• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೀವ್ ಮಾಡ್ತಿರೋದು ಸರೀನಾ ಸಾರ್!

By * ಎ.ಆರ್. ಮಣಿಕಾಂತ್
|
ಸರ್, ಸುತ್ತು ಬಳಸಿನ ಮಾತು ಬೇಡ. ನೇರವಾಗಿ ವಿಷಯಕ್ಕೆ ಬರ್‍ತೇನೆ. ವಾರದ ಹಿಂದಷ್ಟೇ ನಡೆದ ಸಂಪುಟ ಸಭೆಯಲ್ಲಿ ರಾಜ್ಯದ ಆರು ರಕ್ಷಿತಾರಣ್ಯಗಳಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿದ್ದೀರಿ. ಇದರಿಂದ ಎಂತೆಂಥ ಅಡ್ಡ ಪರಿಣಾಮಗಳಾಗ್ತವೆ ಎಂದು ನೀವು ಅಂದಾಜು ಮಾಡಿಕೊಂಡಿಲ್ಲ ಅನಿಸುತ್ತೆ. ಅಥವಾ ಯಾರು ಹಾಳಾದ್ರೆ ನನಗೇನು? ನನ್ನ ಕುರ್ಚಿ ಉಳಿದ್ರೆ ಸಾಕು. ಸರಕಾರದಲ್ಲಿರೋ ಹಣವಂತ ಮಂತ್ರಿಗಳು ಭಿನ್ನಮತಕ್ಕೆ ಮುಂದಾಗದಂತೆ ನೋಡಿಕೊಂಡ್ರೆ ಸಾಕು ಎಂಬ ಆಲೋಚನೆಯಿಂದಲೂ ಗಣಿಗಾರಿಕೆಗೆ ನೀವು ಅನುಮತಿ ಕೊಟ್ಟಿರಲಿಕ್ಕೂ ಸಾಕು. ಆದ್ರೆ ಸಾರ್, ನಿಜ ಹೇಳಬೇಕು ಅಂದ್ರೆ ನಿಮ್ಮದು ಅವಿವೇಕದ ನಡೆ. ದುಡುಕಿನ ನಡೆ. ಏಕಪಕ್ಷೀಯ ನಿರ್ಧಾರ. ತಿಳಿವಳಿಕೆ ಇಲ್ಲದವರು ಮಾತ್ರ ಕೈಗೊಳ್ಳಬಹುದಾದ ನಿರ್ಧಾರ. ಒಂದು ವೇಳೆ ಆರು ರಕ್ಷಿತಾರಣ್ಯಗಳಲ್ಲಿ ಗಣಿಗಾರಿಕೆ ಶುರುವಾದರೆ, ಆಗಬಹುದಾದ ಅನಾಹುತದ ಬಗ್ಗೆ ಆಮೇಲೆ ಹೇಳ್ತೇನೆ. ಅದಕ್ಕೂ ಮೊದಲು, ಯಡಿಯೂರಪ್ಪ ಅಂದ್ರೆ ನಮ್ಮ ಜನಕ್ಕೆ ಈ ಹಿಂದೆ ಎಂಥ ಭಾವನೆಯಿತ್ತು ಅಂತ ಹೇಳಿ ಬಿಡ್ತೀನಿ ಕೇಳಿ...

