• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮನೆಯಿಂದ ಮನೆಗೆ

By * ಮೈಶ್ರೀ ನಟರಾಜ
|

ಸುಮಾರು ಇಪ್ಪತ್ತೆರಡು ವರ್ಷಗಳು ನಮಗೆ ನೆರಳಾಗಿದ್ದ ಮಾಂಟ್‌ಗಮರಿ ವಿಲೇಜ್‌ನಲ್ಲಿದ್ದ (ಕೆಲ ವರ್ಷಗಳ ಹಿಂದೆ ಆ ಊರು ಗೈಥರ್ಸ್‌ಬರ್ಗ್‌ನ ಒಂದು ಭಾಗವಾಗಿತ್ತು) ನಮ್ಮ ಮನೆಯನ್ನು ಬಿಟ್ಟು ಅಲ್ಲಿಂದ ಅಷ್ಟೇನೂ ದೂರವಿಲ್ಲದ ಪೊಟೋಮೆಕ್‌ನಲ್ಲಿನ ಮತ್ತೊಂದು ಮನೆಗೆ ಬಂದು ನೆಲೆಸಿದ್ದೆಲ್ಲ , ಒಂದು ಅಯೋಜಿತ ಕಾರ್ಯಕ್ರಮದಂತೆ ನಮಗೇ ತಿಳಿಯದಂತೆ ನಡೆದುಹೋದದ್ದನ್ನು ನೆನೆಸಿಕೊಂಡರೆ ಆಶ್ಚರ್ಯವಾಗುತ್ತದೆ.

ಯಾವ ದೀರ್ಘವಾದ ಯೋಚನೆ/ಯೋಜನೆಗಳನ್ನೂ ಮಾಡದೆ, ನಾವಿದ್ದ ಮನೆಯನ್ನು ಮಾರುವ ಮೊದಲೇ ಮತ್ತೊಂದು ಮನೆಯನ್ನು ಕೊಂಡದ್ದು, ಹೊಸ ನಿವಾಸಕ್ಕೆ ಬಂದು ತಲುಪುವ ಮೊದಲೇ ಹಳೆಯ ಮನೆಯನ್ನು ಮಾರಾಟಕ್ಕೆ ಹಾಕಿದ್ದು, ಒಂದು ವಾರವೂ ಕಳೆಯದೆ ಹಳೆಯ ಮನೆಗೆ ಹೊಸ ಕೊಳ್ಳುಗರೊಬ್ಬರು ಸಿಕ್ಕಿಬಿಟ್ಟಿದ್ದು, ಒಟ್ಟು ಮೂರೇ ವಾರದ ಅವಧಿಯಲ್ಲಿ ಮಾಯಾಬಜಾರಿನಂತೆ ಎಲ್ಲವೂ ನಡೆದಿದ್ದನ್ನು ನೆನೆಸಿಕೊಂಡರೆ, 'ಋಣಾನುಬಂಧರೂ ಪೇಣ ಪಶು-ಪತ್ನಿ-ಸುತಾಲಯಾಃ" ಎಂಬ ಮಾತಿನ ಸಂಪೂರ್ಣ ಸತ್ಯ ಮನದಟ್ಟಾಗುತ್ತದೆ.

