• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೆಎಸ್ ನರಸಿಂಹಸ್ವಾಮಿ ಕಾವ್ಯಶಕ್ತಿಗೆ ನಮಸ್ಕಾರ

By * ಎಆರ್ ಮಣಿಕಾಂತ್
|

ಇದು 1990ರ ಮಾತು. ಬೆಂಗಳೂರಿನ ಇಂದಿರಾನಗರದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವಿತ್ತು. ಮುಖ್ಯ ಅತಿಥಿಗಳಾಗಿ ಬರಲಿದ್ದವರು ಕೆ.ಎಸ್. ನರಸಿಂಹಸ್ವಾಮಿ. ಆ ವೇಳೆಗೆ ಅವರಿಗೆ 75 ವರ್ಷ ವಯಸ್ಸಾಗಿತ್ತು. ಆ ಇಳಿವಯಸ್ಸಿನಲ್ಲಿ ಕವಿಗಳು ಹೇಗಿರಬಹುದು? ಅವರು ಯಾವ ಡ್ರೆಸ್ ಹಾಕಿಕೊಂಡು ಬರಬಹುದು? ಅವರೊಂದಿಗೆ ಸಹಾಯಕರಂತೆ' ಯಾರು ಬರಬಹುದು? ಕವಿಗಳು ಯಾವ ವಿಷಯದ ಬಗ್ಗೆ ಮಾತಾಡಬಹುದು? ಬದುಕಿಡೀ ಪ್ರೀತಿ, ಪ್ರೇಮ, ಪ್ರಣಯದ ಬಗ್ಗೆಯೇ ಬರೆದರಲ್ಲ? ಆ ವಿಷಯವಾಗಿಯೇ ಅವರು ಮಾತಾಡಲಿದ್ದಾರಾ? ಭರ್ತಿ ಐವತ್ತು ವರ್ಷಗಳ ಕಾಲ ಪ್ರೀತಿ-ಪ್ರೇಮದ ಜಪದಲ್ಲೇ ಕೆಎಸ್‌ನ ಉಳಿದುಬಿಟ್ಟರು ಅಂದರೆ- ಅವರ ಮನಸ್ಸು ಕದ್ದ ಬೆಡಗಿ(ಯರು) ತುಂಬ ಸುಂದರಿಯೇ ಇರಬೇಕು. ಅವರ ನೆನಪಲ್ಲಿಯೇ ತೇಲಿಹೋಗಿ ಕೆಎಸ್‌ನ ಒಂದರ ಹಿಂದೊಂದು ಪದ್ಯ ಬರೆದಿರಬೇಕು. ಹಳೆಯ ಪ್ರೇಮ ಮತ್ತು ಹಳೆಯ ಪ್ರೇಯಸಿಯರು ನೆನಪಾದಾಗೆಲ್ಲ ಅವರಿಗೆ ಒಂದೊಂದು ಪದ್ಯ ಹೊಳೆದಿರಬೇಕು. ಅಂದಹಾಗೆ, ಕೆಎಸ್‌ನ ಅವರ ಪತ್ನಿಗೆ ಇದೆಲ್ಲ ಗೊತ್ತಿಲ್ಲವಾ? ಎಲ್ಲ ಗೊತ್ತಿದ್ದೂ ಅವರು ಸುಮ್ಮನಿದ್ದಾರಾ? ಗಂಡ ಹೀಗೆ ಒಂದರ ಹಿಂದೊಂದು ಪ್ರೇಮ ಕವಿತೆ ಬರೀತಾ ಇದ್ದಾಗೆಲ್ಲ ಅವರಿಗೆ ಸಂತೋಷ, ಬೆರಗು, ಅಭಿಮಾನ ಮತ್ತು ಅನುಮಾನ ಒಟ್ಟೊಟ್ಟಿಗೇ ಬಂದುಬಿಡಲ್ವ? ಈ ವಿಷಯವಾಗಿ ಅವರು ಅವಾಗವಾಗ ಜಗಳ ಮಾಡೋದಿಲ್ವ?

ಅವತ್ತು ಕಾರ್ಯಕ್ರಮಕ್ಕೆ ಬಂದಿದ್ದ ನೂರಾರು ಕಿರಿಯರಿಗೆ ಇಂಥವೇ ಕೆಟ್ಟ ಕುತೂಹಲದ ಪ್ರಶ್ನೆಗಳು ಕ್ಷಣಕ್ಷಣಕ್ಕೂ ಕಾಡಿದ್ದವು. ಎಲ್ಲರೂ ಕವಿಗಳ ನಿರೀಕ್ಷೆಯಲ್ಲಿದ್ದಾಗಲೇ, ದಸರಾ ರಜೆ ಕಳೆಯಲು ಅಜ್ಜಿಯ ಮನೆಗೆ ಮಕ್ಕಳು ಬರ್‍ತಾರಲ್ಲ? ಆ ಖುಷಿಯಲ್ಲಿ ಬಂದೇಬಿಟ್ಟರು ಕೆ.ಎಸ್.ನ. ಅವರೊಂದಿಗೆ ಶ್ರೀಮತಿ ವೆಂಕಮ್ಮನವರಿದ್ದರು. ಇಬ್ಬರ ನಡಿಗೆಯಲ್ಲೂ ತಾಳಮೇಳವಿತ್ತು. ವೇಗದಲ್ಲಿ ಮಂದಹಾಸವಿತ್ತು. ಕೆಎಸ್‌ನ ಅವತ್ತು ಮಲ್ಲಿಗೆ ಬಿಳುಪಿನ ಜುಬ್ಬಾ- ಪಂಚೆ ಧರಿಸಿದ್ದರು. ವೆಂಕಮ್ಮನವರು ಗಾಢ ಹಸಿರು ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದರು. ಕಾರ್ಯಕ್ರಮದುದ್ದಕ್ಕೂ ದಂಪತಿಯರು ಪರಸ್ಪರರ ಬಗ್ಗೆ ಅದೆಷ್ಟು ಕೇರ್ ತಗೊಂಡರು ಅಂದರೆ-ವಾಹ್, ಜಗತ್ತಿನ ಆದರ್ಶ ದಂಪತಿ ಅಂದರೆ ಇವರೇ ಇರಬೇಕು ಎಂಬ ಭಾವ ಹಲವರಿಗೆ ಬಂದದ್ದು ಸುಳ್ಳಲ್ಲ. ಏಕೆಂದರೆ ಕೆಎಸ್‌ನ ಅವರ ಹಣೆಯ ಮೇಲೆ ಒಂದೇ ಒಂದು ಬೆವರಹನಿ ಕಂಡರೂ ಸಾಕು, ಅದನ್ನು ಒರೆಸಲು ವೆಂಕಮ್ಮನವರು ಮುಂದಾಗುತ್ತಿದ್ದರು. ಹಾಗೆಯೇ ವೆಂಕಮ್ಮನವರು ಒಂದೆರಡು ನಿಮಿಷದ ಮಟ್ಟಿಗೆ ಸಪ್ಪೆ ಮುಖಭಾವದಲ್ಲಿ ಕೂತರೂ ಕೆಎಸ್‌ನ-ಏನಾಯ್ತು ನಿಂಗೆ? ಯಾಕೆ ಸಪ್ಪಗಾಗಿ ಬಿಟ್ಟೆ? ಆಯಾಸ ಆಯ್ತಾ? ಎಂಬರ್ಥದಲ್ಲಿ ಪ್ರಶ್ನೆ ಹಾಕುತ್ತಿದ್ದರು.

ವಿಶೇಷವೆಂದರೆ-ಅವತ್ತು ಕೆಎಸ್‌ನ ಅವರ ನಂತರ ಶ್ರೀಮತಿ ವೆಂಕಮ್ಮನವರೂ ನಾಲ್ಕು ಮಾತಾಡಿದರು! ಅದಕ್ಕೆ ಕಾರಣವಾದದ್ದು ಕಿರಿಯರೊಬ್ಬರ ತುಂಟ ಪ್ರಶ್ನೆ. ಅವರು ಸಹಜ ಕುತೂಹಲದಿಂದಲೇ ಕೇಳಿದ್ದರು: ಕೆಎಸ್‌ನ ಅವರ ಪದ್ಯದಲ್ಲಿ ಬರುವ ಪದುಮ, ಶಾರದೆ, ಶಾನುಭೋಗರ ಮಗಳು, ಕಾಮಾಕ್ಷಿ, ಕನಕ... ಹೆಸರಿನ ಹುಡುಗಿಯರು(?) ಬೇರೆ ಬೇರೆ ಊರಿನವರೋ ಅಥವಾ ಇವೆಲ್ಲ ತಮ್ಮ ಕಾವ್ಯದ ನಾಯಕಿಗೆ ಕೆಎಸ್‌ನ ಇಟ್ಟುಕೊಂಡ ಹೆಸರುಗಳೋ? ಅವರ ಕಾವ್ಯದ ನಾಯಕಿ ಯಾರು? ತಮ್ಮ ನಾಯಕಿಯರೊಂದಿಗೆ ಕೆಎಸ್‌ನ ಒಂದೇ ಒಂದು ದಿನವಾದರೂ ಜಗಳ ಮಾಡಲೇ ಇಲ್ಲವೆ? ಬರೀ ಪ್ರೀತಿ-ಪ್ರೇಮದ ಬಗ್ಗೆ ಮಾತ್ರ ಅವರು ಪದ್ಯ ಬರೆದಿದ್ದಾರೆ. ಜಗಳವಾಡಿದ ಬಗ್ಗೆ ಒಂದೇ ಒಂದು ಕವಿತೆಯೂ ಇಲ್ಲವಲ್ಲ, ಯಾಕೆ?'

