ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೇಳದೇ ಉಳಿದ ಮಾತುಗಳು...

By * ಎ.ಆರ್. ಮಣಿಕಾಂತ್
|
Google Oneindia Kannada News

Vishnuvardhan and C Ashwath
ಐದಾರು ವರ್ಷಗಳ ಹಿಂದಿನ ಮಾತು. ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಪುಟ್ಟಣ್ಣ ಕಣಗಾಲ್ ಸ್ಮರಣೆಗೆ ಗೀತನಮನ ಕಾರ್ಯಕ್ರಮವೊಂದು ನಡೆಯಿತು. ಅದರ ಹಿಂದಿದ್ದವರು ರಮ್ಯ ಕಲ್ಚರಲ್ ಅಕಾಡೆಮಿಯ ಬಾಲಿ. ಅವತ್ತು, ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳಿಂದ ಆಯ್ದ ಮಧುರ ಗೀತೆಗಳನ್ನು ನಾಡಿನ ಹೆಸರಾಂತ ಗಾಯಕ-ಗಾಯಕಿಯರು ಹಾಡಿದರು. ಪ್ರೇಕ್ಷಕರ ಸಾಲಿನಲ್ಲಿ ಹಿರಿಯ ಪತ್ರಕರ್ತ ವಿ.ಎನ್. ಸುಬ್ಬರಾವ್, ನಟ ಶಿವರಾಂ, ಶ್ರೀಮತಿ ನಾಗಲಕ್ಷ್ಮಿ ಪುಟ್ಟಣ್ಣ ಕಣಗಾಲ್, ಆರ್.ಎನ್. ಜಯಗೋಪಾಲ್ ಮುಂತಾದವರಿದ್ದರು. ಶುಭಮಂಗಳ ಚಿತ್ರದ ಸೂರ್ಯಂಗು ಚಂದ್ರಂಗೂ ಬಂದಾರೆ ಮುನಿಸು...' ಗೀತೆಯನ್ನು ಗಾಯಕ ಎಲ್.ಎನ್. ಶಾಸ್ತ್ರಿ ಹಾಡಲು ನಿಂತಾಗ, ತುಂಬ ಭಾವುಕರಾದ ನಟ ಶಿವರಾಂ, ವೇದಿಕೆಯೇರಿ, ಶಾಸ್ತ್ರಿ ಅವರೊಂದಿಗೆ ತಾವೂ ಒಂದು ಚರಣ ಹಾಡಿ ಪುಟ್ಟಣ್ಣನ ನೆನಪಾಗಿ ಕಣ್ತುಂಬಿಕೊಂಡರು.

ಹೀಗೆ, ಹಾಡುಗಳ ನೆಪದಲ್ಲಿ ಪುಟ್ಟಣ್ಣ ಕಣಗಾಲ್ ಅವರನ್ನೂ , ಪುಟ್ಟಣ್ಣನ ನೆಪದಲ್ಲಿ ಹಾಡುಗಳನ್ನೂ ಕೇಳುತ್ತಿದ್ದ ಸಂದರ್ಭದಲ್ಲೇ ಕಾರ್ಯಕ್ರಮ ಮುಕ್ತಾಯದ ವೇಳೆ ಹತ್ತಿರವಾಗತೊಡಗಿತು. ಅದೇ ವೇಳೆಗೆ, ಮೂರು ಹಾಡುಗಳ ನಂತರ ಕಾರ್ಯಕ್ರಮ ಮುಗಿಯಲಿದೆ ಎಂದು ಸಂಘಟಕರೂ ಘೋಷಿಸಿಬಿಟ್ಟರು. ಪರಿಣಾಮ, ಮುಂದಿನ ಹದಿನೈದಿಪ್ಪತ್ತು ನಿಮಿಷಗಳ ನಂತರ ಮನೆಗೆ ಹೋಗಲು ಎಲ್ಲರೂ ಮಾನಸಿಕವಾಗಿ ತಯಾರಾಗುತ್ತಿದ್ದರು. ಆಗಲೇ ಪ್ರವೇಶ ದ್ವಾರದಲ್ಲಿ ಏನೋ ಸದ್ದಾಯಿತು. ಅಲ್ಲಿದ್ದ ಜನರೆಲ್ಲ ಒಟ್ಟಾಗಿ ಓ... ಬಂದ್ರು ಬಂದ್ರು...' ಎಂದರು. ಈಗ ಬಂದವರು ಯಾರಿರಬಹುದು ಎಂದು ನೋಡಿದರೆ ನಟ ವಿಷ್ಣುವರ್ಧನ್! ತಮ್ಮ ಐದಾರು ಮಂದಿ ಆಪ್ತರೊಂದಿಗೆ ಕಾರ್ಯಕ್ರಮಕ್ಕೆ ಬಂದಿದ್ದರು ವಿಷ್ಣು. ಹಾಗೆ ಬಂದವರು, ಸಮಾರಂಭದಲ್ಲಿದ್ದ ಎಲ್ಲರ ಕುಶಲ ವಿಚಾರಿಸಿದರು. ನಂತರ ವೇದಿಕೆ ಏರಿ, ತಮ್ಮ ಗುರುಗಳಾದ ಪುಟ್ಟಣ್ಣ ಕಣಗಾಲರ ಬಗ್ಗೆ ನಾಲ್ಕು ಒಳ್ಳೆಯ ಮಾತುಗಳಾಡಿದರು. ಹಿಂದೆಯೇ ತುಂಬ ಸಂಭ್ರಮದಿಂದ ಬಾರೇ ಬಾರೇ ಚಂದದ ಚೆಲುವಿನ ತಾರೆ...' ಗೀತೆಗೆ ದನಿಯಾದರು. ಆ ಹಾಡು ಕೇಳಿದ ನಂತರ ಕಾರ್ಯಕ್ರಮಕ್ಕೆ ಬಂದಿದ್ದವರ ಸಂಭ್ರಮಕ್ಕೆ ಎಣೆಯೇ ಇರಲಿಲ್ಲ.

ಬೆಂಗಳೂರಿನ ಅವಲಹಳ್ಳಿ ಬಸ್ ನಿಲ್ದಾಣದ ಎದುರಿಗೆ ಮ್ಯಾಜಿಕ್ ಸ್ಪೇಸ್ ಎಂಬ ಮ್ಯಾಜಿಕ್ ಉತ್ಪನ್ನಗಳ ಮಾರಾಟದ ಮಳಿಗೆಯೊಂದಿದೆ. ಯಾರದೋ ಸಂಕಟಕ್ಕೆ ಕಣ್ಣೀರಾಗುವ, ಕಷ್ಟಕ್ಕೆ ಹೆಗಲಾಗುವ ಜತೆಗಿರುವ ಎಲ್ಲರಿಗೂ ಸದಾ ಒಳಿತನ್ನೇ ಬಯಸುವ ಗಿರಿಧರ್ ಕಾಮತ್, ಈ ಮಳಿಗೆಯ ಒಡೆಯ. ಪ್ರವೀಣ್ ಗೋಡ್ಖಿಂಡಿಯವರ ಪಾಲಿಗೆ ಡಿಯರೆಸ್ಟ್ ಅಂಡ್ ನಿಯರೆಸ್ಟ್ ಫ್ರೆಂಡ್ ಆಗಿರುವ ಇವರು, ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಂದ ವೆಂಗ್ ಸರ್ಕಾರ್ ಎಂದು ಕರೆಸಿಕೊಂಡವರು! ಈ ಗಿರಿಧರ್ ಕಾಮತ್ ಅವರದು ಯಾವತ್ತೂ ಒನ್‌ಲೈನ್ ಡೈಲಾಗ್. ಮುಂದಿನ ಜನ್ಮ ಅನ್ನೋದು ಬಹುಶಃ ಇಲ್ಲವೇ ಇಲ್ಲ. ಹಾಗಾಗಿ, ಇರುವಷ್ಟು ದಿನ ಬಿಂದಾಸ್ ಆಗೇ ಬದುಕೋಣ. ನಮ್ಮಿಂದ ಇದು ಅಸಾಧ್ಯ ಎಂದು ಯಾವ ಸಂದರ್ಭದಲ್ಲೂ ಯೋಚಿಸುವುದು ಬೇಡ. ನಮ್ಮಿಂದ ಎಲ್ಲವೂ ಸಾಧ್ಯ ಎಂದುಕೊಂಡೇ ಮುನ್ನುಗ್ಗೋಣ. ಯಾವುದೇ ಕೆಲಸ ಮಾಡಿದರೂ ಡಿಫರೆಂಟ್ ಆಗಿ ಮಾಡೋಣ...'

