ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಯ್ಕಿಣ್ಣ ಬಾಯ್ಬಿಟ್ಟ

By Staff
|
Google Oneindia Kannada News
Dr.M.S.Nataraj ಡಾ. ಮೈ.ಶ್ರೀ. ನಟರಾಜ
[email protected]

ಕೆಲವು ತಿಂಗಳ ಹಿಂದೆ ಅಮೇರಿಕಾ ಸರ್ಕಾರ, ಲೆಫ್ಟಿನೆಂಟ್‌ ಜೆನರಲ್‌ ವಿಲಿಯಮ್‌ ಬಾಯ್ಕಿನ್‌ ಎಂಬಾತನನ್ನ ಒಸಾಮ ಬಿನ್‌ ಲಾಡೆನ್‌, ಮುಲ್ಲಾ ಓಮರ್‌ ಮುಂತಾದ ಉಗ್ರಗಣ್ಯರನ್ನ ಬೇಟೆಯಾಡಲೆಂದೇ ಅಸ್ತಿತ್ವಕ್ಕೆ ಬಂದಿರುವ ಗೂಢಚಾರರ ಪಡೆಗೆ ಸಹಕಾರ್ಯದರ್ಶಿಯನ್ನಾಗಿ ನಿಯಮಿಸಿದ್ದು ಹಳೇ ಸುದ್ದಿ. ಬಾಯ್ಕಿನ್‌ ಮಹಾಶಯ ಅಮೇರಿಕಾ ಸೈನ್ಯದ ‘ಎಲೀಟ್‌ ಡೆಲ್ಟ ಫೋರ್ಸ್‌’ನಲ್ಲಿ ದುಡಿದು ಹೆಸರು ಮಾಡಿದವ. ಖಾಸಗೀ ಜೀವನದಲ್ಲಿ , ಅವನೊಬ್ಬ ಬಲಪಂಥೀಯ, ಕಟ್ಟರ್‌ ಕ್ರೈಸ್ತ. ಬಾಯ್ಕಿನ್‌ ಪ್ರಕಾರ, ಅಮೇರಿಕಾ, ಇರಾಕ್‌ ಮತ್ತು ಆಫ್ಘಾನಿಸ್ತಾನದಲ್ಲಿ ಹೂಡಿರುವ ಯುದ್ಧ ‘ಕೇವಲ ಉಗ್ರರ ವಿರುದ್ಧ ಹೂಡಿದ ಯುದ್ಧವಲ್ಲ, ಇದು ಯೆಹೂದೀ-ಕ್ರೈಸ್ತ ಆದರ್ಶಗಳಲ್ಲಿ (Judeo-Christian values) ನಂಬಿಕೆ ಇಟ್ಟವರಿಗೂ ಸೈತಾನನ ಸೈನ್ಯಕ್ಕೂ ನಡುವೆ ನಡೆಯುವ ಯುದ್ಧ.’ ಈತನ ಭಾಷಣ ವೈಖರಿ ಬುಷ್‌ ಆಡಳಿತ ವರ್ಗಕ್ಕೆ ಸ್ವಲ್ಪ ತಲೆನೋವನ್ನು ತಂದಿದೆ. ಕಾರಣ, ಈತ ಆಗಾಗ್ಗೆ ಕ್ರೈಸ್ತಮತ ಪ್ರಚಾರಕರ ಸಭೆಗಳಲ್ಲಿ ಉಗ್ರರ ವಿರುದ್ಧ ನಡೆಯುತ್ತಿರುವ ಯುಧ್ಧದ ಬಗ್ಗೆ ನಿರರ್ಗಳವಾಗಿ ಧಾರ್ಮಿಕ ಭಾಷಣಗಳನ್ನು ಬಿಗಿಯುತ್ತಾನೆ. ‘ನಾವು ದೇವಸೈನಿಕರು, ನಾವು ದೇವರ ರಾಜ್ಯದ ಪ್ರಜೆಗಳು, ನಾವು ಇಂದಿನ ವಿಷಮ ಪರಿಸ್ಥಿತಿಯನ್ನು ಎದುರಿಸಲೆಂದೇ ಹುಟ್ಟಿರುವೆವು,’ ಮುಂತಾಗಿ ಘರ್ಜಿಸುತ್ತಾನೆ. ವಾಕ್‌ಸ್ವಾತಂತ್ರ್ಯದ ಈ ನಾಡಿನಲ್ಲಿ ಹೀಗೆ ಮಾತಾಡಿದರೆ ಯಾರೂ ಅಡ್ಡಿಮಾಡಲು ಸಾಧ್ಯವಿಲ್ಲ . ಆದರೆ, ಈತ ಇಂಥಾ ಭಾಷಣಗಳನ್ನು ಸಿಪಾಯಿಯ ಸಮವಸ್ತ್ರ ಧರಿಸಿಕೊಂಡು ಮಾಡುತ್ತಾನೆ ಎಂಬುದು ಕೆಲವರ ಆಕ್ಷೇಪಣೆ.

