ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳ ಸುಖ ದುಃಖ ವಿಚಾರಿಸಲು ಮರೆತ ಪಾಲಕರಿಗೆ

By * ಎಆರ್ ಮಣಿಕಾಂತ್
|
Google Oneindia Kannada News

Do not forget to take care of your child
ಬೆಂಗಳೂರಿನಲ್ಲಿ ಇರುವ ಜನಕ್ಕೆ ಕತ್ರಿಗುಪ್ಪೆ ಚೆನ್ನಾಗಿ ಗೊತ್ತು. ಕತ್ರಿಗುಪ್ಪೆ ಸಿಗ್ನಲ್‌ನಲ್ಲಿ ಇಳಿದು, ಫುಡ್‌ವರ್ಲ್ಡ್ ದಾಟಿದ್ರೆ ಸಿಗೋದೇ ಅನ್ನ ಕುಟೀರ ಹೋಟೆಲು. ಅದರ ಎದುರಿಗೆ ಬಿಗ್‌ಬಜಾರ್. ಅದೇ ರಸ್ತೇಲಿ ಮುಂದೆ ಹೋಗಿ ಮೊದಲು ಎಡಕ್ಕೆ ತಿರುಗಬೇಕು. ಹಾಗೇ ಐದು ನಿಮಿಷ ನಡೆದರೆ ಎರಡು ಸಂಪಿಗೆ ಮರಗಳು ಸಿಗುತ್ತವೆ. ಆ ಮರದ ಎದುರಿಗಿರೋದೇ ಹರೀಶ-ಭಾರತಿ ದಂಪತಿಯ ಮನೆ. ಡಬಲ್ ಬೆಡ್‌ರೂಂನ ಆ ಮನೆಗೆ ಎರಡು ಲಕ್ಷ ಅಡ್ವಾನ್ಸ್. ಎಂಟು ಸಾವಿರ ಬಾಡಿಗೆ.

ಭಾರತಿ-ಹರೀಶ್ ದಂಪತಿಗೆ ಒಂದು ಮುದ್ದಾದ ಮಗುವಿದೆ. ಅದರ ಹೆಸರು ಸ್ನೇಹಾ. ಹರೀಶನಿಗೆ ಒಂದು ಎಂಎನ್‌ಸಿಯಲ್ಲಿ ಕೆಲಸವಿದೆ. ಎಂಎನ್‌ಸಿ ಕೆಲಸ ಅಂದ ಮೇಲೆ ಹೇಳೋದೇನಿದೆ? ಆ ನೌಕರಿಯಲ್ಲಿ ಒಳ್ಳೆಯ ಸಂಬಳವೇನೋ ಇದೆ ನಿಜ. ಆದರೆ ಆ ದುಡಿಮೆಗೆ ಹೊತ್ತು-ಗೊತ್ತು ಎಂಬುದೇ ಇಲ್ಲ. ಶಿಫ್ಟ್ ಲಿಸ್ಟಿನ ಪ್ರಕಾರ ಬೆಳಗ್ಗೆ 11ರಿಂದ ಸಂಜೆ ಆರೂವರೆಯವರೆಗೂ ಕೆಲಸ ಅಂತ ಇದೆ ನಿಜ. ಆದರೆ ಹೆಚ್ಚಿನ ದಿನಗಳಲ್ಲಿ ಕೆಲಸ ಮುಗಿಯೋವಷ್ಟರಲ್ಲಿ ರಾತ್ರಿ ಎಂಟು ಗಂಟೆ ದಾಟಿರುತ್ತೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಆಫೀಸಿಂದ ಹೊರಟು ಹರೀಶ ಕತ್ರಿಗುಪ್ಪೆಯ ಮನೆ ತಲುಪಿಕೊಳ್ಳುವುದರೊಳಗೆ ರಾತ್ರಿ ಒಂಭತ್ತೂವರೆ ಆಗಿಬಿಡುತ್ತಿತ್ತು. ಶನಿವಾರ-ಭಾನುವಾರಗಳಂದು ಆಫೀಸಿನ ಗೆಳೆಯರೊಂದಿಗೆ ವೀಕೆಂಡ್ ಪಾರ್ಟಿಗೆಂದು ಆತ ಹಾರಿಬಿಡುತ್ತಿದ್ದ. ಆ ಎರಡು ದಿನಗಳಲ್ಲಿ ಆತ ಮನೆ ತಲುಪುತ್ತಿದ್ದುದು ರಾತ್ರಿ ಹನ್ನೊಂದು, ಹನ್ನೊಂದೂವರೆಗೆ!

ಬೆಳಗ್ಗೆ ಒಂಭತ್ತು ಗಂಟೆಗೆಲ್ಲ ಗಂಡ-ಮಗಳು ಮನೆಯಿಂದ ಹೊರಟುಬಿಡುತ್ತಿದ್ದರು. ಆನಂತರ ಇಡೀ ದಿನ ಮನೇಲಿ ನಾನೊಬ್ಬಳೇ ಎನ್ನಿಸಿದಾಗ ಭಾರತಿಗೆ ಬೋರ್ ಎನ್ನಿಸತೊಡಗಿತು. ಅವಳಾದರೂ ಇಂಗ್ಲಿಷಿನಲ್ಲಿ ಎಂ.ಎ. ಮಾಡಿಕೊಂಡಿದ್ದವಳು. ಇಡೀ ದಿನ ಮನೇಲಿರುವ ಬದಲು ಯಾವುದಾದರೂ ಸ್ಕೂಲ್‌ನಲ್ಲಿ ಟೀಚರ್ ಆಗಿ ಸೇರಬಾರದೇಕೆ ಅಂದುಕೊಂಡಳು. ಅವಳ ಅದೃಷ್ಟಕ್ಕೆ, ಅದೇ ವೇಳೆಗೆ ಸ್ನೇಹಾ ಓದುತ್ತಿದ್ದ ಶಾಲೆಯಲ್ಲಿ ಶಿಕ್ಷಕಿಯರ ಕೊರತೆ ಇದೆ ಎಂಬ ವಿಷಯವೂ ಗೊತ್ತಾಯಿತು. ಒಮ್ಮೆ ಪ್ರಯತ್ನಿಸಿ ನೋಡೋಣ. ಕೆಲಸ ಸಿಕ್ಕಿಬಿಟ್ಟರೆ ಹೋಗೋದು. ಇಲ್ಲವಾದರೆ, ಒಂದು ಸಂದರ್ಶನ ಎದುರಿಸಿದ ಅನುಭವವಂತೂ ಆಗುತ್ತದೆ ಎಂದುಕೊಂಡು ಅರ್ಜಿ ಹಾಕಿಯೇಬಿಟ್ಟಳು ಭಾರತಿ. ಹದಿನೈದೇ ದಿನಗಳಲ್ಲಿ ಆ ಕಡೆಯಿಂದ ಉತ್ತರ ಬಂತು : ಸಹ ಶಿಕ್ಷಕಿಯಾಗಿ ನಿಮ್ಮನ್ನು ನೌಕರಿಗೆ ತೆಗೆದುಕೊಳ್ಳಲಾಗಿದೆ. ಅಭಿನಂದನೆ...'

ಹೆಂಡತಿ ಕೆಲಸಕ್ಕೆ ಹೊರಟು ನಿಂತಾಗ ಹರೀಶ ಎಗರಾಡಿದ. ತಕ್ಷಣವೇ ಭಾರತಿ ಹೇಳಿದಳು : ಯೋಚನೆ ಮಾಡಿ ಹರೀ. ಬೆಳಗ್ಗಿಂದ ಸಂಜೆಯ ತನಕ ಮನೇಲಿ ನಾನೊಬ್ಳೇ ಇರಬೇಕು. ಅದರ ಬದಲು ಟೀಚರ್ ಆಗಿ ಕೆಲಸ ಮಾಡಿದ್ರೆ ತಪ್ಪೇನು? ನಾನು ಹೋಗ್ತಿರೋದು ಮಗು ಓದ್ತಾ ಇರೋ ಸ್ಕೂಲೇ ತಾನೆ? ಇದರಿಂದ ಅವಳಿಗೂ ಒಂದು ಕಂಫರ್ಟ್ ಸಿಕ್ಕ ಹಾಗಾಯ್ತು. ಇನ್ನು ಮುಂದೆ ಪ್ರತಿ ತಿಂಗಳೂ ನಾನೂ ಒಂದಿಷ್ಟು ದುಡ್ಡು ಉಳಿಸ್ತೀನಿ. ಒಂದೈದು ವರ್ಷ ನಾವಿಬ್ರೂ ಕಷ್ಟಪಟ್ಟು ಎಷ್ಟು ಸಾಧ್ಯವೋ ಅಷ್ಟು ಉಳಿಸೋಣ. ಎಲ್ಲವನ್ನೂ ಮರೆತು ದುಡಿಯೋಣ. ಹಾಗೆ ಮಾಡಿದ್ರೆ ಆರನೇ ವರ್ಷದ ಹೊತ್ತಿಗೆ ನಾವೂ ಒಂದು ಸ್ವಂತ ಮನೆ ಮಾಡ್ಕೋಬಹುದೋ ಏನೋ...

