ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಲ್ಲೇ ಇರು ಅಲ್ಲಿ ಹೋಗಿ ಮಲ್ಲಿಗೆಯ ತರುವೆನು

By * ಎಆರ್ ಮಣಿಕಾಂತ್
|
Google Oneindia Kannada News

Draupati asking Bheem to fetch Saugandhika flower
ಮಹಾಭಾರತದ ವನವಾಸ ಪರ್ವದಲ್ಲಿ ಒಂದು ಪ್ರಸಂಗ ಬರುತ್ತದೆ: ಒಂದು ಮುಂಜಾನೆ ದ್ರೌಪತಿಗೆ ಅಪರೂಪದ ಸುವಾಸನೆ ಹೊಂದಿದ ಹೂವೊಂದು ಸಿಕ್ಕಿಬಿಡುತ್ತದೆ. ಆ ಹೂವಿನ ಪರಿಮಳಕ್ಕೆ ದ್ರೌಪತಿ ಮನಸೋಲುತ್ತಾಳೆ. ಒಂದು ಹೂವಿಗೇ ಇಷ್ಟೊಂದು ಪರಿಮಳ ಇರಬೇಕಾದರೆ ಒಂದಿಡೀ ಗೊಂಚಲಿಗೆ ಅದೆಂಥ ಸುವಾಸನೆಯಿರಬೇಡ ಎಂಬ ಲೆಕ್ಕಾಚಾರ ಅವಳದು.

ಹೀಗೆ, ಹೂವಿನ ಪರಿಮಳಕ್ಕೆ ಬೆರಗಾಗಿ, ಮರುಳಾಗಿದ್ದ ಸಂದರ್ಭದಲ್ಲಿಯೇ ಅಂಥ ಹೂಗಳ ಮಾಲೆ ಕಟ್ಟಿ ಮುಡಿದುಕೊಳ್ಳಬೇಕು ಎಂಬ ಆಸೆಯಾಗುತ್ತದೆ ದ್ರೌಪತಿಗೆ. ಅಷ್ಟರಲ್ಲಿ ಆ ಹೂವಿನ ಹೆಸರು-ಸೌಗಂಧಿಕಾ ಪುಷ್ಪ ಎಂದೂ ಅವಳಿಗೆ ತಿಳಿದಿರುತ್ತದೆ. ತನಗೆ ಸಿಕ್ಕಿದ ಹೂವನ್ನು ಹಿಡಿದುಕೊಂಡೇ ಅವಳು ಭೀಮನ ಬಳಿ ಬರುತ್ತಾಳೆ. ನಂತರ-ಭೀಮಾ, ಈ ಹೂವಿನ ಪರಿಮಳಕ್ಕೆ ನಾನು ಸೋತು ಹೋಗಿದ್ದೇನೆ. ಇಂಥ ಹೂಗಳ ಮಾಲೆಯೊಂದನ್ನು ಹೆಣೆದು ಅದನ್ನು ಮುಡಿಯಬೇಕೆಂಬ ಮಹದಾಸೆ ನನ್ನದು. ಇಂಥ ಹೂಗಳನ್ನು ತಂದುಕೊಡುವೆಯಾ...' ಎಂದು ಕೇಳುತ್ತಾಳೆ. ಅವಳ ಮಾತಲ್ಲಿ ಪ್ರೀತಿಯಿರುತ್ತದೆ. ಯಾಚನೆಯಿರುತ್ತದೆ. ನಾಚಿಕೆಯಿರುತ್ತದೆ ಮತ್ತು ಕಂಡೂ ಕಾಣದಂಥ ಆಗ್ರಹವಿರುತ್ತದೆ.

