ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾನವ ಜೀವಕ್ಕೇನು ಬೆಲೆ?

By Staff
|
Google Oneindia Kannada News
Dr.M.S.Nataraj ಡಾ. ಮೈ.ಶ್ರೀ. ನಟರಾಜ
ಪೊಟೊಮೆಕ್‌, ಮೇರೀಲ್ಯಾಂಡ್‌

[email protected]

ಪ್ರತಿನಿತ್ಯ ವಾಷಿಂಗ್‌ಟನ್‌ಪೋಸ್ಟ್‌ ಪತ್ರಿಕೆಯಲ್ಲಿ ಇರಾಕ್‌ ಮೃತ್ಯುವಿನ ಎಣಿಕೆ ನಡೆದಿರುವುದನ್ನು ಕೆಲವರಾದರೂ ಗಮನಿಸಿರಬಹುದು. 1,333, 1,355- ಮುಂತಾಗಿ ಪ್ರತಿದಿನ ಮೂರೋನಾಲ್ಕೋ ಕೆಲವೊಮ್ಮೆ ಐದೋ ಹತ್ತೋ ಹೆಚ್ಚುತ್ತಾ ಇರುವ ಈ ಸಂಖ್ಯೆ ಇರಾಕಿನಲ್ಲಿ ಜೀವತೆತ್ತ ಅಮೆರಿಕನ್‌ ಸೈನಿಕರ ಸಂಖ್ಯೆಯನ್ನು ಮಾತ್ರ ಎಣಿಸುತ್ತದೆ. ಅಲ್ಲಿ ಸತ್ತ ಪ್ರತಿ ಅಮೆರಿಕನ್‌ ಸೈನಿಕನಿಗೂ ಹತ್ತುಪಟ್ಟು ಅಥವಾ ನೂರುಪಟ್ಟು ಇರಾಕಿಗಳು ಸತ್ತಿರುತ್ತಾರೆ, ಆದರೆ ಹಾಗೆ ಸತ್ತವರ ಸಂಖ್ಯೆಯನ್ನು ಯಾರೂ ಲೆಕ್ಕವಿಟ್ಟಂತಿಲ್ಲ.

ಹುಟ್ಟಿದವರೆಲ್ಲ ಒಂದಲ್ಲ ಒಂದು ದಿನ ಸಾಯುವುದು ನಿಶ್ಚಯ ಎಂಬುದು ಗೊತ್ತಿದ್ದರೂ ಸತ್ತವರು ತಮ್ಮವರಾಗಿದ್ದಾಗ ಕಣ್ಣೀರಿಡುವುದು ಮಾತ್ರ ತಪ್ಪುವುದಿಲ್ಲ. ಇತ್ತೀಚೆಗೆ ಪ್ರಕೃತಿಯ ವಿಕೋಪದ ಫಲವಾಗಿ ಸುನಾಮಿಯ ಕ್ರೌರ್ಯಕ್ಕೆ ಸಿಕ್ಕು ನುಚ್ಚುನೂರಾದ ಹತ್ತಾರು ದೇಶಗಳ ತೀರಪ್ರದೇಶಗಳಲ್ಲಿ ಸತ್ತವರ ಸಂಖ್ಯೆಯನ್ನು ಎಣಿಸುವುದನ್ನು ನಿಲ್ಲಿಸಿಯಾಗಿದೆ. ಹತ್ತಾರು ದೇಶಗಳ ಲಕ್ಷಾಂತರ ಸಂಸಾರಗಳು ಅನುಭವಿಸುವ ದುಃಖವನ್ನು ದೂರದರ್ಶನದಲ್ಲಿ ನೋಡಿ ಸಂಕಟಪಡದವರಿಲ್ಲ. ಸಹಸ್ರಾರು ಮೈಲಿ ದೂರದಲ್ಲಿರುವ, ತಮ್ಮವರಲ್ಲದ ಅನಾಥ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಮುಂದಾಗುವ ವಿಶಾಲಹೃದಯದ ಅನೇಕ ಜನರು ಭೂಗೋಳದ ಪಶ್ಚಿಮಾರ್ಧದಲ್ಲಿದ್ದಾರೆ ಎಂಬುದನ್ನು ನೆನೆಸಿಕೊಂಡರೆ, ಮನುಜಕುಲದಲ್ಲಿ ಮನೆಮಾಡಿರುವ ಕರುಣೆಯ ಪರಿಚಯ ಕಿಂಚಿತ್ತಾದರೂ ಆಗದೇ ಇರದು. ಇಷ್ಟಾದರೂ ಒಂದು ದಶಕದ ಹಿಂದೆ ಆಫ್ರಿಕದಲ್ಲಿ ನಡೆದ ಒಂದು ಹತ್ಯಾಕಾಂಡವನ್ನು ತಪ್ಪಿಸುವ ಸಾಧ್ಯತೆ ಇದ್ದರೂ ತಪ್ಪಿಸದೇಹೋದ ಸನ್ನಿವೇಶವನ್ನು ನೆನೆಸಿಕೊಂಡು ರಕ್ತ ಕುದಿಯುತ್ತದೆ. ತಮ್ಮವರೇ ಎನಿಸಿಕೊಳ್ಳುವ ಸ್ವಂತ ಜನರನ್ನು ಕೊಚ್ಚಿ ಕೊಲ್ಲುವ ಕ್ರೌರ್ಯ ಮನುಷ್ಯನ ಮನಸ್ಸಿನಲ್ಲಿ ಹೇಗೆ ಉದ್ಭವವಾಗುತ್ತದೆ ಎಂದು ಅಚ್ಚರಿಯಾಗುತ್ತದೆ. ಲಕ್ಷಗಟ್ಟಲೆ ರುಂಡಮುಂಡಗಳು ಕೊಳೆಯುತ್ತಾ ಬಿದ್ದಿದ್ದ ದೃಶ್ಯವನ್ನು ಕಂಡ ಜಗತ್ತು ಚಕಾರವೆತ್ತದೇ ಕುಳಿತಿತ್ತಲ್ಲ ಎಂದು ಸಂಕಟವಾಗುತ್ತದೆ. ಇದೆಲ್ಲ ನೆನೆಪಾಗಲು ಕಾರಣ, ನಾನು ಮೊನ್ನೆ ನೋಡಿದ ಒಂದು ಚಲನ ಚಿತ್ರ. ಆ ಚಲನಚಿತ್ರದ ಹೆಸರು ‘ಹೊಟೆಲ್‌ ರುವಾಂಡ.’

A still from Hotel Rwanda1994ರಲ್ಲಿ ಆಫ್ರಿಕದ ಹೂಟು ಮತ್ತು ಟೂಟ್ಸಿ ಎಂಬ ಎರಡು ಜನಾಂಗಗಳ ನಡುವೆ ನಡೆದ ಹತ್ಯಾಕಾಂಡದ ಹಿನ್ನೆಲೆಯಲ್ಲಿ ತಯಾರಿಸಿದ ಈ ಚಲನಚಿತ್ರ ನೋಡುಗರ ಮನಸ್ಸನ್ನು ಕದಡಿ ಹಾಕುತ್ತದೆ. ರುವಾಂಡಾದಲ್ಲಿನ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಐತಿಹಾಸಿಕ ಪರಿಸ್ಥಿತಿಗಳ ಗೊಂದಲಗಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ಇಡೀ ಒಂದು ಜನಾಂಗವನ್ನೇ ಮತ್ತೊಂದು ಸೋದರ ಜನಾಂಗ ನಿರ್ನಾಮಗೊಳಿಸಲು ಮಾಡಿದ ಯತ್ನದ ದುರಂತವೇ ಈ ಚಿತ್ರದ ವಸ್ತು.

