• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾಲ್ಕು ವೃತ್ತಗಳ ವೃತ್ತಾಂತ

By * ಡಾ. ಮೈ.ಶ್ರೀ. ನಟರಾಜ, ಪೊಟೊಮೆಕ್‌, ಮೇರೀಲ್ಯ
|

ಇದೊಂದು ಸರ್ಕಲ್‌ ಥಿಯರಿ. ಯಶಸ್ಸಿನ ಬದುಕಿಗೆ ಹಾದಿ ತೋರಿಸುವ ಥಿಯರಿ. ಯಾರ ಬದುಕಿನಲ್ಲಿ ಈ ನಾಲ್ಕೂ ವೃತ್ತಗಳಿಲ್ಲವೋ, ಯಾರ ವೃತ್ತಗಳು ಸುಮಾರಾಗಿ ಒಂದೇ ಅಳತೆಯುಳ್ಳವಾಗಿರುವುದಿಲ್ಲವೋ, ಅವರು ತಮ್ಮ ಜೀವನ ಶೈಲಿ ಬಗ್ಗೆ ಗಂಭೀರವಾಗಿ ಚಿಂತಿಸಬೇಕು. ತಮ್ಮ ಪ್ರಯಾರಿಟಿಯ ಬಗ್ಗೆ ಸ್ವಲ್ಪ ಚಿಂತಿಸಬೇಕು.

ಇತ್ತೀಚೆಗೆ, ವೃತ್ತಿಗೆ ಸಂಬಂಧಪಟ್ಟ ಯಾವುದೋ ತರಗತಿಯಲ್ಲಿ ಕೂರಬೇಕಾದ ಪ್ರಸಂಗ ಬಂತು. ವರ್ಷಕ್ಕೊಮ್ಮೆ ಇಂತಿಷ್ಟು ತರಬೇತಿಯ ದಿನಗಳು ಎಂದು ನಿಗದಿಯಾಗಿರುವುದರಿಂದ, ಇಷ್ಟವಿರಲಿ ಇಲ್ಲದಿರಲಿ, ಅಗತ್ಯವಿರಲಿ ಇಲ್ಲದಿರಲಿ, ಹೋಗಲೇಬೇಕಾಗುತ್ತದೆಯಷ್ಟೆ. ಇಂತಹ ತರಗತಿಗಳಿಂದ ಯಾವ ಉಪಯೋಗವೂ ಇಲ್ಲವೆನ್ನಲು ಸಾಧ್ಯವಿಲ್ಲ. ಎಲ್ಲಕ್ಕಿಂತ ದೊಡ್ಡ ಉಪಯೋಗವೆಂದರೆ, ನಿತ್ಯ ನೋಡಿ ಬೇಸತ್ತಿರುವ ಹಳಸಿದ ಮುಖಗಳನ್ನು ನೋಡುವ ಬದಲು, ಮಾಮೂಲೀ ಸ್ಥಳದಿಂದಾಚೆ, ಮತ್ಯಾವುದೋ ಸ್ಥಳದಲ್ಲಿ ಒಂದಿಷ್ಟು ಹೊಸ ಮುಖಗಳನ್ನು ನೋಡುತ್ತ, ಹೊಸ ದನಿಗಳನ್ನು ಆಲಿಸುತ್ತ, ಆಫೀಸಿನ ರಾಜಕೀಯವನ್ನು ಮರೆತು, ಹೊರಗಿನ ಪ್ರಪಂಚದತ್ತ ಗಮನ ಹರಿಸಲು ದೊರಕುವ ಅವಕಾಶ.

ಒಂದುವೇಳೆ ಅದೃಷ್ಟವಶಾತ್‌ ಆ ತರಗತಿ ನಡೆಯುವ ಊರು ಸ್ವಾರಸ್ಯಕರವಾದ ಸ್ಥಳವಾಗಿದ್ದರೆ, ಮತ್ತೊಂದಿಷ್ಟು ಮನರಂಜನೆ. ಮಾಡಿದ್ದೇ ಮಾಡುತ್ತ, ಹಾಡಿದ್ದೇ ಹಾಡುತ್ತ, ಆಡಿದ್ದೇ ಆಡುತ್ತ, ಉತ್ಸಾಹ ಕಳೆದುಕೊಳ್ಳುತ್ತಿರುವ ಸಂದರ್ಭಗಳಲ್ಲಿ, ಹೊಸ ಜಾಗ, ಹೊಸ ಗಾಳಿ, ಹೊಸ ಬೆಳಕು, ಹೊಸ ಮಾತು ಮುಂತಾದವುಗಳಿಂದ ಜೀವನದಲ್ಲಿ ಹೊಸ ಅರ್ಥ ಕಾಣುತ್ತದೆ, ಹೊಸ ಉತ್ಸಾಹ ಉಂಟಾಗುತ್ತದೆ. ಮಾಮೂಲಿನಿಂದ ಬಿಡುಗಡೆ ದೊರಕುತ್ತದೆ. ಉದಾಹರಣೆಗೆ, ಹೊಸ ಅಡುಗೆಮಾಡಲು ಬಿಡುವಿಲ್ಲದ/ಆಸಕ್ತಿಯಿಲ್ಲದ ಅಮ್ಮ, ಬೆಳಗಿನ ಅಡುಗೆಯನ್ನೇ ಉಪಯೋಗಿಸಿ ಸಾರನ್ನ, ಮೊಸರನ್ನ ಕಲಸಿ, ಬೆಳುದಿಂಗಳಿನಲ್ಲಿ ಅಂಗಳದ ತುಳಸಿಕಟ್ಟೆಯ ಹತ್ತಿರ ಕೂರಿಸಿ ಕೈತುತ್ತು ಹಾಕಿದಾಗ ಎಷ್ಟೊಂದು ಉತ್ಸಾಹದಿಂದ ಕೈನೆಕ್ಕಿಕೊಳ್ಳುತ್ತ ತಿಂದು ಖುಷಿಪಡುತ್ತಿದ್ದೆವು? ನೆನಪಿಸಿಕೊಳ್ಳಿ!

