• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಹಾ-ರಾಮಪ್ರಿಯ, ಹಾಹಾ-ಹನುಮಂತ!

By Staff
|
Dr.M.S.Nataraj ಮೈ.ಶ್ರೀ. ನಟರಾಜ
ಜಾಲತರಂಗದಲ್ಲಿ ಭಾವತರಂಗವನ್ನು ಹಂಚಿಕೊಂಡು ಕೆಲದಿನಗಳೇಕೆ, ಕೆಲವಾರಗಳೇ ಕಳೆದಿವೆ. ಮೊನ್ನೆ ಸಿಕ್ಕ ಕೆಲ ಓದುಗ ಮಿತ್ರರು ಆಗಲೇ ತಂಟೆ ತಕರಾರು ಶುರು ಮಾಡಿದರು. ‘ಯಾವಾಗ ಸ್ವಾಮೀ ಮುಂದಿನ ಕಂತು’, ‘ನೀವ್ಯಾಕೆ ಜೋಷಿಯವರ ಹಾಗೆ ಪ್ರತಿ ವಾರ ಬರೆಯಬಾರದು?’ ಇತ್ಯಾದಿ ಪ್ರಶ್ನೆಗಳ ಸುರಿಮಳೆ. ಸದ್ಯ, ಅವರಿಂದ ತಪ್ಪಿಸಿಕೊಳ್ಳುವ ಹೊತ್ತಿಗೆ ಸಾಕುಸಾಕಾದೆ. ನಾನು ಶಾಮಸುಂದರ್‌ಗೆ ಮೊದಲೇ ಹೇಳಿದ್ದೇನೆ- ಯಾರ ಬಲತ್ಕಾರದಿಂದಲೂ ಬರೆಯುವುದಿಲ್ಲ, ಒಳ್ಳೇ ಮೂಡಿದ್ದಾಗ, ಸರಿಯಾಗಿ ಮೂಡಿಬಂದಾಗ ಮಾತ್ರ ಬರೆಯುತ್ತೇನೆ ಎಂದು. ಹೀಗೆ ನನ್ನನ್ನು ನಾನು ಸಮಾಧಾನ ಮಾಡಿಕೊಂಡು ಸುಮ್ಮನಿದ್ದೆ. ಅಷ್ಟರಲ್ಲಿ ನಮ್ಮ ರಾಮಪ್ರಿಯನ್‌ ಕವನ ದಟ್ಸ್‌ ಕನ್ನಡದಲ್ಲಿ ಬಂತು. (ಅವರೂ ಸಹ ನನಗೆ ಈ-ಮೈಲ್‌ ಕಳುಹಿಸಿ, ಬಂದಿದೆ ಎಂದು ಮುನ್ನೆಚ್ಚರಿಕೆ ಕೊಟ್ಟರು. ಆಮೇಲೆ ಜೋಷಿಯವರೂ ಮತ್ತೊಂದು ಈ-ಮೈಲ್‌ ಕಳುಹಿಸಿ ‘ನೋಡಿದಿರ?’ ಎಂದು ವಿಚಾರಿಸಿದರು.) ಓದಿದೆ, ತಕ್ಷಣ ‘ಆ-ಹಾ’ ಅಂದೆ. ಇದ್ದಕ್ಕಿದ್ದ ಹಾಗೆ ನನ್ನ ನೆನಪಿನ ಬಂಡಿ ನನ್ನನ್ನು ಬಾಲ್ಯಕ್ಕೆ ಕೊಂಡೊಯ್ದಿತು.

