ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವೆ ಮತ್ತು ದಾಂಪತ್ಯಗಳ ಮೇಲೆ ಇತ್ತೀಚಿನ ಸವಾಲು

By Staff
|
Google Oneindia Kannada News
Dr.M.S.Nataraj ಡಾ.ಮೈ.ಶ್ರೀ.ನಟರಾಜ, ಗೈಥಸ್‌ಬರ್ಗ್‌, ಮೇರಿಲ್ಯಾಂಡ್‌
[email protected]

Dr. M.S. Nataraj writes on Marriage and Matrimonial state ‘ಮದುವೆ’ ಎಂದೊಡನೆ ಗಂಡು ಹೆಣ್ಣುಗಳ ನಡುವೆ ನಡೆಯುವ ಒಂದು ಸಾಮಾಜಿಕ ಸಂಬಂಧವನ್ನು ನಾವು ಮನಸ್ಸಿನಲ್ಲಿ ತಂದುಕೊಳ್ಳುತ್ತೇವೆ. ಒಂದು ಗಂಡು ಒಂದು ಹೆಣ್ಣಿಗೆ ವಚನವಿತ್ತು (ಹಿಂದೂ ಜನಾಂಗದಲ್ಲಾದರೆ, ಅಗ್ನಿಸಾಕ್ಷಿಯಾಗಿ ಕೈಹಿಡಿದು) ಕಾನೂನಿನ ರಕ್ಷಣೆ ಪಡೆದು ಜೀವನವನ್ನು ಪ್ರಾರಂಭಿಸುವ ಚಿತ್ರ ಕಣ್ಮುಂದೆ ಬರುವುದು. ವಿಶ್ವದ ಯಾವಮೂಲೆಯಲ್ಲಾದರೂ ಸರಿ, ಮನುಷ್ಯನ ಸಾಮಾಜಿಕ ಚರಿತ್ರೆಯೇ ಹೀಗಿದೆ. ಪ್ರಾಣಿಗಳಂತೆ ಹೊಡೆದಾಡಿ ಇತರ ಗಂಡುಗಳನ್ನು ಸೋಲಿಸಿ ಹೆಣ್ಣಿನ ಮೇಲೆ ಸ್ವಾಮ್ಯವನ್ನು ಸ್ಥಾಪಿಸುತ್ತಿದ್ದ ಮಾನವ, ಮುಂದುವರೆದಂತೆಲ್ಲ , ಒಟ್ಟಾರೆ ಸಮಾಜದ ಹಿತದೃಷ್ಟಿಯಿಂದ ಕೆಲವು ನಿಯಮಗಳನ್ನು ಮಾಡಿಕೊಂಡಿದ್ದರಿಂದ, ವಿವಾಹವೆಂಬ ಒಂದು ವ್ಯವಸ್ಥೆ ಉಂಟಾಯಿತು. ದಾಂಪತ್ಯವೆಂದರೆ ಒಂದು ಗಂಡು, ಒಂದು ಹೆಣ್ಣು , ಒಟ್ಟಾಗಿ ಬಾಳುವುದು ಎಂಬ ಪದ್ಧತಿ ಬೆಳೆದು ಬಂತು. ಪ್ರಕೃತಿ ಸಹಜವಾದ ದೇಹದ ಕಾಮ ಪೂರ್ತಿಯಾಗಲು ಬೇಕಾದ ವ್ಯವಸ್ಥೆಯ ಜೊತೆಗೇ ಸಂತಾನೋತ್ಪತ್ತಿಯ ದೃಷ್ಟಿಯಿಂದ ಸಹ ಈ ಮದುವೆಯ ವ್ಯವಸ್ಥೆ ಮಾನವ ಸಮಾಜಕ್ಕೆ ಒಂದು ವರವಾಗಿ ಪರಿಣಮಿಸಿತು. ಕುಟುಂಬವೆಂಬ ಸಮಾಜದ ತುಣುಕು ಭದ್ರವಾಗಿ ಸ್ಥಾಪಿತವಾಯಿತು.

ಪ್ರಕೃತಿಯ ಸೃಷ್ಟಿಯಲ್ಲಿ ಎಲ್ಲವೂ ಕ್ರಮವಾಗಿ ಒಂದು ಶೃತಿಯಲ್ಲಿ ಒಂದು ತಾಳದ ಜತಿಯಲ್ಲಿ ಸಾಗುತ್ತದೆ. ಅಂಥ ಕಟ್ಟುನಿಟ್ಟಿನ ಪ್ರಕೃತಿಯ ಸೃಷ್ಟಿಯಲ್ಲೂ ಮಧ್ಯೆಮಧ್ಯೆ (ಅಪರೂಪಕ್ಕಾದರೂ) ತಾಳ ತಪ್ಪುತ್ತದೆ, ಅಪಶೃತಿ ಕೇಳುತ್ತದೆ, ಅಪಸ್ವರ ಹೊರಡುತ್ತದೆ, ಅನಿರೀಕ್ಷಿತ ಫಲಿತಾಂಶ ಉಂಟಾಗುತ್ತದೆ. ಇಂಥ ಅಪವಾದಗಳಲ್ಲಿ ಸಲಿಂಗ-ಆಕರ್ಷಣೆಯೂ ಒಂದಾಗಿರಬಹುದೇ?

