• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜಧಾನಿಯ ಹಿರಿಯ ಕನ್ನಡತಿ ‘ಪ್ರೇಮ’ ವೈಕುಂಠಕ್ಕೆ!

By Staff
|
Dr.M.S.Nataraj ಡಾ.ಮೈ.ಶ್ರೀ.ನಟರಾಜ, ಗೈಥಸ್‌ಬರ್ಗ್‌, ಮೇರಿಲ್ಯಾಂಡ್‌

Prema Radhakrishnaಇತ್ತ ಕಾವೇರಿಯಲ್ಲಿ ಸಂಕ್ರಾಂತಿಯ ಸಡಗರ, ಅತ್ತ ದೇಗುಲದಲ್ಲಿ ಶ್ರೀನಿವಾಸಕಲ್ಯಾಣದ ಸಂಭ್ರಮ. ಈ ಸಡಗರ, ಸಂಭ್ರಮದ ಸೊಬಗಿನ ನಡುವೆ, ರಾಜಧಾನಿಯ ಕನ್ನಡಿಗರನ್ನೆಲ್ಲ ಕಂಬನಿಯಲ್ಲಿ ಮುಳುಗಿಸಿದ ಒಂದು ವಾರ್ತೆ ಪ್ರಸಾರವಾಯಿತು. ಆ ಸುದ್ದಿ ಒಳಸುತ್ತಿನ ಕೆಲ ಬಂಧು ಮಿತ್ರರಿಗೆ ನಿರೀಕ್ಷಿತವೇ ಆಗಿದ್ದರೂ ಮತ್ತನೇಕರಿಗೆ ಸಿಡಿಲಿನಂತೆ ಬಡಿಯಿತು. ಆ ಪರಮಾತ್ಮ ತನ್ನ ಅತಿಪ್ರಿಯ ಭಕ್ತೆಯಾಬ್ಬಳನ್ನ ಸದ್ದಿಲ್ಲದೇ ತನ್ನೆಡೆಗೆ ಕರೆಸಿಕೊಂಡುಬಿಟ್ಟ. ಹಲವಾರು ಮಾಸಗಳಿಂದ ವ್ಯಾಧಿಗ್ರಸ್ತರಾಗಿದ್ದ ಶ್ರೀಮತಿ ಪ್ರೇಮಾ ರಾಧಾಕೃಷ್ಣನ್‌ ಇಹಲೋಕವನ್ನು ಜನವರಿ 15 ರಂದು ತ್ಯಜಿಸಿದರು.

‘ಕಾವೇರಿ’ ಕನ್ನಡಸಂಘಕ್ಕೆ ಹಿರಿಯಕ್ಕನಂತಿದ್ದ, ಶಿವ ವಿಷ್ಣು ದೇಗುಲಕ್ಕೆ ಕಣ್ಮಣಿಯಂತಿದ್ದ ಪ್ರೇಮಾ ಸದ್ದಿಲ್ಲದೇ ಎಲ್ಲರಿಗೂ ವಿದಾಯ ಹೇಳಿಬಿಟ್ಟಾಗ ರಾಜಧಾನಿಯ ಕನ್ನಡಿಗರ ಚರಿತ್ರೆಯ ಒಂದು ಮುಖ್ಯ ಅಧ್ಯಾಯ ಮುಗಿದುಹೋಯಿತು! ಅಯನ ಬದಲಾಗುವುದನ್ನೇ ಕಾಯುತ್ತ ಯುದ್ಧರಂಗದಲ್ಲಿ ಶರಶಯ್ಯೆಯಲ್ಲಿ ಮಲಗಿದ್ದ ಇಚ್ಚಾಮರಣಿ ಭೀಷ್ಮರಂತೆ, ಶಾಂತಿಯಿಂದ ದಿಟ್ಟವಾಗಿ ಕಾದು (ಎರಡೂ ಅರ್ಥದಲ್ಲಿ) ಭಗವಂತನ ಪಾದಾರವಿಂದವನ್ನು ಸೌಭಾಗ್ಯವತಿಯಾಗೇ ಸೇರಿದ್ದನ್ನು ನೆನೆದರೆ, ಪ್ರೇಮ ಪುಣ್ಯವಂತೆ ಎಂಬುದು ದೃಢವಾಗುತ್ತದೆ.

