ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮಗೆ ನೀವು ಬೇಕು ನಿಮ್ಮ ಹಾಡು ಬೇಕು

By Staff
|
Google Oneindia Kannada News

Dear Ashwath sir, get well soon
ಹೌದಲ್ವಾ ಸಾರ್? ಹೆಚ್ಚಿನ ಸಂದರ್ಭಗಳಲ್ಲಿ ಇಂಥ ಕಥೆಗಳನ್ನೆಲ್ಲ ನೀವೇ ಹೇಳಿಕೊಳ್ತಾ ಇದ್ರಿ. ಎರಡು ತಿಂಗಳ ಹಿಂದಷ್ಟೇ ನೀವು ಹೇಳಿದ್ದ ಮಾತಿದು. ಏಳು ವರ್ಷದ ಹಿಂದೆ ಏನಾಯ್ತು ಗೊತ್ತೇನ್ರಿ? ಬಾಂಬೆಯಲ್ಲಿ ಭಾವಗೀತೆಯ ಒಂದು ಕಾರ್ಯಕ್ರಮ ಕೊಡಲು ಆಹ್ವಾನ ಬಂತು. ಇದ್ದಷ್ಟು ದಿನ ಅಬ್ಬರದಿಂದ, ಅದ್ಧೂರಿಯಾಗಿ ಬದುಕಬೇಕು ಅಂತ ಆಸೆಪಟ್ಟವನು ನಾನು. ಆ ಕಾರ್ಯಕ್ರಮಕ್ಕೆ ಒಟ್ಟು 32 ಜನರ ತಂಡದೊಂದಿಗೆ ಬಾಂಬೆಗೆ ಹೋದೆ. ಹೇಗೆ ಅಂತೀರಾ? ಎಲ್ಲರನ್ನೂ ವಿಮಾನದಲ್ಲೇ ಕರ್ಕೊಂಡು ಹೋದೆ. ಅದು ಎರಡು ಗಂಟೆಗಳ ಸಂಗೀತ ಕಾರ್ಯಕ್ರಮ. ಆ ಬಾಂಬೆಯ ಜನ ಪ್ರತಿಯೊಂದು ಹಾಡು ಮುಗಿದಾಗಲೂ ಸಿಳ್ಳೆ ಹಾಕಿದ್ರು. ಚಪ್ಪಾಳೆ ಹೊಡೆದು ಖುಷಿ ಪಟ್ರು. ಒನ್ಸ್ ಮೋರ್ ಅಂದ್ರು. ತಾಳ ಹಾಕಿದ್ರು. ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ ಅದ್ಬುತ, ಅದ್ಭುತ! ಕಾರ್ಯಕ್ರಮ ಮುಗಿಸ್ಕೊಂಡು ಬಂದೆನಲ್ಲ? ಆಗ ಭರ್ತಿ ಏಳು ಲಕ್ಷ ಸಾಲ ಆಗಿತ್ತು! ಮನೇನ ಮಾರಿ ಸಾಲ ತೀರಿಸ್ದೆ. ಆ ಮಾತು ಬಿಟ್ಹಾಕಿ. ಆದ್ರೆ ಬಾಂಬೆಯಲ್ಲಿ ನಡೆದ ಕಾರ್ಯಕ್ರಮವಿತ್ತಲ್ಲ? ಅದ್ಭುತ, ಅದ್ಭುತ...

ಹೌದಲ್ವ ಸರ್, ಒಂದಿಷ್ಟು ಜಾಸ್ತಿ ಸಲುಗೆ ಬೆಳೆಸಿಕೊಂಡವರು ಸಿಕ್ಕಾಗಲೆಲ್ಲ ನೀವು ಇಂಥ ಕಥೆಗಳನ್ನು ಶುರು ಮಾಡ್ತಾ ಇದ್ರಿ. ಆಗೆಲ್ಲ ಎದುರು ಕೂತವರಿಗೆ ಮಾತಾಡಲು ಅವಕಾಶವೇ ಸಿಗುತ್ತಿರಲಿಲ್ಲ. ಒಂದು ವಿಷಯ ಹೇಳಿ ಮುಗಿಸಿದ ತಕ್ಷಣವೇ ಇನ್ನೊಂದು ಶುರುವಾಗ್ತಿತ್ತು. ಬೈಛಾನ್ಸ್ ಇಂಥ ಸಂದಭರದಲ್ಲಿ ಯಾರಾದರೂ ಫೋಟೋ ತೆಗೆಯಲು ಬಂದರೆ ಇಷ್ಟಗಲ ನಕ್ಕು, ಜತೆಗಿದ್ದವರನ್ನು ಇನ್ನೂ ಹತ್ತಿರಕ್ಕೆ ನಿಲ್ಲಿಸಿಕೊಂಡು, ಕೆನ್ನೆಗೆ ಲೊಚ್ ಅಂತ ಮುತ್ತು ಕೊಟ್ಟು, ಹೆಗಲ ಮೇಲೆ ಕೈಹಾಕಿ, ಹಹ್ಹಹ್ಹಾ ಎನ್ನುತ್ತ, ಒಂದೆರಡು ಫೋಟೋ ಜಾಸ್ತೀನೇ ತಗೀರಿ ಪರವಾಗಿಲ್ಲ ಎಂದು ಹೇಳುತ್ತಿದ್ದಿರಿ. ಆತ ಎದ್ದು ಹೋದ ಬಳಿಕ ಮತ್ತೆ - ಎಲ್ಲಿಗೆ ನಿಂತು ಹೋಗಿತ್ತೋ ಅಲ್ಲಿಂದಲೇ ಮಾತು ಶುರುವಾಗುತ್ತಿತ್ತು...

