• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾತು ನಿಂತರೂ ಅವನು ಮಹಾಸೇತುವೆ ಕಟ್ಟಿದ!

By * ಎಆರ್ ಮಣಿಕಾಂತ್
|

ಇದು, 127 ವರ್ಷಗಳ ಹಿಂದೆ ನಡೆದ ಪ್ರಸಂಗ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, 1883ರಲ್ಲಿ ಆರಂಭವಾಗಿ ನಂತರದ ಹದಿನೈದಿಪ್ಪತ್ತು ವರ್ಷಗಳ ನಂತರ ಮುಗಿದು ಹೋದ ಮಹಾಸೇತುವೆ ನಿರ್ಮಾಣವೊಂದರ ಸಾಹಸಗಾಥೆ. ಅವನ ಹೆಸರು ಜಾನ್ ರಾಬ್ಲಿಂಗ್. ಮೂಲತಃ ಜರ್ಮನಿಯವನು. ಬರ್ಲಿನ್‌ನಲ್ಲಿ ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮಾ ಮುಗಿಸಿದ ರಾಬ್ಲಿಂಗ್, ಮುಂದೇನು ಮಾಡುವುದು ಎಂದು ಯೋಚಿಸುತ್ತಿದ್ದಾಗಲೇ ಅವನ ಗುರುಗಳಾದ ಪ್ರೊಫೆಸರ್ ಹೇಗಲ್ ಹೇಳಿದರಂತೆ : ನಿನ್ನೊಳಗೆ ಛಲವಿದೆ. ಉತ್ಸಾಹವಿದೆ. ಕನಸುಗಳಿವೆ. ಕನಸುಗಾರನೂ ಇದ್ದಾನೆ. ಸೀದಾ ಅಮೆರಿಕಕ್ಕೆ ಹೋಗು. ಸಾಹಸಿಗರಿಗೆ ಅಲ್ಲಿ ಅವಕಾಶಗಳು ಸಾವಿರ'.

ಗುರುಗಳ ಮಾತಿನಂತೆ, ಅಮೆರಿಕದ ನ್ಯೂಯಾರ್ಕ್ ಮಹಾನಗರಕ್ಕೆ ಬಂದ ರಾಬ್ಲಿಂಗ್. ಹೇಳಿ ಕೇಳಿ ಸಿವಿಲ್ ಎಂಜಿನಿಯರಿಂಗ್ ಓದಿದ್ದವನಲ್ಲವೇ? ಮೊದಲಿಗೆ ಪುಟ್ಟಪುಟ್ಟ ಕಾಲುವೆ ನಿರ್ಮಾಣದ ಕಾಮಗಾರಿಯನ್ನು ಗುತ್ತಿಗೆಗೆ ಹಿಡಿದ. ಈ ಸಂದರ್ಭದಲ್ಲಿಯೇ ಸೇತುವೆ ನಿರ್ಮಾಣದ ವಿಷಯದಲ್ಲಿ ಅವನಿಗೆ ವಿಶೇಷ ಆಸಕ್ತಿ ಬೆಳೆಯಿತು. ಮೊದಲಿಗೆ ಒಂದಿಬ್ಬರು ಹಿರಿಯ ಗುತ್ತಿಗೆದಾರರ ಬಳಿ ಸಹಾಯಕನಾಗಿ ಕೆಲಸ ಮಾಡಿದ ನಂತರ, ಐದಾರು ಚಿಕ್ಕಪುಟ್ಟ ಸೇತುವೆಗಳ ನಿರ್ಮಾಣ ವಹಿಸಿಕೊಂಡ ರಾಬ್ಲಿಂಗ್. ಕೆಲವೇ ದಿನಗಳಲ್ಲಿ ಆ ಕೆಲಸದ ಹಿಂದಿರುವ ಪಟ್ಟುಗಳು ಹಾಗೂ ಗುಟ್ಟುಗಳು ಆವನಿಗೆ ಅರ್ಥವಾಗಿ ಹೋದವು. ಆನಂತರದಲ್ಲಿ ನ್ಯೂಯಾರ್ಕ್ ಮಹಾನಗರದ ನಂಬರ್ ಒನ್ ಕಂಟ್ರಾಕ್ಟರ್ ಎಂಬ ಅಭಿದಾನಕ್ಕೂ ಪಾತ್ರನಾದ.

