• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾವೇರಿ ಮತ್ತು ಭಾವನದಿ

By Staff
|
Dr.M.S.Nataraj ಡಾ. ಮೈ.ಶ್ರೀ. ನಟರಾಜ

Mysreena@aol.com

ಅಮೆರಿಕದ ರಾಜಧಾನಿಯಾದ ವಾಷಿಂಗ್‌ಟನ್‌ ನಗರದ ಸುತ್ತ ಮುತ್ತಲ ಪ್ರದೇಶಗಳಾದ ಮೇರಿಲ್ಯಾಂಡ್‌ ಮತ್ತು ವರ್ಜೀನಿಯಾದಲ್ಲಿ ನೆಲೆಸಿರುವ ಕನ್ನಡಿಗರ ಸಂಘ ‘ಕಾವೇರಿ’ ಎಂಬ ಕನ್ನಡ ಕೂಟ ಹುಟ್ಟಿ ಮೂರು ದಶಕಗಳ ಮೇಲಾಯಿತು. ಅಮೆರಿಕ ಮತ್ತು ಕೆನಡಾ ದೇಶಗಳಲ್ಲಿ ಸುಮಾರು ಮುವತ್ತೋ ನಲವತ್ತೋ ಕನ್ನಡ ಸಂಘಗಳಿವೆ. ಅವುಗಳ ಹುಟ್ಟು ಮತ್ತು ಚರಿತ್ರೆಯ ಬಗ್ಗೆ ಹಿಂದೆ (ಸೆಪ್ಟೆಂಬರ್‌ 2000ದಲ್ಲಿ ಟೆಕ್ಸಸ್‌ ಸಂಸ್ಥಾನದ ಹ್ಯೂಸ್ಟನ್‌ ನಗರಿಯಲ್ಲಿ ನಡೆದ ವಿಶ್ವಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ) ಬರೆದಿರುವೆನಾದ್ದರಿಂದ ಪುನಃ ಬರೆಯುವ ಗೋಜಿಗೆ ಹೋಗುವುದಿಲ್ಲ. ಆದರೆ, ಅಮೆರಿಕಾ ಖಂಡದ ಅತ್ಯಂತ ಹಳೇ ಕನ್ನಡ ಸಂಘಗಳ ಪೈಕಿ ಕಾವೇರಿಯೂ ಒಂದು ಎಂದಷ್ಟೇ ಹೇಳಿದರೆ ಸಾಕು. 1972ರಲ್ಲಿ ಜನ್ಮತಾಳಿದ ಕಾವೇರಿ ಅವ್ಯಾಹತವಾಗಿ ಕನ್ನಡ ಚಟುವಟಿಕೆಗಳ ಕೇಂದ್ರವಾಗಿ ಬೆಳೆದುಬಂದಿದೆ. ಈ ಸಂಘದ ಅನೇಕ ವೈಶಿಷ್ಟ್ಯಗಳಲ್ಲಿ ಎಲ್ಲಕ್ಕಿಂತ ಮುಖ್ಯವಾದುದು, ಇಲ್ಲವೇ ಇಲ್ಲವೆನ್ನಬಹುದಾದ ಗುಂಪುಗೂಳಿತನ! ಭಿನ್ನಾಭಿಪ್ರಾಯಗಳು ಇಲ್ಲವೆಂದಲ್ಲ , ಅಥವಾ ಸಣ್ಣ ಪುಟ್ಟ ರಾಜಕೀಯ ನಡೆಯುವುದಿಲ್ಲವೆಂದಲ್ಲ , ಆದರೆ ವರ್ಷೇವರ್ಷೇ ನಡೆಯುವ ಚಟುವಟಿಕೆಗಳಲ್ಲಿ ಭಾಗವಹಿಸಲು ಹೊಸ ಮುಖಗಳು ಕಾಣುತ್ತಲೇ ಇರುವುದನ್ನು ನೋಡಿದರೆ ಇದು ನಿಂತು ಕೊಳೆಯುವ ಸ್ಥಾವರವಲ್ಲ , ನಿರಂತರವಾಗಿ ಹರಿಯುವ ಜಂಗಮ ನದಿ ಎನ್ನುವುದು ಖಚಿತವಾಗುತ್ತದೆ.

