ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಧನ್ಯ ಎಂದು ಪತ್ರಿಸಿದ್ದರು ವಿಷ್ಣುವರ್ಧನ್!

By * ಎಆರ್ ಮಣಿಕಾಂತ್
|
Google Oneindia Kannada News

Vishnu never neglected his fans
ಒಂದು ನೆನಪಾಗಿ, ಒಂದು ನಗುವಾಗಿ, ಒಂದು ಪತ್ರವಾಗಿ, ಅಳಿಸಲಾರದಂಥ ಚಿತ್ರವಾಗಿ, ಮರೆಯಲಾಗದಂಥ ಮಾತಾಗಿ, ಸದಾ ಕಾಡುವ ಹಾಡಾಗಿ ಕ್ಷಣಕ್ಷಣವೂ ಕೈ ಜಗ್ಗುತ್ತಿರುವವರು ನಟ ವಿಷ್ಣುವರ್ಧನ್. ಅವರು ನಮ್ಮನ್ನು ಅಗಲಿ ಇಂದಿಗೆ ನಲವತ್ತು ದಿನಗಳೇ ಕಳೆದುಹೋಗಿವೆ ನಿಜ. ಆದರೆ ವಿಷ್ಣುವರ್ಧನ್ ನಮ್ಮೊಂದಿಗಿಲ್ಲ ಎನ್ನಲು ಯಾಕೋ ಮನಸ್ಸೇ ಬರುವುದಿಲ್ಲ. ಬದಲಿಗೆ, ವಿಷ್ಣು ಈಗಲೂ ನಮ್ಮೊಂದಿಗೇ ಇದ್ದಾರೆ. ಯಾವುದೋ ಸಿನಿಮಾದ ಶೂಟಿಂಗ್‌ಗೆಂದು ಬೇರೊಂದು ನಾಡಿಗೆ ಹೋಗಿದ್ದಾರೆ. ಇಷ್ಟರಲ್ಲೇ ಬಂದುಬಿಡ್ತಾರೆ ಎಂಬ ಭಾವ ಆಗೊಮ್ಮೆ ಈಗೊಮ್ಮೆ ಸುಳಿದುಹೋಗುತ್ತದೆ.

ಆದರೆ ವಾಸ್ತವ' ಎಂಬುದಿದೆಯಲ್ಲ? ಅದು ನಾವ್ಯಾರೂ ಒಪ್ಪಲಾರದಂಥ ಕಹಿ ಸತ್ಯವನ್ನೇ ಕಣ್ಮುಂದೆ ತಂದು ನಿಲ್ಲಿಸುತ್ತದೆ. ನಿಮ್ಮ ಅಭಿಮಾನವೋ, ಅಕ್ಕರೆಯೋ, ದೇವರೋ, ಆರಾಧನೆಯೋ, ಸೂರ್ತಿಯೋ, ಶಕ್ತಿಯೋ ಆಗಿದ್ದ ಅವರು ನಮ್ಮೊಂದಿಗಿಲ್ಲ. ಇದೇ ಸತ್ಯ. ಒಪ್ಪಿಕೊಳ್ಳಿ' ಅನ್ನುತ್ತದೆ.