***

ಹೌದಲ್ವ ಸಾರ್? ನೀವು ದಶಕಗಳಿಂದಲೂ ವಿರೋಧ ಪಕ್ಷದಲ್ಲೇ ಇದ್ದವರು. ಅದೇನು ಕರ್ಮವೋ ಕಾಣೆ, ಕರ್ನಾಟಕದಲ್ಲಿ ಬಿಜೆಪಿಗೆ ಅಕಾರ ಸಿಕ್ತಾನೇ ಇರಲಿಲ್ಲ. ಆದರೆ ಪ್ರತಿ ಚುನಾವಣೆಯಲ್ಲೂ ಅದೇ ಬಿಜೆಪಿಯಿಂದ ರ್ಸ್ಪಸಿ ನೀವು ಎಮ್ಮೆಲ್ಲೆ ಆಗ್ತಾ ಇದ್ರಿ. ನಂತರ ವಿರೋಧ ಪಕ್ಷದ ಕುರ್ಚಿಲಿ ಕೂತು ಅವಾಗವಾಗ ಅಬ್ಬರಿಸ್ತಾ ಇದ್ರಿ. ರೈತರ ಪರವಾಗಿ ದನಿ ಎತ್ತುತಿದ್ರಿ. ಎಲ್ಲಿಯವರೆಗೆ ಹೋರಾಟ?' ಸಾಯುವವರೆಗೆ ಹೋರಾಟ' ಹೋರಾಟ ಹೋರಾಟ, ನ್ಯಾಯಕ್ಕಾಗಿ ಹೋರಾಟ' ಎಂಬ ಅರ್ಥದಲ್ಲೇ ಮಾತಾಡ್ತಾ ಇದ್ರಿ. ಅದನ್ನೆಲ್ಲ ಕಂಡ ಜನ- ಇದ್ರೆ ಯಡಿಯೂರಪ್ಪನಂಗೆ ಇರಬೇಕು ನೋಡ್ರಿ. ಅವ್ನು ರೈತರ ಪರವಾಗಿ, ನ್ಯಾಯದ ಪರವಾಗಿ ಯಾವಾಗ್ಲೂ ದನಿ ಎತ್ತುತ್ತಾ ಇರ್‍ತಾನೆ. ಆದ್ರೆ ಹಾಳಾದ್ದು ಅದೃಷ್ಟ ಪ್ರತಿಬಾರಿಯೂ ಕೈಕೊಡ್ತಾ ಇದೆ. ಈ ಬಿಜೆಪಿ ಅಕಾರಕ್ಕೆ ಬಂದ್ರೆ ಅವನಿಂದ ಬಹಳ ಒಳ್ಳೆಯ ಕೆಲಸಗಳನ್ನು ನಿರೀಕ್ಷಿಸಬಹುದು' ಎಂದೆಲ್ಲ ಮಾತಾಡಿ ಕೊಂಡಿದ್ದರು.

ಪ್ರಿಯ ಯಡಿಯೂರಪ್ಪನವರೇ, ಮುಂದಿನ ಕತೆಯನ್ನು ಎರಡೇ ಮಾತಲ್ಲಿ ಹೇಳಿ ಮುಖ್ಯ ವಿಷಯಕ್ಕೆ ಬರ್‍ತೇನೆ. ಮುಂದೆ, ರಾಜಕೀಯದ ದಿಕ್ಕು. ದೆಸೆ ಬದಲಾಯ್ತು. ಮೊದಲು ಜೆಡಿಎಸ್, ಬಿಜೆಪಿ ಸರಕಾರವಿತ್ತು. ನಂತರ ಬಿಜೆಪಿಗೆ ಮುಖ್ಯಮಂತ್ರಿ ಪಟ್ಟ ಕೊಡಲು ಜೆಡಿಎಸ್‌ನವರು ಒಪ್ಪದೇ ಹೋಗಿದ್ದರಿಂದ ಚುನಾವಣೆ ನಡೀತು. ಜನ, ಅಯ್ಯೋ ಪಾಪ ಅಂದ್ಕೊಂಡೇ ಬಿಜೆಪಿಗೆ ವೋಟು ಹಾಕಿದ್ರು. ಪರಿಣಾಮ, ನೀವು ಮುಖ್ಯಮಂತ್ರಿ ಆದಿರಿ. ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ರಿ. ಹಿಂದೆ ನೀವು ವಿರೋಧ ಪಕ್ಷದ ನಾಯಕನಾಗಿ ಮೆರೆದದ್ದು. ಗುಡುಗಾಡಿದ್ದು ನೋಡಿದ್ದೆದಲ್ಲ? ಅದನ್ನೇ ನೆನಪು ಮಾಡಿಕೊಂಡು, ಈಯಪ್ಪನ ಆಡಳಿತದಲ್ಲಿ ಜನ ನೆಮ್ಮದಿಯಿಂದ ಇರಬಹುದೇನೋ ಅಂದುಕೊಂಡಿದ್ವಿ.

