• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಹಿಸತ್ಯಗಳ ನಡುವೆ ಕನ್ನಡಪ್ರೀತಿ

By Staff
|
Dr.M.S.Nataraj ಡಾ. ಮೈ.ಶ್ರೀ. ನಟರಾಜ

ಪೊಟೊಮೆಕ್‌, ಮೇರೀಲ್ಯಾಂಡ್‌

Mysreena@aol.com

ಕನ್ನಡ ಚಲನ ಚಿತ್ರದ ಬಗ್ಗೆ ಪ್ರಕಟವಾದ ನನ್ನ ಲೇಖನ (‘ನೋಡಲಾರೆ ನಾ ಕನ್ನಡ ಚಿತ್ರ’) ಅನೇಕರ ಪ್ರತಿಕ್ರಿಯೆಗೆ ಕಾರಣವಾಯಿತು ಎಂಬುದನ್ನು ಜಾಲತರಂಗದ ಓದುಗರು ಗಮನಿಸಿರಬಹುದಷ್ಟೆ? ಹಲವು ಪ್ರಾತಿನಿಧಿಕ ಪ್ರತಿಕ್ರಿಯೆಗಳನ್ನು ‘ದಟ್ಸ್‌ ಕನ್ನಡ’ ಮಾರ್ಚ್‌ 3 ಮತ್ತು ಮಾರ್ಚ್‌ 8ರಂದು ಸಂಗ್ರಹಿಸಿ ಪ್ರಕಟಿಸಿದೆ. ಅವು ಪ್ರಕಟವಾದ ಮೇಲೂ ಪ್ರತಿಕ್ರಿಯೆಗಳು ಬರುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಒಂದೆರಡು ಅಂಶಗಳನ್ನು ಕುರಿತು ಮತ್ತೆ ಬರೆಯಬೇಕೆನಿಸಿತು, ಹಾಗಾಗಿ ಈ ಲೇಖನ.

ಅಂಕಣವನ್ನು ತಪ್ಪದೇ ಓದುವ ಅಭಿಮಾನಿಗಳು ಎಲ್ಲ ಲೇಖನಗಳಿಗೂ ಪ್ರತಿಕ್ರಿಯಿಸುವುದಿಲ್ಲ. ಆಗಿಂದಾಗ್ಗೆ, ಯಾವುದೋ ಒಂದು ಲೇಖನ ಓದುಗರ ಅಂತರಂಗವನ್ನು ಮುಟ್ಟುತ್ತದೆ. ಕೆಲವು ಓದುಗರು ಥಟ್ಟನೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ, ಕೆಲವರು ಎದುರಿಗೆ ಕಂಡಾಗ ಅದರ ಬಗ್ಗೆ ಅಭಿಪ್ರಾಯ ತಿಳಿಸುತ್ತಾರೆ. ಹೆಚ್ಚಿನ ಓದುಗರ ಪ್ರತಿಕ್ರಿಯೆಗಳು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತವಾದರೂ ಅಪರೂಪಕ್ಕೆ ಹಲವು ಓದುಗರು ನಾನು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ತಮಗೆ ಒಪ್ಪಿಗೆಯಾಗದಿದ್ದನ್ನು ತಿಳಿಸುತ್ತಾರೆ, ಕೆಲವರು ಪ್ರತಿರೋಧದ ಜೊತೆಗೆ(ಕೊಂಚ)ಕ್ರೋಧವನ್ನೂ ವ್ಯಕ್ತಪಡಿಸುತ್ತಾರೆ. ಲೇಖಕನು ಮೆಚ್ಚುಗೆಯನ್ನು ಸ್ವೀಕರಿಸಿದಂತೆಯೇ ಟೀಕೆಗಳನ್ನು ಸ್ವೀಕರಿಸಬೇಕು. ರಚನಾತ್ಮಕ ಟೀಕೆಗಳಿಂದ ಲೇಖಕರಿಗೆ ‘ಕ್ಯಾಲಿಬ್ರೇಷನ್‌’ ಸಾಧ್ಯವಾಗುತ್ತದೆ. ‘ಲೇಖಣಿ ಸವೆದುಹೋಗಿದ್ದರೆ ಚೂಪುಮಾಡಿಕೊಳ್ಳಲು ಸಾಧನವಾಗುತ್ತದೆ’ ಎಂದು ಶಾಮಸುಂದರ್‌ ಬರೆದಿದ್ದನ್ನು ಓದಿದ ನೆನಪು!. ಆದ್ದರಿಂದ, ಜಾಲತರಂಗದ ಓದುಗರಿಗೆ ಮತ್ತು ಪ್ರತಿಕ್ರಿಯೆ ವ್ಯಕ್ತಪಡಿಸಿದವರಿಗೆ ಧನ್ಯವಾದಗಳನ್ನರ್ಪಿಸುತ್ತ ಮುಂದುವರೆಯುವೆ.

