• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಶೇಷಪ್ರಶ್ನೆ’ಗಳಿಗೆ ಇದೋ ನನ್ನ ಉತ್ತರ...

By Staff
|

Dr.M.S. Natarajಪ್ರಿಯ ಶಾಮ್‌,

ನಿಮ್ಮ ಅಂಚೆಯಾಂದಿಗಿದ್ದ ಶೇಷಾದ್ರಿ ಎಂಬುವರು ನನ್ನ ಇತ್ತೀಚಿನ ‘ಜಾಲತರಂಗ’ ಅಂಕಣಕ್ಕೆ ವ್ಯಕ್ತಪಡಿಸಿರುವ ಪ್ರತಿಕ್ರಿಯೆ ತಲುಪಿದೆ. ಸ್ವಲ್ಪ ‘ಖಾರ’ವೆನ್ನಿಸುವ ಅವರ ಪ್ರತಿಕ್ರಿಯೆಯಿಂದ ನನಗೆ ಸ್ವಲ್ಪ ಖೇದವೂ ಕೊಂಚ ವಿಸ್ಮಯವೂ ಆಗಿದೆ. ನಾನು ಅಂಕಣದಲ್ಲಿ ಬರೆಯುವ ಅಭಿಪ್ರಾಯಗಳನ್ನು ಆಯಾ ಲೇಖನದ ಚೌಕಟ್ಟಿನಲ್ಲಿ ನೋಡಬೇಕಾದ್ದು ಮುಖ್ಯ. ಹಾಗೂ ಅವು ನನ್ನ ವೈಯಕ್ತಿಕ ವಿಚಾರಗಳು, ಅವುಗಳನ್ನು ಓದುಗರು ಹೃದಯಶೀಲರಾಗಿ ಓದಬೇಕೆಂಬುದು ಎಲ್ಲಾ ಲೇಖಕರಿಗಿರುವಂತೆ ನನ್ನ ಆಶಯವೂ ಆಗಿದೆ. ಓದುವವರಲ್ಲಿ ನನ್ನ ಅಭಿಪ್ರಾಯಗಳನ್ನು ಹಲವರಾದರೂ ಒಪ್ಪುವರೆಂಬ ನಿರೀಕ್ಷೆಯಿದೆಯಾದರೂ ಎಲ್ಲರೂ ಒಪ್ಪಲೇಬೇಕೆಂಬ ನಿರ್ಬಂಧವಿಲ್ಲ. ಅಂಕಣಬರಹ ಸುದ್ದಿಗೆ ಪ್ರಾಮುಖ್ಯತೆ ಕೊಡುವುದಿಲ್ಲ , ಅಭಿಪ್ರಾಯಕ್ಕೆ ಮತ್ತು ಸಂದರ್ಭವನ್ನು ಕುರಿತ ವಿನ್ಯಾಸ ಮತ್ತು ವಿಶ್ಲೇಷಣೆಗಳಿಗೆ ಮಹತ್ವ ಕೊಡಬೇಕೆಂಬುದು ನನ್ನ ಮತ. ಶೇಷಾದ್ರಿಯವರು ಬರೆದಿರುವ ಲೇಖನ ನಿಷ್ಕಾರಣವಾಗಿ ನನ್ನಮೇಲೆ ವೈಯಕ್ತಿಕ ಆಕ್ರಮಣ ನಡೆಸುವ ಧ್ವನಿಯಲ್ಲಿ ಬರೆಯಲ್ಪಟ್ಟಿದೆ ಎಂಬುದನ್ನು ನಾನು ಅತೀವ ವಿಷಾದದಿಂದ ಗಮನಿಸಿದ್ದೇನೆ. ಶೇಷಾದ್ರಿಯವರು ತಮ್ಮ ವೈಯಕ್ತಿಕ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ, ಅದಕ್ಕೆ ನಾನೇಕೆ ಪ್ರತಿಕ್ರಿಯಿಸಬೇಕು ಎಂದು ಸುಮ್ಮನಿರಬಹುದಿತ್ತು. ಆದರೂ, ಅವರು ಅಷ್ಟೊಂದು ಆಸಕ್ತಿಯಿಂದ ಓದಿ ಪ್ರತಿಕ್ರಿಯೆ ವ್ಯಕ್ತಪಡಿಸುವ ತೊಂದರೆ ತೆಗೆದುಕೊಂಡಿರುವುದರಿಂದ ಜವಾಬು ಕೊಡಲು ಬದ್ಧನಾಗಿದ್ದೇನೆ.

