ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಂಬೂರಿ ಮೀಟಿದವ, ಭಾವಾಬ್ದಿ ದಾಟಿದವ....

By Staff
|
Google Oneindia Kannada News

C Ashwath
ತುಂಬಾ ಸೀರಿಯಸ್ ಕಣ್ರೀ. ಬದುಕೋ ಛಾನ್ಸಸ್ ಕಡಿಮೆ...' ಒಂದು ವಾರದಿಂದ ಸಂಗೀತ ಕ್ಷೇತ್ರದ ಗೆಳೆಯರು ಇಂಥ ಸುದ್ದಿಗಳನ್ನು ಹೇಳುತ್ತಲೇ ಇದ್ದರು. ಅವರೆಲ್ಲ ಹೇಳುತ್ತಿದ್ದುದು ಗಾಯಕ ಸಿ. ಅಶ್ವತ್ಥ್ ಆರೋಗ್ಯದ ಬಗ್ಗೆ. ಆದರೆ, ತಮ್ಮ ಮಾತು ಇಷ್ಟು ಬೇಗ ನಿಜವಾಗಿ ಬಿಡಬಹುದು, ಅಶ್ವತ್ಥ್ ಇಷ್ಟು ಬೇಗ, ಹಾಡಬೇಕಿದ್ದ ಹಾಡನ್ನು ಆರಂಭಿಸುವ ಮೊದಲೇ ಯಾರಿಗೂ ಒಂದು ಮಾತೂ ಹೇಳದೆ ಹೋಗಿಬಿಡಬಹುದು ಎಂಬ ನಿರೀಕ್ಷೆ ಉಹುಂ, ಯಾರಿಗೂ ಇರಲಿಲ್ಲ.

* ಎ.ಆರ್. ಮಣಿಕಾಂತ್

ಪ್ರತಿಯೊಂದು ಸಂದರ್ಭದಲ್ಲಿಯೂ ಜತೆಗಿದ್ದವರ ನಿರೀಕ್ಷೆಗಳನ್ನು ಉಲ್ಟಾ ಮಾಡುತ್ತಿದ್ದುದು ಅಶ್ವತ್ಥ್ ಸ್ಪೆಷಾಲಿಟಿ. ಒಂದು ಹಾಡಿನ ಸಂಗೀತ ನಿರ್ದೇಶನ ಅಂದುಕೊಳ್ಳಿ. ಅದರ ಬಗ್ಗೆ ವಿಪರೀತ ನಿರೀಕ್ಷೆ ಹುಟ್ಟಿಸುತ್ತಿದ್ದರು ಅಶ್ವತ್ಥ್. ಅಷ್ಟೇ ಅಲ್ಲ, ಅದನ್ನು ಹತ್ತು ಮಂದಿ ಮೆಚ್ಚುವಂತೆ ರೂಡಿಸುತ್ತಿದ್ದರು. ಈ ಯಶಸ್ಸಿನಿಂದ ಖುಷಿಯಾದ ಗೆಳೆಯರು ಇಂಥದೇ ಇನ್ನೊಂದೆರಡು ಕೆಸೆಟ್ ಮಾಡ್ರೀ ಎಂದರೆ, ಅವರ ಕಡೆಗೆ ತಿರುಗಿ ಕೂಡ ನೋಡದೆ ಎದ್ದು ಹೋಗಿಬಿಡುತ್ತಿದ್ದರು. ನಂತರ ಯಾವುದೋ ನಾಟಕಕ್ಕೆ ಸಂಗೀತ ನೀಡುವ; ಇನ್ನಾವುದೋ ಶಿಬಿರದಲ್ಲಿ ಪಾಲ್ಗೊಳ್ಳುವ ಉಮ್ಮೇದಿಯಲ್ಲಿರುತ್ತಿದ್ದರು. ಅದನ್ನು ಕಂಡವರು ಎಲ್ಲಿಯ ಸುಗಮ ಸಂಗೀತ, ಇದೆಲ್ಲಿಯ ರಂಗಭೂಮಿಯ ಹಿನ್ನೆಲೆ ಸಂಗೀತ? ಈ ಬಾರಿ ಅಶ್ವತ್ಥ್ ಖಂಡಿತ ಸೋಲ್ತಾರೆ ಎಂದೇ ಅಂದಾಜು ಮಾಡಿರುತ್ತಿದ್ದರು.