ತಟ್ಟೆ ತೊಳೆಯುವ, ಗೋಮೆ ಬಳಿಯುವ ಕೆಲಸವೂ ತಪ್ಪಿತು, 'ಅದೇ ಬೆಳಗಿನ ಅಡಿಗೇನಾ?" ಎಂದು ಅನ್ನಿಸಿಕೊಳ್ಳುವುದೂ ತಪ್ಪಿತು, ತಂಗಳು ದಂಡವಾಗದೇ ಸಾರ್ಥಕವಾಯಿತು, ಮಕ್ಕಳೂ ತೃಪ್ತರಾಗಿ, ಹೊಸದೊಂದು ಅನುಭವ ಪಡೆದಂತಾಯಿತು. ಅದೇ ರೀತಿ ಆಗೊಮ್ಮೆ ಈಗೊಮ್ಮೆ ಒದಗುವ ಪರಊರಿನ ತರಬೇತಿ.

ಕ್ಯಾಲಿಫೋರ್ನಿಯಾದ ಪಾಮ್‌ಸ್ಪ್ರಿಂಗ್ಸ್‌ನಲ್ಲಿ ಒಳ್ಳೆಯ ರೆಸಾರ್ಟ್‌ ಹೋಟೆಲಿನ ಸುಂದರ ವಾತಾವರಣ. ಅಮೆರಿಕನ್‌ ಸೊಸೈಟಿ ಆಫ್‌ ಸಿವಿಲ್‌ ಇಂಜಿನಿಯರ್ಸ್‌ ವತಿಯಿಂದ ಏರ್ಪಡಿಸಿದ್ದ 'ನಾಯಕತ್ವ"ಕ್ಕೆ ಸಂಬಂಧಪಟ್ಟ ಒಂದು ವಿಚಾರಸಂಕಿರಣ. ಎರಡು ದಿನಗಳ ಉಪನ್ಯಾಸಗಳಲ್ಲಿ, ಹೆಚ್ಚಿನ ವಿಷಯಗಳೆಲ್ಲ ಚರ್ವಿತ-ಚರ್ವಣವೇ ಆಗಿದ್ದರೂ, ಹಳೇ ಪರಿಚಿತ ಪಾಠಗಳ ನಡುವೆ ಉಪನ್ಯಾಸಕ ಹಾಕಿದ ಒಂದು ಸಣ್ಣ ಪ್ರಶ್ನೆ ಮತ್ತು ಪ್ರಶ್ನೆಗೆ ತರಬೇತಿಯಲ್ಲಿ ಭಾಗವಹಿಸುತ್ತಿದ್ದವರು ಕೊಟ್ಟ ಉತ್ತರಗಳು ಮತ್ತು ಅದರ ಸಲುವಾಗಿ ನಡೆದ ಚರ್ಚೆಗಳಿಂದ ಮೆದುಳಿಗೆ ಒಂದಿಷ್ಟು ಕಸರತ್ತಾಯಿತು.

''ಎಲ್ಲರೂ ಒಂದು ಹಾಳೆಯಲ್ಲಿ ನಾಲ್ಕು ವೃತ್ತಗಳನ್ನು ಚಿತ್ರಿಸಿ"" ಎಂದ ಉಪನ್ಯಾಸಕನ ಮಾತನ್ನು ಕೇಳಿದ ತಕ್ಷಣ ಎಲ್ಲರೂ ನಾಲ್ಕು ವೃತ್ತಗಳನ್ನು ಚಿತ್ರಿಸಿಬಿಟ್ಟೆವು. ಕೂಡಲೆ ಆತ, ''ನನ್ನ ಮಾತನ್ನು ಸಂಪೂರ್ಣವಾಗಿ ಕೇಳಿಸಿಕೊಂಡು, ಅರ್ಥಮಾಡಿಕೊಂಡು, ಯೋಚಿಸಿ, ನಂತರ ಚಿತ್ರಿಸಿ"" ಎಂದ.

