• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊನೆ ಮೊದಲಿಲ್ಲದ ಯುದ್ಧ

By Staff
|
Dr.M.S.Nataraj
  • ಮೈ.ಶ್ರೀ. ನಟರಾಜ

Mysreena@aol.com

ರಾಮಾಯಣದಲ್ಲಿ ರಾಮನ ಪತ್ನಿ ಸೀತೆಯನ್ನು ರಾವಣ ಅಪಹರಿಸುತ್ತಾನೆ. ವಾಲಿ ಸ್ವಂತ ತಮ್ಮ ಸುಗ್ರೀವನ ಪತ್ನಿಯನ್ನು ಅಪಹರಿಸುತ್ತಾನೆ. ಇಬ್ಬರು ಸಮಾನ ದುಃಖಿಗಳು, ರಾಮ ಮತ್ತು ಸುಗ್ರೀವ, ಮೈತ್ರಿ ಬೆಳೆಸುತ್ತಾರೆ. ರಾಮನ ಸಹಾಯದಿಂದ ವಾಲಿಯ ವಧೆಯಾಗುತ್ತದೆ. ಸುಗ್ರೀವನ ಸಹಾಯದಿಂದ ರಾಮ ರಾವಣನ ಮೇಲೆ ಯುದ್ಧ ಹೂಡುತ್ತಾನೆ. ವಾಲಿ ಮಾಡಿದ್ದು ತಪ್ಪು, ರಾವಣ ಮಾಡಿದ್ದೂ ತಪ್ಪು. ಇವರಿಬ್ಬರ ವಧೆಯಾದದ್ದು ನ್ಯಾಯ. ಆದರೆ, ರಾಮಾಯಣ ಯುದ್ಧದಲ್ಲಿ ಸಾಯುವುದು ರಾವಣ ಮಾತ್ರವಲ್ಲ . ರಾಮನ ಹಿಂದೆ ಹೊರಟ ಕಪಿಸೇನೆಯ ಸಹಸ್ರಾರು ಸೈನಿಕರು ಹಾಗು ರಾವಣನ ರಕ್ಷಣೆಯ ಭಾರ ಹೊತ್ತ ಲೆಕ್ಕವಿಲ್ಲದಷ್ಟು ರಕ್ಕಸರು ಹತರಾಗುತ್ತಾರೆ. ರಾಮ-ರಾವಣರು ಇಬ್ಬರೇ ಮಲ್ಲಯುದ್ಧ ಮಾಡಿ ಸಮಸ್ಯೆಯನ್ನು ಇತ್ಯರ್ಥ ಮಾಡಬಹುದಿತ್ತಲ್ಲ. ಈ ವಿಚಾರ ಮರ್ಯಾದಾ ಪುರುಷೋತ್ತಮನಾದ ಶ್ರೀರಾಮಚಂದ್ರನಿಗೆ ಹೊಳೆಯಲಿಲ್ಲವೇಕೆ ?

ಮಹಾಭಾರತದಲ್ಲಿ ಪಾಂಡವ-ಕೌರವರ ಜಗಳ ಒಂದು ವಂಶದ ಜ್ಞಾತಿಗಳ ಜಗಳ. ದುರ್ಯೋಧನ ತಪ್ಪುಮಾರ್ಗ ಹಿಡಿದ, ಯುಧಿಷ್ಟಿರ ಧರ್ಮಮಾರ್ಗದವನು. ಈ ಎರಡು ಮನೆಗಳ ಜಗಳದ ಇತ್ಯರ್ಥವಾಗಲು 18 ಅಕ್ಷೋಹಿಣಿ ಸೇನೆ ನಾಶವಾಗಬೇಕಿತ್ತೆ ? ಭೀಷ್ಮ, ದ್ರೋಣ, ಕೃಪ, ಅಶ್ವತ್ಥಾಮ ಇವರೆಲ್ಲ ಸಾಯಬೇಕಿತ್ತೆ ? ಭೀಮನೂ ದುರ್ಯೋಧನನೂ ಗದಾಯುದ್ಧ ಮಾಡಿ, ಅಥವಾ ಅರ್ಜುನ ಕರ್ಣರು ಧನುರ್ಯುದ್ಧ ಮಾಡಿ ಗೆದ್ದವರು ರಾಜ್ಯವನ್ನು ಇಟ್ಟುಕೊಂಡು 18 ಅಕ್ಷೋಹಿಣಿ ಸೇನೆಯನ್ನು ಕಾಪಾಡಿ, ಅಷ್ಟೇ ಸಂಖ್ಯೆಯಲ್ಲಿ ಹೆಣ್ಣುಗಳು ವಿಧವೆಯರಾಗುವುದನ್ನೂ, ಅದಕ್ಕೆ ಎರಡೋ ಮೂರೋ ಅಥವಾ ನಾಲ್ಕರಷ್ಟು ನಿರ್ದೋಷಿ ಮಕ್ಕಳು ಅನಾಥರಾಗುವುದನ್ನು ತಪ್ಪಿಸಬಹುದಿತ್ತಲ್ಲ ? ಇದು ಕೃಷ್ಣ ಪರಮಾತ್ಮನಿಗೆ ಹೊಳೆಯಲಿಲ್ಲವೇಕೆ ?