ಇವನ ಭಾಷಣದ ಇನ್ನೂ ಕೆಲವು ಆಣಿಮುತ್ತುಗಳನ್ನು ಪರಿಶೀಲಿಸೋಣ. ಇಸ್ಲಾಮ್‌ ಪಂಥದ ಉಗ್ರರನ್ನು ಈತ ಅಮೇರಿಕದ ಕ್ಲೂ-ಕ್ಲಕ್ಸ್‌-ಕ್ಲ್ಯಾನ್‌ಗೆ ಹೋಲಿಸುತ್ತಾನೆ, ಅವರನ್ನು ಧರ್ಮಶ್ರದ್ಧೆ ಇಲ್ಲದವರೆಂದು ಜರೆಯುತ್ತಾನೆ. ಮತ್ತೊಂದು ಭಾಷಣದಲ್ಲಿ , ಸೊಮಾಲಿಯದ ಹೋರಾಟಗಾರರ ಬಗ್ಗೆ ಮಾತಾಡುವಾಗ ಹೇಳಿದ, ‘ನನ್ನ ದೇವರು ಅವನ ದೇವರಿಗಿಂತ ದೊಡ್ಡವನು ಎಂದು ನಾ ಬಲ್ಲೆ .’ ‘ಅಷ್ಟೇ ಅಲ್ಲ , ನನ್ನ ದೇವರು ನಿಜವಾದ ದೇವರು, ಅವನ ದೇವರು ಕೇವಲ ಒಂದು ಮೂರ್ತಿ.’ (ಈತನಿಗೆ ಮುಸಲ್ಮಾನರು ಮೂರ್ತಿ ಪೂಜಕರಲ್ಲ ಎಂಬ ಅಂಶ ತಿಳಿದಿರಲಿಕ್ಕಿಲ್ಲ, ಅಥವಾ, ಕ್ರೈಸ್ತರಲ್ಲದ ಪರಧರ್ಮೀಯರೆಲ್ಲ ಅವನ ದೃಷ್ಟಿಯಲ್ಲಿ ಒಂದೇ ಇರಬಹುದು!). ಮತ್ತೊಂದು ಭಾಷಣದಲ್ಲಿ ‘ಬುಷ್ಷನ ಆಳ್ವಿಕೆ ಭಗವಂತನಿಂದ ನೇರವಾಗಿ ಬಂದ ಅನುಶಾಸನ’ ಎಂಬ ಅಭಿಪ್ರಾಯವನ್ನು ಮಂಡಿಸಿದ್ದಾನೆ. ಶ್ವೇತಭವನದ ಅಭಿಪ್ರಾಯದ ಪ್ರಕಾರ ಇವನ ಮಾತುಗಳು ಸರ್ಕಾರದ ನೀತಿಯನ್ನು ಪ್ರತಿನಿಧಿಸುವುದಿಲ್ಲ ಎಂಬುದು ಒಂದು ಸಣ್ಣ ಸಮಾಧಾನದ ವಿಷಯ. ಆದರೆ, ಸರಾಸರೀ ಅಮೆರಿಕನ್‌ ಪ್ರಜೆಯ ವೈಯಕ್ತಿಕ ಅಭಿಪ್ರಾಯಗಳು ಬಾಯ್ಕಿನ್‌ ಹೇಳಿದ ಮಾತುಗಳನ್ನು ಸಾರಾಸಗಟಾಗಿ ಸಾಧುವೆಂದು ಒಪ್ಪಿಕೊಂಡಿವೆ ಅನ್ನುವುದು ಆತಂಕಕಾರಿ ವಿಚಾರ. ರಕ್ಷಣಾ ಇಲಾಖೆಯ ಕಾರ್ಯದರ್ಶಿ ಡಾನಲ್ಡ್‌ ರಮ್ಸ್‌ಫೆಲ್ಡ್‌ (ಇವ ಬಾಯ್ಕಿನ್‌ ಗುಂಪಿಗೇ ಸೇರಿದ ಮತ್ತೊಬ್ಬ ಮಹಾನುಭಾವ!) ಬಾಯ್ಕಿನ್‌ನನ್ನು ‘ಅತ್ಯುತ್ತಮ ಸೈನಿಕ’ ಎಂದು ಹೊಗಳಿರುವುದನ್ನು ನೋಡಿದರೆ, ಇವನ ಮಾತಿಗೂ ಸರ್ಕಾರದ ಮಾತಿಗೂ ವ್ಯತ್ಯಾಸವುಂಟೋ ಎಂಬ ಸಂಶಯ ಬಾರದೇ ಇರದು.

