ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನತದೃಷ್ಟ ನಾಯಕನ ಉಭಯ ಕುಶಲೋಪರಿ

By * ಎ.ಆರ್. ಮಣಿಕಾಂತ್
|
Google Oneindia Kannada News

ಅವನು ಕರ್ಣ. ಆತ ಕುಂತಿಯ ಮೊದಲ ಮಗ. ಪಾಂಡವರ ಹಿರಿಯಣ್ಣ. ಪರಶುರಾಮರ ಮೆಚ್ಚಿನ ಶಿಷ್ಯ. ದುರ್ಯೋಧನನ ಆಪ್ತಮಿತ್ರ. ಅರ್ಜುನನ ಪರಮಶತ್ರು. ಅವನು, ಭೀಷ್ಮರ ಕಣ್ಣಲ್ಲಿ ಸಿಡಿಮಿಡಿ ಉಂಟುಮಾಡುವ ಆಸಾಮಿ. ಭೀಮನ ಪಾಲಿಗೊಂದು ಅಸೂಯೆ. ಕರ್ಣನೆಂದರೆ ಅಷ್ಟೇ ಅಲ್ಲ.

ಆತ, ದ್ರೌಪದಿಯಂಥ ದ್ರೌಪದಿಯ ಎದೆಯಲ್ಲೂ ಆಸೆಯ ತರಂಗ ಎಬ್ಬಿಸಿದ ಸುಂದರಾಂಗ. ಕೊಡುಗೈ ದೊರೆ. ಅಂಗರಾಜ, ಹುಟ್ಟಿನಿಂದ ಕ್ಷತ್ರಿಯನಾಗಿದ್ದರೂ, ಎಲ್ಲರಿಂದಲೂ ಸೂತಪುತ್ರ ಎಂದು ಕರೆಸಿಕೊಂಡ ನತದೃಷ್ಟ ಮತ್ತು ಮಹಾಭಾರತದ ದುರಂತ ನಾಯಕ!

ಕುಂತಿ-ಸೂರ್ಯದೇವನ ಸಮಾಗಮದ ಕಾರಣಕ್ಕೆ ಹುಟ್ಟಿದವನು ಕರ್ಣ. ಮಗನ ಮೇಲಿನ ಮಮತೆಯಿಂದ ಅವನು ಕವಚ ಕುಂಡಲಗಳೊಂದಿಗೇ ಜನಿಸುವಂತೆ ನೋಡಿಕೊಂಡ ಸೂರ್ಯದೇವ. ಮುಂದೆ, ಅಪವಾದಕ್ಕೆ ಹೆದರಿದ ಕುಂತಿ, ಆಗ ತಾನೆ ಹುಟ್ಟಿದ ಮಗುವನ್ನು ನದಿಯಲ್ಲಿ ತೇಲಿ ಬಿಡುವುದು, ಹಾಗೆ ತೇಲಿ ಹೋದ ಮಗು ರಾಧಾ-ಅದಿರಥ ಎಂಬ ಬೆಸ್ತ ದಂಪತಿಗೆ ಸಿಗುವುದು; ಅವರಿಬ್ಬರೂ ಈತನನ್ನು ಸಾಕುವುದು ಮತ್ತು ಅದೇ ಕಾರಣಕ್ಕೆ ಸೂತಪುತ್ರ ಎಂಬ ಹೀಯಾಳಿಕೆಯಂಥ ಮಾತಿಗೆ ಕರ್ಣ ಪದೇಪದೇ ಈಡಾಗುವುದು... ಈ ಕಥೆ ಎಲ್ಲರಿಗೂ ಗೊತ್ತು.