ಮೊದಲನೆಯದಾಗಿ, ತಲೆಬರಹದಲ್ಲಿ ಬರೆದಿರುವ ಮಾತುಗಳು (‘ಅಮೇರಿಕದ ನಾಯಕರಿಗೆ ಜಾತ್ಯತೀತತೆಯ ಅ-ಆ-ಇ-ಈ-ಗಳೆ ಗೊತ್ತಿಲ್ಲದಿರುವಾಗ...’ಇತ್ಯಾದಿ) ನನ್ನವಲ್ಲ, ಅವು ದಟ್ಸ್‌ಕನ್ನಡ.ಕಾಮ್‌ನ ಸಂಪಾದಕರದ್ದು. ನಾನು ಸಹ ಈ ಮಾತು ಸತ್ಯಕ್ಕೆ ದೂರವಾದದ್ದೆಂದು ಒಪ್ಪುತ್ತೇನೆ. (ಶಾಮ್‌ ಅವರು ದಯವಿಟ್ಟು ಇದರಬಗ್ಗೆ ಸಮ್‌ಝಾಯಿಷಿ ಕೊಡುವರೆಂದು ನಂಬಿದ್ದೇನೆ). ಹಾಗೆ ನೋಡಿದರೆ, ಸರಾಸರಿ ಅಮೇರಿಕನ್ನರಷ್ಟು ಉದಾರ ಹಾಗೂ ವಿಶಾಲ ದೃಷ್ಟಿಯ ಜನಗಳು ಇತರ ದೇಶಗಳ ಸರಾಸರಿ ಪ್ರಜೆಗಳಲ್ಲಿ ವಿರಳವೆಂದೇ ನನ್ನ ನಂಬಿಕೆ. ಆದರೆ, ಶೇಷಾದ್ರಿಯವರು In fact the good Doctor has given a large dose of misinformation ಎನ್ನುವ ಅನಾವಶ್ಯಕ ವ್ಯಂಗ್ಯದೊಂದಿಗೆ ತಮ್ಮ ನಿರಾಧಾರವಾದ ವಾದಸರಣಿಯನ್ನು ಏಕೆ ಪ್ರಾರಂಭಿಸಿದರೋ ತಿಳಿಯಲಿಲ್ಲ !

