ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಂಬಿದಂತಿರಬೇಕು, ನಂಬದೆಲೆ ಇರಬೇಕು!

By Staff
|
Google Oneindia Kannada News
Dr.M.S.Nataraj ಡಾ.ಮೈ.ಶ್ರೀ.ನಟರಾಜ, ಗೈಥಸ್‌ಬರ್ಗ್‌, ಮೇರಿಲ್ಯಾಂಡ್‌
[email protected]

Dr.M.S.Nataraj writes on The India-Pakistan Conflict ಬ್ರಿಟಿಷರ ‘ಜಗಳ ಹಚ್ಚಿ ಆಳ್ವಿಕೆ ನಡೆಸುವ’ ಕೂಟ ನೀತಿಯಿಂದಾಗಿ ಭಾರತದ ವಿಭಜನೆ ಆಯಿತೆಂದರೆ ಸಂಕೀರ್ಣ ರಾಜಕೀಯದ ಸರಳೀಕರಣವಾಗಬಹುದು. ಆದರೆ, ಲಕ್ಷಾಂತರ ಜನರ ಮೃತ್ಯು ಮತ್ತು ಲಕ್ಷಾಂತರ ಸಂಸಾರಗಳು ಮನೆ-ಮಠಗಳನ್ನು ಕಳೆದುಕೊಂಡು ಗಡಿಯ ಒಂದುಕಡೆಯಿಂದ ಮತ್ತೊಂದು ಕಡೆ ಓಡಿಹೋಗುವುದನ್ನು ತಪ್ಪಿಸಲು ಏನೇನು ಮಾಡಬಹುದಿತ್ತೋ ಅದನ್ನು ಮಾಡಲು ಅಂದಿನ ರಾಜಕಾರಣಿಗಳು ತಯಾರಿರಲಿಲ್ಲ. ಹಿಂದೂ-ಮುಸಲ್ಮಾನರ ಮಧ್ಯೆ ಬೆಳೆದಿದ್ದ ಪರಸ್ಪರ ಸಂಶಯ ಮತ್ತು ಮತಾಂಧರು ಹರಡಿದ ದ್ವೇಷ ಇವು ಎಷ್ಟು ಭಯಾನಕ ಮಟ್ಟವನ್ನು ತಲುಪಿದ್ದವೆಂದರೆ, ಹತ್ಯಾಕಾಂಡವನ್ನು ತಪ್ಪಿಸುವುದು ಅಸಾಧ್ಯವೆಂಬ ನಂಬಿಕೆ ಬ್ರಿಟಿಷರಲ್ಲು ಬೆಳೆದಿತ್ತು. ದೇಶದ ವಿಭಜನೆ ಮುಗಿದು ಇನ್ನೂ ಕಣ್ಣು ಬಿಡುವ ಮೊದಲೇ ಭಾರತದ ಗಡಿಯಲ್ಲಿ ದಂಡೆತ್ತಿ ಬಂದ ದೇಶ ಪಾಕೀಸ್ತಾನ ಎನ್ನುವುದನ್ನು ಭಾರತೀಯರು ಮರೆಯಲು ಸಾಧ್ಯವೇ? ಕಾಶ್ಮೀರವನ್ನು ಕಬಳಿಸಲು 1947ರಲ್ಲಿ ಪ್ರಾರಂಭವಾದ ಕದನ ಇಂದಿನವರೆಗೂ ನಡೆದು ಬಂದಿದೆ.