ಗಂಡು-ಗಂಡುಗಳ ನಡುವಣ ಲೈಂಗಿಕ ಸಂಬಂಧ (ಸಲಿಂಗ ಕಾಮ), ಹೆಣ್ಣು-ಹೆಣ್ಣುಗಳ ನಡುವಣ ಲೈಂಗಿಕ ಸಂಬಂಧ (ಸಸಲಿಂಗರತಿ), ಹೊಸ ಸಂಗತಿಯಲ್ಲ. ಆದರೆ ‘ಸಲಿಂಗ-ವಿವಾಹ’ ಇತ್ತೀಚೆಗೆ ಅಮೆರಿಕದಲ್ಲಿ ಗದ್ದಲ ಎಬ್ಬಿಸಿರುವ ಬಿಸಿ ಸುದ್ದಿ. ನಾವು ಭಾರತದಲ್ಲಿ ಬೆಳೆಯುತ್ತಿದ್ದಾಗ ಇಬ್ಬರು ಸ್ನೇಹಿತರು ಹೆಗಲ ಮೇಲೆ ಪರಸ್ಪರ ಕೈ ಇಟ್ಟುಕೊಂಡು ಓಡಾಡುವುದು ಹೇಸಿಗೆಯ ವಿಷಯ ಎನಿಸುತ್ತಿರಲಿಲ್ಲ. ಆದರೆ ಇಲ್ಲಿ ಬೆಳೆದ ನಮ್ಮ ಮಕ್ಕಳು ಭಾರತದ ಬೀದಿಗಳಲ್ಲಿ ಕೈ ಹಿಡಿದುಕೊಂಡು ಓಡಾಡುವ ಗಂಡಸರನ್ನು ಕಂಡು ಗೇಲಿ ಮಾಡುತ್ತಾರೆ. ಅವರ ದೃಷ್ಟಿಯಲ್ಲಿ ಹಾಗೆ ಪರಸ್ಪರ ಸ್ನೇಹವನ್ನು ವ್ಯಕ್ತ ಪಡಿಸಿದರೆ ಅವರು ಸಲಿಂಗ ಕಾಮಿಗಳು (ಸಲಿಂಗಪ್ರೇಮಿಗಳು?). ಅಮೇರಿಕ ಮತ್ತು ಯೂರೋಪಿನ ಅನೇಕ ದೇಶಗಳಲ್ಲಿ ಸುಮಾರು ಮೂರು ನಾಲ್ಕು ದಶಕಗಳ ಮೊದಲು ಸಲಿಂಗಪ್ರೇಮಿಗಳು ಗುಪ್ತವಾಗಿರುತ್ತಿದ್ದರು, ಆದರೆ ಇತ್ತೀಚೆಗೆ ಅವರು ‘ಗೂಡುಬಿಟ್ಟು ಹೊರಬಂದಿದ್ದಾರೆ’. ಹಲವು ನಗರಗಳಲ್ಲಂತೂ ಸಲಿಂಗಪ್ರೇಮ ರಾಜಾರೋಷವಾಗಿಯೇ ನಡೆಯುತ್ತಿದೆ. ಒಟ್ಟಾರೆ ಸಮಾಜದ ದೃಷ್ಟಿಯಿಂದ ಇದೊಂದು ಬಹು ಗೋಜಿನ ವಿಷಯವಾಗಿ ಪರಿಣಮಿಸಿದೆ.

