ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಂಡತಿಗೆ ಚೆಲ್ಲಾಟ 'ಪಾಪಿ' ಗಂಡನಿಗೆ ಪ್ರಾಣಸಂಕಟ!

By * ಎ.ಆರ್. ಮಣಿಕಾಂತ್
|
Google Oneindia Kannada News

Why married couple are separated during Ashadha?
ತಮಾಷೆಯೆಂದರೆ, ಹೀಗೆ- ಕುಣಿದಾಡಿಕೊಂಡೇ ತೌರಿಗೆ ಬಂದವಳ ಸಂಭ್ರಮ ಎರಡೇ ದಿನಗಳಿಗೆ ಮುಗಿದು ಹೋಗುತ್ತಿತ್ತು. ತವರು ಮನೆಯ ನೂರು ಸಂಭ್ರಮದ ಮಧ್ಯೆಯೂ ಗಂಡ' ನೆನಪಾಗುತ್ತಿದ್ದ. ಅವನೊಂದಿಗೆ ಜಗಳವಾಡಿದ್ದು, ಠೂ ಬಿಟ್ಟಿದ್ದು, ತಲೆ ಮೇಲೆ ಮೊಟಕಿದ್ದು, ಸ್ನಾನದ ಮನೆಯಲ್ಲಿ ಸರಸವಾಡಿದ್ದು, ಒಂದೇ ತಟ್ಟೆಯಲ್ಲಿ ಹಂಚಿಕೊಂಡು ತಿಂದದ್ದು ನೆನಪಾಗಿ ಬಿಡುತ್ತಿತ್ತು. ಪರಿಣಾಮ, ಕೆನ್ನೆಯಲ್ಲಿನ್ನೂ ಅರಿಶಿಣದ ಗುರುತು ಉಳಿಸಿಕೊಂಡಿರುತ್ತಿದ್ದ ಕನ್ಯೆಗೆ ರಾತ್ರಿ ನಿದ್ರೆ ಬರುತ್ತಿರಲಿಲ್ಲ!

ಈ ಕಡೆ, ಗಂಡ ಅನ್ನಿಸಿಕೊಂಡವನ ಕಥೆಯೂ ಅದೇ. ಆಗೆಲ್ಲ, ತವರಿಗೆ ಹೋದವಳನ್ನು ಸಂಪರ್ಕಿಸಲು ಇದ್ದ ದಾರಿಯೆಂದರೆ ಕಾಗದ ಬರೆಯುವುದು! ಈ ಪುಣ್ಯಾತ್ಮನ ಕಾಗದವನ್ನು ಹೆಂಡತಿಯ ಮನೆಯಲ್ಲಿ ಎಲ್ಲರೂ ಓದುತ್ತಿದ್ದುದರಿಂದ ಅಲ್ಲಿ ಪೋಲ್ ಪೋಲಿಯಾಗಿ ಬರೆಯುವಂತಿರಲಿಲ್ಲ. ಕಾಗದ ಬಿಟ್ಟರೆ, ಹೆಂಡತಿಯನ್ನು ಸಂಪರ್ಕಿಸಲು ಇದ್ದ ಇನ್ನೊಂದು ದಾರಿಯೆಂದರೆ- ಎಸ್ಟೀಡಿ ಫೋನು! ಆಗೆಲ್ಲ, ಒಂದೂರಿನಲ್ಲಿ ತಲಾ ಇಪ್ಪತ್ತು ಮನೆಗೆ ಒಂದು ಫೋನ್ ಇರುತ್ತಿತ್ತು. ಆ ಮನೆಯ ನಂಬರ್ ಪಡೆದು ಫೋನ್ ಮಾಡಿದರೆ, ಮನೆಯ ಯಜಮಾನರು ಫೋನ್ ಎತ್ತಿಕೊಂಡು ಲೋಕಾಭಿರಾಮ ಹರಟೆಗೇ ನಿಂತುಬಿಡುತ್ತಿದ್ದರು! ಇವನಿಗೋ ಪ್ರಾಣಸಂಕಟ. ಅವರ ಕಾಡು ಹರಟೆಯನ್ನೆಲ್ಲ ತೆಪ್ಪಗೆ ಕೇಳಿಸಿಕೊಂಡು ಕಡೆಗೊಮ್ಮೆ ಸಂಕೋಚದಿಂದ ನಮ್ಮ ರಾಧನನ್ನು' ಕರೀತೀರಾ ಅಂದರೆ- ಕರೆಯೋಣ ಕರೆಯೋಣ ಎಂದು ಅವರು ಹೇಳುತ್ತಿದ್ದಾಗಲೇ ಲೈನ್ ಕಟ್ ಆಗುತ್ತಿತ್ತು! ಇವನು ಇನ್ನೊಂದು ಬಾರಿ ಫೋನ್ ಮಾಡುವ ವೇಳೆಗೆ ಅವಳು' ಓಡಿ ಬಂದಿರುತ್ತಿದ್ದಳು ನಿಜ. ಆದರೆ, ಆಕೆಯ ಸುತ್ತಲೂ ಗೆಳತಿಯರ, ನೆರೆ ಹೊರೆಯವರ ಗುಂಪಿರುತ್ತಿತ್ತು. ಇವನಿಗೋ ಫೋನ್‌ನಲ್ಲೇ ಲಲ್ಲೆಗೆರೆಯುವ, ಮುತ್ತಿಡುವ, ಪೋಲಿ ಜೋಕು ಹೇಳುವ ಕಾತುರ!