ಸರ್, ಈವರೆಗೆ ಬಂದು ಹೋಗಿರುವ ಅಷ್ಟೂ ಗಾಯಕ-ಗಾಯಕಿಯರಿಗೆ ಮಿತಿ'ಗಳಿವೆ. ಆರಂಭದ ದಿನಗಳಲ್ಲಿ ಅವರು ಎಲ್ಲ ಹಾಡುಗಳಿಗೂ ದನಿಯಾಗ್ತಾರೆ ನಿಜ. ಆದರೆ, ಒಂದೆರಡು ವರ್ಷದ ನಂತರ ಸಂಗೀತ ಕ್ಷೇತ್ರದಲ್ಲಿ ತಮ್ಮ ಮಿತಿ ಏನೆಂದು ಅವರಿಗೆ ಅರ್ಥವಾಗಿಬಿಡುತ್ತಿದೆ. ಹಾಗಾಗಿ ಕೆಲವರು ಭಾವಗೀತೆಗೆ, ಕೆಲವರು ಭಕ್ತಿಗೀತೆಗೆ, ಕೆಲವರು ಜಾನಪದ ಗೀತೆಗೆ, ಮತ್ತೆ ಕೆಲವರು ಚಿತ್ರಗೀತೆಗೆ ಹೊರಳಿಕೊಳ್ಳುತ್ತಾರೆ. ಆದರೆ, ನೀವು ಯಾವುದೇ ಮಿತಿಗೂ ಸಿಕ್ಕಿಕೊಳ್ಳದೇ ಬೆಳೆದವರು. ಭಾವಗೀತೆ, ಭಕ್ತಿಗೀತೆ, ಜನಪದಗೀತೆ, ಚಿತ್ರಗೀತೆಗಳೆಲ್ಲ ನೀವು ಹೇಳಿದಂತೆ' ಕೇಳುತ್ತಿದ್ದವು. ಕಣ್ಣುಮುಚ್ಚಿ ಒಂದೈದು ನಿಮಿಷ ಏನನ್ನೋ ಧ್ಯಾನಿಸಿ, ಒಂದೆರಡು ನಿಮಿಷದ ನಂತರ ನಿಧಾನವಾಗಿ ಕಣ್ತೆರೆದು, ಒಮ್ಮೆ ಕೆನ್ನೆಯ ಪದರುಗಳನ್ನು ಅಗಲಿಸಿದಂತೆ ಮಾಡಿ, ಹಾರ್ಮೋನಿಯಂ ಜತೆಗಿಟ್ಟುಕೊಂಡು ಅದರ ಮೇಲೆ ಅತ್ತಿಂದಿತ್ತ, ಇತ್ತಿಂದತ್ತ ಸರಸರನೆ ಬೆರಳಾಡಿಸಿಬಿಟ್ಟರೆ - ವಾಹ್, ಅದ್ಭುತ ರಾಗ ಸಂಯೋಜನೆಯ ಒಂದು ಹೊಸ ಹಾಡು ಅಲ್ಲಿ ಹುಟ್ಟಿಕೊಳ್ಳುತ್ತಿತ್ತು.