ಅಮೆರಿಕದ ಭೂಪಟವನ್ನು ಒಮ್ಮೆ ನೋಡಿ. ನ್ಯೂಯಾರ್ಕ್ ಮತ್ತು ಮ್ಯಾನ್‌ಹಟನ್ (ಇದಕ್ಕೆ ಬ್ರೂಕ್‌ಲೈನ್ ಸಿಟಿ ಎಂಬ ಹೆಸರೂ ಇದೆ). ನಗರಗಳ ಮಧ್ಯೆ ಮಹಾಸಾಗರದಷ್ಟೇ ದೊಡ್ಡದಾದ ಈಸ್ಟ್‌ರಿವರ್ ಹೆಸರಿನ ನದಿ ಹರಿಯುತ್ತದೆ. ಈ ನದಿಯ ಅಗಲವೇ ಎರಡೂವರೆ ಕಿ.ಮೀ.ಗಳಷ್ಟಿದೆ. ಹಾಗಾಗಿ 127 ವರ್ಷಗಳ ಹಿಂದೆ ಮ್ಯಾನ್‌ಹಟನ್ ಸಿಟಿಯಿಂದ ನ್ಯೂಯಾರ್ಕ್ ಸಂಪರ್ಕವೇ ಇರಲಿಲ್ಲ. ಅನಿವಾರ್ಯವಾಗಿ ಬರಲೇಬೇಕೆಂದರೆ ಹಡಗು, ದೋಣಿಯನ್ನೇ ಅವಲಂಬಿಸಬೇಕಿತ್ತು.

