ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೌಲ್ಡ್ ರಾಜಣ್ಣನ ಕಥೆ ಕೇಳಿ...

By * ಎ.ಆರ್. ಮಣಿಕಾಂತ್
|
Google Oneindia Kannada News

Abhinava Brahma Mould Rajanna
ನಮ್ಮ ಕಥಾನಾಯಕನ ಹೆಸರು ಮೌಲ್ಡ್ ರಾಜಣ್ಣ. 89 ವರ್ಷ ವಯಸ್ಸಿನ ರಾಜಣ್ಣ, ಕನ್ನಡ ಚಿತ್ರರಂಗದ ಎಲ್ಲ ಮಗ್ಗುಲುಗಳನ್ನೂ ಪ್ರತ್ಯಕ್ಷ ಕಂಡವರು. ತೆಲುಗಿನ ಎನ್‌ಟಿಆರ್, ತಮಿಳಿನ ಎಂಜಿಆರ್ ಹಾಗೂ ವರನಟ ಡಾ. ರಾಜ್‌ಕುಮಾರ್ ಅವರಿಂದಲೇ ಅಭಿನವ ಬ್ರಹ್ಮ' ಎಂದು ಕರೆಸಿಕೊಂಡದ್ದು ರಾಜಣ್ಣನ ಹೆಚ್ಚುಗಾರಿಕೆ. ಒಂದೇ ಒಂದು ವ್ಯತ್ಯಾಸವೆಂದರೆ, ಬ್ರಹ್ಮನದು ಸಜೀವ ಸೃಷ್ಟಿ; ಈ ರಾಜಣ್ಣನದು ನಿರ್ಜೀವ ಸೃಷ್ಟಿ. ಬ್ರಹ್ಮನ ಸೃಷ್ಟಿ ಅದೆಷ್ಟೋ ಕೋಟಿಯಿದ್ದರೆ, ಈ ರಾಜಣ್ಣನ ಸೃಷ್ಟಿ ಸಾವಿರಗಳ ಆಚೆಗಂತೂ ಖಂಡಿತ ಇದೆ. ರಾಜಣ್ಣನ ಕೈಚಳಕದಿಂದ ಅರಳಿದವರು' ಯಾರ್‍ಯಾರು ಗೊತ್ತೆ? ಬ್ರಹ್ಮ, ವಿಷ್ಣು, ಮಹೇಶ್ವರ, ಯಕ್ಷ, ಅಶ್ವಿನಿ ದೇವತೆಗಳು, ನವಗ್ರಹಗಳು, ಸಪ್ತ ಮಾತೃಕೆಯರು, ಶಕ್ತಿ ದೇವತೆಗಳು, ಅಷ್ಟಲಕ್ಷ್ಮಿಯರು, ದೇವೇಂದ್ರನ ಆಸ್ಥಾನದಲ್ಲಿರುವ ರಂಬೆ, ಊರ್ವಶಿ, ಮೇನಕೆ, ಗಣಪತಿ, ಶಬರಿಮಲೆ ಸ್ವಾಮಿ ಅಯ್ಯಪ್ಪ; ದೇವರನ್ನು ಕಾಣಲು ಹೊರಟ ತುಕಾರಾಂ, ಕನಕದಾಸ, ಪುರಂದರದಾಸ, ಕಬೀರ, ಬುದ್ಧ, ಬಸವ, ಅಕ್ಕಮಹಾದೇವಿ, ಭಕ್ತೆ ಮಿರಾ... ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಸ್ವಾರಸ್ಯವೆಂದರೆ, ಈ ಪೈಕಿ ಯಾರೊಬ್ಬರನ್ನೂ ಪ್ರತ್ಯಕ್ಷ ಕಾಣದಿದ್ದರೂ, ಇವರು ಅವರೇ' ಎಂದು ಕಣ್ಮುಚ್ಚಿಕೊಂಡು ಹೇಳಿಬಿಡುವಷ್ಟು ನೈಜವಾಗಿ ಎಲ್ಲ ಮೂರ್ತಿಗಳನ್ನೂ ತಯಾರಿಸಿದ' ಹೆಗ್ಗಳಿಕೆ ಮೌಲ್ಡ್ ರಾಜಣ್ಣನದು.