ಕೆಣಕುವಂತಿದ್ದ ಈ ಪ್ರಶ್ನೆಗೆ ಕೆಎಸ್‌ನ ಉತ್ತರಿಸಲಿಲ್ಲ. ಸುಮ್ಮನೆ ನಸುನಕ್ಕರು. ಆಗ ಮಾತು ಶುರು ಮಾಡಿದ ವೆಂಕಮ್ಮನವರು ಹೀಗೆಂದರು:ಇವರ ಪದ್ಯಗಳಲ್ಲಿ ಬರುವ ಪದುಮ, ಶಾರದೆ, ಕಾಮಾಕ್ಷಿ, ಕನಕ, ಶಾನುಭೋಗರ ಮಗಳು... ಎಲ್ಲವೂ ನಾನೇ. ವೆಂಕಮ್ಮ ಅನ್ನೋ ಹೆಸರು ಅಷ್ಟೇನೂ ಚೆನ್ನಾಗಿಲ್ಲ ಅನ್ನಿಸಿರಬೇಕು ಇವರಿಗೆ. ಆ ಕಾರಣದಿಂದಲೇ ಬೇರೆ ಹೆಸರು ಬಳಸಿದ್ದಾರೆ. ಇವರು ಒಂದು ದಿನ ಕೂಡ ಜಗಳ ಮಾಡಲೇ ಇಲ್ಲ. ತುಂಬಾ ಬೇಸರವಾದರೆ, ಸಿಟ್ಟು ಬಂದರೆ ಆಗ ಯಾರೊಂದಿಗೂ ಮಾತನಾಡದೆ ಕೂತುಬಿಡ್ತಿದ್ರು. ಆಗ ನಮಗೆಲ್ಲ ರಾಯರು ಸಿಟ್ಟಾಗಿದ್ದಾರೆ' ಎಂದು ಅರ್ಥವಾಗುತ್ತಿತ್ತು. ಅಂಥ ವೇಳೆಯಲ್ಲಿ ನಾನೂ ಅವರನ್ನು ಕೆಣಕಲು ಹೋಗುತ್ತಿರಲಿಲ್ಲ. ಅವರೊಂದಿಗೆ ಒಮ್ಮೆ ಕೂಡ ಜಗಳ ಮಾಡಲಿಲ್ಲವಲ್ಲ ಎಂದು ಸ್ವಲ್ಪ ಬೇಸರವಿದೆ. ಹಾಗೆಯೇ ಜಗಳ ಮಾಡದೆಯೇ ಬದುಕಿದ ವಿಷಯವಾಗಿ ಹೆಮ್ಮೆಯೂ ಇದೆ...'

ವೆಂಕಮ್ಮನವರ ಮಾತು ಮುಗಿಯುತ್ತಿದ್ದಂತೆಯೇ ಒಮ್ಮೆ ಕತ್ತೆತ್ತಿ ನೋಡಿದ ಕೆ.ಎಸ್.ನ ಮತ್ತೆ ನಸುನಕ್ಕರು. ತಕ್ಷಣವೇ ಅವರದೊಂದು ಕವಿತೆ ನೆನಪಾಯಿತು. ಆ ಪದ್ಯ, ತುಂಬ ಪ್ರಾಯದ ಹುಡುಗಿಯ ಥರಾ, ಅವಳ ಜಂಬದ ನಗುವಿನ ಥರಾ, ವಯ್ಯಾರದ ನಡಿಗೆಯ ಥರಾ, ಕಾಲ್ಗೆಜ್ಜೆಯ ಸದ್ದಿನ ಥರಾ, ಕೈಬಳೆಯ ನಾದದ ಥರಾ, ಘಮ್ಮೆನ್ನುವ ಮಲ್ಲಿಗೆಯ ಪರಿಮಳದ ಥರಾ, ಜೀವ ಝಲ್ಲೆನಿಸುವ ಎದೆಯ ಮಧ್ಯದ ಸುವಾಸನೆಯ ಥರಾ ಶುರುವಾಗುತ್ತದೆ. ನದಿಯಂತೆ ಬಾಗಿ, ಬೀಗಿ, ಬಳುಕಿ ಸಾಗುತ್ತದೆ. ಅದನ್ನು ಕವಿ ಹೇಳುವುದು ಹೀಗೆ:

ಒಬ್ಬಳೇ ಬಂದಳು/ ನಡೆನಡೆದು ಕನಕ!/ನಗುನಗುತ ಬಂದಳು/ನನ್ನೆದೆಯ ತನಕ

ಬರುವ ಸಡಗರದಲ್ಲಿ/ಸದ್ದಾಯ್ತು ಚಿಲಕ;/ ಬಂದು ನಿಂತಳು ಇಲ್ಲಿ/ಎತ್ತರಿಸಿ ಬೆಳಕ.

........................

........................

ನೀಲ ಗಗನದ ನಡುವೆ/ಚಂದಿರನ ಹೊರಳು ಮೌನಮಾಯೆಯ ನಡುವೆ/ರಾಗಗಳ ಹೊರಳು.

ಕಣ್ಣೆತ್ತಿ ನೋಡಿದಳು/ಕಣ್ತುಂಬ ಕನಕ; ಗಾಳಿಯಲಿ ತುಂಬಿಗಳು/ಝಂಕಾರ ಪದಕ.

ಪದ್ಯ ಮುಂದುವರಿದಂತೆಲ್ಲ ಖುಷಿಯಾಗುತ್ತದೆ. ರೋಮಾಂಚನವಾಗುತ್ತದೆ. ಆಗಿರುವ ವಯಸ್ಸನ್ನೂ ಮರೆತು ಪ್ರೀತಿಸುವ ಮನಸ್ಸಾಗುತ್ತದೆ. ಕೆ.ಎಸ್.ನ ಅವರ ಜಮಾನಾದಲ್ಲಿ ಪ್ರೇಮಿಗಳಿಗೆ ಇದ್ದ (?) ಪ್ರೈವೇಸಿ ನೆನೆದು ಅಸೂಯೆಯಾಗುತ್ತದೆ!

****

ಕೆಎಸ್‌ನ ಅವರ ಪದ್ಯ, ಅವರ ಕಾಲದ ಪ್ರೇಮ, ಅವರಿಗೆ ಸಿಕ್ಕ ರೋಮಾಂಚನ ತುಂಬ ಇಷ್ಟವಾಗುತ್ತದೆ ನಿಜ. ಆದರೆ, ಆ ಕಾಲದವರಂತೆ ಪ್ರೇಮಿಸುವುದು ಈಗ ಸಾಧ್ಯವೇ ಇಲ್ಲವೇನೋ. ಅದಕ್ಕೆ ಕಾರಣಗಳನ್ನು ಪಟ್ಟಿ ಮಾಡುತ್ತ ಹೋದರೆ, ಒಮ್ಮೆ ನಗುಬರುತ್ತದೆ. ಹಿಂದೆಯೇ ಹೌದಲ್ವಾ?' ಅನ್ನಿಸಿ ಅಚ್ಚರಿಯಾಗುತ್ತದೆ.