ಪ್ರೇಮಾ ಅವರನ್ನು ಮೊಟ್ಟ ಮೊದಲು ನಾನು ಭೇಟಿಯಾದದ್ದು 1979ರಲ್ಲಿ. ಆ ವರ್ಷ ಕಾವೇರಿ ನಡೆಸಿದ ಈಶಾನ್ಯ ಅಮೇರಿಕಾ ಕನ್ನಡ ಸಮ್ಮೇಳನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಿತಿಗೆ ಪ್ರೇಮ ಅವರೇ ಅಧ್ಯಕ್ಷೆ. ಆಕೆಯ ನೇತೃತ್ವದಲ್ಲಿ ಸಮಿತಿಯ ಸದಸ್ಯನಾಗಿ ಕೆಲಸ ಮಾಡುವ ಅವಕಾಶ ನನಗೆ ಒದಗಿ ಬಂದಿತ್ತು. ಇವರ ಭೇಟಿಯಾದ ಕೆಲವೇ ಕ್ಷಣಗಳಲ್ಲಿ ಈಕೆಗೂ ಪೋಲೀಸ್‌ ಇಲಾಖೆಗೂ ಏನೋ ಹತ್ತಿರದ ಸಂಬಂಧವಿರಬೇಕೆಂದು ಊಹಿಸುವುದು ಕಷ್ಟವಾಗಲಿಲ್ಲ ! ಅಂಥಾ ಶಿಸ್ತಿನ ವ್ಯಕ್ತಿತ್ವ.

ಒಂದು ಕಡೆಯಿಂದ ಅವರ ಪಿತಾಮಹ, ಎಮ್‌. ಸಿ. ರಂಗಯ್ಯಂಗಾರ್‌ ದೆಹಲಿ ದರ್ಬಾರಿನಲ್ಲಿ ಮೈಸೂರು ಮಹಾರಾಜರ ಪ್ರತಿನಿಧಿಯಾದರೆ, ಮತ್ತೊಂದು ಕಡೆಯಿಂದ ಇನ್ನೊಬ್ಬ ಪಿತಾಮಹ ಆರ್‌. ಸಿ. ಅಯ್ಯಂಗಾರ್‌ ಬ್ರಿಟಿಷ್‌ ಆಳ್ವಿಕೆಯಲ್ಲಿ ಪೋಲೀಸ್‌ ಇಲಾಖೆಯ ಮಹಾ ನಿರ್ದೇಶಕ! (ಅವರ ಶಿಸ್ತು ಅಲ್ಲಿಂದಲೇ ಬಂದಿರಬೇಕೆಂಬುದರಲ್ಲಿ ಯಾವ ಸಂಶಯವೂ ಇಲ್ಲ.) ಬಾಳಸಂಗಾತಿ, ಬೇಲೂರು ರಾಧಾಕೃಷ್ಣನ್‌ ಅವರನ್ನು ವರಿಸಿ ಆನಾರ್ಬರ್‌ (ಮಿಚಿಗನ್‌)ಗೆ ಬಂದರು. ಆನಂತರ, 1957ರಲ್ಲಿ ಅಮೇರಿಕದ ರಾಜಧಾನಿಯಲ್ಲಿ ಪತಿಯಾಂದಿಗೆ ನೆಲೆಸಿ ಸುಮಾರು ನಾಲ್ಕೂವರೆ ದಶಕಗಳನ್ನು ಕಳೆದಿರುವ ಅತಿ ಹಿರಿಯ ಕನ್ನಡಿಗರ ಪೈಕಿ ಇವರಿಬ್ಬರು. ಇಲ್ಲೇ ಇವರು ಇಬ್ಬರು ಪುತ್ರರನ್ನು (ಬದರಿ ಮತ್ತು ಅಶ್ವಿನ್‌) ಸಾಕಿ ಸಲಹಿ ಮೂವರು ಮೊಮ್ಮಕ್ಕಳನ್ನೂ (ಅಂಜಲಿ, ರಾಹುಲ್‌, ಮತ್ತು ಭುವನ್‌) ಎತ್ತಾಡಿಸಿದರು.

