ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಲ್ಲಿಂದಲೇ ಕೈ ಮುಗಿದರೆ ಅಲ್ಲಿಂದಲೇ ಹರಸಿದರು!

By * ಎ.ಆರ್. ಮಣಿಕಾಂತ್
|
Google Oneindia Kannada News

Venkamma and KS Narasimha Swamy
ನಮ್ಮಲ್ಲಿ ಹೆಚ್ಚಿನವರು ಅಂಥದೊಂದು ಕೆಲಸ ಮಾಡುತ್ತಾರೆ. ಏನೆಂದರೆ -ಮನಮೆಚ್ಚಿದ ಹುಡುಗ/ ಹುಡುಗಿಯನ್ನು ವರ್ಣಿಸಿ ಪದ್ಯ ಬರೆಯುತ್ತಾರೆ. ಒಂದು ವೇಳೆ ಹೀಗೆ ಬರೆಸಿಕೊಂಡವರು ನಂತರ ಕೈತಪ್ಪಿ ಹೋದರೆ, ಅದೇ ನೆನಪಿನಲ್ಲಿ ಮತ್ತಷ್ಟು ಪದ್ಯ ಬರೆಯುತ್ತಾರೆ. ಆ ಪದ್ಯಗಳಲ್ಲಿ ಅವಳ(ನ)ನ್ನು ಯಾವುದೋ ಒಂದು ಗುಪ್ತ ಹೆಸರಿಂದ ಕರೆಯುತ್ತಾರೆ. ಅದನ್ನು ಪರಮಾಪ್ತರ ಮುಂದೆ ಹೇಳಿಕೊಂಡು ಎದೆಯನ್ನು ಹಗುರ ಮಾಡಿಕೊಳ್ಳುತ್ತಾರೆ. ಹಿಂದೆಯೇ ಇದು ಗುಟ್ಟಿನ ವಿಚಾರ. ಯಾರಿಗೂ ಹೇಳಬಾರ್‍ದು ಪ್ಲೀಸ್' ಎಂಬ ಎಚ್ಚರಿಕೆಯನ್ನೂ ನೀಡುತ್ತಾರೆ. ಇಂಥ ವಿಷಯಗಳಲ್ಲಿ ಹುಡುಗಿಯರಿಗಿಂತ ಹುಡುಗರೇ ಮುಂದಿರುತ್ತಾರೆ. ಸ್ವಾರಸ್ಯವೆಂದರೆ, ಕೈ ತಪ್ಪಿ ಹೋದ (ಒಂದೊಂದು ಸಂದರ್ಭದಲ್ಲಿ ಮೋಸ ಮಾಡಿ ಹೋದ) ಹುಡುಗಿಯನ್ನೂ ಮಲ್ಲಿಗೆ, ಸಂಪಿಗೆ, ಅಪ್ಸರೆ, ಕರುಣಾಮಯಿ ಎಂದೆಲ್ಲಾ ವರ್ಣಿಸಿರುತ್ತಾರೆ- ಪದ್ಯಗಳಲ್ಲಿ.

ಬದುಕಿದ್ದ ಅಷ್ಟೂ ದಿನ ಪ್ರೀತಿಯನ್ನೇ ಉಸಿರಾಡಿದವರು, ಪ್ರೀತಿಯನ್ನೇ ಧ್ಯಾನಿಸಿದವರು, ಪ್ರೀತಿಯ ಬಗ್ಗೆಯೇ ಬರೆದವರು ಕೆ.ಎಸ್. ನರಸಿಂಹಸ್ವಾಮಿ. ಒಂದೆರಡಲ್ಲ, ಒಟ್ಟು ಹದಿನೇಳು ಕವನ ಸಂಕಲನಗಳನ್ನೂ ಪ್ರಕಟಿಸಿದ್ದು ಅವರ ಹೆಚ್ಚುಗಾರಿಕೆ. ಸ್ವಾರಸ್ಯವೆಂದರೆ, ಎಲ್ಲ ಪದ್ಯಗಳಲ್ಲೂ ಪ್ರೀತಿ'ಯ ವಿಷಯವನ್ನೇ ಜತೆಗಿಟ್ಟುಕೊಂಡು ಕಾವ್ಯದ ಮಾಲೆ ಕಟ್ಟಿದವರು ಕೆ.ಎಸ್.ನ. ಉಳಿದೆಲ್ಲ ಕವಿಗಳೂ ಆರಂಭದ ದಿನಗಳಲ್ಲಿ ವಯೋಸಹಜ ಎಂಬಂತೆ ಪ್ರೇಮಗೀತೆ ಬರೆದು ನಂತರದಲ್ಲಿ ಕಾವ್ಯದ ಬೇರೆ ಬೇರೆ ಪ್ರಾಕಾರಕ್ಕೆ ಹೊರಳಿಕೊಂಡರು ನಿಜ. ಆದರೆ, 85 ತುಂಬಿದ ನಂತರವೂ ಕೆ.ಎಸ್.ನ ಪ್ರೀತಿ- ಪ್ರೇಮದ ಪಲ್ಲಕ್ಕಿಯಲ್ಲಿ ಕುಳಿತೇ ಮಲ್ಲಿಗೆ, ಸಂಪಿಗೆ, ಜಾಜಿ, ಮುರುಗದಂಥ ಮಧುರಾತಿ ಮಧುರ ಹಾಡು ಕಟ್ಟಿದರು. ಅವರ ಪದ್ಯಗಳೆಲ್ಲ ಆಗಷ್ಟೇ ಅರಳಿದ ಪಾರಿಜಾತದ ಘಮದಂತೆ ಫ್ರೆಶ್' ಆಗಿದ್ದವು. ತಾಜಾ ಆಗಿದ್ದವು.