ಆದರೆ, ಇಲ್ಲ ಯಡಿಯೂರಪ್ನೋರೇ, ನಮ್ಮ ನಂಬಿಕೆ ನಿಜವಾಗಲಿಲ್ಲ. ನೀವು ಸಿಎಂ ಆದ ಎರಡೇ ತಿಂಗಳಲ್ಲಿ ಹಾವೇರೀಲಿ ರೈತರ ಮೇಲೆ ಗೋಲಿಬಾರ್ ಆಯ್ತು. ಗೊಬ್ಬರ ಬೇಕು ಎಂದು ಪ್ರತಿಭಟಿಸಿದ ರೈತರ ಹೆಣ ಬಿತ್ತು. ಆ ನಂತರದಲ್ಲಿ ಬಿಡಿ, ನಿಮ್ಮ ಕಣ್ಮುಂದೆಯೇ ಒಂದೊಂದೇ ಅನಾಹುತ ನಡೀತಾ ಹೋದ್ವು. ಆಗೆಲ್ಲ ನೀವು ಹರಾ ಅನ್ನಲಿಲ್ಲ ಶಿವಾ ಅನ್ನಲಿಲ್ಲ. ಆದರೆ ನಿಮ್ಮ ಖುರ್ಚಿಗೆ ಸಂಚಕಾರ ಬರ್ತಿದೆ ಅಂತ ಗೊತ್ತಾದರೆ ಸಾಕು, ಧಡಕ್ಕನೆ ಮೇಲೆದ್ದು ರಾಜ್ಯದ ಅಷ್ಟೂ ದೇವಸ್ಥಾನದ ಮೆಟ್ಟಿಲು ಹತ್ತಿ- ದುಷ್ಟರ ವಿರುದ್ಧ ಹೋರಾಡಲು ಶಕ್ತಿ ಕೊಡು ತಂದೇ...' ಎಂದು ಪ್ರಾರ್ಥಿಸ್ತಾ ಇದ್ರಿ. ನಾನು ಅಸಹಾಯಕ ಅನ್ನೋ ಥರಾ ಪೋಸ್ ಕೊಟ್ರಿ. ಸಿಂಪಥಿ ಗಿಟ್ಟಿಸಿಕೊಂಡ್ರಿ.

ವ್ಯಂಗ್ಯ ಏನು ಗೊತ್ತಾ ಸಾರ್? ನೀವು ಯಾರನ್ನು ದುಷ್ಟರು ಅಂತ ಕರೀತಿದ್ರೋ ಅವರು ಒಮ್ಮೆ ಮುನಿಸಿಕೊಂಡು, ಮತ್ತೊಮ್ಮೆ ರಾಜಿ ಮಾಡಿಕೊಂಡು, ಒಮ್ಮೆ ಕೈಮುಗಿದುಕೊಂಡು, ಇನ್ನೊಮ್ಮೆ ಕೈ ಕೈ ಮಸೆದು ಕೊಂಡು, ಒಂದೊಂದ್ಸಲ ಥೇಟ್ ದುರ್ಯೋಧನನ ಥರಾ ಫಡಫಡಾ ಎಂದು ಅಬ್ಬರಿಸಿಕೊಂಡು ನಿಮ್ಮ ಹಿಂದೆ ಮುಂದೆಯೇ ತಿರುಗಾಡುತ್ತಿದ್ದರು. ಅವರಿಲ್ಲದಿದ್ದರೆ, ಅವರ ಹಣದ ಬಲವಿಲ್ಲದಿದ್ದರೆ ಬಿಜೆಪಿ ಸರಕಾರವೇ ಇರುವುದಿಲ್ಲ ಎಂದೆಲ್ಲ ಜನ ಮಾತಾಡಿಕೊಂಡರು. ಎಂಥ ದುರಂತ ನೋಡಿ ಯಡಿಯೂರಪ್ಪನವರೆ, ಆಗಲೂ ನೀವು ಮಾತೇ ಆಡಲಿಲ್ಲ! ಇಷ್ಟೆಲ್ಲ ಆದರೂ ಮುಖ್ಯಮಂತ್ರಿಯಾಗಿ ನೀವು ರೈತಾಪಿ ಜನರ ಪಾಲಿಗೆ ಒಂದು ಬಹುದೊಡ್ಡ ಉಪಕಾರ ಮಾಡಿದ್ರಿ. ಏನೆಂದರೆ ಬಿಟಿ ಬದನೆಗೆ ನಾನು ಅವಕಾಶ ಕೊಡೋದಿಲ್ಲ ಎಂದು ಹೇಳಿ ನಿಜಕ್ಕೂ ದೊಡ್ಡವರಾದಿರಿ.