ಬಾಯ್ಕಿನ್‌ ಒಬ್ಬ ಧರ್ಮಾಂಧ ಎನ್ನುವುದರಲ್ಲಿ ಸಂಶಯವಿಲ್ಲ. ಆತ ಇತರ ಧರ್ಮಗಳ ಬಗ್ಗೆ ಹೆಚ್ಚು ತಿಳಿದಿಲ್ಲವೆನ್ನುವುದಕ್ಕೆ ಅವನ ಮಾತುಗಳೇ ಸಾಕ್ಷಿ.

ಬಾಯ್ಕಿನ್‌ ಮಹಾಶಯನನ್ನು ಬೈದುಬಿಡುವುದು ಸುಲಭ. ಹಾಗೆ ಮಾಡುವ ಮುನ್ನ ಹಿಂದೂಗಳ ಬಗ್ಗೆ ಯೋಚಿಸಬೇಕು. ನಮ್ಮ ನಂಬಿಕೆಗಳನ್ನೂ ಮಾತುಗಳನ್ನು ಇತರರು ತಪ್ಪು ತಿಳಿಯಬಹುದು ಎಂಬ ಅಂಶವನ್ನು ಮರೆಯುವಂತಿಲ್ಲ. ಉದಾಹರಣೆಗೆ, ‘ರಂಗನೇ ದೈವಮ್‌’ ಎಂದು ನಂಬುವ ರಂಗನಾಥನ ಭಕ್ತರು ಬೇರೆ ದೈವಗಳನ್ನು ಅಲ್ಲಗಳೆಯುತ್ತಾರೆಯೇ? ‘ಈ ಪರಿಯ ಸೊಬಗಾವ ದೇವರನು ಕಾಣೆ’ ಎನ್ನುವಾಗ ದಾಸರು ಬೇರೆಯವರು ನಂಬಿದ ದೇವರುಗಳನ್ನು ಕೀಳಾಗಿ ಕಾಣುತ್ತಾರೆಯೇ? ಹಿಂದೂ ಧರ್ಮದಲ್ಲಿ ದೇವರನ್ನು ಯಾವ ರೂಪದಲ್ಲಿ ಬೇಕಾದರೂ ನೋಡುವ ಸ್ವಾತಂತ್ರ್ಯವಿದೆ. ಇದೊಂದು ಮಹತ್ವದ ವಿಚಾರ. ಯಾರುಯಾರು ಯಾವಯಾವ ರೂಪದಲ್ಲಿ ಚಿತ್ರಿಸಿಕೊಂಡರೆ ಆಯಾ ರೂಪದಲ್ಲಿ ಕಾಣಿಸಿಕೊಳ್ಳುವುದಾಗಿ ಭಗವಂತ ಆಶ್ವಾಸನೆ ನೀಡುತ್ತಾನೆ. ಹಿಂದೂಗಳಿಗೆ, ಪಂಚಭೂತಗಳೂ ದೇವರುಗಳೆ. ಯಾರನ್ನು ತಾನೇ ನಾವು ಪೂಜಿಸುವುದಿಲ್ಲ ? ನೀರು (ಗಂಗೆ ಮುಂತಾದ ಪವಿತ್ರ ನದಿಗಳು), ಪರ್ವತ (ಕೈಲಾಸ), ಗಿಡ (ತುಳಸಿ), ಮರ (ಅಶ್ವತ್ಥ), ಹಾವು (ಆದಿಶೇಷ), ಹಕ್ಕಿ(ಗರುಡ), ಪ್ರಾಣಿ (ಮತ್ಸ್ಯ ಕೂರ್ಮ, ವರಾಹ ಮತ್ತು ವಾನರ-ಆಂಜನೇಯ), ಮನುಷ್ಯ-ಪ್ರಾಣಿಗಳೊಂದಾದ ನರಸಿಂಹ ಮತ್ತು ಗಣಪತಿ, ಮನುಷ್ಯರೂಪದ ರಾಮ, ಕೃಷ್ಣ, ಹೆಣ್ಣು (ಶಕ್ತಿ, ದುರ್ಗಿ), ಹೀಗೆ ನಾನಾರೂಪೀ ಭಗವಂತ. ಈ ಕಾರಣದಿಂದ ಹಿಂದೂಗಳಿಗೆ ಇತರ ಧರ್ಮದ ದೇವರುಗಳನ್ನು ಕೀಳಾಗಿ ಕಾಣುವ ಅಗತ್ಯವಿಲ್ಲ. ಮೂರ್ತಿಪೂಜೆಯ ಪ್ರಾಥಮಿಕ ಮಟ್ಟದಿಂದ ಮುಂದೆ ಹೆಜ್ಜೆ ಹಾಕಿ ವೇದಾಂತವನ್ನು ಅಭ್ಯಾಸಮಾಡಿದಾಗ, ಭಗವಂತ ನಿರಾಕಾರ, ನಿರ್ಗುಣ, ಎಲ್ಲಕ್ಕಿಂತ ಚಿಕ್ಕ, ಎಲ್ಲಕ್ಕಿಂತ ದೊಡ್ಡ ಇತ್ಯಾದಿ ಗುಣವಾಚಕಗಳನ್ನೂ ಮೀರಿ ಪ್ರತಿಯಾಂದು ಜೀವಿಯಲ್ಲೂ ಇರುವ ಬ್ರಹ್ಮ ಎಂಬ ಸಾಕ್ಷಾತ್ಕಾರವಾಗುತ್ತದೆ. ಆದರೆ ಇದನ್ನೆಲ್ಲ ಬಾಯ್ಕಿನ್‌ನಂಥಾ ಧರ್ಮಾಂಧರಿಗೆ ಹೇಳಿಕೊಡುವುದು ಹೇಗೆ?