ಗಡಿಯಾಚೆ ಅತ್ತ, ಪ್ರಜಾಪ್ರಭುತ್ವದ ಬೆಳವಣಿಗೆಗೆ ಪಾಕೀಸ್ತಾನದ ಸೇನೆ ಅವಕಾಶ ಕೊಡಲೇ ಇಲ್ಲ. ಆದರೆ, ಬಡತನ ಕಷ್ಟ ನಿಷ್ಠುರಗಳ ಮಧ್ಯದಲ್ಲಿ ಭಾರತ ಪ್ರಜಾಪ್ರಭುತ್ವವನ್ನು ಅರಗಿಸಿಕೊಂಡಿತು. ಭಾರತದ ಸಂವಿಧಾನ ಎಲ್ಲ ಧರ್ಮಗಳಿಗೂ ಸಮಾನ ಹಕ್ಕನ್ನು ಕೊಟ್ಟು ಜಾತ್ಯತೀತ ರಾಷ್ಟ್ರವೊಂದರ ನಿರ್ಮಾಣವಾಗುತ್ತಿರುವಾಗಲೇ ಪಾಕೀಸ್ತಾನ ತನ್ನ ಪ್ರಜೆಗಳ, ಅದರಲ್ಲೂ ಎಳೆಯರ ಮಿದುಳನ್ನು ಕಲುಷಿತಗೊಳಿಸಿ ಅಲ್ಪಸಂಖ್ಯಾತರ ವಿರುದ್ಧ ದ್ವೇಷವನ್ನು ಬೆಳೆಸುತ್ತ ಬಂತು. ಒಂದು ಇಡಿ ಜನಾಂಗವೇ ಹಿಂದುಗಳನ್ನು ಮಾತ್ರವಲ್ಲ, ಭಾರತವನ್ನೇ ದ್ವೇಷಿಸುವಂತೆ ಮಕ್ಕಳ ತಲೆಯನ್ನು ‘ಮಡಿ’ ಮಾಡಲಾಯಿತು. ಅಲ್ಲಿನ ಸರ್ವಾಧಿಕಾರಿ ಅಯೂಬ್‌ ಖಾನ್‌ 1965ರಲ್ಲಿ ಮತ್ತೆ ಭಾರತದೊಡನೆ ಕಾಲು ಕೆರೆದುಕೊಂಡು ಯುದ್ಧ ಹೂಡಿ ಮತ್ತೊಮ್ಮೆ ಕಾಶ್ಮೀರವನ್ನು ಕಬಳಿಸಲು ಯತ್ನಿಸಿದ. ಆದರೆ ಸಫಲವಾಗಲಿಲ್ಲವಾದರೂ, ಆಮೇರಿಕಾ ಮತ್ತು ಚೀನಾದ ಸಹಾಯದಿಂದ ಭಾರತದ ಮೇಲೆ ಕತ್ತಿ ಮಸೆಯುವುದನ್ನು ಮಾತ್ರ ಸತತವಾಗಿ ಮುಂದುವರೆಸಿದ.

ಧರ್ಮದ ಹೆಸರಿನಲ್ಲಿ ಒಂದು ದೇಶವೆಂದು ಪರಿಗಣಿಸಿದ್ದರೂ, ಸಂಸ್ಕೃತಿ ಮತ್ತು ಭಾಷೆಯ ದೃಷ್ಟಿಯಿಂದ ಭಿನ್ನರಾಗಿದ್ದ ಪೂರ್ವ ಪಾಕೀಸ್ತಾನದ ಬಂಗಾಳೀ ಮುಸ್ಲಿಮರೊಡನೆ ಪಶ್ಚಿಮದ ಪಂಜಾಬಿಗಳು ಹೊಂದಿಕೊಳ್ಳಲಿಲ್ಲ. 1971ರಲ್ಲಿ ತಮ್ಮವರೇ ಆದ ಆದರೆ ತಮಗಿಂತಲೂ ಹೆಚ್ಚಿನ ಜನಸಂಖ್ಯೆಯಿಂದ ಕೂಡಿದ ಪೂರ್ವ ಪಾಕೀಸ್ತಾನದ ಜನತೆಯ ಮೇಲೆ ಪಶ್ಚಿಮ ಪಾಕೀಸ್ತಾನದ ಜನರು ದಬ್ಬಾಳಿಕೆ ನಡೆಸಲು ಹೊರಟು ಬಾಂಗ್ಲಾ ದೇಶದ ಹುಟ್ಟಿಗೆ ತಾವೇ ಕಾರಣರಾದರು. ಭಾರತದ ಸೇನೆ ಪಾಕೀಸ್ತಾನದ ಸೇನೆಯನ್ನು ಸದೆಬಡಿದು ಲಕ್ಷಮಂದಿ ಸೈನಿಕರನ್ನು ಶರಣಾಗತರಾಗುವಂತೆ ಮಾಡಿದ ಮೇಲೆ ಪಾಕೀಸ್ತಾನದ ಸ್ಥಿತಿ ಚಿಂತಾಜನಕವಾಯಿತು. ಆ ಸಂದರ್ಭದಲ್ಲಿ ಸೇನೆಯ ಪ್ರಭಾವ ಕಮ್ಮಿಯಾಗಿ ಪ್ರಜಾಪ್ರಭುತ್ವದ ಅಂಕುರವಾಗುವ ಸಾಧ್ಯತೆ ಇತ್ತು. ಭಾರತದೊಂದಿಗೆ ಸಂಧಿ ಮಾಡಿಕೊಂಡು ಶಾಂತಿಯಿಂದ ಸಹಬಾಳ್ವೆ ಮಾಡುವ ಸದವಕಾಶ ಉಂಟಾಗಿತ್ತು. ಆದರೆ ಮುಂದೆ ನಡೆದದ್ದೇ ಬೇರೆಯ ಕಥೆ.