ಮೊಟ್ಟ ಮೊದಲಿಗೆ, ‘ನೋಡಲಾರೆ ನಾ ಕನ್ನಡ ಚಿತ್ರ’ಎಂಬ ಶೀರ್ಷಿಕೆ ಕೆಲವರಿಗೆ ತೊಂದರೆ ಕೊಟ್ಟಿರುವಂತೆ ತೋರುತ್ತದೆ. ಒಬ್ಬ ಓದುಗರು ಈ ತಲೆಬರಹವನ್ನು ಬದಲಿಸಿ ಎಂದು ಸಲಹೆ ಕೊಟ್ಟರು. ಇನ್ನೊಬ್ಬ ಮಿತ್ರರು ಇದೇ ಲೇಖನಕ್ಕೆ ‘ಅಂಗಾಂಗಭಂಗಶೂಲೆ’ ಅಥವಾ ‘ಆಸ್ಥಿಯೋದಿಸ್ಕೋಸಿಸ್‌’ ಎಂತಲೋ ತಲೆಬರಹ ಇದ್ದಿದ್ದರೆ ಚೆನ್ನಾಗಿತ್ತು ಎಂದಿದ್ದರು. ಆ ತಲೆಬರಹದ ಲೇಖನ ಎಷ್ಟು ಓದುಗರನ್ನು ಆಕರ್ಷಿಸುತ್ತಿತ್ತೋ ಹೇಳಲಾರೆ. ನನ್ನ ಆ ಲೇಖನ ಇಡೀ ಕನ್ನಡ ಚಿತ್ರರಂಗದ ಬಗ್ಗೆ ಸಿಂಹಾವಲೋಕನವಾಗಲೀ ವಿಮರ್ಶಾತ್ಮಕ ಲೇಖನವಾಗಲೀ ಅಲ್ಲ ಎಂಬುದನ್ನು ಈ ಮೂಲಕ ತಿಳಿಯಪಡಿಸಲು ಇಚ್ಚಿಸುತ್ತೇನೆ. ಅಂಥಾ ಒಂದು ಲೇಖನವನ್ನು ಬರೆಯಲು ನಾನು ಸಮರ್ಥನೂ ಅಲ್ಲ, ಏಕೆಂದರೆ, ನಾನು ಚಿತ್ರಗಳನ್ನು ನೋಡುವುದೇ ಅಪರೂಪ, ಮತ್ತು ಚಿತ್ರರಂಗದ ಬಗ್ಗೆ ನನ್ನ ತಿಳಿವಳಿಕೆಯೂ ತುಂಬ ಮಿತಿಯುಳ್ಳದ್ದು. ಆದ್ದರಿಂದ, ನನ್ನ ಲೇಖನ, ಆ ಒಂದು ದಿನದ, ಆ ಒಂದು ಚಿತ್ರವನ್ನು ಅಂದಿನ ಆ ಸಂದರ್ಭದಲ್ಲಿ ನೋಡಿದಾಗ ಉಂಟಾದ ಪ್ರತಿಕ್ರಿಯೆ ಅಷ್ಟೆ. ಹಾಗೆ ಪ್ರತಿಕ್ರಿಯಿಸುವಾಗ ನನ್ನ ಹಿಂದಿನ ಅನುಭವಗಳು ಮತ್ತು ನನ್ನ ವೈಯುಕ್ತಿಕ ಅಭಿಪ್ರಾಯಗಳು ಹೊರಬಿದ್ದಿವೆ, ಅವನ್ನು ನಾನು ಹಿಂತೆಗೆದುಕೊಳ್ಳುತ್ತಿಲ್ಲ.

