ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಂಸ್ಕೃತಿಕ ಸಂಘಗಳು ಮತ್ತು ಚುನಾವಣೆ

By Staff
|
Google Oneindia Kannada News
Dr.M.S.Nataraj ಡಾ. ಮೈ.ಶ್ರೀ. ನಟರಾಜ
[email protected]

2003ನೇ ವರ್ಷದಲ್ಲಿ ಅಮೇರಿಕದ ರಾಜಧಾನಿಯ ಸುತ್ತಮುತ್ತಲ ಕನ್ನಡಿಗರ ಸಂಘವಾದ ಕಾವೇರಿ ಅನೇಕ ಉತ್ತಮ ಕಾರ್ಯಕ್ರಮಗಳನ್ನು ನಡೆಸಿ ಹಲವು ವಿಕ್ರಮಗಳನ್ನು ಸಾಧಿಸಿತು. ಈ ವಿಕ್ರಮಗಳ ಜೊತೆಗೇ ಹೊಸದೊಂದು ವಿಕ್ರಮವನ್ನೂ ಸಾಧಿಸಿತು. ಆ ವಿಕ್ರಮ ಯಾವುದೆಂದರೆ, 32 ವರ್ಷಗಳ ಇತಿಹಾಸದಲ್ಲಿ ನಡೆದ ಮೊಟ್ಟಮೊದಲ ರಹಸ್ಯ ಮತದಾನದ ಚುನಾವಣೆ !

ನನಗೆ ಗೊತ್ತಿರುವ ಮಟ್ಟಿಗೆ, ಚುನಾವಣೆಗೆ ನಿಂತ ಅಭ್ಯರ್ಥಿಗಳ ಪರವಾಗಿ ದೂರವಾಣಿಯಲ್ಲಿ ಪ್ರಚಾರ ನಡೆದದ್ದು, ಚುನಾವಣೆಯ ದಿನ ಕರಪತ್ರಗಳನ್ನು ಹಂಚಿದ್ದು ಮತ್ತು ಅಭ್ಯರ್ಥಿಗಳು ಭಾಷಣ ಮಾಡಿ ತಮಗೇ ಮತದಾನ ಮಾಡಬೇಕೆಂದು ಕೇಳಿಕೊಂಡಿದ್ದು, ಮತ್ತು ರಹಸ್ಯ ಮತದಾನ ನಡೆದಿರುವುದು ಇದೇ ಮೊದಲು ಎಂದರೆ ತಪ್ಪಾಗಲಿಕ್ಕಿಲ್ಲ. ಹಾಗಾದರೆ ಈ 32 ವರ್ಷಗಳಲ್ಲಿ ಚುನಾವಣೆಯೇ ನಡೆದಿಲ್ಲವೇ, ಎಂದರೆ, ನಡೆದಿದೆ. ಪ್ರತಿವರ್ಷವೂ ನಡೆದಿದೆ. ಆದರೆ ಈ ವರ್ಷದ ಬಿರುಸು, ಬಿಸಿ ಮುಂಚೆ ಇರಲಿಲ್ಲ. ಈ ಹಿನ್ನೆಲೆಯಲ್ಲಿ, ಕಾವೇರಿಯಂಥಾ ಸಾಂಸ್ಕೃತಿಕ ಸಂಘಗಳಲ್ಲಿ ನಾಯಕತ್ವದ ಬದಲಾವಣೆ ಹೇಗೆ ನಡೆಯಬಹುದು, ಹೇಗಿದ್ದರೆ ಚೆನ್ನ ಎಂಬೆಲ್ಲ ಪ್ರಶ್ನೆಗಳು ಎದ್ದಿವೆ. ಆ ಬಗ್ಗೆ ಒಂದು ಇಣುಕು ನೋಟ ನೋಡುವ ಯತ್ನ ಮತ್ತು ಸಾಹಸ ಇಲ್ಲಿವೆ. ಚುನಾವಣೆ, ಮತದಾನ ಮುಂತಾದ ಪ್ರಶ್ನೆಗಳು ವ್ಯಕ್ತಿಗತ ಸ್ವಾತಂತ್ರ್ಯವನ್ನು ಕುರಿತ ವಿಚಾರಗಳಾದ್ದರಿಂದ, ಎಲ್ಲರೂ ಈ ಬಗ್ಗೆ ಒಂದೇ ರೀತಿ ತೀರ್ಮಾನಕ್ಕೆ ಬರಲಾಗುವುದಿಲ್ಲ ಎಂಬ ವಿಷಯವನ್ನು ಮೊದಲೇ ಒಪ್ಪಿಕೊಂಡು ಮುಂದೆ ಸಾಗೋಣ.