ಹೆಂಡತಿಯ ಬೇಡಿಕೆಗೆ ಮಣಿಯದ ಗಂಡು ಜಗತ್ತಿನಲ್ಲಿ ಯಾವನಿದ್ದಾನೆ? ಭೀಮನೂ ಇದೇ ಗುಂಪಿಗೆ ಸೇರಿದ್ದ ಎಂದು ಕಾಣುತ್ತದೆ. ಇದೇ ಕಾರಣದಿಂದ ಆತ ಎರಡನೇ ಮಾತೇ ಆಡದೆ ಸೌಗಂಧಿಕಾ ಪುಷ್ಪ ತರಲು ಹೊರಟು ನಿಲ್ಲುತ್ತಾನೆ. ಸ್ವಾರಸ್ಯವೆಂದರೆ, ಆ ಹೂವಿನ ತೋಟ ಎಲ್ಲಿದೆ ಎಂಬುದೇ ಭೀಮನಿಗೆ ತಿಳಿದಿರುವುದಿಲ್ಲ. ಆ ಹೂವಿನ ವಿಳಾಸ ದ್ರೌಪತಿಗೂ ಗೊತ್ತಿರುವುದಿಲ್ಲ. ಯಾವುದೋ ದಿಕ್ಕಿನಿಂದ ಹಾಗೇ ಸುಮ್ಮನೆ ತಂಗಾಳಿಯಲ್ಲಿ ಹಾರಿಬಂದ ಅದರ ವಿಲಾಸಕ್ಕೆ ದ್ರೌಪತಿ ಪರವಶಳಾಗಿರುತ್ತಾಳೆ'. ಈ ಭೀಮ, ಆ ಸುವಾಸನೆ ತೇಲಿಬಂದ ದಿಕ್ಕಿನ ಜಾಡು ಹಿಡಿದು ಹೋಗುತ್ತಾನೆ. ಹಾಗೆ ಹೊರಟವನಿಗೆ, ಮುಸ್ಸಂಜೆಯ ವೇಳೆಗೆ ಮಾರುವೇಷದಲ್ಲಿದ್ದ ಆಂಜನೇಯನ ದರ್ಶನವಾಗುತ್ತದೆ. ಅಲ್ಲಿ ಭೀಮನ ಗರ್ವಭಂಗವಾಗುತ್ತದೆ. ಆ ನಂತರದಲ್ಲಿ ಹನುಮಂತನ ವಿಶ್ವರೂಪ ದರ್ಶನವೂ ಆಗುತ್ತದೆ. ಇಷ್ಟೆಲ್ಲ ಆದ ನಂತರ, ಕುಬೇರನ ಸಾಮ್ರಾಜ್ಯದಲ್ಲಿ ಆ ಪರಿಮಳದ ಹೂವಿರುವ ಸಂಗತಿಯನ್ನು ಭೀಮನಿಗೆ ಹನುಮಂತನೇ ತಿಳಿಸುತ್ತಾನೆ. ಕುಬೇರನ ಅರಮನೆಗೆ, ಉದ್ಯಾನಕ್ಕೆ ಹೋಗಲು ದಾರಿ ತೋರುತ್ತಾನೆ. ಹೋಗಿ ಬಾ. ನಿನಗೆ ಶುಭವಾಗಲಿ ಎಂದು ಆಶೀರ್ವಾದವನ್ನೂ ಮಾಡುತ್ತಾನೆ.