ಆದರೆ, ಇವನ ಸಂಭ್ರಮಕ್ಕೆ ದನಿಯಾಗುವ ಪರಿಸ್ಥಿತಿಯಲ್ಲಿ ಅವಳಿರುತ್ತಿರಲಿಲ್ಲ. ಈತ ಗುರ್ರ ಗುರ್ರ ಎಂದು ರೇಗಿದರೂ, ಸೆಕ್ಸಿಯಾಗಿ ಮಾತಾಡಿದರೂ ಒಂದಿಷ್ಟು ಬೈದರೂ- ಈಕೆ ಹಾ, ಹೂಂ, ಸರಿ ಸರಿ...' ಎಂದೇ ಮಾತು ಮುಗಿಸುತ್ತಿದ್ದಳು. ಇದರಿಂದ ಸಹಜವಾಗಿಯೇ ಸಿಟ್ಟಾದ ಈ ಗಂಡ ಮಹಾರಾಯ- ತವರಿನ ಸುಖ ಜಾಸ್ತಿ ಆಗಿರಬೇಕು, ಹಾಗಿರುವಾಗ ನನ್ನ ನೆನಪೆಲ್ಲಿ ಬರ್‍ತದೆ ಹೇಳು?' ಎಂದು ಚುಚ್ಚಿ ಪತ್ರ ಬರೆಯುತ್ತಿದ್ದ! ಮರುಟಪಾಲಿಗೇ ಬರುತ್ತಿದ್ದ ಅವಳ ಉತ್ತರ ಹೀಗಿರುತ್ತಿತ್ತು? ತೌರ ಸುಖದೊಳಗೆನ್ನರೆತಿಹಳು ಎನ್ನದಿರಿ/ ನಿಮ್ಮ ಪ್ರೇಮವ ನೀವೇ ಒರೆಯನಿಟ್ಟು/ ನಿಮ್ಮ ನೆನಪೇ ನನ್ನ ಹಿಂಡುವುದು ಹಗಲಿನಲಿ/ ಇರುಳಿನಲಿ ಕಾಣುವುದು ನಿಮ್ಮ ಕನಸು..' ಮೊದಲೇ ವಿರಹದ ಮಧ್ಯೆ ಬದುಕುತ್ತಿದ್ದವನಿಗೆ ಇಂಥದೊಂದು ಆರ್ದ್ರ ಭಾಷೆಯ ಪತ್ರ ಬಂದರೆ, ಮನಸು ತಡೆದೀತಾದರೂ ಹೇಗೆ? ಈತ ತಕ್ಷಣವೇ ಕೋಟಿ ಯೋಜನವಿರಲಿ ದಾಟಿ ಬರುವೆನು ಹೆಣ್ಣೆ..' ಎಂದು ಹಾಡಿಕೊಂಡೇ ಹೆಂಡತಿಯ ಮನೆಗೆ ಬಂದುಬಿಡುತ್ತಿದ್ದ. ಫಜೀತಿಯೆಂದರೆ, ಅತ್ತೆಯ ಮನೆಯಲ್ಲಿ ಹೊಸದೊಂದು ಬಗೆಯ ಸಂಕಟ ಜೊತೆಯಾಗುತ್ತಿತ್ತು.