ಹೆಂಡತಿಯ ಕಡೆ ಕಡೆಯ ಮಾತುಗಳು ಹರೀಶನಿಗೆ ತುಂಬ ಇಷ್ಟವಾದವು. ತಿಂಗಳು ತಿಂಗಳೂ ನಾನೂ ಒಂದಿಷ್ಟು ದುಡ್ಡು ಉಳಿಸ್ತೀನಿ ಅಂದಳಲ್ಲ? ಅದೊಂದೇ ಕಾರಣದಿಂದ ಅವಳನ್ನು ಕೆಲಸಕ್ಕೆ ಕಳುಹಿಸಲು ಒಪ್ಪಿಕೊಂಡ.

***

ಕಾಣದ ದೇವರೇ. ನಾನು ನಿನ್ನಲ್ಲೊಂದು ವಿಚಿತ್ರವಾದ ಬೇಡಿಕೆ ಇಡ್ತಾ ಇದೀನಿ. ಏನ್ ಗೊತ್ತಾ?
ಮಿಸ್ ಭಾರತೀ, ಬನ್ನಿ ಕೂತ್ಕೊಳ್ಳಿ. ನಿಮ್ಗೆ ಒಂದಿಷ್ಟು ಹೆಚ್ಚುವರಿ ಕೆಲ್ಸ ಕೊಡ್ತಾ ಇದೀನಿ. ಐದನೇ ತರಗತಿಗೆ ಕನ್ನಡ ತಗೋತಾರಲ್ಲ? ಅವರಿಗೆ ಚಿಕೂನ್‌ಗುನ್ಯಾ ಅಂತೆ. ಹಾಗಾಗಿ ಅವರು ಒಂದು ವಾರ ರಜೇಲಿದ್ದಾರೆ. ಹೇಗಿದ್ರೂ ನಿಮ್ದು ಎಂ.ಎ. ಇಂಗ್ಲಿಷ್ ತಾನೆ? ಹಾಗಾಗಿ ಒಂದು ವಾರದ ಮಟ್ಟಿಗೆ ಕನ್ನಡ ಪಾಠ ಮಾಡೋದು ನಿಮ್ಗೆ ಕಷ್ಟ ಆಗೋದಿಲ್ಲ ಅನ್ಕೋತೀನಿ. ಈಗ ಮೊದಲು ಒಂದು ಕೆಲ್ಸ ಮಾಡಿ. ಮಂತ್ಲೀ ಟೆಸ್ಟ್‌ದು ಆನ್ಸರ್ ಶೀಟ್‌ಗಳಿವೆ ಇಲ್ಲಿ. ಅದನ್ನು ಚೆಕ್ ಮಾಡಿ, ಮಾರ್ಕ್ಸ್ ಕೊಡಿ. ಈ ವಾರದ ಕೊನೆಯಲ್ಲಿ ಪೇರೆಂಟ್-ಟೀಚರ್ ಮೀಟಿಂಗ್ ಇರೋದ್ರಿಂದ ಈ ಕೆಲಸ ಅರ್ಜೆಂಟಾಗಿ ಆಗಲೇಬೇಕು. ನನಗೆ ನಿಮ್ಮ ಬಗ್ಗೆ, ನಿಮ್ಮ ಕೆಲಸದ ಬಗ್ಗೆ ನಂಬಿಕೆಯಿದೆ. ಈ ಉತ್ತರ ಪತ್ರಿಕೆಗಳನ್ನು ಮನೆಗೇ ತಗೊಂಡು ಹೋಗಿ ವ್ಯಾಲ್ಯುಯೇಷನ್ ಮಾಡ್ಕೊಂಡು ಬನ್ನಿ ಪರ್ವಾಗಿಲ್ಲ...' ಹೆಡ್‌ಮೇಡಂ ಹೀಗೆ ಹೇಳಿದಾಗ ಸರಿ ಮೇಡಂ' ಎಂದಷ್ಟೇ ಹೇಳಿ ಸಮ್ಮತಿಸಿದಳು ಭಾರತಿ.