ಅಷ್ಟೇ ಅಲ್ಲ, ಬಿಲ್ವಿದ್ಯೆ ಕಲಿಯಬೇಕೆಂಬ ಮಹದಾಸೆಯಿಂದ ತಾನು ಬ್ರಾಹ್ಮಣ ಕುಮಾರ ಎಂದು ಹೇಳಿಕೊಂಡು ಪರಶುರಾಮರ ಬಳಿ ಹೋಗುವುದು, ವಿದ್ಯೆ ಕಲಿಯುವುದು, ಅವರ ಮೆಚ್ಚಿನ ಶಿಷ್ಯನಾಗುವುದು ಹಾಗೂ ಕಡೆಗೊಮ್ಮೆ ಅನಿವಾರ್ಯ ಸಂದರ್ಭದಲ್ಲಿ ಬಾಣ ಪ್ರಯೋಗದ ಮಂತ್ರವೇ ನೆನಪಿಗೆ ಬಾರದಿರಲಿ' ಎಂಬ ಶಾಪಕ್ಕೆ ಗುರಿಯಾಗುವುದು... ಈ ಕತೆ ಕೂಡ ಎಲ್ಲರಿಗೂ ಗೊತ್ತು.

ಇಷ್ಟೆಲ್ಲ ಆದ ನಂತರವೂ ಮಹಾಭಾರತದ ಕಥೆ ಮುಂದುವರಿಯತ್ತದೆ; ಕನಸಿನಂತೆ, ಕತ್ತಲೆಯಂತೆ! ಕನವರಿಕೆಯಂತೆ; ಕಾಡುವವಳ ಕಣ್ಣಿನ ಮಾದಕ ನೋಟದಂತೆ. ಹುಲಿ-ಸಿಂಹದ ಘರ್ಜನೆಯಂತೆ! ಹೀಗೆ, ಒಂದೊಂದೇ ಹೊಸ ಆಯಾಮದೊಂದಿಗೆ ಕಥೆ ಮುಂದುವರಿದಂತೆಲ್ಲ ಕೌರವ-ಪಾಂಡವರ ಶಕ್ತಿ ಸಾಮರ್ಥ್ಯದ ಪ್ರದರ್ಶನವಾಗುತ್ತದೆ. ಆಗಲೇ ದುರ್ಯೋಧನನ ಕಣ್ಣಿಗೆ ಬೀಳುತ್ತಾನೆ ಕರ್ಣ. ಮೊದಲ ನೋಟದಲ್ಲೇ ಅವರಿಬ್ಬರ ಮನಸುಗಳೂ ಮಾತಾಡಿಕೊಳ್ಳುತ್ತವೆ.

ಮುಂದೆ, ಅರಗಿನ ಮನೆಗೆ ಬೆಂಕಿ ಬೀಳುತ್ತದೆ. ಕರ್ಣನಿಗೆ ಅವಮಾನವೂ, ಅಂಗರಾಜ್ಯದ ಪಟ್ಟವೂ ಏಕಕಾಲಕ್ಕೆ ದೊರೆಯುತ್ತದೆ. ದ್ರೌಪದೀ ಸ್ವಯಂವರವಾಗುತ್ತದೆ. ಪಗಡೆಯಾಟ ನಡೆಯುತ್ತದೆ. ದ್ರೌಪದೀ ವಸ್ತ್ರಾಪಹರಣವಾಗುತ್ತದೆ. ಆಮೇಲೆ ಪಾಂಡವರ ವನವಾಸ - ಅಜ್ಞಾತವಾಸದ ಜತೆಯಲ್ಲಿ ಕೀಚಕ ವಧೆಯೂ ನಡೆಯುತ್ತದೆ.

ಮುಂದೆ, ದುರ್ಯೋಧನನ ಹಠ, ದುಶ್ಯಾಸನನ ಅಟ್ಟಹಾಸ, ಜರಾಸಂಧನ ಪೊಗರು ಮತ್ತು ಶಕುನಿಯ ಕುತಂತ್ರದಿಂದ ಕುರುಕ್ಷೇತ್ರ ಯುದ್ಧ ಶುರುವಾಗಿಯೇ ಬಿಡುತ್ತದೆ. ಮಹಾಭಾರತದ ಕಥೆಯ ಆರಂಭದಿಂದಲೂ ಪಾಂಡವರನ್ನು ಕ್ಷಣಕ್ಷಣವೂ ಕಾಪಾಡುವ ಶ್ರೀಕೃಷ್ಣ, ಶಿಖಂಡಿಯನ್ನು ಮುಂದೆ ಬಿಟ್ಟು ಭೀಷ್ಮನನ್ನು ನಿವಾರಿಸಿಕೊಳ್ಳುತ್ತಾನೆ. ಧರ್ಮರಾಯನಿಂದ ಒಂದು ಸುಳ್ಳು ಹೇಳಿಸಿ, ದ್ರೋಣಾಚಾರ್ಯರನ್ನು ವೈಕುಂಠಕ್ಕೆ' ಕಳಿಸುತ್ತಾನೆ. ಆಗ ಯುದ್ಧ ರಂಗಕ್ಕೆ ಬರುತ್ತಾನೆ ಮಹಾರಥಿ ಕರ್ಣ!

***
'ಯುದ್ಧರಂಗದಲ್ಲಿ ಕರ್ಣ' ಎಂಬ ಮಾತು ಕೇಳಿಯೇ ಪಾಂಡವರಿಗೆ ಪುಕಪುಕ ಶುರು ವಾಗುತ್ತದೆ. ಕೃಷ್ಣನಂಥ ಕೃಷ್ಣನೂ ಒಂದರೆಕ್ಷಣ ಕಂಗಾಲಾಗುತ್ತಾನೆ. ಕುಂತಿ- ಹಾ ವಿಧಿಯೇ' ಎಂದು ಕಣ್ಣೀರಾಗುತ್ತಾಳೆ. ಆದರೆ ಈ ಕಡೆ ದುರ್ಯೋಧನನ ಮೊಗ ಅರಳಿರುತ್ತದೆ. ನಿಜ ಹೇಳಬೇಕೆಂದರೆ, ಯುದ್ಧ ಗೆಲ್ಲಬಲ್ಲರೆಂಬ ವಿಶ್ವಾಸ ಅವನಿಗೆ ಭೀಷ್ಮ ಹಾಗೂ ದ್ರೋಣರ ಮೇಲೆ ಯಾವತ್ತೂ ಇರಲಿಲ್ಲ. ಆದರೆ ಅಂಥದೊಂದು ನಂಬಿಕೆ ಕರ್ಣನ ವಿಷಯದಲ್ಲಿತ್ತು. ಹಾಗೆಯೇ, ಯುದ್ಧ ಗೆಲ್ಲಬಲ್ಲೆ ಎಂಬ ವಿಶ್ವಾಸ ಕರ್ಣನಿಗೂ ಇತ್ತು.

ಇವನ ದೃಷ್ಟಿಯಲ್ಲಿ ದುರ್ಯೋಧನ ಎಂದರೆ ಕೇವಲ ಕುರು ಸಾರ್ವಭೌಮ, ಧೃತರಾಷ್ಟ್ರನ ಪುತ್ರ, ಹಠಮಾರಿ, ಕ್ರೂರಿ... ಇದೇನೂ ಆಗಿರಲಿಲ್ಲ. ಕರ್ಣನಿಗೆ ಆತ ಜೀವದ ಗೆಳೆಯನಾಗಿದ್ದ. ಅಂತರಂಗದ ಉಸಿರಾಗಿದ್ದ. ಅಮ್ಮನಂಥ ಗೆಳೆಯನಾಗಿದ್ದ. ಆತ್ಮಬಂಧುವಾಗಿದ್ದ. ಇಡೀ ಜಗತ್ತೇ ಹಂಗಿಸಿದ ಕ್ಷಣದಲ್ಲಿ ಅಂಗರಾಜ್ಯದ ಕಿರೀಟ ತೊಡಿಸಿದ ಧೀರನಾಗಿದ್ದ. ಅಂಥ ಗೆಳೆಯನಿಗೆ ಯುದ್ಧ ಗೆದ್ದು ಕೊಡಬೇಕು. ಆ ಮೂಲಕ ಅವನ ಋಣದಿಂದ ಸ್ವಲ್ಪ ಮಟ್ಟಿಗಾದರೂ ಮುಕ್ತನಾಗಬೇಕು. ಜತೆಗೆ, ಲೋಕ ಮೆಚ್ಚುವಂಥ ಬಿಲ್ವಿದ್ಯಾಪ್ರವೀಣ ಕರ್ಣನೇ ಹೊರತು ಅರ್ಜುನನಲ್ಲ ಎಂದು ಜಗತ್ತಿಗೆ ತೋರಿಸಿಕೊಡಬೇಕು ಎಂಬ ಆಸೆಯಿತ್ತು.