ಇಂಥ ಸಂದರ್ಭದಲ್ಲಿ ವಿಷ್ಣು ಅವರು ನಮ್ಮೊಂದಿಗಿಲ್ಲ' ಎಂಬ ಕಹಿ ಸತ್ಯವನ್ನು ತುಂಬ ಸಂಕಟದಿಂದಲೇ ಒಪ್ಪಬೇಕಾಗುತ್ತದೆ. ಹಿಂದೆಯೇ ಅವರು ಹೇಗಿದ್ದರು? ಗೆಳೆಯರೊಂದಿಗೆ, ಬಂಧುಗಳೊಂದಿಗೆ, ಪತ್ರಕರ್ತರೊಂದಿಗೆ, ಪರಮಾಪ್ತರೊಂದಿಗೆ ಹೇಗೆ ಮಾತಾಡುತ್ತಿದ್ದರು ಎಂಬ ಪ್ರಶ್ನೆ ನೂರಾ ಒಂದನೇ ಬಾರಿಗೆ ಕೇಳಿ ಬರುತ್ತದೆ. ಇದಕ್ಕೆ ಹೆಚ್ಚಿನವರು ಪ್ರತಿಕ್ರಿಯಿಸುವುದು ಹೀಗೆ : ಹೆಚ್ಚಿನ ಸಂದರ್ಭಗಳಲ್ಲಿ ವಿಷ್ಣುವರ್ಧನ್ ಅನ್ಯಮನಸ್ಕರಾಗಿರ್‍ತಿದ್ದರು. ಅವರು ಹೆಚ್ಚಾಗಿ ಮಾತಾಡುತ್ತಿರಲಿಲ್ಲ. ಒಂದು ವೇಳೆ ಮಾತಾಡಿದರೂ ಅದು ಅಧ್ಯಾತ್ಮದ ಕುರಿತೇ ಇರುತ್ತಿತ್ತು. ಬದುಕಿನ ನಶ್ವರತೆಯ ಬಗ್ಗೆ ಅವರು ಹೆಚ್ಚಾಗಿ ಮಾತನಾಡುತ್ತಿದ್ದರು...' ಇತ್ಯಾದಿ, ಇತ್ಯಾದಿ... ಆದರೆ ಅದಷ್ಟೇ ನಿಜವಲ್ಲ. ವಿಷ್ಣುವರ್ಧನ್ ಅವರೊಳಗೆ ಒಬ್ಬ ಅಕ್ಕರೆಯ ತಮ್ಮನಿದ್ದ. ಪ್ರೀತಿಸುವ ಗೆಳೆಯನಿದ್ದ. ಬುದ್ಧಿ ಹೇಳುವ ಅಣ್ಣನಿದ್ದ. ಆತ ಅಭಿಮಾನಿಗಳೊಂದಿಗೆ ಆಪ್ತವಾಗಿ ಬೆರೆಯುತ್ತಿದ್ದ. ಅವರ ಸುಖ-ದುಃಖ ವಿಚಾರಿಸುತ್ತಿದ್ದ. ಅವರ ಸಲಹೆಗಳಿಗೆ ಕಿವಿಯಾಗುತ್ತಿದ್ದ. ಅಷ್ಟೇ ಅಲ್ಲ, ಬಿಡುವು ಮಾಡಿಕೊಂಡು ಪತ್ರ ಬರೆಯುತ್ತಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ಈ ಬರಹ. ಇಲ್ಲಿ ವಿಷ್ಣುವರ್ಧನ್ ಅವರ ಅಭಿಮಾನದ ಪತ್ರವಿದೆ. ಅವರಿಂದ ಪತ್ರ ಬರೆಸಿಕೊಂಡ ಅಭಿಮಾನಿಯ ನೆನಪಿನ ಬುತ್ತಿಯಿದೆ- ಓದಿಕೊಳ್ಳಿ.

***
ಇವರ ಹೆಸರು ಸತ್ಯಪ್ರಕಾಶ್. ಇವರೀಗ ಬೆಂಗಳೂರಿನ ಅವಲಹಳ್ಳಿ ಬಸ್‌ನಿಲ್ದಾಣದ ಬಳಿ ಅನಂತ ಸತ್ಯ ಎಸೆನ್ಶಿಯಲ್ ಕಾರ್ನರ್ ಎಂಬ ಅಂಗಡಿ ಇಟ್ಟುಕೊಂಡಿದ್ದಾರೆ. ವಿಷ್ಣುವರ್ಧನ್ ಅಭಿನಯದ ನಾಗರಹಾವು' ಚಿತ್ರ ತೆರೆಕಂಡಾಗ ಈ ಸತ್ಯಪ್ರಕಾಶ್‌ಗೆ ಹದಿನೇಳರ ಹರೆಯ. ಅವರು ಹೇಳುತ್ತಾರೆ : ಆ ಸಿನಿಮಾ ನೋಡಿದ ದಿನವೇ ವಿಷ್ಣುವರ್ಧನ್ ಅವರ ಅಭಿಮಾನಿ ಆಗಿಬಿಟ್ಟೆ ಸಾರ್. ಆ ನಂತರದಲ್ಲಿ ಬಿಡುಗಡೆಯಾದ ದಿನವೇ ಅವರ ಸಿನಿಮಾ ನೋಡುವುದು, ಅವರ ಮಾತು, ಹಾವಭಾವ, ನಡೆದಾಡುವ ಭಂಗಿಯನ್ನು ಅನುಕರಿಸುವುದು... ಇದೆಲ್ಲಾ ನನ್ನ ಬದುಕಿನ ಒಂದು ಭಾಗವೇ ಆಗಿಹೋಯ್ತು. ಒಂದೇ ಒಂದು ಸಾರಿ ಅವರನ್ನು ಪ್ರತ್ಯಕ್ಷವಾಗಿ ನೋಡಬೇಕು ಅಂತ ಪದೇಪದೆ ಅಂದುಕೊಳ್ತಿದ್ದೆ. ಆದರೆ ಸಾಧ್ಯವಾಗಿರಲಿಲ್ಲ...'