ಇದಿಷ್ಟು ಪ್ರಸಂಗ. ಈ ಪ್ರಸಂಗದ ಬಗ್ಗೆ ಓದಿದಾಗ ಅಥವಾ ಬೇರೆಯವರಿಂದ ಕೇಳಿದಾಗ ಒಂದು ಪ್ರಶ್ನೆ ಧುತ್ತನೆ ಎದ್ದು ನಿಲ್ಲುತ್ತದೆ. ಏನೆಂದರೆ, ಸೌಗಂಧಿಕಾ ಪುಷ್ಪ ಹುಡುಕಿಕೊಂಡು ಭೀಮ ಹೊರಡುತ್ತಾನಲ್ಲ? ಆಗ ಅವನಿಗೆ ದಾರಿಯೇ ಗೊತ್ತಿರುವುದಿಲ್ಲ. ಅಂಥ ಸಂದರ್ಭದಲ್ಲಿ ಅವನು ದ್ರೌಪತಿಯನ್ನು ಜತೆಗೆ ಕರೆದೊಯ್ಯಬಹುದಿತ್ತು ಅಲ್ಲವೇ? ಒಂದು ವೇಳೆ ಹಾಗೆ ಮಾಡಿದ್ದರೆ, ನಡೆವ ಆಯಾಸವೂ ಕಡಿಮೆಯಾಗುತ್ತಿತ್ತು. ಪ್ರಯಾಣಕ್ಕೆ ಜತೆ ಸಿಗುತ್ತಿತ್ತು. ದ್ರೌಪತಿಯೊಂದಿಗೆ ತಮಾಷೆ ಮಾಡುತ್ತಾ, ಹುಸಿ ಕೋಪ ನಟಿಸುತ್ತಾ, ಅವಳನ್ನು ರೇಗಿಸುತ್ತಾ, ಆಸೆಯಾದರೆ ಮುದ್ದಿಸುತ್ತಾ, ಮೂಡ್ ಬಂದರೆ ಹಾಡುತ್ತಾ, ಯಾವುದೋ ಕಥೆ ಹೇಳುತ್ತಾ, ಹಾಗೆ ನಡೆಯುತ್ತಿದ್ದಾಗಲೇ ಛಕ್ಕನೆ ಮುತ್ತಿಟ್ಟು ಅವಳನ್ನು ಬೆಚ್ಚಿ ಬೀಳಿಸಬಹುದಿತ್ತು. ಮಿಗಿಲಾಗಿ ಆಂಜನೇಯ ವಿಶ್ವರೂಪ ತೋರಬಹುದಿತ್ತು. ಅವಳು ಬೆರಗಾಗಿ ನೋಡುತ್ತಿದ್ದಾಗಲೇ ಕೈ ಜಗ್ಗಿ-ಗೊತ್ತಾ ನಿಂಗೆ? ಇವನು ನಿಂಗೆ ಅಣ್ಣ ಆಗಬೇಕು ದ್ರೌಪತೀ' ಎಂದು ಹೇಳಬಹುದಿತ್ತು. ಆಮೇಲೆ, ಒಂದೇ ಒಂದು ಹೂವಿಗಾಗಿ ಹತ್ತಾರು ಮೈಲಿ ನಡೆಯಬೇಕು ಎಂಬ ಸತ್ಯದರ್ಶನವನ್ನೂ ಅವಳಿಗೆ ಮಾಡಿಸಬಹುದಿತ್ತು.

ಆದರೆ ಭೀಮ, ತಮಾಷೆಗೂ ಇಂಥ ಪ್ರಯತ್ನ ಮಾಡುವುದಿಲ್ಲ. ಬದಲಿಗೆ, ನೀನು ಇಲ್ಲೇ ಇರು. ನಾನು ಸಂಜೆಯೊಳಗೆ ಈ ಹೂಗಳ ಗೊಂಚಲು ಗೊಂಚಲನ್ನೇ ತಂದುಕೊಡ್ತೀನಿ ಎಂದು ಹೇಳಿ ಹೋಗಿಬಿಡುತ್ತಾನೆ.

ಭೀಮ ಹೀಗೇಕೆ ಮಾಡಿದ? ದ್ರೌಪತಿ ಬೇಗ ಬೇಗ ನಡೆಯೋದಿಲ್ಲ ಎಂಬ ಕಾರಣಕ್ಕೆ ಅವಳನ್ನು ಬಿಟ್ಟು ಹೊರಟನಾ? ಅಥವಾ ಹೆಂಡತಿಯಾದವಳು ಜತೆಗೆ ಬಂದರೆ ಕಿರಿಕ್ಕೇ ಜಾಸ್ತಿ ಎಂಬ ತಿಳಿವಳಿಕೆ ಅವನಿಗೂ ಇತ್ತಾ? ಅವಳಿಗೆ ನಡೆದು ಆಯಾಸ ಆಗದಿರಲಿ ಎಂಬುದು ಭೀಮನ ಉದ್ದೇಶವಾ? ಹೀಗೆಲ್ಲ ಅಂದುಕೊಳ್ಳುವಾಗಲೇ ನೆನಪಾಗುವುದು ವಿ.ಕೃ. ಗೋಕಾಕ್ ಅವರ ಪಯಣ' ಹೆಸರಿನ ಕವಿತೆ. ಅದರಲ್ಲಿ ಗೋಕಾಕ್ ಹೀಗೆ ಬರೆಯುತ್ತಾರೆ: ಇಲ್ಲೆ ಇರು ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು/ನೇಹಕೆಂದು ನಲುಮೆಗೊಂದು ಗುರುತನಿರಿಸಿ ಬರುವೆನು...'