ಬ್ರೂಕ್‌ಲೈನ್ ಬ್ರಿಡ್ಜ್‌ನ ಅಗಾಧತೆಯನ್ನು ಪ್ರತ್ಯಕ್ಷ ಕಂಡ ನಂತರ ನಿಮಗೂ ಈ ಕತೆ ಹೇಳಬೇಕೆನ್ನಿಸಿತು.
ಇಂಥ ಸಂದರ್ಭದಲ್ಲಿ, ನ್ಯೂಯಾರ್ಕ್ ಮತ್ತು ಮ್ಯಾನ್‌ಹಟನ್ ನಗರದ ಮಧ್ಯೆ ಸಂಪರ್ಕ ಕಲ್ಪಿಸಲು ಒಂದು ತೂಗುಸೇತುವೆಯನ್ನು ಏಕೆ ನಿರ್ಮಿಸಬಾರದು ಎಂದು ರಾಬ್ಲಿಂಗ್ ಯೋಚಿಸಿದ. ಅದನ್ನೇ ತನ್ನ ಜತೆಗಾರರಿಗೆ, ಗೆಳೆಯರಿಗೆ, ಬಂಧುಗಳಿಗೆ ಹೇಳಿದ. ಎಲ್ಲರೂ ಅವನನ್ನು ಅನುಕಂಪದಿಂದ ನೋಡಿದರು. ಆಪ್ತರೆಲ್ಲ ಬಳಿ ಬಂದು ನಿನ್ನದು ಹುಚ್ಚು ಆಲೋಚನೆ ಕಣಯ್ಯ. ಈಸ್ಟ್ ರಿವರ್‌ನ ಆಳ-ಅಗಲ ಬಲ್ಲವರಿಲ್ಲ. ಅದು ವರ್ಷವಿಡೀ ತುಂಬಿ ಹರಿಯುತ್ತದೆ. ಹೀಗಿರುವಾಗ ತೂಗುಸೇತುವೆ ನಿರ್ಮಾಣಕ್ಕೆ ನದಿ ಹರಿವಿನ ಉದ್ದಕ್ಕೂ ಅಲ್ಲಲ್ಲಿ ಪಿಲ್ಲರ್‌ಗಳನ್ನು ಹಾಕಬೇಕಲ್ಲ? ಅಂಥ ಸಂದರ್ಭದಲ್ಲಿ ನದಿಯ ಆಳವೇ ಗೊತ್ತಾಗದಿದ್ದರೆ ಗತಿ ಏನು? ನದಿಯೊಳಗೆ ಪಿಲ್ಲರ್‌ಗಳನ್ನು ನಿಲ್ಲಿಸುವುದಾದರೂ ಹೇಗೆ? ಅಲ್ಲಿ ಕೆಲಸ ಮಾಡುವಾಗ ಯಾರಾದರೂ ಅಯತಪ್ಪಿ ಬಿದ್ದರೆ ನೀರು ಪಾಲಾಗುತ್ತಾರೆ. ಹಾಗಾಗಿ ಇದು ಹುಚ್ಚು ಸಾಹಸ. ಈ ಕೆಲಸದಿಂದ ನಿನಗೆ ಖಂಡಿತ ಒಳ್ಳೆಯ ಹೆಸರು ಬರುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಇಂಥದೊಂದು ಮಹಾಸೇತುವೆ ನಿರ್ಮಾಣಕ್ಕೆ ದಶಕಗಳೇ ಹಿಡಿಯಬಹುದು. ಅಷ್ಟೂ ದಿನ ನೀನು ಬದುಕಿರ್‍ತೀಯ ಅಂತ ಏನು ಗ್ಯಾರಂಟಿ? ಒಂದು ಮಹಾನಗರ ಹಾಗೂ ಒಂದು ದ್ವೀಪದ ಮಧ್ಯೆ ಸಂಪರ್ಕ ಕಲ್ಪಿಸಲು ರಸ್ತೆಗಳಿಂದ ಮಾತ್ರ ಸಾಧ್ಯ. ಹಾಗಿರುವಾಗ ನೀನು ಮೇಲ್ಸುತುವೆಯ ಕನಸು ಕಾಣ್ತಿದ್ದೀ. ಇದು ಹುಚ್ಚಾಟ? ಸುಮ್ಮನೇ ರಿಸ್ಕ್ ತಗೋಬೇಡ' ಎಂದೆಲ್ಲ ಬುದ್ಧಿ' ಹೇಳಿದರು.

ಆದರೆ, ರಾಬ್ಲಿಂಗ್‌ನ ಮನಸ್ಸಿನೊಳಗೆ ಕನಸಿತ್ತು. ತೂಗುಸೇತುವೆಯನ್ನು ನಿರ್ಮಿಸಲೇಬೇಕು ಎಂಬ ಹಠವಿತ್ತು. ನಿರ್ಮಿಸಬಲ್ಲೆ ಎಂಬ ಛಲವಿತ್ತು. ಈ ಧೈರ್ಯದಿಂದಲೇ ಆತ ಎಲ್ಲರ ಬುದ್ಧಿಮಾತನ್ನೂ ನಿರ್ಲಕ್ಷಿಸಿ ಹೆಜ್ಜೆ ಮುಂದಿಟ್ಟ. ತಾನು ನಿರ್ಮಿಸಲು ಉದ್ದೇಶಿಸಿರುವ ತೂಗುಸೇತುವೆ, ಅದಕ್ಕೆ ತಗುಲಬಹುದಾದ ಅಂದಾಜು ವೆಚ್ಚ, ಈ ಸೇತುವೆ ನಿರ್ಮಾಣದಿಂದ ಆಗಲಿರುವ ಅನುಕೂಲದ ಸಮಗ್ರ ಮಾಹಿತಿಯನ್ನು ಅಮೆರಿಕ ಸರಕಾರದ ಮುಂದಿಟ್ಟು ಒಪ್ಪಿಗೆಯನ್ನೂ ಪಡೆದುಬಿಟ್ಟ! ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸುವ ಮುನ್ನ, ತನ್ನ ಕನಸು, ಕಲ್ಪನೆ, ಕನವರಿಕೆ, ಆಕಸ್ಮಿಕವಾಗಿ ಎದುರಾಗಬಹುದಾದ ಸವಾಲುಗಳು ಹಾಗೂ ಅದಕ್ಕೆ ಇರುವ ಪರಿಹಾರಗಳು... ಇವನ್ನೆಲ್ಲ ಹೇಳಿಕೊಳ್ಳಲು ಒಂದು ಆಪ್ತ ಜೀವದ ಅಗತ್ಯ ರಾಬ್ಲಿಂಗ್‌ಗೆ ಇತ್ತು. ಆಗ ಅವನ ಕಣ್ಮುಂದೆ ಕಂಡವನೇ ವಾಷಿಂಗ್‌ಟನ್ ರಾಬ್ಲಿಂಗ್.