ಆಮೇಲೆ ಸಾರ್.... ಹೆಚ್ಚಿನ ಸಂದರ್ಭದಲ್ಲಿ ನೀವು ತಾರಕಕ್ಕೆ ಹೋಗಿ ಹಾಡ್ತಾ ಇದ್ರಿ. ಆದರೆ, ಹಾಗಂತ ನೇರವಾಗಿ ಹೇಳಲು ನಮ್ಮಿಂದ ಸಾಧ್ಯವಾಗುತ್ತಲೇ ಇರಲಿಲ್ಲ. ಯಾಕೆ ಅಂದ್ರೆ- ಆ ತಾರಕ ಸ್ವರವೇ ನಮಗೆ ಇಷ್ಟವಾಗಿಬಿಟ್ಟಿತ್ತು. ಜತೆಗೆ, ಹಾಡುವ ಸಂದರ್ಭದಲ್ಲಿ ನೀವು ಒಂಥರಾ ಡ್ಯಾನ್ಸು ಮಾಡುತ್ತ, ಜತೆಗಿದ್ದ ಗಾಯಕರನ್ನು ಹುರಿದುಂಬಿಸುತ್ತಾ ಪ್ರೇಕ್ಷಕರನ್ನು ರಂಜಿಸುತ್ತಾ, ವಾದ್ಯಗಾರರತ್ತ ನೋಡಿ ಮೆಚ್ಚುಗೆಯಿಂದ ನಗುತ್ತಾ, ಆ ಸಂದರ್ಭದಲ್ಲೇ ನಾನುಂಟು ಮೂರು ಲೋಕವುಂಟು ಎಂಬ ಮುಖಭಾವ ಪ್ರದರ್ಶಿಸುತ್ತಾ, ವೇದಿಕೆಯೆಂಬೋ ವೇದಿಕೆಯನ್ನು ಆವರಿಸಿಕೊಳ್ಳುತ್ತಿದ್ದ ರೀತಿ ಸಖತ್ತಂದ್ರೆ ಸಖತ್ ಖುಷಿ ಕೊಡುತ್ತಿತ್ತು. ಬಾ ಇಲ್ಲಿ ಸಂಭವಿಸು....' ಎಂದು ಹಾಡುತ್ತ ಹಾಡುತ್ತ, ಗಿರಗಿರಗಿರ ತಿರುಗಿ ಅಭಿನಯಿಸುತ್ತ, ಕಾಣದ ಶಕ್ತಿಯನ್ನೂ ಬಾ ಇಲ್ಲಿ...' ಎಂದು ಆಹ್ವಾನಿಸುತ್ತಿದ್ದ ರೀತಿ; ಕೆಂಚಾಲೋ ಮಂಚಾಲೋ ಹೆಂಗವ್ರಾಲಾ ನಿಮ್ಮ ಡವ್‌ಗಳೂ' ಎಂದು ಗಡುಸಾಗಿ ಕೇಳಿ ಹುಬ್ಬು ಹಾರಿಸುವಾಗಿನ ಗತ್ತು; ಅಮೃತವಾಹಿನಿಯೊಂದು ಹರಿಯುತಿದೇ ಎದೆಯಿಂದ ಎದೆಗೆ ಸತತ...' ಎಂದು ಆರ್ತವಾಗಿ ಹೇಳುವ ಸಂದರ್ಭದ ದುಗುಡ, ಇಂದೇಕೆ ಆ ನೆನಪು ನನ್ನನ್ನು ಕಾಡಿದೇ...' ಎನ್ನುವಾಗಿನ ಸಂಕಟ... ಓಹ್, ನಿಮ್ಮನ್ನು ಪದೇಪದೇ ನೆನಪು ಮಾಡಿಕೊಳ್ಳಲಿಕ್ಕೆ ಎಷ್ಟೊಂದು ಕಾರಣಗಳಿವೆಯಲ್ಲ ಸಾರ್?