ಕನ್ನಡ ನುಡಿಯನ್ನು ಬಳಸುವ ಬೆಳೆಸುವ ಯತ್ನ ಇಲ್ಲಿ ಮುಂಚಿನಿಂದಲೂ ನಡೆದಿದೆ, ನಡೆಯುತ್ತಾ ಸಾಗಿದೆ. ಇಲ್ಲಿ ಬೆಳೆಯುತ್ತಿರುವ ಕನ್ನಡ ಮಕ್ಕಳಿಗೆ ತಮ್ಮ ಪೂರ್ವಜರ ನಾಡಿನ ಸಂಗೀತ, ನಾಟಕ, ನೃತ್ಯ, ಜಾನಪದ ಮುಂತಾದ ಅನೇಕ ಸಾಂಸ್ಕೃತಿಕ ಸಂಪ್ರದಾಯಗಳ ಪರಿಚಯ ಮಾಡಿಸುವಲ್ಲಿ ಸಾಕಷ್ಟು ನಿಷ್ಠೆಯನ್ನು ಕಾವೇರಿ ಪ್ರದರ್ಶಿಸುತ್ತಾ ಸಾಗಿದೆ. ಕನ್ನಡದಲ್ಲಿ ಕೈಬರಹದ, ಬೆರಳಚ್ಚಿನ, ಹಾಗೂ ಗಣಕಯಂತ್ರದ ಬಳಕೆಯಿಂದ ತಯಾರಿಸಿದ, ಮತ್ತು ಇಲ್ಲಿಯೇ ಮುದ್ರಿಸಿದ ಅಥವಾ ಭಾರತದಿಂದ ಮುದ್ರಿಸಿ ತರಿಸಿದ ಸಮಾಚಾರ ಪತ್ರಗಳು ಮತ್ತು ಅನಿಯತಕಾಲಿಕ ಹಾಗೂ ವಾರ್ಷಿಕ ಸಂಚಿಕೆಗಳನ್ನು ಸುಮಾರು ಎರಡು ದಶಕಗಳ ಮುಂಚೆಯೇ ಪ್ರಕಟಿಸುವ ಸಾಹಸಕ್ಕೆ ಕೈಯಿಕ್ಕಿದ ಹೆಮ್ಮೆ ಕಾವೇರಿಗಿದೆ.

Cover Page of Bhavanadi, a magazine of Kaveriಅಂದಿನ ಮಿತವಾದ ಜನಸಂಖ್ಯೆ, ಹಣಕಾಸಿನ ಮುಗ್ಗಟ್ಟುಗಳ ನಡುವೆ ಕನ್ನಡ ಬರಹ ಮತ್ತು ಪ್ರಕಾಶನ ಅಗತ್ಯವೇ ಎಂಬ ಪ್ರಶ್ನೆ ಏಳುತ್ತಿದ್ದುದು ನಿರೀಕ್ಷಿತವೇ. ಆದರೆ ಇಂದಿನ ಪರಿಸ್ಥಿತಿಯೇ ಬೇರೆ. ಗಣಕದ ಬಳಕೆ ಸರ್ವೇಸಾಧಾರಣ ಆಗಿರುವುದಲ್ಲದೇ ಉಚಿತವಾಗಿ ದೊರೆಯುತ್ತಿರುವ ‘ಬರಹ’ದ ಉಪಯೋಗ ನಮಗೀಗ ಇದೆ (ಬರಹಬ್ರಹ್ಮ ಶೇಷಾದ್ರಿ ವಾಸುವಿಗೆ ನಮೋ ಎನ್ನೋಣ). ಬರೆಯುವ ಉತ್ಸಾಹೀ ಪ್ರತಿಭಾವಂತರನೇಕರಿದ್ದಾರೆ, ಎಲ್ಲಕ್ಕಿಂತ ಮುಖ್ಯವಾಗಿ ಓದುವವರ ಸಂಖ್ಯೆಯೂ ಸಮೃದ್ಧವಾಗಿದೆ.