''ಮೊದಲನೇ ವೃತ್ತ ವ್ಯಕ್ತಿಗೆ ಸಂಬಂಧಿಸಿದ್ದು, ಎರಡನೇ ವೃತ್ತ ಸಂಸಾರದ್ದು, ಮೂರನೇ ವೃತ್ತ ವೃತ್ತಿಯದು, ಹಾಗೂ ನಾಲ್ಕನೆಯದು ಸಮುದಾಯದ್ದು. ಅಷ್ಟೇ ಅಲ್ಲ, ನಿಮ್ಮ ವೃತ್ತದ ವ್ಯಾಸ ಹೇಗಿರಬೇಕೆಂದರೆ, ನೀವು ತತ್ಸಂಬಂಧವಾಗಿ ಕಳೆಯುವ ಸಮಯದ ಅಳತೆಯಾಗಿರಬೇಕು. ಆಯಾ ವೃತ್ತಗಳ ಕೆಳಗೆ ನಿಮ್ಮ ಚಟುವಟಿಕೆಗಳು ಮತ್ತು ಅವುಗಳಿಗಾಗಿ ನೀವು ವಿನಿಯೋಗಿಸುವ ಸಮಯವನ್ನು ವರ್ಷದ ಅಥವಾ ತಿಂಗಳಿನಲ್ಲಿ ಇರುವ ಸಮಯದ ಶೇಕಡಾ ಎಷ್ಟು ಎಂದು ಗುರುತು ಹಾಕಿಕೊಳ್ಳಿ. ಅದರಬಗ್ಗೆ ನಂತರ ಒಂದಿಷ್ಟು ಚರ್ಚಿಸೋಣ."" ಇದು ನಮ್ಮ 'ಅಸೈನ್‌ಮೆಂಟು."

(1) ವೈಯಕ್ತಿಕ ವೃತ್ತ : ನಿಮಗಾಗಿ ನೀವು ಎಷ್ಟು ಸಮಯ ಕಳೆಯುತ್ತೀರಿ? ಅಂದರೆ, ನಿಮ್ಮ ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಲು ಮಾಡುವ ಅಂಗಸಾಧನೆ, ನಡಿಗೆ, ಓಟ ಇತ್ಯಾದಿ. ನಿಮ್ಮ ಮನಸ್ಸನ್ನು ಆರೋಗ್ಯವಾಗಿಟ್ಟುಕೊಳ್ಳಲು ಎಷ್ಟು ಸಮಯ ಕಳೆಯುತ್ತೀರಿ? ಅಂದರೆ, ಆಧ್ಯಾತ್ಮಿಕ ಸಾಧನೆ, ಯೋಗ, ಚಿಂತನೆ, ಧ್ಯಾನ, ಮನನ, ನಿಧಿಧ್ಯಾಸನ, ಪೂಜೆ, ಪುನಸ್ಕಾರ. ಒಟ್ಟಿನಲ್ಲಿ 'ಸ್ಪಿರಿಚುಯಾಲಿಟಿ"ಗೆ ಸಂಬಂಧಪಟ್ಟಂತೆ ನಿಮ್ಮನ್ನು ನೀವು ಉದ್ಧರಿಸಿಕೊಳ್ಳಲು ಪಡುವ ಶ್ರಮ, ಅದಕ್ಕೆ ತಗಳುವ ಸಮಯ. ನಿಮ್ಮ ಹವ್ಯಾಸಗಳು, ಮನೆಯ ಜನರ ಹಂಗಿಲ್ಲದೇ ನಿಮಗಾಗಿಯೇ ಕಳೆಯುವ ಕಾಲ, ಉದಾಹರಣೆಗೆ, ಗಾಲ್ಫ್‌ ಆಟ, ಇಷ್ಟದ ಓದು, ಇತ್ಯಾದಿ.

(2) ಸಾಂಸಾರಿಕ ವೃತ್ತ : ನಿಮ್ಮ ಹೆಂಡತಿ/ಗಂಡ ಮತ್ತು ಮಕ್ಕಳಿಗಾಗಿ, ತಂದೆ-ತಾಯಿಗಳಿಗಾಗಿ, ಹತ್ತಿರದ ಬಂಧು-ಬಳಗಕ್ಕಾಗಿ ಮುಡಿಪಾಗಿಡಬೇಕಾದ ಸಮಯ. ಇಲ್ಲಿ ಪರಸ್ಪರ ಕರ್ತವ್ಯಗಳು, ಪರಸ್ಪರ ದಾಕ್ಷಿಣ್ಯಗಳು (ಆಬ್ಲಿಗೇಷನ್ಸ್‌), ಮನೆಗೆಲಸ ಹುಲ್ಲು ಬೆಳೆಸುವುದು/ಕತ್ತರಿಸುವುದು, ಗರಾಜ್‌ ಶುಚಿ ಮಾಡುವುದು, ಮುಂತಾದವು. ಊಟೋಪಚಾರ, ಮಾರುಕಟ್ಟೆಗೆ ಹೋಗಿ ಸಂಸಾರಕ್ಕೆ ಬೇಕಾದ್ದನ್ನು ತಂದು ಹಾಕುವುದು, ಸಮಯ-ಸಮಯಕ್ಕೆ ಖಾದ್ಯ-ಪಾನೀಯಗಳನ್ನು ಹೊಂದಿಸುವುದು, ಮಕ್ಕಳನ್ನು ವೈದ್ಯರಬಳಿ ಕೊಂಡೊಯ್ಯುವುದು, ಕ್ರೀಡೆಗಳಿಗೆ, ಶಾಲೆಯ ಪ್ರಾಜೆಕ್ಟುಗಳಿಗೆ ಕರೆದುಕೊಂಡು ಹೋಗುವುದು, ಪೇರೆಂಟ್‌-ಟೀಚರ್‌ ಕಾನ್ಫರೆನ್ಸುಗಳು, ಮಕ್ಕಳ ಹೋಂವರ್ಕಿನಲ್ಲಿ ಸಹಾಯಮಾಡುವುದು, ಹೀಗೆ ಇದೊಂದು ತುಂಬಾ ಉದ್ದನೆಯ ಪಟ್ಟಿ.