ಪಾಕೀಸ್ತಾನ ತನ್ನ ಹೋರಾಟದ ವೈಖರಿಯನ್ನು ಬದಲಾಯಿಸಿತು. ಕಾರಣಾಂತರಗಳಿಂದ ಅತೃಪ್ತರಾಗಿದ್ದ ಭಾರತೀಯ ಸಿಖ್ಖರೊಡನೆ ಹೊರದೇಶಗಳಲ್ಲಿ ಸಂಪರ್ಕ ಬೆಳೆಸಿ ಅವರು ಭಾರತದ ವಿರುದ್ಧ ದಂಗೆ ಏಳುವಂತೆ ಪ್ರಚೋದಿಸುವುದರಲ್ಲಿ ಪಾಕೀಸ್ತಾನದ ಬೇಹುಗಾರರು ಜಯಶಾಲಿಗಳಾದರು. ಈ ಕಾರಣದಿಂದ ಸಹಸ್ರಾರು ಜನರು ಸತ್ತರು, ಅಣ್ಣತಮ್ಮಂದಿರಂತಿದ್ದ ಹಿಂದು-ಸಿಖ್ಖರಲ್ಲಿ ಒಡಕು ಉಂಟಾಯಿತು. ನೇರವಾಗಿ ಯುದ್ಧಮಾಡಿ ಗೆಲ್ಲಲಾಗದಿದ್ದರು ಭಾರತದ ರಕ್ತವನ್ನು, ತನಗೆ ಯಾವ ನೋವೂ ಇಲ್ಲದಂತೆ, ಹರಿಸುವುದರಲ್ಲಿ ಪಾಕೀಸ್ತಾನ ಜಯಗಳಿಸಿತು.

ಇತ್ತ ಕಾಶ್ಮೀರದಲ್ಲೂ ಅದೇ ರೀತಿ, ಅದೇ ನೀತಿ, ಆದರೆ ಒಂದೇ ವ್ಯತ್ಯಾಸವೆಂದರೆ, ಇಲ್ಲಿ ಯಾವ ಗುಟ್ಟು ಗೋಪ್ಯವೂ ಇಲ್ಲದೇ ರಾಜಾರೋಷಾಗಿ ತನ್ನ ಸೈನಿಕರನ್ನು ಭಾರತದ ಗಡಿಯಾಳಕ್ಕೆ ಸ್ವಾತಂತ್ರ್ಯ ಹೋರಾಟಗಾರರ ವೇಷದಲ್ಲಿ ನುಗ್ಗಿಸಿ ಸಹಸ್ರಾರು ಮೃತ್ಯುಗಳಿಗೆ ಕಾರಣವಾಯಿತು. ಅಂತರ್ರಾಷ್ಟ್ರೀಯ ವೇದಿಕೆಗಳನ್ನು ಅವಕಾಶ ಸಿಕ್ಕಾಗಲೆಲ್ಲ ದುರುಪಯೋಗಪಡಿಸಿಕೊಂಡು ಭಾರತಕ್ಕೆ ಅಪಖ್ಯಾತಿ ಬರುವಂತೆ ಮಾಡಿತು. ಅಮೇರಿಕಾ-ರಷ್ಯಾ ನಡುವಣ ವೈಷಮ್ಯದ ಲಾಭವನ್ನು ಪಡೆಯುವುದರಲ್ಲೂ ಪಾಕೀಸ್ತಾನ ಯಶಸ್ವಿಯಾಯಿತು. ಚೈನಾ ಸರ್ಕಾರದೊಂದಿಗೆ ವ್ಯವಹರಿಸಲು ಅಮೇರಿಕಾಕ್ಕೆ ನೆರವಾಗುವುದರ ಮೂಲಕ, ಆಫ್ಘನ್‌ ತರಲೆಯಲ್ಲಿ ಅಮೆರಿಕನ್ನರಿಗೆ ಸಹಾಯಮಾಡುವ ನೆಪದಲ್ಲಿ ಕೋಟಿಗಟ್ಟಲೆ ಡಾಲರುಗಳನ್ನು ಅಮೇರಿಕಾದಿಂದ ದೋಚಿಕೊಂಡಿತು. ಭಾರತವನ್ನು ತಹಬಂದಿಯಲ್ಲಿಡುವ ಒಂದೇ ಕುಟಿಲ ದೃಷ್ಟಿಯಿಂದ ಅಮೇರಿಕಾ ಪಾಕೀಸ್ತಾನಕ್ಕೆ ಅತಿ ಸಲಿಗೆ ಕೊಟ್ಟು ಭಾರತವನ್ನು ಮಲೆತಾಯಿ ಧೋರಣೆಯಿಂದ ಕಾಣುತ್ತಾ ಬಂತು. ‘ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ’ದ ಧೋರಣೆ ಇಂದಿಗೂ ಮುಂದುವರೆದಿರುವುದನ್ನು ನಾವು ನೋಡಬಹುದು.

1974ರಲ್ಲಿ ಭಾರತ ಅಣ್ವಸ್ತ್ರವನ್ನು ಸ್ಫೋಟಿಸಿ ಪ್ರಪಂಚಕ್ಕೆ ಒಂದು ಸಂದೇಶವನ್ನು ಸಾರಿತು. 1964ರಲ್ಲಿ ಅಣ್ವಸ್ತ್ರವನ್ನು ಸ್ಫೋಟಿಸಿದ್ದ ಚೈನಾದ ಬೆಳೆಯುತ್ತಿರುವ ಶಕ್ತಿಗೆ ಉತ್ತರವೋ ಎಂಬಂತೆ ಭಾರತ ತಲೆ ಎತ್ತಿ ಸವಾಲು ಮಾಡಿತು. ಭಾರತಕ್ಕಿಂತ ಅನೇಕ ಪಟ್ಟು ಚಿಕ್ಕದಾದರೂ ಭಾರತಕ್ಕೆ ತಾನೂ ಸಮಾನವೆಂಬ ದುರಹಂಕಾರವನ್ನು ಬಿಡದೇ ಪಾಕೀಸ್ತಾನ ‘ಹುಲ್ಲು ತಿಂದರೂ ಸರಿ, ಹಸಿವೆಯಿಂದ ಪ್ರಾಣ ಬಿಟ್ಟರೂ ಸರಿ, ಅಣ್ವಸ್ತ್ರವನ್ನು ಹೊಂದಿಯೇ ತೀರುತ್ತೇವೆ’ ಎಂಬ ನಿರ್ಧಾರಕ್ಕೆ ಬಂತು. ಆಲ್ಲಿಂದ ಶುರುವಾದ ನಿರ್ಧಾರ ವಂಚನೆ, ಮೋಸಗಳಿಂದ ಅಣ್ವಸ್ತ್ರದ ರಹಸ್ಯಗಳನ್ನು ಇತರ ಮುಂದುವರೆದ ದೇಶಗಳಿಂದ ಕದ್ದು , 1998ರಲ್ಲಿ ತನ್ನ ಪ್ರಥಮ ಸ್ಫೋಟವನ್ನು ಮಾಡಿ ತಾನೂ ಇತರ ಅಣ್ವಸ್ತ್ರಗಳನ್ನು ಹೊಂದಿದ್ದ ದೇಶಗಳ ಪಟ್ಟಿಗೆ ಪಾಕೀಸ್ತಾನವೂ ಸೇರಿಬಿಟ್ಟಿತು. ಒಂದು ವೇಳೆ ಭಾರತ ತನ್ನ ಎರಡನೆಯ ಸ್ಫೋಟವನ್ನು 1998ರಲ್ಲಿ ಮಾಡದೇ ಕೂತಿದ್ದಿದ್ದರೆ, ಪ್ರಾಯಶಃ ಪಾಕೀಸ್ತಾನದ ಬಳಿಯಿರುವ ಅಣ್ವಸ್ತ್ರದ ಸುಳಿವು ಪ್ರಪಂಚಕ್ಕೆ ಆಗುತ್ತಿತ್ತೋ ಇಲ್ಲವೋ ಹೇಳುವುದು ಕಷ್ಟ. ಅಂತು, ಎಲ್ಲರ ಕಣ್ಣಿಗೂ ಮಣ್ಣೆರಚಿ ಪಾಕೀಸ್ತಾನ ನಡೆಸುತ್ತಿದ ಕುಟಿಲನೀತಿಯನ್ನು ಹೊರತಂದು (ಎಲ್ಲರಿಗೂ ತಿಳಿದಿದ್ದ) ಗುಟ್ಟನ್ನು ರಟ್ಟು ಮಾಡುವುದರಲ್ಲಿ ಭಾರತ ಸಫಲವಾಯಿತು. (ಆದರೆ, ಪಾಕೀಸ್ತಾನವು ಅಣ್ವಸ್ತ್ರ ಹೊಂದಿದ ದೇಶವಾಗುವುದಕ್ಕೆ ಅವಕಾಶ ಕೊಟ್ಟದ್ದೇ ಭಾರತದ ಅತಿ ದೊಡ್ಡ ಸೋಲು!)

ಇಂದು ಅಮೇರಿಕದ ದೃಷ್ಟಿಯಲ್ಲಿ ‘ಖಳದೇಶಗಳ ಅಕ್ಷ’ವೆನಿಸುವ ಇರಾನ್‌/ಇರಾಕ್‌, ಲಿಬಿಯ, ಉತ್ತರ ಕೊರಿಯ ದೇಶಗಳಿಗೆ ತಾನು ಕದ್ದ ಅಣ್ವಸ್ತ್ರ ರಹಸ್ಯಗಳನ್ನು ಮಾರಿ ಹಣವನ್ನೂ ತೈಲವನ್ನೂ ಪಾಕೀಸ್ತಾನ ಗಿಟ್ಟಿಸಿದೆ. ಮುಷರ್ರಾಫನು ಖದೀಮನಂತೆ ವರ್ತಿಸುತ್ತ ತನಗೆ ಏನೇನೂ ಸಂಬಂಧವಲ್ಲದ ಕಥೆ ಇದು ಎನ್ನುವಷ್ಟರಮಟ್ಟಿಗೆ ನಾಟಕ ಹೂಡಿದ್ದಾನೆ. ಇದೇ ಆಸಾಮಿ, ಭಾರತದ ಪ್ರಧಾನಿ ಪಾಕೀಸ್ತಾನದ ಪ್ರಧಾನಿ ನವಾಬ ಷರೀಫರನ್ನ ಭೇಟಿಯಾಗಲು ಲಾಹೋರಿಗೆ ಪ್ರಯಾಣ ಮಾಡಿದಾಗ ಅವರ ಸಮಾಗಮದ ಸಮಯದಲ್ಲಿ ಗಾಯಬ್‌ ಆಗಿದ್ದ. ಆಗ್ರಾದಲ್ಲಿ ಪ್ರಧಾನಿ ವಾಜಪೇಯರೊಂದಿಗೆ ಶಾಂತಿ ಸಂಧಾನಕ್ಕೆ ಬಂದವನು ಹೆಂಡತಿಗೆ ತಾಜ್‌ಮಹಲ್‌ ತೋರಿಸಿ ಕೈಕೊಟ್ಟೋಡಿದ. ಕಾರ್ಗಿಲ್‌ ಕದನದ ರೂವಾರಿಯೂ ಇವನೇ. ಈಗ ಈತ ಜನರ ಪ್ರತಿನಿಧಿಯಂತೂ ಅಲ್ಲ, ಸೈನ್ಯಾಧಿಪತಿಯ ಪಟ್ಟವೂ ಎಷ್ಟರಮಟ್ಟಿಗೆ ಅವನ ವಶದಲ್ಲಿದೆಯೋ ಹೇಳುವುದು ಕಷ್ಟ . ಈಗಾಗಲೆ ಅವನ ಜೀವದಮೇಲೆ ಎರಡು ಹಲ್ಲೆಗಳು ನಡೆದಿವೆ. ಕಟ್ಟರ್‌ ಮುಸಲ್ಮಾನರು ಅವನನ್ನು ಭಕ್ಷಿಸಲು ಹೊಂಚುಹಾಕಿ ಕಾಯುತ್ತಿದ್ದಾರೆ. ಅಮೆರಿಕನ್ನರು ಒಸಾಮನನ್ನು ಹಿಡಿಯುವ ಒಂದೇ ಕಾರಣದಿಂದ ಅವನೊಂದಿಗೆ ಆಟವಾಡುತ್ತಿದ್ದಾರೇನೋ ಎಂಬ ಅನುಮಾನವೂ ಉಂಟಾಗುತ್ತಿದೆ. ಅವರ ಹಣವನ್ನೇ ಪಡೆದು ಅವರ ಶತ್ರುಗಳಿಗೆ ಅಣ್ವಸ್ತ್ರ ರಹಸ್ಯವನ್ನು ಮಾರಿ ಲಾಭ ಪಡೆದು ಸುಳ್ಳು ಹೇಳಿ ನುಣುಚಿಕೊಳ್ಳುತ್ತಿರುವ ಇವನ ಆಟ ಅಮೇರಿಕದ ಬೇಹುಗಾರರಿಗೆ ಗೊತ್ತಿಲ್ಲವೆಂದು ನಂಬುವುದೂ ಒಂದೇ, ಪಾಕೀಸ್ತಾನದ ಅಣುವಿಜ್ಞಾನಿ ಅಬ್ದುಲ್‌ ಖದೀರ್‌ ಖಾನ್‌ ಸಾಹೇಬ ಮಾಡಿದ ಕೆಲಸ ಮುಷರ್ರಾಫನಿಗೆ ಗೊತ್ತಿರಲಿಲ್ಲವೆಂದು ನಂಬುವುದು ಒಂದೆ! ಇಂಥಾ ಆಸಾಮಿಯನ್ನು ಭಾರತ ನಂಬಬಹುದೇ? ಭಾರತವನ್ನು ದ್ವೇಷಿಸುವ ಪಾಕೀಸ್ತಾನವನ್ನು ಕಣ್ಮುಚ್ಚಿ ನಂಬಿ ಮೋಸಹೋಗಬಹುದೇ?

ನಿಜವಾಗಿಯೂ ಭಾರತದೊಂದಿಗೆ ಶಾಂತಿ ಸಂಧಾನ ಮಾಡಿಕೊಂಡಿದ್ದರಿಂದ ಪಾಕೀಸ್ತಾನದ ಜನತೆಗೆ ಲಾಭವಿದ್ದರೂ ಅಲ್ಲಿಯ ಸೈನ್ಯಕ್ಕೆ ಯಾವ ಲಾಭವೂ ಇಲ್ಲ. ಎಲ್ಲಿಯವರೆಗೆ ಕಾಶ್ಮೀರ ಸಮಸ್ಯೆ ಉಳಿದಿರುವುದೋ ಅಲ್ಲಿಯವರೆಗೆ ಪಾಕೀಸ್ತಾನದ ಸೇನೆಗೆ ಒಂದು ಪ್ರಾಮುಖ್ಯತೆ ಉಂಟು. ಭಾರತದಂಥ ವೈರಿ ಪಕ್ಕದಲ್ಲೇ ಇರದಿದ್ದಿದ್ದರೆ ಪಾಕೀಸ್ತಾನ ಕೂಡ ಒಂದು ಪ್ರಜಾಪ್ರಭುತ್ವ ವಾಗಿರುತ್ತಿತ್ತೋ ಏನೋ?