ಹೌದು ಸಾರ್, ಅದ್ಭುತ ಅದ್ಭುತ ಎಂದು ಮಾತಾಡುತ್ತಲೇ ಅದ್ಭುತವಾದ ಹಾಡುಗಳನ್ನು ಕೊಟ್ಟವರು ನೀವು. ಕನ್ನಡವೇ ಸತ್ಯ' ಕಾರ್ಯಕ್ರಮದ ಮೂಲಕ ಭಾವಗೀತೆಗಳನ್ನು ಮನೆಮನೆಗೆ ತಲುಪಿಸಿದವರು ನೀವು. ಒಂದಷ್ಟು ಮಿತಿಗಳ ಮಧ್ಯೆಯೇ ವ್ಯಕ್ತಿಯೊಬ್ಬ ಎಷ್ಟೆಲ್ಲ ಕೆಲಸ ಮಾಡಬಹುದು ಎಂದು ತೋರಿಸಿಕೊಟ್ಟವರೂ ನೀವು. ಇಷ್ಟೆಲ್ಲ ಇದ್ದರೂ ಸಿಗಲೇಬೇಕಾಗಿದ್ದ ಎಷ್ಟೋ ಪ್ರಶಸ್ತಿ, ಬಹುಮಾನಗಳು ನಿಮಗೆ ಸಿಗಲೇ ಇಲ್ಲ. ಕಾಕನಕೋಟೆ, ಭೂಲೋಕದಲ್ಲಿ ಯಮರಾಜ, ಆಲೆಮನೆ, ನಾಗಮಂಡಲ, ಚಿನ್ನಾರಿ ಮುತ್ತ, ಸಂತ ಶಿಶುನಾಳ ಷರೀಫ, ಮೈಸೂರು ಮಲ್ಲಿಗೆ... ಮುಂತಾದ ಚಿತ್ರಗಳು ನಿಮ್ಮ ಮಧುರ ಸಂಗೀತದಿಂದಲೇ ಜಯಭೇರಿ ಹೊಡೆದವು ನಿಜ. ಆದರೆ, ಕನ್ನಡ ಚಿತ್ರರಂಗ ನಿಮ್ಮನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಸ್ವಾರಸ್ಯವೆಂದರೆ, ವಿಷಯವಾಗಿ ನಿಮಗೆ ವಿಷಾದವೂ ಇದ್ದಂತೆ ಕಾಣಲಿಲ್ಲ.

ಸರ್, ಹೌದಲ್ಲವಾ? ಈ ತಿಂಗಳ 29ಕ್ಕೆ ನಿಮಗೆ ಸ್ವೀಟ್ ಸೆವೆಂಟಿ! ಅದನ್ನು ವರ್ಷದ ಹಿಂದೆಯೇ ಗುರುತಿಸಿದ್ದ ಅಭಿಮಾನಿಗಳು ಭರ್ಜರಿ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಿದ್ದಾರೆ. ಅವತ್ತು ಅಶ್ವತ್ಥ್ ಸಹ ಗಾಯಕರೊಂದಿಗೆ ಹಾಡಲಿದ್ದಾರೆ. ಹಾಡಿ ಕಾಡಲಿದ್ದಾರೆ ಎಂದು ಪ್ರಚಾರ ಮಾಡಿದ್ದಾರೆ. ಆ ಮೂಲಕ ಸಂಗೀತ ಪ್ರೇಮಿಗಳಿಗೆ ಹಬ್ಬದ' ಖುಷಿ ತಂದಿದ್ದರು. 70ರ ಸಂಭ್ರಮದಲ್ಲಿ ಅಶ್ವತ್ಥ್ ಹೇಗೆಲ್ಲ ನಲಿದಾಡಬಹುದು, ಆ ಖುಷಿಯನ್ನು ಹೇಗೆ ಕಣ್ತುಂಬಿಸಿಕೊಳ್ಳಬಹುದು ಎಂದು ಎಲ್ಲರೂ ಅಂದಾಜು ಮಾಡುತ್ತಿರುವಾಗಲೇ ನೀವು ಆಸ್ಪತ್ರೆ ಸೇರಿಬಿಟ್ಟಿದ್ದೀರಿ! ಸರ್, ಎಲ್ಲ ಸಂಗೀತ ಪ್ರಿಯರ ಪರವಾಗಿ ಹೇಳ್ತಾ ಇದೀನಿ. ನಮಗೆ ನೀವು ಬೇಕು. ನಿಮ್ಮ ಹಾಡು ಬೇಕು. ನೀವು ಜತೆಗಿದ್ದರೆ, ಜಗತ್ತು ಹೆಚ್ಚು ಸಂಗೀತಮಯವಾಗುತ್ತದೆ. ಹೆಚ್ಚು ಪ್ರಿಯವಾಗುತ್ತದೆ ಹೆಚ್ಚು ಸಾರ್ಥಕವಾಗುತ್ತದೆ. ಇದೆಲ್ಲ ಗೊತ್ತಿರುವುದರಿಂದಲೇ ದೇಶ ವಿದೇಶದ ಜನರೆಲ್ಲ ಅಶ್ವತ್ಥ್ ಬೇಗ ಹುಷಾರಾಗಲಿ ಎಂದು ವೆಬ್ ಸೈಟ್‌ನಲ್ಲಿ ಸಂದೇಶ ಕಳಿಸಿದ್ದಾರೆ, ಪ್ರಾರ್ಥಿಸಿದ್ದಾರೆ. ಈಗ ಹೇಳಬೇಕು ಅನ್ನಿಸಿರೋದು ಇಷ್ಟೇ : ಬೇಗ ಚೇತರಿಸಿಕೊಳ್ಳಿ. ತುಂಬ ಪ್ರೀತಿಯಿಂದ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X