• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾಸ್ತಿಯವರ ಸಣ್ಣ ಕತೆಗಳಲ್ಲಿ ಪಾತ್ರವೈವಿಧ್ಯತೆ : ಒಂದು ಇಣುಕುನೋಟ

By Staff
|
Dr.M.S.Nataraj ಡಾ. ಮೈ.ಶ್ರೀ. ನಟರಾಜ

ಪೊಟೊಮೆಕ್‌, ಮೇರೀಲ್ಯಾಂಡ್‌

Mysreena@aol.com

ಜ್ಞಾನಪೀಠ ಪ್ರಶಸ್ತಿಯು ಭಾರತೀಯ ಸಾಹಿತ್ಯಪ್ರಪಂಚದ ಅತ್ಯುನ್ನತ ಗೌರವದ ಕುರುಹು. ಅಂಥ ಪ್ರಶಸ್ತಿಯನ್ನು ಪಡೆದ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅವರ ಬಗ್ಗೆ ಮಾತನಾಡುವುದೇ ಒಂದು ಹೆಮ್ಮೆಯ ವಿಷಯ.

‘ಆಧುನಿಕ ಕನ್ನಡ ಸಣ್ಣಕತೆಗಳ ಜನಕ’ ಎಂಬ ಬಿರುದುಗಳನ್ನು ಪಡೆದ ಈ ಮಹಾನುಭಾವರ ಕಾವ್ಯನಾಮ, ‘ಶ್ರೀನಿವಾಸ.’ ಆದರೂ, ‘ಮಾಸ್ತಿ’ ಎಂಬ ಅಂಕಿತದಿಂದಲೇ ಅವರು ಪ್ರಸಿದ್ಧ. ‘ಮಾಸ್ತಿ ಕನ್ನಡದ ಆಸ್ತಿ’ ಎಂಬುದು ಆಗಾಗ್ಗೆ ಕೇಳಿಬರುವ ಮಾತು, ಆದರೆ, ಅವರು ಕೇವಲ ಕನ್ನಡದ ಆಸ್ತಿ ಮಾತ್ರವಲ್ಲ, ಇಡೀ ಭಾರತೀಯ ಸಾಹಿತ್ಯಲೋಕದ ಒಂದು ದೊಡ್ಡ ಆಸ್ತಿ ಎಂಬುದನ್ನು ನಾವು ಗಮನಿಸಬೇಕು. ಕಾದಂಬರಿ, ನಾಟಕ, ಕಾವ್ಯ ಮತ್ತು ಪ್ರಬಂಧಗಳನ್ನೂ ಬರೆದ ಮಾಸ್ತಿ ಎಲ್ಲಕ್ಕಿಂತ ಮೊದಲು ಕತೆಗಾರರು. ಸುಮಾರು ಏಳು ದಶಕಗಳ ಕಾಲ ಕನ್ನಡ ಸಾರಸ್ವತಲೋಕವನ್ನು ಶ್ರೀಮಂತಗೊಳಿಸಿದ ಮಾಸ್ತಿ, ಕನ್ನಡ ಕತೆಗಳಿಗೆ ಒಂದು ಸ್ಥಾನವನ್ನು ಕಲ್ಪಿಸಿಕೊಟ್ಟ ಉದ್ದಾಮ ಲೇಖಕ.

ಮಾಸ್ತಿಯವರ ಶೈಲಿ ನೇರ, ಸರಳ, ಆತ್ಮೀಯ, ಸ್ವಾರಸ್ಯಕರ ಮತ್ತು ಸ್ವಾನುಭವದಿಂದ ಶ್ರೀಮಂತ. ಅವರು ಮೈಸೂರು ಸಂಸ್ಥಾನದ ಸರ್ಕಾರಿ ಆಡಳಿತವರ್ಗದ ಪ್ರತಿನಿಧಿಯಾಗಿ ನೂರಾರು ಹಳ್ಳಿಗಳನ್ನು, ಪಟ್ಟಣಗಳನ್ನು ಹತ್ತಿರದಿಂದ ನೋಡಿದವರು. ಅಲ್ಲಿನ ವಿವಿಧ ಮಟ್ಟದ ಸಾಧಾರಣ ಜನರೊಂದಿಗೆ ದಿನನಿತ್ಯದ ಸಂಪರ್ಕವನ್ನು ಇಟ್ಟುಕೊಂಡಿದ್ದವರು.