ಕೇಳಿ: ಇವತ್ತು ಪ್ರೀತಿಯ ಹೊಳೆಗೆ ಬಿದ್ದವರೆಲ್ಲ ರೋಮಾಂಚನದಲ್ಲಿ' ಮುಳುಗದೇ ಇರಲು ಮುಖ್ಯ ಕಾರಣವಾಗಿರುವುದು ಮೊಬೈಲು! ಇವತ್ತು ಎಷ್ಟೋ ಮಂದಿಗೆ ಪ್ರೀತಿ ಚಿಗುರುವುದೇ ಒಂದು ಎಸ್ಸೆಮ್ಮೆಸ್, ಒಂದು ಕಾಲ್ ಮೂಲಕ! ಹಾಗೆಯೇ ಅದೇ ಮಧುರ ಪ್ರೇಮ ಲಟಾರನೆ ಮುರಿದು ಬೀಳುವುದೂ ಒಂದು ಎಸ್ಸೆಮ್ಮೆಸ್ಸು ಅಥವಾ ಒಂದು ಫೋನ್ ಕಾಲ್ ಮೂಲಕವೇ ಎಂಬುದು ವಿಪರ್‍ಯಾಸ. ಈಗ ಎಲ್ಲಿ ಸರಸವೂ, ಸಿಹಿಮುತ್ತೂ ಮೊಬೈಲಿನ ಪಿಸಪಿಸ ಮಾತುಗಳಲ್ಲೇ ಮುಗಿದು ಹೋಗುತ್ತದೆ. ಈಗಿನ ಕಾಲದಲ್ಲಿ ಯಾವ ಹುಡುಗನೂ ಅವಳ' ಮೇಲೆ ಪದ್ಯ ಬರೆಯುವುದಿಲ್ಲ. ಬದಲಿಗೆ ರಿಂಗ್‌ಟೋನ್ ಕಳಿಸುತ್ತಾನೆ, ಕೇಳಿಸುತ್ತಾನೆ! ಒಂದು ಗ್ರೀಟಿಂಗ್ ಕಾರ್ಡಿನೊಂದಿಗೆ ಅವಳ ಮುಂದೆ ದೈನೇಸಿಯಂತೆ ನಿಲ್ಲುವುದಿಲ್ಲ. ಬದಲಿಗೆ ಅವಳಿಗೆ ಭರ್ತಿ ಹದಿನೈದು ಸಾವಿರದ ಮೊಬೈಲು ಕೊಡಿಸುತ್ತಾನೆ. ಆಮೇಲೆ ದಿನದ ಇಪ್ಪತ್ನಾಲ್ಕು ಗಂಟೆಯೂ ಅವಳೊಂದಿಗೆ ಟಚ್'ನಲ್ಲಿರುತ್ತಾನೆ. ಒಂದು ದಿನವೂ ತಪ್ಪಿಸದೆ ಮಾತಾಡುವುದರಿಂದ ಹುಡುಗನಿಗಾಗಲಿ, ಹುಡುಗಿಗಾಗಲಿ ಎಲ್ಲರ ಕಣ್ತಪ್ಪಿಸಿ ಭೇಟಿಯಾಗಬೇಕಾದ ಮಹದಾಸೆ ಇರುವುದಿಲ್ಲ ಅಥವಾ ಭೇಟಿಯಾದರೂ, ಆಗಲೂ ಹೊಸ ರಿಂಗ್‌ಟೋನ್ ಕೇಳಿಸುವ, ಏನನ್ನೋ ಕದಿಯುವ ಅವಸರ' ಮಾತ್ರ ಇರುತ್ತದೆ. ಅಂಥ ಭೇಟಿಯಲ್ಲೂ ಮೊಬೈಲಿನಲ್ಲಿ ಅವನೋ, ಅವಳೋ ಹದಿನೈದಿಪ್ಪತ್ತು ನಿಮಿಷ ಮಾತಿಗೆ ನಿಂತರೆ- ಆ ಕಾರಣಕ್ಕೇ ಜಗಳ ಶುರುವಾಗಿಬಿಡುತ್ತದೆ. ಉಹುಂ, ನಂತರದಲ್ಲಿ ಅವರ' ಪ್ರೇಮ ಮತ್ತೆ ಹಳೆಯ ಟ್ರ್ಯಾಕ್‌ಗೆ ಬರುವುದಿಲ್ಲ.