ಆದರೆ, ಕರ್ಣನ ಅಷ್ಟೂ ಶೌರ್ಯವನ್ನು, ಉತ್ಸಾಹವನ್ನು ಒಂದೇ ಮಾತಿಂದ ಹೊಡೆದುಹಾಕುತ್ತಾನೆ ಕೃಷ್ಣ. ಮೊದಲು ಕುಂತಿಯನ್ನು ಕಳಿಸುತ್ತಾನೆ. ಆ ಮಹಾಮಾತೆ (?) ಕರ್ಣನ ಮುಂದೆ ನಿಂತು ನೀನೇ ನನ್ನ ಮೊದಲ ಕಂದ ಕಣೋ' ಅನ್ನುತ್ತಾಳೆ. ನೀನು ಯುದ್ಧಕ್ಕೆ ಹೊರಟಿದ್ದೀಯ. ಗೆದ್ದು ಬಾ ಎಂದು ಬಾಯಿ ತಪ್ಪಿ ಕೂಡ ಹೇಳುವುದಿಲ್ಲ. ಬದಲಿಗೆ ಪಾಂಡವರನ್ನು ಕೊಲ್ಲಬೇಡ ಅನ್ನುತ್ತಾಳೆ.

ಅವತ್ತಿನವರೆಗೂ ತನ್ನನ್ನು ಸೂತಪುತ್ರ ಎಂದೇ ತಿಳಿದಿದ್ದ ಕರ್ಣನಿಗೆ ಕುಂತಿಯೇ ತನ್ನ ತಾಯಿ, ಪಾಂಡವರೆಲ್ಲ ತನ್ನ ಸೋದರರು ಎಂದು ಗೊತ್ತಾದಾಗ ಅದೆಂಥ ಯಾತನೆಯಾಯಿತೋ... ಆದರೂ ಆತ ಕುಂತಿಯೊಂದಿಗೆ ನಗುತ್ತಲೇ ಮಾತಾಡುತ್ತಾನೆ. ಉಳಿದ ನಾಲ್ವರು ನನ್ನ ಗುರಿಯಲ್ಲ. ನನ್ನ ಗುರಿಯೇನಿದ್ದರೂ ಅವನೊಬ್ಬನೇ- ಅರ್ಜುನ! ಎನ್ನುತ್ತಾನೆ. ಕರ್ಣನ ವಿಷಯವಾಗಿ ಕುಂತಿಯ ಮನಸ್ಸು ಎಷ್ಟರ ಮಟ್ಟಿಗೆ ಕಲ್ಲಾಗಿತ್ತು ಎಂದರೆ, ಆಕೆ ಆಗ ಕೂಡ- ಮಗನೇ, ನೀನು ಗೆದ್ದು ಬಾ' ಅನ್ನುವುದಿಲ್ಲ. ಬದಲಿಗೆ ತೊಟ್ಟ ಬಾಣವನ್ನು ಮತ್ತೆ ತೊಡಲಾರೆ' ಎಂದು ಭಾಷೆ ಕೊಡು ಅನ್ನುತ್ತಾಳೆ!