(3) ವೃತ್ತಿಯ ವೃತ್ತ : ಇದು ನಿಮ್ಮ ಕೆಲಸಕ್ಕೆ ಸಂಬಂಧಪಟ್ಟದ್ದು. ಕೆಲಸಕ್ಕೆ ಹೋಗದಿದ್ದರೆ, ಆದಾಯವಿಲ್ಲ, ಆದಾಯವಿಲ್ಲದಿದ್ದವರಿಗೆ ಸುಖವಿಲ್ಲ! (ಮನೆಯ ಮಾರ್ಟ್‌ಗೇಜು, ಕಾರಿನ ಸಾಲ, ಮಕ್ಕಳ ಕಾಲೇಜಿನ ಫೀಜು, ಹೀಗೆ ಎಂದೆಂದೂ ತೀರದ ಸಾಲದ ಬಾಬ್ತು ತಿಂಗಳು ತಿಂಗಳು ಕಟ್ಟಬೇಕಲ್ಲ.) ವೃತ್ತಿಯಲ್ಲಿ ಮೇಲೇರಬೇಕಾದರೆ, ನಿಮ್ಮ ಬಲಗಳನ್ನು ವರ್ಧಿಸಿಕೊಳ್ಳುತ್ತಲೇ ಇರಬೇಕು, ಅಂದರೆ ಜರ್ನಲ್‌ಗಳನ್ನು ಓದಬೇಕು, ಹೊಸ ಹೊಸ ಆವಿಷ್ಕಾರಗಳಬಗ್ಗೆ ತಿಳಿದುಕೊಂಡು ಅವುಗಳನ್ನು ದಿನನಿತ್ಯದ ಬಳಕೆಯಲ್ಲಿ ರೂಢಿಸಿಕೊಳ್ಳುತ್ತ ಕೈಗೂಡಿಸಿಕೊಳ್ಳಬೇಕು. ಬಾಸನ್ನು ಮೆಚ್ಚಿಸಲು ಹೆಚ್ಚು ಹೆಚ್ಚು ಸಮಯ ಆಫೀಸಿನಲ್ಲಿ ಕ(ಕೊ)ಳೆಯಬೇಕು. ಮನೆಯಿಂದ ಆಫೀಸಿಗೆ ಮತ್ತು ಆಫೀಸಿನಿಂದ ಮನೆಗೆ ಓಡಾಡಲು ಬೇಕಾದ ಸಮಯವೂ ಈ ಪಟ್ಟಿಯಲ್ಲೇ ಸೇರುತ್ತದೆ. ಹಲವರು ವೃತ್ತಿಯ ಕಾರಣ ಸಾಕಷ್ಟುಕಾಲ ಪ್ರಯಾಣದಲ್ಲಿ ಕಳೆಯಬೇಕಾಗುತ್ತದೆ. ಅಂತೂ ಒಟ್ಟಿನಲ್ಲಿ, ವೃತ್ತಿಯೊಂದೇ ಸಾಕು ನಮ್ಮ ಎಲ್ಲಾ ಸಮಯವನ್ನೂ ಕಬಳಿಸಿಬಿಡಲು.

(4) ಸಮುದಾಯ ವೃತ್ತ : ನಮಗಾಗಿ, ನಮ್ಮ ಸಂಸಾರಕ್ಕಾಗಿ ಮತ್ತು ನಮ್ಮ ಸಂಬಳವನ್ನು ಕೊಡುವ ದಣಿಗಾಗಿ ಎಲ್ಲರೂ ದುಡಿಯಲೇಬೇಕು. ಆದರೆ, ಇದೇನಿದು, ಸಮುದಾಯ? ನಿಮ್ಮೂರಿನಲ್ಲಿ ಒಂದು ದೇವಾಲಯವನ್ನು ಕಟ್ಟಬೇಕೆಂದು ಕೆಲವು ಉತ್ಸಾಹಿಗಳು ತೊಡಗುತ್ತಾರೆ, 'ಬನ್ನಿ ಸ್ವಯಂಸೇವಕರಾಗಿ" ಅನ್ನುತ್ತಾರೆ. ನಿಮ್ಮೂರಿನಲ್ಲೂ ಕನ್ನಡ ಸಂಘವೊಂದಿರಬೇಕಲ್ಲವೇ? ಅದನ್ನು ನಡೆಸುವವರು ಯಾರು? 'ಬನ್ನಿ ಕೈಗೂಡಿಸಿ" ಎಂದು ಕರೆದಾಗ ಹೋಗಬೇಕೋ ಬೇಡವೋ? ಪ್ರತಿ ಸಮಾರಂಭದಲ್ಲೂ ಯಾರೋ ಪುಣ್ಯಾತ್ಮರು ಮಾಡಿ ತಂದು ಬಡಿಸಿದ್ದನ್ನು ತಿಂದು ತೇಗಿದರೆ ಸಾಕೇ? ನೀವೂ ಒಂದೆರಡು ಬಾರಿಯಾದರೂ ಮಾಡಿ ಬಡಿಸಿದ ಪುಣ್ಯಕ್ಕೆ ಭಾಜನರಾಗಬೇಡವೇ? ಇದೇ ರೀತಿ ಸತ್ಕಾರ್ಯಗಳಿಗೆ ಕೊನೆ ಮೊದಲಿಲ್ಲ.

