ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಲಭಿಕ್ಷುಕಿ ಬಂದಳೋ ಭಿಕ್ಷಕೆ...

By Staff
|
Google Oneindia Kannada News
Dr.M.S.Nataraj ಡಾ. ಮೈ.ಶ್ರೀ. ನಟರಾಜ
[email protected]

ಮೊನ್ನೆ ದೂರದರ್ಶನದಲ್ಲಿ ಒಂದು ಸುದ್ದಿ ಪ್ರಸಾರವಾಯಿತು. ಒಬ್ಬಾಕೆಯನ್ನು ಸುದ್ದಿಗಾರನೊಬ್ಬ ಸಂದರ್ಶಿಸುತ್ತಿದ್ದ. ಆಕೆ ನೋಡಲು ಒಳ್ಳೇ ಗೌರವಸ್ಥಳಂತೆ ಕಾಣುತ್ತಿದ್ದಳು. ಅವಳ ಕಥೆ ಹೀಗಿತ್ತು :

ಆಕೆ ಉತ್ತಮ ಸಂಪಾದನೆಯ ಕೆಲಸದಲ್ಲಿದ್ದಳು. ಆದರೆ ಈಗ ಕೆಲಸ ಕಳೆದುಕೊಂಡಿದ್ದಾಳೆ. ಕೈತುಂಬಾ ಸಂಬಳ ಬರುತ್ತಿದ್ದಾಗ ಮನಸ್ಸಿಗೆ ಬಂದಂತೆ ಹಣ ಖರ್ಚು ಮಾಡುವುದು ಆಕೆಯ ಹವ್ಯಾಸವಾಗಿತ್ತಂತೆ. ಉದಾಹರಣೆಗೆ, ಅವಳ ಕಣ್ಣಿಗೆ ಬಿದ್ದ ಒಂದು ಪರ್ಸಿನ ಬೆಲೆ ಐನೂರು ಡಾಲರಾದರೂ, ಅವಳಿಗದು ಇಷ್ಟವಾದ ಕಾರಣ, ಒಂದು ಕ್ಷಣವೂ ಹಿಂಚು-ಮುಂಚು ನೋಡದೇ ಅದನ್ನು ಕೊಳ್ಳುವಳು. ಅವಳು ತೊಡುವ ಬಟ್ಟೆ ಇತ್ತೀಚಿನ ಫ್ಯಾಶನ್ನಿನ ಪ್ರತೀಕವಾಗಿರಬೇಕು, ಹಾಗಾಗಿ, ಅಂಥಾ ಬಟ್ಟೆ-ಬರೆಗಳಿಗಾಗಿ ಲೆಕ್ಕವಿಲ್ಲದಷ್ಟು ಹಣ ಖರ್ಚು ಮಾಡಲು ಅವಳು ಹೇಸುವವಳಲ್ಲ. ಅವಳು ಪೂಸುವ ಸುಗಂಧ ದ್ರವ್ಯಗಳು ಅತ್ಯಂತ ಬೆಲೆಬಾಳುವ ಉತ್ತಮ ಬ್ರ್ಯಾಂಡ್‌ನವು. ಅಂತೂ ಅವಳು ನಮ್ಮ ಚಾರ್ವಾಕನ ಖಾಸಾ ಶಿಷ್ಯೆ. ಅರ್ಥಾತ್‌, ‘ಸಾಲಮಾಡಿಯಾದರೂ ಸರಿ, ತುಪ್ಪವನ್ನು ತಿಂದು ಮಜಾಮಾಡುವ’ ಜಾಯಮಾನ ಅವಳದ್ದು.