ಮುಂದೆ ಪದ್ಯ ಹೀಗೆ ಮುಂದುವರಿಯುತ್ತದೆ:

ಹೋದ ಮೇಲೆ ಸುತ್ತಬೇಕು ಏಳು ಕೋಟೆ ದ್ವಾರವು/ ಹಾದಿಯಲ್ಲಿ ತೀರುವಂಥ ದುಃಖವಿಹುದಪಾರವು/ ಸಾಸುತ್ತ ಜಯಿಸುವುದೇ ಬಾಳುವುದರ ಸಾರವು|

ಈ ಪದ್ಯ ಓದಿದಾಗಲೂ ಕೈ ಹಿಡಿಯುವುದು ಅದೇ ಪ್ರಶ್ನೆ: ಈ ಕವಿ ಸಾರ್ವಭೌಮ, ಅಲ್ಲಿ ಹೋಗಿ ಮಲ್ಲಿಗೆ ತರುವೆನು ಎಂದು ಹೇಳುತ್ತಾನೆ ನಿಜ. ಆದರೆ ಇವನು ಮಲ್ಲಿಗೆ ತರಲು ಒಬ್ಬನೇ ಯಾಕೆ ಹೋಗಬೇಕು? ಜತೆಯಲ್ಲಿ ಅವಳನ್ನೂ ಕರೆದೊಯ್ಯಬಹುದಲ್ಲ? ಈ ಪ್ರಶ್ನೆಗೆ ಉತ್ತರಗಳನ್ನು ಹೇಗೆಲ್ಲಾ ಅಂದಾಜು ಮಾಡಿಕೊಳ್ಳಬಹುದೋ ನೋಡಿ:

ಬಹುಶಃ ಅವನ ಬಳಿ ಕಾಸಿಲ್ಲದಿರಬಹುದು. ಇದೇನೂ ಗೊತ್ತಿಲ್ಲದೆ ಆಕೆ-ಮಲ್ಲಿಗೆ ಹೂ ತಗೊಂಡು ಬನ್ರೀ' ಎಂದು ಕೇಳಿಬಿಟ್ಟಿದ್ದಾಳೆ. ಮೊಳ ಮಲ್ಲಿಗೆ ಕೇಳಿದಾಗಲೂ ಕಾಸಿಲ್ಲ ಕಣೇ' ಅಂದರೆ ಅವಳಿಗೆ ಬೇಜಾರಾಗಬಹುದು. ಹೇಗಿದ್ದರೂ ಮಲ್ಲಿಗೆ ಮಾರುವ ಹೆಂಗಸು ಪರಿಚಯವಿದ್ದಾಳೆ. ಹಾಗಾಗಿ ಅವಳಲ್ಲಿ ಸಾಲ ಹೇಳಿ ಹೂ ತಂದರಾಯ್ತು ಎಂಬ ಕಾರಣದಿಂದಲೇ ಇವನು ಹೆಂಡತಿ/ಗೆಳತಿಯನ್ನು ಒಂದು ಕಡೆ ನಿಲ್ಲಿಸಿ- ಇಲ್ಲೇ ಇರು ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು' ಎಂದು ಹೇಳಿ ಹೋಗುತ್ತಾನೆ. ಹೀಗೆ ಅಂದುಕೊಂಡಾಗಲೇ ಇನ್ನೊಂದು ಅನುಮಾನದ ಹೆಡೆ ತಲೆ ಎತ್ತುತ್ತದೆ. ಏನೆಂದರೆ -ಅವನು ಒಬ್ಬನೇ ಹೋಗಿದ್ದು ಹೂವು ತರುವ ನೆಪದಿಂದಲೋ ಅಥವಾ ಹೂವಾಡಗಿತ್ತಿಯ ಜಪದಿಂದಲೋ? ಈ ಹೆಂಡತಿಗೆ ಹೂವಿನ ಮೇಲಿತ್ತಲ್ಲ, ಅಂಥದೇ ಅಥವಾ ಅದಕ್ಕಿಂತಲೂ ಹೆಚ್ಚಿನ ಮೋಹ ಅವನಿಗೆ ಹೂವಾಡಗಿತ್ತಿಯ ಮೇಲೆ ಇತ್ತೋ ಹೇಗೆ? ತನ್ನ ಇನ್ನೊಂದು ಮುಖ' ಹೆಂಡತಿಗೆ ಕಾಣದೇ ಇರಲಿ ಎಂಬ ಕಾರಣದಿಂದಲೇ ಅವನು ಹೆಂಡತಿಯನ್ನು ಅಲ್ಲೇ ಬಿಟ್ಟು ಹೋಗಿರಬಾರದೇಕೆ?