ಆದರೆ, ಹೊಸ ನಾಟಕದ/ತರಬೇತಿ ಶಿಬಿರದ ಅಂಗಳಕ್ಕೆ ಹೋದವರಿಗೆ ದೊಡ್ಡದೊಂದು ಅಚ್ಚರಿ ಕಾದಿರುತ್ತಿತ್ತು. ಅಶ್ವತ್ಥ್‌ರ ಸಂಗೀತದ ಮಿಂಚು ನಾಟಕ/ಸಂಗೀತ ಶಿಬಿರದ ಸೊಬಗು ಹೆಚ್ಚಿಸಿರುತ್ತಿತ್ತು. ಎಲ್ಲರೂ ಈ ಹೊಸ ಪ್ರಯೋಗದಿಂದ ಬೆರಗಾಗಿ ಚಪ್ಪಾಳೆ ಹೊಡೆದರೆ, ಸಹಜವಾಗಿಯೇ ಅಶ್ವತ್ಥ್‌ರ ಮುಖಾರವಿಂದ ಊರಗಲ ಆಗುತ್ತಿತ್ತು. ಯಾರಾದರೂ ಆಪ್ತರು ಹತ್ತಿರ ಬಂದು ಸರ್, ಈ ಸಂದರ್ಭದ ಸಂಗೀತ ಬಹಳ ಚೆನ್ನಾಗಿದೆ' ಅಂದರೆ ತಕ್ಷಣವೇ ತಾವು ಪಟ್ಟ ಶ್ರಮದ ಬಗ್ಗೆ ವಿವರಣೆ ನೀಡುತ್ತಿದ್ದರು. ತನ್ನ ಬಣ್ಣಿಸಿಕೊಳ್ಳುತ್ತಲೇ' ಮಾತಿನ ಮಧ್ಯೆ ಅದ್ಭುತ ಅದ್ಭುತ' ಎಂಬ ಉದ್ಗಾರ ತೆಗೆಯುತ್ತಿದ್ದರು. ಈ ಅದ್ಭುತ' ಎಂಬುದು ಅಶ್ವತ್ಥ್ ಅವರಿಗೆ ಉಸಿರಾಟದಷ್ಟೇ ಸಹಜವಾದ ಪದವಾಗಿತ್ತು.

