ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿ ಅಶ್ವತ್ಥ್ ಅವರಿಗೆ, ಅಕ್ಕರೆಯಿಂದ...

By Staff
|
Google Oneindia Kannada News

Dear Ashwath sir, get well soon
ಕಿಡ್ನಿ ವೈಫಲ್ಯದ ಕಾರಣದಿಂದ ಗಾಯಕ ಸಿ. ಅಶ್ವತ್ಥ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಯಶವಂತಪುರದ ಕೊಲಂಬಿಯಾ-ಏಷ್ಯಾ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನಡೆಯುತ್ತಿದೆ. ಸದ್ಯಕ್ಕೆ ಅಶ್ವತ್ಥ್ ಐಸಿಯುನಲ್ಲಿದ್ದಾರೆ. ಅವರ ದೇಹಸ್ಥಿತಿಯ ಬಗ್ಗೆ ತಕ್ಷಣವೇ ಏನೂ ಹೇಳಲಾಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇದೇ ಡಿಸೆಂಬರ್ 29ಕ್ಕೆ ಅಶ್ವತ್ಥ್ ಗೆ 70 ತುಂಬಲಿದೆ. ಅಶ್ವತ್ಥ್ ಮತ್ತೆ ಸ್ವಸ್ಥರಾಗಿ ಕನ್ನಡಿಗರಿಗಾಗಿ ಹಾಡು ಹೇಳುವಂತಾಗಲಿ.

* ಎ.ಆರ್. ಮಣಿಕಾಂತ್

ಪ್ರೀತಿಯ ಅಶ್ವತ್ಥ್ ಅವರೆ, ಇಂಥದೊಂದು ನೀವ ಅಸ್ವಸ್ಥರಾದಂದಿನಿಂದ ಸಂಗೀತ ಪ್ರೇಮಿಗಳು ಮಂಕಾಗಿದ್ದಾರೆ. ನಿಮ್ಮ ಈಗಿನ ಸ್ಥಿತಿಗೆ ಮರುಗುತ್ತಿದ್ದಾರೆ. ಮುಂದೆ ಏನಾಗಿಬಿಡುತ್ತೋ ಎಂದು ಕಳವಳಗೊಂಡಿದ್ದಾರೆ. ಏನೂ ಆಗದಿರಲಿ ದೇವರೇ, ನಮ್ಮ ಅಶ್ವತ್ಥ್ ಬೇಗ ಹುಷಾರಾಗಲಿ ಎಂದು ಪ್ರಾರ್ಥಿಸಿದ್ದಾರೆ. ಹರಕೆ ಕಟ್ಟಿಕೊಂಡಿದ್ದಾರೆ. ತೀರಾ ಅಪರೂಪಕ್ಕೆ ಎರಡೇ ಎರಡು ಹಾಡು ಕೇಳಿದ್ದವರು ಕೂಡ - ಅಯ್ಯೋ, ಎಷ್ಟೊಂದು ಚೆನ್ನಾಗಿ ಹಾಡಿದ್ರು ಅವರು, ಅಂಥವರಿಗೆ ಹೀಗಾಯ್ತಾ? ಛೆ, ಅನ್ಯಾಯ ಅನ್ಯಾಯ. ಅವರಿಗೆ ಯಾವ ತೊಂದರೇನೂ ಬರೋದು ಬೇಡ' ಎಂದು ಹಾರೈಸುತ್ತಿದ್ದಾರೆ.