ಮಲ್ಲಿಗೆಯನು ತರುವೆನು...' ಎಂದು ಹೇಳಿ ಇವನು ಹೋಗಿದ್ದೇನೋ ಸರಿ. ಆದರೆ ಮಲ್ಲಿಗೆ ಯಾರಿಗಿಷ್ಟ? ಅವನಿಗೋ ಅಥವಾ ಅವಳಿಗೋ? ಅವಳಿಗೇ ಇಷ್ಟ ಅಂದುಕೊಳ್ಳೋಣ. ಅವನು ತನ್ನನ್ನು ಒಂಟಿಯಾಗಿ ಬಿಟ್ಟು ಹೋಗಿಯಾದರೂ ಮಲ್ಲಿಗೆ ತಂದುಕೊಡಲಿ ಎನ್ನುವಷ್ಟರ ಮಟ್ಟಿಗೆ ಅವಳು ಆಸೆಬುರುಕಿಯಾ? ಅಥವಾ ಮಲ್ಲಿಗೆ ತರಲು ಜತೆಗೆ ಕರೆದೊಯ್ದರೆ ಅವಳು ಸೀರೆ ಕೊಡಿಸಿ, ಬಳೆ ಕೊಡಿಸಿ ವಾಚ್ ಕೊಡಿಸಿ... ಎಂದೆಲ್ಲಾ ಪೀಡಿಸಬಹುದು. ಹೂವಿನವಳೊಂದಿಗೆ ಚೌಕಾಸಿಗೆ ನಿಂತು ಸುಮ್ಮನೇ ಕಾಲಹರಣ ಮಾಡಬಹುದು ಅಥವಾ ರೇಟು ಕೇಳಿ-ಅಷ್ಟೊಂದಾ? ಬೇಡ ಬೇಡ ಎಂದು ಜೋರಾಗೇ ಹೇಳಿ, ಗಂಡನಿಗೆ ಹೂವು ಬೇಡ. ಹೋಗೋಣ ಬನ್ನಿ ಎಂದು ಕಣ್ಸನ್ನೆಯಲ್ಲೇ ಹೇಳಿ ಬಂದು ಬಿಡಬಹುದು. ಹೀಗೆಲ್ಲ ಆಗಬಹುದು ಎಂಬ ಅಂದಾಜಿನಿಂದಲೇ ಈ ಮಹರಾಯ ಅವಳನ್ನು ಒಂದು ಕಡೆ ನಿಲ್ಲಿಸಿ ಹೊರಟಿರಬಹುದು!