ಈ ವಾಷಿಂಗ್ಟನ್ ಬೇರೆ ಯಾರೂ ಅಲ್ಲ. ರಾಬ್ಲಿಂಗ್‌ನ ಏಕೈಕ ಪುತ್ರ. ರಾಬ್ಲಿಂಗ್ ಒಂದು ಮಹಾಯಾತ್ರೆಗೆ ಮುಂದಾಗುವ ವೇಳೆಯಲ್ಲಿ ಈ ವಾಷಿಂಗ್ಟನ್ ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮಾದ ಅಂತಿಮ ವರ್ಷದಲ್ಲಿದ್ದ. ಅಪ್ಪನ ಮಾತು, ಮನಸು ಎರಡೂ ಅವನಿಗೆ ಅರ್ಥವಾಗುತ್ತಿದ್ದವು. ಒಂದೆರಡು ನಿಮಿಷ ಅಪ್ಪನನ್ನೇ ದಿಟ್ಟಿಸಿ ನೋಡಿದ ವಾಷಿಂಗ್ಟನ್ nothing impossible papa, I am with you always, go ahead ಅಂದ!

ನೋಡನೋಡುತ್ತಲೇ ಅಪಾರ ಉತ್ಸಾಹ ಹಾಗೂ ಭಾರೀ ಪ್ರಚಾರದೊಂದಿಗೆ ತೂಗುಸೇತುವೆಯ ನಿರ್ಮಾಣ ಕಾಮಗಾರಿ ಆರಂಭವಾಯಿತು. ಈ ಸಂದರ್ಭದಲ್ಲಿ ಮ್ಯಾನ್‌ಹಟನ್ ನಗರದ ಮೀನುಗಾರರು ಪ್ರತಿಭಟನೆಗೆ ನಿಂತರು. ತೂಗುಸೇತುವೆ ನಿರ್ಮಾಣದಿಂದ ತಮ್ಮ ಮೂಲ ಆದಾಯಕ್ಕೆ ಹೊಡೆತ ಬೀಳುತ್ತದೆ. ಹಾಗಾಗಿಬಿಟ್ಟರೆ ತಾವು ಬದುಕುವುದೇ ಕಷ್ಟವಾಗುತ್ತದೆ ಎಂಬ ವಾದ ಅವರದಿತ್ತು. ಈ ಹಂತದಲ್ಲಿ ಇದ್ದ ಬುದ್ಧಿಯನ್ನೆಲ್ಲ ಉಪಯೋಗಿಸಿದ ರಾಬ್ಲಿಂಗ್- ನನ್ನದು ಜನಪರ ಯೋಜನೆಯೇ ವಿನಃ ಜನವಿರೋ ಯೋಜನೆಯಲ್ಲ' ಎಂದು ಎಲ್ಲರಿಗೂ ಮನವರಿಕೆ ಮಾಡಿಕೊಟ್ಟ. ನ್ಯೂಯಾರ್ಕ್ ಮತ್ತು ಮ್ಯಾನ್‌ಹಟನ್ ನಗರಗಳ ಮಧ್ಯೆ ಹರಿಯುತ್ತಿದ್ದ ಈಸ್ಟ್ ರಿವರ್‌ನ ಅಗಲವೇ ಎರಡು ಕಿಲೋಮೀಟರ್ ಉದ್ದವಿತ್ತಲ್ಲ? ರಾಬ್ಲಿಂಗ್ ಅಷ್ಟೂ ಉದ್ದದ ತೂಗುಸೇತುವೆ ನಿರ್ಮಿಸಬೇಕಿತ್ತು. ಮೊದಲ ಐದು ತಿಂಗಳ ಕಾಲ ಕಾಮಗಾರಿ ಕೆಲಸ ಅಂದುಕೊಂಡಂತೆಯೇ ನಡೆಯಿತು. ಆದರೆ, ಆರನೇ ತಿಂಗಳ ಮೊದಲ ವಾರ ಆಗಬಾರದ್ದು ಆಗಿಹೋಯಿತು.