ಭಾರತದಲ್ಲಿ ಇಂದಿರಾಗಾಂಧಿಯವರ ಹತ್ಯೆಯಾದ ನಂತರ ನಡೆದ ಹತ್ಯಾಕಾಂಡವನ್ನು ಮತ್ತು ಗೋಧ್ರಾದಲ್ಲಿ ನಡೆದ ಹತ್ಯೆಗೆ-ಪ್ರತಿಹತ್ಯೆಗಳನ್ನೂ ನಾನು ನಿರ್ದಾಕ್ಷಿಣ್ಯವಾಗಿ ಖಂಡಿಸುತ್ತೇನೆ. ಆ ಉದಾಹರಣೆಗಳೂ ಸಹ ನನ್ನ ಲೇಖನದ ಮೂಲ ಪ್ರಶ್ನೆಗಳನ್ನೇ ಎತ್ತುತ್ತವೆ ಎಂಬುದನ್ನು ಶೇಷಾದ್ರಿಯವರು ಮನಗಾಣುವರೆಂದು ಭಾವಿಸುತ್ತೇನೆ. ಧರ್ಮಾಂಧತೆ ಅಲಬಾಮಾದಲ್ಲಾಗಲೀ ಅಲಹಾಬಾದಿನಲ್ಲಾಗಲೀ ಧರ್ಮಾಂಧತೆಯೇ. ಹಿಂದೆ ಅಲಬಾಮಾದ ಗವರ್ನರ್‌ ಆಗಿದ್ದ ಜಾರ್ಜ್‌ ವಾಲೆಸ್‌ನ ಕೆಲವು ಭಾಷಣಗಳನ್ನು ಶೇಷಾದ್ರಿಯವರು ಕೇಳಿರಬಹುದೆಂದು ನಾನು ನಂಬಿದ್ದೇನೆ. (ಕೇಳಿಲ್ಲದಿದ್ದರೆ ಓದಿ ತಿಳಿಯಬಹುದು). ವರ್ಣಬೇಧದ ಬಗ್ಗೆ ಆತನ ಅಭಿಪ್ರಾಯಗಳನ್ನೂ ಆತನ ಅಭಿಪ್ರಾಯಗಳ ಬಗ್ಗೆ ಸಾಧಾರಣ ಜನತೆಯಲ್ಲಿದ್ದ ಸಹಾನುಭೂತಿಯನ್ನೂ ಅಭ್ಯಸಿಸಿದರೆ ಅಲಬಾಮಾದ ವರ್ಣನೀತಿಯ ವಿಚಾರ ಸ್ವಲ್ಪಮಟ್ಟಿಗಾದರೂ ಅರ್ಥವಾಗಬಹುದು. ಮಾರ್ಟಿನ್‌ ಲೂಥರ್‌ ಕಿಂಗ್‌ನ ಕ್ರಾಂತಿಯು ಪ್ರಾರಂಭವಾದ ದಿನಗಳಲ್ಲಿ, ನಿರಪರಾಧಿಗಳೂ ನಿಶ್ಶಸ್ತ್ರರೂ ಆದ ಹೆಂಗಸರು, ಮುದುಕರು ಮತ್ತು ಶಾಲಾ ಮಕ್ಕಳ ಮೇಲೆ ಸರ್ಕಾರದ ಪೋಲಿಸ್‌ ಅಧಿಕಾರಿಗಳು ಬೇಟೆನಾಯಿಗಳನ್ನು ಛೂ ಬಿಟ್ಟ ದೃಶ್ಯಗಳನ್ನು ದೂರದರ್ಶನದ ಪರದೆಯ ಮೇಲಾದರೂ ಶೇಷಾದ್ರಿಯವರು ನೋಡಿದ್ದಿದ್ದರೆ ನನ್ನ ಮಾತಿಗೆ ಇಷ್ಟೊಂದು ಸಿಟ್ಟಾಗುತ್ತಿರಲಿಲ್ಲವೆಂದು ನನಗೆ ನಂಬಿಗೆ ಇದೆ. ನಿಜ, ವರ್ಣದ್ವೇಷದ ನಾಡಿನಲ್ಲೂ ಉತ್ತಮ ಪ್ರಜೆಗಳು ಇದ್ದಾರೆ, ಎಲ್ಲಿತಾನೇ ಇಲ್ಲ ? ನನ್ನ ಹಲವು ಸ್ನೇಹಿತರೂ ಅಲಬಾಮಾದಲ್ಲಿ ಸಂತೋಷವಾಗಿದ್ದಾರೆ. ಹಾಗೆಂದ ಮಾತ್ರಕ್ಕೆ ಚರಿತ್ರೆಯನ್ನು ಬದಲಾಯಿಸುವುದು ಸಾಧ್ಯವಿಲ್ಲ.