''ಕ್ರೌರ್ಯಕ್ಕೊಳಗಾದ ಮಹಿಳೆಯರನ್ನು ಉದ್ಧಾರ ಮಾಡೋಣ ಬನ್ನಿ,"" ''ಅನಾಥ ಮಕ್ಕಳಿಗೊಂದು ದಾರಿ ತೋರೋಣ ಬನ್ನಿ,"" ''ಬಡದೇಶಗಳ ನಿರ್ಗತಿಕರಿಗೆ ಒಂದು ಮಾರ್ಗತೋರಿಸಲು ನಿಮ್ಮ ವಿಶಾಲವಾದ ಹೃದಯದಲ್ಲೊಂದಿಷ್ಟು ಸ್ಥಳವಿಲ್ಲವೇ?"" ಇದ್ಯಾವುದೂ ಇಷ್ಟವಿಲ್ಲದಿದ್ದರೆ ಬೇಡ, ರಿಪಬ್ಲಿಕನ್‌ ಅಥವಾ ಡೆಮೋಕ್ರ್ಯಾಟ್‌ ಪಕ್ಷಕ್ಕಾಗಿ ಒಂದಿಷ್ಟು ಸಮಯ ಕೊಡಿ. ವಾರಕ್ಕೊಮ್ಮೆ ಸೂಪ್‌ ಕಿಚನ್ನಿನಲ್ಲಿ ಒಂದೆರಡು ಘಂಟೆ ಕಳೆಯಿರಿ. ವೃದ್ಧಾಶ್ರಮಗಳಲ್ಲಿ ಒಂಟಿ ಜೀವನ ನಡೆಸುವ ನತದೃಷ್ಟರಬಳಿ ಒಂದಷ್ಟು ಸಮಯ ಕಳೆದು ಅವರಿಗೆ ನೆರವಾಗಿ. (ನೀವು ಕೂಡ ಅಂಥ ಒಂದು ವಸತಿಯಲ್ಲಿ ಕಾಲ ಕಳೆಯುವ ಸಂದರ್ಭ ಬಂದರೂ ಬರಬಹುದು ಎಂಬುದನ್ನು ಮರೆಯ ಬೇಡಿ!) ಒಟ್ಟಿನಲ್ಲಿ ನೀವು ಬದುಕಿರುವ ಸಮುದಾಯಕ್ಕಾಗಿ ನೀವೊಂದಿಷ್ಟು ಸೇವೆ ಮಾಡಬೇಕೆಂದು ಸಮಾಜ ನಿರೀಕ್ಷಿಸುತ್ತದೆ.

ಈಗ ತಿಳಿಯಿತೇ ನಿಮ್ಮ ಅಮೂಲ್ಯ ಸಮಯಕ್ಕೆ ಎಷ್ಟೆಲ್ಲಾ ಬೇಡಿಕೆ ಇದೆ ಎಂದು? ಭಾಗಿಗಳು ಕೊಟ್ಟ ಜವಾಬುಗಳಿಂದ ತಿಳಿದುಬಂದ ಅಂಶಗಳು ಹಲವು. ಮೊದಲನೇ ಅಂಶ ಏನೆಂದರೆ, ಎಲ್ಲರೂ ನಾಲ್ಕು ವೃತ್ತಗಳನ್ನು ಗುರುತಿಸುವುದಿಲ್ಲ.

ಎರಡನೇ ಅಂಶವೆಂದರೆ, ಒಂದುವೇಳೆ ನಾಲ್ಕು ವೃತ್ತಗಳಿದ್ದರೂ, ಅವೆಲ್ಲ ಒಂದೇ ಅಳತೆಯ ವೃತ್ತಗಳಾಗಿರುವುದಿಲ್ಲ. ದಿನಕ್ಕೆ ಇರುವ 24 ಘಂಟೆಗಳಲ್ಲಿ, ಸರಾಸರಿ 8 ಘಂಟೆ ಕೆಲಸಕ್ಕೆ, ಎರಡು ಘಂಟೆ ಮನೆ ಮತ್ತು ಕೆಲಸದ ಸ್ಥಳ ಇವೆರಡರ ನಡುವೆ ಓಡಾಟಕ್ಕೆ ಬೇಕಾಗುವ ಸಮಯ ಸೇರಿದರೆ, ಕನಿಷ್ಠಪಕ್ಷ 10 ಘಂಟೆಗಳು ವೃತ್ತಿಗಾಗಿ ಮುಡಿಪು. ಇನ್ನು ಜರ್ನಲ್‌ ಓದಲು, ಸೆಮಿನಾರುಗಳಲ್ಲಿ ಭಾಗವಹಿಸಲು ಬೇಕಾದ ಸಮಯ? ನಿದ್ರಾಹಾರಗಳಿಗಾಗಿ 8ರಿಂದ 10 ಘಂಟೆಗಳು ಬೇಕೇ ಬೇಕು. ಅಂದಮೇಲೆ, ದಿನಕ್ಕೆ ಸುಮಾರು ಇಪ್ಪತ್ತು ಘಂಟೆಗಳು ನಮ್ಮ ಸ್ವಾಧೀನದಲ್ಲಿರುವುದಿಲ್ಲ.