ಅದು ಮಳೆಗಾಲದ ಸಂದರ್ಭ. ಕಾಮಗಾರಿ ಪರಿಶೀಲನೆಗೆಂದು ರಾಬ್ಲಿಂಗ್ ಮತ್ತು ವಾಷಿಂಗ್ಟನ್ ಇಬ್ಬರೂ ಬಂದಿದ್ದರು. ಅವರು ಅಧಿಕಾರಿಗಳೊಂದಿಗೆ ಮಾತಾಡುತ್ತ ನಿಂತಿದ್ದಾಗಲೇ ಸೇತುವೆಯ ಒಂದು ಭಾಗ ದಿಢೀರ್ ಕುಸಿಯಿತು. ಈ ದುರ್ಘಟನೆ ಜರುಗಿದ್ದು 1869ರಲ್ಲಿ. ಈ ದುರಂತದಲ್ಲಿ ತೀವ್ರವಾಗಿ ಗಾಯಗೊಂಡ ರಾಬ್ಲಿಂಗ್, ಕೆಲವೇ ದಿನಗಳಲ್ಲಿ ಸತ್ತುಹೋದ. ಈ ಕಡೆ ವಾಷಿಂಗ್ಟನ್‌ಗೂ ಭಾರೀ ಪೆಟ್ಟು ಬಿದ್ದಿತ್ತು. ತಂದೆಯ ಕನಸಿನ ಸೇತುವೆ ಕಣ್ಮುಂದೆಯೇ ಕುಸಿದದ್ದು, ತಂದೆ ಸತ್ತೇ ಹೋದದ್ದನ್ನು ಕಂಡು ವಾಷಿಂಗ್ಟನ್ ಆಘಾತಗೊಂಡ. ಈ ಚಿಂತೆಯಲ್ಲಿದ್ದಾಗಲೇ ಅವನಿಗೆ ಸ್ಟ್ರೋಕ್ ಆಯಿತು. ಮಾತು ನಿಂತುಹೋಯಿತು. ಕೈ ಕಾಲುಗಳೆಲ್ಲ ಚಲನೆ ಕಳೆದುಕೊಂಡವು. ಈ ಸಂದರ್ಭದಲ್ಲಿ ವಾಷಿಂಗ್ಟನ್‌ನನ್ನು ಪರೀಕ್ಷಿಸಿದ ವೈದ್ಯರು ಅವನ ಹೆಂಡತಿ ಎಮಿಲಿಯನ್ನು ಕರೆದು ಹೇಳಿದರು : ಮುಂದೆ ಇವರಿಗೆ ಮಾತಾಡಲು ಸಾಧ್ಯವಾಗುತ್ತೋ ಇಲ್ಲವೋ ಹೇಳಲಾಗುವುದಿಲ್ಲ. ಬಹುಶಃ ಸಾಯುವವರೆಗೂ ಇವರು ಇದೇ ಸ್ಥಿತೀಲಿ ಇರ್‍ತಾರೆ ಅನಿಸುತ್ತೆ. ಹುಷಾರಾಗಿ ನೋಡಿಕೊಳ್ಳಿ...'