ಈ ದೇಶದಲ್ಲಿ ನಾವುಗಳು ಕಟ್ಟಿರುವ ಪ್ರಾಂತೀಯ ಸಂಘ ಸಂಸ್ಥೆಗಳೆಲ್ಲ ಸುಮಾರು ಮೊದಲ ಹತ್ತು ವರ್ಷಗಳು ಒಂದು ದೊಡ್ಡ ಅವಿಭಕ್ತ ಕುಟುಂಬದಂತೆ ಕೆಲಸ ಮಾಡುತ್ತಿದ್ದವು. ಸದ್ಯ, ಯಾರಾದರೂ ಸರಿ, ಮುಂದೆಬಂದರೆ ಸಾಕು ಎಂಬ ಪರಿಸ್ಥಿತಿ ಇದ್ದದ್ದರಿಂದ ಚುನಾವಣೆ ಎಂಬುದು ಔಪಚಾರಿಕವಾಗಿತ್ತು. ಸಾಧಾರಣವಾಗಿ ಕೆಲವೇ ಆಸಕ್ತರು ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಮುಂತಾದ ಸ್ಥಾನಗಳಲ್ಲಿ ಅದಲು-ಬದಲಾಗುತ್ತ ಸಂಘಗಳನ್ನು ನಡೆಸಿಕೊಂಡು ಬಂದರು. ಇನ್ನು ಎರಡನೇ ದಶಕದಲ್ಲಿ, ಸ್ವಲ್ಪ ಮಟ್ಟಿಗೆ ಉತ್ಸಾಹ ಹೆಚ್ಚಾಗಿ ಹತ್ತು-ಹನ್ನೆರಡು ಜನರ ಸಮಿತಿಗಳನ್ನು ತುಂಬುವುದು ಕಷ್ಟ ಆಗದಷ್ಟರ ಮಟ್ಟಿಗೆ ಸಂದರ್ಭ ಬದಲಾಯಿಸಿತು. ಮೂರನೇ ದಶಕದ ವೇಳೆಗೆ, ಅಲ್ಲಲ್ಲಿ ಕೊಂಚ ಸ್ಪರ್ಧೆಯೂ ನಡೆಯುವಷ್ಟರಮಟ್ಟಿಗೆ ಉತ್ಸಾಹ ಬೆಳೆಯಿತಾದರೂ ಆವೇಶವಿಲ್ಲದ ನಿಶ್ಶಬ್ದ ಸ್ಪರ್ಧೆಗೆ ಮಿತಿಯಾಗಿದ್ದ ದಿನಗಳವು. ಅಂದರೆ, ಚುನಾವಣೆಗೆ ಮೊದಲೇ ಪ್ರತಿಸ್ಪರ್ಧಿಗಳು ಹೊಂದಾಣಿಕೆ ಮಾಡಿಕೊಂಡು ಒಮ್ಮತದ ಸಮಿತಿಗಳನ್ನು ರಚಿಸಿಕೊಂಡ ಪರಿಸ್ಥಿತಿಯೇ ಸರ್ವೇಸಾಧಾರಣವಾಗಿತ್ತು.

ಈಗ, ಅನೇಕ ಸಂಸ್ಥೆಗಳು ನಾಲ್ಕನೇ ದಶಕಕ್ಕೆ ಕಾಲಿಟ್ಟಿವೆ. ಸಂಘಗಳು ಸಾಕಷ್ಟು ಬೆಳೆದಿವೆ, ಸದಸ್ಯತ್ವವೂ ಹೆಚ್ಚಿದೆ, ಹಣಕಾಸಿನ ವಹಿವಾಟು ಕೂಡ ಗಮನೀಯವಾಗಿದೆ, ಸಂಘಗಳ ಜವಾಬ್ದಾರಿಯೂ ಬೆಳೆದಿದೆ. ಯುವಪೀಳಿಗೆಯ ಜನರು ಅಧಿಕಾರ ವಹಿಸಿಕೊಳ್ಳುವ ಕಾಲವೂ ಸನ್ನಿಹಿತವಾಗಿದೆ. ಒಂದೇ ಸ್ಥಾನಕ್ಕೆ ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಆಸಕ್ತಿ ತೋರುವ ದಿನಗಳು ಬಂದಿವೆ. ಇದು ಒಂದುರೀತಿಯಿಂದ ನೋಡಿದರೆ ಸಂತೋಷಪಡುವ ವಿಚಾರವೇ. ಏಕೆಂದರೆ, ಈ ಉತ್ಸಾಹ ನಮ್ಮ ಸಂಘಗಳ ಶಕ್ತಿಯ ಪ್ರತಿಬಿಂಬ. ಈ ಶಕ್ತಿಯನ್ನು ಸರಿಯಾಗಿ ನಿಯಂತ್ರಿಸದೇ ಹೋದರೆ ಆಗಬಹುದಾದ ಅಪಾಯವನ್ನು ಮನಗಾಣದಿದ್ದರೆ ಮಾತ್ರ ಐಕ್ಯತೆಗೆ ಭಂಗ ಬರಬಹುದು, ಗುಂಪುಗೂಳಿತನ ಬೆಳೆಯಬಹುದು, ಸಂಘದ ಆದರ್ಶಗಳು ಮತ್ತು ಧ್ಯೇಯಗಳು ಮರೆತುಹೋಗಿ ವ್ಯಕ್ತಿ-ವ್ಯಕ್ತಿಗಳ ನಡುವೆ, ಗುಂಪುಗುಂಪುಗಳ ನಡುವೆ ವೈಮನಸ್ಯ, ವೈಷಮ್ಯ ಬೆಳೆಯಬಹುದು.