ಇನ್ನು, ಆಫ್ಘಾನಿಸ್ತಾನದ ಮೇಲೆ ಅಮೇರಿಕಾ ಏಕೆ ಯುದ್ಧ ಹೂಡಿತು ಎಂಬುದರ ಬಗ್ಗೆ ನನಗೆ ಜ್ಞಾನೋದಯ ಮಾಡಿಸಿದ್ದಕ್ಕಾಗಿ ಶೇಷಾದ್ರಿಯವರಿಗೆ ನನ್ನ ಅನಂತಾನಂತ ವಂದನೆಗಳು. ಅಲ್‌ ಖಯಿಡ ಇರುವಲ್ಲೆಲ್ಲ ಅಮೇರಿಕಾ ಯುದ್ಧಕ್ಕೆ ಹೋಗುವುದೇ ಆದರೆ, ಓಸಾಮಾ ಬಿನ್‌ ಲಾಡೆನ್‌ ಅವಿತಿಟ್ಟುಕೊಂಡಿರುವನೆನ್ನಲಾದ ಪಾಕೀಸ್ತಾನದ ಮೇಲೆ ಏಕೆ ದಂಡೆತ್ತಿ ಹೋಗಬಾರದು? ಪ್ರಾಯಶಃ ಈ ನನ್ನ ಪ್ರಶ್ನೆಗೂ ಶೇಷಾದ್ರಿಯವರಿಂದ ‘ಲೆಕ್ಚರ್‌’ ಕೇಳಬೇಕಾಗಬಹುದು! ‘ಸೌದೀಅರೇಬಿಯಾದ ಬಗ್ಗೆ ಅಮೇರಿಕಾ ಏನು ಮಾಡಬೇಕು, ಅವರೊಡನೆಯೂ ಯುದ್ಧಕ್ಕೆ ಹೋಗಬೇಕೆ’ ಎಂದು ಕೇಳುತ್ತಾರೆ, ಶೇಷಾದ್ರಿ. ಅಮೇರಿಕನ್ನರೇ ಸಾಕಿರುವ ಸರ್ವಾಧಿಕಾರಿಗಳ ಬಗ್ಗೆ ಏನು ಮಾಡಲೂ ತೋಚದೇ ಕೈಕೈ ಹಿಸಿಕಿಕೊಳ್ಳುತ್ತಿದೆ ಅಮೇರಿಕನ್‌ ಸರ್ಕಾರ. ಸೌದೀ ಅರೇಬಿಯಾ ದೇಶದ ಬಗ್ಗೆ ಎಷ್ಟು ಬೇಗ ಎಚ್ಚರ ವಹಿಸಿದರೆ ಅಷ್ಟು ಪ್ರಪಂಚಕ್ಕೆ ಒಳ್ಳೆಯದು. ನನ್ನದೂ ಒಂದು ಪ್ರಶ್ನೆ ಶೇಷಾದ್ರಿಗಳೇ- ಇರಾಕಿಗೆ, ಇರಾನಿಗೆ ಪ್ರಜಾಪ್ರಭುತ್ವದ ಪಾಠ ಕಲಿಸಲು ಉತ್ಸಾಹ ತೋರುವ ಅಮೆರಿಕನ್‌ ಸರ್ಕಾರಕ್ಕೆ ಸೌದೀ ಅರೇಬಿಯಾದ ರಾಜಮನೆತನ, ಪಾಕೀಸ್ತಾನದ ಸೈನ್ಯಾಧಿಕಾರಿಗಳ ಸಾಮ್ರಾಜ್ಯ ಹೇಗೆ ಸಮ್ಮತವಾಗುತ್ತದೆ ? ಅವರ ಮೇಲೆ ಯುದ್ಧ ಸಾರದಿದ್ದರೂ ಅವರನ್ನು ಪರಮ ಸ್ನೇಹಿತರೆಂದು ಸಾರುವುದನ್ನಾದರೂ ನಿಲ್ಲಿಸಬಹುದಲ್ಲವೇ?

ಶೇಷಾದ್ರಿಯವರ ಬರಹದ ಇನ್ನು ಕೆಲವು ಆಣಿಮುತ್ತುಗಳು ಹೀಗಿವೆ: "...Dr. Nataraja misinforms the readers," ..."Dr.Nataraja is also quite careless with his words..," "...Dr.Natarajas inability to understand...," "But if he is as clueless as he professes to be.." ಇತ್ಯಾದಿ ಮಾತುಗಳಿಂದ ಶೇಷಾದ್ರಿ ತಮ್ಮ ಶಬ್ದಗಳ ಆಯ್ಕೆಯಲ್ಲಿ ಸಾಕಷ್ಟು ಬೇಜವಾಬ್ದಾರಿಯನ್ನೂ ಉದ್ಧಟತನವನ್ನೂ ತೋರಿದ್ದಾರೆ ಎಂಬ ತೀರ್ಮಾನಕ್ಕೆ ನಾನು ವಿಧಿಯಿಲ್ಲದೇ ಬರಬೇಕಾಗಿದೆ.