ಇನ್ನು ಮಿಕ್ಕ ನಾಲ್ಕು ಘಂಟೆಗಳು ದೇಹ, ಮನಸ್ಸು ಮತ್ತು ಬುದ್ಧಿಗಳನ್ನು ಬೆಳೆಸುವ ಮತ್ತು ಉಳಿಸಿಕೊಳ್ಳುವ ಚಟುವಟಿಕೆಗಳಿಗೆ ಸಾಕೆ? ಇನ್ನೆಲ್ಲಿಯ ಸಮಾಜ ಸೇವೆ? ಮನೆಯಲ್ಲಿ ದೀಪ ಬೆಳಗಿದಮೇಲಲ್ಲವೇ ಮಂದಿರದಲ್ಲಿ ದೀಪ ಬೆಳಗುವುದು? ಗಂಡಹೆಂಡಿರಿಬ್ಬರೂ ದುಡಿಯುವ ಸಂಸಾರಗಳಲ್ಲಿ ಮಕ್ಕಳಿಗಾಗಿ ಎಲ್ಲಿಂದ ಸಮಯ ತರೋಣ? ನಮಗೆ ವಿದ್ಯೆ ಕಲಿಸಲು ವ್ಯವಸ್ಥೆಯೊಂದನ್ನು ಕೊಟ್ಟ ನಮ್ಮ ದೇಶ, ಮೌಲ್ಯಗಳನ್ನು ಕೊಟ್ಟ ನಮ್ಮ ಧರ್ಮ, ಸಂಘಜೀವನವನ್ನು ಕೊಟ್ಟ ನಮ್ಮ ಸಮಾಜ, ಇವುಗಳ ಸಾಲ ತೀರಿಸುವ ಬಗೆ? ಒಟ್ಟಿನಲ್ಲಿ, ಈ ಸಮುದಾಯ ವೃತ್ತ ಕಣ್ಣಿಗೆ ಕಾಣಿಸದಷ್ಟು ಚಿಕ್ಕದಾಗುತ್ತಾ ಹೋಗುತ್ತದೆ.

ಇನ್ನು ಕೆಲವರು ವೃತ್ತಿಯನ್ನು ಮಿತಿಮೀರಿ ಹಚ್ಚಿಕೊಂಡ ಕಾರಣದಿಂದ ಮಿಕ್ಕೆಲ್ಲ ವೃತ್ತಗಳೂ ಕ್ಷೀಣಿಸುತ್ತ ಬರುತ್ತವೆ. ನೊಬೆಲ್‌ ಪಾರಿತೋಷಕವನ್ನು ಪಡೆಯುವಂಥ ಪ್ರತಿಭಾಶಾಲಿಗಳಿಗೆ ವೃತ್ತಿಯ ವೃತ್ತ ಅತಿ ದೊಡ್ಡದಾಗಿ ಇತರ ವೃತ್ತಗಳು ಮಾಯವಾದರೆ ಅದನ್ನು ಪುಷ್ಟೀಕರಿಸಿಕೊಳ್ಳಬಹುದು. ಆದರೆ, ಸರಾಸರೀ ಜನಕ್ಕೆ ಅದು ಸಲ್ಲ. ಮತ್ತೆ ಕೆಲವರು ತಮ್ಮ ವೈಯಕ್ತಿಕ ಸಾಧನೆಯಲ್ಲಿ ತೊಡಗಿ ತಮ್ಮನ್ನು ನೆಚ್ಚಿದವರನ್ನೆಲ್ಲ ಮುಳುಗಿಸಿಬಿಡುತ್ತಾರೆ. ಅದೇ ರೀತಿ, ಸಮುದಾಯವನ್ನು ಹಚ್ಚಿಕೊಂಡು ಮನೆಗೆ ಮಾರಿ ಹೆರರಿಗೆ ಉಪಕಾರಿಯಾಗುವವರೂ ಇರುತ್ತಾರೆ.

ನನಗೊಬ್ಬರು ಗೊತ್ತಿದ್ದವರು, ಅವರು ನಮ್ಮೂರಿನಲ್ಲಿದ್ದ ಬಡಗಿಗಳ ಬಳಗ, ಅಗಸರ ಅಸೋಷಿಯೇಷನ್‌, ಅಖಿಲ ಭಾರತ ಅಪರಕರ್ಮಪಾರಂಗತರ ಪರಿಷತ್ತು, ಇನ್ನೂ ಮುಂತಾದ ಹಲವು ಹತ್ತು ಸಂಘಗಳ ಕಾರ್ಯದರ್ಶಿ, ಉಪಾಧ್ಯಕ್ಷ, ಅಧ್ಯಕ್ಷ, ಸಲಹೆಗಾರ ಮುಂತಾದ ಪದವಿಗಳಲ್ಲಿ ದುಡಿದು ಇತ್ತೀಚೆಗೆ ವಿಶ್ವಸಂರಕ್ಷಣಾ ವಿಚಾರಕ ಸಂಘವನ್ನು (ವಿಸಂವಿಸಂ) ಪ್ರಾರಂಭಿಸಲು ತೊಡಗಿದ್ದಾರೆ. ಇಂಥ ಮಹಾಶಯರು ತಾವು ಕಟ್ಟಿದ ಪ್ರತಿ ಸಂಘವನ್ನೂ ಭಾಷೆಯ ಹೆಸರಿನಲ್ಲೋ ಜಾತಿಯ ಹೆಸರಿನಲ್ಲೋ ಹೋಳುಮಾಡುತ್ತ ತಮ್ಮ ಅಧ್ಯಕ್ಷಸ್ಥಾನವನ್ನು ಕಾಪಾಡಿಕೊಳ್ಳುವುದೇ ಸಮುದಾಯ ಸೇವೆ ಎಂದು ಬಗೆದಿರುತ್ತಾರೆ. ಇವರಿಗೆ ಇರುವುದು ಒಂದೇ ವೃತ್ತ. ಕೊನೆಗೆ ಅದು ದೊಡ್ಡ ಸೊನ್ನೆಯಂತೆ ಗೋಚರವಾದರೆ ಏನಾಶ್ಚರ್ಯ?