ಪ್ರಜಾಪ್ರಭುತ್ವದಲ್ಲಿ ನಾಯಕತ್ವದ ಬದಲಾವಣೆ ಶಾಂತಿಯುತವಾಗಿ ನಡೆಯಲು ಚುನಾವಣೆ ಒಂದು ಅತ್ಯಗತ್ಯವಾದ ಅಂಶ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಚುನಾವಣೆ ಅನಿವಾರ್ಯವೇ ಎಂಬುದನ್ನು ಪ್ರತಿ ಸಾಂಸ್ಕೃತಿಕ ಸಂಘವೂ ತನ್ನ ಅಗತ್ಯಗಳ ಚೌಕಟ್ಟಿನಲ್ಲಿ ನಿರ್ಧರಿಸಿಕೊಳ್ಳಬೇಕು. ಚುನಾವಣೆ ಪ್ರತಿ ಸ್ಥಾನಕ್ಕೂ ವ್ಯಕ್ತಿ-ವ್ಯಕ್ತಿಗಳ ನಡುವೆ ನಡೆಯಬೇಕೇ ಅಥವಾ ನಾಯಕನನ್ನು ಮಾತ್ರ ಚುನಾಯಿಸಿ ಆತ ತನ್ನದೇ ಆದ ಸಮಾನ ಮನೋಧರ್ಮವುಳ್ಳ ಒಂದು ಸಮಿತಿಯನ್ನು ರಚಿಸಿಕೊಳ್ಳಲು ಅವಕಾಶವಿರಬೇಕೇ ಎಂಬ ಪ್ರಶ್ನೆಗಳು ಏಳುತ್ತವೆ. ಎರಡು ಕಡೆಗೂ ವಾದ ಮಾಡಲು ಅವಕಾಶವಿದೆ. ನಾಯಕನನ್ನು ಮಾತ್ರ ಚುನಾಯಿಸೋಣ ಎನ್ನುವವರ ವಾದ ಏನೆಂದರೆ, ‘ಒಂದು ಸಂಸ್ಥೆಯನ್ನು ನಡೆಸಲು ಒಮ್ಮತವಿರುವ ಸಮಿತಿ ಇಲ್ಲದಿದ್ದರೆ, ತಮ್ಮತಮ್ಮಲ್ಲೇ ವಾದವಿವಾದಗಳುಂಟಾದರೆ ಸಂಘದ ಕೆಲಸ ಹೇಗೆ ಸಾಗಬೇಕು?’ ಎಂಬುದೇ ಆಗಿದೆ. ಅದರ ವಿರುದ್ಧ ವಾದಿಸುವವರು, ‘ಒಂದೇ ಗುಂಪಿಗೆ ಸೇರಿದ ಸಮಿತಿಯ ಎಲ್ಲ ಸದಸ್ಯರೂ ನಾಯಕನ ಪ್ರತಿಮಾತಿಗು ಹ್ಞೂಗುಟ್ಟುವ ಕೋಲೇಬಸವಗಳಾದರೆ ನಾಯಕನ ನೀತಿಗಳನ್ನು ಪ್ರಶ್ನಿಸುವರು, ಮತ್ತು ಆತ ತಪ್ಪುದಾರಿಯಲ್ಲಿ ನಡೆಯದಂತೆ ತಡೆಯುವವರು ಯಾರು?’ ಎಂದು ಕೇಳುತ್ತಾರೆ.