ಮುತ್ತನಿಡುವೆನು ಅರಳು ಪ್ರೇಮದ ಗುಲಾಬಿಯೇ
ಮುತ್ತನಿಡುವೆನು, ನಕ್ಕು, ಮುತ್ತ ಸುರಿಸು
ಸುತ್ತಸಾವಿರ ಹೂವು ಕತ್ತೆತ್ತಿ ನೋಡಿದರೆ
ಅತ್ತ ಹೋಗದಿದು, ನಿನ್ನ ಹಿಡಿದ ಮನಸು.
***
ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ
ನಿನ್ನೊಳಿದೆ ನನ್ನ ಮನಸು
ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ
ನಿನ್ನೊಲುಮೆ ನನ್ನ ಕಂಡು
***
ತಾರೆಯಿಂದ ತಾರೆಗವಳು ಅಡಿಯಿಡುವುದ ಕಂಡೆನು
ಹೂವನಸೆದು ನಡೆದಳವಳು ಒಂದೆರಡನು ತಂದೆನು
ಇವಳು ಯಾರು ಬಲ್ಲಿರೇನೂ....
***
ನಡು ಬೆಟ್ಟದಲ್ಲಿ ನಿನ್ನೂರು
ಅಲ್ಲಿಹವು ನವಿಲು ಮುನ್ನೂರು
ಮುನ್ನೂರು ನವಿಲು ಬಂದಂತೆ
ನೀ ಬಂದರೆನಗೆ; ಸಿರಿವಂತೆ
ಅಂತಿಂಥ ಹೆಣ್ಣು ನೀನಲ್ಲ...

ಹೀಗೆಲ್ಲ ಬರೆದವರು ಕೆ.ಎಸ್.ನ. ಪದ್ಯಗಳಲ್ಲಿ ಮೀನಾಕ್ಷಿ, ಕಾಮಾಕ್ಷಿ, ರತ್ನ, ಪದುಮ, ಗೌರಿ, ಶಾರದೆ ಎಂದೆಲ್ಲ ಕರೆಸಿಕೊಂಡ ಅವರ ಕಥಾನಾಯಕಿಗೆ ಯಾವಾಗಲೂ 25ರ ಏರು ಹರೆಯ! ಆಕೆ ಸುಂದರಿ, ಸುಶೀಲೆ, ಸೊಗಸುಗಾತಿ ಮತ್ತು ಕರುಣಾಮಯಿ. ಕೆ.ಎಸ್.ನ. ಅವರ ಪದ್ಯಗಳನ್ನು ಖುಷಿ ಹಾಗೂ ಬೆರಗಿನಿಂದ ಓದುತ್ತಿದ್ದ ಹಲವರು ತಮ್ಮ ತಮ್ಮೊಳಗೇ ಹೀಗೆ ಪಿಸುಗುಡುತ್ತಿದ್ದುದುಂಟು: ಬಹುಶಃ ಕೆ.ಎಸ್.ನ. ಕೂಡ ಯಾರನ್ನೋ ಪ್ರೀತಿಸಿದ್ರು ಅಂತ ಕಾಣುತ್ತೆ. ಮುಂದೆ, ಆಕೆ ಕೈತಪ್ಪಿ ಹೋಗಿರಬೇಕು. ಅದೇ ನೆನಪಲ್ಲಿ ಅವರು ಒಂದೊಂದೇ ಪದ್ಯ ಬರೆದಿದ್ದಾರೆ ಅನಿಸುತ್ತೆ. ತಮ್ಮ ಮನಸ್ಸು ಗೆದ್ದವಳ ಗುರುತು ಯಾರಿಗೂ ಸಿಗದಿರಲಿ ಎಂಬ ಕಾರಣದಿಂದಲೇ ಅವರು ಕಥಾ ನಾಯಕಿಗೆ ಬಗೆಬಗೆಯ ಹೆಸರು ಕೊಟ್ಟಿರಬೇಕು. ಇದೇ ಸತ್ಯವಿರಬೇಕು. ಪ್ರೇಯಸಿಯ ಬಗ್ಗೆ ಬರೆಯಲು ಹೊರಟರೆ ಪದ್ಯ ತಾನಾಗೇ ಸೃಷ್ಟಿಯಾಗುತ್ತೆ. ಅಂದುಕೊಂಡಿದ್ದಕ್ಕಿಂತ ಚೆನ್ನಾಗಿಯೂ ಇರುತ್ತೆ. ಅದು ಬಿಟ್ಟು ಯಾರಾದ್ರೂ ಹೆಂಡತಿಯ ಮೇಲೆ ಇಷ್ಟೊಂದು ಚೆಂದ ಚೆಂದದ ಪದ್ಯಗಳನ್ನು ಬರೀತಾರಾ? ಹೆಂಡತೀನ ಉದಾಹರಣೆ ಇಟ್ಕೊಂಡು ಒಳ್ಳೇ ಪದ್ಯ ಬರೆಯೋಕಾಗುತ್ತಾ? ಛೆ, ಇರಲಿಕ್ಕಿಲ್ಲ ಬಿಡ್ರಿ...