ಓದುಗರ ಪ್ರತಿಕ್ರಿಯೆಯಿಂದ ನನಗೆ ದೊರೆತಿರುವ ಮಾಹಿತಿಗಳು ಹಲವು, ಅದರಿಂದ ನನಗೆ ಉಪಕಾರವಂತೂ ಆಗಿದೆ. ಮೊದಲನೆಯದಾಗಿ, ಕನ್ನಡ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಚಿತ್ರದ ಬಗ್ಗೆ ಪ್ರಕಟವಾದ ಅಭಿಪ್ರಾಯಗ ಳನ್ನು, ವಿಮರ್ಶೆಗಳನ್ನೂ ಅರಗಿಸಿಕೊಂಡನಂತರವೇ ಚಿತ್ರಗಳನ್ನು ಪ್ರದರ್ಶಿಸಬೇಕು ಎಂಬುದು ಒಂದು ವಿಚಾರ. ಅದು ಎಷ್ಟರ ಮಟ್ಟಿಗೆ ಸಾಧ್ಯವೋ ಹೇಳಲಾರೆ. ಸಾಧ್ಯವಾದರೆ ಒಳ್ಳೆಯದು.

ಎರಡನೆಯ ಸಲಹೆ, ನೋಡುಗರೂ ಸಹ ಪೂರ್ವಾಪರ ವಿಚಾರಿಸದೇ ಚಿತ್ರಕ್ಕೆ ಹೋಗಕೂಡದು, ಹಾಗೆ ಹೋದ ಮೇಲೆ ನೋಡಿಕೊಂಡು ತೆಪ್ಪನಿರಬೇಕು(ಅಂದರೆ ಟೀಕಿಸಬಾರದು) ಎಂಬ ಅಭಿಪ್ರಾಯ ಕೆಲವರದ್ದು. ಅನೇಕ ವೇಳೆ ಹೊರನಾಡಿನಲ್ಲಿರುವ ಕನ್ನಡಿಗರು ಅಪರೂಪಕ್ಕೆ ಕನ್ನಡ ಸಿನಿಮಾ ಬಂದಿದೆಯಲ್ಲ ಎಂಬ ಅಭಿಮಾನದಿಂದ ಅನೇಕರು ಚಿತ್ರನೋಡಲು ಬರುತ್ತಾರೆ, ಚೆನ್ನಾಗಿರದಿದ್ದರೆ ನಿರಾಶರಾಗುತ್ತಾರೆ. ಇದರಲ್ಲಿ ಅತಿಶಯವೇನಿಲ್ಲ. ಹತ್ತಾರು ಚಿತ್ರ ನೋಡುವವರಿಗೆ ಒಂದೆರಡು ನಿರಾಸೆಯಾದರೆ ಚಿಂತೆಯಿಲ್ಲ, ಅಪರೂಪಕ್ಕೆ ನೋಡುವವರಿಗೆ ಕೆಟ್ಟ ಚಿತ್ರಗಳಿಂದ ಹೆಚ್ಚಿನ ನಿರಾಸೆಯಾಗುತ್ತದೆ. ಮನೆಯಲ್ಲಿ ಕೂತು ಡಿವಿಡಿ ನೋಡುವ ಮಾತು ಬೇರೆ, ಬೇಸರವಾದರೆ ನಿಲ್ಲಿಸಬಹುದು ಅಥವಾ ಮುಂದೋಡಿಸಬಹುದು. ಆದರೆ 20-30ಮೈಲಿ ಹೋಗಿ ಚಿತ್ರಮಂದಿರದಲ್ಲಿ ಕುಳಿತ ಮೇಲೆ ಸಮಯ ಮತ್ತು ಶ್ರಮ ವ್ಯಯವಾಗಿರುತ್ತದೆಯಾಗಿ ನಿರೀಕ್ಷೆಯೂ ಸ್ವಲ್ಪ ಹೆಚ್ಚೆ ಇರುತ್ತದೆ!

ಇತರ ಭಾಷೆಗಳಲ್ಲೂ ಕೆಟ್ಟ ಚಿತ್ರಗಳಿವೆ, ಕನ್ನಡವನ್ನೇ ಏಕೆ ಬಯ್ಯಬೇಕು? ಎಂಬುದು ಮತ್ತೊಂದು ಪ್ರಶ್ನೆ. ಎಲ್ಲ ಭಾಷೆಗಳಲ್ಲೂ ಒಳ್ಳೆಯ ಮತ್ತು ಕೆಟ್ಟ ಚಿತ್ರಗಳಿರುತ್ತವೆ ಅನ್ನುವ ಸತ್ಯವನ್ನು ನಾನೂ ಒಪ್ಪುತ್ತೇನೆ. ಹಾಗೆಂದ ಮಾತ್ರಕ್ಕೆ ಕೆಟ್ಟ ಚಿತ್ರಗಳನ್ನು ಒಳ್ಳೆಯವೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಒಳ್ಳೆಯದು ಒಳ್ಳೆಯದೇ, ಕೆಟ್ಟದ್ದು ಕೆಟ್ಟದ್ದೇ(ಕನ್ನಡದಲ್ಲೇ ಆಗಲೀ, ಇತರ ಭಾಷೆಗಳಲ್ಲೇ ಆಗಲಿ).