ಕೆಲಸಕ್ಕೆ ಸೇರಿಕೊಂಡ ನಾಲ್ಕೇ ತಿಂಗಳಲ್ಲಿ ಹೀಗೊಂದು ಹೊಸ ಜವಾಬ್ದಾರಿ ಹೆಗಲೇರಿದ್ದು ಕಂಡು ಭಾರತಿಗೆ ಖುಷಿಯಾಗಿತ್ತು. ಉತ್ತರ ಪತ್ರಿಕೆಗಳನ್ನು ಬಂಡಲ್ ಥರಾ ಕಟ್ಟಿಕೊಂಡು ಬ್ಯಾಗ್‌ನೊಳಗೆ ಇಟ್ಟುಕೊಂಡಳು. ಹೊಸದಾಗಿ ಸೇರಿದ್ದ ಕೆಲಸ ತಾನೆ? ಹಾಗಾಗಿಯೇ, ಪ್ರಶ್ನೆಗಳು ಹೇಗಿವೆ ಎಂಬುದನ್ನು ಇಲ್ಲಿಯೇ ನೋಡಿಬಿಡೋಣ ಎಂಬ ಕುತೂಹಲ ಅವಳದು. ಈ ಕಾರಣದಿಂದಲೇ ಒಮ್ಮೆ ಪ್ರಶ್ನೆ ಪತ್ರಿಕೆಯತ್ತ ಕಣ್ಣು ಹಾಯಿಸಿದಳು ಭಾರತಿ. ಅಲ್ಲಿದ್ದ ಒಂದು ಪ್ರಶ್ನೆ ಅವಳಿಗೆ ಬಹಳ ಇಷ್ಟವಾಯಿತು : ದೇವರಲ್ಲಿ ನನ್ನ ಬೇಡಿಕೆ' ಎಂಬ ವಿಷಯವಾಗಿ ಪ್ರಬಂಧ ಬರೆಯಿರಿ ಎಂಬುದೇ ಆ ಪ್ರಶ್ನೆ. ಇದಕ್ಕೆ ಉತ್ತರವಾಗಿ ಮಕ್ಕಳು ಏನೇನು ಬರೆದಿರಬಹುದೋ ನೋಡೋಣ ಎಂದುಕೊಂಡೇ ಮನೆ ತಲುಪಿದಳು ಭಾರತಿ.

ಒಂದೆರಡು ಸೀರಿಯಲ್ ನೋಡಿಕೊಂಡೇ ಅಡುಗೆ ಕೆಲಸ ಮುಗಿಸುವುದರೊಳಗೆ ಒಂಭತ್ತೂವರೆ ಆಗಿಹೋಯಿತು. ಮಗಳು ಆಗಲೇ ತೂಕಡಿಸುತ್ತಿದ್ದಳು. ಅವಳಿಗೆ ಊಟ ಮಾಡಿಸಿ ಮಲಗಿಸಿ ಉತ್ತರ ಪತ್ರಿಕೆಗಳ ಮುಂದೆ ಕೂತಳು ಭಾರತಿ. ಅದೇ ಸಂದರ್ಭಕ್ಕೆ ಹರೀಶನೂ ಬಂದ. ಅವನಿಗೆ ಸಂಕ್ಷಿಪ್ತವಾಗಿ ವಿಷಯ ತಿಳಿಸಿದಳು. ಸರಿ ಬಿಡು. ನಾನೇ ಹಾಕ್ಕೊಂಡು ಊಟ ಮಾಡ್ತೇನೆ. ನೀನು ಕೆಲ್ಸ ಮುಗಿಸು' ಎಂದ ಹರೀಶ.

ಮೊದಲ ಆರು ಉತ್ತರ ಪತ್ರಿಕೆಗಳಲ್ಲಿ ಅಂಥ ವಿಶೇಷವೇನೂ ಕಾಣಿಸಲಿಲ್ಲ. ಆದರೆ, ಏಳನೇ ಉತ್ತರ ಪತ್ರಿಕೆ ತಗೊಂಡಳಲ್ಲ, ಆ ನಂತರದಲ್ಲಿ ಅವಳು ಒಂದರ್ಥದಲ್ಲಿ ಮೈಮರೆತಳು. ಒಂದೊಂದೇ ಸಾಲು ಓದುತ್ತಾ ಹೋದಂತೆ ಅವಳ ಮುಖ ಕಳೆಗುಂದಿತು. ಕಂಗಳಲ್ಲಿ ನೀರು ತುಂಬಿಕೊಂಡಿತು. ಒಂದೆರಡು ಹನಿಗಳು ಪೈಪೋಟಿಗೆ ಬಿದ್ದಂತೆ ಕೆನ್ನೆ ಮೇಲಿಂದ ಜಾರಿ ಉತ್ತರ ಪತ್ರಿಕೆಯ ಮೇಲೆ ಬಿದ್ದು ಟಪ್ ಟಪ್ ಎಂದು ಸದ್ದು ಮಾಡಿದವು. ಹೆಂಡತಿಯ ಈ ವರ್ತನೆಯಿಂದ ಹರೀಶ ಪೆಚ್ಚಾದ. ಸರಸರನೆ ಊಟ ಮುಗಿಸಿ, ಕೈ ತೊಳೆದು ಬಂದವನೇ- ಯಾಕೇ ಭಾರ್‍ತಿ, ಏನಾಯ್ತು? ಯಾಕೆ ಅಳ್ತಾ ಇದೀಯ? ಪೇಪರ್ ನೋಡಿ ನೋಡಿ ಕಣ್ಣು ಉರಿಬಂತಾ?' ಎಂದು ವಿಚಾರಿಸಿದ.