ಈ ಘಟನೆಯ ನಂತರ ಅಮೆರಿಕದ ಜನ ತಲೆಗೊಂದು ಮಾತಾಡಿದರು. ಕೆಲವರು ಸೇತುವೆ ನಿರ್ಮಾಣದ ಪ್ಲಾನ್ ಸರಿಯಿಲ್ಲ ಎಂದರು. ಕೆಲವರು ಕಳಪೆ ಕಾಮಗಾರಿಯ ಪ್ರತಿಫಲ ಎಂದರು. ಇನ್ನೊಂದಷ್ಟು ಮಂದಿ ಭೂತದ ಕಾಟ ಎಂದು ಹುಯಿಲೆಬ್ಬಿಸಿದರು. ಈ ವೇಳೆಗಾಗಲೇ ಸೇತುವೆ ನಿರ್ಮಾಣದ ಕಾಮಗಾರಿ ಅರ್ಧ ಮುಗಿದಿತ್ತು. ಹಾಗಾಗಿ ಅದನ್ನು ಅಷ್ಟಕ್ಕೇ ಕೈಬಿಡುವಂತಿರಲಿಲ್ಲ. ಈ ಮಹಾಯೋಜನೆಯನ್ನು ಮುಂದುವರಿಸಲು ಯಾರೊಬ್ಬರೂ ಮುಂದೆ ಬರಲಿಲ್ಲ. ಒಂದು ಕಡೆ ಪರಿಸ್ಥಿತಿ ಹೀಗಿದ್ದಾಗಲೇ ಅದೇ ಮ್ಯಾನ್‌ಹಟನ್ ನಗರದ ಒಂದು ಆಸ್ಪತ್ರೆಯಲ್ಲಿ ವಾಷಿಂಗ್ಟನ್ ರಾಬ್ಲಿಂಗ್ ಚಿಕಿತ್ಸೆ ಪಡೆಯುತ್ತಿದ್ದ. ಗಂಡನನ್ನು ಉಳಿಸಿಕೊಳ್ಳಲೇಬೇಕು ಎಂಬ ಹಟಕ್ಕೆ ಬಿದ್ದಿದ್ದ ಎಮಿಲಿ, ಅವನೊಂದಿಗೆ ಮಾತಾಡುವ ಆಸೆಯಿಂದಲೇ ಮೂಗರ ಭಾಷೆ' ಕಲಿತಿದ್ದಳು. ಹೀಗೊಂದು ದಿನ ಸಂಜ್ಞೆಗಳ ಮೂಲಕ ಮಾತಾಡುತ್ತಿದ್ದಾಗಲೇ, ನಾನು ಹೇಳಿದ್ದನ್ನೆಲ್ಲ ಅರ್ಥ ಮಾಡಿಕೊಂಡು, ನೋಟ್ಸ್ ಮಾಡಿಕೊಂಡು ಅದನ್ನೇ ಅಧಿಕಾರಿಗಳಿಗೆ ಹೇಳಲು ಸಾಧ್ಯವಾ ಎಂದು ಕೇಳಿದ ವಾಷಿಂಗ್ಟನ್.

ಗಂಡನ ಮಾತು ಕೇಳುತ್ತಿದ್ದಂತೆಯೇ ಈ ಮಹಾಯಾತ್ರೆಗೆ ನಾನು ಸಾರಥಿಯಾಗಬೇಕು ಎಂದು ನಿರ್ಧರಿಸಿದಳು ಎಮಿಲಿ. ನಿಮ್ಮ ಮಾತು ನಡೆಸಿಕೊಡ್ತೀನಿ ಎಂದು ಕಣ್ಣ ಭಾಷೆಯಲ್ಲೇ ಹೇಳಿದಳು. ನಂತರದ ಕೆಲವೇ ದಿನಗಳಲ್ಲಿ ಅವಳು ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮಾಗೆ ಸೇರಿಕೊಂಡಳು. ಗಂಡನನ್ನು ಜೋಪಾನವಾಗಿ ನೋಡಿಕೊಳ್ಳುತ್ತಲೇ ಕೋರ್ಸ್ ಮುಗಿಸಿಯೇಬಿಟ್ಟಳು. ಈ ವೇಳೆಗೆ ಅವಳಿಗೂ ಸೇತುವೆ ನಿರ್ಮಾಣ ಕಾಮಗಾರಿಯ ಒಳಗುಟ್ಟುಗಳು ಹಾಗೂ ಅಲ್ಲಿ ಬಳಕೆಯಾಗುವ ತಂತ್ರಜ್ಞಾನ ಹಾಗೂ ಭಾಷೆಯ ಬಗ್ಗೆ ಅರ್ಥವಾಗಿ ಹೋಗಿತ್ತು.