ಇನ್ನೊಂದು ಮುಖ್ಯ ಪ್ರಶ್ನೆ, ನಾಯಕನ ಸ್ಥಾನಕ್ಕೆ ಅಭ್ಯರ್ಥಿಯಾಗುವವರನ್ನು ಯಾವ ಅಳತೆಗೋಲಿನಿಂದ ಅಳೆಯಬೇಕು? ಆತ(ಆಕೆ) ಉತ್ತಮ ವಾಗ್ಮಿಯಾಗಿರಬೇಕೇ? ಹಣಕಾಸಿನ ವ್ಯವಸ್ಥೆಯ ಬಗ್ಗೆ ತಿಳಿದವರಾಗಿರಬೇಕೇ? ಸಮಿತಿಯ ಸದಸ್ಯರ ಮಧ್ಯೆ ಸೌಹಾರ್ದವನ್ನು ಬೆಳೆಸಿ ಎಲ್ಲರನ್ನೂ ಒಂದು ಸಮಾನ ಧ್ಯೇಯದೆಡೆಗೆ ಕೈಹಿಡಿದು ಕರೆದೊಯ್ಯುವ, ಭಿನ್ನಾಭಿಪ್ರಾಯಗಳು ಬಂದಾಗ ಅವುಗಳನ್ನು ಸಮಾಧಾನಿಯಾಗಿ ಮತ್ತು ನಿಷ್ಪಕ್ಷಪಾತಿಯಾಗಿ ಸಹೃದಯಶೀಲನಾಗಿ ಎದುರಿಸುವ ಧೀಮಂತನಾಗಿರಬೇಕೆ ? ಸಂಘದ ಸದಸ್ಯರಲ್ಲಿ ನಡೆಯುವ ರಾಜಕೀಯವನ್ನು ಅರಿತು ನಡೆಯುವ ಚಾಣಾಕ್ಷನಾಗಿರಬೇಕೆ? ಇವೆಲ್ಲಾ ಗುಣಗಳೂ ಒಬ್ಬನಲ್ಲೇ ಇದ್ದಕ್ಕಿದ್ದಂತೆ ಒಂದುಗೂಡಲು ಸಾಧ್ಯವಿಲ್ಲ. ಕೆಲವರಿಗೆ ದೈವದತ್ತವಾದ ಪ್ರತಿಭೆ ಇರುತ್ತದೆ, ಮತ್ತೆ ಕೆಲವರು ಕಷ್ಟದ ದುಡಿಮೆಯಿಂದ ಅನೇಕ ನಾಯಕತ್ವದ ಗುಣಗಳನ್ನು ಸಾಧಿಸಿಕೊಳ್ಳುತ್ತಾರೆ. ಪ್ರತಿಯಾಂದಕ್ಕೂ ಸಮಯ ಬೇಕು ಅನುಭವ ಬೇಕು. ಆದ್ದರಿಂದ, ನಾಯಕತ್ವವನ್ನು ವಹಿಸಿಕೊಳ್ಳುವವರನ್ನು ಅನುಭವಿಗಳನ್ನಾಗಿ ಮಾಡುವ ಒಂದು ವ್ಯವಸ್ಥೆಯಿದ್ದರೆ ಒಳ್ಳೆಯದಲ್ಲವೇ? ಈ ಕಾರಣಗಳಿಂದ, ಪ್ರತಿ ಸಂಘವೂ ತನ್ನದೇ ಆದ ಒಂದು ಸತ್ಸಂಪ್ರದಾಯವನ್ನು ಬೆಳೆಸಿಕೊಳ್ಳಬೇಕು. ಉದಾಹರಣೆಗೆ, ಒಂದು ಸಂಸ್ಥೆಗೆ ಅಧ್ಯಕ್ಷನಾಗುವವನು, ಏಣಿಯ ಮೊದಲ ಮೆಟ್ಟಲಿನಿಂದ ಹತ್ತಲು ಪ್ರಾರಂಭಿಸಬೇಕು. ಸಮಿತಿಯ ಸಾಧಾರಣ ಸದಸ್ಯನಾಗಿ, ನಂತರ ಯಾವುದಾದರೊಂದು ಅಧಿಕಾರಿಯಾಗಿ (ಉಪ ಕಾರ್ಯದರ್ಶಿ ಅಥವಾ ಸಹ-ಕೊಶಾಧಿಕಾರಿಯಾಗಿ) ಅನಂತರ ಮುಂದಿನ ಮೆಟ್ಟಲನ್ನು (ಕಾರ್ಯದರ್ಶಿಯೋ, ಉಪಾಧ್ಯಕ್ಷನೋ ಆಗಿ) ಏರಿ ಮೂರು-ನಾಲ್ಕು ವರ್ಷಗಳ ಅನುಭವವನ್ನು ಪಡೆದನಂತರ ಪಳಗಿ ಸಂಘದ ಮಂದಾಳತ್ವಕ್ಕೇರಲು ಒಬ್ಬ ಅಭ್ಯರ್ಥಿ ಯೋಗ್ಯನಾಗುತ್ತಾನೆ. ಈ ರೀತಿಯ ಒಂದು ಅಲಿಖಿತ ಪದ್ಧತಿ ಬೆಳೆದುಬಿಟ್ಟರೆ, ಚುನಾವಣೆ ಎಂಬುದು ಒಂದು ಔಪಚಾರಿಕ ವಿಷಯವಾಗುತ್ತದೆ. ಹಾಗೆ ಬೆಳೆದ ನಾಯಕನ ಬಗ್ಗೆ ಕೆಲವರಿಗೆ ಅಸಮಾಧಾನ ಅತೃಪ್ತಿಯಿದ್ದರೂ ಆತನನ್ನು ಹಿಂಬದಿಗೆ ತಳ್ಳುವುದು ದುಸ್ಸಾಧ್ಯವಾಗುತ್ತದೆ. ನಿಜವಾಗಿಯೂ ಸೇವಾಮನೋಭಾವವಿದ್ದವರು ಇಂಥಾ ಒಂದು ಶಿಸ್ತಿಗೆ ಬದ್ಧರಾಗುತ್ತಾರೆ, ತಮ್ಮ ನಿಷ್ಠೆಯನ್ನು ಸಾಧಿಸಿ ತೋರಿಸಲು ಸಿದ್ಧರಾಗಿರುತ್ತಾರೆ, ನಾಯಕರಾಗಲೇಬೇಕೆಂಬ ಕಾರಣಕ್ಕಾದರೂ ಇತರರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುತ್ತಾರೆ, ಹಾಗೆ ಮಾಡಲು ಇಷ್ಟವಿಲ್ಲದವರು ಸಂಘದ ಅಧಿಕಾರದಿಂದ ದೂರ ಉಳಿದು ಉಪಕರಿಸುತ್ತಾರೆ.