ಸಮಾಜದ ವಿವಿಧಶ್ರೇಣಿಗಳ, ಅಂದರೆ, ಬಡವ-ಶ್ರೀಮಂತ, ವಿದ್ಯಾವಂತ-ಅನಕ್ಷರಸ್ತ, ರೈತಾಪಿ ಜನ, ಅಧಿಕಾರಿವರ್ಗ, ಹೀಗೆ ಜನಸಾಮಾನ್ಯರ ಮತ್ತು ಅಸಾಮಾನ್ಯರ ಬದುಕಿನ ನೋವು-ನಲಿವುಗಳನ್ನು ಕಣ್ಣಾರೆ ಕಂಡಿದ್ದರು. ಇಂಥ ವಿಶಾಲ ಅನುಭವವುಳ್ಳ ಲೇಖಕರು ಸೃಷ್ಟಿಸುವ ಪಾತ್ರಗಳಲ್ಲಿ ವೈವಿಧ್ಯತೆ ಇರುತ್ತದೆ. ಅವರು ಸೃಷ್ಟಿಸುವ ಪಾತ್ರಗಳು ಕೇವಲ ಕಾಲ್ಪನಿಕ ಪಾತ್ರಗಳಷ್ಟೇ ಆಗದೇ ಸೃಜನಶೀಲತೆಯ ಕುರುಹಾಗಿ, ಜೀವಂತವಾಗಿ ಕಣ್ಮುಂದೆ ಬರುವ ಪಾತ್ರಗಳು. Masti Venkatesha Iyengar

ಮಾಸ್ತಿಯವರ ಕತೆಗಳ ವ್ಯಾಪ್ತಿಗೆ ಮತ್ತು ಕತೆಗಳಲ್ಲಿ ಅವರು ಸೃಷ್ಟಿಸುವ ಪಾತ್ರ ವೈವಿಧ್ಯತೆಗೆ ಮಿತಿ ಎಂಬುದೇ ಇಲ್ಲವೇನೊ. ಅವರ ಲೇಖನಿಗೆ ಸಿಕ್ಕ ಕತೆಗಳು ನೂರಾರು. ಅವರು ಕಲ್ಪಿಸಿದ ನೂರಾರು ಪಾತ್ರಗಳು ಒಂದಕ್ಕಿಂತ ಒಂದು ಭಿನ್ನ.

ಅವರು ರಾಮಾಯಣ ಮಹಾಭಾರತಗಳಂಥ ಮಹಾಕಾವ್ಯಗಳಿಂದ ಯಾವುದೋ ಒಂದು ತುಣುಕನ್ನು ಸ್ವತಂತ್ರ ಕತೆಯಂತೆ ಬೆಳೆಸಿಬಿಡುತ್ತಾರೆ. ಅಷ್ಟೇ ಸೌಲಭ್ಯದಿಂದ, ಶೇಕ್ಸ್‌ಪಿಯರನ ನಾಟಕದ ಭಾಗವೊಂದನ್ನೂ ಸ್ವತಂತ್ರ ಕತೆಯಂತೆ ಹೇಳಿಬಿಡುತ್ತಾರೆ. ತಮ್ಮ ಕಣ್ಮುಂದೆ ನಡೆಯುವ ಒಂದು ಘಟನೆಯನ್ನಂತೂ ಸರಿಯೇ ಸರಿ, ಓದುಗನ ಕಣ್ಣಿಗೆ ಕಟ್ಟುವಂತಹ ಕತೆಯಾಗಿಸುತ್ತಾರೆ.