ಹೀಗೆನ್ನುವ ಸತ್ಯಪ್ರಕಾಶ್ ಅವರಿಗೆ ವಿಷ್ಣುವರ್ಧನ್‌ರನ್ನು ಭೇಟಿಯಾಗುವ ಅವಕಾಶ ಸಿಕ್ಕಿದ್ದು ಕೂಡ ಆಕಸ್ಮಿಕವಾಗಿ. ಅದು ಹೀಗೆ : 1985ರಲ್ಲಿ ನಟ ವಿಜಯಕಾಂತ್ ಅವರೊಂದಿಗೆ ವಿಷ್ಣುವರ್ಧನ್ ಈಟಿ ಎಂಬ ತಮಿಳು ಚಿತ್ರದಲ್ಲಿ ಅಭಿನಯಿಸಿದ್ದರು. ವಿಷ್ಣು ನಟಿಸಿದ ಮೊದಲ ತಮಿಳು ಸಿನಿಮಾ ಅದು. ವಾಣಿಜ್ಯ ಮಂಡಳಿಯ ಅಂದಿನ ನಿಯಮಾವಳಿಯಂತೆ ತಮಿಳು ಚಿತ್ರವೊಂದು ಏಕಕಾಲಕ್ಕೆ ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಬಿಡುಗಡೆ ಆಗುವಂತಿರಲಿಲ್ಲ.

ಚಿತ್ರ ಬಿಡುಗಡೆಯ ದಿನ ಹತ್ತಿರಾದಂತೆಲ್ಲ ಅಭಿಮಾನಿಗಳಿಗೆ ಕುತೂಹಲ. ತಮಿಳಿನಲ್ಲಿ ವಿಷ್ಣುವರ್ಧನ್ ಹೇಗೆ ಅಭಿನಯಿಸಿರಬಹುದು? ಹೇಗೆ ಡೈಲಾಗ್ ಹೇಳಿರಬಹುದು? ಹೇಗೆಲ್ಲ ಫೈಟ್ ಮಾಡಿರಬಹುದು ಎಂದು ತಿಳಿಯುವ ತಹತಹ. ಇಂಥ ಅಭಿಮಾನಿಗಳ ಹಿಂಡಿನಲ್ಲಿ ಸತ್ಯಪ್ರಕಾಶ್ ಕೂಡ ಇದ್ದರು ಎಂದು ಬಿಡಿಸಿಹೇಳಬೇಕಿಲ್ಲ ತಾನೆ? ಅಭಿಮಾನದ ಮುಂದೆ ಚೆನ್ನೈ ಅದ್ಯಾವ ಮಹಾ ದೂರ? ಈಟಿ ಸಿನಿಮಾವನ್ನು ಬಿಡುಗಡೆಯಾದ ದಿನವೇ ನೋಡಬೇಕೆಂಬ ಏಕೈಕ ಉದ್ದೇಶದಿಂದ ಇಬ್ಬರು ಗೆಳೆಯರೊಂದಿಗೆ ಚೆನ್ನೈಗೆ ಹೋಗಿಯೇಬಿಟ್ಟರು ಸತ್ಯಪ್ರಕಾಶ್. ಅಲ್ಲಿ ಸಿನಿಮಾ ನೋಡಿದ್ದೂ ಆಯಿತು. ಹೀಗಿದ್ದಾಗಲೇ ಆಕಸ್ಮಿಕವಾಗಿ, ವಿಜಯಕಾಂತ್ ಅವರನ್ನು ಭೇಟಿಯಾಗುವ ಅದೃಷ್ಟ ಸತ್ಯಪ್ರಕಾಶ್ ಮತ್ತು ಗೆಳೆಯರದ್ದಾಯಿತು. ತಾವೆಲ್ಲ ವಿಷ್ಣುವರ್ಧನ್ ಅವರ ಅಭಿಮಾನಿಗಳೆಂದೂ, ಈಟಿ ಸಿನಿಮಾ ನೋಡುವ ಉದ್ದೇಶದಿಂದಲೇ ಬೆಂಗಳೂರಿನಿಂದ ಬಂದೆವೆಂದೂ ಇವರು ಹೇಳಿಕೊಂಡರು. ಈ ಮಾತಿಂದ ತುಂಬ ಖುಷಿಯಾದ ವಿಜಯಕಾಂತ್- ನಿಮ್ಮ ಪ್ರೀತಿಯ ವಿಷ್ಣುವರ್ಧನ್ ಅವರು ಹತ್ತಿರದ ಶಾರದಾ ಸ್ಟುಡಿಯೋದಲ್ಲಿ ಶೂಟಿಂಗ್‌ನಲ್ಲಿ ಇದ್ದಾರೆ. ಈಗ ಅಲ್ಲಿಗೆ ಡ್ರಾಪ್ ಕೊಡಿಸ್ತೀನಿ. ಅವರನ್ನು ಭೇಟಿ ಮಾಡಿ' ಎಂದರು. ಹಿಂದೆಯೇ ಶಾರದಾ ಸ್ಟುಡಿಯೋಗೆ ಫೋನ್ ಮಾಡಿ ವಿಷ್ಣುವರ್ಧನ್ ಅವರಿಗೆ ಎಲ್ಲ ವಿಷಯ ತಿಳಿಸಿದರು. ಅಷ್ಟೇ ಅಲ್ಲ, ಈ ಅಭಿಮಾನಿಗಳನ್ನು ತಮ್ಮ ಕಾರ್‌ನಲ್ಲಿಯೇ ಶಾರದಾ ಸ್ಟುಡಿಯೋಗೆ ಕಳಿಸಿಕೊಟ್ಟರು.