ಸಂಚಿಕೆಯ ಪ್ರಕಟನೆಯೂ ಕನ್ನಡ ಸಂಘಗಳ ಕಾರ್ಯಕ್ರಮಗಳಲ್ಲಿ ಮುಖ್ಯವಾದ ಒಂದು ಅಂಶ, ಊಟ ತಿಂಡಿ, ನಾಟಕ, ಸಂಗೀತ ಮುಂತಾದ ಸಾಂಸ್ಕೃತಿಕ ಕೆಲಸಗಳಿಗಾಗಿ ಹಣವನ್ನು ಮೀಸಲಾಗಿಡುವಂತೆ, ಈ ಸಾಹಿತ್ಯಿಕ ಕೆಲಸವೂ ಮುಖ್ಯ ಎಂದು ಎಲ್ಲರೂ ಒಪ್ಪುವ ಕಾಲ ಬಂದಿದೆ. ನ್ಯೂಯಾರ್ಕ್‌ ಕನ್ನಡ ಕೂಟ, ಅಟ್ಲಾಂಟಾದ ನೃಪತುಂಗ ಕನ್ನಡ ಕೂಟ ಇವೇ ಮುಂತಾದ ಸಂಘಗಳು ಆಗಿಂದಾಗ್ಗೆ ಉತ್ತಮ ಪ್ರಕಟಣೆಗಳನ್ನು ಹೊರತಂದಿವೆಯಾದರೂ, ಷಿಕಾಗೊದಲ್ಲಿನ ‘ಸಂಗಮ’, ಉತ್ತರ ಕ್ಯಾಲಿಫೋರ್ನಿಯಾದ ‘ಸ್ವರ್ಣಸೇತು’ ಇತ್ತೀಚಿನ ಉತ್ತಮ ಮಟ್ಟದ ವಾರ್ಷಿಕ ಸಂಚಿಕೆಗಳೆಂಬ ಖ್ಯಾತಿ ಪಡೆದಿವೆ. ಅವುಗಳ ಸಾಲಿಗೆ ಸೇರುವ ಯತ್ನ ಕಾವೇರಿಯಲ್ಲಿ ಈ ವರ್ಷ ನಡೆದಿದೆ ಎಂಬುದು ಗಮನಿಸಬೇಕಾದ ಸಂತಸದ ಸಂಗತಿ. ಸುಮಾರು ಎರಡು ದಶಕಗಳಿಗೂ ಮುನ್ನ ಇಂಥಾ ಯತ್ನ ನಡೆದಿತ್ತಾದರೂ, ವಾರ್ಷಿಕ ಸಂಚಿಕೆಗಳನ್ನು ಪ್ರಕಟಿಸಲು ಬೇಕಾಗುವ ಉತ್ಸಾಹ, ನಿಷ್ಠೆ ಮತ್ತು ಆರ್ಥಿಕ ವ್ಯವಸ್ಥೆ ಕಾವೇರಿಯಲ್ಲಿ ಇಲ್ಲಿಯವರೆಗೂ ಬೇರೂರಿರಲಿಲ್ಲ. ಈ ವರ್ಷದ ಕಾರ್ಯಕಾರೀ ಸಮಿತಿಯವರು ರಾಜ್ಯೋತ್ಸವದ ಶುಭಸಂದರ್ಭದಲ್ಲಿ ‘ಭಾವನದಿ’ ಎಂಬ ಸಾಹಿತ್ಯಿಕ ಸಂಚಿಕೆಯನ್ನು ಬಿಡುಗಡೆ ಮಾಡಿ ಕೃತಾರ್ಥರಾಗಿದ್ದಾರೆ. ಈ ನದಿ ನಿರಂತರವಾಗಿ ಹರಿಯುವಂತೆ ಮುಂದೆ ಬರುವ ಕಾರ್ಯಕಾರಿ ಸಮಿತಿಗಳೂ ಆಸಕ್ತಿವಹಿಸುವರೆಂದು ಆಶಿಸೋಣ. ಪ್ರತಿ ಕನ್ನಡಸಂಘವೂ ಇಂಥದೊಂದು ಸಂಚಿಕೆಯನ್ನು ಕನಿಷ್ಠಪಕ್ಷ ವರ್ಷಕ್ಕೊಮ್ಮೆಯಾದರೂ ಬಿಡುಗಡೆ ಮಾಡುವ ಔಚಿತ್ಯ ಖಂಡಿತ ಇದೆ. ನಾವು ಕನ್ನಡದಲ್ಲಿ ಓದುವುದನ್ನು ಬರೆಯುವುದನ್ನು ಮರೆಯದೇ ಇರಬೇಕಾದರೆ ಇದು ಅತ್ಯಗತ್ಯ. ಸೃಜನಶೀಲ ಬರಹಗಾರರಿಗೆ ಒಂದು ಮಾಧ್ಯಮವನ್ನು ಕಲ್ಪಿಸುವುದೂ ಅಷ್ಟೇ ಮುಖ್ಯ. ಅಲಬಾಮಾದ ವೈ.ಆರ್‌. ಮೋಹನ್‌ ಈ ದೇಶದಲ್ಲಿ ಕೂತು ಬರೆದ ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮನ್ನಣೆ ಸಿಕ್ಕಿದೆ, ಅದೇರೀತಿ ಕಾವೇರಿಯ ಬರಹಗಾರರೂ/ಬರಹಗಾರ್ತಿಯರು ಕರ್ನಾಟಕದ ಅನೇಕ ಪ್ರಶಸ್ತಿಗಳಿಗೆ ಭಾಜನರಾಗುವ ಸಾಧ್ಯತೆ ಇದೆ, ಅದಕ್ಕೆ ಬೇಕಾಗುವ ಸೌಲಭ್ಯವನ್ನು ‘ಭಾವನದಿ’ಯಂಥಾ ಮಾಧ್ಯಮಗಳು ಉಂಟುಮಾಡಲಿ ಎಂಬುದು ನನ್ನ ಆಶಯ. ಇನ್ನು ‘ಭಾವನದಿ’ಯ ಬಗ್ಗೆ ಎರಡು ಮಾತು. ಈ ಸಂಚಿಕೆಯ ರಕ್ಷಾಪುಟ ಬಹಳ ಆಕರ್ಷಕವಾಗಿದೆ, ಎದ್ದು ಕಾಣುವ ಸೌಂದರ್ಯ ಇದರಲ್ಲಿದೆ. ಕೊಳಲಿನ ಇಂಪು, ತಂಬೂರಿಯ ಶೃತಿ ಮತ್ತು ತಾಳ-ವೈಭವದ ನಾದ-ವೃತ್ತದಲ್ಲಿ ಕಂಗೊಳಿಸುವ ಕನ್ನಡಿತಿ-ಕಾವೇರಿಯ ಸಂಕೇತವಾಗಿ ನಿಲ್ಲುವ ‘ಕಾ’ ಅರ್ಥಪೂರ್ಣ ವಾಗಿದೆ.