ಹೀಗೆ, ಕರುಳಬಳ್ಳಿ ಸಂಬಂಧದ ನೆಪದಲ್ಲಿ ಕರ್ಣನ ಆತ್ಮವಿಶ್ವಾಸವನ್ನೇ ಕೊಂದುಬಿಡುತ್ತಾಳೆ ಕುಂತಿ. ಮಕ್ಕಳನ್ನು ಉಳಿಸಿಕೊಂಡ ಖುಷಿಯಲ್ಲಿ ಆಕೆ ಹಿಂದಿರುಗುತ್ತಾಳೆ. ಆನಂತರದ ಕೆಲವೇ ಕ್ಷಣದಲ್ಲಿ ಅದೇ ಕರ್ಣನ ಮುಂದಕ್ಕೆ ಮಾರುವೇಷ ಧರಿಸಿ (ಥೇಟ್ ಕಳ್ಳನ ಹಾಗೆ) ಬರುತ್ತಾನೆ ಇಂದ್ರ! ಹಾಗೆ ಬಂದವನು ಉಪಾಯವಾಗಿ- 'ಕರ್ಣಾ, ನನಗೆ ನಿನ್ನಲ್ಲಿರುವ ಕವಚ-ಕುಂಡಲಗಳನ್ನು ದಾನವಾಗಿ ಕೊಡು' ಎಂದು ಕೈಯೊಡ್ಡುತ್ತಾನೆ! ಒಂದು ಕಡೆಯಲ್ಲಿ ಇಂದ್ರ, ಇನ್ನೊಂದು ಕಡೆಯಿಂದ ಕುಂತಿ- ಹೀಗೆ ಎರಡು ಕಡೆಯಿಂದಲೂ ಸಂಕಷ್ಟಕ್ಕೆ ಒಳಗಾಗುವ ಕರ್ಣ ಕಡೆಗೊಮ್ಮೆ ನೋವಿನಿಂದ ಹೇಳುತ್ತಾನೆ : ದುರ್ಯೋಧನಾ, ಈಗಲೀಗ ನೀನು ಕೆಟ್ಟೆ!'

ಊಹುಂ, ಇಷ್ಟಕ್ಕೂ ನಿಲ್ಲುವುದಿಲ್ಲ ಮಹಾಭಾರತ. ತಂತ್ರ-ಕುತಂತ್ರ, ದುಗುಡ-ದುಮ್ಮಾನದ ಮಧ್ಯೆಯೇ ಯುದ್ಧ ಮತ್ತೆ ಶುರುವಾಗುತ್ತದೆ. ಮೊದಲು ಕರ್ಣನಿಗೆ ಎದುರಾಗಿ ಧರ್ಮರಾಯ ಬರುತ್ತಾನೆ. ಅವನನ್ನು ಕಂಡಾಕ್ಷಣ ಕರ್ಣನ ಮನಸ್ಸಿಗೆ ಏನೋ ಹರ್ಷ. ಎಂಥದೋ ಸಂತೋಷ. ಯಾಕೋ ಸಂಕಟ. ಒಮ್ಮೆ ಧರ್ಮರಾಯನನ್ನೇ ಪ್ರೀತಿಯಿಂದ ನೋಡುತ್ತಾನೆ ಕರ್ಣ. ಇವನು ನನ್ನ ಸ್ವಂತ ತಮ್ಮ.

ಒಂದು ವೇಳೆ ಪಾಂಡವರ ಜತೆಯಲ್ಲೇ ಬೆಳೆದಿದ್ದರೆ ಇವನನ್ನು ಎತ್ತಿಕೊಂಡು ಆಟ ಆಡಿಸುವ ಸಂತೋಷವೂ ನನ್ನದಾಗಿರುತ್ತಿತ್ತೇನೋ ಎನಿಸುತ್ತದೆ ಮನಸ್ಸಿಗೆ. ಆದರೆ, ಆ ಕಡೆಯಲ್ಲಿ ಧರ್ಮರಾಯನಿಗೆ ಯುದ್ಧ ಗೆಲ್ಲುವ ಸಂಭ್ರಮ. ಆತ ನಿಂತಲ್ಲೇ ಹೂಂಕರಿಸುತ್ತಿರುತ್ತಾನೆ. ಒಂದರ ಹಿಂದೊಂದು ಬಾಣ ಬಿಡುತ್ತಾನೆ. ಆಗಲೂ ಧರ್ಮರಾಯನನ್ನು ಕರುಣೆಯಿಂದಲೇ ನೋಡುವ ಕರ್ಣ, ಅವನಿಗೆ ಪ್ರಜ್ಞೆ ತಪ್ಪುವಂತೆ ಮಾಡುವ ಸಾಮರ್ಥ್ಯದ ಬಾಣವನ್ನಷ್ಟೇ ಪ್ರಯೋಗಿಸುತ್ತಾನೆ. ಆನಂತರದಲ್ಲಿ ಕರ್ಣನ ಮುಂದೆ ಭೀಮ ಬರುತ್ತಾನೆ. ಅದೂ ಹೇಗೆ- ಏನೋ ಸೂತಪುತ್ರಾ... ಏನೋ ಬೆಸ್ತಾ...' ಎಂದುಕೊಂಡೇ ಬರುತ್ತಾನೆ. (ಈ ಸಂದರ್ಭದಲ್ಲಿ ಕರ್ಣನ ಮನಸ್ಸಿಗೆ ಅದೆಂಥ ಸಂಕಟವಾಗಿರಬಹುದೋ ಅಂದಾಜು ಮಾಡಿಕೊಳ್ಳಿ) ಆಗ ಕೂಡ ತಾಳ್ಮೆ ಕಳೆದುಕೊಳ್ಳುವುದಿಲ್ಲ ಕರ್ಣ. ಭೀಮನನ್ನು ಮಾತ್ರವಲ್ಲ; ನಕುಲ-ಸಹದೇವರನ್ನೂ ಕೇವಲ ಗಾಯಗೊಳಿಸಿ, ಪ್ರಜ್ಞೆ ತಪ್ಪುವಂತಷ್ಟೇ ಮಾಡಿ ಅವರ ಜೀವ ಉಳಿಸುತ್ತಾನೆ ಕರ್ಣ. ಆ ಮೂಲಕ ಸೋದರರ ಮೇಲೆ ಹಿರಿಯಣ್ಣಂದಿರಿಗೆ ಇರುವ ಅಂತಃಕರಣ ಎಂಥದು ಎಂಬುದಕ್ಕೆ ಸಾಕ್ಷಿ ಒದಗಿಸುತ್ತಾನೆ.

***
ಮುಂದಿನ ಕಥೆ ಎಲ್ಲರಿಗೂ ಗೊತ್ತಿದೆ. ಕರ್ಣಾರ್ಜುನರ ಮುಖಾಮುಖಿ ಯಾಗುತ್ತದೆ. ಸುಮಾರು ಹದಿನೆಂಟಿಪ್ಪತ್ತು ವರ್ಷಗಳಿಂದಲೂ ಕರ್ಣನ ಮೇಲೆ ಅರ್ಜುನನಿಗೆ ದ್ವೇಷವಿರುತ್ತದೆ. ಅವನನ್ನು ಸೋಲಿಸಬೇಕೆಂಬ ಆಸೆಯಿರುತ್ತದೆ. ಅಂಥ ಕಡುವಿರೋಧಿ ಈಗ ಕಣ್ಣೆದುರೇ ಇದ್ದರೂ, ಅವನ ಮೇಲೆ ಬಾಣ ಪ್ರಯೋಗಿಸಲು ಅರ್ಜುನನಿಗೆ ಮನಸ್ಸೇ ಬರುವುದಿಲ್ಲ. ಮನದ ಯಾವುದೋ ಮೂಲೆಯಲ್ಲಿ ಕರ್ಣನ ಮೇಲೆ ಪ್ರೀತಿ ಚಿಗುರೊಡೆದಿರುತ್ತದೆ. ಕಣ್ಣು-ಕರುಳು ಮಾತಾಡುತ್ತಿರುತ್ತವೆ.