ಇವೆಲ್ಲ ನಡೆಯಬೇಕಾಗಿದ್ದರಿಂದಲೇ ಏನೋ ಎನ್ನುವಂತೆ, ನಮ್ಮ ಹಳೆಯ ಮನೆಗೆ ಸುಣ್ಣ-ಬಣ್ಣ ಹೊಡೆಸಿದ್ದು, ಸಣ್ಣ-ದೊಡ್ಡ ರಿಪೇರಿ ಕೆಲಸಗಳನ್ನು ಕೈಗೊಂಡಿದ್ದು ಸಹ ಮಾರುವ ಉದ್ದೇಶದಿಂದ ಮಾಡಿದ ಕ್ರಿಯೆಗಳಲ್ಲ. ವಿಧಿ ಇಲ್ಲದೇ ಮಾಡಿಸಲೇಬೇಕಿದ್ದ 'ಮೆನ್ಟೆನೆನ್ಸ್‌" ಮಾತ್ರವಾಗಿತ್ತು. (ಹಲವು ಮಿತ್ರರು ಇವೆಲ್ಲ ದಿಢೀರ್‌ ನಡೆದ ಕ್ರಿಯೆಗಳಲ್ಲ, ಪೂರ್ವ ಯೋಜಿತ ಕ್ರಿಯೆಗಳೇ ಎಂದೇ ನಂಬಿದ್ದಾರೆ!) ಒಟ್ಟಿನಲ್ಲಿ, ಈಗ ನಮ್ಮ ವಿಳಾಸ ಬದಲಾಗಿದೆ.

ಕೆಲವು ವರ್ಷಗಳ ಹಿಂದೆ ಭಾರತಕ್ಕೆ ಹೋದಾಗ, ಹಾಸನದಲ್ಲಿದ್ದ, ನಾನು ಹುಟ್ಟಿ ಬೆಳೆದ ಮನೆ- ನಮ್ಮ ತಂದೆಯವರ ಸ್ವಯಾರ್ಜಿತ ಆಸ್ತಿ- ಮಾರಾಟವಾಗಿ ನೆಲಸಮವಾಗಿತ್ತು. ವಿಸ್ತಾರವಾಗಿದ್ದ ನಾಲ್ಕಾರು ಮನೆಗಳ ಆ ವಠಾರವನ್ನು, ಕೊಂಡವರು ನಾಲ್ಕಾರು ಸೈಟುಗಾಗಿ ವಿಂಗಡಿಸಿ ಮಾರಲು ತಯಾರಿಯಲ್ಲಿದ್ದರು. ನಮ್ಮಮ್ಮ ಮಸಾಲೆ ರುಬ್ಬುತ್ತಿದ್ದ ಒರಳು, ಪುಡಿಪುಡಿಯಾಗಿದ್ದ ಇಟ್ಟಿಗೆ ಮತ್ತು ಗಾರೆ ಚೂರುಗಳಡಿಯಿಂದ ಇಣಿಕಿ ನೋಡುತ್ತಿದ್ದ ದೃಶ್ಯ ಮನಸ್ಸನ್ನು ಘಾಸಿಗೊಳಿಸಿತ್ತು.

ನಾನು ನೂರಾರು ಬಾರಿ ಹಚ್ಚಿದ್ದ ಹೊಟ್ಟಿನೊಲೆಯ ಮೇಲೆ ಸಿಮೆಂಟಿನಲ್ಲಿ ಉಳಿದು ಹೋಗಿದ್ದ ಅರ್ಧಗೋಳಾಕಾರದ ಚೂರಿನಿಂದ, ಅಲ್ಲಿ ಹೂತಿದ್ದ ಇಪ್ಪತ್ತು ಬಿಂದಿಗೆ ನೀರು ಹಿಡಿಸುವ ಭಾರೀ ತಾಮ್ರದ ಹಂಡೆ, ತೋಡಲು ಉಪಯೋಗಿಸುತ್ತಿದ್ದ ಉದ್ದನೇ ಹಿಡಿಯ ಅಂಡೆ ಮತ್ತು ಬಡಿಚಿ ನೀರೆರೆಯಲು ಉಪಯೋಗಿಸುತ್ತಿದ್ದ ತಾಮ್ರದ ಬೋಸಿ, ಅಮ್ಮನ ಕೈಲಿ ನೆತ್ತಿಗೆ ತಟ್ಟಿಸಿಕೊಂಡ ಬಿಸಿ ಹರಳೆಣ್ಣೆ, ಉಜ್ಜಿಸಿಕೊಂಡ ಸೀಗೇಪುಡಿಯ ಉರಿ, ಬಚ್ಚಲಿನ ಬಿಸಿ -ಮುಂತಾದವನ್ನು ನೆನೆಸಿಕೊಂಡು ತಂಪು, ಶಾಖ, ಕಣ್ಗತ್ತಲು ಎಲ್ಲಾ ಒಟ್ಟಾಗೇ ಬಂದಂತಾಗಿತ್ತು.