ಅವನ ಮಾತು ಕೇಳಿಸಲೇ ಇಲ್ಲ ಎಂಬಂತೆ- ಒಂದು ಮಗು ಬರೆದಿರೋ ಪ್ರಬಂಧ ಇದು. ಓದಿ' ಎಂದಳು ಭಾರತಿ. ಆ ಪ್ರಬಂಧದಲ್ಲಿ ಆ ಮಗುವಿನ ಮಾತು ಹೀಗಿತ್ತು : ಕಾಣದ ದೇವರೇ, ನಿನಗೆ ನಮಸ್ಕಾರ. ನಾನು ನಿನ್ನಲ್ಲೊಂದು ವಿಚಿತ್ರವಾದ ಬೇಡಿಕೆ ಇಡ್ತಾ ಇದೀನಿ. ಏನ್ ಗೊತ್ತಾ? ದಯವಿಟ್ಟು ನನ್ನನ್ನು ಒಂದು ಟಿವಿಯನ್ನಾಗಿ ಮಾಡಿಬಿಡು! ಪ್ಲೀಸ್, ನಮ್ಮ ಮನೇಲಿ ಟೀವಿ ಇದೆಯಲ್ಲ? ಆ ಜಾಗದಲ್ಲಿ ನಾನಿರಬೇಕು. ನಮ್ಮ ಮನೇಲಿ ಟಿವಿಗೆ ಅಂತ ಒಂದು ಜಾಗ ಇದೆ. ಅದೇ ಥರ ನನಗೂ ಒಂದು ಜಾಗ ಕೊಡು ದೇವ್ರೇ, ಪ್ಲೀಸ್... ನಮ್ಮ ಮನೇಲಿರೋದು ಮೂರೇ ಜನ. ನಾನು, ಪಪ್ಪ, ಮಮ್ಮಿ... ಪಪ್ಪ ಬೆಳಗ್ಗೇನೆ ಕೆಲಸಕ್ಕೆ ಹೋಗಿಬಿಡ್ತಾರೆ. ಅಮ್ಮನೂ ಅಷ್ಟೆ. ನಾನು ಸಂಜೆ ಸ್ಕೂಲಿಂದ ಬರ್‍ತೀನಲ್ಲ? ಬಂದ ತಕ್ಷಣ- ಹೋಂವರ್ಕ್ ಎಲ್ಲಾ ಮುಗಿಸೇ' ಅಂತಾರೆ ಅಮ್ಮ. ಎಲ್ಲಾ ಮುಗಿಸಿ, ಆಸೆಯಿಂದ ಓಡಿ ಹೋಗಿ ಕುತ್ತಿಗೇಗೆ ಜೋತುಬಿದ್ರೆ ಅಯ್ಯೋ, ದನ ಬಿದ್ದ ಹಾಗೆ ಮೇಲೆ ಬೀಳ್ತೀಯಲ್ಲೆ? ಅಲ್ಲೇ ನಿಂತ್ಕೊಂಡು ಮಾತಾಡು. ಯಾಕೆ ಹಾಗೆ ಮೈಮೇಲೆ ಬೀಳ್ತೀಯ. ನೀನೇನು ಎಳೇ ಮಗುವಾ?' ಅಂತಾರೆ. ಯಾವತ್ತಾದ್ರೂ ಒಂದು ದಿನ ಅಮ್ಮಾ, ಸ್ವಲ್ಪ ತಲೆ ನೋಯ್ತಿದೆ' ಅಂದರೆ- ಓದಬೇಕಾಗ್ತದೆ ಅಂತ ನಾಟಕ ಆಡ್ತಾ ಇದೀಯ' ಅಂತ ರೇಗ್ತಾರೆ. ಸ್ಕೂಲಲ್ಲಿ ನಿನಗಿಂತ ಚೆನ್ನಾಗಿ ಓದೋರು ಎಂಟು ಜನ ಇದ್ದಾರಂತೆ. ಅವರನ್ನೆಲ್ಲ ಹಿಂದೆ ಹಾಕ್ತೀಯ ನೋಡು, ಅವತ್ತು ನನ್ನ ಹತ್ರ ಬಂದು ಎಷ್ಟು ಬೇಕೋ ಅಷ್ಟು ಮಾತಾಡು, ಮುದ್ದು ಮಾಡು' ಅಂತಾರೆ. ಯಾವಾಗಲಾದ್ರೂ ಒಂದೈದು ದಿನ ಜ್ವರ ಬಂದು ಮಲಗಿಬಿಟ್ರೆ; ಶೀತ ಆಗಿ ಕೆಮ್ಮು ಶುರುವಾದ್ರೆ- ಆವಾಗವಾಗ ಏನಾದ್ರೂ ಒಂದು ಕಾಯ್ಲೆ ಇದ್ದೇ ಇರ್‍ತದಲ್ಲ ನಿಂಗೆ? ನಮ್ಗೆ ಒಳ್ಳೇ ಪ್ರಾಣ ಸಂಕಟ. ಇದೆಲ್ಲ ಯಾವ ಜನ್ಮದ ಕರ್ಮಾನೋ...' ಅಂದು ರೇಗಿಬಿಡ್ತಾರೆ...

ಈಗ ಅಪ್ಪನ ವಿಷ್ಯಕ್ಕೆ ಬರ್‍ತೀನಿ. ಬೆಳಗ್ಗೆ ನಾನು ಪೇಸ್ಟ್ ಮಾಡಿ ಬೋರ್ನ್ ವಿಟಾ ಕುಡಿಯೋ ಹೊತ್ತಿಗೆ ಅಪ್ಪ ರೆಡಿಯಾಗಿರ್‍ತಾರೆ. ಲ್ಯಾಪ್‌ಟಾಪಲ್ಲಿ ಮುಳುಗಿಹೋಗಿರ್‍ತಾರೆ. ಅವರದು ಯಾವಾಗ್ಲೂ ಗಡಿಬಿಡೀನೆ. ಅಪ್ಪನ ಜತೆ ಆಟ ಆಡಬೇಕು, ಅವರ ಹತ್ರ ಕತೆ ಹೇಳಿಸ್ಕೋಬೇಕು. ಲೆಕ್ಕ ಹೇಳಿಸ್ಕೋಬೇಕು ಅಂತೆಲ್ಲ ತುಂಬಾ ಆಸೆ ನಂಗೆ. ಆದ್ರೆ ಅದಕ್ಕೆಲ್ಲ ಅವಕಾಶಾನೇ ಇಲ್ಲ. ಅಪ್ಪ, ಒಂದ್ಸಲಾನೂ ನನ್ನ ನೋಟ್ಸ್ ನೋಡಿಲ್ಲ. ರಾತ್ರಿ ಆಪ್ಪನ ಹತ್ರ ಹೋದ್ರೆ ಸಾಕು- ನಂಗೆ ಸುಸ್ತಾಗಿದೆ. ತಲೆ ಸಿಡೀತಾ ಇದೆ. ನೀನು ಮತ್ತೆ ತಲೆ ಕೆಡಿಸಬೇಡಿ. ಏನಿದ್ರು ಅಮ್ಮಂಗೆ ಹೇಳು. ಈಗ ಮಲ್ಕೋ ಹೋಗು' ಎಂದು ಗದರಿಸಿಬಿಡ್ತಾರೆ ಪಪ್ಪ. ಅದಕ್ಕೇ ನನ್ನನ್ನು ಟಿವಿಯನ್ನಾಗಿ ಮಾಡಿಬಿಡು, ಪ್ಲೀಸ್.