ಈ ಸಂದರ್ಭದಲ್ಲಿ ಅರ್ಜುನನೇ ಪುಣ್ಯವಂತ. ಆತ, ಮನದ ಅಷ್ಟೂ ತಳಮಳವನ್ನು ಕೃಷ್ಣನೊಂದಿಗೆ ಹೇಳಿಕೊಳ್ಳುತ್ತಾನೆ. ಕೃಷ್ಣಾ, ನಿಜ ಹೇಳು. ಯಾರಿವನು ಕರ್ಣ?' ಎಂದು ಪದೇಪದೆ ಪ್ರಶ್ನೆ ಹಾಕುತ್ತಾನೆ. ಉಹುಂ, ಕೃಷ್ಣ ಪರಮಾತ್ಮ ಆಗಲೂ ಗುಟ್ಟು ಬಿಡುವುದಿಲ್ಲ! ಬದಲಿಗೆ, ಕಪಟ ಉತ್ತರದಿಂದಲೇ ಅರ್ಜುನನನ್ನು ದಾರಿ ತಪ್ಪಿಸಿಬಿಡುತ್ತಾನೆ.

ಪಾಪದವನು ಕರ್ಣ! ಬದುಕಿನ ಕಡೆಯ ಕ್ಷಣದಲ್ಲಾದರೂ ತನ್ನ ಮನದೊಳಗಿನ ನೋವು, ತಳಮಳವನ್ನು ಯಾರೊಂದಿಗೂ ಹೇಳಿಕೊಳ್ಳುವ ಯೋಗ ಅವನಿಗಿರುವುದಿಲ್ಲ. ಎಲ್ಲ ಸಂಕಟವನ್ನೂ ಎದೆಯೊಳಗೇ ಹಿಂಗಿಸಿಕೊಂಡು; ತಮ್ಮನೆಂಬ ಮಮಕಾರವನ್ನು ಅಂಗೈಲಿ ಬೆಚ್ಚಗೆ ಹಿಡಿದುಕೊಂಡು ಕೃಷ್ಣನಿಗೆ ಮನದಲ್ಲೇ ಕೈಮುಗಿದು ಸರ್ಪಾಸ್ತ್ರ ಪ್ರಯೋಗಿಸುತ್ತಾನೆ ಕರ್ಣ.

ತನ್ನ ಬಾಣದ ಗುರಿ ತಪ್ಪುವುದಿಲ್ಲ ಎಂಬ ನಂಬಿಕೆ, ಕೃಷ್ಣನ ತಂತ್ರದಿಂದ ಸುಳ್ಳಾಗಿ ಹೋಗುತ್ತದೆ. ಆದರೆ ಆ ಸರ್ಪಾಸ್ತ್ರ ರೊಯ್ಯನೆ ಹಿಂದಿರುಗಿ ಬಂದು ಹೇಳುತ್ತದೆ : ಕರ್ಣಾ, ಕೃಷ್ಣನ ತಂತ್ರದಿಂದ ಗುರಿ ತಪ್ಪಿದೆ. ದಯವಿಟ್ಟು ನನ್ನನ್ನು ಮತ್ತೆ ಪ್ರಯೋಗಿಸು. ಈ ಬಾರಿ ಅರ್ಜುನ ಪಾತಾಳಕ್ಕೆ ಹೋದರೂ ಬಿಡುವುದಿಲ್ಲ. ಅವನ ರಕ್ಷಣೆಗೆ ಕೃಷ್ಣನೇನಾದರೂ ಬಂದರೆ ಅವನನ್ನೂ ಬಿಡುವುದಿಲ್ಲ ...'