ಭಾವಿಯಿಂದ ಸೇದಿ ತುಂಬುತ್ತಿದ್ದ ನೂರು ಕೊಡದ ನೀರಿನ ತೊಟ್ಟಿ ಅರ್ಧಂಬರ್ಧ ಮುಚ್ಚಿ ಹೋಗಿದ್ದರೂ ತೂಬು ಮಾತ್ರ ಮುಚ್ಚದೇ ಉಳಿದಿತ್ತು. ನಾನು ನಮ್ಮಣ್ಣ ಸೇರಿ ನೆಟ್ಟಿದ್ದ ತೆಂಗಿನ ಮರಗಳಲ್ಲಿ ಒಂದುಳಿದು ಮಿಕ್ಕವು ಮಾಯವಾಗಿದ್ದವು. ಆ ಸಲ ಭಾರತ ಬಿಟ್ಟಾಗ ಜೀವನದ ಒಂದು ಭಾಗವೇ ಪುಡಿಪುಡಿಯಾದಂತೆ ಅನ್ನಿಸಿತ್ತು. ಅದಾದ ನಂತರ ಒಂದೆರಡುಮೂರು ವರ್ಷಗಳಲ್ಲಿ ಭಾರತಕ್ಕೆ ಮತ್ತೆ ಭೇಟಿಕೊಟ್ಟಾಗ, ಆ ನಿವೇಶನಗಳಲ್ಲಿ ನಾಲ್ಕಾರು ಆಧುನಿಕ ಮನೆಗಳು ಎದ್ದಿದ್ದನ್ನು ಕಂಡು ನಮ್ಮದೆಂಬುದನ್ನು ಯಾರೋ ಕಿತ್ತು ಕೊಂಡಂತೆ ಅನ್ನಿಸಿತ್ತು. ಹಳೆಯ ಹಂಚಿನ ಮನೆಗಳು ಮಾಯವಾಗಿ ಹೊಸ ತಾರಸಿಗಳು, ನವ್ಯ ಶೈಲಿಯ ಕಟ್ಟಡಗಳು ಎದ್ದಿದ್ದವು. ಆ ದೃಶ್ಯವನ್ನು ಕಂಡು ಏಕೋ ಮನಸ್ಸು ಭಾರವಾಗಿತ್ತು. ದೇಶವನ್ನೇ ಬಿಟ್ಟುಬಂದ ನನಗೆ ಮತ್ತೊಮ್ಮೆ 'ಹೇಳ್ಕೊಳ್ಳೊಕ್ಕೊಂದೂರು, ತಲೆಮ್ಯಾಗೊಂದ್ಸೂರು" ಇಲ್ಲದ, ಮರುಕಳಿಸಿದ ತಬ್ಬಲಿತನ ಭಾಸವಾಗಿತ್ತು.

Home Sweet Homeಆ ನನ್ನ ಅನುಭವ ನನಗೇ ಮರೆತು ಹೋಗಿತ್ತೋ ಏನೋ, 'ನಮ್ಮ ಮಕ್ಕಳು ನಮ್ಮ ಗೈಥರ್ಸ್‌ಬರ್ಗಿನ ಮನೆಯ ಬಗ್ಗೆ ಅಂಥದೇ ಒಂದು ವ್ಯಾಮೋಹವನ್ನು ಬೆಳೆಸಿಕೊಂಡಿರಬಹುದು" ಎಂಬ ಸತ್ಯವನ್ನು ಮನಗಾಣದೆ ಹೋದೆ. ನಮ್ಮ ಮೂರೂ ಮಕ್ಕಳು ಕೆಜಿಯಿಂದ ಹೈಸ್ಕೂಲಿನ ವರೆಗೆ ವಿದ್ಯಾಭ್ಯಾಸಮಾಡಿ ಅನೇಕ ಗೆಳೆಯ ಗೆಳತಿಯರೊಂದಿಗೆ ಆಟ ಪಾಠ ಮಾಡಿದ ಆ ಮನೆಯಲ್ಲಿ ಅವರ ನೆನಪುಗಳು ನೆಲೆಸಿದ್ದವೆಂಬುದನ್ನು ಮರೆತುಬಿಟ್ಟೆ.