ಕನ್ನಡದಲ್ಲಿ ಅನೇಕ ಉತ್ತಮ ಚಿತ್ರಗಳು ತಯಾರಾಗಿವೆ ಎಂಬುದೂ ಒಪ್ಪುವ ಮಾತೇ. ಮತ್ತು, ಇತ್ತಿಚೆಗೆ ಹಲವು ಉತ್ತಮ ಕನ್ನಡ ಚಿತ್ರಗಳು ಬಂದಿವೆ ಎಂಬ ಮಾಹಿತಿ ಅನೇಕರ ಪ್ರತಿಕ್ರಿಯೆಯಿಂದ ತಿಳಿದು ಬಂದಿದೆ. ಅಂಥ ಉತ್ತಮ ಚಿತ್ರಗಳನ್ನು ವಿತರಕರು ಅಮೇರಿಕಕ್ಕೂ ತರಿಸಲಿ, ನಮ್ಮ ಸಂಘಗಳೂ ಪ್ರದರ್ಶಿಸಲಿ, ನಾನಂತೂ ಹೋಗಿ ನೋಡುವವನೇ.

ಹಲವರ ಪತ್ರದಿಂದ, ‘ನಾವು ನಿಜವಾದ ಕನ್ನಡಾಭಿಮಾನಿಗಳೇ?’ ಎಂಬ ಪ್ರಶ್ನೆ (ಅನುಮಾನ) ಇದ್ದಂತಿದೆ. ಅಂಥವರಿಗೆ ನನ್ನ ಉತ್ತರ ಇಷ್ಟೆ, ಕರ್ನಾಟಕವನ್ನು ಬಿಟ್ಟು ದಶಕಗಳಾಗುತ್ತ ಬಂತು, ಆದರೂ ನಮ್ಮಲ್ಲನೇಕರು ಹೊರನಾಡಿನಲ್ಲೂ ಪರದೇಶದಲ್ಲೂ ತಪ್ಪದೇ ನಿತ್ಯವೂ ಕನ್ನಡದಲ್ಲಿ ಮಾತಾಡುತ್ತೇವೆ, ಓದುತ್ತೇವೆ ಮತ್ತು ಬರೆಯುತ್ತೇವೆ ಸಹ. ಸುತ್ತಲೂ ಅಮೇರಿಕವಿದ್ದರೂ ಯಾರಿಗೂ ಕಾಣದ, ಆದರೆ ನಮಗೆ ಮಾತ್ರ ವೇದ್ಯವಾಗುವ ಕನ್ನಡದ ಒಂದು ವಾತಾವರಣವನ್ನು ಅಮೆರಿಕನ್ನಡಿಗರಲ್ಲಿ ಅನೇಕರು ಇಲ್ಲಿ ಉಂಟುಮಾಡಿಕೋಂಡಿದ್ದೇವೆ ಎಂದರೆ ಅದು ಕೇವಲ ಹೊಗಳಿಕೆಯ ಮಾತಲ್ಲ. ಇದಕ್ಕಿಂತ ಹೆಚ್ಚಿನ ಕನ್ನಡಪ್ರೇಮವನ್ನು ಹತ್ತು ಸಾವಿರ ಮೈಲಿ ಆಚೆಯಿಂದ ಪ್ರದರ್ಶಿಸುವುದ ಸುಲಭದ ವಿಷಯವಲ್ಲ. ಹಾಗೆಂದ ಮಾತ್ರಕ್ಕೆ ನಾವು ಕಳಪೆ ದರ್ಜೆಯನ್ನು ಕೇವಲ ಅಭಿಮಾನಕ್ಕಾಗಿ ಮೇಲೇರಿಸಲು ತಯಾರಿಲ್ಲ.