ನಾನು ನಿರೂಪಣೆಗಾಗಿ ಎತ್ತಿಕೊಂಡ ಮಾಸ್ತಿಯವರ ಸಣ್ಣ ಕತೆಗಳ ಶ್ರೇಣಿಯ ಹದಿನೈದನೇ ಪುಸ್ತಕದಲ್ಲಿ ಒಟ್ಟು ಹತ್ತು ಕತೆಗಳಿವೆ. ಅದರಲ್ಲಿ, ಮೇಲೆ ಹೇಳಿದ ಗುಂಪಿಗೆ ಸೇರುವ, ಅಂದರೆ, ಪುರಾಣದ ಮೂಲದ, ಇತಿಹಾಸದ ಮೂಲದ, ಪೌರ್ವಾತ್ಯ ಮತ್ತು ಪಾಶ್ಚಿಮಾತ್ಯ ಕತೆಗಳಿವೆ. ಹಲವು ಉದಾಹರಣೆಗಳನ್ನು ನೋಡೋಣ, ಹಾಗೇ ಆ ಸಂಕಲನದ ಒಂದು ಕತೆಯನ್ನು ಒಂದಿಷ್ಟು ಚರ್ಚಿಸೋಣ.

ಕತೆಗಳ ಮೂಲಸ್ಥಾನ ನಮ್ಮ ಪುರಾಣಗಳಲ್ಲಿದ್ದಾಗ, ಅಂಥ ಕತೆಗಳು, ನಮಗೆ ಚಿರಪರಿಚಿತವಾದ ಭಾರತದಲ್ಲೇ ನಡೆದಿದ್ದಿರಬಹುದಾದವು. ಅವು ನಡೆದು ಸಹಸ್ರಾರು ವರ್ಷಗಳೇ ಕಳೆದಿವೆ, ಅದರೂ ಇಂದಿನ ಚೌಕಟ್ಟಿನಲ್ಲೂ ಅವು ಅರ್ಥಪೂರ್ಣವಾಗುವಂತೆ ಅವರು ಅವನ್ನು ಪುನರ್ನಿಮಾಣ ಮಾಡುತ್ತಾರೆ. ಅದರ ಆಳವನ್ನು ಹುಡುಕುತ್ತಾರೆ, ಹೊಸದಾಗಿ ಅರ್ಥೈಸುತ್ತಾರೆ. ಮಾಸ್ತಿಯವರ ಲೇಖನಿಯಲ್ಲಿ ಅವು ಅವರದ್ದೇ ಸ್ವಂತ ಕತೆಯಾಗುತ್ತವೆ. ಇಂಥ ಕತೆಗೆ ‘ಶ್ರೀ ಕೃಷ್ಣನ ಅಂತಿಮ ಸಂದರ್ಶನ’ ಮತ್ತು ‘ಕುಚೇಲನ ಮರಿಮಗ’ ಒಳ್ಳೆಯ ಉದಾಹರಣೆಗಳು.

ಮಾಸ್ತಿಯವರ ಇನ್ನೊಂದು ಬಗೆಯ ಕತೆಗಳು ದೂರದ ಯೂರೋಪಿನಲ್ಲೆಲ್ಲೋ ನೂರಾರು ವರ್ಷಗಳ ಹಿಂದೆ ನಡೆದವು. ಪರಕೀಯನೊಬ್ಬ, ನಮಗೆ ಹೊರಗಿನದೆನಿಸುವ ಪರಿಸರದಲ್ಲಿ ಬರೆದದ್ದು, ನಮಗೆ ಪರಕೀಯವಾದ ಭಾಷೆಯಲ್ಲಿ ಬರೆದದ್ದು, ನಮಗೆ ಹತ್ತಿರವಲ್ಲದ ಸಾಮಾಜಿಕ, ರಾಜಕೀಯ, ಮತ್ತು ಐತಿಹಾಸಿಕ ವ್ಯಕ್ತಿಗಳ ಬಗ್ಗೆ ಓದಿದ ಕತೆಯೋ ನಾಟಕವೋ ಇವರಿಗೆ ಸ್ಫೂರ್ತಿಯಾಗುತ್ತದೆ. ‘ಲಿಯರ್‌ ದೊರೆಯ ಮಗಳುದಿರು’ ಮತ್ತು ‘ಪೊಲೋನಿಯಾ ಹೇಳಿಕೆ’ ಉತ್ತಮ ಉದಾಹರಣೆಗಳು.