ಸಲಿಂಗಪ್ರೇಮ/ಕಾಮ ಹೊಸ ವಿಷಯವೇ? ಹಿಂದಿರಲಿಲ್ಲವೇ? ಕೇವಲ ಪಾಶ್ಚಿಮಾತ್ಯರು ಅನುಭವಿಸುತ್ತಿರುವ ಸಮಸ್ಯೆಯೇ? ಭಾರತದಂಥಾ ದೇಶಗಳಲ್ಲಿ ಅಂಥ ಜನರಿಲ್ಲವೇ? ಈ ಮುಂತಾದ ಪ್ರಶ್ನೆಗಳಿಗೆ ಉತ್ತರ ಹುಡುಕಿದರೆ, ಕೆಲದೇಶಗಳಲ್ಲಿ ಮುಚ್ಚುಮರೆ ಮಾಡುತ್ತಾರೆ, ಇನ್ನು ಕೆಲ ದೇಶಗಳಲ್ಲಿ ಯಾವ ಮುಚ್ಚುಮರೆಯೂ ಇಲ್ಲದೇ ಸಲಿಂಗ ಪ್ರೇಮವನ್ನು ಪ್ರದರ್ಶಿಸುತ್ತಾರೆ ಎಂಬ ಮಾಹಿತಿ ದೊರೆಯುತ್ತದೆ. ಇದು ಹೊಸ ವಿಷಯವೇನಲ್ಲ, ಹಾಗೂ ಒಂದೆರಡು ದೇಶಗಳಿಗೆ ಸೀಮಿತವಾದದ್ದಲ್ಲ, ಎಂದು ತಿಳಿಯುತ್ತದೆ. ಹಲವರು ಈ ರೀತಿಯ ಸಂಬಂಧಗಳನ್ನು ಮಾನವನಲ್ಲಿ ಅಡಗಿರುವ ಲೈಂಗಿಕತೆಯ ಸ್ವಚ್ಛಂದ ಹಾಗು ಮುಕ್ತ ಅಭಿವ್ಯಕ್ತಿ ಎಂದು ವಾದಿಸಿದರೆ, ಮತ್ತೆ ಕೆಲವರು, ಹುಟ್ಟಿನಿಂದಲೇ ಕೆಲವರಿಗೆ ಸಲಿಂಗ ನಡವಳಿಕೆ ಉಂಟಾಗುತ್ತದೆ, ಅಂಥವರಿಗೆ ಆ ಸ್ವಭಾವ ಪ್ರಕೃತಿಸಹಜವಾದದ್ದು, ಅದನ್ನು ಪ್ರದರ್ಶಿಸದೆ ಅವರಿಗೆ ವಿಧಿಯೇ ಇಲ್ಲ, ಮುಂತಾಗಿ ಅಭಿಪ್ರಾಯ ಪಡುತ್ತಾರೆ.

ಸರಾಸರಿ ಗಂಡಿಗೆ ತಾರುಣ್ಯ ಬಂದಾಗ ಹೇಗೆ ಹೆಣ್ಣಿನ ಮೇಲೆ ಆಕರ್ಷಣೆ ಉಂಟಾಗುತ್ತದೋ, ಋತುಮತಿಯಾದ ಹೆಣ್ಣಿಗೆ ಗಂಡಿನ ಬಗ್ಗೆ ಹೇಗೆ ಆಕರ್ಷಣೆ ಉಂಟಾಗುತ್ತದೋ ಅದೇ ರೀತಿ ಕೆಲವರಿಗೆ ತಮ್ಮ ವರ್ಗಕ್ಕೇ ಸೇರಿದ ಅಂದರೆ ಪುರುಷರಿಗೆ ಪುರುಷರ ಮೇಲೆ, ಸ್ತ್ರೀಯರಿಗೆ ಸ್ತ್ರೀಯರ ಮೇಲೆ ಆಕರ್ಷಣೆ ಉಂಟಾಗುತ್ತದೆ. ಈಗ ಈ ಬಗ್ಗೆ ಯಾವ ಮುಚ್ಚು-ಮರೆಯೂ ಇಲ್ಲದೇ ಇಲ್ಲಿನ ಜನ ಮಾತಾಡುತ್ತಾರೆ. ಹೆಚ್ಚೇಕೆ, ಅನೇಕ ದೂರದರ್ಶನದ ಕಾರ್ಯಕ್ರಮಗಳಲ್ಲಿ ಇಂಥಾ ಪಾತ್ರಗಳನ್ನು ಸೃಷ್ಟಿಸಿ ಯಾವ ಹೀನಾಯವೂ ಇಲ್ಲವೇನೋ ಎಂಬಂತೆ, ಅದು ಸರ್ವೇ ಸಾಧಾರಣ ವಿಷಯ ಅನ್ನುವಷ್ಟರ ಮಟ್ಟಿಗೆ ಪಾಶ್ಚಿಮಾತ್ಯ ಸಮಾಜದಲ್ಲಿ ಅಳವಡಿಕೆ ಆಗಿ ಹೋಗಿದೆ. ಇಷ್ಟಾದರೂ, ಮದುವೆಯ ವಿಷಯದಲ್ಲಿ ಇಲ್ಲಿನ ಅಸಂಖ್ಯಾತ ಜನರ ಮನಸ್ಸಿನಲ್ಲಿ ಇನ್ನೂ ಒಂದು ರೀತಿಯ ಮಡಿವಂತಿಗೆ ಇದೆ. ಮದುವೆಯ ಸಂಬಂಧದ ವಿಷಯದಲ್ಲಿ ಒಂದು ಪಾವಿತ್ರ್ಯದ ದೃಷ್ಟಿಯನ್ನು ಇಟ್ಟುಕೊಂಡಿರುವವರ ಸಂಖ್ಯೆಯೂ ಸಾಕಷ್ಟಿರುವಂತಿದೆ.

ಇತ್ತೀಚಿಗೆ ಇದ್ದಕ್ಕಿದ್ದಹಾಗೆ ‘ಮದುವೆ ಎಂದರೆ ಏನು’ ಎನ್ನುವ ಪ್ರಶ್ನೆ ಮತ್ತು ಆ ಪ್ರಶ್ನೆಗೆ ಅನೇಕ ಉತ್ತರಗಳು ಪತ್ರಿಕೆಗಳಲ್ಲಿ ಮತ್ತು ದೂರದರ್ಶನದ ಕಾರ್ಯಕ್ರಮಗಳಲ್ಲಿ ದಿನನಿತ್ಯವೆಂಬಂತೆ ಚರ್ಚೆಯ ವಿಷಯಗಳಾಗಿಬಿಟ್ಟಿವೆ. ವಿವಾದ ಸ್ವಲ್ಪ ಪ್ರಕೋಪಕ್ಕೆ ಹೋಗುತ್ತಿರುವಂತೆ ಭಾಸವಾಗುತ್ತಿದೆ.

ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎನ್ನುವ ಮೂಲಭೂತ ನಂಬಿಕೆಯ ಮೇಲೆ ನಿಂತ ಅಮೇರಿಕದ ಸಂವಿಧಾನ ಯಾರನ್ನೂ ತಾರತಮ್ಯಕ್ಕೆ ಒಳಪಡಿಸುವಂತಿಲ್ಲ. ಮದುವೆಯಾದವರಿಗೆ ಕೆಲವು ಸಾಮಾಜಿಕ ಹಾಗೂ ಕಾನೂನಿನ ರಕ್ಷಣೆಗಳಿವೆ. ಗಂಡ ಹೆಂಡತಿ ಬೇರಾದರೆ ಯಾರು ಯಾರಿಗೆ ಏನೇನು ಹಕ್ಕು, ಮಕ್ಕಳು ಯಾರಿಗೆ, ಆಸ್ತಿ ಯಾರಿಗೆ ಎಷ್ಟೆಷ್ಟು ಮುಂತಾದ ವಿಚಾರಗಳನ್ನು ನ್ಯಾಯಾಲಯ ತೀರ್ಮಾನಿಸುತ್ತದೆ. ಆದಾಯ-ತೆರಿಗೆಯ ಬಗ್ಗೆ ಸಹ ವಿವಾಹಿತರಿಗೂ ಅವಿವಾಹಿತರಿಗೂ ವ್ಯತ್ಯಾಸವಿದೆ. ಒಬ್ಬ ಗಂಡು ಮತ್ತೊಬ್ಬ ಗಂಡಿಗೆ ಅಥವಾ ಒಂದು ಹೆಣ್ಣು ಮತ್ತೊಂದು ಹೆಣ್ಣಿಗೆ ಭಾಷೆಕೊಟ್ಟು, ಎಲ್ಲರ ಮುಂದೆ ತಾಳಿ ಕಟ್ಟಿ ಸಮಾಜದೆದುರು ‘ದಂಪತಿಗಳಾಗಿ’ ಬಾಳುತ್ತ ‘ಧರ್ಮೇಚ, ಅರ್ಥೇಚ, ಕಾಮೇಚ, ನಾತಿಚರಾಮಿ’ ಎಂದು ನುಡಿಯುತ್ತ ಸಪ್ತಪದಿ ಏಕೆ ಮಾಡಬಾರದು ಎಂಬುದೇ ಕೆಲವರ ಪ್ರಶ್ನೆಯಾಗಿದೆ.

ಮ್ಯಾಸಚುಸೆಟ್ಸಿನ ನ್ಯಾಯಾಲಯವೊಂದರ ತೀರ್ಪಿನಿಂದ ಪ್ರಾರಂಭವಾದ ಈ ಬಿಕ್ಕಟ್ಟು ದೇಶದ ಇತರ ಭಾಗಗಳಿಗೂ ಹಬ್ಬಿದೆ. ಕ್ಯಾಲಿಫೋರ್ನಿಯಾದ ಸ್ಯಾನ್‌ಫ್ರ್ಯಾನ್‌ಸಿಸ್ಕೋ ನಗರದಲ್ಲಿ ನೆಲೆಸಿರುವ ನೂರಾರು ಸಲಿಂಗ ಜೋಡಿಗಳು ಮದುವೆಗೆಂದು ಮುಂದೆಬಂದಿದ್ದಾರೆ. ಮದುವೆ ಎಂಬ ಒಂದು ವ್ಯವಸ್ಥೆಯ ಬಗ್ಗೆ ಗೌರವವುಳ್ಳ ಅನೇಕರಿಗೆ ಈ ನಡವಳಿಕೆ ಮನಸ್ಸಿಗೆ ಮುಜುಗರ ತಂದಿದೆ.