‘ಆವಳ ಹೆಂಡ, ಅವಳ ಬುಂಡೆ, ನಿನ್ನದೇನಯ್ಯಾ ಅಭ್ಯಂತರ?’ ಎನ್ನುವಿರೋ? ಎನ್ನಿ. ಅವಳೀಗ ಕೆಲಸ ಕಳೆದುಕೊಂಡು ಒದ್ದಾಡುತ್ತಿದ್ದಾಳೆ. ಅವಳ ಕ್ರೆಡಿಟ್‌ ಕಾರ್ಡ್‌ ಕಂಪನಿಯರು ಅವಳ ಹಿಂದೆ ಬಿದ್ದಿದ್ದಾರೆ. ಒಂದೊಂದು ಕಾರ್ಡಿನಲ್ಲು ಸುಮಾರು 20,000 ಡಾಲರ್‌ನಷ್ಟು ಬಾಕಿ ಉಳಿಸಿಕೊಂಡಿದ್ದಾಳೆ. ಬಡ್ಡಿ ಕೊಡುವುದಕ್ಕೂ ಹಣವಿಲ್ಲ , ಬಾಡಿಗೆಯಂತೂ ಕೇಳಬೇಡಿ. ಅವಳ ಲಕ್ಷುರಿ ಅಪಾರ್ಟ್‌ಮೆನ್ಟ್‌ ಆಗಲೀ ಅವಳ ಲಕ್ಷುರಿ ಕಾರನ್ನಾಗಲೀ ಬಿಟ್ಟುಕೊಡಲು ಅವಳು ತಯಾರಿಲ್ಲವಂತೆ. ‘ಹಾಗಾದರೆ ಹೇಗಮ್ಮಾ ನಿಭಾಯಿಸುತ್ತೀ’ ಎಂದು ಕೇಳಿದ, ನಮ್ಮ ಸಂದರ್ಶಕ. ಅದಕ್ಕವಳು ನಿರ್ದಾಕ್ಷಿಣ್ಯವಾಗಿ ಜವಾಬುಕೊಟ್ಟಳು. ‘ನಾನೊಂದು ಒಳ್ಳೆಯ ಉಪಾಯವನ್ನು ಕಂಡುಹಿಡಿದಿದ್ದೇನೆ’ ಎನ್ನುತ್ತಾ ನಗೆ ಬೀರಿದಳಾಕೆ.

ಆಕೆ ಹೇಳಿದಳು :
‘ನಾನೀಗ ಜಾಲ ಭಿಕ್ಷುಕಿ,’ I am a cyber-beggar ಅಂದರೆ, ನನ್ನ ಕಷ್ಟವನ್ನು ತೋಡಿಕೊಂಡು ಜಾಲ-ಬಂಧುಗಳಲ್ಲಿ ವಿನಂತಿ ಮಾಡಿಕೊಂಡೆ, ಅನೇಕರು ನನ್ನ ಸಹಾಯಕ್ಕೆ ಬಂದಿದ್ದಾರೆ, ನನ್ನ ಇಡೀ ಕ್ರೆಡಿಟ್‌ ಕಾರ್ಡಿನ ಸಾಲವೆಲ್ಲಾ ತೀರಿ ಮಿಗುವಷ್ಟು ಹಣ ಸಂದಾಯವಾಗಿದೆ,’ ಎನ್ನುತ್ತಾ ಬೇರೆ-ಬೇರೆ ಮೊತ್ತದ (ಬಿಡಿಗಾಸಿನಿಂದ ಹಿಡಿದು ಐನೂರು ಡಾಲರ್‌ಗಳವರೆಗಿನ ಮೊಬಲಗಿನ ದಾನಪತ್ರಗಳನ್ನು ಹೆಮ್ಮೆಯಿಂದ ಬೀಗುತ್ತಾ ಪ್ರದರ್ಶಿಸಿದಳು. ಹೀಗೂ ಉಂಟೆ ಎಂದು ಆಶ್ಚರ್ಯವಾಯಿತು.

ಭಾರತದಲ್ಲಿದ್ದಾಗ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ನೋಡುತ್ತಿದ್ದ, ಕೈ-ಕಾಲಿಲ್ಲದ, ಕಣ್ಣಿಲ್ಲದ, ಕುಷ್ಟರೋಗದಿಂದ ನರಳುತ್ತಿರುವ, ಮೂಳೆಬಿಟ್ಟುಕೊಂಡ ಬಡಕಲು ದೇಹದ ಆ ನಮ್ಮ ಭಿಕ್ಷುಕರೆಲ್ಲಿ, ಗಟ್ಟಿಮುಟ್ಟಾದ, ಮೈತುಂಬಿಕೊಂಡ, ಬೆಲೆಬಾಳುವ ವಸ್ತ್ರಗಳನ್ನು ಧರಿಸಿದ ಈ ಜಾಲ-ಭಿಕ್ಷುಕಿ ಎಲ್ಲಿ ?