ಆದರೆ, ವಾರದ ಹಿಂದೆ ನೀವು ಮಾಡಿದ್ದೇನು ಹೇಳಿ? ಸಂಪುಟ ಸಭೆ ಕರೆದು, ತುಂಬ ಅವಸರದಲ್ಲಿ ರಾಜ್ಯದ ಆರು ರಕ್ಷಿತಾರಣ್ಯದಲ್ಲಿ ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಿದ್ದೀರಿ! ಇದೆಲ್ಲ ಹಳೆಯ ನಿರ್ಧಾರಗಳು. ಅದಕ್ಕೆ ಈಗ ಅನುಮತಿ ಕೊಟ್ಟಿದ್ದೀವಿ ಅಷ್ಟೇ ಎಂದು ಷರಾ ಬರೆದಿದ್ದೀರಿ.

ಸ್ವಾಮಿ, ಈ ಗಣಿಗಾರಿಕೆ ರಾಜ್ಯಕ್ಕೆ ಎಂಥ ಹಾನಿ ಮಾಡ್ತಾ ಇದೆ ಅಂತ ಈಗಲೂ ನಿಮಗೆ ಅರ್ಥ ಆಗಿಲ್ವ? ಕೇಳಿ : ಗಣಿಗಾರಿಕೆಯ ಕಾರಣದಿಂದ ಈಗಾಗಲೇ ರಾಮನಗರ-ಚನ್ನಪಟ್ಟಣದ ಬೆಟ್ಟಗಳು ಕರಗ್ತಾ ಇವೆ. ನಂದಿಹಿಲ್ಸ್ ಪ್ರದೇಶ ನಡುಗ್ತಾ ಇದೆ. ಬಳ್ಳಾರಿಯಂತೂ ಬೋಳು ಬೋಳಾಗಿ ಹೋಗಿದೆ. ಮರಗಳು ಮಾಯವಾಗ್ತಾ ಇವೆ. ಭೂಮಿ, ಪಾತಾಳಕ್ಕೇ ಬಾಯ್ದೆರೆದುಕೊಂಡು ಹೋಗ್ತಾ ಇದೆ. ಒಂದೆರಡಲ್ಲ, ಸಾವಿರ ಸಾವಿರ ಲಾರಿಗಳ ಓಡಾಟದ ಕಾರಣದಿಂದ ರಸ್ತೆಗಳು ಬಿರುಕು ಬಿಡ್ತಾ ಇವೆ. ಹೀಗಿರೋವಾಗ ಇರೋ ಗಣಿಗಾರಿಕೇನ ನಿಲ್ಸಿ ಸಾರ್ ಅಂತ ಕೂಗೆದ್ದಿದೆ. ಆದ್ರೆ ನೀವು ಹೊಸ ಗಣಿಗಾರಿಕೆಗೆ ಅವಕಾಶ ಕೊಟ್ಟಿದೀರ! ಜತೆಗೆ, ಇದು ಕಲ್ಲು ಗಣಿಗಾರಿಕೆ ಅಲ್ಲ. ಹಾಗಾಗಿ ಪರಿಸರಕ್ಕೆ ಅಂಥ ತೊಂದ್ರೆ ಖಂಡಿತ ಇಲ್ಲ ಅಂತ ಸುಳ್ಳು ಬೇರೆ ಹೇಳ್ತಾ ಇದೀರ!