ಗಂಡುಹೆಣ್ಣುಗಳು ಎಲ್ಲರ ಮುಂದೆ ಯಾವ ಸಂಕೋಚವೂ ಇಲ್ಲದೇ (ಮಲಗುವ ಕೋಣೆಗಳಿಗೇ ಮೀಸಲಾಗಿರಬೇಕಾದ) ಕಾಮಕೇಳಿಗಳನ್ನು ರೈಲು, ಬಸ್ಸು, ರಸ್ತೆ, ಉದ್ಯಾನ ಮುಂತಾದ ಸಾರ್ವಜನಿಕ ಪ್ರದೇಶಗಳಲ್ಲೆಲ್ಲ ಪ್ರದರ್ಶಿಸುವ ರೂಢಿ ಅಮೇರಿಕದ ಜನತೆಗೆ ಹೊಸದಲ್ಲ. ಅಂತಹ ದೃಶ್ಯಗಳನ್ನು ಕಂಡು ಹುಬ್ಬೇರಿಸದ ಶ್ರೀಸಾಮಾನ್ಯರಿಗೂ, ಇತ್ತೀಚೆಗೆ ರಾಜಾರೋಷವಾಗಿ ನಡೆಯುತ್ತಿರುವ, ಗಂಡು ಗಂಡಿಗೆ, ಹೆಣ್ಣು ಹೆಣ್ಣಿಗೆ ತುಟಿಗೆ ತುಟಿ ಇಟ್ಟು ಮುತ್ತಿಡುವ ದೃಶ್ಯ ಭೀಭತ್ಸವನ್ನು ತರಿಸುತ್ತಿದೆ. ಈ ವಿಷಯದ ಬಗ್ಗೆ ಧಾರ್ಮಿಕ ಸಂಸ್ಥೆಗಳು ಚರ್ಚೆ ನಡೆಸುತ್ತಿವೆ. ನ್ಯಾಯಾಲಯಗಳು ಕಟ್ಟಳೆ ಮಾಡುತ್ತಿವೆ. ಈ ವಿಷಯ ಕೇಂದ್ರ ಸರ್ಕಾರಕ್ಕೆ ಸೇರಿದ್ದೋ ಅಥವಾ ಸ್ಥಳೀಯ/ಸಾಂಸ್ಥಾನಿಕ ಸರ್ಕಾರಗಳ ಆಡಳಿತಕ್ಕೆ ಒಳಪಟ್ಟ ವಿಷಯವೋ ಎಂಬ ಚರ್ಚೆ ಬಿರುಸಾಗುತ್ತಿದೆ. ಈ ನವೆಂಬರ್‌ನಲ್ಲಿ ನಡೆಯುವ ಚುನಾವಣೆಯಲ್ಲಿ ಈ ಪ್ರಶ್ನೆ ಬೃಹದಾಕಾರ ತಾಳುವ ಸಾಧ್ಯತೆ ಇದೆ. ಸರಳವಾದ ಉತ್ತರಗಳಿಲ್ಲದ ಈ ಜಟಿಲ ಸಮಸ್ಯೆಯನ್ನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಉಮೇದುವಾರು ಎದುರಿಸಲೇ ಬೇಕಾಗುತ್ತದೆ.