ಅಲ್ಲಿ ನೀ ತಂದ ಕಾಣಿಕೆ' ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಸತ್ಯಪ್ರಕಾಶ್ ಮತ್ತು ಗೆಳೆಯರು ಹೂವಿನ ಹಾರಗಳೊಂದಿಗೆ ಅಲ್ಲಿಗೆ ಹೋದರು. ಇವರನ್ನು ಪ್ರೀತಿಯಿಂದ ಸ್ವಾಗತಿಸಿದ ವಿಷ್ಣು ಹೇಳಿದರಂತೆ : ಈ ಹಾರವೆಲ್ಲಾ ಯಾಕೆ? ನಾವೂ ನಿಮ್ಮ ಹಾಗೆ ಸಾಮಾನ್ಯ ಮನುಷ್ಯರೇ. ಸಿನಿಮಾ ನಟ ಅಂದಾಕ್ಷಣ ನೀವು ಏನೇನೋ ಕಲ್ಪಿಸಿಕೊಳ್ಳಬೇಡಿ. ಈ ಹಾರವನ್ನು ನಾವು ಐದು ನಿಮಿಷ ಹಾಕ್ಕೊಂಡಿದ್ದು ಆಮೇಲೆ ಬಿಸಾಕ್ತೀವಿ. ವಿಷಯ ಹೀಗಿರುವಾಗ ಹೂವಿನ ಹಾರಕ್ಕೆ ಯಾಕೆ ದುಡ್ಡು ಖರ್ಚು ಮಾಡ್ತೀರಿ? ಅದೇ ಹಣವನ್ನು ಯಾವುದಾದರೂ ಸತ್ಕಾರ್ಯಕ್ಕೆ ಬಳಸಿ. ಯಾರಾದರೂ ಬಡವರಿಗೆ, ಅಸಹಾಯಕರಿಗೆ ಸಹಾಯ ಮಾಡಿ. ನೀವು ತುಂಬ ಅಭಿಮಾನ ಇಟ್ಕೊಂಡು ಬರ್‍ತೀರಲ್ಲ, ಅದೇ ನನಗೆ ದೊಡ್ಡ ಉಡುಗೊರೆ. ಅದಕ್ಕೆ ಸಮನಾದದ್ದು ಬೇರೆ ಏನೂ ಇಲ್ಲ...'