ಯಾರಿವರು ಈ ಮೌಲ್ಡ್ ರಾಜಣ್ಣ? ಆತ ಚಿತ್ರಿಸಿರುವ ಸಾವಿರಾರು ಕಲಾಕೃತಿಗಳೆಲ್ಲ ಈಗ ಎಲ್ಲಿವೆ? ಹೇಗಿವೆ? ರಾಜಣ್ಣ ಎಂಬ ಮುಪ್ಪಾನು ಮುದುಕನನ್ನು ಈಗ ಪರಿಚಯಿಸುವ ಉದ್ದೇಶವಾದರೂ ಏನು? ಎಂಬ ಕುತೂಹಲಕರ ಪ್ರಶ್ನೆಗಳಿಗೆ ಒಂದು ಚಿಕ್ಕ ಉತ್ತರ: ತೆಲುಗು, ತಮಿಳು, ಹಿಂದಿ, ಕನ್ನಡ ಭಾಷೆಯಲ್ಲಿ ಬಂದಿರುವ ಪೌರಾಣಿಕ, ಜಾನಪದ ಹಿನ್ನೆಲೆಯ ಬ್ಲ್ಯಾಕ್ ಅಂಡ್ ವೈಟ್ ಸಿನಿಮಾಗಳಿವೆಯಲ್ಲ? ಆ ಚಿತ್ರಗಳಲ್ಲಿ ರಾಕ್ಷಸರ ಗುಹೆ; ಅಲ್ಲಿ ಆಆಆಆ...' ಎಂದು ಬಾಯ್ದೆರೆದು ನಿಂತಿರುವ ಕ್ರೂರ ಮೃಗಗಳು, ಋಷಿಗಳ ಆಶ್ರಮ, ದೇವೇಂದ್ರನ ಆಸ್ಥಾನ, ಅಲ್ಲಿ ಶಿಲಾಬಾಲಿಕೆಯ ಗೆಟಪ್ಪಿನಲ್ಲಿ ನಿಂತ ಅಪ್ಸರೆ... ಇಂಥವೇ ಕಲಾಕೃತಿಗಳನ್ನು ರೂಪಿಸಿದ್ದು ಇದೇ ರಾಜಣ್ಣ. ಕಪ್ಪು-ಬಿಳುಪು ಚಿತ್ರಗಳ ಟೈಟಲ್ ಕಾರ್ಡನ್ನು ಹುಷಾರಾಗಿ ಗಮನಿಸಿದರೆ ಕಲಾನಿರ್ದೇಶನ;ಮೌಲ್ಡ್ ರಾಜು' ಎಂಬ ಹೆಸರನ್ನೂ ತಪ್ಪದೆ ಕಾಣಬಹುದು.

ಇಂತಿಪ್ಪ ಹಿನ್ನೆಲೆಯ ರಾಜಣ್ಣ, ಬೆಂಗಳೂರಿನ ಹಲಸೂರಿನಲ್ಲಿ ಜನಿಸಿದವರು. ಓದಿದ್ದು ಜಸ್ಟ್ ಒಂದನೇ ಕ್ಲಾಸು. ನಂತರ ಹೆಸರಾಂತ ಪಲ್ಪ್' ಕಲಾವಿದ ಎಂಬಾರಯ್ಯ ಅವರ ಕಣ್ಣಿಗೆ ಬಿದ್ದ ರಾಜಣ್ಣ, ಮುಂದೆ ಅವರೊಂದಿಗೇ ಉಳಿದರು. ತಮಗೆ ಚೆನ್ನಾಗಿ ತಿಳಿದಿದ್ದ ಪೇಪರ್ ಪಲ್ಪ್ ಕಲೆಯನ್ನು ರಾಜಣ್ಣನಿಗೆ ಧಾರೆಯೆರೆದರು ಎಂಬಾರಯ್ಯ. ಪರಿಣಾಮ, ತಮ್ಮ ಹನ್ನೆರಡನೇ ವಯಸ್ಸಿಗೇ ಮೌಲ್ಡಿಂಗ್ ಆರ್ಟಿಸ್ಟ್ ಎಂದು ಚಿತ್ರರಂಗದ ಸಂಪರ್ಕಕ್ಕೆ ಬಂದರು ರಾಜಣ್ಣ. ಅವು ನಲವತ್ತರ ದಶಕದ ದಿನಗಳು. ಆಗ ತಯಾರಾಗುತ್ತಿದ್ದವುಗಳೆಲ್ಲ ಪೌರಾಣಿಕ, ಜಾನಪದ ಹಿನ್ನೆಲೆಯ ಸಿನಿಮಾಗಳೇ. ಎಲ್ಲ ಸಿನಿಮಾಗಳಿಗೂ ಮದ್ರಾಸೇ ತವರುಮನೆ. ಅದೇ ರಂಗಶಾಲೆ. ಪೌರಾಣಿಕ/ಜಾನಪದ ಹಿನ್ನೆಲೆಯ ಸಿನಿಮಾ ಅಂದಮೇಲೆ ರಾಕ್ಷಸರು ವಾಸಿಸುವ ಗುಹೆಗಳ, ಅವರೊಂದಿಗೇ ಕಾಣಿಸಿಕೊಳ್ಳುವ ಕ್ರೂರ ಮೃಗಗಳ ಪ್ರತಿಕೃತಿಗಳು ಬೇಕಲ್ಲ? ಅವುಗಳನ್ನು ತಯಾರಿಸುವ ಕೆಲಸ ಮೌಲ್ಡ್ ರಾಜಣ್ಣ ಅವರದಾಗಿತ್ತು. ಹಾಗೆಯೇ ದೇವಾನುದೇವತೆಗಳ ಆಸ್ಥಾನದಲ್ಲಿ ಶಿಲಾಬಾಲಿಕೆಯರು, ರತ್ನ ಖಚಿತ ಸಿಂಹಾಸನ; ಋಷಿಗಳ ಆಶ್ರಮಕ್ಕೆ ಹಿನ್ನೆಲೆಯಾಗಿ ಕಾಣಿಸಿಕೊಳ್ಳುವ ಝರಿ ಹರಿಯುವ ಸನ್ನಿವೇಶ; ಕೈಲಾಸ-ವೈಕುಂಠಗಳ ಸೆಟ್... ಇಂಥ ಕೆಲಸವೆಲ್ಲ ರಾಜಣ್ಣನ ಹೆಗಲಿಗೇ ಬಿದ್ದಿತ್ತು.

ಈ ಎಲ್ಲವನ್ನೂ ಪೇಪರ್ ಪಲ್ಪ್ ಹಾಗೂ ಪೇಪರ್ ಮೌಲ್ಡ್ ಬಳಸಿ ತಯಾರಿಸುತ್ತಿದ್ದರು ರಾಜಣ್ಣ. ಹೀಗೆ ತಯಾರಾದ ಆಕೃತಿಗಳ ವೈಶಿಷ್ಟ್ಯವೇನೆಂದರೆ- ಅವು ತೀರಾ ತೀರಾ ಹಗುರವಾಗಿರುತ್ತಿದ್ದವು. (ಮೌಲ್ಡ್ ಮಾಡಿ ತಯಾರಿಸುವ ಕಲಾಕೃತಿಗಳೆಲ್ಲ ಈಗಲೂ ತುಂಬಾ ಹಗುರವಾಗಿರುತ್ತವೆ.) ಪರಿಣಾಮವಾಗಿ, ರಾಕ್ಷಸನ, ದೇವತೆಗಳ ಹಾಗೂ ಕ್ರೂರ ಮೃಗಗಳ ಆಕೃತಿಗಳನ್ನು ಸೆಟ್‌ನಲ್ಲಿ ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಸುಲಭವಾಗಿ ಸಾಗಿಸಬಹುದಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಹೀಗೆ ತಯಾರಾದ ಮೌಲ್ಡಿಂಗ್ ಕಲಾಕೃತಿಗಳು ಎಷ್ಟೇ ಮೇಲಿನಿಂದ ಕೆಳಕ್ಕೆ ಬಿದ್ದರೂ ಒಡೆದು ಹೋಗುತ್ತಿರಲಿಲ್ಲ. ಈ ಕಾರಣದಿಂದ ಚಿತ್ರ ನಿರ್ಮಾಪಕರೆಲ್ಲ ಸಹಜವಾಗಿಯೇ ರಾಜಣ್ಣನ ಹಿಂದೆ ಬಿದ್ದರು. ಪರಿಣಾಮ, ಕಲಾ ನಿರ್ದೇಶಕ' ಎಂಬ ಬಿರುದು ಹಾಗೂ ಬಿಡಿಗಾಸಿನನೌಕರಿ ಎರಡೂ ರಾಜಣ್ಣನಿಗೆ ಲಭ್ಯವಾದವು.

ಈ ಸಂದರ್ಭದಲ್ಲಿಯೇ ಸ್ವಾರಸ್ಯವೊಂದು ನಡೆಯಿತು. ಆ ಕಾಲದ ಸಿನಿಮಾಗಳಲ್ಲಿ ದೇವತೆಗಳ, ರಾಕ್ಷಸರ ಅಥವಾ ರಾಜ ಮಹಾರಾಜರುಗಳ ಹೆಂಡತಿಯರ ಪಾತ್ರ ನಿರ್ವಹಿಸುತ್ತಿದ್ದರಲ್ಲ? ಅವರಿಗೆಲ್ಲ ಸೊಂಟಕ್ಕೆ ಡಾಬು, ಜತೆಯಲ್ಲೇ ಫಳಫಳ ಹೊಳೆಯುವ ಆಭರಣಗಳ ಚೈನು, ಕೊರಳಿಗೆ ಸರ, ಹಣೆಯ ಮೇಲೆ ಬಾಸಿಂಗದಂಥದೊಂದು... ಹೀಗೆ ಆಭರಣಗಳನ್ನು ಹೊಂದಿಸಬೇಕಾಗುತ್ತಿತ್ತು. ರೋಲ್ಡ್ ಗೋಲ್ಡ್ ಆಭರಣಗಳನ್ನು ಬಾಡಿಗೆಗೆ ತಂದರೆ, ಅವುಗಳ ತೂಕ ಜಾಸ್ತಿ. ಈ ಕಾರಣದಿಂದಲೇ ಅವುಗಳನ್ನು ಕಟ್ಟಿಕೊಂಡು ಸರಭರನೆ ಓಡಾಡಲು, ಡ್ಯಾನ್ಸ್ ಮಾಡಲು ಆಗುವುದಿಲ್ಲ ಎಂದು ನಟಿಯರೆಲ್ಲ ವರಾತ ತೆಗೆದರು. ಆ ಸಂದರ್ಭದಲ್ಲಿ ಮತ್ತೆ ರಾಜಣ್ಣನ ಮೊರೆ ಹೊಕ್ಕ ನಿರ್ಮಾಪಕರು- ಈ ಸಮಸ್ಯೆಗೂ ಒಂದು ಪರಿಹಾರ ಹುಡುಕು ಮಾರಾಯ' ಅಂದರಂತೆ. ತಕ್ಷಣವೇ ಅದೇ ಪೇಪರ್ ಪಲ್ಪ್‌ಗಳಿಂದ ರಾಕ್ಷಸರು ಕುತ್ತಿಗೆಗೆ ಹಾಕಿಕೊಳ್ಳುವ ತಲೆಬುರುಡೆ, ರಾಜರುಗಳ ಕಿರೀಟ, ರಾಣಿಯರ ಅಲಂಕಾರ ಸಾಮಗ್ರಿಗಳನ್ನೂ ತಯಾರಿಸಿದರು ರಾಜಣ್ಣ. ಈಗ ನಾವೆಲ್ಲ ಕಪ್ಪು-ಬಿಳುಪು ಸಿನಿಮಾಗಳಲ್ಲಿ ನೋಡುತ್ತೇವಲ್ಲ? ಆ ವಜ್ರ ವೈಢೂರ್‍ಯದ ಲಕಲಕಲಕ ಆಭರಣಗಳೆಲ್ಲ ಮೌಲ್ಡ್ ರಾಜಣ್ಣನ ಕೈ ಚಳಕದಿಂದ ತಯಾರಾಗಿರುವ ನಕಲಿ' ಒಡವೆಗಳೇ.