ಕ್ರೈಸ್ತಧರ್ಮ ಪ್ರಚಾರಕರ ನಂಬಿಕೆ ಏನೆಂದರೆ, ದೇವರು ಒಬ್ಬನೇ, ಆ ದೇವರು ಕ್ರೈಸ್ತರು ನಂಬಿರುವ ದೇವರು, ಅವನನ್ನು ತಲುಪಬೇಕಾದರೆ ಕ್ರಿಸ್ತನಲ್ಲಿ ಶರಣಾಗದೇ ವಿಧಿಯಿಲ್ಲ. ಈ ರೀತಿ ನಂಬಿದವರು, ಕ್ರಿಸ್ತ ಬಂದಿದ್ದು ಕೇವಲ 2000 ವರ್ಷಗಳ ಹಿಂದೆ ಎನ್ನುವುದನ್ನು ಮರೆತುಬಿಡುತ್ತಾರೆ. ಅದಕ್ಕೂ ಸಹಸ್ರಾರು ವರ್ಷಗಳ ಮೊದಲೇ, ಭಾರತದಲ್ಲಿ, ಈಜಿಪ್ಟಿನಲ್ಲಿ, ಚೈನಾದಲ್ಲಿ, ದಕ್ಷಿಣ ಅಮೇರಿಕಾದಲ್ಲಿ ರೋಮ್‌, ಗ್ರೀಸ್‌ ಮತ್ತು ಇನ್ನೂ ಮುಂತಾದ ಪ್ರದೇಶಗಳಲ್ಲಿ ಸುಸಂಸ್ಕೃತ ನಾಗರೀಕತೆಗಳು ಬೆಳೆದಿದ್ದವಲ್ಲ. ಕ್ರಿಸ್ತನಲ್ಲಿ ಶರಣಾಗದ ಒಂದೇ ಕಾರಣದಿಂದ ಅವರೆಲ್ಲ ನರಕವಾಸಿಗಳಾದರೇ? ಧರ್ಮಪ್ರಚಾರ ಮಾಡಿ ಹಿಂದೂಗಳನ್ನು ತಮ್ಮ ಧರ್ಮಕ್ಕೆ ಪರಿವರ್ತಿಸಿಕೊಳ್ಳಲು ಬರುವ ಮತಪ್ರಚಾರಕರಿಗೆ ಈ ವಿಚಾರವನ್ನು ತಿಳಿಸುವುದಾದರೂ ಹೇಗೆ? ಮನೆಮನೆಗೂ ಬಂದು ಪ್ರಚಾರಮಾಡುವ ಅನೇಕ ಸ್ವಯಂಸೇವಕರು ಸಾಧಾರಣವಾಗಿ ಬೈಬಲ್‌ ಒಂದನ್ನು ಬಿಟ್ಟು ಮತ್ಯಾವ ಧರ್ಮಗ್ರಂಥಗಳನ್ನೂ ಓದುವ ತಂಟೆಗೂ ಹೋದವರಲ್ಲ ! ಅಂಥವರೊಂದಿಗೆ ವಾದಕ್ಕೆ ಕುಳಿತು ಗೆಲ್ಲುವುದು ಕಷ್ಟ !

ಧರ್ಮಾಂಧತೆಯ ವಿಷಯ ಗಂಭೀರವಾಗಿ ಆಲೋಚಿಸಬೇಕಾದದ್ದು. ಮನುಷ್ಯ-ಮನುಷ್ಯರನ್ನು ಬೇರ್ಪಡಿಸಿ ತಾರತಮ್ಯ ಮಾಡುವ ಮತ ಪ್ರಚಾರಕರಿರುವನಕ ಈ ಸಮಸ್ಯೆಗೆ ಪರಿಹಾರವಿಲ್ಲ. ಪ್ರತಿಯಾಂದು ಧರ್ಮದ ಅನುಯಾಯಿಗಳಲ್ಲೂ ಉಗ್ರವಾದಿಗಳಿದ್ದಾರೆ (ಕೆಲವು ಧರ್ಮಗಳಲ್ಲಿ ಸ್ವಲ್ಪ ಹೆಚ್ಚಿರಬಹುದು!). ಎಲ್ಲಿಯವರೆಗೆ ಅಲ್ಪಸಂಖ್ಯಾತರಾದ ಉಗ್ರವಾದಿಗಳು ಬಹುಸಂಖ್ಯಾತರಾದ ಶಾಂತಿಪ್ರಿಯರನ್ನು ಬಾಯ್ಮುಚ್ಚಿಸಿ ಭಯದಲ್ಲಿಟ್ಟಿರುವರೋ ಅಲ್ಲಿಯವರೆಗೆ ಈ ಸಮಸ್ಯೆಗೆ ಪರಿಹಾರವಿಲ್ಲ. ಆದ್ದರಿಂದ, ಸ್ವಲ್ಪ ಲಘುವಾಗೋಣ. ಒಂದುವೇಳೆ, ಬಾಯ್ಕಿನ್‌ ತನ್ನ ವಿಚಾರಧಾರೆಯನ್ನು ವ್ಯಕ್ತಪಡಿಸಲು ಕನ್ನಡದಲ್ಲಿ ಒಂದು ಪದ್ಯ ಬರೆದಿದ್ದರೆ, ಅದು ಹೇಗಿರುತ್ತಿತ್ತು? ಕೆಳಗೆ ಓದಿ, ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಕೋರುತ್ತಾ ಮುಂದಿನ ಕಂತಿನವರೆಗೆ ವಿರಮಿಸುವೆ.

ಡಬ್ಯಾವತಾರ (ಬಾಯ್ಕಿನ್‌ ಉವಾಚ?)