ಕನ್ನಡ ನಾಡಿನ ಇತಿಹಾಸದ ಪುಟಗಳಿಂದಲೂ ಇವರು ಅತ್ಯಂತ ಸಫಲವಾಗಿ ಕತೆಗಳನ್ನು ಸೃಷ್ಟಿಸಿದ್ದಾರೆ. ಇದಕ್ಕೆ ಉದಾಹರಣೆ, ‘ದೋರನ ಕಂಬಳ’ ಎಂಬ ಇವರ ಇಂಥ ಒಂದು ಕತೆ. ಬ್ರಿಟಿಷರು ಇಂದಿನ ಚೆನ್ನೈ (ಅಂದಿನ ಚೆನ್ನ ಪುರಿ) ಬಂದರನ್ನು ಯಾವ ಯುದ್ಧವನ್ನೂ ಮಾಡದೇ ಹೇಗೆ ವಿಜಯನಗರದ ಅಳಿದುಳಿದ ರಾಜವಂಶದಿಂದ ಅಪಹರಿಸಿದರು ಎಂಬ ದಾರುಣ ಕತೆಯನ್ನು ಓದಿದಾಗ ಇಡೀ ಭಾರತದ ಚರಿತ್ರೆಯೇ ಕಣ್ಮುಂದೆ ಸುಳಿಯುತ್ತದೆ.

ಮೇಲಿನ ಬಗೆಯ ಕತೆಗಳೇ ಅಲ್ಲದೇ, ನಮಗೆ ತೀರ ಹತ್ತಿರದ, ಇಂದಿನ ವಿಷಯಗಳನ್ನೂ ಇವರು ಕತೆಯಾಗಿಸುತ್ತಾರೆ. ರೈಲಿನಲ್ಲಿ ಹೋಗುವಾಗ ನಡೆದೆಯಬಹುದಾದ ಘಟನೆಯಿಂದ ಇವರ ಕತೆ ಹುಟ್ಟಬಹುದು, ಬೆಳೆಯಬಹುದು. ಇದು ಅವರ ವರ್ತಮಾನ ಮತ್ತು ಕಣ್ಣಾರೆ ಕಂಡ, ಕಿವಿಯಾರೆ ಕೇಳಿದ ಸಂಗತಿಗಳ ಸರಮಾಲೆ. ‘ಒಬ್ಬ ತಾಯಿ, ಮಗ’ ಎಂಬ ಇವರ ಕತೆಯಾಂದರಲ್ಲಿ ಕ್ರೈಸ್ತ ಪಾದ್ರಿಗಳು ಹೇಗೆ ಅವಿದ್ಯಾವಂತ ಬಡವರಿಗೆ ಆಮಿಷಗಳನ್ನೊಡ್ಡಿ ಧರ್ಮಪರಿವರ್ತನೆಯಲ್ಲಿ ತೊಡಗುತ್ತಾರೆ ಎಂಬುದನ್ನು ಬಹು ಮಾರ್ಮಿಕವಾಗಿ ಚಿತ್ರಿಸಿದ್ದಾರೆ.

ಪುರಾಣ ಇತಿಹಾಸಗಳಿಂದ ಬಂದ ಭೂತಕಾಲದ ಕತೆಗಳು ಹಲವಾದರೆ, ವರ್ತಮಾನದ ಕತೆಗಳು ಹಲವು ಹತ್ತು. ಸ್ಫೂರ್ತಿಯ ನೆಲೆ ಎಲ್ಲೇ ಇದ್ದರೂ, ಅವರು ಕತೆ ಹೇಳುವ ಶೈಲಿ ಮಾತ್ರ ನೇರ, ಸರಳ ಮತ್ತು ಅಗತ್ಯಕ್ಕೆ ತಕ್ಕಷ್ಟು ಮಾತ್ರ ವರ್ಣನೆಗಳಿಂದ ಕೂಡಿ ಅತ್ಯಂತ ಸಹಜವಾಗಿ ತೋರುವ ಕಥಾನಕ. ಇಂಥ ಕತೆ ಹೇಳುವ ನೈಪುಣ್ಯ ಮಾಸ್ತಿಯವನ್ನು ಬಿಟ್ಟರೆ ಅವರ ಕಾಲದ ಕತೆಗಾರರಲ್ಲಿ ಮತ್ಯಾವ ಬರಹಗಾರನಿಗೂ ದಕ್ಕಿರಲಿಲ್ಲವೆಂದೇ ನನ್ನ ನಂಬಿಕೆ.