ಯಾಕೆ ಗೊತ್ತ? ಎಷ್ಟೇ ಸುಸ್ತಾಗಿದ್ರೂ, ಜ್ವರ ಬಂದಿದ್ರೂ ಕೂಡ ಅಪ್ಪ, ಮನೆಗೆ ಬಂದ ತಕ್ಷಣ ಟಿವಿ ಹಾಕ್ತಾರೆ. ಆನಂತರ ಟಿವಿ ನೋಡ್ತಾ ನೋಡ್ತಾ ತಮ್ಮಷ್ಟಕ್ಕೆ ತಾವೇ ನಗ್ತಾರೆ, ಮಾತಾಡ್ತಾರೆ. ಹಾಡು ಹೇಳ್ತಾರೆ. ಮಧ್ಯೆ ಮಧ್ಯೆ ನಮ್ಮ ಟೀವಿ ಎಷ್ಟೊಂದು ಚೆನ್ನಾಗಿ ಬರ್‍ತಿದೆ ಅಲ್ವಾ? ಅನ್ನುತ್ತಾರೆ. ಅದನ್ನು ದಿನಕ್ಕೆ ಎರಡು ಬಾರಿ ಒರೆಸ್ತಾರೆ. ಒಂದು ವೇಳೆ ಅದು ಕೆಟ್ಟು ಹೋದ್ರೆ ಐದಾರು ಜನಕ್ಕೆ ಫೋನ್ ಮಾಡಿ ತಕ್ಷಣವೇ ರಿಪೇರಿ ಮಾಡಿಸ್ತಾರೆ. ಆನಂತರ ಮತ್ತೆ ಟಿವಿ ಹಾಕ್ಕೊಂಡು ತಮ್ಮಷ್ಟಕ್ಕೆ ತಾವೇ ಮಾತಾಡ್ತಾ, ಹಾಡು ಕೇಳ್ತಾ ಉಳಿದುಬಿಡ್ತಾರೆ... ಅಮ್ಮ ಕೂಡ ಅಷ್ಟೆ. ಪಾತ್ರೆ ತೊಳೆಯುವಾಗ, ಅಡುಗೆ ಮಾಡುವಾಗ, ಕಸ ಗುಡಿಸುವಾಗ, ಫೋನ್ ಮಾಡುವಾಗ ಕೂಡ ಅವಳ ಕಣ್ಣು ಟಿವಿ ಕಡೆಗೇ ಇರ್‍ತದೆ. ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ- ಟೀವಿ ಜತೆ ಅಪ್ಪನಿಗಿದೆಯಲ್ಲ? ಅದಕ್ಕಿಂತ ಹೆಚ್ಚಿನ ಅಟ್ಯಾಚ್‌ಮೆಂಟ್ ಅಮ್ಮನಿಗಿದೆ!