ಶೇಷಾದ್ರಿಯವರ ದೃಷ್ಟಿಯಲ್ಲಿ ಪ್ಯಾಲೆಸ್ಟೈನ್‌ ಮತ್ತು ಇಸ್ರೈಲ್‌ ನಡುವೆ ನಡೆಯುತ್ತಿರುವ ಕದನ ಯೆಹೂದ್ಯರಿಗೂ ಮುಸಲ್ಮಾನರಿಗೂ ನಡೆಯುತ್ತಿರುವ ಧಾರ್ಮಿಕ ಕದನವಲ್ಲವಂತೆ! ಇಸ್ರೈಲೀ ಬಾಂಬ್‌ಧಾಳಿಯಲ್ಲಿ ಸತ್ತವರ ಹೆಣಗಳ ಪೆಟ್ಟಿಗೆಗಳನ್ನು ಸಾಗಿಸುವಾಗ ‘‘ಅಲ್ಲಾಹ್‌ ಓ ಅಕ್ಬರ್‌’’ ಎಂದು ಕೂಗುತ್ತಾ ಮುಂದಿನ ಸೇಡಿಗಾಗಿ ಯೆಹೂದ್ಯರ ವಂಶವನ್ನು ನಿರ್ನಾಮ ಮಾಡಲು ಪಣತೊಡುವ ಯುವಕರನ್ನು ಶೇಷಾದ್ರಿಯವರು ಹೋಗಿ ಕೇಳಲಿ. ಇಸ್ರೈಲೀ ಪೇಟೆಗಳಲ್ಲಿ ನಿರಪರಾಧೀ ಪ್ರಜೆಗಳ ಅಂಗಾಂಗಗಳು ಚೆಲ್ಲಾಪಿಲ್ಲಿಯಾದ ಘಳಿಗೆಯಲ್ಲಿ ಹೆಂಡಿರು ಮಕ್ಕಳನ್ನು ಕಳೆದುಕೊಂಡ ಯೆಹೂದೀ ಪೋಲಿಸರನ್ನೂ ಸೈನಿಕರನ್ನೂ ಕಂಡು ಮಾತಾಡಿಬರಲಿ. ಆಮೇಲೆ ತಿಳಿಸಲಿ, ಇದು ಧಾರ್ಮಿಕ ಯುದ್ಧವೋ ಅಲ್ಲವೋ ಎಂಬ ಮಾತನ್ನು! ಇಂಥಾ ವಿಚಾರರಹಿತ ಮಾತುಗಳನ್ನಾಡಿದ ಶ್ರೀಯುತ ಶೇಷಾದ್ರಿ ಮಾಡುವ ಮುಕ್ತಾಯ ಬಹಳೇ ಸ್ವಾರಸ್ಯಕರವಾಗಿದೆ: "The sad part of his column is Dr.Nataraja is quite right in framing his column in terms of the conflict between the rules of men and the Rules of God...". ಇಲ್ಲಿ "sad part" ಯಾವುದು? Dr.Nataraja is quite right ಎನ್ನುವುದೇ? ಇಷ್ಟೇ ಸಾಲದೆಂಬಂತೆ "he could have written a very well nuanced article about what happened in Alabama..." ಎಂಬ ಸಲಹೆಯನ್ನೂ ಕೊಟ್ಟು ಕೃಪೆ ಮಾಡಿದ್ದಾರೆ!

ಶೇಷಾದ್ರಿಗಳೇ ನಿಮ್ಮ ಸಲಹೆಗಳಿಗಾಗಿ ಹಾಗೂ ನನ್ನ ಕಣ್ತೆರಿಸಿದ್ದಕ್ಕಾಗಿ ಅನಂತ ವಂದನೆಗಳು. ಆದರೆ, ನೀವು ನನ್ನ ಅಂಕಣವನ್ನು "read" ಮಾಡುವುದರ ಬದಲು "misread" ಮಾಡಿದ್ದೀರೆಂಬುದರಲ್ಲಿ ನನಗೆ ಎಳ್ಳಷ್ಟೂ ಸಂಶಯವಿಲ್ಲ ! ಮತ್ತೊಮ್ಮೆ ನಿಮಗಾಗಿ ಹೇಳುತ್ತೇನೆ, ಇದು "old and exaggerated cliches...tired and wornout cliches.." ಅಲ್ಲ. ಇಂದಿನ ಪರಿಸ್ಥಿತಿ!