ಈ think different ಎಂಬ ಮಾತಿನ ಹಿಂದೆ ಮುಂದೆಯೇ ಸುತ್ತುತ್ತಿದ್ದ ಸಂದರ್ಭದಲ್ಲಿಯೇ ಹಾಡು ಹುಟ್ಟಿದ ಸಮಯ' ಪುಸ್ತಕ ಬಿಡುಗಡೆಯ ಕೆಲಸ ಶುರುವಾಯಿತು. ಪುಸ್ತಕ ಬಿಡುಗಡೆಯನ್ನು ಹಳೆಯ ಸಿದ್ಧ ಸೂತ್ರದಂತೆ ಮಾಡುವ ಬದಲು ಸ್ವಲ್ಪ ಭಿನ್ನವಾಗಿ, ಒಂದಷ್ಟು ಹೊಸತನದೊಂದಿಗೆ ಮಾಡೋಣ ಎಂದುಕೊಂಡಿದ್ದಾಯಿತು. ಮುಖ್ಯ ಅತಿಥಿಗಳಾಗಿ ಒಂದು ಕಾಲದ ಜನಪ್ರಿಯ ಜೋಡಿ ಅಂಬರೀಷ್ -ಲಕ್ಷ್ಮಿಯನ್ನು ಒಪ್ಪಿಸಲು ಯೋಚಿಸಿದ್ದೂ ಆಯಿತು. ಆದರೆ, ಈ ಕಡೆ ಅಂಬರೀಷ್, ಆ ಕಡೆ ಲಕ್ಷ್ಮಿ ಇಬ್ಬರೂ ಸಿಗಲಿಲ್ಲವಾದ ಕಾರಣದಿಂದ ಐಡಿಯಾ ಫ್ಲಾಪ್ ಆಯಿತು. ಮುಂದ?' ಎಂದುಕೊಂಡು ಪೆಚ್ಚಾಗಿ ಕೂತಾಗಲೇ think different ಎಂಬ ಮಾತಿಗೆ ಖಡಕ್ಕಾಗಿ ಹೊಂದುವಂಥ ಹೊಸ ಯೋಜನೆಯೊಂದು ಕಣ್ಮುಂದೆ ಬಂತು.