ಒಟ್ಟಿನಲ್ಲಿ, ಉಪನ್ಯಾಸಕರ ಸಾರಾಂಶ ಎಲ್ಲರ ಕಣ್ಣುಗಳನ್ನೂ ತೆರೆಯಿಸಿತು: ''ಯಾರಿಗೆ ನಾಲ್ಕೂ ವೃತ್ತಗಳಿಲ್ಲವೋ, ಯಾರ ವೃತ್ತಗಳು ಸುಮಾರಾಗಿ ಒಂದೇ ಅಳತೆಯುಳ್ಳವಾಗಿರುವುದಿಲ್ಲವೋ, ಅವರು ತಮ್ಮ ಜೀವನ ಶೈಲಿಯಬಗ್ಗೆ ಗಂಭೀರವಾಗಿ ಚಿಂತಿಸಬೇಕು. ತಮ್ಮ ಪ್ರಯಾರಿಟಿಯ ಬಗ್ಗೆ ಸ್ವಲ್ಪ ಚಿಂತಿಸಬೇಕು.""

''ಹಾಗಾದರೆ, ಒಂದು ವೃತ್ತ ಮತ್ತೊಂದಕ್ಕಿಂತ ದೊಡ್ದದೋ ಚಿಕ್ಕದೋ ಆಗಿರಬಾರದೇಕೆ?"" ಎಂಬ ಪ್ರಶ್ನೆಗೆ ಉತ್ತರ : ಮೇಜಿನ ನಾಲ್ಕು ಪಾದಗಳಿದ್ದಂತೆ ಈ ವೃತ್ತಗಳು. ಎಲ್ಲವೂ ಒಂದೇ ಉದ್ದ ಇಲ್ಲದಿದ್ದರೆ, ಮೇಜು ಮಟ್ಟಸವಾಗಿರುವುದಿಲ್ಲ, ಅಂದರೆ ನಮ್ಮ ಜೀವನ 'ಬ್ಯಾಲೆನ್ಸ್‌ಡ್‌" ಆಗಿರುವುದಿಲ್ಲ. ಕೆಲವೊಮ್ಮೆ ಒಂದು ಕಾಲು ಮತ್ತೊಂದಕ್ಕಿಂತ ಹೆಚ್ಚು ಬಲಶಾಲಿಯಾಗಿರಬಹುದು, ಅದಕ್ಕೆ ಕಾರಣ ಆ ಕಾಲು ಹೆಚ್ಚಿನ ತೂಕವನ್ನು ಹೊರಬೇಕಾದ ಪ್ರಸಂಗ ಬಂದಿರಬಹುದು. ಆದರೂ ಮಟ್ಟವನ್ನು ಕಳೆದುಕೊಳ್ಳದೇ ಇರಬೇಕು ಎಂಬುದು ಮುಖ್ಯ ಸಂದೇಶ.

ಒಂದು ವೃತ್ತ ಮತ್ತೊಂದನ್ನು ಕಬಳಿಸದಂತೆ ನೋಡಿಕೊಳ್ಳಲು ಸಾಕಷ್ಟು ಚಾತುರ್ಯ ಮತ್ತು ಯೋಜನೆಗಳ ಅಗತ್ಯವಿರುತ್ತದೆ. ಆದ್ದರಿಂದ, ಆಗಾಗ್ಗೆ ನಿಮ್ಮ ವೃತ್ತಗಳನ್ನು ಪರೀಕ್ಷಿಸಿಕೊಳ್ಳಿ. ನೀವು ಹೆಚ್ಚು ಒತ್ತುಕೊಟ್ಟ ವೃತ್ತ ನಿಮಗೆ ಕೈಕೊಟ್ಟರೆ ನೀವು ತುಂಬಾ ನಿರಾಶರಾಗಬೇಕಾದೀತು, ದುಃಖವನ್ನೆದುರಿಸಬೇಕಾದೀತು.

ಈ ಚರ್ಚೆಯಲ್ಲಿ ಭಾಗವಹಿಸುತ್ತಿದ್ದಾಗ, ಭರ್ತೃಹರಿಯ ವೈರಾಗ್ಯಶತಕದಲ್ಲಿನ ಸಂಸ್ಕೃತದ ಒಂದು ಪ್ರಸಿದ್ಧ ಸುಭಾಷಿತದ ನೆನಪಾಯಿತು.