ಸಲಿಂಗ ಸ್ತ್ರೀ ದಂಪತಿಗಳು ಇತರ ದಂಪತಿಗಳಂತೆ ಮಕ್ಕಳನ್ನು ಹಡೆಯಲು ಮತ್ಯಾರೊಂದಿಗೋ ನೇರವಾದ ಲೈಂಗಿಕ ಸಂಬಂಧದಿಂದಾಗಲೀ, ಅಥವಾ ವೀರ್ಯದಾನ ಪಡೆದಾಗಲೀ ಬಸುರಾಗುವ ಹಕ್ಕನ್ನು ಕೇಳುತ್ತಾರೆ. ಸಲಿಂಗ ಪುರುಷ ದಂಪತಿಗಳು ಮಕ್ಕಳನ್ನು ದತ್ತು ಪಡೆಯಲು ಅಡ್ಡಿ ಇರಕೂಡದು ಎನ್ನುತ್ತಾರೆ. ಮಕ್ಕಳನ್ನು ಸಾಕಲು ಒಂದು ತಾಯಿ ಒಂದು ತಂದೆಯೇ ಏಕಾಗಬೇಕು, ಎರಡು ತಾಯಿಯರೋ ಎರಡು ತಂದೆಯರೋ ಏಕಾಗಬಾರದು ಎಂದು ಸವಾಲು ಮಾಡುತ್ತಾರೆ. ಮಕ್ಕಳ ಮಾನಸಿಕ ಆರೋಗ್ಯಕ್ಕೆ ಕುಟುಂಬದಲ್ಲಿ ಕಟ್ಟುನಿಟ್ಟಿನ, ಶಿಸ್ತಿನ ತಂದೆ ಮತ್ತು ಪ್ರೀತಿಯಿಂದ ಸಲಹುವ ತಾಯಿ, ಈ ಇಬ್ಬರ ಅಗತ್ಯವೂ ಇದೆ ಎಂಬ ವಾದವನ್ನು ಸಲಿಂಗ ದಂಪತಿಗಳು ಒಪ್ಪುವುದಿಲ್ಲ. ಮದುವೆಯ ವ್ಯವಸ್ಥೆಗಾಗಲೀ ಕುಟುಂಬದ ವ್ಯವಸ್ಥೆಗಾಗಲಿ ಸಲಿಂಗ ದಾಂಪತ್ಯ ಮಾರಕವಲ್ಲ ಎಂದು ವಾದಿಸುತ್ತಾರೆ.

ಹಲವಾರು ದಶಕಗಳನ್ನು ಒಟ್ಟಾಗಿ ಒಬ್ಬರಿಗೊಬ್ಬರು ಪ್ರಾಮಾಣಿಕವಾಗಿ ಕಳೆದಿರುವ ಅನೇಕ ಸಲಿಂಗದಂಪತಿಗಳು, ವಿಚ್ಛೇದನ ಪಡೆದಿರುವ ಇತರ ಸ್ತ್ರೀ-ಪುರುಷ-ದಂಪತಿಗಳಿಗಿಂತ ಮಿಗಿಲೆಂದು ಹೆಮ್ಮೆ ಪಡುತ್ತಾರೆ. ಘಂಟೆಗಟ್ಟಲೆ ಮಳೆ ಬಿಸಿಲನ್ನು ಲೆಕ್ಕಿಸದೇ ಕ್ಯೂ ನಿಂತು ಮದುವೆಯ ಕರಾರುಪತ್ರಕ್ಕೆ ಸಹಿ ಹಾಕಲು ಬಂದ ಸ್ಯಾನ್‌ಫ್ರ್ಯಾನ್‌ಸಿಸ್ಕೋ ನಗರವಾಸಿ ಗೇ-ದಂಪತಿಗಳನ್ನು ಕಂಡರೆ ಅವರ ಬಗ್ಗೆ ಕೀಳು ದೃಷ್ಟಿಯಿಂದ ಮಾತನಾಡುವುದು ಕಷ್ಟವಾಗುತ್ತದೆ. ಹೀಗಾಗಿ ಇದು ರಾಜಕಾರಣಿಗಳಿಗೆ ಮತ್ತು ಸಮಾಜಶಾಸ್ತ್ರಜ್ಞರಿಗೆ ಹಾಗೂ ಸರ್ಕಾರೀ ಧೋರಣೆಗಳನ್ನು ಸಿದ್ಧಪಡಿಸುವ ತಜ್ಞರಿಗೆ ನುಂಗಲಾರದ ತುಪ್ಪವಾಗಿದೆ.

ಎಲ್ಲರಿಗೂ ಸಮಾನ ಹಕ್ಕನ್ನು ಪ್ರತಿಪಾದಿಸುವ ನಮ್ಮ ಸಂವಿಧಾನದಲ್ಲಿ ನಂಬಿಕೆ ಉಳ್ಳವರು ಸಲಿಂಗದಂಪತಿಗಳಿಗೆ ದಕ್ಕಬೇಕಾದ ಸ್ವಾತಂತ್ರ್ಯವನ್ನು ಕಿತ್ತುಹಾಕಲು ಇಷ್ಟ ಪಡದೆ ಅವರಿಗೂ ಕಾನೂನಿನ ಎಲ್ಲ ರಕ್ಷಣೆಯನ್ನೂ ಕೊಡಮಾಡ ಬಯಸುತ್ತಾರೆ. (ಅಂದರೆ, ಸಂಗಾತಿ ಸತ್ತರೆ ಉಳಿದ ಸಂಗಾತಿಗೆ ಆಸ್ತಿ ದಕ್ಕಬೇಕು, ಜೀವ ವಿಮೆಯ ಹಣ ದೊರಕಬೇಕು, ವಿಶ್ರಾಂತಿ ವೇತನ ಗಂಡ-ಹೆಂಡತಿಗಿರುವಂತೆ ಅವರಿಗೂ ಸಂದಾಯವಾಗಬೇಕು, ಆರೋಗ್ಯ-ವಿಮೆಯ ಅನುಕೂಲ ಸಹ ಮುಂದುವರೆಯಬೇಕು, ಇತ್ಯಾದಿ.) ಇನ್ನು ಕೆಲ ರಾಜಕಾರಣಿಗಳು ಸಲಿಂಗರತಿ ಎಂಬುದು ಪಾಪದ ಕೃತ್ಯ, ಮದುವೆ ಎಂದರೆ ಗಂಡು ಹೆಣ್ಣುಗಳ ಮಧ್ಯೆ ಮಾತ್ರ ಆಗಬೇಕಾದ ಪವಿತ್ರ ಸಂಬಂಧ ಎಂದು ಅಭಿಪ್ರಾಯಪಡುತ್ತಾರೆ. ಈ ಎರಡು ದೃಷ್ಟಿಕೋನಗಳ ತಾಕಲಾಟ ಈ ಬಾರಿಯ ಚುನಾವಣೆಯಲ್ಲಿ ಕಟ್ಟಿಟ್ಟ ಬುತ್ತಿ.