ಆಂಗವಿಕಲನಲ್ಲದ ಭಿಕ್ಷುಕ ಮನೆ ಮುಂದೆ ಬಂದು ಕವಳ ಬೇಡಿದರೆ, ‘ಕಡಿದರೆ ನಾಕಾಳಾಗುತ್ತೀ, ನಾಚಿಕೆಯಾಗುವುದಿಲ್ಲವೇ ಭಿಕ್ಷೆ ಬೇಡುವುದಕ್ಕೆ,’ ಮುಂತಾಗಿ ಬೈದು ಕಳಿಸುತ್ತಿದ ಹಿರಿಯರ ನೆನಪಾಯಿತು. ಆವರೇನಾದರೋ ಈ ಸುಂದರ ಜಾಲಭಿಕ್ಷುಕಿಯನ್ನು ಕಂಡಿದ್ದರೆ ಏನನ್ನುತಿದ್ದರೋ? ದೇವರಕಾರ್ಯಕ್ಕೋ, ಸಮಾಜಸೇವೆಗೋ, ಅನಾಥಾಶ್ರಮ, ಅಬಲಾಶ್ರಮ ಮುಂತಾದ ಸಂಸ್ಥೆಗಳಿಗಾಗಿ ಚಂದಾ ಕೇಳುವಾಗಲೇ ಬಾಯಿಕಟ್ಟಿಬರುತ್ತದೆ, ಹೀಗಿರುವಾಗ, ಈಕೆ ಎಷ್ಟು ಸುಲಭವಾಗಿ ‘ತಾನು ಸಾಲದ ಹೊರೆಯಲ್ಲಿ ಬಹು ಬಳಲಿದ್ದೇನೆ, ಸಹಾಯಮಾಡಿ’ ಎಂದು ನಾಚಿಕೆಬಿಟ್ಟು ಕೇಳಿದಳಲ್ಲ ಎಂದು ಅತೀವ ಅಸಮಾಧಾನ ಮತ್ತು ಕ ೋಪ ಒಮ್ಮೆಲೇ ಉಂಟಾಯಿತು. ಇವಳ ಮನೆ ಪ್ರವಾಹದಲ್ಲಿ ಕೊಚ್ಚಿಹೋಗಿರಲಿಲ್ಲ , ಬೆಂಕಿಬಿದ್ದು ಅಪಾರ ನಷ್ಟ ಹೊಂದಲಿಲ್ಲ, ಮನೆಯವರು ಅಪಘಾತ-ಅಪಮೃತ್ಯುಗೊಳಗಾಗಿ ಇವಳನ್ನು ಅನಾಥಳನ್ನಾಗಿಸಲಿಲ್ಲ . ಗೊತ್ತಿದ್ದೂ, ಮನಸ್ಸಿಗೆ ಬಂದಂತೆ, ಬೇಕಾಗಿರಲಿ ಬೇಡವಾಗಿರಲಿ ದುಬಾರೀ ಪದಾರ್ಥಗಳ ಮೇಲೆ ದುಂದು ವೆಚ್ಚಮಾಡಿ, ಈಗ ಸಾಲ ತೀರಿಸಲು ಬೇರೆಯವರ ಸಹಾಯ ಬೇಡುತ್ತಿದ್ದಾಳೆ, ಎಂದು ಮೈಯೆಲ್ಲಾ ಉರಿಯಿತು.

ಸಂದರ್ಶಕ ಮಹಾಶಯ ಅವಳನ್ನೇ ಕೇಳಿದ, ‘ನಿನಗೆ ಹೀನಾಯ ಎನಿಸಲಿಲ್ಲವೇ’ ಎಂದು. ಅವಳಾದರೋ ನಗುತ್ತಲೇ ಉತ್ತರ ಕೊಟ್ಟಳು. ಹೀನಾಯ ಏಕೆ ? ನಾನೇನೂ ಬಲಾತ್ಕಾರ ಮಾಡಿಲ್ಲ , ಕೊಡುವವರು ಕೊಟ್ಟರು, ಇಲ್ಲದವರು ಇಲ್ಲ. ಈಗ, ನನ್ನ ಮನಸ್ಸು ಬಹಳ ಹಗುರವಾಗಿದೆ, ಸಾಲವೆಲ್ಲಾ ತೀರಿದ ಸಂತೋಷದಲ್ಲಿ ನಾನು ಆನಂದತುಂದಿಲಳಾಗಿರುವೆ ಎಂದೆಲ್ಲ ಬಡಬಡಿಸಿದಳಾ ಭಂಡ ಹೆಣ್ಣು .