ಏನೆಂದರೆ ಪುಸ್ತಕ ಬಿಡುಗಡೆಗೆ, ವಿಷ್ಣುವರ್ಧನ್-ಭಾರತಿ ಹಾಗೂ ರಮೇಶ್‌ರನ್ನು ಕರೆಸುವುದು. ಹೇಗಿದ್ದರೂ ಆ ಪುಸ್ತಕದಲ್ಲಿ 60 ವರ್ಷದ ಇತಿಹಾಸಕ್ಕೆ ಸಾಕ್ಷಿಯಾಗಬಲ್ಲ ಹಾಡುಗಳಿದ್ದವು. ಹಳೆಯ ಹಾಡುಗಳ ಪ್ರತಿನಿಧಿಗಳಾಗಿ ವಿಷ್ಣು-ಭಾರತಿ, ಹೊಸ ಹಾಡುಗಳನ್ನು ಪ್ರತಿನಿಧಿಸಲು ರಮೇಶ್ ಬಂದರೆ ಕಾರ್ಯಕ್ರಮಕ್ಕೆ ವಿಶೇಷ ಆಕರ್ಷಣೆ ಬರುತ್ತೆ ಎನ್ನಿಸಿತು. ಈ ಸಂಗತಿಯನ್ನು ಗೆಳೆಯರಾದ ಉಪಾಸನಾ ಮೋಹನ್ ಹಾಗೂ ಫಲ್ಗುಣ ಅವರಲ್ಲಿ ಹೇಳಿಕೊಂಡಾಗ ಅವರು ಇನ್ನೊಂದು ರೆಕ್ಕೆಪುಕ್ಕ ಸೇರಿಸಿದರು : ಹಾಗೇ ಮಾಡಿ. ಜತೆಗೆ, ಎಲ್ಲ ಗೀತೆರಚನೆಕಾರರನ್ನು, ಅವರ ಕುಟುಂಬದವರನ್ನು ಕರೆಸಿ. ಜತೆಗೆ ಸಿ. ಅಶ್ವತ್ಥ್ ಹಾಗೂ ಶಿವಮೊಗ್ಗ ಸುಬ್ಬಣ್ಣ ಅವರನ್ನೂ ಕರೆಸಿ ತಪ್ಪು ಮಾಡದವ್ರು ಯಾರವ್ರೆ?' ಗೀತೆಯನ್ನು ಅಶ್ವತ್ಥ್ ಅವರಿಂದಲೂ ಕಾಡು ಕುದುರೆ ಓಡಿಬಂದಿತ್ತಾ...' ಗೀತೆಯನ್ನು ಸುಬ್ಬಣ್ಣ ಅವರಿಂದಲೂ ಹಾಡಿಸಿ. ಉಳಿದ ಹಾಡುಗಳಿಗೆ ಯುವ ಗಾಯಕ-ಗಾಯಕಿಯರು ದನಿಯಾಗಲಿ. ಆಗ ಹಳೇ ಬೇರು ಹೊಸ ಚಿಗುರು ಎರಡನ್ನೂ ಒಂದೇ ವೇದಿಕೆಯಲ್ಲಿ ತಂದಂತಾಗುತ್ತದೆ. think different ಎನ್ನುವ ನಿಮ್ಮ ಮಾತು ನಿಜವಾಗುತ್ತದೆ...'

ಮುಂದೆ ಈ ಯೋಜನೆಯನ್ನೇ ಸ್ವಲ್ಪ update ಮಾಡಿದ್ದಾಯಿತು. ಅದು ಹೀಗೆ : ರಾಜ್ಯೋತ್ಸವ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸುವುದು. ನಂತರದಲ್ಲಿ ಮೂರು ಹಾಡುಗಳು. ಐದನೇ ಗೀತೆಯಾಗಿ ವಿಷ್ಣುವರ್ಧನ್ ಅವರಿಂದ ಅದೇ ಬಾರೇ ಬಾರೇ ಚೆಂದದ ಚೆಲುವಿನ ತಾರೆ...' ಹಾಡು ಹೇಳಿಸುವುದು. ಹಾಡಿನ ಎರಡನೇ ಚರಣ ಆರಂಭವಾದ ತಕ್ಷಣ ಭಾರತಿಯವರನ್ನು ವೇದಿಕೆಗೆ ಕರೆದೊಯ್ಯುವುದು. ಹಾಡು ಮುಗಿಯುತ್ತಿದ್ದಂತೆಯೇ ನಟ ರಮೇಶ್ ಅವರಿಂದ ಮ್ಯಾಜಿಕ್ ಮಾಡಿಸುವ ಮೂಲಕ ಪುಸ್ತಕ ಬಿಡುಗಡೆ ಮಾಡಿಸುವುದು. ಮೊದಲ ಪ್ರತಿಯನ್ನು ವಿಷ್ಣು ಅವರಿಂದ ಭಾರತಿ ಅವರಿಗೆ ಕೊಡಿಸುವುದು, ವಿಷ್ಣು-ಭಾರತಿ ದಂಪತಿಯನ್ನು ಸನ್ಮಾನಿಸುವುದು... ಪುಸ್ತಕ ಬಿಡುಗಡೆಯ ನಂತರ ಅಶ್ವತ್ಥ್ ಅವರಿಂದ ತಪ್ಪೇ ಮಾಡದವ್ರು ಯಾರವ್ರೆ...' ಗೀತೆ ಹಾಡಿಸುವುದು. ಹತ್ತು ನಿಮಿಷದ ನಂತರ ಶಿವಮೊಗ್ಗ ಸುಬ್ಬಣ್ಣ ಅವರಿಂದಲೂ...