ಓದು ಮುಗಿಸಿ ಕೆಲಸದಲ್ಲಿರುವ ಹೆಣ್ಣು ಮಕ್ಕಳು ಸ್ವಲ್ಪ ಅಸಮಾಧಾನವನ್ನು ತೋರಿದರೂ, ನಮ್ಮ ನಿರ್ಧಾರವನ್ನು ಅರ್ಧಮನಸ್ಸಿನಿಂದ ಒಪ್ಪಿಕೊಂಡರು. ಆದರೆ, ಇನ್ನೂ ಕಾಲೇಜಿನಲ್ಲಿರುವ ನಮ್ಮ ಮಗಮಾತ್ರ ತುಂಬಾ ಸಿಟ್ಟಾದ, ಭಾವ ಪರವಶನಾದ, ಆ ಹಳೇ ಮನೆಯೇ ತನ್ನ ಮನೆ, ನಾವು ಕೊಂಡ ಈಗಿನ ಮನೆ ತನ್ನ 'ಮನೆ" ಎಂದೂ ಆಗಲಾರದೆಂದುಬಿಟ್ಟ. (ನಾನು ತರುಣನಾಗಿದ್ದಾಗ, ನಮ್ಮಲ್ಲಿ ಯಾರನ್ನೂ ಕೇಳದೇ ನಮ್ಮ ತಂದೆ ತಮ್ಮ ಸ್ವಯಾರ್ಜಿತ ಆಸ್ತಿಯ ಒಂದು ಭಾಗವನ್ನು, ಹಣದ ಅವಶ್ಯಕತೆಯಿಂದಾಗಿ ಮಾರಿದ್ದು, ಆ ಕಾರಣ ತಂದೆ-ಮಕ್ಕಳಲ್ಲಿ ನಡೆದ ವಾಗ್ವಾದ ನೆನಪಾಯಿತು. ದೇಶ ಬೇರೆ, ಕಾಲ ಬೇರೆ, ಆದರೆ ಘಟನೆಗಳಲ್ಲಿ ಸಾಕಷ್ಟು ಸಾಮ್ಯವಿದೆ ಎನ್ನ ಬಹುದು. ಚರಿತ್ರೆ ಪುನರಾವರ್ತಿಸುತ್ತದೆಯಷ್ಟೆ ?)

ನಾನು ಸುಮಾರು ಎರಡೂವರೆ ವಯಸ್ಸಿನವನಾಗಿದ್ದಾಗಲಿಂದ ನಾವಿದ್ದ ಊರುಗಳು, ಅಲ್ಲಿ ನಡೆದ ಘಟನೆಗಳೆಲ್ಲ ನನಗೆ ಚೆನ್ನಾಗಿ ನೆನಪಿವೆ. ಕೆಲವೇ ತಿಂಗಳುಗಳಿದ್ದ ಅಣಪಿನ ಕಟ್ಟೆ, ಆಯನೂರುಗಳಂತಹ ಸಣ್ಣ ಸಣ್ಣ ಊರುಗಳೂ ಸಹ. ಶಿವಮೊಗ್ಗ ಮತ್ತು ಚಾಮರಾಜನಗರಗಳೂ ಹೆಚ್ಚು ಕಾಲ ವಾಸಿಸದ ಊರುಗಳು. ಪ್ರಾಥಮಿಕ ಶಾಲೆಯನ್ನು ಓದುವಾಗ ನಾಲ್ಕೈದು ವರ್ಷಗಳಿದ್ದ ತುಮಕೂರನ್ನೂ ಅಲ್ಲಿನ ಮೇಷ್ಟ್ರುಗಳನ್ನೂ ಹೇಗೆ ತಾನೇ ಮರೆಯಲು ಸಾಧ್ಯ?