ವಾರದ ಹಿಂದೆ ಮೈಸೂರಿನಲ್ಲಿ ನಿಮ್ಮ ಹಾಡುಗಾರಿಕೆ ಕೇಳಿದವರು; ಇಪ್ಪತ್ತು ದಿನಗಳ ಹಿಂದೆ ಬಸವನಗುಡಿಯಲ್ಲಿ ನಿಮ್ಮ ಮೆರವಣಿಗೆಗೆ ಬಂದಿದ್ದವರು, ಹೇಗೆ ಪ್ರತಿಕ್ರಿಯಿಸಬೇಕೆಂಬುದೇ ತಿಳಿಯದೆ ಕೂತುಬಿಟ್ಟಿದ್ದಾರೆ. ಅಯ್ಯಯ್ಯೋ, ಮೊನ್ನೆ ತಾನೆ ಕಸ್ತೂರಿ ಚಾನೆಲ್‌ನಲ್ಲಿ ಅವರ ಹಾಡುಗಾರಿಕೆ ನೋಡಿದ್ವಲ್ರೀ, ಚೆನ್ನಾಗೇ ಇದ್ರು... ಎಂದು ಪೇಚಾಡಿಕೊಳ್ಳುತ್ತಿದ್ದಾರೆ. ಬೇರೆ ಸಂದರ್ಭದಲ್ಲಾಗಿದ್ದರೆ, ಹಾಗೆ ದಿಕ್ಕು ತೋಚದೆ ಕೂತವರ ಮುಂದೆ ನೀವು ಧುತ್ತನೆ ಬಂದು ನಿಂತುಬಿಡ್ತಿದ್ರಿ. ಅವರು ಪರಿಚಯದವರಾಗಿದ್ದರೆ ಕುಶಾಲಿನಿಂದ ಮಾತಾಡಿಸಿ, ಸಪ್ಪಗಿರೋದಕ್ಕೆ ಕಾರಣ ಕೇಳಿ ನಗುತ್ತಿದ್ರಿ. ನಂತರ, ಅವರಿಗೆ ಬುದ್ಧಿ ಹೇಳಿ, ಒಂದಷ್ಟು ರೇಗಿ, ತುಂಬ ಸಲುಗೆಯಿದ್ದರೆ ಮೆತ್ತಗೆ ಒಂದು ಏಟನ್ನೂ ಹಾಕಿ, ಮೂಡ್ ಬಂದರೆ ನಿಂತಲ್ಲೇ ಅಭಿನಯಿಸುತ್ತ' ಒಂದು ಹಾಡನ್ನೂ ಹೇಳಿ ಮತ್ತೆ ಸಿಗೋಣ' ಎಂದು ಹೇಳಿ ಹೋಗಿಬಿಡ್ತಿದ್ರಿ!

ಆದರೆ ಈಗ ನಿಮಗೆ ಎದ್ದೇಳುವುದಕ್ಕೂ ಕಷ್ಟವಾಗ್ತಾ ಇದೆಯಂತೆ. ಹಾಡುವುದಿರಲಿ, ಮಾತಾಡುವುದಕ್ಕೂ ಒಂಥರಾ ಹಿಂಸೆ ಆಗ್ತಾ ಇದೆಯಂತೆ... ನಿಮ್ಮನ್ನು ಹತ್ತಿರದಿಂದ ಕಂಡವರೇ ಹೇಳಿದ ಇಂಥ ಮಾತುಗಳನ್ನೆಲ್ಲ ಕೇಳಿದರೆ ಈಗ ಯಾಕೋ ಸಂಕಟವಾಗುತ್ತದೆ. ಬೇಸರವಾಗುತ್ತದೆ. ಅಶ್ವತ್ಥ್ ಹಾಡುತ್ತಿಲ್ಲ' ಎಂಬುದನ್ನು ಕಲ್ಪಿಸಿಕೊಳ್ಳುವುದೇ ಕಷ್ಟವಾಗುತ್ತದೆ ಮತ್ತು ನಿಮ್ಮ ಕಟ್ಟಾ ಅಭಿಮಾನಿಗಳೇ ಹೇಳಿದ್ದ ಅಶ್ವತ್ಥ್ ಕಥೆಗಳನ್ನು' ಮೇಲಿಂದ ಮೇಲೆ ನೆನಪು ಮಾಡಿಕೊಳ್ಳುವ ಆಸೆಯಾಗುತ್ತಿದೆ.

ಸರ್, ಈಗ ಕೂಡ ಸಿ. ಅಶ್ವತ್ಥ್ ಎಂದರೆ ನಮಗೆ ನೆನಪಾಗುವುದು ನಿಮ್ಮ ಸಿಡಿಮಿಡಿ ವ್ಯಕ್ತಿತ್ವ. ಹೌದಲ್ಲವಾ? ವರ್ಷಗಳ ಹಿಂದೊಮ್ಮೆ ನಡೆದ ಪ್ರಸಂಗ ಇದು. ನಾಗಾಭರಣ ಅವರ ನಿರ್ದೇಶನದ ಚಿತ್ರವೊಂದು ಭರ್ಜರಿಯಾಗಿಯೇ ಓಡುತ್ತಿತ್ತು. ಆದರೆ ಆ ಚಿತ್ರಮಂದಿರದ ಮಾಲೀಕನಿಗೆ ಯಾರದೋ ಒತ್ತಡ. ಆತ, ಸಿನಿಮಾವನ್ನು ಎತ್ತಂಗಡಿ ಮಾಡಲು ಯೋಚಿಸಿದ. ಸುದ್ದಿ ಅದು ಹೇಗೋ ಭರಣರ ಕಿವಿಗೆ ಬಿತ್ತು. ಅವರು ಸೀದಾ ನಿಮ್ಮಲ್ಲಿಗೆ ಬಂದು- ಹೀಗ್ ಹೀಗೆ ಅಶ್ವತ್ಥ್. ಬನ್ನಿ. ಥಿಯೇಟರಿಗೆ ಹೋಗಿ ಪ್ರತಿಭಟಿಸೋಣ' ಅಂದರು. ನೀವು ದಡಬಡನೆ ಹೋದವರೇ ಥಿಯೇಟರ್ ಮಾಲೀಕನ ಮುಂದೆ ನಿಂತು- ಹುಣಿಸೇ ಹಣ್ಣಿನ ತೊಕ್ಕಿಗೆ ಬಿಸಿ ಅನ್ನದ ಜತೆ ಕಡಲೆಕಾಯಿ ಎಣ್ಣೆ ಹಾಕ್ಕೊಂಡು ತಿಂದ್ರೆ ಹೇಗಿರುತ್ತೆ ಗೊತ್ತೇನಯ್ಯ? ಅದನ್ನು ಬಿಟ್ಟು ಬಂದು ನಿನ್ಹತ್ರ ಜಗಳ ಮಾಡ್ತಾ ಇದೀನಿ. ನಮ್ ಸಿನಿಮಾ ತೆಗೆದೆ ಅಂದ್ರೆ ಗ್ರಾಚಾರ ಬಿಡಿಸ್ತೀನಿ ಹುಷಾರ್' ಅಂದಿದ್ದಿರಿ!

ನವ್ಯ ಕಾವ್ಯ ಜನಪ್ರಿಯತೆಯಿಂದ ಬೀಗುತ್ತಿದ್ದ ಸಂದರ್ಭದಲ್ಲಿ ನೀವು ಮಾಡಿದ್ದ ಕಾಮೆಂಟ್ ಇದೆಯಲ್ಲ? ಅದನ್ನು ಯಾರೊಬ್ಬರೂ ಮರೆಯಲಾರರು. ಆಗಷ್ಟೇ ನೀವು ಕೆ.ಎಸ್.ನ ಅವರ ಮೈಸೂರ ಮಲ್ಲಿಗೆ'ಯ ಕವನಗಳನ್ನು ಕೆಸೆಟ್ ರೂಪಕ್ಕೆ ಅಳವಡಿಸಿದ್ದಿರಿ. ಕುವೆಂಪು ಗೀತೆಗಳೇ ಸರ್ವಶ್ರೇಷ್ಠ ಎಂದು ನಂಬಿದ್ದಿರಿ. ಪ್ರಾಸ ಇಲ್ಲದ್ದು ಪದ್ಯವಲ್ಲ ಎಂದು ವಾದಿಸುತ್ತಿದ್ದಿರಿ. ಮೊದಲ ಓದಿಗೇ ಸುಲಭವಾಗಿ ಅರ್ಥವಾಗುತ್ತದೆ ನೋಡಿ, ಅದೇ ಒಳ್ಳೆಯ ಕವಿತೆ ಎಂದು ಅವಸರದ ತೀರ್ಪು ಕೊಟ್ಟು ಬಿಡ್ತಾ ಇದ್ರಿ. ಇಂಥ ಸಂದರ್ಭದಲ್ಲೇ, ಪ್ರಾಸವಿಲ್ಲದ ಪದ್ಯವೊಂದನ್ನು ನಿಮ್ಮ ಕೈಗಿಟ್ಟ ಕವಿ ರಾಮಚಂದ್ರ ಶರ್ಮರು- ಹ್ಯಾಗಿದೇರೀ ಇದೂ?' ಎಂದು ಕೇಳಿದರೆ- ಹೇ, ಇದೂ ಒಂದು ಪದ್ಯಾನಾ? ಏನಿದೆ ಸ್ವಾಮಿ ಇದರಲ್ಲಿ? ರೀ ಶರ್ಮ, ನೀವು ತಲೆ ಕೆಟ್ಟ ಕವಿ ಕಣ್ರಿ ಎಂದು ಮುಖಕ್ಕೆ ಹೊಡೆದಂತೆ ಹೇಳಿಬಿಟ್ಟಿದ್ರಿ. ಆಗ, ನಿಮ್ಮ ಧೈರ್ಯ' ಕಂಡು ಲಂಕೇಶರಂಥ ಲಂಕೇಶರೇ ಬೆಚ್ಚಿಬಿದ್ದಿದ್ದರು.

ಮುಂದೆ ಓದಿ : ನಮಗೆ ನೀವು ಬೇಕು ನಿಮ್ಮ ಹಾಡು ಬೇಕು »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X