ಕೊನೆಯದಾಗಿ, ನನ್ನ ವೈಯಕ್ತಿಕ ಅಭಿಪ್ರಾಯ ನನ್ನದು, ನಿಮ್ಮ ಅಭಿಪ್ರಾಯ ನಿಮ್ಮದು, ಈ ವಾಕ್‌ಸ್ವಾತಂತ್ರ್ಯ ಪ್ರಜಾಪ್ರಭುತ್ವ ಕೊಟ್ಟ ಹಕ್ಕು. ಆ ಹಕ್ಕನ್ನು ಯಾರೂ ಯಾರಿಂದಲೂ ಕಸಿಯುವುದು ಬೇಡ. ಇತರರ ಅಭಿಪ್ರಾಯಗಳನ್ನು ಒಪ್ಪದಿದ್ದರೂ ಗೌರವಿಸುವ, ಅಥವಾ ಕೊನೆಯ ಪಕ್ಷ, ಸಹಿಸುವ ಸಹೃದಯತೆ ಎಲ್ಲ ಓದುಗರಲ್ಲೂ ಇರಲೆಂದು ಆಶಿಸುತ್ತೇನೆ. ನಿಮ್ಮ ಪರಿಚಯ ನಗಿಲ್ಲದಿದ್ದರೂ ನಿಮ್ಮ ಪ್ರತಿಕ್ರಿಯೆಗಾಗಿ ನಾನು ಋಣಿ.

ಇಂತು, ತಮ್ಮವ,

- (ಡಾ.) ಮೈ.ಶ್ರೀ. ನಟರಾಜ, ಗೈಥಸ್‌ಬರ್ಗ್‌, ಮೇರಿಲ್ಯಾಂಡ್‌

Mysreena@aol.com

ವಿ. ಸೂ: ನಾನು ಡಾಕ್ಟರ್‌ ಹೌದು, ಆದರೆ ಔಷಧಿ ಕೊಡುವ ಡಾಕ್ಟರ್‌ ಅಲ್ಲ ! ನನ್ನ ಅಂಕಣದಲ್ಲಿ ನನಗೇ ಅರಿವಿಲ್ಲದಂತೆ ಸೇರಿಬಿಡುವ ಹಾಸ್ಯ, ವಿಡಂಬನೆ ಮತ್ತು ನನ್ನ ಹಮ್ಮು-ಬಿಮ್ಮುಗಳ ಮಿಶ್ರಣ (ಅಂದರೆ ‘ಮಿಕ್ಸ್‌ಚರ್‌’) ನಲ್ಲಿ ‘ಮಿಸ್‌ಇನ್ಫರ್ಮೇಷನ್‌’ ನನ್ನ ಅಜಾಗರೂಕತೆಯಿಂದ ಮಿಕ್ಸ್‌ ಆಗದಂತೆ ನೋಡಿಕೊಳ್ಳುವುದು ನಿಮ್ಮಂಥಾ ಓದುಗರ ಜವಾಬ್ದಾರಿ. ಆ ದೃಷ್ಟಿಯಿಂದ ಜಾಲಬಂಧುಗಳಿಂದ ಬರುವ ಪ್ರತಿಕ್ರಿಯೆಗಳಿಗೆ ಸದಾ ಸ್ವಾಗತವಿದೆ, ಒಂದು ಸ್ಥಾನವಿದೆ. ಆದರೆ, ಯಾರೊಂದಿಗೂ ಚರ್ಚಾಸ್ಪರ್ಧೆಗಿಳಿಯುವ ಉದ್ದೇಶ ನನಗಿಲ್ಲ.

ಶೇಷಾದ್ರಿಯವರ ಆಕ್ಷೇಪ :

The Good Doctor’s Large Dose Of Misinformation !

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more