ಈ ದಿನಗಳಲ್ಲಿ ಪ್ರೇಮಿಗಳಿಗೆ ಇರುವ ಅಡೆತಡೆಗಳನ್ನು ಗಮನಿಸಿದರೂ ಅಚ್ಚರಿಯಾಗುತ್ತದೆ. ಏಕೆಂದರೆ, ಇವತ್ತು ಅವರ ರಕ್ಷಣೆಗೆ ಜನರೂ ಇಲ್ಲ. ಪ್ರಕೃತಿಯೂ ಇಲ್ಲ. ಒಂದೇ ಮಾತಲ್ಲಿ ಹೇಳಬೇಕೆಂದರೆ, ಇವತ್ತು ಪ್ರೀತಿಯ ಹೊಳೆಗೆ ಬಿದ್ದ ಹುಡುಗ/ಹುಡುಗಿ ಕೆಲಸಕ್ಕೆ ಸೇರಿರುತ್ತಾರೆ; ಕಾಲೇಜಿಗೂ ಹೋಗುತ್ತಿರುತ್ತಾರೆ. ಅವರದು ಪ್ರಧಾನಮಂತ್ರಿಯಷ್ಟೇ ಬ್ಯುಸಿ ಶೆಡ್ಯೂಲ್. ಮಧ್ಯಾಹ್ನ ಅವಳಿಗೊಂದು ಮೆಸೇಜು ಕಳಿಸಲು ಇವನು ಮೊಬೈಲು ಎತ್ತಿಕೊಂಡರೆ, ಅದೇ ವೇಳೆಗೆ ಬಾಸ್ ಕರೆದಿರುತ್ತಾನೆ. ಇವಳು ಸಂಜೆ' ಬೇಗ ಸಿಗೋಣವಾ ಎಂದು ಅವನಿಗೆ ಮೆಸೇಜು ಬಿಟ್ಟು, ಹತ್ತು ನಿಮಿಷ ಮೊದಲೇ ಆಫೀಸು ಬಿಟ್ಟರೂ, ಗಿಜಿಗಿಜಿ ಟ್ರಾಫಿಕ್ಕಿಗೆ ಸಿಕ್ಕಿಕೊಂಡ ಕಾರಣದಿಂದ ಕಾಫಿಡೇ ತಲುಪುವ ವೇಳೆಗೆ ಎಂಟೂವರೆ ದಾಟಿರುತ್ತದೆ. ಒಂಬತ್ತೂವರೆಯ ಒಳಗೆ ಮನೇಲಿರಬೇಕು; ಬಟ್ಟೆ ಅಥವಾ ಕೈ ಬೆರಳಿನಲ್ಲಿ ಅವನು' ಹಾಕಿರುವ ಪರ್‌ಫ್ಯೂಮ್‌ನ ಘಮವೋ, ಸಿಗರೇಟಿನ ಘಾಟೋ ಅಂಟಿಕೊಳ್ಳಬಾರದು ಎಂದು ಇವಳು' ವಿಪರೀತ ಎಚ್ಚರಿಕೆ ವಹಿಸುವುದರಿಂದ ಜತೆಯಲ್ಲಿ ಕೂತಿದ್ದರೂ ಅವನು ಮುಟ್ಟುವಂತಿಲ್ಲ. ಮುತ್ತಿಡುವಂತಿಲ್ಲ!

ಹೋಗಲಿ, ಮನೆಮಂದಿಯ ಅಡ್ಡಿಯೇ ಇಲ್ಲ ಅಂದುಕೊಂಡರೂ ಈ ದಿನಗಳಲ್ಲಿ ಪ್ರೇಮಿಗಳಿಗೆ ಸ್ವಾತಂತ್ರ್ಯವಿಲ್ಲ. ಪಾರ್ಕಿಗೆ ಹೋದರೆ ಪೊಲೀಸರು ಕಾಡುತ್ತಾರೆ. ಕಾಫಿಡೇಲಿ ಕುಳಿತರೆ ಪುಂಡರು ಕೆಣಕುತ್ತಾರೆ. ಹುಡುಗ-ಹುಡುಗಿ ಇಬ್ಬರೂ ಒಂದೇ ಆಫೀಸಿನಲ್ಲಿ ಕೆಲಸ ಮಾಡಿದರಂತೂ ಸಹೋದ್ಯೋಗಿಗಳೇ ಅಣಕಿಸಿಬಿಡುತ್ತಾರೆ. ಇನ್ನು, ಮನೆಯಲ್ಲಿ ಸಣ್ಣದೊಂದು ಕಿರಿಕ್ ಆಗಿಬಿಟ್ಟರೂ ಸಾಕು, ಅಪ್ಪ-ಅಮ್ಮ ಮೊದಲು ಕೆಲಸ ಬಿಡಿಸುತ್ತಾರೆ. ದಿನದಿನವೂ ಮೊಬೈಲು ಚೆಕ್ ಮಾಡುತ್ತಾರೆ ಅಥವಾ ಆ ಹುಡುಗನ್ನೇ ಕರೆಸಿ ಬುದ್ಧಿ ಹೇಳಿಸುತ್ತಾರೆ. ಹುಡುಗಿಯನ್ನು ಊರೇ ಬಿಡಿಸುತ್ತಾರೆ! ಈ ಯಾವುದಕ್ಕೂ ಹುಡುಗ-ಹುಡುಗಿ ಕೇರ್ ಮಾಡದೆ ಅಡ್ಡಾಡಿಕೊಂಡಿದ್ದರು ಅಂದುಕೊಳ್ಳಿ: ಅಂಥವರನ್ನು ಒಂದಷ್ಟು ದಿನ ಸೂಕ್ಷ್ಮವಾಗಿ ಗಮನಿಸುವ ಪ್ರಮೋದ್ ಮುತಾಲಿಕ್ ಕಡೆಯ ಜನ ಅವಸರದಲ್ಲಿ ತಾಳಿ ಕಟ್ಟಿಸಿ ಮದುವೆ ಮುಗಿಸಿಬಿಡುತ್ತಾರೆ! ಒಮ್ಮೆ ಮದುವೆಯ ಬಂಧನಕ್ಕೆ ಈಡಾದ ಮೇಲೆ- ನಗುವುದಕ್ಕೆ, ಅವಳ ನೆನಪಲ್ಲಿ ಚಿತ್' ಆಗುವುದಕ್ಕೆ, ಏನನ್ನೋ ಕಲ್ಪಿಸಿಕೊಂಡು ಸಡಗರ ಪಡುವುದಕ್ಕೆ ಅವಕಾಶ ಎಲ್ಲಿದೆ ಹೇಳಿ?