ಬೆರಳೆಣಿಸುವಷ್ಟು ಕನ್ನಡಿಗರು ರಾಜಧಾನಿಯ ಸುತ್ತ ಮುತ್ತ ಇದ್ದ ದಿನಗಳಲ್ಲಿ, ಕನ್ನಡ ಸಂಸ್ಥೆಯಾಂದನ್ನು ಸ್ಥಾಪಿಸಬೇಕೆಂದು ಮುಂದೆಬಂದ ಹಿರಿಯರ ಪೈಕಿ ಪ್ರೇಮ ಒಬ್ಬರು. ಸಂಗೀತ, ನಾಟಕ ಮುಂತಾದ ಲಲಿತಕಲೆಗಳಲ್ಲಿ ಅತ್ಯುತ್ಸಾಹ ಹೊಂದಿದ್ದ ಪ್ರೇಮ ಕಾವೇರಿಯ ಕಾರ್ಯಕ್ರಮಗಳಲ್ಲಿ ಎದ್ದು ಕಾಣುತ್ತಿದ್ದ ಮುಖ. ಅನೇಕ ಮಹಿಳೆಯರನ್ನು ಒಟ್ಟುಗೂಡಿಸಿ ಸಮೂಹಗಾನ, ಸಮೂಹ ನೃತ್ಯ ಇತ್ಯಾದಿಗಳ ಏರ್ಪಾಟಿಗೆ ಇವರೇ ವ್ಯವಸ್ಥಾಪಕಿ. ಕಾವೇರಿಯ ಯಾವುದೇ ಕೆಲಸಕ್ಕೆ ಧನಸಹಾಯಬೇಕಾದಾಗ ಪ್ರೇಮಾ ಅವರಿಗೆ ಒಂದು ದೂರವಾಣಿಯ ಕರೆಯೇ ಸಾಕು. (1985ರಲ್ಲಿ ನಾನು ಕಾವೇರಿಯ ಅಧ್ಯಕ್ಷನಾಗಿದ್ದಾಗ ಅವರನ್ನು ಕರೆದು, ‘ಮಕ್ಕಳ ಕಾರ್ಯಕ್ರಮವೊಂದನ್ನು ಏರ್ಪಡಿಸಬೇಕೆಂದಿದ್ದೇವೆ, ಭಾಗವಹಿಸಿದ ಮಕ್ಕಳಿಗೆಲ್ಲ ಬಹುಮಾನ ಕೊಟ್ಟು ಪ್ರೋತ್ಸಾಹಿಸಬೇಕೆಂಬ ಆಸೆ ಇದೆ, ಆದರೆ ಅದಕ್ಕೆ ತಗಲುವ ವೆಚ್ಚವನ್ನು ಭರಿಸಿಕೊಳ್ಳುವ ಪ್ರಾಯೋಜಕರು ಬೇಕಾಗಿದ್ದಾರೆ’ ಎಂದು ತಿಳಿಸಿದೆ. ಒಂದೇ ಮಾತಿನಲ್ಲಿ, ‘ಅಷ್ಟೇ ತಾನೆ, ನೀವು ಏರ್ಪಡಿಸಿ, ಅದರ ವೆಚ್ಚ ನಾವು ನೋಡಿಕೊಳ್ಳುತ್ತೇವೆ’ ಎಂದು ಆಶ್ವಾಸನೆ ಇತ್ತಿದ್ದಲ್ಲದೇ ತಕ್ಷಣ ಅಂಚೆಯಲ್ಲಿ ಚೆಕ್ಕನ್ನೂ ಕಳಿಸಿಬಿಟ್ಟರು. ಅಂಥಾ ಕೊಡುಗೈ ಆಕೆಯದು!)

ಅಮೇರಿಕದ ಹಿಂದೂ ದೇವಾಲಯಗಳಲ್ಲಿ ಅತಿ ದೊಡ್ಡ ಹಾಗೂ ಪ್ರಮುಖ ಸಂಸ್ಥೆಯಾದ ಶ್ರೀ ಶಿವ ವಿಷ್ಣು ದೇವಾಲಯದ ಸ್ಥಾಪನೆಯಲ್ಲಿ ರಾಧಾಕೃಷ್ಣ ದಂಪತಿಗಳದ್ದು ಬಹುಮುಖ್ಯಪಾತ್ರ. ಪತಿಯ ಜೊತೆಜೊತೆಗೂ ದುಡಿದವರು ಪ್ರೇಮಾ. ಈಗೇನೋ ಈ ದೇವಾಲಯಕ್ಕೆ ಸಹಸ್ರಾರು ಭಕ್ತರಿದ್ದಾರೆ, ಹಣ ಧಾರಾಳವಾಗಿ ಬರುತ್ತಿದೆ. ಆದರೆ, ಪ್ರಾರಂಭದ ದಿನಗಳಲ್ಲಿ ಹಣದ ಕೊರತೆ ಮತ್ತು ಸ್ವಯಂಸೇವಕರ ಕೊರತೆ ವಿಪರೀತವಾಗಿತ್ತು. ಆ ದಿನಗಳಲ್ಲಿ ಬಿಡುವಿಲ್ಲದೇ ದುಡಿದ ಭಕ್ತರಲ್ಲಿ ಪ್ರೇಮಾ ಅಗ್ರಗಣ್ಯರು.

