುಂದುವರೆದರೆ, ಬಿಟ್ಟಿ ಟಿಕೆಟ್‌ ಕೊಟ್ಟರೂ ಸರಿ ಅದರ ಜೊತೆಗೆ ಅವರೇ ಒಂದಿಷ್ಟು ದಕ್ಷಿಣೆಯನ್ನು ಕೊಟ್ಟರೂ ಸರಿ, ಭಾನುವಾರದ ಮಧ್ಯಾಹ್ನದ ನಾಲ್ಕು ಗಂಟೆ ಗಳಿಗೆ ಅದು ಸಾಟಿಯಲ್ಲ’ ಎಂಬುದು ನನ್ನ ಮಗಳ ವಾದದ ಹುರುಳಾಗಿತ್ತು. ಈ ರಹಸ್ಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾ ವಿರಮಿಸುವೆ ಮುಂದಿನ ಕಂತಿನವರೆಗೆ.

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more