Home Sweet Homeನನ್ನೂರು ಎಂದು ನಾನು ಹೇಳಿಕೊಳ್ಳುವ ಹಾಸನದಲ್ಲಿ ನಾನು ಕಳೆದದ್ದು ಸುಮಾರು ಆರು ವರ್ಷಗಳು, ನನ್ನ ಜೀವನದ ಅತ್ಯಂತ ಪ್ರಭಾವೀ ದಿನಗಳ, ಪ್ರೌಢಶಾಲೆಯ ಸವಿನೆನಪುಗಳ ಸ್ವಂತ ಊರು ಹಾಸನ. ಇಂಜಿನಿಯರಿಂಗ್‌ ಓದಿದ ಬೆಂಗಳೂರು, ಉನ್ನತ ವಿದ್ಯಾಭ್ಯಾಸದ ಮುಂಬಯಿ ಇವೆಲ್ಲ ಜೀವನಸೌಧಕ್ಕೆ ಬುನಾದಿಯನ್ನು ಕಟ್ಟಿದ ದಿನಗಳು, ಮುಖ್ಯ ನಿಲ್ದಾಣಗಳು. ಆ ಪ್ರತಿ ಒಂದು ಊರಿನಲ್ಲೂ ನಮ್ಮ ಮನೆ ಇತ್ತು, ಯಾವುದೂ ನಮ್ಮ ಸ್ವಂತದ್ದಲ್ಲ, ಬಾಡಿಗೆಯವು ಅಥವಾ ಸರ್ಕಾರ ಕೊಟ್ಟ ವಸತಿಗಳು.

ಅಮೇರಿಕದಲ್ಲಿ (ಪಿಟ್ಸ್‌ಬರ್ಗಿನಲ್ಲಿ) ವಿದ್ಯಾಭ್ಯಾಸ ಕಳೆದ ಮೇಲೆ, ನ್ಯೂಜೆರ್ಸಿಯ ಕೆಲ ವರ್ಷಗಳನ್ನು ಬಿಟ್ಟರೆ ಹೆಚ್ಚು ಪಾಲು ಜೀವನವೆಲ್ಲ ಗೈಥರ್ಸ್‌ಬರ್ಗಿನ ಮನೆಯಲ್ಲೆ. ಇಷ್ಟಾದರೂ, 'ಮನೆ" ಎಂದರೆ ಕೇವಲ ಸೂರು ಗೋಡೆಗಳುಳ್ಳ ಒಂದು ಕಟ್ಟಡಮಾತ್ರವೇ ಅಥವಾ, ನಮ್ಮೊಡನಿರುವ ತಂದೆ-ತಾಯಿ, ಅಣ್ಣ-ತಮ್ಮ, ಅಕ್ಕ-ತಂಗಿ, ಹೆಂಡತಿ ಮಕ್ಕಳೆಲ್ಲ ಸೇರಿ ಸೂರು-ಗೋಡೆಗಳಿಗೆ ಮನೆಯೆಂಬ ಹೆಸರು ಉಂಟಾಗುತ್ತದೆಯೆ?