ಮಾಸ್ತಿಯವರ ವಿದ್ಯಾಭ್ಯಾಸದ ಫಲವಾಗಿ ಅವರಿಗೆ ಇಂಗ್ಲಿಷ್‌ ಭಾಷೆಯ ಮೇಲಿನ ಪ್ರಭುತ್ವ ಇತ್ತು. ಇಂಗ್ಲಿಷ್‌ ಅಧಿಕಾರಿಗಳ ಹತ್ತಿರದ ಪರಿಚಯ, ಇಂಗ್ಲೆಂಡ್‌ ದೇಶದ ಚರಿತ್ರೆಯ ಹಾಗೂ ಬ್ರಿಟಿಷರು ಭಾರತವನ್ನು ಆಳುವಾಗ ಅಳವಡಿಸಿಕೊಂಡ ರೀತಿನೀತಿಗಳೆಲ್ಲ ಅವರಿಗೆ ಕರತಲಾಮಲಕ. ಮನೆಯಲ್ಲಿನ ಸಂಪ್ರದಾಯ ಮತ್ತು ಸುಸಂಸ್ಕೃತ ಪರಿಸರದಿಂದಾಗಿ, ಭಾರತೀಯ ಸಂಸ್ಕೃತಿಯ, ಹಿಂದೂ ಧರ್ಮಶಾಸ್ತ್ರಗಳ ಮತ್ತು ಪುರಾಣ-ಇತಿಹಾಸಗಳ ಆಳವಾದ ಅರಿವು ಅವರಿಗೆ ಚಿಕ್ಕಂದಿನಿಂದಲೇ ಆಗಿತ್ತು. ಈ ರೀತಿ ಬೆಳೆದ ವ್ಯಕ್ತಿ ಮನುಷ್ಯನನ್ನು ನೋಡುವ ಕ್ರಮದಲ್ಲೇ ಒಂದು ವೈಶಿಷ್ಟ್ಯ ಇರುತ್ತದೆ.

‘ಶ್ರೀ ಕೃಷ್ಣನ ಅಂತಿಮ ಸಂದರ್ಶನ’ ಎಂಬುದು ಮಹಾಭಾರತದ ಕೊನೆಯ ಭಾಗದಿಂದ ಬಂದ ಕತೆ. ಇದರಲ್ಲಿ ಕೃಷ್ಣನ ಕೊನೆ ಅಂದರೆ, ಎಲ್ಲ ಸಾಧಾರಣ ಮನುಷ್ಯರಿಗೂ ಬರುವಂತೆ, ಕೃಷ್ಣ ಸಹ ತನ್ನ ದೇಹವನ್ನು ತ್ಯಾಗಮಾಡುವ ಸನ್ನಿವೇಶ. ಯುಧಿಷ್ಠಿರನಿಗೆ ಕನಸಿನಲ್ಲಿ ಕಾಣಿಸಿಕೊಂಡ ಕೃಷ್ಣ ತನ್ನ ಅಂತ್ಯದ ಬಗ್ಗೆ ಸೂಚನೆ ನೀಡುತ್ತಾನೆ, ಆ ಕಾರಣದಿಂದ ಚಿಂತೆಗೊಳಗಾದ ಯುಧಿಷ್ಠಿರ, ತಮ್ಮ ಅರ್ಜುನನನ್ನು ಕೃಷ್ಣನ ಕ್ಷೇಮಸಮಾಚಾರ ತಿಳಿದು ಬರಲು ಹಸ್ತಿನಾವತಿಯಿಂದ ದ್ವಾರಕೆಗೆ ಕಳಿಸುತ್ತಾನೆ. ಅರ್ಜುನ ಕೃಷ್ಣನನ್ನು ಕಂಡು ಹಿಂದಿರುಗುವ ವೇಳೆಗೆ ಕೃಷ್ಣನ ದೇಹಾಂತ್ಯ ವಾಗುತ್ತದೆ. ಇದು ಕಥಾಸಾರಾಂಶ. ಈ ಸಣ್ಣ ಕತೆಯಲ್ಲಿ ಮಾಸ್ತಿಯವರ ಜೀವನದೃಷ್ಟಿಯನ್ನು ಹುಡುಕುತ್ತ ಹೋದರೆ, ನಮಗೆ ಸಾಕಷ್ಟು ವಿಚಾರಗ್ರಹಣೆ ಆದೀತು.