ರಾಜಣ್ಣ ಸೃಷ್ಟಿಸಿದ ಮೂರ್ತಿಗಳಿಗೆ ಎಂಥ ಶಾರ್ಪ್‌ನೆಸ್ ಇರುತ್ತಿತ್ತು ಎಂಬುದಕ್ಕೆ ಒಂದು ಪುಟ್ಟ ಉದಾಹರಣೆ: ಅದೊಮ್ಮೆ ನಿರ್ಮಾಪಕನೊಬ್ಬ ಕಾಳಿಕಾದೇವಿಯ ಭವ್ಯ ವಿಗ್ರಹವೊಂದನ್ನು ತನ್ನ ಹೊಸ ಸಿನಿಮಾಕ್ಕಾಗಿ ತಯಾರಿಸುವಂತೆ ಹೇಳಿ ಮುಂಗಡ ಹಣ ಕೊಟ್ಟು ಹೋದ. ತ್ರಿಶೂಲ ಹಿಡಿದು, ನಾಲಿಗೆ ಹೊರಚಾಚಿ, ಕಂಗಳನ್ನು ಅಗಲಿಸಿಕೊಂಡು ಬಲಿಗಾಗಿ ಕಾದು ನಿಂತ ಕಾಳಿಕಾಂಬೆಯ ವಿಗ್ರಹವನ್ನು ರಾಜಣ್ಣ ತುಂಬ ಶ್ರದ್ಧೆಯಿಂದ ರೂಪಿಸಿದರು. ಎಲ್ಲ ಕೆಲಸ ಮುಗಿದ ಮೇಲೆ, ಆ ವಿಗ್ರಹವನ್ನು ಬಟ್ಟೆಯಿಂದ ಮುಚ್ಚಿ, ನಿರ್ಮಾಪಕರ ಬಳಿ ಹೋಗಿ ಹೇಳಿದರು; ನನ್ನ ಕೆಲಸ ಮುಗಿದಿದೆ. ಆದ್ರೆ ಒಂದು ವಿಷಯ: ಕಾಳಿಕಾದೇವಿಯ ಮೂರ್ತಿ ಭವ್ಯವಾಗಿದೆ. ಹೆದರಿಕೆ ಹುಟ್ಟಿಸುವಂತಿದೆ. ಹಾಗಾಗಿ ನೀವು ಒಬ್ಬರೇ ಹೋಗಿ ನೋಡುವ ಸಾಹಸ ಮಾಡಬೇಡಿ. ಚಿತ್ರತಂಡದ ಎಲ್ಲರ ಜತೆಗೇ ಹೋಗಿ ನೋಡಿ...'

ಈ ಎಚ್ಚರಿಕೆಯ ಮಾತು ಕೇಳಿದ ಮೇಲೆ ನಿರ್ಮಾಪಕನಿಗೆ ಸಹಜವಾಗಿಯೇ ಕುತೂಹಲ ಶುರುವಾಯಿತು. ಆತ ಅದೊಂದು ದಿನ ಬೆಳಗ್ಗೆ ಬೆಳಗ್ಗೆಯೇ ಒಬ್ಬನೇ ಹೋಗಿ ಕಾಳಿಕಾದೇವಿಯ ವಿಗ್ರಹದ ಬಟ್ಟೆ ತೆಗೆದ. ಅಷ್ಟೆ: ಆ ರುದ್ರ, ಉಗ್ರ ಹಾಗೂ ವ್ಯಗ್ರ ಮುಖಭಾವದ ದೇವಿಯ ಮೂರ್ತಿಯನ್ನು ನೋಡಿ ನಿರ್ಮಾಪಕನಿಗೆ ಹೃದಯಾಘಾತ ಆಗಿಹೋಯಿತು! ಇದನ್ನು ನೆನಪು ಮಾಡಿಕೊಂಡೇ ಡಾ. ರಾಜ್ ಕುಮಾರ್ ಸೇರಿದಂತೆ ಚಿತ್ರರಂಗದ ಹಿರಿಯ ನಟರೆಲ್ಲ ಹೇಳುತ್ತಿದ್ದರಂತೆ: ಬೈ ಛಾನ್ಸ್ ಯಾರಾದ್ರೂ ಕಳ್ಳರು ರಾತ್ರಿ ವೇಳೆ ರಾಜಣ್ಣನವರ ಮನೆಗೆ ನುಗ್ಗಿದ್ರು ಅಂತ ಇಟ್ಕೊಳ್ಳಿ. ಆ ಸಂದರ್ಭದಲ್ಲಿ ಮನೆಯೊಳಗಿರುವ ಹುಲಿ, ಸಿಂಹ ಅಥವಾ ಚಿರತೆಯ ಮೂರ್ತಿಯನ್ನು ಕಂಡಾಗ- ಇದು ಜೀವಂತ ಪ್ರಾಣಿಯೇ ಅನ್ನಿಸಿ ಕಳ್ಳರು ಸತ್ತೆನೋ ಕೆಟ್ಟೆನೋ ಅಂದುಕೊಂಡು ಪರಾರಿಯಾಗೋದು ಗ್ಯಾರಂಟಿ...'