‘ಭಾರತದ ಅನ್ನವನ್ನು ತಿಂದು ಬೆಳೆದ ನೀವು ದೇಶವನ್ನೇ ಬಿಟ್ಟೋಡಿದವರು, ನಿಮಗೆ ಕನ್ನಡ ಚಿತ್ರಗಳ ಬಗ್ಗೆ ಮಾತಾಡುವ ಹಕ್ಕೇ ಇಲ್ಲ’ ಎಂಬುದು ಇವರ ಧೋರಣೆ. (ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಪತ್ರದಲ್ಲಿನ ಕೆಲ ಉತ್ತಮ ಅಂಶಗಳನ್ನು ಮಾತ್ರ ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ). ಈ ಪತ್ರದಲ್ಲಿನ ವಾದದ ಪ್ರಕಾರ, ಎಲ್ಲರೂ ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿಯೇ ದುಡಿಯುವುದು. ಸಿನಿಮಾ ನಿರ್ಮಾಪಕರೂ ನಿರ್ದೇಶಕರೂ ಇದಕ್ಕೆ ಹೊರತಲ್ಲ. ದೇಶವನ್ನೇ ಬಿಟ್ಟೋಡಿದ ನಾವೂ ಪಲಾಯನ ಮಾಡಿರುವುದು ಇದೇ ಕಾರಣಕ್ಕಾಗಿ ಎಂದು ಸ್ವಲ್ಪ ನಿರ್ದಾಕ್ಷಿಣ್ಯವಾಗೇ ಈ ಪತ್ರದಲ್ಲಿ ತಿಳಿಯಪಡಿಸಲಾಗಿದೆ. ಈ ಮಾತಿನಲ್ಲೂ ಸತ್ಯಾಂಶವಿಲ್ಲದಿಲ್ಲ. ಇದರಬಗ್ಗೆ ಹೇಳುವುದಿಷ್ಟೆ, ನಾವು ಯಾವ ಕಾರಣಕ್ಕಾಗಿ ದೇಶವನ್ನು ಬಿಟ್ಟು ಬಂದಿದ್ದೇವೆ ಎಂಬ ವಿಷಯವಲ್ಲ ನಾವು ಚರ್ಚಿಸುತ್ತಿರುವುದು. ಕನ್ನಡದ ಬಗ್ಗೆ ಕಾಳಜಿ ಉಳ್ಳವರು ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ಅವರು ಕನ್ನಡದ, ಕನ್ನಡ ನಾಡಿನ ಮತ್ತು ಕನ್ನಡ ಚಿತ್ರಗಳ ಬಗ್ಗೆ ಧಾರಾಳವಾಗಿ ಮಾತಾಡಬಹುದು, ವಿಮರ್ಶಿಸಬಹುದು. ದ್ವೇಷ ಅಸೂಯೆಗಳಿಂದಲ್ಲ, ಹಮ್ಮು-ಬಿಮ್ಮುಗಳಿಂದಲ್ಲ, ಆದರೆ, ನಾಡು-ನುಡಿಯ ಬಗ್ಗೆ ಗೌರವ ಉಳ್ಳವರಿಗೆ ಚಿತ್ರವನ್ನು ನೋಡಿ ಅಭಿಪ್ರಾಯವನ್ನು ವ್ಯಕ್ತ ಪಡಿಸಲು ಎಲ್ಲರಿಗೂ ಹಕ್ಕುಂಟು. ವಾಕ್‌ ಸ್ವಾತಂತ್ರ್ಯ, ಅಭಿಪ್ರಾಯಸ್ವಾತಂತ್ರ್ಯಇವೆಲ್ಲ ಭಾರತ ಮತ್ತು ಅಮೆರಿಕ ಎರಡೂ ರಾಷ್ತ್ರಗಳ ಪ್ರಜೆಗಳಿಗೆ ಪ್ರಜಾಪ್ರಭುತ್ವ ಕೊಟ್ಟ ಹಕ್ಕು ಎಂಬುದನ್ನು ನಾವು ಮರೆಯಬಾರದು.