‘ಭಾವನದಿ’ಯ ಒಳಗಿನ ಹೂರಣ ಸುಮಾರು ನೂರು ಪುಟಗಳಲ್ಲಿ ಅಡಕವಾಗಿದೆ. ಇಲ್ಲಿ ಪ್ರಕಟವಾಗಿರುವ ಕಥೆಗಳಾಗಲೀ, ಪ್ರಬಂಧಗಳಾಗಲೀ, ಕವನಗಳೇ ಆಗಲಿ, ಕರ್ನಾಟಕದಲ್ಲಿ ಪ್ರಕಟವಾಗುವ ಕಥೆ, ಪ್ರಬಂಧ, ಕವನಗಳಿಗೆ ಸರಿಸಾಟಿಯಾಗಿ ನಿಲ್ಲುತ್ತವೆ ಎಂದರೆ ಕೇವಲ ಅಭಿಮಾನದ ಅಥವಾ ಆತ್ಮಪ್ರಶಂಸೆಯ ಮಾತಲ್ಲ. ಈ ಸಂಚಿಕೆಗೆ ಬರೆದಿರುವ ಅನೇಕ ಲೇಖಕ/ಲೇಖಕಿಯರು ಭಾರತದಲ್ಲೂ ಆಗಾಗ್ಗೆ ಅಚ್ಚಿನಲ್ಲಿ ಪ್ರತ್ಯಕ್ಷವಾಗುವವರೇ!

ಲಘುಬರಹಗಳು, ಆಧ್ಯಾತ್ಮಿಕ ಚಿಂತನೆ, ಪುಸ್ತಕ ಪರಿಚಯ, ಭಾಷಾಂತರ, ಮಕ್ಕಳು ಇಂಗ್ಲೀಷ್‌ನಲ್ಲಿ ಬರೆದ ಉತ್ತಮ ಬರಹಗಳು, ಬಾನುಲಿ-ಸಂದರ್ಶನ, ವೈಚಾರಿಕ ಲೇಖನ/ಪ್ರಬಂಧ, ಪದಬಂಧ, ಅಡುಗೆಯ ಮಾಹಿತಿ ಮತ್ತು (ಮಿತವಾದ) ಜಾಹೀರಾತುಗಳು- ಇವುಗಳನ್ನೆಲ್ಲಾ ಉತ್ತಮವಾಗಿ ಜೋಡಿಸುವುದರಲ್ಲಿ ಸಂಪಾದಕ ಶ್ರೀವತ್ಸ ಜೋಶಿಯವರು ಜಯಶೀಲರಾಗಿದ್ದಾರೆ, ಉತ್ತಮವಾದ ಸಂಪಾದಕೀಯವನ್ನೂ ಬರೆದಿದ್ದಾರೆ. ಈ ವರ್ಷದ ಯಶಸ್ಸಿಗೆ ಕಾರಣಕರ್ತರಾದ ಕಾವೇರಿಯ ಅಧ್ಯಕ್ಷ ಸಂಜಯ್‌ ರಾವ್‌ ನಮ್ರತೆಯಿಂದ ಅಧ್ಯಕ್ಷೀಯವನ್ನು ಬರೆದು ತಮ್ಮ ಘನತೆಯನ್ನು ಪ್ರದರ್ಶಿಸಿದ್ದಾರೆ.