ಹೀಗೆ ಮೌಲ್ಡಿಂಗ್ ಕಲಾವಿದನಾಗಿ ಏಕಮೇವಾದ್ವಿತೀಯ ಎನ್ನುವಂಥ ಸಾಧನೆ ಮಾಡಿದ ರಾಜಣ್ಣ, ಕೃಷ್ಣಲೀಲಾ, ನಾಗಕನ್ನಿಕಾ, ಭಕ್ತ ರಾಮದಾಸ, ಜಗನ್ಮೋಹಿನಿ, ಶ್ರೀನಿವಾಸ ಕಲ್ಯಾಣ, ಕಾಡಿನ ರಹಸ್ಯ, ಗಂಧದ ಗುಡಿ, ಹಣ್ಣೆಲೆ ಚಿಗುರಿದಾಗ, ಶಿವಶರಣೆ ನಂಬಿಯಕ್ಕ ಸೇರಿದಂತೆ ನೂರಾರು ಚಿತ್ರಗಳಿಗೆ ಕಲಾ ನಿರ್ದೇಶಕರಾಗಿ ದುಡಿದರು. ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಹಾಗೂ ವರನಟ ಡಾ. ರಾಜ್‌ಕುಮಾರ್ ಇಬ್ಬರೂ ಆಗಷ್ಟೇ ಜನಪ್ರಿಯತೆಯ ಹತ್ತನೇ ಮೆಟ್ಟಿಲಲ್ಲಿ ಇದ್ದಾಗ, ರಾಜಣ್ಣನವರು ತಂತ್ರಜ್ಞರಾಗಿ ಸೂಪರ್‌ಸ್ಟಾರ್ ಎನ್ನಿಸಿಕೊಂಡಿದ್ದರು. ಅಂದರೆ, ಅವರ ಕೈ ಚಳಕದ ಕರಾಮತ್ತು ಹೇಗಿತ್ತೋ ಊಹಿಸಿಕೊಳ್ಳಿ. ಮುಂದೆ ಜಾನಪದ ಹಾಗೂ ಪೌರಾಣಿಕ ಹಿನ್ನೆಲೆಯ ಸಿನಿಮಾಗಳ ಕಾಲ ಮುಗಿದಾಗ, ಸಹಜವಾಗಿಯೇ ರಾಜಣ್ಣನಿಗೆ ಅವಕಾಶಗಳು ಕಡಿಮೆಯಾದವು. ಕೈ ಚೆನ್ನಾಗಿ ನಡೆಯುತ್ತಿದ್ದಾಗ ಮನೆಯನ್ನೇ ಛತ್ರದಂತೆ ಮಾಡಿಕೊಂಡು, ಸಿಗುತ್ತಿದ್ದ ದಿನಗೂಲಿಯಲ್ಲೇ ಬಂದವರಿಗೆಲ್ಲ ಊಟ ಹಾಕಿಸುತ್ತಿದ್ದ ರಾಜಣ್ಣ, ಮದ್ರಾಸು ತೊರೆದು ಮೈಸೂರಿಗೆ ಬಂದರು. ಕೂಡಿಟ್ಟಿದ್ದ ಹಣದಿಂದ ಆರು ಮಂದಿ ಮಕ್ಕಳಿಗೂ ಮದುವೆ ಮಾಡಿದರು. ಈ ಸಂದರ್ಭದಲ್ಲಿಯೇ ಮಾತನಾಡುವ ಗೊಂಬೆ' ಉಮ್ಮೇದಿಯಲ್ಲಿದ್ದ ಉದಯ್ ಜಾದೂಗಾರ್ ಅವರ ಪರಿಚಯವಾಯಿತು. ಮಗಾ, ನಿಂಗೆ ಮುದ್ ಮುದ್ದಾಗಿ ಕಾಣುವ ಗೊಂಬೆ ಬೇಕು ಅಲ್ವಾ? ಮಾಡಿಕೊಡ್ತೀನಿ ಬಿಡು, ಯೋಚಿಸಬೇಡ' ಎಂದವರೇ- ಹ್ಯಾರಿ' ಹೆಸರಿನ ಗೊಂಬೆಗೆ ರೂಪು ಕೊಟ್ಟರು ರಾಜಣ್ಣ. ಇವತ್ತು ದೇಶದಲ್ಲಿರುವ ಬಹುಪಾಲು ಜಾದೂಗಾರರು ಮಾತನಾಡುವ ಗೊಂಬೆ'ಯೊಂದಿಗೆ ಆಟಕ್ಕೆ ನಿಲ್ಲುತ್ತಾರೆ ನಿಜ, ಆ ಗೊಂಬೆಗೆ, ಹೀಗಿದ್ದರೇ ಸರಿ' ಎಂಬಂಥ shape ನೀಡಿದ್ದು ರಾಜಣ್ಣನ ಕೈಗಳೇ.