ಮತ್ತೊಂದು ಪ್ರಶ್ನೆ, ಪಾಶ್ಚಿಮಾತ್ಯ ಚಿತ್ರಗಳಲ್ಲಿ ಹಿಂಸೆ, ಲೈಂಗಿಕ ಅಭಿನಯ ಮತ್ತು ನಗ್ನತೆ ಇರುವುದಿಲ್ಲವೇ? ಅಂಥಾ ಚಿತ್ರಗಳನ್ನು ನಾವು ನೋಡುವುದಿಲ್ಲವೇ? ಅದರಬಗ್ಗೆ ಚಕಾರ ಎತ್ತದ ಭಾರತೀಯ ನೋಡುಗರು ಭಾರತೀಯ ಚಲನಚಿತ್ರಗಳಲ್ಲಿ ಕಾಮುಕತೆ ಮತ್ತು ಹಿಂಸೆ ಕ್ರೌರ್ಯಗಳ ಬಗ್ಗೆ ಏಕೆ ಮುಖ ಹಿಂಡುತ್ತಾರೆ? ಪ್ರಶ್ನೆ ನ್ಯಾಯವಾದದ್ದೆ. ಆದರೆ, ಪಾಶ್ಚಿಮಾತ್ಯ ಸಂಸ್ಕೃತಿ ಏನು ನಮ್ಮ ಭಾರತೀಯ ಸಂಸ್ಕೃತಿ ಏನು? ಒಂದಕ್ಕೊಂದು ವ್ಯತ್ಯಾಸವಿಲ್ಲವೆ? ಪಾಶ್ಚಿಮಾತ್ಯರ ಒಳ್ಳೆಯ ಗುಣಗಳನ್ನು ಅನುಕರಿಸದ ಭಾರತೀಯರು ಅವರ ಹೀನಗುಣಗಳನ್ನೇಕೆ ಅನುಕರಿಸುತ್ತಾರೆ? ಭಾರತೀಯ ಸಂಗೀತ ಮತ್ತು ನೃತ್ಯ ಅಮೋಘವಾಗಿರುವಾಗ ಕುರುಡರಂತೆ ಹೊರಗಿನವರ ಸಂಗೀತ ನೃತ್ಯಗಳನ್ನೇಕೆ (ಕೆಟ್ಟದಾಗಿ) ಅನುಕರಿಸಬೇಕು? ಮನರಂಜನೆಯ ಹೆಸರಿನಲ್ಲಿ ನಮ್ಮತನವನ್ನೇ ಬಿಟ್ಟುಬಿಡಬೇಕೆ? ಸೌಂದರ್ಯಪ್ರದರ್ಶನ ಒಳ್ಳೆಯದು, ಅಶ್ಲೀಲತೆ ಒಳ್ಳೆಯದಲ್ಲ. ಶೃಂಗಾರರಸ ಮನಸ್ಸಿಗೆ ಆಹ್ಲಾದವನ್ನು ಕೊಡಬೇಕೇ ಹೊರತು ಕಾಮುಕತೆಯನ್ನು ಪ್ರಚೋದಿಸಬಾರದು. ಸೂಚ್ಯವಾಗಿರಬೇಕಾದ್ದು ವಾಚ್ಯವಾಗಬಾರದು, ವಾಚ್ಯವಾಗಲೇ ಬೇಕಾದದ್ದು ಅವಾಚ್ಯವಾಗಬಾರದು, ಊಹೆಗೆ ಬಿಡಬೇಕಾದ್ದು ಅಗೋಚರವಾಗಿದ್ದರೇ ಅದಕ್ಕೆ ಹೆಚ್ಚಿನ ಕಲಾತ್ಮಕೆ ಬೆಲೆ ಎಂಬುದನ್ನು ಮರೆಯಬಾರದು.

ಸ್ನೇಹಿತರೊಬ್ಬರ ಸಲಹೆ, ‘ಸಿನಿಮಾ ನೋಡುವಾಗ ತರ್ಕ ಬಿಡಿ, ಎಲ್ಲವೂ ಸತರ್ಕವಾಗಿರುವುದಿಲ್ಲ’ ಎಂದು. ಮತ್ತೊಬ್ಬ ಅಭಿಮಾನಿ ಓದುಗರು(ಇವರು ಅನೇಕ ಭಾಷೆಗಳಲ್ಲಿ ಅನೇಕ ಚಿತ್ರಗಳನ್ನು ಗಂಭೀರವಾಗಿ ನೋಡಿ ವಿಮರ್ಶೆ ಮಾಡುವವರು ಮತ್ತು ಅಧ್ಯಯನಪೂರ್ವಕವಾಗಿ ನೋಡುವವರು. ಅವರೆನ್ನುವುದು ‘ಯಾವ ನಿರೀಕ್ಷೆಯೂ ಇಲ್ಲದೇ ತೆರೆದ ಮನಸ್ಸಿನಿಂದ ಚಿತ್ರ ನೋಡಿದರೆ ಪ್ರತಿಚಿತ್ರದಲ್ಲೂ ಒಂದೆರಡು ಉತ್ತಮ ಅಂಶಗಳು ಕಾಣಸಿಗುತ್ತವೆ’. ಈ ಎರಡೂ ಸಲಹೆಗಳನ್ನು ನಾನು ಒಪ್ಪುತ್ತೇನೆ, ಆದರೆ ಆ ಸಡಿಲಿಕೆಗೂ ಒಂದು ಮಿತಿ ಇರಬೇಡವೇ? ಸಿನಿಮಾ ನೋಡುವವರೆಲ್ಲ ಉದ್ಧಾಮ ಪಂಡಿತರಲ್ಲದಿದ್ದರೂ ದಡ್ಡರೇನಲ್ಲ. ಅವರ ಬುದ್ಧಿವಂತಿಕೆಗೆ ಅವಮಾನವಾಗಕೂಡದು, ನೋಡುಗರ ಚಿಂತಾಶಕ್ತಿಗೆ ಅವಹೇಳನವಾಗಕೂಡದು, ಎಂಬುದು ನನ್ನ ಮತ.