ಸಲಿಂಗದಾಂಪತ್ಯ ತುಂಬಾ ಕ್ಲಿಷ್ಟವಾದ ವಿಷಯ, ಇದರ ಬಗ್ಗೆ ಒಂದು ಸ್ಥೂಲದೃಷ್ಟಿಯಿಂದ ಬರೆಯಲು ಯತ್ನಿಸಿದ್ದೇನೆ, ಆದರೆ ತಪ್ಪು-ಸರಿಗಳ ತಾರ್ಕಾಣೆ ಮಾಡುವ ಗೋಜಿಗೆ ಹೋಗಿಲ್ಲ. ಇದರ ಬಗ್ಗೆ ಜನ ಹಲವು ಧೋರಣೆಗಳನ್ನು ತಾಳಬಹುದು:

  1. ಸಲಿಂಗರತಿ ವಿಶ್ವದ ಬಿಲಿಯಗಟ್ಟಲೆ ಜನಸಂಖ್ಯೆಯಲ್ಲಿ ಒಂದು ಸಣ್ಣ ಅಂಶವನ್ನೂ ತಟ್ಟುವುದಿಲ್ಲ, ಅದರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ.
  2. ಸಲಿಂಗರತಿಯ ಬಗ್ಗೆ ಯಾರೂ ಮಾತಾಡ ಕೂಡದು, ತಮ್ಮತಮ್ಮ ಮನೆಯ ಗೋಡೆಗಳೊಳಗೆ ಯಾರು ಏನಾದರೂ ಮಾಡಿಕೊಳ್ಳಲಿ, ಇತರರಿಗೆ ತೊಂದರೆಯಾಗದಿದ್ದರೆ ಸರಿ, ಇದು ವ್ಯಕ್ತಿ ಸ್ವಾತಂತ್ರ್ಯದ ವಿಚಾರ, ಅವರನ್ನು ತಡೆಯಲು ನಾವು ಯಾರು?.
  3. ಸಲಿಂಗರತಿ ಪಾಪಕೃತ್ಯ, ಸೃಷ್ಟಿ ನಿಯಮಕ್ಕೆ ವಿರುದ್ಧ, ಇದು ಅನೀತಿಮಾರ್ಗ.
  4. ಇದು ಕೇವಲ ಧರ್ಮ, ನೀತಿಯ ವಿಷಯವಲ್ಲ, ಈ ಅಲ್ಪಸಂಖ್ಯಾತರು ರಾಜಾರೋಷವಾಗಿ ಮಾಡುವ ಈ ಹೇಯ ಕೃತ್ಯವನ್ನು ತಡೆಗಟ್ಟದಿದ್ದರೆ ಸಮಾಜದ ಮೇಲೆ ಅತಿಕೆಟ್ಟ ಪರಿಣಾಮವಾಗುತ್ತದೆ, ಇದರಿಂದ ಸಮಾಜದ ಬಹು ಅಮೂಲ್ಯವಾದ ಕುಟುಂಬ ಎನ್ನುವ ತುಣುಕು ನಾಶವಾಗುತ್ತದೆ. ಮತ್ತು ಇನ್ನೂ ಹಲವು ಅಭಿಪ್ರಾಯಗಳಿಗೆ ಅವಕಾಶವಿದೆ.
ಈ ಸಮಸ್ಯೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಇದ್ದ ಕಾಲದಲ್ಲಿ, ಸುಮಾರು ಇಪ್ಪತ್ತೈದು ವರ್ಷಗಳಿಗೂ ಮುನ್ನ, ‘ಗೇ’ ಎಂಬ ಲಘು-ಕವನವೊಂದನ್ನು ನಾನು ಬರೆದಿದ್ದೆ. (ಈ ಕವನ ಮೊದಲು ಕಾವೇರಿ ಕನ್ನಡ ಸಂಘದ ವಾರ್ಷಿಕ ಸಂಚಿಕೆ (‘ಕವಲು’ 1982) ಯಲ್ಲು, ನಂತರ ನನ್ನ ಮೊದಲ ಕವನ ಸಂಕಲನ ‘ನಾನೂ ಅಮೆರಿಕನ್‌ ಆಗಿಬಿಟ್ಟೆ’ (ಅಮೆರಿಕನ್ನಡ ಪ್ರಕಾಶನ, 1984) ಯಲ್ಲೂ ಪ್ರಕಟವಾಗಿತ್ತು. ಆ ಕವನವನ್ನು ಓದುಗರೊಂದಿಗೆ ಹಂಚಿಕೊಳ್ಳುತ್ತಾ, ವಿರಮಿಸುವೆ, ಮುಂದಿನ ಕಂತಿನ ವರೆಗೆ.