* * * *
ಇದಿಷ್ಟೂ ಹಳೆಯ ಕಥೆ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಆಧಾರಸ್ತಂಭದಂತಿದ್ದ ಈ ಮೇರು ಕಲಾವಿದನ ಈಗಿನ ಪರಿಸ್ಥಿತಿ ಕಂಡರೆ ನೋವಾಗುತ್ತದೆ, ಬೇಸರವಾಗುತ್ತದೆ. ಚಿತ್ರರಂಗದ ಹಿರಿಯ ತಲೆಗಳ ಬಗ್ಗೆ, ನಮ್ಮ ಸರಕಾರದ ಬಗ್ಗೆ, ಜನಪ್ರತಿನಿಧಿಗಳ ಬಗ್ಗೆ, ಎಲೆಮರೆಯ ಕಾಯಂತಿರುವ ಕಲಾವಿದರನ್ನು ಗಮನಿಸದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳ ವರ್ತನೆಯ ಬಗ್ಗೆ ಸಿಟ್ಟು ಬರುತ್ತದೆ. ಏಕೆಂದರೆ, ಚಿತ್ರರಂಗಕ್ಕಾಗಿ ತನ್ನ ಬದುಕನ್ನೇ ಮುಡಿಪಾಗಿಟ್ಟ ಮೌಲ್ಡ್ ರಾಜಣ್ಣನಿಗೆ ಸರ್ಕಾರದಿಂದ ಒಂದೇ ಒಂದು ಪ್ರಶಸ್ತಿಯೂ ಬಂದಿಲ್ಲ. ಹಿರಿಯ ಕಲಾವಿದರಿಗೆ ಕೊಡಲಾಗುವ ಸಹಾಯಧನವೂ ಸಿಕ್ಕಿಲ್ಲ. ಚಿತ್ರರಂಗದ ಏಳಿಗೆಗಾಗಿ ದುಡಿದವರ ಬಗ್ಗೆ ಪುಸ್ತಕ ಬರೆಸಿದ ಪುಣ್ಯಾತ್ಮರಿಗೆ' ಮೌಲ್ಡ್ ರಾಜಣ್ಣನ ನೆನಪಾಗಿಲ್ಲ. ಕಲಾವಿದರ ಕೋಟಾದಲ್ಲಿ ಸಿಗುವ ಸೈಟು, ಪ್ರಶಸ್ತಿ, ಸನ್ಮಾನ... ಉಹುಂ, ಈ ಯಾವುದೂ ರಾಜಣ್ಣನಿಗೆ ಲಭಿಸಿಲ್ಲ.

ಆದರೆ, ಒಂದು ಸರಕಾರ ಮಾಡದ ಕೆಲಸವನ್ನು ಉದಯ ಜಾದೂಗಾರ್ ಮಾಡುತ್ತಿದ್ದಾರೆ. ಈ ಹಿಂದೆ- ಮಾತನಾಡುವ ಗೊಂಬೆಯನ್ನು ಪರಿಚಯಿಸುವಾಗ- ಇದರ ಹೆಸರು ಹ್ಯಾರಿ. ಇದನ್ನು ಲಂಡನ್‌ನಿಂದ ತಂದಿದ್ದೀನಿ' ಎನ್ನುತ್ತಿದ್ದೆ. ಆ ಮೂಲಕ ರಾಜಣ್ಣನ ಪ್ರತಿಭೆಯ ಬಗ್ಗೆ ಹೇಳದೆ ತಪ್ಪು ಮಾಡಿದೆ ಎನ್ನುವ ಉದಯ್, ಆ ತಪ್ಪಿಗೆ ಕ್ಷಮೆ ಕೇಳುವ ರೂಪದಲ್ಲಿ ಕಳೆದ ನಾಲ್ಕು ವರ್ಷಗಳಿಂದಲೂ ಮಾಸಿಕ 2000 ರೂ.