ಸ್ವಾರಸ್ಯವೆಂದರೆ, ಯಾವುದೇ ಪ್ರಯೋಗವನ್ನಾದರೂ ತುಂಬ ಆಸೆಯಿಂದ ಮಾಡುತ್ತಿದ್ದ; ಅದಕ್ಕಾಗಿ ಹಗಲಿರುಳೂ ಕಷ್ಟಪಡುತ್ತಿದ್ದ ಅಶ್ವತ್ಥ್, ಅಂಥದೇ ಇನ್ನೊಂದು ಪ್ರಯೋಗಕ್ಕೆ ಜಪ್ಪಯ್ಯಾ ಅಂದರೂ ಮುಂದಾಗುತ್ತಿರಲಿಲ್ಲ. ಅದಕ್ಕೆ ಒಂದಲ್ಲ ಎರಡಲ್ಲ; ಹತ್ತಾರು ಉದಾಹರಣೆಗಳನ್ನು ಕೊಡುತ್ತಾ ಹೋಗಬಹುದು. ಸುಮ್ಮನೆ ಗಮನಿಸಿ : ಸಿದ್ಧಲಿಂಗಯ್ಯ ನಿರ್ದೇಶನದ ಭೂಲೋಕದಲ್ಲಿ ಯಮರಾಜ' ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದರು ಅಶ್ವತ್ಥ್. ಈ ಚಿತ್ರದ ಹಾಡುಗಳೆಲ್ಲ ಸೂಪರ್‌ಹಿಟ್ ಅನಿಸಿಕೊಂಡವು. ಗಾಂಧಿನಗರದ ಜನ ನಮ್ಮ ಚಿತ್ರಕ್ಕೆ ಸಂಗೀತ ಒದಗಿಸಿ ಸಾರ್ ಎಂದು ದುಂಬಾಲು ಬಿದ್ದರೆ ಈ ಮಹರಾಯರು ಹೋಗ್ ಹೋಗ್ರಿ. ನಾನೀಗ ಭಾವಗೀತೆಗೆ ದನಿಯಾಗಬೇಕು' ಎಂದು ಅದೇ ಏರುದನಿಯಲ್ಲಿ ಹೇಳಿ ತಮ್ಮ ಬಜಾಜ್ ಸ್ಕೂಟರ್ ಹತ್ತಿ ಬಂದೇಬಿಟ್ಟರು. ಮೂರು ವರ್ಷಗಳ ನಂತರ ಆಲೆಮನೆ' ಸಿನಿಮಾಕ್ಕೆ ಅಮರಾಮಧುರಾ ಎಂಬಂಥ ಸಂಗೀತ ನೀಡಿ ಗಾಂಧಿನಗರದ ಮಂದಿಯನ್ನು ಮತ್ತೆ ಬೆಚ್ಚಿಬೀಳಿಸಿದ ಅಶ್ವತ್ಥ್ ನಂತರ ಯಥಾಪ್ರಕಾರ ಯಾರೊಬ್ಬರಿಗೂ ಸಿಗದೆ ಬಜಾಜ್ ಸ್ಕೂಟರ್ ಹತ್ತಿ... ಮೈಸೂರು ಮಲ್ಲಿಗೆ' ಕೆಸೆಟ್ ತಂದರು. ನಂತರ ಶಿಶುನಾಳ ಷರೀಫ'ರ ಗೀತೆಗಳಿಗೆ ತಂಬೂರಿ ಮೀಟಿದರು. ಕಾಕನಕೋಟೆ' ನಾಟಕಕ್ಕೆ ಸಂಗೀತ ನೀಡಿದರು. ನಾಗಮಂಡಲ'ದ ಹಾಡುಗಳಿಗೆ ಅಕ್ಕರೆ ತುಂಬಿದರು. ಕನ್ನಡವೇ ಸತ್ಯ'ಕ್ಕೆ ಉಸಿರಾದರು...

ಹೀಗೆ, ಒಂದು ಕ್ಷೇತ್ರದಿಂದ ಇನ್ನೊಂದು ಕ್ಷೇತ್ರಕ್ಕೆ ನುಗ್ಗಿ, ಅಲ್ಲಿ ಕೆಲಸಕ್ಕೆ ತೊಡಗಿದಾಗೆಲ್ಲ ಸವಾಲುಗಳೂ, ಅಡೆತಡೆಗಳೂ ಹೆಚ್ಚುತ್ತವೆ. ಇದೆಲ್ಲ ಅಶ್ವತ್ಥ್‌ಗೆ ಗೊತ್ತಿರಲಿಲ್ಲ ಎಂದಲ್ಲ. ಎಲ್ಲ ಗೊತ್ತಿದ್ದೂ ಅವರು ರಿಸ್ಕ್ ತಗೊಂಡರು. ಸುಗಮ ಸಂಗೀತ ಕ್ಷೇತ್ರಕ್ಕೆ ಅವರು ಆನೆಯಿದ್ದಂತೆ. ಅವರು ನಡೆದದ್ದೇ ದಾರಿ. ಆ ಹಾದಿಯ ಬಗೆ, ಪ್ರಶ್ನಿಸುವ ಧೈರ್ಯ ಯಾರಿಗೂ ಇರಲಿಲ್ಲ. ಯಾರಾದರೂ ಆ ಬಗ್ಗೆ ಪ್ರಶ್ನಿಸಿದರೆ ಹಾಡುತ್ತಿದ್ದರಲ್ಲ; ಅಂಥದೇ ಏರು ದನಿಯಲ್ಲಿ ಮಾತಾಡಿ ಅಶ್ವತ್ಥ್ ಎದುರಿಗಿದ್ದವರ ಬಾಯಿ ಮುಚ್ಚಿಸುತ್ತಿದ್ದರು.