ಹಣ ಕೊಟ್ಟ ಕೆಲವರನ್ನು ಸಂದರ್ಶಕ ಮಾತಾಡಿಸಿದ. ‘ನೀವೇಕೆ ಕೊಟ್ಟಿರಿ, ಅವಳು ಹೀಗೆ ಬೇಡುವುದು ತಪ್ಪಲ್ಲವೇ?’ ಮುಂತಾಗಿ ಕೇಳಿದ. ಕೆಲವರು, ‘ಇಂಥಾ ಜಾಲ ಭಿಕ್ಷುಕರ ಬಗ್ಗೆ ತುಂಬಾ ಅನುಕಂಪ ವ್ಯಕ್ತ ಪಡಿಸಿದರು. ಒಬ್ಬ ಹೇಳಿದ, ‘ನಾನೂ ಒಮ್ಮೆ ಅಂಥಾ ಪರಿಸ್ಥಿತಿಯಲ್ಲಿದ್ದೆ, ತಮಗೇ ಅರಿವಿಲ್ಲದಂತೆ ಎಂತೆಂಥಾ ವಿದ್ಯಾವಂತರು ಬುದ್ಧಿವಂತರೂ ಒಮ್ಮೊಮ್ಮೆ ಇಂಥಾ ಪೇಚಿನಲ್ಲಿ ಸಿಕ್ಕುತ್ತಾರೆ, ಅಂಥವರನ್ನು ದಡ ಸೇರಿಸಿದರೆ ಮುಂದೆ ಬುದ್ಧಿ ಕಲಿತು ತಾವು ಪಾರಾಗುವುದಲ್ಲದೇ ಇತರರನ್ನೂ ಪಾರು ಮಾಡುವ ಸಂಭವವಿದೆ, ಉದಾಹರಣೆಗೆ ನನ್ನನ್ನೇ ತೆಗೆದುಕೊಳ್ಳಿ’ ಎಂದ. ಮತ್ತೆ ಕೆಲವರು ‘ಇದು ಜಾಲತಾಣದ ದುರುಪಯೋಗ, ಹಾಗೂ ಸಮಾಜದ ಶೋಷಣೆ, ನತದೃಷ್ಟರನ್ನು, ತಮ್ಮ ತಪ್ಪಿಲ್ಲದೇ ಕಷ್ಟದಲ್ಲಿ ಸಿಕ್ಕವರನ್ನು, ಬಡಬಗ್ಗರನ್ನು ತೊಂದರೆಯಿಂದ ಪಾರುಮಾಡುವುದು ಪ್ರತಿಯಾಂದು ಮುಂದುವರೆದ ಸಮಾಜದ ಕರ್ತವ್ಯ, ಆದರೆ ಹೀಗೆ ಧಾರಾಳಿಗಳನ್ನು ಶೋಷಿಸುವರ ಬಗ್ಗೆ ನನಗೆ ಸಹನೆಯಾಗಲೀ ಅನುಕಂಪವಾಗಲೀ ಇಲ್ಲ’ ಎಂದರು. ಜಾಲಬಂಧುಗಳೇ ನೀವೇನೆನ್ನುತ್ತೀರಿ?

ಈ ಸುದ್ದಿಯನ್ನು ನೋಡುತ್ತಿದ್ದಾಗ, ನಮ್ಮ ಹತ್ತನೇ ಶತಮಾನದ ವಚನಕಾರರೋ ಅಥವಾ ಹದಿನೈದನೇ ಶತಮಾನದ ದಾಸವರೇಣ್ಯರೋ ಈ ಸುದ್ದಿಯನ್ನು ಕೇಳಿದ್ದರೆ ತಮ್ಮ ಪ್ರತಿಕ್ರಿಯೆಯನ್ನು ಹೇಗೆ ವ್ಯಕ್ತಪಡಿಸುತ್ತಿದ್ದರು ಎಂಬ ಪ್ರಶ್ನೆ ಮೂಡಿಬಂತು. ನನಗೆ ಹೊಳೆದ ಉತ್ತರ ಈ ಕೆಳಗೆ ನಮೂದಿಸುತ್ತಾ ವಿರಮಿಸುವೆ. ಇದೀಗ ಸಂಸಾರ ಸಮೇತ ಭಾರತಕ್ಕೆ ಹೊರಟಿದ್ದೇನೆ, ಹಿಂದಿರುಗಿದ ಮೇಲೆ ಮುಂದಿನ ಕಂತು.