ಕರ್ಣನಿಗೆ ಈ ಹಿಂದೆ ತಾನು ನೀಡಿದ ಭಾಷೆಯ ನೆನಪಾಗುತ್ತದೆ. ಯುದ್ಧ ಗೆಲ್ಲುವ ಆಸೆಯಿಂದ ಧರ್ಮರಾಯನಂತೆ ಸುಳ್ಳು ಹೇಳಲು, ಕೃಷ್ಣನಂತೆ ಮೋಸ ಮಾಡಲು ಅವನು ಮುಂದಾಗುವುದಿಲ್ಲ. ಬದಲಿಗೆ, ಮಾತು ಉಳಿಸಿಕೊಂಡು ಅಮರನಾಗುತ್ತಾನೆ!

ಈಗ ಯೋಚಿಸಿ. ಒಂದು ವೇಳೆ ಕರ್ಣ ಮಾತಿಗೆ ತಪ್ಪಿದ್ದರೆ ಏನಾಗುತ್ತಿತ್ತು? ಆತ ತೊಟ್ಟ ಬಾಣವನ್ನೇ ಮತ್ತೆ ಪ್ರಯೋಗಿಸಿದ್ದರೆ; ಆಗ ಅಕಸ್ಮಾತ್ ಅರ್ಜುನ ಸತ್ತೇ ಹೋಗಿದ್ದರೆ ಮಹಾಭಾರತ ಹೇಗೆಲ್ಲ ತಿರುವು ಪಡೆದುಕೊಳ್ಳುತ್ತಿತ್ತು? ಧರ್ಮರಾಯಾ, ನಾನು ನಿನ್ನ ಹಿರಿಯಣ್ಣ ಕಣೋ. ಬೇಕಿದ್ದರೆ ನಿಮ್ಮ ತಾಯೀನ ಕೇಳಿಕೊಂಡು ಬಾ' ಎಂದೇನಾದರೂ ಕರ್ಣನೇ ಹೇಳಿದಿದ್ದರೆ ಪರಿಣಾಮ ಹೇಗಿರುತ್ತಿತ್ತು? ಕರ್ಣನೂ ಒಬ್ಬ ಪಾಂಡವ ಎಂದು ಮೊದಲೇ ಗೊತ್ತಾಗಿದ್ದರೆ ದ್ರೌಪದಿಯ ಕಂಗಳ ಕಾಂತಿ ಹೇಗೆಲ್ಲಾ ಬದಲಾಗುತ್ತಿತ್ತು? ಕರ್ಣನೇನಾದರೂ ಮನಸು ಬದಲಿಸಿಕೊಂಡು ಪಾಂಡವರ ಪಾಳಯಕ್ಕೆ ಹೋಗಿಬಿಟ್ಟಿದ್ದರೆ-ಭೀಮನ ಖುಷಿ ಎಷ್ಟಿರುತ್ತಿತ್ತು? ದುರ್ಯೋಧನನ ಪಾಡು ಏನಾಗುತ್ತಿತ್ತು?

ಉಹುಂ, ಇಂಥ ಯಾವ ಪವಾಡಗಳು ನಡೆಯುವುದಕ್ಕೂ ಮಹಾಭಾರತದಲ್ಲಿ ಅವಕಾಶವಿಲ್ಲ. ಕರ್ಣ ಮಾತಿಗೆ ತಪ್ಪದೆ ಅಮರನಾಗುತ್ತಾನೆ. ಆನಂತರವೂ ಕತೆ ಮುಂದುವರಿಯುತ್ತದೆ. ಕನಸಿನಂತೆ, ಕನವರಿಕೆಯಂತೆ, ಕತ್ತಲೆಯಂತೆ... ಮಹಾಭಾರತ ಮುಗಿದ ನಂತರವೂ ಕರ್ಣ ತುಂಬ ನೆನಪಾಗುತ್ತಾನೆ. ಪ್ರಾರ್ಥನೆಯಂತೆ, ಜೋಗುಳದಂತೆ ಮತ್ತು ಕರುಣೆಯಂತೆ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X