ಪತಿ ರಾಧಾಕೃಷ್ಣರ ಕಛೇರಿಯಲ್ಲಿ ಸಹ ಪ್ರೇಮಾ ವಹಿವಾಟು ನೋಡಿಕೊಳ್ಳುತ್ತಿದ್ದರು (ದೇವಸ್ಥಾನಕ್ಕೆ ಸಂಬಂಧಪಟ್ಟ ಕೆಲಸಗಳಿಗಾಗಿ ಅನೇಕ ಸಲ ಅವರ ಕಛೇರಿಗೆ ಭೇಟಿಕೊಡುವ ಅವಕಾಶ ನನಗೆ ಬಂದಿತ್ತು, ಹಾಗೆ ಹೋದಾಗಲೆಲ್ಲ, ಪ್ರೇಮ ಅವರ ಚಾಕಚಕ್ಯತೆಯನ್ನು ಕಣ್ಣಾರೆ ಕಾಣುವ ಪ್ರಸಂಗ ನನಗೊದಗುತ್ತಿತ್ತು.) ಅವರಿಗೆ ದೇಗುಲಕ್ಕಾಗಿ ಹಣ ಎತ್ತುವ ಅನೇಕ ಹೊಸ ಹೊಸ ತಂತ್ರಗಳು ಕರಗತವಾಗಿದ್ದವು. ಉದಾಹರಣೆಗೆ, ಜಾಯಂಟ್‌, ಸೇಫ್‌ವೇ ಮುಂತಾದ ಗ್ರೋಸರೀ ಸ್ಟೋರುಗಳ ಕೂಪನ್‌ಗಳನ್ನು ಭಕ್ತರಿಗೆ ಮಾರಿ ಅದರಿಂದ ಬರುವ ಕಮೀಷನ್‌ ಮೂಲಕ ದೇವರ ನಿಧಿಗೆ ಲಾಭಮಾಡುವುದು, ವರ್ಷೇ-ವರ್ಷೆ ‘ತಿಂಡಿ-ತಿನಸಿನ ಸಂತೆ’ (ಪುಡ್‌ ಬಜಾರ್‌) ಏರ್ಪಡಿಸುವುದು, ಕಲ್ಯಾಣೊತ್ಸವ, ಆಂಡಾಳ್‌ ಕಲ್ಯಾಣ, ಅಷ್ಟ ಲಕ್ಷ್ಮಿ ಅರ್ಚನೆ, ಕೋಟಿ-ಕುಂಕುಮಾರ್ಚನೆ, ಒಂದೇ ಎರಡೇ, ಅವರು ಕೈಹಾಕದ ಕೆಲಸವೇ ಇಲ್ಲ ನಮ್ಮ ದೇವಾಲಯದಲ್ಲಿ. ಪ್ರೇಮ ವ್ಯವಸ್ಥಾಪಕಿಯಾದರೆ ಯಾರೂ ತರಲೆ ಮಾಡಲು ಸಾಧ್ಯವಿಲ್ಲ ! ಅವರು ಕರಾರುವಾಕ್‌ ನಾಲ್ಕು ಘಂಟೆಗೆ ಪೂಜೆ ಎಂದರೆ ನಾಲ್ಕು ಘಂಟೆಗೆ. ಹೆಸರು ಕೊಟ್ಟು ತಡವಾಗಿ ಬಂದರೆ ಜಾಗ ಕಳೆದುಕೊಳ್ಳುವುದು ಖಂಡಿತ! ತಡವಾಗಿ ಬಂದು ಕಳೆದುಕೊಂಡವರ ಸ್ಥಾನವನ್ನು ಆಕ್ರಮಿಸಲು ನಿರೀಕ್ಷಕರ ಪಟ್ಟಿಯನ್ನೇ ಸಿದ್ಧಮಾಡಿರುತ್ತಿದ್ದರು. ಹೀಗಾಗಿ, ಅವರ ಕಾರ್ಯದ ವೈಖರಿ ತಿಳಿದವರು ಯಾರೂ ತಡವಾಗಿ ಬಂದು ಅವಕಾಶ ಕಳೆದುಕೊಳ್ಳುತ್ತಿರಲಿಲ್ಲ !