ಮೆಚ್ಚಿನ ನಟ ಮೊದಲ ಭೇಟಿಯಲ್ಲೇ ಹೀಗೆ ಆಪ್ತವಾಗಿ ಮಾತಾಡಿದ್ದು ಕಂಡು ಸತ್ಯಪ್ರಕಾಶ್ ಮತ್ತು ಗೆಳೆಯರಿಗೆ ಸ್ವರ್ಗ ಮೂರೇಗೇಣು. ಆನಂತರದಲ್ಲಿ ಪ್ರತಿವರ್ಷವೂ ವಿಷ್ಣು ಅವರ ಹುಟ್ಟುಹಬ್ಬದಂದು ಮುಖತಃ ಭೇಟಿಯಾಗಿ ಅಭಿನಂದಿಸುವುದು ಸತ್ಯಪ್ರಕಾಶ್ ಮತ್ತು ಗೆಳೆಯರ ಕರ್ತವ್ಯವೇ ಆಗಿಹೋಯಿತು. ಆ ದಿನಗಳಲ್ಲಿ ಚೆನ್ನೈನಲ್ಲಿ ವಾಸವಿದ್ದ ವಿಷ್ಣುವರ್ಧನ್, ಬೆಂಗಳೂರಿಗೆ ಬಂದರೆ ಅಶೋಕ ಹೋಟೆಲಿನ ರೂಂ. ನಂ. 408ರಲ್ಲಿ ಅಥವಾ ಎಂ.ಜಿ. ರಸ್ತೆಯ ಅಪಾರ್ಟ್‌ಮೆಂಟ್‌ನಲ್ಲಿ ಉಳಿಯುತ್ತಿದ್ದರು. ಹುಟ್ಟುಹಬ್ಬ ಕೂಡ ಅಲ್ಲಿಯೇ ನಡೆಯುತ್ತಿತ್ತು. (ಈ ಸಂದರ್ಭದಲ್ಲಿ ಗದ್ದಲವಾದರೆ ಅಕ್ಕಪಕ್ಕದ ರೂಂ/ಮನೆಗಳಲ್ಲಿ ಇರುವವರಿಗೆ ತೊಂದರೆ ಆಗುತ್ತೆ ಎಂದು ಯೋಚಿಸಿ, ದಯವಿಟ್ಟು ಶಾಂತವಾಗಿ ವರ್ತಿಸಿ ಎಂದು ಎಲ್ಲರಿಗೂ ಮನವಿ ಮಾಡುತ್ತಿದ್ದರಂತೆ ವಿಷ್ಣು). ಯಥಾಪ್ರಕಾರದಂತೆ ಕೇಕ್ ಕತ್ತರಿಸುವುದು, ಗೆಳೆಯರು ಬಂಧುಗಳೊಂದಿಗೆ ಊಟ ಮಾಡುವುದು, ಶುಭಾಶಯ ಹಂಚಿಕೊಳ್ಳುವುದು... ಹೀಗಿರುತ್ತಿತ್ತು ಹುಟ್ಟುಹಬ್ಬದ ಪಾರ್ಟಿ.

ಅದೊಮ್ಮೆ ಇಂಥ ಪಾರ್ಟಿಯನ್ನು ನೋಡಿದ ಸತ್ಯಪ್ರಕಾಶ್‌ಗೆ ತನ್ನ ಅಭಿಮಾನದ ನಟನ ಹಟ್ಟುಹಬ್ಬ ಬೇರೆ ಥರದಲ್ಲಿ ನಡೆದರೆ ಚೆಂದ ಅನ್ನಿಸಿದಂತೆ. ಅವತ್ತೇ ಕೂತು ಭರ್ತಿ ಎಂಟು ಪುಟಗಳ ಪತ್ರ ಬರೆದವರೇ ಮರುದಿನವೇ ಎಂ.ಜಿ. ರಸ್ತೆಯ ಅಪಾರ್ಟ್‌ಮೆಂಟ್‌ಗೆ ಹೋಗಿ, ವಿಷ್ಣುವರ್ಧನ್ ಅವರಿಗೇ ಪತ್ರ ತಲುಪಿಸಿ ಬಂದುಬಿಟ್ಟರು. ಅದರಲ್ಲಿ ಬರ್ತ್‌ಡೇನ ಹೇಗೆ ಆಚರಿಸಿದರೆ ಚೆಂದ ಎಂಬ ವಿವರಣೆಯಿತ್ತು. ಹಿರಿಯ ಕಲಾವಿದರನ್ನು ಸನ್ಮಾನಿಸುವ ಮೂಲಕ, ಸಮಾಜ ಸೇವೆಯಂಥ ಕಾರ್ಯದ ಮೂಲಕ ಬರ್ತ್‌ಡೇ ಆಚರಿಸಿಕೊಳ್ಳಿ ಎಂಬ ಸಲಹೆಯೂ ಇತ್ತು.