1872ರಲ್ಲಿ ಎಮಿಲಿಯ ಸಾರಥ್ಯದಲ್ಲಿ ಮಹಾಸೇತುವೆಯ ನಿರ್ಮಾಣ ಕಾರ್ಯ ಮತ್ತೆ ಶುರುವಾಯಿತು. ದಿನಾ ಬೆಳಗ್ಗೆ ವಾಷಿಂಗ್ಟನ್ ಆಸ್ಪತ್ರೆಯ ಬೆಡ್‌ನಲ್ಲಿ ಅಂಗಾತ ಮಲಗಿಕೊಂಡೇ ಕಾಮಗಾರಿ ಕೆಲಸದ ಬಗ್ಗೆ ಸಂಜ್ಞೆಯ ಮೂಲಕವೇ ಡಿಕ್ಟೇಶನ್ ಕೊಡುತ್ತಿದ್ದ. ಎಮಿಲಿ ಅದನ್ನು ತನ್ನ ಕೈಕೆಳಗಿನ ಎಂಜಿನಿಯರ್‌ಗಳು ಹಾಗೂ ಅಧಿಕಾರಿಗಳಿಗೆ ದಾಟಿಸುತ್ತಿದ್ದಳು. ಹೀಗೆ ಶುರುವಾದ ಕೆಲಸ ಸತತ ಹನ್ನೊಂದು ವರ್ಷ ನಡೆದು ಕಡೆಗೂ ಮುಕ್ತಾಯವಾಯಿತು. ರಾಬ್ಲಿಂಗ್ ಕಂಡಿದ್ದ ಕನಸು ಅವನ ಸೊಸೆಯ ಮೂಲಕ ನನಸಾಗಿತ್ತು. 1883, ಮೇ 24ರಂದು ಈ ಸೇತುವೆಯನ್ನು ಪ್ರವೇಶಕ್ಕೆ ತೆರವುಗೊಳಿಸಲಾಯಿತು. ಈ ಸ್ಮರಣೀಯ ಸಂದರ್ಭಕ್ಕೆ ಸಾಕ್ಷಿಯಾಗಲು ಅಮೆರಿಕದ ಅಂದಿನ ಅಧ್ಯಕ್ಷ ಚೆಸ್ಟರ್ ಎ. ಆರ್ಥರ್, ನ್ಯೂಯಾರ್ಕ್‌ನ ಮೇಯರ್ ಫ್ರಾಂಕ್ಲಿನ್ ಎಡಿಸನ್ ಹಾಗೂ ಮ್ಯಾನ್‌ಹಟನ್ ನಗರದ ಮೇಯರ್ ಸೇತ್‌ಲೋ ಬಂದಿದ್ದರು. ಸೇತುವೆಯ ಮೇಲೆ ನ್ಯೂಯಾರ್ಕ್‌ನಿಂದ ಮ್ಯಾನ್‌ಹಟನ್ ಸಿಟಿ ತಲುಪುವ ಮೊದಲ ಅವಕಾಶವನ್ನು ಎಮಿಲಿಗೇ ನೀಡಲಾಯಿತು. ಆಕೆ ಗಮ್ಯ ತಲುಪಿದ ನಂತರ ಒಂದೇ ದಿನದಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಮಂದಿ ತೂಗುಸೇತುವೆಯ ಮೇಲೆ ವ್ಯಾನ್, ಕಾರು, ಬಸ್ಸು, ಬೈಕ್‌ಗಳ ಮೂಲಕ ಪ್ರಯಾಣ ಮಾಡಿ ಖುಷಿಪಟ್ಟರು.