ಕೊನೆಯ ಪುಟದಲ್ಲಿ ‘ನಿರಂತರ’ ಎನ್ನುವ ಲೇಖನದಲ್ಲಿನ, ‘ನೆನ್ನೆ-ಇಂದು-ನಾಳೆ’ಗಳ ಪರಿಭ್ರಮಣದ ಸಂಕೇತದೊಂದಿಗೆ ಸಂಚಿಕೆಯು ತುದಿ ಮುಟ್ಟುತ್ತದೆ, ಭಾವನದಿಯ ಪ್ರವಾಹ ನಿರಂತರ ಎಂಬ ಸಂದೇಶವನ್ನು ಸಾರುತ್ತಿದೆಯೋ ಎಂಬಂತೆ! ಆದರೆ, ಕಾರಣವಶಾತ್‌ ‘ಭಾವನದಿ ಮುಗಿದುದು’ ಎಂಬ ಅಕ್ಷರಗಳು ಇದ್ದಕ್ಕಿದ್ದಹಾಗೆ ‘ಅಯ್ಯೋ ಮುಗಿದೇಹೋಯಿತೇ?’ ಎನ್ನಿಸುವಂತೆ ಮಾಡುತ್ತವೆ. ಅದರಬದಲು ‘ಮುಂದುವರಿಯಲಿದೆ’ ಎಂತಲೋ ‘ಮುಂದೂ ಹರಿಯಲಿದೆ’ ಎಂಬ ಆಶಾವಾದದೊಂದಿಗೆ ಅಲ್ಪವಿರಾಮವನ್ನು ಕೊಡಬಹುದಿತ್ತೇನೋ! ಇರಲಿ, ಈ ಭಾವನದಿಯ ಪ್ರವಾಹ ನನ್ನ ಕವಿತೆಯಾಂದಿಗೇ ಆಗಿರುವುದು ನನಗೆ ಅಭಿಮಾನದ ವಿಷಯ. ಎಷ್ಟಾದರೂ ಜೀವನದಿ-ಕಾವೇರಿಯ ಅಂಗಳ ನನ್ನ ಜನ್ಮಭೂಮಿ, ಭಾವನದಿ-ಕಾವೇರಿಯ ಅಂಗಳ ನನ್ನ ಕರ್ಮಭೂಮಿ! ಈ ಸಂಸ್ಥೆ ಹೇಗೆ ಮುಂದೆ ಸಾಗಬೇಕು ಎಂಬ ನನ್ನ ಆಶಯ ಈ ಕವನದಲ್ಲಿ ಅಡಕವಾಗಿದೆ. ಕವಿತೆಯನ್ನು ಜಾಲತರಂಗದ ಓದುಗರೊಂದಿಗೆ ಹಂಚಿಕೊಳ್ಳುತ್ತ ವಿರಮಿಸುವೆ, ಮುಂದಿನ ಕಂತಿನ ವರೆಗೆ. ಇದೋ ಓದಿ.

ಭಾವನದಿ

(ಜುಲೈ 13, 2003)

ಕಾವೇರೀ ನೀ ಕನ್ನಡನಾಡಿನ ಜೀವನದಿ

ನಮ್ಮಯ ಬಾಳಿನ ಭಾವನದಿ

ನಲ್ಮೆಯ ಜೇನಿನ ಪ್ರೇಮನದಿ (ಪಲ್ಲವಿ)

ಅಮೃತಖಂಡದಲಿ

ಅಮ್ಮನ ಹೋಲುವ

ಅಮೃತವರ್ಷಿಣಿ ಅಮರನದಿ

ಕಡಲಾಚೆಯ ಕನ್ನಡ ಕಲಾನಿಧಿ (ಅನುಪಲ್ಲವಿ)