(1) ‘ಶಿವ-ನಟೇಶ’ನೆಂಬ ಅಂಕಿತದಲ್ಲಿ ಬರೆಯುವ ವಚನಕಾರನ ಪ್ರತಿಕ್ರಿಯೆ

‘ಅಮ್ಮಾತಾಯಿ, ಕವಳಾ ಅಮ್ಮಾ’
ಎಂದು ಆರ್ತದನಿಯಲಿ ಬೇಡುವ
ಬಡ-ಭಾರತದ ಆ ಭಿಕ್ಷುಕನಿಗೆ
ಸಿಗುವುದು ಎಂಜಲು ಅನ್ನ
ಸಾಲವ ಮಾಡಿ ತುಪ್ಪವನುಂಡು
ಜಲತಾರಿಯನುಟ್ಟು ಝಗಝಗಿಸಿ
ಜಾಲದ ಹಿಂದೆ ಮುಖವ ಬಚ್ಚಿಟ್ಟು
ನಿಶ್ಯಬ್ದದಲಿ ಬೇಡುವ
ಜಾಣರ ಗುಂಪಿನ ಜಾಲಭಿಕ್ಷುಕರಿಗೆ
ಸಿಗುವುದು ಡಾಲರ್‌ ಚಿನ್ನ !

ಈ ವಿಚಿತ್ರಕೆ ನೀವೇನನ್ನುವಿರಣ್ಣ ?
ಗುಹೆಯಲಡಗಿಹ ನಮ್ಮ
ಶಿವ-ನಟೇಶನ ಶೂನ್ಯದಲಿ ಕಂಡು
ಕೂಗಿ ಕೂಗಿ ಕೇಳಿರಣ್ಣ !

(2) ‘ನಟವರ-ವಿಟ್ಠಲ’ನೆಂಬ ಅಂಕಿತದಲ್ಲಿ ಬರೆಯುವ ದಾಸವರೇಣ್ಯರ ಪ್ರತಿಕ್ರಿಯೆ

ಜಾಲಭಿಕ್ಷೆಯ ಬೇಡಿರೋ, ಜನರೆಲ್ಲ
ಜಾಲಿಯಾಗೀ ಬಾಳಿರೋ....ಜಾಲಭಿಕ್ಷೆಯ ಬೇಡಿರೋ //ಪಲ್ಲವಿ//

ಕಾಲಕಾಲಕೆ ಕಂತು ಕಟ್ಟಬೇಕಾದರೆ, ಗೋ-
ಪಾಲರಾಯನ* ಜಾಣ್ಮೆ ಮನದೊಳು ಸ್ಮರಿಸುತ....ಜಾಲಭಿಕ್ಷೆಯ ಬೇಡಿರೋ //ಅನುಪಲ್ಲವಿ//

ಸಾಲ-ಸೋಲವೆಂಬ ಶೂಲಕೆ ಸಿಕ್ಕಾಗ
ಕೀಲು ಕಿಬ್ಬದಿಯಲ್ಲಿ ಮುರಿದು ಬಿದ್ದಾಗ
ಭೋಳೇಜನರ ಕಣ್‌ಗೆ ಮಣ್ಣನೆರಚುತ ಬೇಗ
ಚೀಲವ ತುಂಬಿಸಿರೋ, ಸಜ್ಜನರೆಲ್ಲ.... ಜಾಲಭಿಕ್ಷೆಯ ಬೇಡಿರೋ //ಚರಣ-1//

ಕುರುಡರು ಕುಂಟರು ಮೂಗರು ಹೆಳವರು
ಬರುವರು ಮನೆಮುಂದೇ ಅರಚುತ ನಿಂದು
ಕರವ ನೀಡಿ ಕಾಡುವ ಕಪಟ ವೇಷಿಗಳನು
ಕೆರದಿಂದ ಹೊಡೆದು ಮೈಮುಟ್ಟದೇ ಅಟ್ಟಿರೊ......ಜಾಲಭಿಕ್ಷೆಯ ಬೇಡಿರೋ//ಚರಣ-2//

ಗಣಕದ ಹಿಂದೆ ಮುಖವ ಮುಚ್ಚಿಕೊಂಡು
ಗುಣವಂತ ಜಾಣರು ಪಾಡಿ ಪೊಗಳುವರು
ಹಣವ ಕಳಿಸಿರಿ ಬೇಗ ಋಣಮುಕ್ತರಾಗಲಿ
ಉಣಲು ಕೊಡುವನು ನಮ್ಮ ನಟವರ ವಿಟ್ಠಲ..... ಜಾಲಭಿಕ್ಷೆಯ ಬೇಡಿರೋ //ಚರಣ-3//

(*ಭಾರೀ ಬಡ್ಡಿಯನ್ನು ಕೊಡುವೆನೆಂದು ಆಸೆ ತೋರಿಸಿ ಅಸಲನ್ನೇ ನುಂಗಿದ ಗೋಪಾಲರಾಯನ ನೆನಪು ನಿಮಗಿರಬಹುದು!)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X