ಅಥವಾ... ಅವರಿಬ್ಬರೂ ಹೊರಟದ್ದು ಮಟಮಟ ಮಧ್ಯಾಹ್ನದ ಹೊತ್ತಿನಲ್ಲಿರಬೇಕು. ಬಿಸಿಲಿಗೆ ಇಬ್ಬರೂ ಬೆವತಿದ್ದರು ಅಂತ ಕಾಣುತ್ತೆ. ಆ ಹೊತ್ತಿನಲ್ಲಿ ಅಂಟಿಕೊಂಡೇ ನಿಂತಾಗ ಒಬ್ಬರ ಬೆವರಿನ ಕೆಟ್ಟ ವಾಸನೆ ಇನ್ನೊಬ್ಬರಿಗೂ ತಲುಪಿ ಹಿಂಸೆ ಅನ್ನಿಸಿರಬೇಕು. ಈ ಸಂದರ್ಭದಲ್ಲಿಯೇ ಅವಳ ಖಾಲಿ ಮುಡಿ ಅವನಿಗೆ ಕಂಡಿರಬೇಕು. ಮುಡಿ ತುಂಬಾ ಮಲ್ಲಿಗೆಯಾದರೂ ಇದ್ದರೆ ಪಯಣದ ಹಾದಿಯುದ್ದಕ್ಕೂ ಸುವಾಸನೆಯ ಪರಿಮಳವಾದರೂ ಜತೆಗಿರುತ್ತದೆ ಎಂಬ ಭಾವ ಅವನಿಗೆ ಬಂದಿರಬೇಕು. ಜತೆಗೆ ಈ ಉರಿಬಿಸಿಲಲ್ಲಿ ಅವಳನ್ನು ಕರೆದೊಯ್ಯುಯ್ದು ದಣಿಸುವುದು ಬೇಡ ಅನ್ನಿಸಿರಬೇಕು. ಈ ಕಾರಣದಿಂದಲೇ ಅವಳನ್ನು ಒಂದು ಕಡೆ ನಿಲ್ಲಿಸಿ ಅವನು ಹೂ ತರಲು ಹೊರಟನಾ? ಅಥವಾ... ಅಥವಾ... ಯಾವುದೋ ಆಕಸ್ಮಿಕ ಸಂದರ್ಭದಲ್ಲಿ ಜತೆಯಾದ ಆಕೆ, ಕುರೂಪಿಯಾಗಿದ್ದಳಾ? ಅವಳೊಂದಿಗೆ ಹೋದರೆ ಜನ ತನ್ನನ್ನು ಗೇಲಿ ಮಾಡಬಹುದು ಎಂಬ ಕಾರಣಕ್ಕೇ ಅವಳನ್ನು ಬಿಟ್ಟು ಹೋದನೋ ಹೇಗೆ? ಅಥವಾ ಮಲ್ಲಿಗೆ ತರುವ ನೆಪದಲ್ಲಿಯೇ ಹತ್ತೇ ನಿಮಿಷದ ಮಟ್ಟಿಗೆ ಬಾರ್‌ಗೂ ಹೋಗಿ ಬರುವ ಮಹೋದ್ದೇಶದಿಂದ' ಅವನು ಅವಳನ್ನು ಒಂದು ಕಡೆ ನಿಲ್ಲಿಸಿ ಹೋಗಿಬಿಟ್ಟನಾ?