ಕೆಲವೇ ದಿನಗಳ ಕೆಳಗೆ ರಾಧಾಕೃಷ್ಣರನ್ನ ಕಾವೇರಿ ಕಾರ್ಯಕ್ರಮವೊಂದರಲ್ಲಿ ಶಾಲು ಹೊದ್ದಿಸಿ ಫಲಕ ಕೊಟ್ಟು ಗೌರವಿಸಿದಾಗ ಕೆಲ ನಿಮಿಷಗಳಿಗೆ ಅದ್ಯಾವುದೋ ಮಾಯದಲ್ಲಿ ಬಂದು ಆ ರಸಘಳಿಗೆಯಲ್ಲಿ ಪಾಲ್ಗೊಂಡು ಎಲ್ಲರ ಕಣ್ಣಿಗೆ ಬೀಳುವ ಮೊದಲೇ ಮಾಯವಾದರು! ಕೆಲದಿನಗಳಲ್ಲಿ ಇಹಲೋಕದಿಂದಲೇ ಮಾಯವಾದರು. ಅಂದು ಪತಿಪತ್ನಿಯರಿಬ್ಬರನ್ನೂ ರಂಗದ ಮೇಲೆ ಕರೆತಂದು ಗೌರವ ಅರ್ಪಿಸಲಿಲ್ಲವಲ್ಲ ಎಂದು ಈಗ ಕೈಕೈ ಹಿಸುಕಿಕೊಳ್ಳುವ ಹಾಗಾಗಿದೆ. ಏಕೆಂದರೆ, ಈ ಬಾರಿಯ ಕಾವೇರಿಯ ಸಂಕ್ರಾಂತಿಯ ಕಾರ್ಯಕ್ರಮದ ಹಿಂದಲ ದಿನವೇ ಅವರ ಭೌತಿಕ ಶರೀರದ ಅಂತ್ಯ ಸಂಸ್ಕಾರ ನಡೆದಾಗಿತ್ತು, ನೂರಾರು ಬಂಧುಮಿತ್ರರು ಬಂದು ಅವರನ್ನು ‘ಪ್ರೇಮ’ಪೂರ್ವಕವಾಗಿ ಕಳಿಸಿಕೊಟ್ಟೂ ಆಗಿತ್ತು, ಅವರನ್ನು ಗೌರವಿಸಬೇಕೆಂದರೂ ಅವರು ಇನ್ನಿಲ್ಲ. ಹೀಗಾಗಿ ಅವರಿಲ್ಲದ ‘ಭಣ-ಭಣ’ದಲ್ಲಿ ಅವರಿಗೆ ಅಶ್ರುತರ್ಪಣ, ಒಂದು ನಿಮಿಷದ ಮೌನ ಪ್ರಾರ್ಥನೆ ಇಷ್ಟರಲ್ಲೇ ತೃಪ್ತರಾಗಬೇಕಾಯಿತು.

ಅತ್ತ ದೇಗುಲದಲ್ಲೂ, ‘ಪ್ರೇಮ’ ಇಲ್ಲದ ಕಲ್ಯಾಣೋತ್ಸವವೂ ಅವರ ನೆನಪನ್ನೇ ತರುತ್ತಿತ್ತು ಎಂದು ಅನೇಕರು ಸ್ಮರಿಸಿಕೊಂಡರು. ಪ್ರತಿ ಹೆಜ್ಜೆಯಲ್ಲೂ ಪತಿಯ ಜೊತೆಗಿದ್ದ ‘ಸಹಧರ್ಮಿಣಿ’ ಜೊತೆಗಿಲ್ಲದಾಗ ಹೇಗೆ ತಾಳಿಕೊಳ್ಳುವರೋ ಆ ಪುಣ್ಯಾತ್ಮ. ಶ್ರೀ ಭಗವಂತನು ಆಕೆಯ ಆತ್ಮಕ್ಕೆ ಶಾಂತಿ ಕೊಡಲಿ. ಅವರಿಗೆ ಮೋಕ್ಷ ದೊರಕುವುದಂತೂ ಖಂಡಿತ. ಇಷ್ಟೆಲ್ಲ ಭಗವತ್ಸೇವೆ ಮಾಡಿದವರಿಗಲ್ಲದೇ ಮತ್ತಾರಿಗೆ ದೊರಕಬೇಕು ಮೋಕ್ಷ? ಕಾವೇರಿ ಕನ್ನಡಿಗರಿಗರನೇಕರಿಗೆ ಹಿರಿಯಣ್ಣನಂತಿರುವ ರಾಧಾಕೃಷ್ಣರಿಗೆ ಮತ್ತು ಅವರ ಕುಟುಂಬದವರಿಗೆ ಈ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ಕೊಡಲಿ ಎಂದು ಅವರ ಅಪಾರ ಬಂಧುಮಿತ್ರರ ಪರವಾಗಿ ದೇವರನ್ನು ಪ್ರಾರ್ಥಿಸುತ್ತಾ, ವಿರಮಿಸುವೆ, ಮುಂದಿನ ಕಂತಿನವರೆಗೆ.

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more