ನಾನು ಮೇಲೆ ಹೇಳಿರುವ ಮಾತುಗಳು ಮುಖ್ಯವಾಗಿ ಕಾವೇರಿ-ಕನ್ನಡಸಂಘದೊಂದಿಗೆ ಗಳಿಸಿದ ನನ್ನ ಅನುಭವಗಳಿಂದ ಬರೆದುವಾದರೂ ಕಾವೇರಿಯಂಥ ಅನೇಕ ಪ್ರಾಂತೀಯ-ಸಾಂಸ್ಕೃತಿಕ ಸಂಘಗಳಿಗೂ ಅನ್ವಯಿಸುತ್ತವೆಂದು ನನ್ನ ನಂಬಿಕೆ. ಅನೇಕ ಕಾರಣಗಳಿಂದ ಚುನಾವಣೆಯನ್ನು ನಡೆಸಲೇ ಬೇಕಾಗುತ್ತದೆ. ಅಂಥ ಸಂದರ್ಭಗಳಲ್ಲಿ ಚಾಚೂ ತಪ್ಪದೇ ಚುನಾವಣೆಯ ಎಲ್ಲ ವಿಧಿ ವಿಧಾನಗಳನ್ನು ಪಾಲಿಸಬೇಕು. ಪ್ರತಿ ಅಭ್ಯರ್ಥಿಯ ಹಕ್ಕನ್ನೂ ಕಾಪಾಡಬೇಕು. ಮತದಾನ ನಡೆಸುವವರೂ ಮತದಾನ ಮಾಡುವವರೂ ಮತ್ತು ಚುನಾವಣೆಗೆ ನಿಂತವರು, ಎಲ್ಲರೂ ತಂತಮ್ಮ ಕರ್ತವ್ಯವನ್ನು ನಿರ್ವಂಚನೆಯಿಂದ ನಿರ್ವಹಿಸಿದರೆ, ಸಂಘಸಂಸ್ಥೆಗಳು ಹೆಚ್ಚುಕಾಲ ಬಾಳಿ ಬದುಕುತ್ತವೆ, ಅಂತಃಕಲಹ ಕಮ್ಮಿಯಾಗುತ್ತದೆ, ಆಂತರಿಕ ಆರೋಗ್ಯ ಹೆಚ್ಚುತ್ತದೆ. ಈ ವಿಚಾರದಲ್ಲಿ ಓದುಗರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವರೆಂದು ನಂಬಿ ವಿರಮಿಸುವೆ, ಮುಂದಿನ ಕಂತಿನವರೆಗೆ.

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X