ಇವತ್ತಿಗೂ ಅಶ್ವತ್ಥ್ ಎಂದಾಕ್ಷಣ ಕನ್ನಡಿಗರೆಲ್ಲರ ಕಣ್ಮುಂದೆ ಬಂದು ನಿಲ್ಲುವುದು ಕನ್ನಡವೇ ಸತ್ಯ' ಕಾರ್ಯಕ್ರಮ. ಭಾವಗೀತೆ ಗಾಯನ ಅಂದರೆ, ನೂರು, ಇನ್ನೂರು, ಸಾವಿರದ ಸಂಖ್ಯೆಯಲ್ಲಿ ಪ್ರೇಕ್ಷಕರು ಜಮೆಯಾಗುತ್ತಾರೆ ಎಂದು ಎಲ್ಲರಿಗೂ ಗೊತ್ತಿತ್ತು. ಆದರೆ, ಭಾವಗೀತೆ ಕಾರ್ಯಕ್ರಮಕ್ಕೆ ಬರೀ ಸಾವಿರವಲ್ಲ, ಲಕ್ಷ ಜನರನ್ನು ಸೇರಿಸಬಹುದು ಎಂದು ತೋರಿಸಿಕೊಟ್ಟವರು ಅಶ್ವತ್ಥ್. ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೂರು ವರ್ಷಗಳ ಹಿಂದೆ ನಡೆದ ಆ ಕಾರ್ಯಕ್ರಮ ಕಂಡವರು ಬೆರಗಿನಿಂದ ಉದ್ಗರಿಸಿದ್ದರು. ಕನ್ನಡವೇ ಸತ್ಯ, ಅಶ್ವತ್ಥ್ ನಿತ್ಯ' ಈಂಥ ಕಾರ್ಯಕ್ರಮ ಹಿಂದೆಯೂ ನಡೆದಿರಲಿಲ್ಲ. ಬಹುಶಃ ಮುಂದೆ ನಡೆಯುವುದಿಲ್ಲ...' ಮುಂದೊಂದು ದಿನ ಈ ಮಾತನ್ನೂ ಅಶ್ವತ್ಥ್ ಅವರಿಗೇ ಹೇಳಿದಾಗ, ಇಷ್ಟಗಲ ಮುಖ ಅರಳಿಸಿದ ಅಶ್ವತ್ಥ್- ಹೌದಾ, ಹೌದಾ? ಹಾಗಂದ್ರಾ ಜನ? ಅದ್ಭುತ, ಅದ್ಭುತ' ಎಂದು ಉದ್ಗರಿಸಿದರು.