***

ಗೇ

ರಾಮನಿಗೇ, ಕೃಷ್ಣನಿಗೇ
ಅಂಬೋದು ಒಂದು ಬಗೇ,
ರಾಮ-ಗೇ, ಕೃಷ್ಣ-ಗೇ
ಅಂಬೋದೇ ಇನ್ನೊಂದು ಬಗೇ.
ಹಾಗೇ, ಹೀಗೇ, ಹೇಗೇ?
ಅನ್ನೋ ಹಾಗೇ
ಅವನಿಗೇ-ಇವನಿಗೇ
ಇರೋ ಪ್ರೀತೀಗೇ ಅಲ್ವೇನೇ
‘ಗೇ’ ಅಂಬೋದು?

ಅಯ್ಯೋ ಹೋಗೇ,
ಅವನಿಗೇ ಇವನಿಗೇ
ಹೇಗೇ ಪ್ರೀತಿ ಸಾಧ್ಯ?
ಅವನಿಗೇ ಇವಳಿಗೇ ಅನ್ನು.
ರಾಮನಿಗೇ ಸೀತೇಗೇ ಇದ್ಹಾಗೇ.
ಕೃಷ್ಣನಿಗೇ ರಾಧೇಗೇ ಇದ್ಹಾಗೇ.

ಛೇ ಛೇ ಅಲ್ಲಾ ಹೋಗೇ,
ಅವನೂಗೇ ಇವನೂಗೇ
ಆದಾಗೇ ಅಲ್ವೇನೇ
ಆಗೋದು ಹೀಗೇ?

ಥೂ ಹೋಗೇ, ನಂಗೇ
ತಿಳಿಯೋ ಹಾಗೇ ಇಲ್ಲ,
ರಾಮನಿಗೇ ಪ್ರೀತಿ ನಿನ್ಮಾತು.
ಕೃಷ್ಣನಿಗೇ ಪ್ರೀತಿ ನಿನ್ರೀತಿ.

ಅದೇಕಣೇ ನಾನ್ಹೇಳಿದ್ದೂ
ರಾಮನಿಗೇ ಪ್ರೀತಿ
ಕೃಷ್ಣನ್ಕಂಡ್ರೇಂತ
ಕೃಷ್ಣನ್ಗೂ ಹಾಗೇಂತ

ಇದೆಂಥ ವಿಚಿತ್ರ ಹೋಗೇ,
ಸೃಷ್ಟೀಗೇ ಖೋತಾ
ಆಗೋಹಾಗೇ ಈ ಗೇಯರ ಗುಂಪು
ಗೇಯೋದಾದ್ರೆ,
ದೇವರಿಗೇ ಗೊತ್ತು,
ಮುಂದ್ಹೇಗೇ....ಂತ.

ಇದ್ಯಾಕೇ ಹೀಗೇ....ಂತಿ?
ಅಂದ್ಹಾಗೇ, ಹರೀಗೇ ಹರಂಗೇ
ಪ್ರೀತಿ ಆದಾಗೇ ಅಲ್ವೇನೇ
‘ಅಯ್ಯಪ್ಪಾ’ಂತ ಹುಟ್ಟಿದ್ದು?

ಅಯ್ಯೋ ಹಾಗೇನೇ?
ಒಳ್ಳೇ ಚೆನ್ನಾಗೇ ಹೇಳ್ದೆ.
ಹರೀನೂಗೇ, ಹರಾನೂಗೇ-ನಾ
ಹಾಗಾರೆ?
ಅದ್ಹೇಗೇ? ಥೂ ಹೋಗೇ......

ನೀ ಹೋಗೇ, ಹೋಗೇ
ಹೋ......ಗೇ
ಹೋಹೋಹೋ.......
ಗೇ......ಗೇ......ಗೇ......!

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X