ಕೊನೆಯದಾಗಿ, ಒಂದೇ ಚಿತ್ರ ಬೇರೆ ಬೇರೆ ಜನರಲ್ಲಿ ಬೇರೆ ಬೇರೆ ಪ್ರತಿಕ್ರಿಯೆಯನ್ನುಂಟು ಮಾಡಿದಂತೆ, ನೋಡುಗರ ಮನಃಸ್ಥಿತಿ ನೋಡುವ ಸಂದರ್ಭದಲ್ಲಿ ಹೇಗಿರುತ್ತದೋ ಅದನ್ನೂ ಅದು ಅವಲಂಭಿಸುತ್ತದೆ. ನಾನು ‘ತುಂಟಾಟ’ವನ್ನು ನನ್ನ ಮಗಳೊಂದಿಗೆ ನೋಡದೇ ಹೋಗಿದ್ದರೆ, ಅವಳು ಒಂದೆರಡು ಸವಾಲುಗಳನ್ನು ಎಸೆಯದೇ ಹೋಗಿದ್ದರೆ, ನಾನು ಸಿನಿಮಾ ನೋಡಿ ಒಂದಷ್ಟು ನಿರಾಸೆಯಿಂದ ಹಿಂದಿರುಗುತ್ತಿದ್ದೆ. ಹಿಂದೆ ನೋಡಿದ ಅನೇಕ ಕೆಟ್ಟ ಚಿತ್ರಗಳ ಗುಂಪಿಗೆ ಅದೂ ಸೇರಿ ನೆನಪಿನ ಭಾವಿಯಲ್ಲಿ ಹೂತು ಹೋಗುತ್ತಿತ್ತು.