ಆಯುರ್ವರ್ಷ ಶತಾಂ ನೄಣಾಂ ಪರಿಮಿತಂ ರಾತ್ರೌ ತದರ್ಧಂ ಗತಂ

ತಸ್ಯಾರ್ಧಸ್ಯ ಪರಸ್ಯ ಚಾರ್ಧಮಪರಂ ಬಾಲತ್ವ ವೃದ್ಧತ್ವಯೋಃ

ಶೇಷಂ ವ್ಯಾಧಿ ವಿಯೋಗ ದುಃಖ ಭರಿತಂ ಸೇವಾದಿಭಿರ್ನೀಯತೇ

ಜೀವೇ ವಾರಿತರಂಗ ಬುದ್ಬುದಸಮೇ ಸೌಖ್ಯಂ ಕುತಃ ಪ್ರಾಣಿನಾಂ

ತಾತ್ಪರ್ಯ : ಮನುಷ್ಯನಿಗೆ ನೂರು ವರ್ಷ ಆಯುಸ್ಸು ಎಂದುಕೊಂಡರೆ, ಅದರಲ್ಲಿ ಅರ್ಧದಷ್ಟು ನಿದ್ರೆಯಲ್ಲಿ ಕಳೆದುಹೋಗುವುದು. ಮಿಕ್ಕ ಐವತ್ತು ವರ್ಷಗಳಲ್ಲಿ ಅರ್ಧದಷ್ಟು (ಅಂದರೆ ಇಪ್ಪತ್ತೈದು ವರ್ಷಗಳು) ಹುಡುಗಾಟ ಮತ್ತು ಮುಪ್ಪಿನಲ್ಲಿ ಕಳೆದು ಹೋಗುತ್ತವೆ. ಇನ್ನು ಮಿಕ್ಕ ಇಪ್ಪತ್ತೈದರಲ್ಲಿ, ಖಾಯಿಲೆ-ಕಸಾಲೆ, ಅವರಿವರನ್ನು ಕಳೆದುಕೊಂಡ ದುಃಖ ಮತ್ತು ಇತರರ ಸೇವೆಯಲ್ಲಿ ಕಳೆದು ಹೋಗುವುದು. ಆದರೆ, ಮನುಷ್ಯನ ಆಯುಸ್ಸು ನೂರು ವರ್ಷ ಎಂಬುದು ಎಲ್ಲರಿಗೂ ಅನ್ವಯಿಸುವುದಿಲ್ಲವಲ್ಲ. ಜೀವನ ಒಂದು ನೀರಿನ ಗುಳ್ಳೆಯಂತೆ, ಅಷ್ಟೇ ಅಲ್ಲ, ಸಮುದ್ರದ ಅಲೆಯ ಮೇಲಿನ ನೀರ್ಗುಳ್ಳೆಯಂತೆ, ಯಾವ ಕ್ಷಣದಲ್ಲಿ ಒಡೆದುಹೋಗುತ್ತದೋ ಹೇಳಲಾಗುವುದಿಲ್ಲ. ಹೀಗಿರುವಾಗ ಮನುಷ್ಯನೆಂಬ ಪ್ರಾಣಿಗೆ ಇನ್ನೆಲ್ಲಿಯ ಸೌಖ್ಯ? ಇದನ್ನೇ ಪ್ರಸ್ತುತ ವಿಷಯಕ್ಕೆ ಅಳವಡಿಸಿಕೊಂಡ ಇತ್ತೀಚಿನ ವಚನಕಾರ ಏನೆನ್ನುತ್ತಾನೆ ಕೇಳಿ.

ಶೇಷ-ನಿಶ್ಶೇಷ

ಇರುವ ಇಪ್ಪತ್ನಾಲ್ಕು ಘಂಟೆಗಳಲಿ

ಊಟ ನಿದ್ರೆ ಸಂಭೋಗಕ್ಕೆ ಒಂದ್‌ ಹತ್ತು,

ನೌಕರಿಗೆ ಚಾಕರಿಗೆ ಧಣಿಯ ತಣಿಸಲಿಕೆ

ಮೇಣ್‌ ರಸ್ತೆ ಸವಿಸಲಿಕೆ ಇನ್ನೊಂದ್‌ ಹತ್ತು,

ದೇಹಪಾಲನೆಗೆ ಒಂದು, ಬುದ್ಧಿಮನಗಳ

ಹರಿತಗೊಳಿಸಲು ಮತ್ತೊಂದು,

ಬಲೆಯ-ತಡಕುವ-ಜಾಲಕ್ರೀಡೆಗೂ* ಒಂದು,

ಮಿಕ್ಕದ್ದೊಂದೇ ಘಂಟೆ ಕಣಾ ಶಿವನಟೇಶ,

ಸಂಸಾರಕೋ ಸಮುದಾಯಕೋ ಉಳಿದ ಶೇಷ?

ಉಳಿದ ಶೇಷದ ಬಗ್ಗೆ ವಿಶೇಷವಾಗಿ ಯೋಚಿಸಿ, ನೀವೇ ನಿರ್ಧರಿಸಿ ಹಾಗೂ ನಿಮ್ಮ ನಿಮ್ಮ ವೃತ್ತಗಳ ವೃತ್ತಾಂತವನ್ನು ಬರೆದು ತಿಳಿಸಿ ಎನ್ನುತ್ತ ವಿರಮಿಸುವೆ, ಮುಂದಿನ ಕಂತಿನ ವರೆಗೆ.

*ಟಿಪ್ಪಣಿ: ಬಲೆಯ ತಡಕುವ ಜಾಲಕ್ರೀಡೆ = web surfing and other internet activities.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Personality Development : Jalataranaga Columnist Dr.M.S.Nataraj writes about Theory of Time Management and Life Circles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more