No one will develop by Warಅಶೋಕನಿಗೆ ಲಕ್ಷಗಟ್ಟಲೆ ಹೆಣಗಳನ್ನು ನೋಡುವತನಕ ಯುದ್ಧ ನಿರರ್ಥಕ ಎಂಬ ವಿಷಯ ಹೊಳೆಯುವುದೇ ಇಲ್ಲ. ಆಮೇಲೆ ಅವನು ಕಳುಹಿಸಿದ ಬೌದ್ಧ ಮತಾವಲಂಬಿಗಳಿಂದ ಅಹಿಂಸೆಯ ಪಾಠವನ್ನು ಕಲಿತ ಶ್ರೀಲಂಕಾ, ಬರ್ಮಾ, ಕಾಂಬೋಡಿಯ, ಕೊರಿಯ, ವಿಯತ್ನಾಮ್‌ ಇತ್ಯಾದಿ ದೇಶಗಳ ಜನರು ಇಂದು ಮುಗಿಯದ ಯುದ್ಧದಲ್ಲಿ ಮುಳುಗಿದ್ದಾರೆ.

1947ರವರೆಗೆ ಒಂದೇ ದೇಶದ ಪ್ರಜೆಗಳಾಗಿದ್ದ ಭಾರತ-ಪಾಕೀಸ್ತಾನದ ಜನರು ಈಗಾಗಲೇ ಮೂರು ಯುದ್ಧಗಳನ್ನು ಮಾಡಿದ್ದರೂ ನಾಲ್ಕನೆಯದನ್ನು ಎದುರುನೋಡುತ್ತಿದ್ದಾರೆ. ಹಿಂದೀ-ಚೀನೀ ಭಾಯಿ-ಭಾಯಿಗಳೆಂದು ಹೇಳುತ್ತ ನಿಷ್ಕಾರಣವಾಗಿ ಭಾರತೀಯರ ಮೇಲೆ ಆಕ್ರಮಣ ನಡೆಸಿ ಬೆನ್ನಿಗೆ ಚೂರಿಹಾಕಿ ನಾಲ್ಕು ದಶಕವೇ ಕಳೆದರೂ ಇನ್ನೂ ಭಾರತ-ಚೀನಾ ಯುದ್ಧದ ಭಯ ತಪ್ಪಿಲ್ಲ. ಭಾರತ-ಪಾಕೀಸ್ತಾನ ಮತ್ತು ಇಸ್ರೆಯಿಲ್‌-ಪ್ಯಾಲೆಸ್ಟೈನ್‌ ನಡುವಿನ ಯುದ್ಧಗಳು ಭಿನ್ನಧರ್ಮೀಯರ ನಡುವೆ ನಡೆಯುವ ಯುದ್ಧಗಳಾದರೆ, ಐರ್ಲೆಂಡಿನಲ್ಲಿ ನಡೆಯುತ್ತಿರುವ ಮುಗಿಯದ ಕಾಳಗಗಳು ಒಂದೇ ಧರ್ಮದ ವಿವಿಧ ಪಂಗಡಗಳ ನಡುವಿನದು.