ಪ್ರಾಥಮಿಕ ಶಾಲೆಯಲ್ಲಿ ‘ಭೀಮರಾಯರು’ ಎಂಬ ಹೆಸರಿನ ಒಬ್ಬರು ಮೇಷ್ಟ್ರು ನೆನಪಾದರು. ಆವರನ್ನು ಜೀವ ಇರುವವರೆಗೆ (ಮಿದಿಳು ಕೆಲಸ ಮಾಡುವವರೆಗೆ) ಮರೆಯುವಂತಿಲ್ಲ. ತಿಥಿ, ನಕ್ಷತ್ರ, ಸಂವತ್ಸರಗಳು ಇತ್ಯಾದಿ ಹೆಸರುಗಳನ್ನು ಬಾಯಿಪಾಠ ಮಾಡಿಸಿದವರು, ಅವರು. ಸ್ವಲ್ಪ ಹೆಚ್ಚುಕಮ್ಮಿ ಆದರೆ, ಮೈಮೂಳೆ ಮುರಿಯುವಂತೆ ಹೊಡೆಯಲು ಹೇಸುವವರಲ್ಲ .ಹೀಗಾಗಿ ‘ಭೀಮರಾಯರೆಂದರೆ’ ಎಲ್ಲ ವಿದ್ಯಾರ್ಥಿಗಳಿಗೂ ನಡುಕ. ಮನೆಯಲ್ಲಿ ಏನಾದರೂ ತಂಟೆಮಾಡಿದರೆ, ‘ಭೀಮರಾಯರಿಗೆ ಹೇಳಿಬಿಡುತ್ತೇನೆ’ ಎಂದರೆ, ಚೆಡ್ಡಿಯಲ್ಲಿ ಹೇತುಕೊಳ್ಳುವುದೊಂದು ಬಾಕಿ, ತುಟಿಪಿಟ್ಟೆನ್ನದೇ ಬಾಲ ಮುದುರಿಕೊಳ್ಳುತ್ತಿದ್ದೆವು. ಆ ಪುಣ್ಯಾತ್ಮನ ತರಗತಿಯಲ್ಲಿ ಕನ್ನಡ ಪಾಠ ನಡೆಯುತ್ತಿತ್ತು. ಹಳ್ಳಿಯಿಂದ ಬರುವ ಒಬ್ಬ ಹುಡುಗ, ಅವನ ಹೆಸರು ‘ಹನುಮಂತ’. ಅವನನ್ನು ನಿನ್ನ ಹೆಸರೇನು ಎಂದು ಕೇಳಿದರೆ, ಧೈರ್ಯವಾಗಿ, ‘ನನ್ನ ಎಸರು ಅನುಮಂತ’ ಎನ್ನುತ್ತಿದ್ದ. ಭೀಮರಾಯರು ಅಲ್ಪಪ್ರಾಣ-ಮಹಾಪ್ರಾಣ, ಹ್ರಸ್ವ-ದೀರ್ಘ, ಸ್ವರ-ವ್ಯಂಜನ ಇತ್ಯಾದಿ ವ್ಯಾಕರಣಕ್ಕೆ ಸಂಬಂಧಪಟ್ಟ ವಿಷಯಗಳಲ್ಲಿ ತುಂಬಾ ಕಟ್ಟುನಿಟ್ಟು. ಕನ್ನಡಪಾಠ ಓದುವಾಗ ಅವನ ಸರದಿ ಬಂತು. ‘ಆನೆ’ ಎಂಬ ಶಬ್ದವನ್ನ ‘ಹಾನೆ’ ಎಂದು ನಿರಾಯಾಸವಾಗಿ ‘ಹುಚ್ಚರಿಸಿದ’ ನಮ್ಮ ‘ಅನುಮಂತ!’ ಭೀಮರಾಯರಿಗೆ ಬಂತು ಉರಿಗೋಪ. ಕುರ್ಚಿಯಿಂದೆದ್ದು ಬಂದವರೆ, ಅವನ ಬೆನ್ನಿಗೊಂದು ಬಲವಾಗಿ ಗುದ್ದಿ, ‘ಏನಂದೆ?’, ‘ಹಾನೆ ಅಂತೀಯೇನೋ, ಅಯೋಗ್ಯ, ಬೊಗಳು, ಆನೆ, ಆನೆ.... ’. ಭೀಮರಾಯರ ಹೊಡೆತದಿಂದ ತತ್ತರಿಸಿದ ಹನುಮಂತ ಕಷ್ಟಪಟ್ಟು ಪುನಃ ಪುನಃ ಯತ್ನಿಸಿದ. ಪ್ರತಿಯಾಂದು ಬಾರಿಯೂ ಅವನು ತಪ್ಪಿದ, ಪ್ರತಿಬಾರಿಯೂ ಭೀಮರಾಯರು ಗುದ್ದಿದರು. ಇಡೀ ಪೀರ್ಯಡ್‌ ಮುಗಿಯುವವರೆಗೂ ನಡೆಯಿತು ಈ ಗುದ್ದಾಗುದ್ದಿಯ ಕ್ರೌರ್ಯ.ಉಪಯೋಗ ಮಾತ್ರ ಆಗಲಿಲ್ಲ.