ಅದಕ್ಕೆ ದೇವ್ರೇ, ಪ್ಲೀಸ್, ನನ್ನನ್ನು ಟಿವಿಯನ್ನಾಗಿ ಮಾಡಿಬಿಡು. ನಮ್ಮ ಅಪ್ಪ-ಅಮ್ಮ, ಇಬ್ರೂ ಸಂತೋಷ-ಬೇಸರದ ಸಂದರ್ಭದಲ್ಲೆಲ್ಲ ನನ್ನ ಮುಂದೇನೇ ಕೂತಿರ್ಬೇಕು. ನನ್ನ ಮಾತನ್ನು ಅವರು ಆಸಕ್ತಿಯಿಂದ ಕೇಳಬೇಕು. ನಾನು ಈ ಮನೆಯ ಆಸಕ್ತಿಯ ಕೇಂದ್ರಬಿಂದು ಆಗಬೇಕು. ಆಮೇಲೆ ನಮ್ಮ ಮನೆಯ ಜನ ಪ್ರಶ್ನೆ ಮಾಡದೆ, ಅಡ್ಡಿ ಮಾಡದೆ, ರೇಗದೆ ನನ್ನ ಮಾತು ಕೇಳಿಸ್ಕೋಬೇಕು. ಟಿವಿ ಕೆಟ್ಟು ಹೋದಾಗ ಅದನ್ನು ಎಷ್ಟು ಜೋಪಾನ ಮಾಡ್ತಾರೋ ಅಷ್ಟೇ ಕಾಳಜಿಯನ್ನು ನನ್ನ ವಿಷಯದಲ್ಲೂ ತಗೋಬೇಕು. ಅಮ್ಮ, ತನ್ನ ನೋವನ್ನೆಲ್ಲ ಮರೆಯೋದಕ್ಕೆ ನನ್ನನ್ನು ಉಪಯೋಗಿಸಬೇಕು. ನನ್ನ ಜತೇಲಿರೋದಕ್ಕೋಸ್ಕರ ಎಲ್ರೂ ತಮ್ಮ ಕೆಲಸ ಮರೆತು ಬರ್‍ತಾರೆ ಅಂತ ನಂಗೆ ಅನ್ನಿಸಬೇಕು. ಎಲ್ಲರೂ ನನ್ನ ಮಾತಿಂದ, ಹಾಡಿಂದ, ಆಟದಿಂದ ಖುಷಿ ಪಡಬೇಕು. ಹೌದು ದೇವ್ರೆ, ಇದಿಷ್ಟೂ ನನ್ನ ಪ್ರೀತಿಯ ಕೋರಿಕೆ. ಪ್ಲೀಸ್, ನನ್ನನ್ನು ಒಂದು ಟಿವಿಯನ್ನಾಗಿ ಮಾಡಿಬಿಡು. ನಾನಿರಬೇಕಾದ ಜಾಗದಲ್ಲಿ ಈಗ ಟಿವಿ ಇದೆ...'

***
ಇದಿಷ್ಟನ್ನೂ ಓದಿ ಮುಗಿಸಿದ ಹರೀಶ- ಛೀ, ಈ ಮಗುವಿನ ಪೇರೆಂಟ್ಸ್ ಎಷ್ಟೊಂದು ಕ್ರೂರಿಗಳು ಅಲ್ವಾ? ಇರೋ ಒಂದು ಮಗೂನ ಸರಿಯಾಗಿ ನೋಡಿಕೊಳ್ದೇ ಇರೋರು...' ಎಂದ. ಭಾರತಿ, ಗಂಡನನ್ನೇ ಅನುಕಂಪದಿಂದ ನೋಡುತ್ತ ಸಂಕಟದಿಂದ ಹೇಳಿದಳು : ಈ ಪ್ರಬಂಧ ಬರೆದಿರೋದು ನಮ್ಮ ಮಗಳು ಕಣ್ರೀ...'

***
ಕೆಲಸ, ಸಂಪಾದನೆ, ಪ್ರೊಮೋಷನ್, ಪಾರ್ಟಿ... ಇತ್ಯಾದಿ ಗದ್ದಲದಲ್ಲಿ ಮುಳುಗಿ ಹೋಗಿ ಮಕ್ಕಳನ್ನು ಸುಖ-ದುಃಖ ವಿಚಾರಿಸಲು ಮರೆತ ಎಲ್ಲ ಪೋಷಕರಿಗೆ ಪ್ರೀತಿಯಿಂದ - ಈ ಬರಹ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X