ಅಧಿಕಾರ ಬಯಸಿದ ಸ್ವಾರ್ಥಿಗಳು ಈ ಎರಡು ಜನಾಂಗಗಳ ನಡುವೆ ಇಲ್ಲದ ತಾರತಮ್ಯವನ್ನು ಹುಟ್ಟುಹಾಕಿ ಒಬ್ಬರಿಗೊಬ್ಬರು ವೈರ ಬೆಳೆಸಿಕೊಂಡು ಪರಸ್ಪರ ಕೊಚ್ಚಾಡುವಂಥ ವಿಷಾದಮಯ ಸನ್ನಿವೇಶ ಅಲ್ಲಿ ಉಂಟಾಗಿ ಚರಿತ್ರೆಯ ಅತಿ ಘೋರ ಹತ್ಯಾಕಾಂಡಗಳಲ್ಲಿ ಅದೂ ಒಂದು ಎನ್ನುವಷ್ಟು ಜನ ಅಲ್ಲಿ ಸತ್ತರು. ಹೆಂಗಸರು, ಮಕ್ಕಳು, ಮುದುಕರು, ಯುವಕರು, ಲಕ್ಷಗಟ್ಟಲೆ ಸತ್ತರೂ ಪ್ರಪಂಚ ನೋಡುತ್ತ ಕುಳಿತಿತ್ತು. ಇಂಥಾ ಪ್ರಸಂಗಗಳು ಹಿಂದೂ ಆಗಿವೆ. ಭಾರತದ ವಿಭಜನೆ ಆದಾಗ ಹಿಂದೂ-ಮುಸ್ಲಿಮ್‌ ಜನತೆ ಒಬ್ಬರನ್ನೊಬ್ಬರು ಕೊಚ್ಚಿ ಹಾಕುತ್ತಿದ್ದಾಗ ಬ್ರಿಟಿಷ್‌ ಸೈನಿಕರು ಎಲ್ಲಿದ್ದರು? ಇಂದಿರಾ ಗಾಂಧಿಯ ಕೊಲೆಯಾದ ತರುಣದಲ್ಲಿ, ನಿರ್ದೋಷಿಗಳಾದ ಸಹಸ್ರಾರು ಸಿಖ್ಖರನ್ನು ಕಾಂಗ್ರೆಸ್‌ ಹುರಿಯಾಳುಗಳು ಕೊಚ್ಚಿದಾಗ ದೆಹಲಿ ಪೋಲಿಸರು ಎಲ್ಲಿದ್ದರು? ಸಬರಮತಿಯ ರೈಲಿಗೆ ಬೆಂಕಿ ಬಿದ್ದಿದ್ದನ್ನು ವಿರೋಧಿಸಿ ಸೇಡು ತೀರಿಸಿಕೊಳ್ಳಲು ಸಹಸ್ರಾರು ನಿರಪರಾಧಿ ಮುಸ್ಲಿಮರನ್ನು ಹಿಂದೂ ಗೂಂಡಾಗಳು ಸುಟ್ಟುಹಾಕಿದಾಗ ಗುಜರಾತೀ ಸರ್ಕಾರ ಏನು ಮಾಡುತ್ತಿತ್ತು? ಅಧಿಕಸಂಖ್ಯೆಯಲ್ಲಿರುವ ಸುನ್ನಿಗಳು ಷಿಯಾ ಮುಸ್ಲಿಮರನ್ನು ಪ್ರಪಂಚದ ನಾನಾ ಮೂಲೆಗಳಲ್ಲಿ ದಿನನಿತ್ಯವೆನ್ನುವಂತೆ ಕೊಲ್ಲುವಾಗ ‘ಮುಸಲ್ಮಾನರೆಲ್ಲ ಒಂದೇ ಎಂಬ ಐಕ್ಯತೆ’ ಅಲ್ಲಾಹ್‌ನ ಭಕ್ತರಿಗೆ ಏಕೆ ಮರೆತುಹೋಗುತ್ತದೆ? ಒಟ್ಟಿನಲ್ಲಿ, ಪ್ರಪಂಚದಲ್ಲಿ ಒಂದಲ್ಲ ಒಂದು ಕಡೆ ಜಾತಿವೈರದಿಂದ, ಧರ್ಮದ್ವೇಷದಿಂದ ಅಥವಾ ಮನುಷ್ಯರ ಮೈಬಣ್ಣದ ತಾರತಮ್ಯದಿಂದ ಅಥವಾ ರಾಜಕೀಯ ನಂಬಿಕೆಗಳ ಬಗ್ಗೆ ತಮಗಿರುವ ಅಸಹನೆಯಿಂದ, ಅಂತೂ ಯಾವುದೋ ಕಾರಣಕ್ಕಾಗಿ ಒಂದು ಗುಂಪು (ಈ ಗುಂಪಿಗೆ ಅಧಿಕಸಂಖ್ಯಾಬಲವಿರದಿದ್ದರೂ), ತಮಗಿರುವ ಅಧಿಕಾರ ಅಥವ ಅವಕಾಶ ಅಥವ ಆಯುಧಬಲ ಅಥವ ಬಲಶಾಲಿಗಳ ಅಭಯಹಸ್ತವಿರುವ ಧೈರ್ಯದಿಂದ ಮತ್ತೊಂದು ಗುಂಪಿನಮೇಲೆ ಆಕ್ರಮಣ ಮಾಡುತ್ತದೆ, ಅತ್ಯಾಚಾರಮಾಡುತ್ತದೆ. ಇಂಥಾ ರಕ್ತಪಾತವನ್ನು ನೋಡುತ್ತ ಏನೂ ಆಗಿಲ್ಲವೆಂಬಂತೆ ಕುಳಿತಿರುವ ಶೂರರು ಒಂದುಕಡೆಯಾದರೆ, ನೆನ್ನೆ ತಮ್ಮವರಾಗಿದ್ದ ನೆರೆಹೊರೆಯ ಬಾಂಧವರ ಮೈಮೇಲಿನ ಬಟ್ಟೆಗಳನ್ನು ಸೆಳೆದು ಬೆತ್ತಲಾಗಿಸಿ, ಅವರನ್ನು ಕೆಡಿಸಿ, ಕಡಿದು ಬಿಸಾಡಿ ಕೇಕೆ ಹಾಕುವ ಗುಂಪು ಮತ್ತೊಂದು ಕಡೆ. ಮನುಷ್ಯನಿಗೆ ಇಂಥಾ ಕ್ರೌರ್ಯ ಬರಲು ಹೇಗೆ ಸಾಧ್ಯ? ಇದು ಮನುಷ್ಯನ ಮನಸ್ಸನ್ನು ಗುಲಾಮಗೊಳಿಸಿಕೊಳ್ಳುವ ರಾಕ್ಷಸ ಶಕ್ತಿಗೆ ಮಾತ್ರ ಸಾಧ್ಯವಾಗುವ ಕೆಲಸ. ದ್ವೇಷವನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೋಧಿಸುವ ಮನುಷ್ಯರು, ಸಂಸ್ಥೆಗಳು ಇರುವನಕ ಈ ಕ್ರೌರ್ಯವನ್ನು ಹೋಗಲಾಡಿಸಲು ಸಾಧ್ಯವಿಲ್ಲ.

‘ಹೊಟೆಲ್‌ ರುವಾಂಡ’ ಚಲನ ಚಿತ್ರದಲ್ಲಿ ಈ ಪ್ರಶ್ನೆ ಏಳುತ್ತದೆ. ಅಲ್ಲಿನ ದಾರುಣಚಿತ್ರವನ್ನು ಪ್ರಪಂಚಕ್ಕೆಲ್ಲ ತೋರಿಸಲು ಬಂದ ಪತ್ರಿಕೋದ್ಯಮಿಗಳಾಗಲೀ, ವಿಶ್ವಶಾಂತಿಯ ರಕ್ಷಕರೆನಿಸಿಕೊಳ್ಳುವ ವಿಶ್ವಸಂಸ್ಥೆಯ ಪ್ರತಿನಿಧಿಗಳಾಗಲೀ, ದಯಾಮಯನಾದ ಏಸುವಿನ ಹೆಸರಿನಲ್ಲಿ ಸೇವೆಯಲ್ಲಿ ತೊಡಗಿರುವವರಾಗಲೀ, ನೋವನ್ನು ಶಮನಮಾಡಲು ಬಂದ ರೆಡ್‌ಕ್ರಾಸ್‌ ಸಂಸ್ಥೆಯ ಸ್ವಯಂಸೇವಕರಾಗಲೀ, ಆ ಉನ್ಮತ್ತ ಅಧಿಕಾರಿಗಳ ರಕ್ತಪಿಪಾಸೆಯನ್ನು ಬಯಲಿಗೆಳೆದರೂ ಬದಲಿಸಲಾಗುವುದಿಲ್ಲ. ಅದನ್ನು ದೂರದರ್ಶನದಲ್ಲಿ ಕಂಡವರು ಅಯ್ಯೋ ಎಂದು ಕಣ್ಣೀರಿಟ್ಟರೂ ಮರುಕ್ಷಣದಲ್ಲಿ ತಂತಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಿರತರಾಗುತ್ತಾರೆ. ನಿಜವಾಗಿ ಪರಿಸ್ಥಿತಿಯನ್ನು ಬದಲಿಸಲು ಶಕ್ತಿಯುಳ್ಳ ರಾಷ್ಟ್ರಗಳು ಆಫ್ರಿಕದ ಬಡರಾಷ್ಟ್ರಗಳ ಬವಣೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಅಸಹಾಯಕ ಪರಿಸ್ಥಿತಿ ಬಂದೊದಗಿದಾಗ ಎಲ್ಲರೂ ತಂತಮ್ಮ ದೇಶಗಳಿಗೆ ಪಲಾಯನ ಮಾಡುತ್ತಾರೆ. ಆದರೆ, ಎಲ್ಲ ಕಾರ್ಮೋಡಗಳ ಹಿಂದೆಯೂ ಒಂದು ಬೆಳ್ಳಿಯ ಗೆರೆ ಇದ್ದೇ ಇರುತ್ತದೆಯಲ್ಲವೇ? ‘ಶಿಂಡ್ಲರ್ಸ್‌ ಲಿಸ್ಟ್‌’ ಚಿತ್ರದಲ್ಲಿರುವ ಒಬ್ಬ ಧೀಮಂತ ಉದಾತ್ತ ಮಾನವನಂತೆ, ಇಲ್ಲಿಯೂ ಒಬ್ಬ ಧೀಮಂತ ಉದಾತ್ತ ನಾಯಕನ ಮಾನವೀಯತೆ ಮಿಂಚುತ್ತದೆ. ಹೀಗೆ ಅಲ್ಲಲ್ಲಿ ಮಿಂಚುವ ಆಶಾವಾದದ ಮಿಣುಕುಗಳನ್ನು ಬಿಟ್ಟರೆ ಮನುಷ್ಯತ್ವ ಬರೀ ಕತ್ತಲೆಯಿಂದಲೇ ಕೂಡಿದೆಯೇನೋ ಎನ್ನುವಷ್ಟು ನಿರಾಶೆ ಮನೆಮಾಡುತ್ತದೆ, ಈ ಚಿತ್ರವನ್ನು ನೋಡಿ ಹೊರಬಂದಾಗ.

ಇದೋ ಇನ್ನೇನು, ನಾಳೆ ಬೆಳಗಾಗ ನಮ್ಮ ಬುಷ್‌ ಮಹಾಶಯ ಎರಡನೇ ನಾಲ್ಕುವರ್ಷಗಳ ಆಳ್ವಿಕೆಗೆ ಸರ್ವಾಲಂಕಾರಭೂಷಿತನಾಗಿ ತಯಾರಾಗಿ ಹಾಜರಾಗುತ್ತಾನೆ, ವಿಶ್ವದ ಎಲ್ಲಾ ಮೂಲೆಗಳಲ್ಲೂ ಸ್ವಾತಂತ್ಯವನ್ನು ಹರಡುವೆನೆಂಬ ಮಹತ್ವಾಕಾಂಕ್ಷೆಯನ್ನು ತನ್ನ ಪ್ರಾಸ್ತಾವಿಕ ಭಾಷಣದಲ್ಲಿ ವ್ಯಕ್ತಪಡಿಸುತ್ತಾನೆ. ಇರಾಕನ್ನು ಮುಗಿಸಿ ಇನ್ಯಾವ ದಿಕ್ಕಿಗೆ ತಿರುಗುತ್ತದೋ ಅವನ ಕಣ್ಣು ಎಂಬುದನ್ನು ಕಾದು ನೋಡಬೇಕಾಗಿದೆಯಷ್ಟೆ! ವಾಷಿಂಗ್‌ಟನ್‌ ಪೋಸ್ಟಿನವರು ಸತ್ತ ಅಮೇರಿಕನ್ನರ ಸಂಖ್ಯೆಯ ಪಕ್ಕದಲ್ಲೇ ಸತ್ತ ಇತರರ ಸಂಖ್ಯೆಯನ್ನೂ ಕೊಡಲಿ. ನರಹತ್ಯೆ ಎಲ್ಲೆಲ್ಲಿ ಎಷ್ಟೆಷ್ಟು ನಡೆಯುತ್ತಿದೆ, ಯಾರಿಂದ ನಡೆಯುತ್ತಿದೆ ಎಂಬುದನ್ನು ಎಲ್ಲ ಪತ್ರಿಕೆಗಳೂ ಎಲ್ಲ ಭಾಷೆಗಳಲ್ಲೂ ಪ್ರಕಟಿಸಲಿ. ಆಳುವ ಮಹಾಜನರು ಮಾನವಜೀವಕ್ಕೆ (ಅದು ಯಾವ ಜಾತಿಯದೇ ಆಗಿರಲಿ, ಯಾವ ದೇಶ, ಯಾವ ಧರ್ಮ ಅಥವ ಯಾವ ಬಣ್ಣದ್ದೇ ಆಗಿರಲಿ) ಸಮಾನವಾದ ಬೆಲೆ ಕಟ್ಟಲಿ. ಒಂದು ಜೀವವೂ ನಿಷ್ಕಾರಣವಾಗಿ ಅನ್ಯಾಯ, ಅತ್ಯಾಚಾರ ಮತ್ತು ಹಿಂಸೆಗೆ ಗುರಿಯಾಗದಂತೆ ನೋಡಿಕೊಳ್ಳುವ ಸದ್ಬುದ್ಧಿ ಆಳುವಜನಕ್ಕೆ ಬರಲಿ, ಸಬಲರು ನಿರ್ಬಲರನ್ನು ರಕ್ಷಿಸಲಿ ಎಂದು ಆಶಿಸುತ್ತ, ವಿರಮಿಸುವೆ ಮುಂದಿನ ಕಂತಿನವರೆಗೆ.

(ವಿ.ಸೂ. ‘ಹೊಟೆಲ್‌ ರುವಾಂಡ’ ನೋಡಬೇಕಾದ ಚಿತ್ರಗಳಲ್ಲಿ ಒಂದು. ಬಿಳಿಯರಿಗೆ ಕರಿಯರ ಬಗ್ಗೆ ಇರುವ ದಿವ್ಯ ನಿರ್ಲಕ್ಷ ಒಂದುಕಡೆ ಕಾಡಿದರೆ, ಕರಿಯರು ತಮ್ಮತಮ್ಮಲ್ಲೇ ಪ್ರದರ್ಶಿಸುವ ದ್ವೇಷ ಮತ್ತೊಂದುಕಡೆ ಕಾಡುತ್ತದೆ. ಹೋದಲ್ಲೆಲ್ಲ ಜನರನ್ನು ವಿಭಜಿಸಿ ಪರಸ್ಪರ ದ್ವೇಷ ಅಸೂಯೆಗಳನ್ನು ಹುಟ್ಟಿಸಿ ಎರಡು ಕಡೆಯವರಿಗೂ ಆಯುಧಗಳನ್ನು ಮಾರಿ ಇಬ್ಬರಿಂದಲೂ ಲಾಭಪಡೆಯುವ ಬಿಳಿಯರ ಹಳೆಯ ಚಾಳಿ ಇಲ್ಲೂ ನೋಡ ಸಿಗುತ್ತದೆ. ಒಟ್ಟಾರೆ, ಮಾನವರಲ್ಲಿ ತುಂಬಿರುವ ದ್ವೇಷ ಮತ್ತು ಕ್ರೌರ್ಯದಿಂದ ಮೈನಡುಗಿ, ಹೊಟ್ಟೆ ತೊಳಸಿ ವಾಕರಿಕೆ ಬರುತ್ತದೆ.)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X