ಒಂದು ಮಾತು ಹೇಳಲಾ ಸಾರ್? ಈ ಹೊಸ ಗಣಿಗಾರಿಕೆಯಿಂದ ಲಾಭ ಆಗೋದು ಯಾರಿಗೆ ಹೇಳಿ? ನಿಮ್ಮ ಸಂಪುಟದಲ್ಲೇ, ಪಕ್ಷದಲ್ಲೇ ಇರುವ ಕೆಲವರಿಗೆ. ಈ ಹೊಸ ಯೋಜನೆ ಏನಾದ್ರೂ ಜಾರಿಗೆ ಬಂದ್ರೆ ನಿಮ್ಮ ಹಿಂದೆ ಮುಂದೆ ಓಡಾಡೋ ಜನರೇ ಗಣಿಗಾರಿಕೆಯ ಗುತ್ತಿಗೆ ಹಿಡೀತಾರೆ. ಹಣವಂತರು ಮತ್ತಷ್ಟು ಶ್ರೀಮಂತರಾಗ್ತಾರೆ. ಅಷ್ಟು ಬಿಟ್ರೆ ಬೇರೆ ಯಾರಿಗಾದ್ರೂ ನಯಾಪೈಸೆಯ ಅನುಕೂಲ ಆಗುತ್ತೆ ಅನ್ಕೊಂಡಿದೀರಾ ಸಾರ್?

ಕೇಳಿ : ರಕ್ಷಿತಾರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಆರಂಭವಾದ್ರೆ ಅಪರೂಪದ ಪ್ರಕೃತಿ ಸಂಪತ್ತು ನಾಶವಾಗುತ್ತೆ. ಗಣಿಯಲ್ಲಿ ಕೂಲಿ ಮಾಡಿದ್ರೆ ಜಾಸ್ತಿ ದುಡ್ಡು ಸಿಗುತ್ತೆ ಅನ್ನೋ ಕಾರಣದಿಂದ ಜನ ಕೃಷಿಯನ್ನೇ ಮರೆತುಬಿಡ್ತಾರೆ. ಬೆಳಗಿಂದ ದುಡಿದ ಆಯಾಸವೆಲ್ಲ ಪರಿಹಾರವಾಗ್ಲಿ ಅಂತ ಕುಡಿತ ಕಲೀತಾರೆ. ಗಣಿಗಾರಿಕೆಯ ಕೆಲಸ ಮತ್ತು ಆದಾಯ ಶಾಶ್ವತವಲ್ಲ ಎಂದು ಅವರಿಗೆ ಗೊತ್ತಾಗೋದೇ ಇಲ್ಲ. ಅಥವಾ ಎಲ್ಲ ಗೊತ್ತಾಗುವ ವೇಳೆಗೆ ತುಂಬ ತಡವಾಗಿರುತ್ತೆ. ತುಂಬ ಮುಖ್ಯವಾಗಿ ಭೂಮಿಯನ್ನು ಅಗೆ (ಬಗೆ)ಯುವ ಕೆಲಸ ಶುರುವಾಗುತ್ತೆ ನೋಡಿ; ಹಾಗೆ ಆಳಕ್ಕೆ ಹೋದಂತೆಲ್ಲ ಭೂಮಿಯ ತೇವಾಂಶ ಕಡಿಮೆಯಾಗುತ್ತೆ. ಪರಿಣಾಮ, ಅಂತ ರ್ಜಲದ ಮಟ್ಟ ಕುಸಿಯುತ್ತೆ. ಅಷ್ಟೋ ಇಷ್ಟೋ ಸಿಗುತ್ತೆ ನೋಡಿ, ಆ ನೀರಿನ ಗುಣಮಟ್ಟ ಕೂಡ ಹಾಳಾಗಿರುತ್ತೆ. ದಿನಾಲೂ ನೂರರ ಲೆಕ್ಕದಲ್ಲಿ ಲಾರಿಗಳು ಓಡಾಡ್ತವೆ ನೋಡಿ; ಆ ಕಾರಣದಿಂದ ರಸ್ತೆಗಳು ಬರ್ಬಾದ್ ಆಗಿ ಹೋಗ್ತವೆ. ಒಂದು ಕಡೆಯಲ್ಲಿ ಧೂಳು, ಇನ್ನೊಂದು ಕಡೆಯಲ್ಲಿ ಲಾರಿಗಳ ಹೊಗೆಯ ಕಾರಣದಿಂದ ಗಾಳಿ ಕೂಡ ಕಲುಷಿತವಾಗುತ್ತೆ. ಓದ್ತಾ ಇದೀರ ಸಾರ್?