ಈ ಎಲ್ಲ ಸಂಗತಿಯನ್ನು ಸಂಗೀತ ನಿರ್ದೇಶಕ ಕೆ. ಕಲ್ಯಾಣ್ ಅವರಲ್ಲಿ ಹೇಳಿಕೊಂಡಾಗ ಅವರೆಂದರು. ಇದು ನಿಜಕ್ಕೂ think different ಅನ್ನೋ ಯೋಚನೆ-ಯೋಜನೆ. ಒಂದು ವೇದಿಕೆಯಲ್ಲಿ ಅಷ್ಟೊಂದು ಜನರನ್ನು ನೋಡುವುದೇ ಒಂದು ಖುಷಿ. ನಿಮ್ಮ ಈ ಸಾಹಸದಲ್ಲಿ ನಾನೂ ಒಂದಿಷ್ಟು ಕೆಲಸ ಮಾಡ್ತೇನೆ. ವಿಷ್ಣು ಸರ್ ಹಾಗೂ ಭಾರತಿ ಮೇಡಂ ಅವರನ್ನು ಒಪ್ಪಿಸಲು ನಿಮ್ಮೊಂದಿಗೆ ನಾನೂ ಬರ್‍ತೇನೆ. ನಿಮ್ಮ ಪರವಾಗಿ ನಾನೇ ಮಾತಾಡ್ತೇನೆ. ಅಶ್ವತ್ಥ್ ಹಾಡಿಗೆ ವಿಷ್ಣು ಸರ್ ತಾಳ ಹಾಕುತ್ತಾ ಕೂರುವುದನ್ನು; ಸುಬ್ಬಣ್ಣ ಅವರ ಗಾಯನಕ್ಕೆ ಎಲ್ಲರೂ ಮೈಮರೆಯುವ ಸಂದರ್ಭವನ್ನು; ವಿಷ್ಣು-ಭಾರತಿ ಪರಸ್ಪರ ಅಭಿನಂದಿಸುವುದನ್ನು ಕಂಡು ಎಲ್ಲರೂ ಚಪ್ಪಾಳೆ ಹೊಡೆಯುವುದನ್ನು; ರಮೇಶ್ ಅವರ ಚಿನಕುರುಳಿ ಮಾತಿಗೆ ರವೀಂದ್ರ ಕಲಾಕ್ಷೇತ್ರವೇ ಮರುಳಾಗುವುದನ್ನು ಎಲ್ಲರೂ ಕಣ್ತುಂಬಿಕೊಳ್ಳೋಣ. ಮುಂದಿನ ಮಂಗಳವಾರ ವಿಷ್ಣುವರ್ಧನ್ ಅವರ ಮನೆಗೆ ಹೋಗೋಣ... ನೀವು ಬಾಕಿ ಕೆಲಸ ಮಾಡಿ ಮುಗಿಸಿ...