ಮುಂದೊಂದು ದಿನ ಇಂಥ ಪಿಸುಮಾತುಗಳೆಲ್ಲ ಕೆ.ಎಸ್.ನ. ಅವರ ಪತ್ನಿ ಶ್ರೀಮತಿ ವೆಂಕಮ್ಮನವರ ಕಿವಿಗೂ ಬಿದ್ದವು. ಅದೊಂದು ದಿನ ಕೆ.ಎಸ್.ನ ಅವರ ಮಗ್ಗುಲಲ್ಲಿ ಕೂತೇ ವೆಂಕಮ್ಮನವರು ತುಂಬ ಸ್ಪಷ್ಟವಾಗಿ ಹೇಳಿದ್ದರು: ನಮ್ಮ ಯಜಮಾನರು ಶ್ರೀ ರಾಮಚಂದ್ರ ಇದ್ದ ಹಾಗೆ, ಬೇರೊಂದು ಹೆಣ್ಣನ್ನು ಅವರು ಕಣ್ಣೆತ್ತಿ ಕೂಡ ನೋಡಿದವರಲ್ಲ. ಅವರ ಪದ್ಯಗಳಲ್ಲಿ ಬರುವ ಕಾಮಾಕ್ಷಿ, ಪದುಮ, ಗೌರಿ, ರತ್ನ, ಮೀನಾಕ್ಷಿ ಎಲ್ಲವೂ ನಾನೇ. ವೆಂಕಮ್ಮ' ಅನ್ನೋ ಹೆಸರು ಪದ್ಯದಲ್ಲಿ ಚೆನ್ನಾಗಿ ಕಾಣಿಸೋದಿಲ್ಲ ನೋಡಿ; ಹಾಗಾಗಿ ಸ್ವಲ್ಪ ಫ್ಯಾಷನ್ನಾಗಿ ಕಾಣುವಂಥ ಹೆಸರುಗಳನ್ನು ಯಜಮಾನರು ಬಳಸಿದ್ದಾರೆ, ಅಷ್ಟೆ...

ಆ ನಂತರದ ದಿನಗಳಲ್ಲಿ ಮೈಸೂರ ಮಲ್ಲಿಗೆ'ಯ ಹಾಡುಗಳನ್ನು ಕೇಳಿದಾಗೆಲ್ಲ- ಇಷ್ಟೊಂದು ಕವನಗಳಿಗೆ ನಾಯಕಿಯಾದ ವೆಂಕಮ್ಮನವರು ಪುಣ್ಯವಂತೆ ಅನ್ನಿಸುತ್ತಿತ್ತು. ಕೆ.ಎಸ್.ನ.ರೊಂದಿಗೆ ಅವರ ಮಧುರ ಪ್ರೇಮದ ನೆನಪಾಗಿ ಹೆಮ್ಮೆಯಾಗುತ್ತಿತ್ತು. ಜತೆಗೇ ಒಂದಿಷ್ಟು ಅಸೂಯೆಯೂ...