ನಿನ್ನ ದೇವರಿಗಿಂತ ನನ್ನ ದೇವರೇ ಮಿಗಿಲು
ನನ್ನ ದೇವರೇ ಸತ್ಯ ಇನ್ಯಾರು ‘ಅಲ್ಲಾ’(?) //ಪಲ್ಲವಿ//

ನನ್ನ ದೇವರ ಮಹಿಮೆ ಕೇಳಿದರೆ ಬಲು ಸ್ಫೂರ್ತಿ
ನಿನ್ನ ದೇವರು ಶಿಲೆಯ ನಿರ್ಜೀವ ಮೂರ್ತಿ
ನಾವು ದೇವರ ಸೈನ್ಯ ದೇವ ನಮ್ಮಧಿಕಾರಿ
ನಮ್ಮ ದೇವರೇ ಮಾನ್ಯ ಕೇಳೋ ಭಿಕಾರಿ //ಅನುಪಲ್ಲವಿ//

ವಿಶ್ವರಕ್ಷಣೆ ಹೊಣೆಯ ಹೊತ್ತಿಹೆವು ನಾವಿಂದು
‘ಡಬ್ಯ’ರಾಯನೆ ಬಂದು ಸಲಹುವನು ಎಂದು
ಕಾಂಡಿ-ಚೇನಿ-ರಮ್ಮಿ ಪೊವೆಲರಾ* ದಯದಿಂದ
ಸೈತಾನಸುತರೆ ನಿಮ್ಮ ಬಗ್ಗುಬಡಿಯುವೆವು //ಚರಣ-1//

ಎಲ್ಲಿ ಧರ್ಮದ ಗ್ಲಾನಿಯೋ ಅಲ್ಲಿ ಬರುವನು ಭೂಪತಿ
ನಮ್ಮ ಗಾಡಿಗೆ ನಿಮ್ಮ ಎಣ್ಣೆಯು ಇದುವೆ ದೇವನ ಆಣತಿ
ಜಗವ ಕಾಯಲು ಬಂದು ನಿಂದಿಹ ಬುಷ್ಷನೇ ಸೇನಾಪತಿ
ದುಷ್ಟ ಶಿಕ್ಷಕ-ಶಿಷ್ಟ ರಕ್ಷಕ ಮಾಡಿಬಿಡುವನು ತಿರುಪತಿ //ಚರಣ-2//

ನಾದಪ್ರಿಯನೂ ‘ಅಲ್ಲ’ ಅವ ವೇದಪ್ರಿಯನೂ ‘ಅಲ್ಲ’
ನಿಮ್ಮ ಕ್ಷುದ್ರದೇವರ ಹಾಗೇ ಅವ ತಾ ಜುಜುಬಿಯೂ ಅಲ್ಲ
ಭಕ್ತಿಪ್ರಿಯನೋ ಗೊತ್ತಿಲ್ಲ ಅವ ಶಕ್ತಿಪ್ರಿಯ ಸುಳ್ಳಲ್ಲ
ತೈಲಪ್ರಿಯನೋ ‘ಡಬ್ಯ’ ಅವ ಜಗದೇಕಮಲ್ಲ ! //ಚರಣ-3//

*ಕಾಂಡಲೀಸಾ ರೈಸ್‌ (ರಾಷ್ಟ್ರೀಯ ಸಂರಕ್ಷಣಾ ಸಲಹೆಗಾರ್ತಿ), ರಿಚರ್ಡ್‌ ಚೇನಿ (ಉಪಾಧ್ಯಕ್ಷ), ಡಾನಲ್ಡ್‌ ರಮ್ಸ್‌ಫೆಲ್ಡ್‌ (ರಕ್ಷಣಾ ಇಲಾಖೆಯ ಕಾರ್ಯದರ್ಶಿ) ಮತ್ತು ಕಾಲಿನ್‌ ಪೊವೆಲ್‌ (ಬಾಹ್ಯನೀತಿ ಇಲಾಖೆಯ ಕಾರ್ಯದರ್ಶಿ) ಇವರುಗಳು ಬುಷ್‌ ಆಡಳಿತದ ಮುಖ್ಯ ಪಾತ್ರವರ್ಗ.

ಜಾಲ ತರಂಗದ ಈ ಕಂತು ಹೇಗನ್ನಿಸಿತು ?


ಮುಖಪುಟ

/ ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X