ಈಗ ಹೊಸದಾಗಿ ಗಣಿಗಾರಿಕೆ ಆರಂಭಿಸೋಕೆ ಅನುಮತಿ ಕೊಟ್ಟಿದೀರಲ್ಲ? ಅದು ಸೂಕ್ಷ್ಮ ಜೀವ ವೈವಿಧ್ಯದ ತಾಣ. ಗಣಿಗಾರಿಕೆಯ ಕಾರಣದಿಂದ ಅದಷ್ಟೂ ನಾಶವಾಗುತ್ತೆ. ಜನ ಹಿಂಡು ಹಿಂಡಾಗಿ ಕಾಡಿಗೆ ಬರೋದು ಕಂಡು ಅಲ್ಲಿರೋ ಅಪರೂಪದ ಜೀವಿಗಳು ಜಾಗ ಖಾಲಿ ಮಾಡ್ತವೆ. ಒಂದು ವೇಳೆ ಗಣಿಗಾರಿಕೆ ಶುರುವಾದ ಜಾಗದಲ್ಲಿ ಚಿರತೆಯೋ, ತೋಳವೋ ಇತ್ತು ಅಂದ್ಕೊಳ್ಳಿ. ಅದು ಉಳಿಯಲು ಜಾಗವಿಲ್ಲ ಅಂದ್ಕೊಂಡು ಸೀದಾ ಹಳ್ಳಿಗಳ ಕಡೆಗೇ ನುಗ್ಗಿ ಬರುತ್ತೆ. ಒಂದು ವೇಳೆ ಹೀಗೇನಾದ್ರೂ ಆಗಿಬಿಟ್ರೆ ಎಷ್ಟೆಲ್ಲ ತೊಂದರೆ ಆಗುತ್ತೆ ಅಂತ ಲೆಕ್ಕ ಹಾಕಿದೀರಾ ಸಾರ್?

ನೇರವಾಗಿ ಹೇಳ್ತೀನಿ ಕೇಳಿ : ಜನ ಈಗ ತುಂಬ ಬೇಸರಗೊಂಡಿದ್ದಾರೆ. ಈ ರಾಜಕಾರಣಿಗಳೆಲ್ಲ ಒಳ ಒಪ್ಪಂದ ಮಾಡ್ಕೊಂಡೇ ಗಣಿಗಾರಿಕೆಗೆ ಮುಂದಾಗಿದ್ದಾರೆ. ಎಲ್ಲರದ್ದೂ ಪರ್ಸೆಂಟೇಜ್ ಲೆಕ್ಕಾಚಾರ ಆಗಿ ಹೋಗಿದೆ. ಎಲ್ಲ ಗೊತ್ತಿದ್ರೂ ಯಡಿಯೂರಪ್ಪ ತೆಪ್ಪಗಿದ್ದಾರೆ. ಇವತ್ತು ಕಲ್ಲು ಗಣಿಗಾರಿಕೆ ಮಾಡೊಲ್ಲ ಅನ್ನೋ ಜನಾನೇ ನಾಳೆ ಹತ್ತು ಹಲವು ಕಡೆಯಿಂದ ಒತ್ತಡ ತಂದು ಆ ಕೆಲಸ ಮಾಡ್ತಾರೆ. ಆಗ ಕೂಡ ಯಡಿಯೂರಪ್ಪನೋರು ಮೌನವಾಗಿ ಒಪ್ಪಿಗೆ ಕೊಟ್ಟು ಸುಮ್ಮನಾಗ್ತಾರೆ ಎಂದೆಲ್ಲ ಜನ ಮಾತಾಡಿಕೊಳ್ತಾ ಇದ್ದಾರೆ.