ಬೆಂಗಳೂರು ಮುಬಯಿಗಳಲ್ಲಿ ವಾಸಮಾಡಿದ ವಿದ್ಯಾರ್ಥಿನಿಲಯಗಳ ನೆನಪಿಗೂ ತುಮಕೂರು-ಹಾಸನಗಳ ಮನೆಗಳಲ್ಲಿನ ನೆನಪುಗಳಿಗೂ ವ್ಯತ್ಯಾಸವಿಲ್ಲವೇ? ಹಾಸನದ ಮನೆಯ ಹಿತ್ತಲಿನಲ್ಲಿ ಬೆಳೆದ ತರಕಾರಿಗಳನ್ನು ಅದೇತಾನೆ ಕೊಯ್ದು ತಂದು ನಲ್ಲಿಯಲ್ಲಿ ತೊಳೆದು ಪಲ್ಯ, ಹುಳಿ, ಮಜ್ಜಿಗೆಹುಳಿ ಮಾಡಿಸಿಕೊಂಡು ತಿಂದ ಆ ನೆನಪಿನ ಅನುಭವ ಇಲ್ಲೇಕೆ ಆಗುವುದಿಲ್ಲ? ಆದರೆ, ನನ್ನ ಮಗಳು ಹುರುಳೀಕಾಯಿನ ಬೀಜವನ್ನು ಪೇಪರ್‌ ಕಪ್ಪಿನಲ್ಲಿ ಮಣ್ಣು ತುಂಬಿ ಬಿತ್ತಿ, ಅದು ಗಿಡವಾಗಿ ಬೆಳೆದ ಪರಿಯನ್ನು ವಿಜ್ಞಾನದ ತರಗತಿಯಲ್ಲಿ ವಿವರಿಸಿ, ಕೆಲದಿನಗಳಲ್ಲಿ ಅದು ದೊಡ್ಡದಾಗಿ, ಅದರಲ್ಲಿ ಬಿಟ್ಟ ಒಂದೆರಡೇ ಕಾಯಿಗಳನ್ನು ಸಾರಿನಲ್ಲಿ ತೇಲಿಬಿಟ್ಟಾಗ ಅವಳಿಗಾದ ಸಂಭ್ರಮ ನನ್ನ ಬಾಲ್ಯದ ಸಂಭ್ರಮಕ್ಕೆ ಕಮ್ಮಿ ಇರಲಾರದೆಂಬ ವಿಷಯ ನನಗೇಕೆ ಹೊಳೆದಿರಲಿಲ್ಲ?

ನಾವು ಎಂದೊ ಇದ್ದು ಇಂದು ನೆನಪು ಮಾತ್ರವಾಗುಳಿದಿರುವ ಕಟ್ಟಡವೇ ಮನೆಯೇ, ಅಥವಾ ನಾವಿಂದು ಇರುವ -ಅದು ಏನೇ ಆಗಿರಲಿ, ಅರಮನೆ, ಗುಡಿಸಿಲು- ತಾಣವೇ ನಮ್ಮ ಮನೆಯೇ? ಮನೆಯಿಂದ ಮನೆಗೆ ಹೋದಾಗ, ಮನೆ ಬದಲಾಯಿಸಿದಾಗ, ಮನೆಯೇ ನಮ್ಮೊಂದಿಗೆ ಬರುತ್ತದೆಯೇ? ನೆನಪು ಮಾತ್ರ ಬರುತ್ತದೆಯೇ? ಮೊನ್ನೆ ಹೆಣ್ಣು ಮಕ್ಕಳು ಮನೆಗೆ ಬಂದು ಪದಾರ್ಥಗಳನ್ನು ಸ್ವಸ್ಥಾನಗಳಲ್ಲಿಡಲು ಸಾಕಷ್ಟು ಸಹಾಯ ಮಾಡಿದರು, ಇದು ತಮ್ಮದೇ ಮನೆ ಎನ್ನುವಷ್ಟರಮಟ್ಟಿಗೆ. ಮಗ ಬಂದರೂ ಅತಿಥಿಯಂತೆ ವರ್ತಿಸಿದ. ಅವನ ಕೆಲವು ಮಿತ್ರರು ಬಂದು ಭೇಟಿಕೊಟ್ಟು 'ಅಡ್ಡಿಯಿಲ್ಲ" ಎಂದು ಒಪ್ಪಿಗೆ ಪ್ರದರ್ಶಿಸಿದ ಮೇಲೆ ಕೊಂಚ ಸಡಿಲಾದ.