***

ಕತೆ ಇಲ್ಲಿಗೇ ಮುಗಿಯಲಿಲ್ಲ. ಉದ್ಘಾಟನೆಯಾದ ಆರೇ ದಿನಗಳಲ್ಲಿ ಈ ಮಹಾಸೇತುವೆಯ ಒಂದು ಭಾಗ ಮತ್ತೆ ಕುಸಿಯಿತು. ಈ ದುರಂತದಲ್ಲಿ 12 ಮಂದಿ ಸತ್ತರು. ಪರಿಣಾಮವಾಗಿ, ಟೀಕೆ, ಅವಹೇಳನ, ಕೊಂಕುಮಾತು, ಬೆದರಿಕೆ ಎಲ್ಲವೂ ಎಮಿಲಿಯ ಬೆನ್ನು ಬಿದ್ದವು. ಆದರೆ ಎಮಿಲಿ ಹೆದರಲಿಲ್ಲ. ಮೂರೇ ದಿನಗಳಲ್ಲಿ ಅಧಿಕಾರಿಗಳು ಹಾಗೂ ಕಾರ್ಮಿಕರೊಂದಿಗೆ ನಡೆದುಹೋಗಿ ಸೇತುವೆಯ ಕುಸಿದಿದ್ದ ಭಾಗದ ರಿಪೇರಿ ಮಾಡಿಸಿಬಿಟ್ಟಳು. ಈ ಬಾರಿ ಸೇತುವೆಯ ಗುಣಮಟ್ಟದ ಬಗ್ಗೆ ಪರೀಕ್ಷಿಸಲು ನಿರ್ಧರಿಸಿದ ಅಮೆರಿಕ ಸರಕಾರ, ಸರ್ಕಸ್‌ನಿಂದ 21 ಆನೆಗಳನ್ನು ಕರೆಸಿ, ಅವುಗಳನ್ನು ಏಕಕಾಲಕ್ಕೆ ಸೇತುವೆಯ ಈ ತುದಿಯಿಂದ ಆ ತುದಿಯವರೆಗೂ ಓಡಿಸಿ ನೋಡಿತು. ಏನೂ ತೊಂದರೆಯಿಲ್ಲ ಎಂದು ಗ್ಯಾರಂಟಿ ಮಾಡಿಕೊಂಡಿತು. ಸಂಚಾರಕ್ಕೆ ತೆರವುಗೊಳಿಸುವ ಮುನ್ನ ಆ ಮಹಾಸೇತುವೆಗೆ ಬ್ರೂಕ್‌ಲೈನ್ ಬ್ರಿಡ್ಜ್ ಎಂಬ ಹೆಸರಿಟ್ಟಿತು.

ರಾಬ್ಲಿಂಗ್‌ನ ಕನಸು, ವಾಷಿಂಗ್ಟನ್‌ನ ದೂರದೃಷ್ಟಿ ಹಾಗೂ ಎಮಿಲಿಯ ತ್ಯಾಗದ ಪ್ರತಿಫಲ ಬ್ರೂಕ್‌ಲೈನ್ ಬ್ರಿಡ್ಜ್. ಇವತ್ತು ಅದರ ಮೇಲೆ ಓಡಾಡುವುದೆಂದರೆ ಪ್ರತಿ ಅಮೆರಿಕನ್ನರಿಗೂ ಹೆಮ್ಮೆ ಖುಷಿ. ಅಕ್ಕ' ಸಮ್ಮೇಳನದ ನೆಪದಲ್ಲಿ ರಾಬ್ಲಿಂಗ್ ಓಡಾಡಿದ್ದ ನ್ಯೂಜೆರ್ಸಿಯಲ್ಲಿ ಅಡ್ಡಾಡಿದ ನಂತರ, ಬ್ರೂಕ್‌ಲೈನ್ ಬ್ರಿಡ್ಜ್‌ನ ಅಗಾಧತೆಯನ್ನು ಪ್ರತ್ಯಕ್ಷ ಕಂಡ ನಂತರ ನಿಮಗೂ ಈ ಕತೆ ಹೇಳಬೇಕೆನ್ನಿಸಿತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X