ಮಾರನೆಯ ದಿನ ಹನುಮಂತನ ತಂದೆ ಹಳ್ಳಿಯಿಂದ ಬಂದು ಮುಖ್ಯೋಪಾಧ್ಯಾಯರನ್ನು ಭೇಟಿ ಮಾಡಿದರು. ಮಗ ಹೆದರಿ ನಡುಗುತ್ತಿದ್ದಾನೆ, ಶಾಲೆಗೆ ಬರುವುದಿಲ್ಲವೆಂದು ಹಟ ಹಿಡಿದಿದ್ದಾನೆ, ಏನೆಂದು ವಿಚಾರಿಸಿದರೆ ಸುಮ್ಮನೆ ಅಳುತ್ತಾನೆ, ರಾತ್ರಿಯೆಲ್ಲಾ ಬೆಚ್ಚಿ ಏಳುತ್ತಾನೆ, ನೆನ್ನೆ ಹಾಸಿಗೆಯಲ್ಲೇ ಉಚ್ಚೆ ಹುಯ್ದುಕೊಂಡ, ಎಂದೆಲ್ಲ ವಿವರಿಸಿದರೆಂದು ನಮಗೆ ಶಾಲೆಯ ಜವಾನನಿಂದ ತಿಳಿಯಿತು. ಆದಾದ ಕೆಲ ದಿನಗಳಲ್ಲೆ ಬೇಸಿಗೆ ರಜಾ ಬಂತು, ರಜಾ ಸಮಯದಲ್ಲಿ ನಮ್ಮ ತಂದೆಯವರಿಗೆ ವರ್ಗವಾಗಿ ನಾವು ಊರು ಬಿಟ್ಟೆವು. ನಾನು ಮತ್ತೆ ಹನುಮಂತನನ್ನು ನೋಡಲಿಲ್ಲ. ಮತ್ತೆ ಭೀಮರಾಯರನ್ನೂ ನೋಡಲಿಲ್ಲ. ಅವರೇನಾದರೋ ಅಮೇರಿಕದಲ್ಲಿ ಮೇಷ್ಟ್ರಾಗಿದ್ದಿದ್ದರೆ ಜೈಲುವಾಸವನ್ನು ಖಂಡಿತಾ ಅನುಭವಿಸುತ್ತಿದ್ದರೆಂಬುದು ನನ್ನ ಅನಿಸಿಕೆ. ಇರಲಿ. ಆದರೆ ಇದ್ದಕ್ಕಿದ್ದ ಹಾಗೆ ರಾಮಪ್ರಿಯರ ಕಾರಣದಿಂದ ಪ್ರಾಥಮಿಕ ಶಾಲೆಯ ಹನುಮಂತನ ನೆನಪೇಕಾಯಿತು ಎಂದು ಚಿಂತಿಸುವಷ್ಟರಲ್ಲೇ ಹೊಳೆದುಬಿಟ್ಟಿತು. ಆ-ಹಾ, ರಾಮಪ್ರಿಯನೇ ಹನುಮಂತ, ಈ ಸಂಬಂಧ ಅತಿ ಸಹಜ ಅನ್ನುವುದರಲ್ಲಿ ಆಶ್ಚರ್ಯವೇನಿಲ್ಲ ! ನನ್ನ ಮನಸ್ಸು ಚುರುಕಾಯಿತು. ಆ ನಮ್ಮ ಹನುಮಂತ ಇಂದು ಅಮೇರಿಕದಲ್ಲಿದ್ದು (ಅಥವಾ ಮತ್ತೆಲ್ಲಿಯಾದರೂ ಸರಿ) ರಾಮಪ್ರಿಯರ ಕವನ ಓದಿದ್ದಿದ್ದರೆ, ಓದಿದಮೇಲೆ ತನ್ನ ಭಾವನೆಗಳನ್ನು ಕವನಮುಖೇನ ಹಂಚಿಕೊಂಡಿದ್ದರೆ ಹೇಗಿರುತ್ತಿತ್ತು ? ಮಾಡಿಯೇಬಿಟ್ಟೆ , ಪರಕಾಯಪ್ರವೇಶ. ಇದೋ ನೀವೇ ಓದಿ ನೋಡಿ ನಮ್ಮ ಕವಿ ಹನುಮನನು! ಆಹಾಕಾರವೋ, ಹಾಹಾಕಾರವೋ ಮಾಡಬೇಕೆನ್ನಿಸಿದರೆ ಮಾಡಿ, ನನಗೂ ರಾಮಪ್ರಿಯರಿಗೂ ತಿಳಿಸುವಿರೆಂದು ನಂಬಿ ವಿರಮಿಸುವೆ, ಮುಂದಿನ ಅಂಕಣದವರೆಗೆ.