ಉದಾಹರಣೆಗೆ, ಇಲ್ಲಿ ಹಿನ್ನೆಲೆಯಲ್ಲಿ ಬರುವ ಬಲರಾಮನ ಪಾತ್ರವನ್ನೇ ತೆಗೆದುಕೊಳ್ಳಿ. ಬಲರಾಮನ ದೌರ್ಬಲ್ಯಗಳಲ್ಲಿ ಕುಡಿತವೂ ಒಂದು, ಇದನ್ನು ಕಂಡು ಅನುಸರಿಸಿದ ಯಾದವರ ಕಿರಿಯ ಪೀಳಿಗೆ, ಮದ್ಯಪಾನದ ಅತಿಯಿಂದಾಗಿ ದಾರಿಗೆಡುತ್ತಾರೆ, ಅಂತಃಕಲಹದಿಂದ ಇಡೀ ವಂಶವೇ ನಿರ್ವಂಶವಾಗುತ್ತದೆ. ತನ್ನ ಕಣ್ಮುಂದೇ ನಡೆಯುವ ಕುಲನಾಶವನ್ನು ಕಂಡು ದುಃಖಿಸಿ ಕೃಷ್ಣ ತನ್ನ ಜೀವನವನ್ನು ತೊರೆಯುತ್ತಾನೆ. ಇದು ಕತೆಯ ಒಳಗಿನ ಮುಖ್ಯ ಕತೆ.

ಈ ಕತೆಯ ಪಾತ್ರಗಳ ವೈಶಿಷ್ಟ್ಯವೆಂದರೆ, ಇವರೆಲ್ಲ ಮನುಷ್ಯರೇ. ಕೃಷ್ಣ ದೇವರಲ್ಲ, ಮನುಷ್ಯ ಎಂಬ ಸೂಕ್ಷ್ಮವಾದ ವಿಷಯವನ್ನು ಮಾಸ್ತಿಯವರು ಕೃಷ್ಣನ ಬಾಯಿಂದಲೇ ಹೇಳಿಸುತ್ತಾರೆ, ಅದೂ ತಮ್ಮ ತೊಂಬತ್ತರ ವಯಸ್ಸಿನಲ್ಲಿ! ‘ ಸೃಷ್ಟಿ ಎಲ್ಲ ದೇವರೇ, ದೇವರಲ್ಲದೇ ಬೇರೆ ಏನೂ ಇಲ್ಲ, ಇರುವುದೆಲ್ಲ ಈ ಅರ್ಥದಲ್ಲಿ ಅವನ ಅವತಾರವೇ, ಸುರ, ನರ, ಕಿನ್ನರ, ಕಿಂಪುರುಷ, ಕ್ರಿಮಿ, ಕೀಟ, ಎಲ್ಲ ಬ್ರಹ್ಮ’ ಎಂಬ ಅದ್ವೈತವನ್ನು ಸಾರುತ್ತಾರೆ, ಹುಟ್ಟಿನಿಂದ ವಿಶಿಷ್ಟಾದ್ವೈತಿಯಾದ ಈ ಶ್ರೀವೈಷ್ಣವ!