ದುರಂತವೆಂದರೆ ಅಂಥದೊಂದು ಮಧುರ ಸಂದರ್ಭ ಬರಲೇ ಇಲ್ಲ. ಈ ಮಾತುಕತೆ ಮುಗಿದ ಎರಡೇ ದಿನಕ್ಕೆ, ವಿಷ್ಣುವರ್ಧನ್ ಅವರಿಗೆ ಆರೋಗ್ಯ ಚೆನ್ನಾಗಿಲ್ಲವಂತೆ. ಚಿಕಿತ್ಸೆಗೊಂದು ಅವರು ಮೈಸೂರಿಗೆ ಹೋಗಿದ್ದಾರಂತೆ. ಇನ್ನೂ ಒಂದು ತಿಂಗಳು ಚಿಕಿತ್ಸೆಯಂತೆ ಎಂಬ ಸುದ್ದಿ ಬಂತು. ಈ ಅನಿರೀಕ್ಷಿತ ಸುದ್ದಿಯನ್ನು ನಂಬಲಾಗಿದೆ ನಂಬಿದ್ದಾಗಲೇ, ಲಹರಿ ವೇಲು ಹೀಗೊಂದು ಎಸ್ಸೆಮ್ಮೆಸ್ ಕಳಿಸಿದ್ದರು. ಸಾಹೇಬ್ರೆ, ಸಿ. ಅಶ್ವತ್ಥ್ ಅವರಿಗೆ ಹುಷಾರಿಲ್ವಂತೆ. ಕಿಡ್ನಿ ಫೇಲ್. ಯಶವಂತಪುರದ ಆಸ್ಪತ್ರೆಗೆ ಸೇರಿಸಿದ್ದಾರಂತೆ. ಒಮ್ಮೆ ಹೋಗಿ ಬರೋಣವಾ...?'

ನಂತರದ ದಿನಗಳಲ್ಲಿ ಎಲ್ಲವೂ ಅವಸರದಲ್ಲಿ' ಎಂಬಂತೆ ನಡೆದುಹೋಯಿತು. ಮೊದಲಿಗೆ, ಚಿಕ್ಕದೊಂದು ಕಾರಣವನ್ನೂ ಹೇಳದೆ ಅಶ್ವತ್ಥ್ ಹೋಗಿಬಿಟ್ಟರು. ಈ ಸಂಕಟದಿಂದ ಚೇತರಿಸಿಕೊಳ್ಳುವ ಮೊದಲೇ ವಿಷ್ಣು ಅವರೂ... ಈಗ ಅವರಿಲ್ಲ ನಿಜ. ಆದರೆ, ಅವರ ಬಗ್ಗೆ ನಾವು ಕಂಡ ಕನಸುಗಳಿವೆ. ಆಡಿಕೊಂಡ ಮಾತುಗಳಿವೆ. ಬಣ್ಣದ ಲೋಕದ ಮಹನೀಯರಿಬ್ಬರು ಹಾಡದೇ ಹೋಗಿಬಿಟ್ಟ ಹಾಡುಗಳು ಹಾಗೇ ಉಳಿದುಹೋಗಿವೆ. ಇದನ್ನೆಲ್ಲ ಮತ್ತೆ ಮತ್ತೆ ನೆನಪು ಮಾಡಿಕೊಂಡಾಗ ಬದುಕು ಒಂದು ಬಸ್ಸಿನಂತೆ ನಿಲ್ಲದಂತೆ ಸಾಗಿದೆ/ವಿಧಿಯೇ ಅದರ ಡ್ರೈವರ್ ಆಗಿ ಕಾಣದಂತೆ ಕೂತಿದೆ' ಎಂಬ ಇನ್ನೊಂದು ಚಿತ್ರಗೀತೆ ನೆನಪಾಗುತ್ತಿದೆ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X