ಇದನ್ನೆಲ್ಲ ನೆನಪು ಮಾಡಿಕೊಂಡರೆ, ಈಗಿನ ಕಾಲದ ಪ್ರೇಮಿಗಳ ಬಗ್ಗೆ ಅಯ್ಯೋಪಾಪ' ಅನ್ನಿಸುತ್ತದೆ. ಮರುಕವಾಗುತ್ತದೆ. ಮಾಡರ್ನ್' ಎನ್ನುವಂಥ ಥಳುಕು, ಬಳುಕು, ಒಂದಿಷ್ಟು ವಿಶೇಷ ಅನುಕೂಲಗಳು ಇರಲಿಲ್ಲ ಎಂಬುದನ್ನು ಬಿಟ್ಟರೆ ಹಳೆಯ ಕಾಲದ ಪ್ರೀತಿಯೇ ಚೆನ್ನಾಗಿತ್ತು: ಕೆಎಸ್‌ನ ಕಾಲದ ಪ್ರೇಮಿಗಳು ತುಂಬ ಖುಷಿಯಿಂದ ಇದ್ದರು ಎಂದು ಸಂಕೋಚವಿಲ್ಲದೆ ಹೇಳುವ ಆಸೆಯಾಗುತ್ತದೆ. ಆ ಸಂದರ್ಭಗಳಲ್ಲಿ ಮತ್ತೆ ನೆನಪಾಗುವುದು ಅವೇ ಕೆಎಸ್‌ನ ಕವಿತೆಯ ಮುಂದುವರಿದ ಸಾಲುಗಳು. ಕವಿತೆ, ನಿಂತು ಹೋಗಿದ್ದ ಹಾಡಿನಂತೆ, ಅಮ್ಮನ ಚೆಂದದ ಡ್ಯಾನ್ಸಿನಂತೆ ಹೀಗೆ ತೆರೆದುಕೊಳ್ಳುತ್ತದೆ:

ತಲೆಬಾಗಿ ನೋಡಿದಳು/ಕನ್ನಡಿಯ ಕಡೆಗೆ/ ಅಲ್ಲಿ ಉತ್ತರವಿತ್ತು/ಹೂವಿಟ್ಟ ಜಡೆಗೆ!

........................

ಕೈ ಹಿಡಿದು ಕೇಳದೆನು/ಸಿಟ್ಟೇನೆ, ಕನಕ! ನಿಟ್ಟುಸಿರ ನಟ್ಟಿದಳು/ನನ್ನೆದೆಯ ತನಕ.