ಮೇಲ್ನೋಟಕ್ಕೆ ಒಂದು ಪೌರಾಣಿಕ ಎನ್ನಿಸುವ ಈ ಕತೆಯಲ್ಲಿ, ಮಾಸ್ತಿಯವರು ಚಿತ್ರಿಸುವ ಗಂಡ-ಹೆಂಡತಿಯರಾದ ಕೃಷ್ಣ-ರುಕ್ಮಿಣಿಯರ ಸಂಬಂಧದ ಸೊಗಸನ್ನು ಕಾಣಬೇಕು. ಅಣ್ಣ-ತಮ್ಮಂದಿರಾದ ಬಲರಾಮ-ಕೃಷ್ಣರ ಸಂಬಂಧದ ಸೂಕ್ಷ್ಮವನ್ನು ಕಾಣಬೇಕು. ಕೃಷ್ಣ-ಆರ್ಜುನರು ನರ-ನಾರಾಯಣರು, ಎರಡು ದೇಹಗಳು, ಒಂದೇ ಜೀವ ಎಂಬ ಸತ್ಯವನ್ನು ಅರ್ಜುನ ಕಂಡುಕೊಳ್ಳುವ ಅನುಭವವನ್ನೂ ಅದರಿಂದ ಪಡುವ ವಿಸ್ಮಯವನ್ನೂ ಎಷ್ಟು ಮನೋಜ್ಞವಾಗಿ ಚಿತ್ರಿಸಿದ್ದಾರೆ ಎಂಬುದನ್ನು ಓದಿ ಅರಿತುಕೊಳ್ಳಬೇಕು.

ಹೆಚ್ಚಾಗಿ ನನ್ನ ಮನಸ್ಸಿಗೆ ನಾಟಿದ ಒಂದು ಅಂಶವನ್ನು ಹಂಚಿಕೊಳ್ಳದೇ ಈ ಪ್ರಬಂಧವನ್ನು ಮುಗಿಸಲಾರೆ. ಕೃಷ್ಣಾರ್ಜುನರು ಎರಡು ದೇಹ ಒಂದು ಪ್ರಾಣ ಎಂದೆಲ್ಲ ಹೇಳಿದರೂ, ಕೃಷ್ಣ ಕೃಷ್ಣನೇ, ಅರ್ಜುನ ಅರ್ಜುನನೇ ಎಂಬ ಸತ್ಯವನ್ನು ಬಹು ಸರಳವಾಗಿ ವಿವರಿಸುವ ಮಾಸ್ತಿಯವರ ಒಳನೋಟವನ್ನು ಈ ಮಾತುಗಳಿಂದ ಕಂಡುಕೊಳ್ಳಬಹುದು.

ಸಂದರ್ಭ ಹೀಗಿದೆ. ಪತಿಯನ್ನು ಇನ್ನೇನು ಕಳೆದು ಕೊಳ್ಳುವ ಕಾಲ ಸನ್ನಿಹಿತವಾಗಿದೆ, ಆಕೆಯನ್ನು ಕಂಡು ಸಮಾಧಾನ ಹೇಳಲು ಅರ್ಜುನ ಬಂದಾಗ, ರುಕ್ಮಿಣಿಯ ದೃಷ್ಟಿಯಲ್ಲಿ ಕೃಷ್ಣ ಯಾವಾಗಲೂ ತನ್ನೊಡನೆಯೇ ಇರುವ ಸಂಗಾತಿ ಆದ್ದರಿಂದ ಅವಳಿಗೆ ವಿರಹದ ಸೊಲ್ಲೂ ಇಲ್ಲ. ಇದರಿಂದ ಅರ್ಜುನನಿಗೆ ಆಶ್ಚರ್ಯವೋ ಆಶ್ಚರ್ಯ. ಈ ಮಾತನ್ನು ಕೃಷ್ಣನಿಗೆ ವರದಿ ಮಾಡಿದಾಗ ಕೃಷ್ಣ ಹೇಳುವುದೇನು? ‘ಇದು ತಿಳಿಯಲಿ ಎಂದೇ ನಾನು ನಿನ್ನನ್ನು ಅಲ್ಲಿಗೆ ಹೋಗಿ ಆಕೆಯನ್ನು ಕಾಣು ಎಂದು ಕಳುಹಿಸಿದೆ. ಈ ಮಾತು ನಿನಗೂ ಹೊಂದುತ್ತದೆ. ನಾನು ಇರುವುದಿಲ್ಲ, ಎಂದರೆ ನನ್ನ ದೇಹ ಇಲ್ಲಿರುವುದಿಲ್ಲ. ಆದರೂ, ನಾನು ಏನೂ ಆಗುವುದಿಲ್ಲ, ಎಲ್ಲಿಯೂ ಹೋಗುವುದಿಲ್ಲ, ಸದಾ ನಾನು ಜೊತೆಗಿದ್ದೇನೆಂದು ನಿಶ್ಚಯ ಮಾಡಿಕೊಂಡು ಬಾಳು. ನಿನಗೆ ಯಾವ ಚಿಂತೆಯೂ ಇರುವುದಿಲ್ಲ.’