ಅಂತು ಭಾರತ ಒಂದು ದಿಟ್ಟ ಹೆಜ್ಜೆ ಇಟ್ಟು ಪಾಕೀಸ್ತಾನದೊಂದಿಗೆ ಸ್ನೇಹಹಸ್ತ ಚಾಚಿದೆ. ಮುಂದೇನಾಗುವುದೋ ಕಾದು ನೋಡಬೇಕಾಗಿದೆ. ನೆರೆಹೊರೆಯ ದೇಶಗಳು ಸ್ನೇಹದಿಂದಿದ್ದರೆ ಚೆನ್ನ, ನಿಜ. ಆದರೆ ಒಂದು ಮಾತು ಭಾರತೀಯರು ನೆನಪಿಡಬೇಕು. ಯಾವ ಸ್ನೇಹ ಸಂಧಿ ಮಾಡಿಕೊಂಡರೂ ಪಾಕೀಸ್ತಾನದ ಕಡೆಯ ಭಾರತದ ಗಡಿಯನ್ನು ಮಾತ್ರ ಬಿಗಿಯಾಗಿ ರಕ್ಷಿಸಬೇಕು. ಒಂದಲ್ಲೊಂದು ದಿನ ಅವರು, ಅದೂ ಅತಿ ಅನಿರೀಕ್ಷಿತ ಘಳಿಗೆಯಲ್ಲಿ, ಭಾರತದ ಮೇಲೆ ಆಕ್ರಮಣ ಮಾಡದೇ ಬಿಡುವುದಿಲ್ಲ. ನೇಣು ಹಾಕಿಸಿಕೊಂಡ ಭುಟ್ಟೋ ಹೇಳಿದ ಮಾತು ನೆನಪಿದೆಯೆ? ‘ನಾವು ಹಿಂದೂಸ್ತಾನವನ್ನು ಎಂಟು ಶತಮಾನ ಆಳಿ ಅವರನ್ನು ನಾಗರೀಕರನ್ನಾಗಿ ಮಾಡಿದೆವು, ಬ್ರಿಟಿಷರು ಮೂರು ಶತಮಾನ ಆಳಿ ಇನ್ನಷ್ಟು ಹಸನು ಮಾಡಿದರು’ ಎಂದಿದ್ದ ಆತ! ತನ್ನ ಪೂರ್ವಿಕರು ಔರಂಗಜೇಬನ ಕಾಲದಲ್ಲಿ ಬಲಾತ್ಕಾರಕ್ಕೊಳಪಟ್ಟು ಮತ ಪರಿವರ್ತನೆ ಮಾಡಿಕೊಳ್ಳಬೇಕಾಗಿ ಬಂದ ದುರ್ಭಾಗ್ಯರು ಎಂಬುದನ್ನೂ ಮರೆತು ಬಿಟ್ಟಿದ್ದ, ತಾನು ಸ್ವಾತಂತ್ರ್ಯಪೂರ್ವದಲ್ಲಿ ಮುಂಬೈನಲ್ಲಿದ್ದವನು ಎಂಬುದನ್ನು ಮರೆತು ಬಿಟ್ಟಿದ್ದ!

ಅದಕ್ಕೇ ಚಾಣಕ್ಯನೀತಿಯನ್ನು ಮರೆಯಬಾರದು. ನಂಬಿದಂತಿರಬೇಕು, ನಂಬದೆಲೆ ಇರಬೇಕು. ಯಾವ ಒಪ್ಪಂದ ಮಾಡಿಕೊಂಡರೂ ಒಂದರೆ ಕ್ಷಣವೂ ಎಚ್ಚರ ತಪ್ಪದೇ ದೇಶವನ್ನು ಕಾಪಾಡಿಕೊಳ್ಳಬೇಕು, ಇಲ್ಲವಾದರೆ ಚರಿತ್ರೆಯಿಂದ ಕಲಿತದ್ದಾದರೂ ಏನು? ಲೋಕದಲ್ಲಿ ಎಲ್ಲೆಲ್ಲು ಶಾಂತಿ ನೆಲೆಸಲಿ. ಆದರೆ, ಭಾರತೀಯ ಇತಿಹಾಸದ ಪಾಠಗಳನ್ನು ಭಾರತ ಸರ್ಕಾರ, ಭಾರತದ ಜನತೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಭಾರತದ ಸೇನೆ ಎಂದೆಂದೂ ಮರೆಯದಿರಲಿ ಎಂದು ಆಶಿಸುತ್ತ, ವಿರಮಿಸುವೆ, ಮುಂದಿನ ಕಂತಿನವರೆಗೆ.

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X