ಶಕ್ತ ರಾಷ್ಟ್ರವಾದರೂ ಅಮೇರಿಕಾದಿಂದ ಗೆಲ್ಲಲಾಗದೇ ಹೋದ, ಲಕ್ಷಗಟ್ಟಲೆ ಜನರನ್ನು ಆಹುತಿ ತೆಗೆದುಕೊಂಡ, ವಿಯತ್ನಾಂ ಯುದ್ಧ ಕಮ್ಯೂನಿಸಂ ವಿರುದ್ಧ ನಡೆದ ವಿಚಿತ್ರ ಸಮರ. ಮಾನವ ಚರಿತ್ರೆಯ ಇತ್ತೀಚಿನ ಯುದ್ಧ ಅಮೇರಿಕಾ ಮತ್ತು ಇರಾಕಿನ ನಡುವೆ ನಡೆದದ್ದು ಮತ್ತು ಇನ್ನೂ ಮುಗಿಯದೇ ಉಳಿದದ್ದು. ಮಾರಕಾಸ್ತ್ರಗಳನ್ನು ತಯಾರಿಸಿ ಮುಚ್ಚಿಟ್ಟಿದ್ದಾರೆಂಬ ನೆಪಹೂಡಿ ಆಕ್ರಮಣ ನಡೆಸಿ ಇನ್ನೂ ಅಂಥ ಯಾವ ಶಸ್ತ್ರಾಸ್ತ್ರಗಳೂ ಕೈಗೆ ಸಿಕ್ಕಿಲ್ಲವಾದರೂ ಯುದ್ಧ ಮಾಡಿದ್ದೇ ಸರಿ ಎಂಬ ತೀರ್ಮಾನಕ್ಕೆ ಅನೇಕರು ಬಂದಿದ್ದಾರೆ. ಅಂತೂ ಹಿಟ್ಳರನ ಕ್ರೌರ್ಯ, ನೆಪೋಲಿಯನ್ನನ ಮಹತ್ವಾಕಾಂಕ್ಷೆ, ಬುಷ್‌ ಮತ್ತು ಬ್ಲೇರ್‌ ಇವರುಗಳ ರಾಜನೀತಿ ಅಥವಾ ಮತ್ಯಾವುದೇ ಕಾರಣದಿಂದ ಯುದ್ಧ ನಡೆದರೂ ಫಲಿತಾಂಶ ಒಂದೇ. ಅನಾವಶ್ಯಕ ಸಾವು, ನೋವು, ಕಷ್ಟ, ನಷ್ಟ, ಪುನರಾವರ್ತಿಗೊಳ್ಳುವ ದ್ವೇಷ.

ಯುದ್ಧದ ಬಗ್ಗೆ ಅನೇಕ ಬರಹಗಳು, ಕವಿತೆಗಳು ವಿಶ್ವದ ನಾನಾ ಭಾಷೆಗಳ ಸಾಹಿತ್ಯದಲ್ಲಿ ಅಡಕವಾಗಿವೆ. ಇತ್ತೀಚೆಗೆ ನನ್ನ ಕಣ್ಣಿಗೆ ಬಿದ್ದ ಒಂದು ಪೋಲಿಷ್‌ ಕವಿತೆ ನನ್ನ ಮೇಲೆ ತುಂಬಾ ಪರಿಣಾಮವನ್ನುಂಟುಮಾಡಿತು. ವಿಸ್ಲಾವ ಜಿಂಬೋರ್ಸ್ಕಾ ಎಂಬ ಪೋಲಿಷ್‌ ಕವಯಿತ್ರಿ ಆಧುನಿಕ ಪೋಲೆಂಡಿನ ಅತ್ಯಂತ ಪ್ರಭಾವಶಾಲೀ ಬರಹಗಾರ್ತಿ. ಎಡ್ವರ್ಡ್‌ ಹರ್ಷ್‌ ಹೇಳುವ ಪ್ರಕಾರ ಆಕೆ ಉತ್ತರವಿಲ್ಲದ ಅನೇಕ ಪ್ರಶ್ನೆಗಳನ್ನು ಕುರಿತು ಜಿಜ್ಞಾಸೆ ಮಾಡುತ್ತಾಳೆ. ಮಾನವ ಇತಿಹಾಸದಲ್ಲಿ ಮತ್ತೆ ಮತ್ತೆ ಪುನರಾವರ್ತಗೊಳ್ಳುವ ಅಮಾನುಷ ಕ್ರೌರ್ಯ ಅನ್ಯಾಯ ದೌರ್ಜನ್ಯ ಮತ್ತು ದ್ವೇಷಗಳನ್ನು ಗಮನಿಸಿಯೂ ವಿಶ್ವ ಹೇಗೆ ಏನೂ ನಡೆದಿಲ್ಲವೆಂಬಂತೆ ನಟಿಸುತ್ತಾ ಮುಂದೆ ನಡೆಯುತ್ತದೆ ಎಂಬ ಕಠೋರ ಸತ್ಯವನ್ನು ಓದುಗರ ಮುಂದಿಡುತ್ತಾಳೆ.