***
ತಾರಕಕ್ಕೆ ಹೋಗಿ ಹಾಡುತ್ತಿದ್ದುದು ಅಶ್ವತ್ಥ್ ಸ್ಪೆಷಾಲಿಟಿ. ಅವರ ಮಾತು ಸಹ ಜೋರುದನಿಯಲ್ಲೇ ಇರುತ್ತಿತ್ತು. ಅಷ್ಟೇ ಅಲ್ಲ, ಮಾತಿಗೆ ಕೂತರೆ, ಎದುರಿದ್ದವರಿಗೆ ಬಾಯಿಬಿಡಲೂ ಅವರು ಅವಕಾಶ ಕೊಡುತ್ತಿರಲಿಲ್ಲ. ತಾವು ಹೇಳಬೇಕಿದ್ದುದನ್ನು ಎರಡೆರಡು ಬಾರಿ ಹೇಳುತ್ತಿದ್ದರು. ಮತ್ತೆ ಮತ್ತೆ ನೆನಪಿಸುತ್ತಿದ್ದರು. ಎದುರು ಕೂತವರು ಗಮನವಿಟ್ಟು ಕೇಳುತ್ತಿಲ್ಲ ಅನ್ನಿಸಿದರೆ ಮುಖ ಗಂಟಿಕ್ಕಿಕೊಳ್ಳುತ್ತಿದ್ದರು. ಅದರ ಮಧ್ಯೆಯೇ ಮಾತು ಮುಂದುವರಿಸುತ್ತಿದ್ದರು. ಹೀಗಾಗಿ ಅವರು ಮಾತಾಡುತ್ತಿದ್ದರೋ ಅಥವಾ ಜಗಳ ಮಾಡುತ್ತಿದ್ದಾರೋ ಎಂದು ತಿಳಿಯದೆ ಆಚೆ ಬದಿಯಲ್ಲಿ ಕೂತವರು ಗಲಿಬಿಲಿಯಾಗುತ್ತಿದ್ದರು. ಆದರೆ, ಹೇಳುವುದೆಲ್ಲ ಮುಗಿದ ಮೇಲೆ, ಒಮ್ಮೆ ಕುಶಾಲಾಗಿ ನಕ್ಕು, ಎದುರು ಕೂತವನ ಹೆಗಲ ಮೇಲೆ ಕೈ ಹಾಕಿ, ರಾಜಗಾಂಭೀರ್ಯದಿಂದ ಹತ್ತು ಹೆಜ್ಜೆ ಜತೆಗೇ ನಡೆದು ನಂತರ ಛಕ್ಕನೆ ನಿಂತು- ನಾನು ಹೋಗಿ ಬರ್‍ಲಾ ಎನ್ನುತ್ತಿದ್ದರು ಅಶ್ವತ್ಥ್. ಸರಿ ಸರ್' ಎಂದರೆ, ತಕ್ಷಣವೇ ಏನೋ ನೆನಪು ಮಾಡಿಕೊಂಡವರಂತೆ- ನನ್ನ ಕೆಸೆಟ್ ಇದಾವೇನ್ರಿ ನಿಮ್ಮ ಬಳಿ? ಒಂದ್ಸಲ ಮನೆಗೆ ಬನ್ನಿ.' ಎಲ್ಲವನ್ನೂ ಕೊಡ್ತೇನಂತೆ' ಅನ್ನುತ್ತಿದ್ದರು. ಒಂದು ವೇಳೆ ಅವರನ್ನು ಹೊಗಳಿ ಬರೆದ ಪತ್ರಿಕಾ ಲೇಖನವೇನಾದರೂ ಕಂಡರೆ, ತಮ್ಮ ಆಪ್ತರಿಗೆ ಅದನ್ನು ತೋರಿಸಿ ಹೆಂಗಿದೆ ನೋಡಿ, ಅದ್ಭುತ, ಅದ್ಬುತ' ಎಂದು ಉದ್ಗರಿಸುತ್ತಿದ್ದರು.

***
ಆಡುಮುಟ್ಟದ ಸೊಪ್ಪಿಲ್ಲ ಅಂತಾರಲ್ಲ? ಹಾಗೆಯೇ ಅಶ್ವತ್ಥ್ ಕೈ ಹಾಕದ ಕ್ಷೇತ್ರವಿಲ್ಲ. ಭಾವಗೀತೆ, ಜನಪದ ಗೀತೆ, ಭಕ್ತಿಗೀತೆ, ಚಿತ್ರಗೀತೆ, ರಂಗಭೂಮಿ... ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಅಡ್ಡಾಡಿದವರು ಅಶ್ವತ್ಥ್. ಎಲ್ಲ ರಂಗದಲ್ಲೂ ಅವರು ಮಹತ್ವದ್ದನ್ನೇ ಸಾಸಿದರು ಎಂಬುದು ಅಚ್ಚರಿಯ ಮತ್ತು ಸಂಭ್ರಮದ ಮಾತು.