ರಾಮಪ್ರಿಯನ್‌ ಹವರಿಗೆ ಅನುಮಂತನ ಹೊಂದು ಹೀ-ಮೈಲ್‌

ರಾಮಪ್ರಿಯರ ‘ಆ-ಹಾ’ ಕವನವ ಚೆಂದದಿ ನಾನು ಹೋದಿದೆನು

‘ಆಹಾ’ ಹೆನ್ನಲು ಒರಳದೆ ನಾಲಿಗೆ ‘ಹಾ-ಹಾ’ ಹೆನ್ನುತ ಬಳಲಿದೆನು

ಆಸನದಲಿ ನಾ ಉಟ್ಟಿದ ಐದ ಅಳ್ಳಿಯ ಕನ್ನಡ ಕಲಿತಿಹೆನು

ಹರಸೀಕೆರೆಯ ಪೇಟೆಗೆ ಓಗಿ ಹಕ್ಕಿಯ ಮೂಟೆಯ ತಂದಿಹೆನು

ಹಾನೆಯ ಇಡಿಯುವ ಖೆಡ್ಡಾ ನೋಡಲು ಕಾಕನಕೋಟೆಗೆ ಓಗಿಹೆನು

ಉಲಿಗಳು ತುಂಬಿದ ಕಾಡಿನ ಮಧ್ಯೆ ಆಸಿಗೆ ಆಸಿ ಮಲಗಿಹೆನು

ಹಾಟವ ಹಾಡುತ ಆಡನು ಆಡುತ ಖುಷಿಯಲಿ ಕಾಲವ ಕಳೆದಿಹೆನು

ಎಂಡವ ಈರುತ ಹೂಟವ ಮಾಡುತ ಚೆಂಡನು ಕಾಲಲಿ ಹೊದ್ದಿಹೆನು

ಕನ್ನಡ ಪುಟಗಳ ಜಾಲದ ಮೇಲೆ ತಪ್ಪದೆ ನಿತ್ಯವು ಹೋದುವೆನು

‘ಹದುವೆಕನ್ನಡ’ ಬಿಂದು ಕಾಮಿನಲಿ ಹಂಕಣವೊಂದನು ಬರೆಯುವೆನು

ಭೀಮರಾಯರು ಕಲಿಸಿದ ಕನ್ನಡ ಹಿಂದಿಗೂ ನನ್ನನು ಕಾಯ್ದಿಹುದು

ರಾಮಪ್ರಿಯರು ಬರೆದಿಹ ಕವನವ ಹೋದಲು ಎಮ್ಮೆಯು ಹಾಗುವುದು

ಏಗೆ ಹೇನು ಹೆನ್ನದೆ ಹೆಲ್ಲರು ಹೋದಿರಿ ‘ಆಹಾ’ ಕವನವನು

‘ಹಾ-ಹಾ’ ಹೆನ್ನುತ ಹೀ-ಮೈಲ್‌ ಹೆಸೆದರೆ ನೋಡಿರಿ ಮೊಗದಲಿ ನಗುವನ್ನು!

ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more