***
ಈಗ, ಅಂದಾಜುಗಳಿಂದಾಚೆಗೂ ಒಂದೆರಡು ರೀತಿ ಯೋಚಿಸೋಣ ಬನ್ನಿ. ಇಲ್ಲಿ ಮಲ್ಲಿಗೆ' ಎಂದರೆ ಹೂವಲ್ಲ, ಅದು ಆಸೆ! ಅವಳ ಆಸೆ! ಅದನ್ನು ಈಡೇರಿಸಲೇಬೇಕಾದದ್ದು ಅವನ ಕರ್ತವ್ಯ! ನೀನು ಹೇಳಿದಂತೆ ನಾನು ಕೇಳಲ್ಲ ಹೋಗ್ ಎಂದೇನಾದರೂ ಇವನು ಆವಾಜ್ ಬಿಟ್ಟರೆ, ಏನಾಗುತ್ತೆ ಹೇಳಿ? ಸಂಸಾರದ ಸಾಮರಸ್ಯ ಹಾಳಾಗುತ್ತದೆ. ಗೆಳೆತನದ ಬಂಧ ಕಳಚಿಕೊಳ್ಳುತ್ತದೆ. ಇಬ್ಬರ ಜಗಳ ಹತ್ತು ಕಿವಿ ತಲುಪಿ ಮನೆಮನೆಯ ಕಥೆ' ಆಗುತ್ತದೆ! ಇದೆಲ್ಲಾ ಅವನಿಗೂ ಚೆನ್ನಾಗಿ ಗೊತ್ತಿದೆ. ಹಾಗೆಂದೇ ಅವನು ಅವಳ ಆಸೆ ಈಡೇರಿಸಲೆಂದು ಪಣ ತೊಟ್ಟವನಂತೆ ಒಬ್ಬನೇ ಹೊರಡುತ್ತಾನೆ. ಹಾಗೆ ಹೊರಟವನು ಮೊದಲೇ-ಹೋದ ಮೇಲೆ ಸುತ್ತಬೇಕು ಏಳು ಕೋಟೆ ದ್ವಾರವು/ ಹಾದಿಯಲ್ಲಿ ತೀರದಂಥ ದುಃಖವಿಹುದಪಾರವು' ಅನ್ನುತ್ತಾನೆ.

ಅಂದರೆ- ಒಂದು ಚಿಕ್ಕ ಗೆಲುವು ದಕ್ಕಿಸಿಕೊಳ್ಳಲಿಕ್ಕೂ ಬದುಕಲ್ಲಿ ವಿಪರೀತ ಸೈಕಲ್ ಹೊಡೆಯಬೇಕು ಎಂಬುದನ್ನು ಪರೋಕ್ಷವಾಗಿ ಅವನು ಅವನಿಗೆ' ಹೇಳಿಯೇ ಹೊರಟಿದ್ದಾನೆ. ಈ ಕೆಲಸದಲ್ಲಿ ಎಷ್ಟೇ ಸಂಕಟ ಎದುರಾದರೂ ನಾನು ಗೆದ್ದು ಬರುತ್ತೇನೆ ಎಂಬ ಭರವಸೆಯ ಮಾತುಗಳನ್ನು ಆಡಿದ್ದಾನೆ. ಆದರೆ-ಮಲ್ಲಿಗೆಯನು ತರುವ ತನಕ ಅವಳು ಏನು ಮಾಡಬೇಕು? ಎಂಬುದನ್ನು ಅವನು ಹೇಳುವುದೇ ಇಲ್ಲ! ಅಲ್ಲದೆ, ಮಲ್ಲಿಗೆಯ ಜತೆಗೆ ನಿನಗೆ ಬೇರೇನಾದರೂ ಬೇಕಾ, ನಾನಿಲ್ಲದಿದ್ರೂ ನೀನು ಒಬ್ಬಳೇ ಇರ್‍ತೀಯಾ? ಹೆದರಿಕೆ ಇಲ್ಲ ತಾನೆ? ಎಂದು ಕೇಳುವುದೂ ಇಲ್ಲ!

ಮೊದಲ ಓದಿಗೆ ಕವಿತೆ ಅರ್ಥವಾಗಿದ್ದು ಇಷ್ಟೆ. ಕವಿತೆಯ ಒಟ್ಟು ಅರ್ಥ ಇದೇ ಆಗಿರಬಹುದು. ಅಲ್ಲದೆಯೂ ಇರಬಹುದು. ಆದರೆ, ಕೆಲವೇ ಸಾಲುಗಳಲ್ಲಿ ಸಾವಿರ ಅರ್ಥಗಳನ್ನು ಹೊಳೆಯಿಸುವ ಶಕ್ತಿ ಕವಿತೆಗಿದೆ ಎಂಬುದಂತೂ ನಿತ್ಯ ಸತ್ಯ. ಸದಾ ಬೆಳಗುತ್ತಲೇ ಇರುವ ಕವಿತೆಯೆಂಬ ಹಣತೆಗೆ ನಮಸ್ಕಾರ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X