***
ತಿಂಗಳ ಹಿಂದಷ್ಟೇ ಅಶ್ವತ್ಥ್‌ಗೆ ಎನ್‌ಆರ್ ಕಾಲನಿಯ ಎಪಿಎಸ್ ಕಾಲೇಜಿನ ಅಂಗಳದಲ್ಲಿ ಸನ್ಮಾನ ನಡೆದಿತ್ತು. ಅವತ್ತು ಬಸವನಗುಡಿಯ ರಾಮಕೃಷ್ಣಾಶ್ರಮದಿಂದ ಎಪಿಎಸ್ ಕಾಲೇಜಿನವರೆಗೆ ಅಶ್ವತ್ಥ್ ದಂಪತಿಯನ್ನು ಮೆರವಣಿಗೆಯಲ್ಲಿ ಕರೆದೊಯ್ಯಲಾಗಿತ್ತು. ಹಾದಿಯುದ್ದಕ್ಕೂ ತಮ್ಮನ್ನು ಕಂಡು ಚಪ್ಪಾಳೆ ಹೊಡೆದಿದ್ದ ಅಭಿಮಾನಿಗಳನ್ನು ಕಂಡ ಅಶ್ವತ್ಥ್ ನಿಂತಲ್ಲೇ ಕಣ್ತುಂಬಿಕೊಂಡಿದ್ದರು. ನಂತರ, ಬಲಗೈಲಿ ಚಿಟಿಕೆ ಹೊಡೆಯುತ್ತಾ, ಕಾಣದ ಯಾವುದೋ ಶಕ್ತಿಯನ್ನು ಆಹ್ವಾನಿಸುತ್ತಾ, ಒಮ್ಮೆ ದೊಡ್ಡದಾಗಿ ನಗುತ್ತ, ಮತ್ತೊಮ್ಮೆ ಬೆರಗಿನಿಂದ ಕಣ್ಣರಳಿಸುತ್ತ ಸತತ ನಾಲ್ಕು ಗಂಟೆಗಳ ಕಾಲ ಹಾಡಿದ್ದರು. ಅದನ್ನೆಲ್ಲ ಕಂಡವರು, ಡಿಸೆಂಬರ್ 29ರಂದು ಹುಟ್ಟುಹಬ್ಬದ ನೆಪದಲ್ಲಿ ಅಶ್ವತ್ಥ್ ಹೇಗೆಲ್ಲ ಹಾಡಬಹುದೋ ಎಂದು ಅಂದಾಜು ಮಾಡಿಕೊಂಡಿದ್ದರು. ಈ ಮಧ್ಯೆ ಅವರಿಗೆ ಅನಾರೋಗ್ಯ ಎಂಬ ಸುದ್ದಿ ಬಂತು. ಒಂದು ಕಾಲದಲ್ಲಿ ಲಂಕೇಶರಂಥ ಲಂಕೇಶರನ್ನೇ ಹೆದರಿಸಿದ್ದ ಅಶ್ವತ್ಥ್, ಈಗ ನಾನು ಬರ್ತ್‌ಡೇ ಮಾಡ್ಕೋಬೇಕು ಹೋಗಯ್ಯ' ಎಂದು ಅಬ್ಬರಿಸಿ ಯಮನನ್ನೂ ಆರು ತಿಂಗಳ ಮಟ್ಟಿಗಾದರೂ ಸತಾಯಿಸುತ್ತಾರೆ ಎಂಬ ನಂಬಿಕೆ ಹಲವರಿಗಿತ್ತು.

ಆದರೆ, ಪ್ರತಿ ಬಾರಿಯೂ ಎಲ್ಲರ ಲೆಕ್ಕಾಚಾರಗಳನ್ನು ಉಲ್ಟಾ ಮಾಡುತ್ತಿದ್ದ; ತಾರಕ ಸ್ವರದಲ್ಲಿ ಹಾಡಿ ಎಲ್ಲರನ್ನೂ ಬೆಚ್ಚಿಬೀಳಿಸುತ್ತಿದ್ದ ಅಶ್ವತ್ಥ್ ಈಗ ಛಕ್ಕನೆ ಹಾಡು ನಿಲ್ಲಿಸಿ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ. ಇಷ್ಟು ದಿನವೂ ಒಂದು ಹಾಡಾಗಿ ರಾಗವಾಗಿ, ನೆನಪಾಗಿ, ನಗುವಾಗಿ ಕಾಡಿದರಲ್ಲ? ಅವರಿಗೆ ಪ್ರೀತಿ ನಮಸ್ಕಾರ....

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X