ದಯವಿಟ್ಟು ಅರ್ಥ ಮಾಡಿಕೊಳ್ಳಿ. ಈ ಗಣಿಗಾರಿಕೆಯಿಂದ ನಮ್ಮ ರೈತರ ಬದುಕು ಹಾಳಾಗುತ್ತೆ. ಅವರ ಜಮೀನು ಒತ್ತುವರಿಗೆ ಈಡಾಗುತ್ತೆ. ಅವರಿಗೆ ಒಂದಷ್ಟು ಭಿಕ್ಷೆ ಸಿಗುತ್ತೆ. ಈಗೇನೋ ಗಣಿಗಾರಿಕೆಗೆ ಅನುಮತಿ ಕೊಟ್ರಿ ನಾವು ಫ್ಯಾಕ್ಟರಿ ಆರಂಭಿಸ್ತೀವಿ. ಸ್ಥಳೀಯರಿಗೆ ನೌಕರಿ ಕೊಡ್ತೇವೆ ಎಂದೆಲ್ಲ ಹಣವಂರು ಬೊಂಬಡಾ ಹೊಡೀತಿದಾರೆ ನಿಜ. ಆದರೆ, ಅಲ್ಲಿ ತಳವೂರಿದ ಮೇಲೆ ಎಲ್ಲರಿಗೂ ಸರಿಯಾಗಿ ತಿರುಪತಿ ನಾಮ ಹಾಕಿಬಿಡ್ತಾರೆ. ಗಣಿಗಾರಿಕೆ ಶುರುವಾದ್ರೆ ನಮ್ಮ ಪರಿಸರಕ್ಕೆ ಒಂದು ಸಹಜತೆ ಇದೆ ನೋಡಿ, ಅದೇ ಮಾಯವಾಗಿಬಿಡುತ್ತೆ. ನಿಜ ಹೇಳಬೇಕೆಂದರೆ, ನಿಮ್ಮ ನಂತರ, ನಿಮ್ಮ ಮರಿಮಕ್ಕಳ ನಂತರದ ತಲೆಮಾರಿಗೂ ಕೂಡ ಈ ಪ್ರಾಕೃತಿಕ ಸಂಪತ್ತಿನ ಲಾಭ ದಕ್ಕಬೇಕು. ಹಾಗಿರುವಾಗ ಅದನ್ನು ಈಗಲೇ ಖಾಲಿ ಮಾಡೋದರಲ್ಲಿ ಏನಾದ್ರೂ ಅರ್ಥವಿದೆಯಾ ಸಾರ್? ಒಂದು ಗಿಡವನ್ನು ಬೆಳೆಸೋ ಶಕ್ತಿನೇ ನಿಮಗಿಲ್ಲ ಅಂದಮೇಲೆ ನೂರು ಮರಗಳನ್ನು ಕಡಿಸುವ ಹಕ್ಕು ನಿಮಗೆಲ್ಲಿದೆ ಹೇಳಿ?

ಪ್ಲೀಸ್, ಯಾರದೋ ಒತ್ತಡಕ್ಕೆ ಮಣಿದು ಗಣಿಗಾರಿಕೆ ನಡೀಲಿ ಬಿಡ್ರಿ ಅಂದುಬಿಡಬೇಡಿ. ಈಗ ಕೊಟ್ಟಿರೋ ಆದೇಶವನ್ನು ಹಿಂದಕ್ಕೆ ತಗೊಳ್ಳಿ. ಆ ಮೂಲಕ ಜನಸಾಮಾನ್ಯರ ದನಿಗೆ ದಿಕ್ಕಾಗಿ. ಪರಿಸರ ಉಳಿಯಲಿಕ್ಕೆ ಕಾರಣರಾಗಿ. ನಮಸ್ಕಾರ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more