ಇರಾಕ್‌, ಇಸ್ರೆಯಿಲ್‌, ಮತ್ತು ಅಫ್ಘನಿಸ್ತಾನ್‌ ಮುಂತಾದೆಡೆಯಲ್ಲಿ ನಡೆಯುತ್ತಿರುವ ಸಾವು-ನೋವುಗಳ ಹಿನ್ನೆಲೆಯಲ್ಲಿ ವಿಸ್ಲಾವ ಜಿಂಬೋರ್ಸ್ಕಾ ಬರೆದ ‘ದಿ ಎಂಡ್‌ ಆಂಡ್‌ ದಿ ಬಿಗಿನಿಂಗ್‌’ ಎಂಬ ಪೋಲಿಷ್‌ ಕವಿತೆ ತುಂಬಾ ಅರ್ಥಪೂರ್ಣವಾಗಿದೆ. ಆ ಕವನದ ಆಂಗ್ಲ ಅನುವಾದ (ಸ್ಟಾನಿಸ್ಲಾ ಬರಾನ್ಚಕ್‌ ಮತ್ತು ಕ್ಲೇರ್‌ ಕ್ಯಾವನಾಗ್‌) ವನ್ನು ಕನ್ನಡಕ್ಕೆ ಭಾವಾನುವಾದಮಾಡಿ ಓದುಗರ ಮುಂದಿಟ್ಟಿದ್ದೇನೆ. ಓದಿ ಮೆಚ್ಚುಗೆಯಾದರೆ ತಿಳಿಸುವಿರೆಂದು ನಂಬಿ ವಿರಮಿಸುವೆ, ಮುಂದಿನ ಅಂಕಣದವರೆಗೆ.

ಕೊನೆ ಮತ್ತು ಮೊದಲು

ಪ್ರತಿ ಯುದ್ಧ ಮುಗಿದಾಗಲೂ

ಯಾರಾದರೂ ಬಂದು

ಗುಡಿಸಿ ಸಾರಿಸಬೇಕು

ಅದೆಲ್ಲಾ ತನಗೆ ತಾನೇ

ಶುಚಿಯಾಗುವುದಿಲ್ಲವಲ್ಲ

ಕುಸಿದ ಮನೆಗಳ

ಇಟ್ಟಿಗೆ ಕಲ್ಲುಗಳನ್ನೆಲ್ಲ

ಪಕ್ಕಕೆ ತಳ್ಳಬೇಕು

ಹೆಣ ಸಾಗಿಸುವ ಗಾಡಿಗಳಿಗೆ

ಜಾಗಬೇಕಲ್ಲ ?