ಅದ್ದಕ್ಕೆ, ಅರ್ಜುನನ ಪ್ರತಿಕ್ರಿಯೆ ಏನು? ‘ಹೌದು ಕೃಷ್ಣ, ಈ ಮಾತನ್ನು ನೀನು ನನಗೆ ಯುದ್ಧದ ದಿನ ಹೇಳಿದೆ. ಹೋಗುವುದು ದೇಹ, ನಾವಲ್ಲ. ಸುಲಭವಾದ ಸತ್ಯ. ಆದರೆ, ಕೈಲಿ ಹಿಡಿದ ಪಾದರಸದಂತೆ ಮನಸ್ಸಿನಿಂದ ಜಾರಿ ಹೋಗುತ್ತದೆ. ಅಂಟುವ ಸತ್ಯ ಅಲ್ಲ; ನಂಟಾಗುವ ಸತ್ಯವೂ ಅಲ್ಲ. ಕೃಷ್ಣ ಎಲ್ಲಿಯೂ ಹೋಗಿಲ್ಲ, ಜೊತೆಗೆ ಇದ್ದಾನೆ ಎಂದು ಕೊಂಡ ಮನಸ್ಸು ಮರುಕ್ಷಣ ’ಅಯ್ಯೋ ಕೃಷ್ಣ ಜೊತೆಗಿಲ್ಲವಲ್ಲ ಎಂದು ಗೋಳು ಕರೆಯುತ್ತದೆ.’ ಎಂಥ ಸತ್ಯ! ಆಡುವುದು ಸುಲಭ, ಅರ್ಥಮಾಡಿಕೊಳ್ಳುವುದೂ ಅಸಾಧ್ಯವೇನಲ್ಲ, ಆದರೆ, ಅನುಸರಿಸುವುದು ಮಾತ್ರ ಎಂತೆಂಥ ಜ್ಞಾನಿಗಳಿಗೂ ಕಷ್ಟಸಾಧ್ಯ.

ಸುಮಾರು ಎರಡು ದಶಕಗಳಿಗೂ ಹಿಂದೆ ಅಕಸ್ಮಾತ್‌ ನಾನು ಭಾರತಕ್ಕೆ ಭೇಟಿ ಇತ್ತ ಸಂದರ್ಭದಲ್ಲಿ ಜೀವನದ ಅಂಚನ್ನು ತಲುಪಿದ್ದ ಮಾಸ್ತಿಯವರಿಗೆ ಜ್ಞಾನಪೀಠ ಬಂದಿತ್ತು. ಅದೇ ಮೊದಲು, ಅದೇ ಕೊನೆ ನನಗೆ ಅವರ ದರ್ಶನ. ಡಿಸೆಂಬರ್‌ 3ರಂದು ಲಾಸ್‌ ಏಂಜಲೀಸಿನಲ್ಲಿ ನಡೆದ ಕನ್ನಡ ಸಾಹಿತ್ಯ ರಂಗದ ಎರಡನೇ ಸಮ್ಮೇಳನದ ‘ಮಾಸ್ತಿ ಕನ್ನಡದ ಆಸ್ತಿ’ ಎಂಬ ವಿಚಾರ ಸಂಕಿರಣದಲ್ಲಿ ನಾನು ಮಂಡಿಸಿದ ಮೇಲಿನ ಪ್ರಬಂಧವನ್ನು ‘ಜಾಲತರಂಗ’ದ ಓದುಗರೊಂದಿಗೆ ಹಂಚಿಕೊಳ್ಳುತ್ತಾ ವಿರಮಿಸುವೆ ಮುಂದಿನ ಕಂತಿನ ವರೆಗೆ.

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more