ಕನ್ನಡಿಗರಲ್ಲಿ ಯಾವುದಕ್ಕೆ ಕೊರತೆ? ಉತ್ತಮ ನಟ ನಟಿಯರಿಲ್ಲವೇ? ಉತ್ತಮ ತಂತ್ರಜ್ಞರಿಲ್ಲವೇ? ಉತ್ತಮ ಲೇಖಕರಿಲ್ಲವೇ?(ಒಬ್ಬರು ಪತ್ರದಲ್ಲಿ ನನಗೆ ನೆನಪು ಮಾಡಿಕೊಟ್ಟಿರುವಂತೆ, ಜ್ಞಾನಪೀಠಗಳ ಸುರಿಮಳೆಯೇ ಕನ್ನಡಕ್ಕಾಗಿದೆ!) ಇಷ್ಟಾದರೂ ಕನ್ನಡದಲ್ಲಿ ಓದುಗರ ಸಂಖ್ಯೆ ಕಮ್ಮಿ. ಕನ್ನಡಿಗರಲ್ಲಿ ಅಭಿಮಾನವೆಂಬ ಗುಣ ಎಂದೂ ಇದ್ದಂತಿಲ್ಲ. ನಾಲ್ಕು ದಶಕಗಳ ಹಿಂದೆ ನಾನು ಬೆಂಗಳೂರಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ನಡೆಯುತ್ತಿದ್ದ ಕನ್ನಡ ಚಳುವಳಿ ಇಂದೂ ನಡೆಯುತ್ತಿದೆ. ಆದರೆ ಪರಿಣಾಮ ಮಾತ್ರ ಸೊನ್ನೆ. ಮಹಲುಗಳಲ್ಲಿ, ಅಂಗಡಿಗಳಲ್ಲಿ ಕನ್ನಡದಲ್ಲಿ ಮಾತಾಡಿದರೆ ಉತ್ತರ ಕೊಡುವವರು ದಿಕ್ಕಿಲ್ಲ. ಕನ್ನಡದಲ್ಲಿ ಫಲಕಗಳನ್ನು ಹೆಚ್ಚು ಜನ ಬರೆಸುವುದಿಲ್ಲ. ಕನ್ನಡಿಗರೇ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳಿಸುವುದಿಲ್ಲ (ಆದರೂ ಅಮೇರಿಕದಲ್ಲಿರುವ ನಮ್ಮ ಮಕ್ಕಳಿಗೆ ಕನ್ನಡ ಕಲಿಸಿ ಎಂದು ಬುದ್ಧಿವಾದ ಹೇಳುವು ದನ್ನು ಮಾತ್ರ ಮರೆಯುವುದಿಲ್ಲ!) ಬೇರೆಭಾಷೆಯವರೊಂದಿಗೆ ಸಮಾನಮನಸ್ಕರಂತೆ ಹೆಮ್ಮೆಯಿಂದ ನಿಂತು ಮಾತಾನಾಡಲಾರದ ಕನ್ನಡಿಗರು ಕೀಳರಿಮೆಯಿಂದ ನರಳುತ್ತ ತಮಿಳು, ಹಿಂದೀ, ತೆಲುಗು ಮತ್ತು ಆಂಗ್ಲ ಚಿತ್ರಗಳನ್ನು ನೋಡಿ ಚಪ್ಪರಿಸುತ್ತಾ ಕನ್ನಡ ಚಿತ್ರಗಳನ್ನು ನೋಡಲು ಯೋಗ್ಯವಲ್ಲದವಂತೆ ಕಾಣುತ್ತಾರೆ. ಇದರ ಜೊತೆಗೆ ಕನ್ನಡದ ಅನ್ನವನ್ನು ತಿಂದು ಕೊಬ್ಬಿದ ಚಿತ್ರಮಂದಿರಗಳ ಮಾಲೀಕರು, ವಿತರಕರು ಮತ್ತು ಇತರ ಮಾರುಕಟ್ಟೆಯ ದಳ್ಳಾಳಿಗಳು ಕನ್ನಡ ಭಾಷೆಗೆ, ಪ್ರತಿಭಾವಂತ ಕನ್ನಡ ನಿರ್ದೇಶಕರಿಗೆ ಮತ್ತು ಅಭಿಮಾನೀ ನಿರ್ಮಾಪಕರಿಗೆ ಮೋಸ ಮಾಡುತ್ತ ಇಡೀ ಕನ್ನಡನಾಡಿಗೆ ಬೆನ್ನಿರಿಯುತ್ತಿದ್ದಾರೆ. ಕನ್ನಡಾಭಿಮಾನಿಗಳ ಕೋಪ ಇವರೆಲ್ಲರ ಮೇಲೆ ತಿರುಗಿದರೆ ಕನ್ನಡ ಚಿತ್ರರಂಗದಲ್ಲೂ ಗುಣಮಟ್ಟ ತಾನೇತಾನಾಗಿ ಏರುತ್ತದೆ. ಕರ್ನಾಟಕದಲ್ಲಿರುವ ಕನ್ನಡಿಗರಿಗೂ ಮತ್ತು ‘ಕೂಳಿಗಾಗಿ ಸ್ವದೇಶವನ್ನು ಬಿಟ್ಟೋಡಿದ’ ಹೊರನಾಡಿನ ಹಾಗು ಹೊರದೇಶದಲ್ಲಿರುವ ನಮ್ಮಂತಹ ಕನ್ನಡಿಗರಿಗೂ ಉತ್ತಮಮಟ್ಟದ ಚಿತ್ರಗಳು ನೋಡಸಿಗುತ್ತವೆ.

ರೇಶ್ಮೆ ಸೀರೆಯುಟ್ಟಿರಲಿ ಹರುಕು ಸೀರೆಯುಟ್ಟಿರಲಿ ನಮ್ಮ ತಾಯಿ ನಮಗೆ ಪ್ರಿಯಳೆ. ವ್ಯಕ್ತವಾದ ಪ್ರತಿಕ್ರಿಯೆಗಳಲ್ಲಿ ‘ಈ ಎಲ್ಲ ಕಹಿಸತ್ಯಗಳ ನಡುವೆ ನಾವು ನಮ್ಮ ಕನ್ನಡವನ್ನು ಪ್ರೀತಿಸಬೇಕು, ಅಲ್ವಾ ಸಾರ್‌?’ ಎಂಬ ಕಳಕಳಿಯ ಪ್ರಶ್ನೆ ನನ್ನ ಮನಸ್ಸನ್ನು ಕಲಕಿಬಿಟ್ಟಿತು. ಅಂಥ ನಿರ್ಮಲ ಪ್ರೀತಿ ಕನ್ನಡಭಾಷೆಗೆ ದೊರಕಲೆಂದು ಬಯಸುತ್ತ ವಿರಮಿಸುವೆ ಮುಂದಿನ ಕಂತಿನವರೆಗೆ.

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more