ಉರಿಯದೇ ಉಳಿದ

ಕರಕಲುಗಳ ನಡುವೆ

ಉರಿದ ಬೂದಿಯ ಬಗೆದು

ಸಿಡಿದ ಗಾಜಿನ ನಡುವೆ

ರಕ್ತದಲಿ ತೊಯ್ದ

ರಾಶಿಗಳ ತಡಕಬೇಕು

ಬಿದ್ದ ಕಂಬಗಳ ನಿಲಿಸಿ

ಬೀಳುವ ಗೋಡೆಗಳಿಗೆ

ಒದೆಕೊಟ್ಟು

ಮುರಿಯದೇ ಉಳಿದ

ಕಿಟಕಿಗಳ ಒರಸಿ

ಬಾಗಿಲಿಲ್ಲದ ವಾಡಗಳಿಗೆ

ಹೊಸ ಕದಗಳ ಮಾಡಿ

ಚೌಕಟ್ಟಿನಲಿ ಇರಿಸಬೇಕು

ಇಲ್ಲಿ ಹಿಂಬದಿಯ ಸಂಗೀತವಿಲ್ಲ

ಚಿತ್ರ ತೆಗೆಯುವರಿಲ್ಲ

ಅವರೆಲ್ಲ ಆಗಲೇ ಹೊರಟುಹೋದರಲ್ಲ

ಮತ್ಯಾವುದೋ ರಣರಂಗದೆಡೆಗೆ

ಮುರಿದಸೇತುವೆ ಮತ್ತೆ ಕಟ್ಟಬೇಕು

ನಿಲ್ದಾಣಗಳ ಮತ್ತೆ ನಿರ್ಮಿಸಬೇಕು

ಹರಿದ ತೋಳಿನಂಗಿ ತೊಟ್ಟ ಕೂಲಿಗಳ

ಹುಡುಕಿ ಹಿಡಿದುತರಬೇಕು

ಪೊರಕೆ ಹಿಡಿದವನೊಬ್ಬ

ನೆನೆಸಿಕೊಳ್ಳುತ್ತಾನೆ

ಈ ಊರು ಹೀಗಿತ್ತು

ಹಾಗಿತ್ತು ಎಂದು

ಅವನ ಮಾತನಾಲಿಸಿ

ಮೌನದಲಿ ಆಡಿಸಲು

ಒಡೆಯದೇ ಉಳಿದ ತಲೆಗಳು

ಒಂದೆರಡಾದರೂ ಇದ್ದಾವು

ಈ ಗತವೈಭವದ ಪುರಾಣ

ಯಾರಿಗೆಬೇಕು ಎಂದು

ಅತ್ತಿತ್ತ ಕಾಲ್ಕಿತ್ತುವರಿಗೂ

ಕೊರತೆಯಿಲ್ಲ

ಮಧ್ಯೆ-ಮಧ್ಯೆ

ಗಿಡಗುತ್ತಿಗಳ ನಡುವೆ

ಅವಿತ ವಾಗ್ವಾದಗಳ

ಅಗೆದು ಹೊರತೆಗೆದು

ತಿಪ್ಪೆಗೆ ಸಾಗಿಸುವ ಕಾರ್ಯವೂ

ನಡೆಯುತ್ತಿರಲೇಬೇಕಾದ್ದು

ಇಷ್ಟೆಲ್ಲ ನಡೆದದ್ದು

ಏತಕ್ಕಾಗಿ

ಎಂಬುದನರಿತವರು

ಅಲ್ಪಸ್ವಲ್ಪ ತಿಳಿದವರಿಗೇ

ಎಲ್ಲವನೂ ಬಿಟ್ಟು

ಮುಂದೆಸಾಗಬೇಕು

ಭವಿಷ್ಯದ ಭಾರಹೊರಲು

ಉಳಿವವರು

ಏನೇನೂ ಅರಿಯದ

ಕುರಿಗಳಷ್ಟೆ

ಈಗಾಗಲೇ ಬೆಳೆದುನಿಂತ

ಹುಸಿಯ ಹಸಿರು

ಹುಲ್ಲಿನ ಕೆಳಗೆ

ಯಾರ್ಯಾರು ಮಲಗಿದ್ದಾರೋ?

ಕಾರ್ಯ-ಕಾರಣಗಳ

ಸಂಬಂಧಗಳ ತುತ್ತು

ಅವರ ಹಲ್ಲಿನಂಚಿನಲೇ

ಸಿಕ್ಕಿಬಿಟ್ಟಿತ್ತೋ ?

ಮುಚ್ಚದೇ ತೆರೆದ

ಒಂದೊಂದೂ ಕಣ್ಣು

ಮೋಡಗಳ ದುರುಗುಟ್ಟಿ

ನೋಡುತ್ತಿತ್ತೋ?

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X