ಗಳನ್ನು ರಾಜಣ್ಣನಿಗೆ ಕೊಡುತ್ತಿದ್ದಾರೆ. ಇದನ್ನು ನೆನಪು ಮಾಡಿಕೊಂಡು ಈಗಲೂ ಹನಿಗಣ್ಣಾಗುವ ರಾಜಣ್ಣ ನನ್ನಿಂದ ಕಸುಬು' ಕಲಿತುಕೊಂಡು ಚೆನ್ನಾಗಿ ಸಂಪಾದಿಸಿ ಶೋಕಿಗೆ ಬಿದ್ದಿರುವ ಸ್ವಂತ ಮಕ್ಕಳೇ ನನ್ನನ್ನು ಮರೆತಿದ್ದಾರೆ. ಹಾಗಿರುವಾಗ ಇವನು ಸಹಾಯ ಮಾಡ್ತಿದಾನಲ್ಲಪ್ಪಾ...' ಎನ್ನುತ್ತ ಗದ್ಗದಿತರಾಗುತ್ತಾರೆ. ಸದ್ಯ, ಉತ್ತರಹಳ್ಳಿಹಳ್ಳಿಯಲ್ಲಿರುವ ಮಗಳು ಇಂದ್ರಾಣಿಯ ಮನೆಯಲ್ಲಿರುವ ರಾಜಣ್ಣ ತಮ್ಮ ಕಲಾಕೃತಿಗಳನ್ನು ಸ್ವಾಮೀಜಿಯೊಬ್ಬರ ಆಶ್ರಮಕ್ಕೆ ದಾನ ಮಾಡಿದ್ದಾರೆ. ಈಗ ಬಡತನದ ಮಧ್ಯೆ, ಬವಣೆಗಳ ಮಧ್ಯೆ, ಸಂಕಟಗಳ ಮಧ್ಯೆ ಉಳಿದಿದ್ದಾರೆ. ಬದುಕಿನ ಸಂಧ್ಯಾ ಕಾಲದಲ್ಲಿರುವ ಅವರಿಗೆ, ತಮ್ಮ ಪ್ರತಿಭೆಗೆ ಸೂಕ್ತ ಪ್ರತಿಫಲ ಸಿಗಲಿಲ್ಲ ಎಂಬ ನೋವಿದೆ. ತಮ್ಮ ಸಂಕಷ್ಟದ ಮಧ್ಯೆಯೂ ಜತೆಗಿರುವವರ ಏಳಿಗೆಯನ್ನು ಬಯಸುವ, ಕಪ್ಪು-ಬಿಳುಪು ಸಿನಿಮಾಗಳ ಕಾಲದ ಥರಾವರಿ ಕಥೆ ಹೇಳಿ ನಗಿಸುವ ಅವರಿಗೆ ಒಂದು ಪ್ರಶಸ್ತಿ ನೀಡುವ ಮನಸು ರಾಜ್ಯ ಸರಕಾರಕ್ಕೆ ಬರಬಾರದೆ? ಮೌಲ್ಡ್ ರಾಜಣ್ಣನ ಕಣ್ಣಲ್ಲಿ ಸುಪ್ರೀಂ ಹೀರೋ' ಅನ್ನಿಸಿಕೊಂಡಿರುವ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರಾದರೂ ರಾಜಣ್ಣನಿಗೆ ಪ್ರತಿಭೆಗೆ ಸೂಕ್ತ ಸನ್ಮಾನ ಮಾಡಲು ಮುಂದಾಗಬಾರದೆ? ಅಂದಹಾಗೆ ಮೌಲ್ಡ್ ರಾಜಣ್ಣನೊಂದಿಗೆ ಮಾತಾಡಬೇಕೆಂದರೆ: 92421 42266.

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಆಧಾರಸ್ತಂಭದಂತಿದ್ದ ರಾಜಣ್ಣ ಈಗ ಬಡತನದ ಮಧ್ಯೆ, ಬವಣೆಗಳ ಮಧ್ಯೆ, ಸಂಕಟಗಳ ಮಧ್ಯೆ ಉಳಿದಿದ್ದಾರೆ. ಬದುಕಿನ ಸಂಧ್ಯಾ ಕಾಲದಲ್ಲಿರುವ ಅವರಿಗೆ, ತಮ್ಮ ಪ್ರತಿಭೆಗೆ ಸೂಕ್ತ ಪ್ರತಿಫಲ ಸಿಗಲಿಲ್ಲ ಎಂಬ ನೋವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X