***
ಕೆ.ಎಸ್.ನ ಹುಟ್ಟಿದ್ದು ಜನವರಿ 26ರಂದು. ಅದೇ ನೆಪದಿಂದ ಮನೆಯಲ್ಲಿ ಹಬ್ಬದಡುಗೆ ಮಾಡಿದರೆ, ಹೆಂಡತಿ- ಮಕ್ಕಳನ್ನೆಲ್ಲ ಕರೆದು ಕೆ.ಎಸ್.ನ ಹೇಳುತ್ತಿದ್ದರಂತೆ: ನೋಡಿ, ನನ್ನ ಬರ್ತ್‌ಡೇನ ದೇಶಕ್ಕೆ ದೇಶವೇ ಹೆಮ್ಮೆಯಿಂದ ಆಚರಿಸ್ತಾ ಇದೆ!' ದಾಂಪತ್ಯ ಜೀವನದ ಉದ್ದಕ್ಕೂ ವರ್ಷ ವರ್ಷವೂ ಯಜಮಾನರಿಂದ ಇಂಥ ತಮಾಷೆಯ ಮಾತುಗಳನ್ನು ಕೇಳುತ್ತಲೇ ಬಂದವರು ವೆಂಕಮ್ಮ. ಈ ಮಾತುಗಳನ್ನೆಲ್ಲ ಅವರು ತಮ್ಮ ಬಂಧುಗಳು ಹಾಗೂ ಆಪ್ತರ ಬಳಿ ಹೇಳಿಕೊಂಡು ಖುಷಿಪಡುತ್ತಿದ್ದರು. ಹೀಗಿದ್ದಾಗಲೇ ತುಂಬ ಅವಸರದಲ್ಲೇ ಒಂದಷ್ಟು ಬದಲಾವಣೆಯಾಯಿತು. ಕವಿ ಕೆ.ಎಸ್.ನ ಎಂದೂ ಬಾರದ ಲೋಕಕ್ಕೆ ಹೋಗಿಬಿಟ್ಟರು.

ಓಡುವ ಕಾಲಕ್ಕೆ ಯಾವ ತಡೆ? ಕೆ.ಎಸ್.ನ ಅವರಿಲ್ಲದಿದ್ದರೂ ಮತ್ತೊಮ್ಮೆ ಜನವರಿ 26ರ ದಿನ ಬಂದೇ ಬಂತು. ನನ್ನ ಬರ್ತ್‌ಡೇನ ಇಡೀ ದೇಶವೇ ಆಚರಿಸುತ್ತದೆ' ಎಂದು ಕೆ.ಎಸ್.ನ ಹೇಳುತ್ತಿದ್ದ ಮಾತು ನೆನಪಿಗೆ ಬಂತು. ಮನೇಲಿ ಅಪ್ಪ ಇಲ್ಲ. ಅಮ್ಮ ಒಬ್ಬರೇ ಅನ್ನಿಸಿದಾಗ ಕೆ.ಎಸ್.ನ ಪುತ್ರಿ ತುಂಗಭದ್ರಾ ಒಂದು ನಿರ್ಧಾರಕ್ಕೆ ಬಂದರು. ತಮ್ಮ ಮನೆಯಂಗಳದಲ್ಲಿ ಅಪ್ಪನ ಹಾಡುಗಳನ್ನು ಎಲ್ಲರಿಗೂ ಕೇಳಿಸುವ ತೀರ್ಮಾನಕ್ಕೆ ಬಂದರು.