ಬಿಗಿದಪ್ಪಿ ಕೇಳಿದೆನು/ಕಣ್ಣಬಳಿ, ಕನಕ ಬೆಳ್ದಿಂಗಳಿಳಿದಿತ್ತು/ಆ ಮುಖದ ತನಕ

ಹೌದಲ್ಲವಾ? ಪ್ರೇಮಿಗಳು ಇರಬೇಕಾದದ್ದೇ ಹೀಗೆ. ಇಲ್ಲ ಅನ್ನುವುದಾದರೆ, ಇಡೀ ದಿನದಲ್ಲಿ ಹತ್ತಿರವೇ ಇದ್ದರೂ ಸರಸವಾಡಲಿಲ್ಲ ಎನ್ನುವುದಾದರೆ ಅವರು ಯಾಕೆ ಪ್ರೀತಿಯ ಮಾತಾಡಬೇಕು? ಯಾಕಾದರೂ ಅವರು ಪ್ರೇಮಿಗಳಾಗಬೇಕು? ಹೀಗೆಲ್ಲ ಅಂದುಕೊಂಡಾಗಲೇ ದಶಕಗಳ ಹಿಂದೆ ಮನೆ ಮನೆಗಳಲ್ಲೂ ನಡೆದ ಪ್ರೇಮಕತೆಗಳು ಆ ಕಾಲದ ಜನರಿಂದ ರಸವತ್ತಾದ ಕಾಮೆಂಟರಿಯಂತೆ ಕೇಳಿಬರುತ್ತದೆ. ಎಲ್ಲ ಅಡೆತಡೆಗಳ ಮಧ್ಯೆಯೂ ಅವರು ಎಲ್ಲೆಲ್ಲಿ, ಹೇಗೆಲ್ಲ ಭೇಟಿಯಾಗಿದ್ದರು? ಏನೇನೆಲ್ಲ ಮಾತಾಡಿಕೊಂಡಿದ್ದರು ಎಂಬುದನ್ನೂ ಅದೇ ಕಾಮೆಂಟರಿ ಮಾತುಗಳಲ್ಲಿ ಕೇಳಿಸಿಕೊಂಡಾಗಲೇ ಕೆಎಸ್‌ನರ ಪದ್ಯದ ಕಡೆಯ ಸಾಲು ನಿದ್ರಿಸುವ ಮಗುವಿನ ದಿವ್ಯ ನಗೆಯಂತೆ; ಅವಳ (ನ) ಅನುರಾಗದ ಪಿಸುಮಾತಿನಂತೆ ಕೇಳಿಸುತ್ತದೆ. ಕವಿತೆಯಲ್ಲಿ ಅವನು' ಹೇಳುತ್ತಾನೆ: ಮುತ್ತಿಟ್ಟು ಕೇಳಿದೆನು/(ಗುಟ್ಟಾಗಿ) ಕನಕ! ಕಣ್ಣೆತ್ತಿ ನೋಡಿದಳು/ಚಂದಿರನ ತನಕ!

****

ಮಾತಿಗೆ ಮೀರಿದ್ದು' ಅಂತಾರಲ್ಲ- ಅದಷ್ಟೂ ಕಡೆಯ ಸಾಲುಗಳಲ್ಲಿದೆ. ಅವನು ಮುತ್ತಿಡುವುದು, ಗುಟ್ಟಾಗಿ ಕೇಳುವುದು ಸಹಜ ಮತ್ತು ಅನಿವಾರ್ಯ. ಅದಕ್ಕೆ ಅವಳು ಒಂದೇ ಮಾತಲ್ಲಿ ಉತ್ತರಿಸಿದ್ದರೆ ಅಂಥ ವಿಶೇಷ ಇರುತ್ತಿರಲಿಲ್ಲ. ಆದರೆ ಅವಳು ಮಾತೇ ಆಡುವುದಿಲ್ಲ. ಸುಮ್ಮನೇ ಕಣ್ಣೆತ್ತಿ ನೋಡುತ್ತಾಳೆ- ಆ ನೋಟ ಚಂದಿರನನ್ನೂ ತಲುಪಿಬಿಡುತ್ತವೆ. ಅವನನ್ನೇ ತಾಕಿ ಬಿಡುತ್ತದೆ! ಇದೆಲ್ಲ ನಿಜವಾ? ಇದಿಷ್ಟೂ ನಡೆದಿದ್ದಾ? ಪತ್ನಿ ವೆಂಕಮ್ಮನವರೊಂದಿಗೆ ಒಂದು ದಿನ ಆಡಿದ ರೊಮ್ಯಾಂಟಿಕ್ ಆಟವನ್ನೇ ಕೆಎಸ್‌ನ ಪದ್ಯವಾಗಿಸಿಬಿಟ್ಟರಾ? ಇದ್ದರೂ ಇರಬಹುದು! ಅವರ ಕಾವ್ಯಶಕ್ತಿಗೆ ನಮಸ್ಕಾರ. ಅವರಿಗೂ...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more