ನಾಡಬಿಟ್ಟರೂ ನುಡಿಯ ಬಿಡದವರು

ಗೂಡಬಿಟ್ಟರೂ ಗುಡಿಯ ಬಿಡದವರು

ಹಾಡಿ ನಲಿಯಲು ಕೂಡಿ ಕುಣಿಯಲು

ಕನ್ನಡಕೂಟವ ಕಟ್ಟಿಹೆವು (1)

ಊರಬಿಟ್ಟು ನಾವ್‌ ಹಾರಿಬಂದವರು

ದೂರದೇಶದಲಿ ಬೀಡು ಬಿಟ್ಟವರು

ಪೂರ್ವ-ಪಶ್ಚಿಮದ ಕಲಸುಮಣ್ಣಿನಲಿ

ಕನ್ನಡತರುವನು ನೆಟ್ಟಿಹೆವು (2)

ಗೇಯಗೀತಗಳ ನೃತ್ಯನಟನದಲಿ

ಸಂಭ್ರಮಸದನವ ಕಟ್ಟಿಹೆವು

ಪೇಯಭೋಜ್ಯಗಳ ಮೈತ್ರಿಕೂಟದಲಿ

ರಸದೌತಣವನೆ ಅಟ್ಟಿಹೆವು (3)

ಕವನಕಥನಗಳ ಕಲೆಯ ಕುಶಲಗಳ

ಕನ್ನಡ ವಾಹಿನಿ ನೀನಾಗು

ನಿಂತು ಕೊಳೆಯದಿರು ಮುಂದೆ ಹರಿಯುತಿರು

ಕೊಳೆಯ ತೊಳೆಯುತಲಿ ನೀ ಸಾಗು (4)

ನುಡಿಯ ಮರೆತವರ ಎದೆಯನಾಡಿಯಲಿ

ಮಿಡಿಸು ಕನ್ನುಡಿಯ ಕೃಪೆದೋರಿ

ಕಡಲೀಚೆಯ ಮಕ್ಕಳ ತಲೆತಲಾಂತರಕು

ಮೊಳಗಿಸು ಕನ್ನಡ ಜಯಭೇರಿ (5)

ಮುಕ್ತಾಯಕ್ಕೆ ಮುನ್ನ ಒಂದು ಕಿವಿಮಾತು: ಇಲ್ಲಿಯವರೆಗೂ ಕಾವೇರಿಯ ಕೈಂಕರ್ಯ ವಹಿಸುವ ತರುಣ ಸ್ವಯಂಸೇವಕರು ಪ್ರತಿವರ್ಷವೂ ಹೊಸ ಹೊಸ ಅಲೆಗಳಂತೆ ಮುಂದೆಬಂದು ನಿಯತ್ತಿನಿಂದ ದಕ್ಷತೆಯಿಂದ ದುಡಿದು ಸದ್ದಿಲ್ಲದೇ ತೆರೆಯಹಿಂದೆ ಸರಿದು ಹೊಸ ನಾಯಕತ್ವಕ್ಕೆ ದಾರಿಬಿಟ್ಟು ಅವರನ್ನು ಸ್ವಾಗತಿಸಿ ಅವರೊಂದಿಗೆ ಸಹಕರಿಸಿ ಆದರ್ಶಪ್ರಾಯರಾಗಿ ವರ್ತಿಸಿದ್ದಾರೆ. ಈ ಒಂದು ಸಂಪ್ರದಾಯ ಮುಂದುವರೆಯಲಿ. ಇನ್ನೇನು 2004ರ ಚುನಾವಣೆ ಬರಲಿದೆ. ಪ್ರತಿವರ್ಷದಂತೆ, ಈ ವರ್ಷವೂ ನಿರಾಯಾಸವಾಗಿ ಸೌಹಾರ್ದಯುತ ವಾತಾವರಣದಲ್ಲಿ ಹೊಸ ನಾಯಕತ್ವ ಬರಲಿ ಎಂದು ಭುವನೇಶ್ವರಿಯನ್ನು ಪ್ರಾರ್ಥಿಸೋಣ, ಕಾವೇರೀ ಎಂಬ ಭಾವನದಿ ಬತ್ತದೇ ಎಂದೆಂದೂ ತುಂಬಿ ಹರಿಯಲೆಂದು ಬೇಡೋಣ!

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more