ಇಂಥ ಸಂದರ್ಭದಲ್ಲಿ ಕೆ.ಎಸ್.ನ ಕುಟುಂಬಕ್ಕೆ ಸಾಥ್ ನೀಡಿದ್ದು ಉಪಾಸನಾ ಮೋಹನ್ ಮತ್ತು ಇತರೆ ಗಾಯಕ, ಗಾಯಕಿಯರು. ಪ್ರತಿ ವರ್ಷ ಜನವರಿ 26 ಬಂದರೆ ಸಾಕು, ಬೆಂಗಳೂರಿನ ಸೀತಾ ಸರ್ಕಲ್‌ನಲ್ಲಿರುವ ಕೆ.ಎಸ್.ನ. ಪುತ್ರಿ ತುಂಗಭದ್ರಾ ಅವರ ಮನೆಯ ಮುಂದೆ ಜನಜಾತ್ರೆ ಸೇರುತ್ತಿತ್ತು. ಅಲ್ಲಿ ಕೆ.ಎಸ್.ನ ಅವರ ಬಂಧುಗಳು, ಮಿತ್ರರು, ಅಭಿಮಾನಿಗಳಿರುತ್ತಿದ್ದರು. ಎಲ್ಲರಿಗಿಂತ ಮುಂದೆ ಒಂದು ಬೆತ್ತದ ಕುರ್ಚಿಯಲ್ಲಿ ವೆಂಕಮ್ಮನವರು ಕೂತಿರುತ್ತಿದ್ದರು. ಕಾರ್ಯಕ್ರಮ ಶುರುವಾದ ನಂತರದಲ್ಲಿ ನವಿಲೂರಿನೊಳಗೆಲ್ಲ ನೀನೆ ಬಲು ಚೆಲುವೆ,' ಬಾರೆ ನನ್ನ ಶಾರದೆ', ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು,' ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು...' ಗೀತೆಗಳು ಒಂದರ ಹಿಂದೊಂದು ಕೇಳಿ ಬರುತ್ತಿದ್ದವು. ಕೇಳುತ್ತ ಕೂತವರಿಗೆ, ಜತೆಗೆ ಕವಿಗಳಿಲ್ಲವಲ್ಲ ಎಂಬ ದುಃಖ ಒಂದು ಕಡೆ ಹಿಂದೆಯೇ ಎಲ್ಲ ಪದ್ಯಗಳ ಕಥಾನಾಯಕಿ ವೆಂಕಮ್ಮನವರು ಜತೆಗಿದ್ದಾರೆ ಎಂಬ ಸಂತಸ ಮತ್ತೊಂದು ಕಡೆ!

ಅಂದ ಹಾಗೆ, ದಾಂಪತ್ಯದುದ್ದಕ್ಕೂ ಸುಮದ ಪರಿಮಳವನ್ನೇ ಚಿಮ್ಮಿಸಿದ ಹಾಡುಗಳನ್ನು ಪತಿಯ ಗೈರು ಹಾಜರಿಯಲ್ಲಿ ಕೇಳುತ್ತಿದ್ದಂತೆ ವೆಂಕಮ್ಮನವರಿಗೆ ಖುಷಿಯಾಗುತ್ತಿತ್ತಾ? ಗೊತ್ತಾಗುತ್ತಿರಲಿಲ್ಲ. ಒಂದು ಹಾಡು ಮುಗಿಯುತ್ತಿದ್ದಂತೆಯೇ, ಪತಿಯ ನೆನಪಾಗಿ ಕಣ್ತುಂಬಿ ಬರುತ್ತಿತ್ತಾ? ವೆಂಕಮ್ಮನವರ ಕನ್ನಡಕ ಗುಟ್ಟು ಬಿಟ್ಟುಕೊಡುತ್ತಿರಲಿಲ್ಲ!

***
ಮೊನ್ನೆ ಜನವರಿ 26ರಂದು ಮತ್ತೆ ಕೆ.ಎಸ್.ನ ಜನ್ಮದಿನ ನಡೆಯಿತು. ತುಂಗಭದ್ರ ಅವರ ಮನೆಯಂಗಳದಲ್ಲಿ ಅದೇ ಕಾವ್ಯ ರಸಿಕರು, ಬಂಧುಗಳು, ಅಭಿಮಾನಿಗಳು, ಗಾಯಕರು. ಅಂದು ನಡೆದದ್ದು ಹಾಡಿನ ಉಪಾಸನೆ. ಪ್ರೀತಿಯ ಉಪಾಸನೆ. ಆದರೆ, ಅವತ್ತು ವೆಂಕಮ್ಮನವರು ಜತೆಗಿರಲಿಲ್ಲ. ಅವರೂ ಕಾಲನ ಕರೆಗೆ ಓಗೊಟ್ಟು ಹೋಗಿಬಿಟ್ಟಿದ್ದರು; ಕೆ.ಎಸ್.ನ ಅವರಿದ್ದ ಊರಿಗೆ, ಎಂದೂ ಬಾರದ ನಾಡಿಗೆ!

ಅವತ್ತು ಹಾಡು ಕೇಳಿದವರೆಲ್ಲ ಕಡೆಯಲ್ಲಿ ಗಂಧರ್ವರಂತೆಯೇ ಬಾಳಿ ಬದುಕಿದ ಕೆ.ಎಸ್.ನ-ವೆಂಕಮ್ಮರನ್ನು ಮತ್ತೆ ಮತ್ತೆ ನೆನೆದು ಇಲ್ಲಿಂದಲೇ ಕೈ ಮುಗಿದರು. ಅವರು -ಅಲ್ಲಿಂದಲೇ ಹರಸಿದರು!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X