ಮುಂದೆ, ನೆಲಮಾಳಿಗೆಯನ್ನು ಹೇಗೆ ಮಾರ್ಪಡಿಸಬೇಕು ಮುಂತಾದ ವಿಚಾರಗಳಲ್ಲಿ ಸಲಹೆ ಕೊಟ್ಟ. ಕೆಲ ವರ್ಷಗಳು ಕಳೆದರೆ, ಈ ಮನೆಯೇ ಅವನ ಮನೆ ಎಂದು ಅವನು ಒಪ್ಪಿಕೊಳ್ಳುವನೋ, ಕಾದು ನೋಡಬೇಕು! ಅಂತೂ ಮನೆ ಎಂದರೇನು ಎಂದು ಇನ್ನೂ ಯೋಚಿಸುತ್ತಲೇ ಇದ್ದೇನೆ. ಈ ಮಾರುವ ಕೊಳ್ಳುವ ವ್ಯಾಪಾರ ಕೇವಲ ಹಣಕಾಸಿನ ವ್ಯವಹಾರವೇ? 'ಮನೆ" ಎಂಬ ಭಾವನೆಗೆ ರೂಪ ಕೊಡುವುದು ಏನು? ಹಿಂದಿನ ಮನೆಯಲ್ಲಿದ್ದಂತೆ ಪರಿಚಿತ ವ್ಯವಸ್ಥೆಯನ್ನು ಹೊಸ ಮನೆಯಲ್ಲೂ ನಿರ್ಮಿಸಲು ನಿತ್ಯ ಯತ್ನಿಸುತ್ತಲೇ ಇದ್ದೇವೆ. ಕೆಲಸದಿಂದ ಹಿಂದಿರುಗುವಾಗ ಒಂದೆರಡು ಬಾರಿ ತಪ್ಪಿ ಹಳೆಯ ಮನೆಗೇ ಹೊರಟಿದ್ದನ್ನು ನೆನೆಸಿಕೊಂಡರೆ, ನನಗೆ ತಿಳಿದೋ ತಿಳಿಯದೆಯೋ, ಇಪ್ಪತ್ತೆರಡು ವರ್ಷಗಳ ಋಣಾನುಬಂಧದ ಕೊಂಡಿ ಇನ್ನೂ ಸವೆದಿಲ್ಲವೇನೋ ಎನ್ನಿಸುತ್ತೆ. ಅಕ್ಕಪಕ್ಕದವರಿಗೆ ಸರಿಯಾಗಿ ಹೇಳಿ ಬರಲಾಗಲಿಲ್ಲ, ಮತ್ತೊಮ್ಮೆ ಹೋಗಿ ವಿದಾಯ ಹೇಳಬೇಕು. ಮಗ ಕಾಲೇಜಿನಿಂದ ಕ್ರಿಸ್‌ಮಸ್‌ ರಜೆಗೆ ಬಂದಾಗ ಅವನೊಂದಿಗೆ ಮತ್ತೊಮ್ಮೆ ಗೈಥರ್ಸ್‌ಬರ್ಗಿನ ಮನೆಗೆ ಒಂದು ಭೇಟಿ ಕೊಡಬೇಕು. ನಿಮಗೇನನ್ನಿಸುತ್ತದೆ?

ಮನೆ ಬದಲಾವಣೆಯ ಕಾರಣಗಳಿಂದಾಗಿ ಬರವಣಿಗೆಗೆ ಸ್ವಲ್ಪ ವಿರಾಮ ಕೊಡಬೇಕಾಯಿತು, 'ಜಾಲತರಂಗದ ಓದುಗರೇ ಕ್ಷಮೆ ಇರಲಿ" ಎನ್ನುತ್ತ, 2005 ನಿಮಗೆಲ್ಲ ಶುಭತರಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತ, ವಿರಮಿಸುವೆ ಮುಂದಿನ ಕಂತಿನ ವರೆಗೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more