ಹದಿನೈದು ದಿನಗಳ ನಂತರ ಸತ್ಯಪ್ರಕಾಶ್ ಅವರ ವಿಳಾಸಕ್ಕೆ ಒಂದು ಪತ್ರ ಬಂತು. ಅದರಲ್ಲಿ ವಿಷ್ಣುವರ್ಧನ್ ಹೀಗೆ ಬರೆದಿದ್ದರು : ನಿಮ್ಮ ಪತ್ರವನ್ನು ಓದಿ ಬಹಳ ಸಂತೋಷವಾಯಿತು. ತಾವು ಈ ಪತ್ರ ತಲುಪಿದೊಡನೆ ಕಂಠೀರವ ಸ್ಟುಡಿಯೋದಲ್ಲಿ ನನ್ನನ್ನು ಭೇಟಿಯಾಗುವುದು. ಅಲ್ಲಿ ನಾವು ಕೂಲಂಕಶವಾಗಿ ಮಾತನಾಡಬಹುದು. ನಿಮ್ಮ ಪತ್ರದಲ್ಲಿ ನೀವು ಕೊಟ್ಟಿರುವ ಸಲಹೆಗಳನ್ನು ನಾನು ನಿಮ್ಮ ಬಳಿ ಚರ್ಚಿಸುತ್ತೇನೆ. ನಿಮ್ಮಂಥ ಅಭಿಮಾನಿಯನ್ನು ಪಡೆದ ನಾನು ಧನ್ಯ. ನಿಮಗೆ ಬಿಡುವಾದಾಗ, ಅಂದರೆ ಇನ್ನೊಂದು, ಎರಡು ದಿನಗಳಲ್ಲಿ ಸ್ಟುಡಿಯೋದಲ್ಲಿ ಭೇಟಿಯಾಗಿ... ನಿಮ್ಮ, ವಿಷ್ಣುವರ್ಧನ್.

***
ವಿಪರಾಸ್ಯಗಳು ಹೇಗಿರುತ್ತವೆಯೋ ನೋಡಿ. ವಿಷ್ಣುವರ್ಧನ್ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದ ದಿನವೇ ಆಪ್ತಮಿತ್ರನ ಮದುವೆ ಇತ್ತು. ಹಾಗಾಗಿ ಸತ್ಯಪ್ರಕಾಶ್ ಅವರಿಗೆ ತಮ್ಮ ಆರಾಧ್ಯ ದೈವವನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಇವರು ನೀಡಿದ್ದ ಸಲಹೆಗಳ ಬಗ್ಗೆ ವಿಷ್ಣು ಅದೆಷ್ಟು ಕಾಳಜಿ ತೋರಿದರೆಂದರೆ, ಮುಂದಿನ ವರ್ಷ ಈ ಅಭಿಮಾನಿಯ ಸಲಹೆ-ಸೂಚನೆಯಂತೆಯೇ ನಟ ಬಾಲಕೃಷ್ಣ ಅವರನ್ನು ಸನ್ಮಾನಿಸುವ ಮೂಲಕ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರಂತೆ...

ಈಗ, ಅವಲಹಳ್ಳಿಯಲ್ಲಿರುವ ತಮ್ಮ ಅಂಗಡಿಯಲ್ಲಿ ನಿಂತು ಹಳೆಯ ನೆನಪುಗಳನ್ನೆಲ್ಲ ಹೇಳುತ್ತ ಹೇಳುತ್ತಲೇ ಕಣ್ತುಂಬಿಕೊಳ್ಳುತ್ತಾರೆ ಸತ್ಯಪ್ರಕಾಶ್ (ಮೊಬೈಲ್ : 98808 11197). ಅವರ ಮಾತನ್ನೆಲ್ಲ ಕೇಳಿದ ನಂತರ- ವಿಷ್ಣು ಜೀ, ವಿ ಮಿಸ್ ಯೂ...' ಎಂದು ಸಂಕಟದಿಂದ ಹೇಳಬೇಕು ಅನಿಸುತ್ತದೆ. ಆದರೆ, ವಿಷ್ಣೂಜೀ ಅನ್ನುತ್ತಿದ್ದಂತೆಯೇ ಕಣ್ಣು ಮಂಜುಮಂಜಾಗಿ ಗಂಟಲು ಗದ್ಗದವಾಗುತ್ತದೆ... ಯಾಕೋ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X