ಈತ' ಆಗೊಮ್ಮೆ ಈಗೊಮ್ಮೆ ಅವಕಾಶ ಸಿಕ್ಕರೆ ಅವಳೊಂದಿಗೆ ಸರಸವಾಡಬೇಕು ಎಂಬ ಅವಸರದಲ್ಲಿದ್ದರೆ ಅದಕ್ಕೆ ಅವಕಾಶವೇ ಸಿಗುತ್ತಿರಲಿಲ್ಲ. ಊಟ ಬಡಿಸಲು ಅವಳೊಂದಿಗೆ' ಅತ್ತೆಯೂ ಬರುತ್ತಿದ್ದುದರಿಂದ ಆಗ ಕೈ ಚಿವುಟಿ ರೋಮಾಂಚನಗೊಳ್ಳುವುದಕ್ಕೆ; ಕಣ್ಣು ಹೊಡೆದು ಖುಷಿ ಪಡುವುದಕ್ಕೆ ಆಗುತ್ತಿರಲಿಲ್ಲ. ಊಟವಾದ ನಂತರ ಹೊರಬಂದು, ಈಗ ಎರಡೇ ನಿಮಿಷದ ಮಟ್ಟಿಗೆ ಕರೆಂಟು ಹೋಗಿಬಿಟ್ಟರೆ ಸಾಕು, ತಬ್ಬಿ ಮುದ್ದಾಡಬಹುದು ಎಂದು ಇಬ್ಬರೂ ಅಂದುಕೊಳ್ಳುತ್ತಿದ್ದರು ನಿಜ. ಆದರೆ ಅವತ್ತು ದರಿದ್ರದ ಕರೆಂಟು ಹೋಗುತ್ತಲೇ ಇರಲಿಲ್ಲ! ಹಾಳಾಗಿ ಹೋಗಲಿ, ಮಲಗುವ ಮುನ್ನವಾದರೂ ಅವಳನ್ನು ತಬ್ಬಿ ಮುದ್ದಾಡಲೇಬೇಕು ಎಂದು ಇವನು' ಅಂದುಕೊಂಡಿದ್ದಾಗಲೇ- ಹೆಂಡತಿಯ ಅಣ್ಣನೋ, ಮಾವನೋ ಲಗುಬಗೆಯಿಂದ ಬಂದು ಹಾಸಿಗೆ ಹಾಸಿಕೊಡುತ್ತಿದ್ದರು. ಅವಳು' ಎಲ್ಲವನ್ನೂ ಬಾಗಿಲ ಸಂದಿಯಲ್ಲೇ ನೋಡಿ, ನಕ್ಕು, ಸಾರಿ ಕೇಳಿ, ಗಾಳಿಯಲ್ಲಿ ಹೂಮುತ್ತು ತೇಲಿಬಿಟ್ಟು ಹೋಗಿಬಿಡುತ್ತಿದ್ದಳು. ಇಂಥ ಗಡಿಬಿಡಿ, ಸಿಡಿಮಿಡಿ, ಆಸೆ, ಕಾತುರ ಹಾಗೂ ವಿರಹದ ಮಧ್ಯೆಯೇ ಆಷಾಢ ಕಳೆದುಹೋಗುತ್ತಿತ್ತು. ಸ್ವಾರಸ್ಯ ಏನೆಂದರೆ- ಈ ಒಂದು ತಿಂಗಳ ಅವಧಿಯಲ್ಲಿ ಅವಳಿಗೆ ಇವನ ಮೇಲೆ, ಇವಳಿಗೆ ಅವನ ಮೇಲೆ ಅತೀ' ಅನ್ನುವಷ್ಟು ಪ್ರೀತಿ ಹುಟ್ಟುತ್ತಿತ್ತು. ಸಂಬಂಧದ ಬಂಧ ಗಟ್ಟಿಯಾಗುತ್ತಿತ್ತು!

ಹೌದು. ಇದೆಲ್ಲಾ ಹಳೆಯ ಮಧುರ ನೆನಪು. ಈಗ ಆಷಾಢಕ್ಕೆ ಹೆದರುವ ಗಂಡ-ಹೆಂಡಿರಿಲ್ಲ. ಅಯ್ಯೋ, ಆಷಾಢ ಇಲ್ವಾ ನಿಮ್ಗೆ? ಎಂದು ಕೇಳಿದರೆ ಆ ಬೆಡಗಿ ನಕ್ಕು- ಗೊತ್ತಲ್ಲ ನಿಮ್ಗೂ. ಆಷಾಢದಲ್ಲಿ ಅತ್ತೆ-ಸೊಸೆ ಒಂದು ಮನೇಲಿ ಇರಬಾರ್‍ದಂತೆ. ಗಂಡ-ಹೆಂಡತಿ ಇರಬಹುದಂತೆ! ನಮ್ಮತ್ತೆ ಊರಲಿದ್ದಾರೆ. ಹಾಗಾಗಿ ನಮ್ಗೆ ಆಷಾಢವಿಲ್ಲ' ಅನ್ನುತ್ತಾಳೆ. ಬೆಂಗಳೂರಿನಲ್ಲೇ ಬದುಕುವ ಜೋಡಿಗಳಂತೂ ಊರಿಗೆ ಹೋಗದೆ, ಅಕ್ಕಪಕ್ಕದ ಏರಿಯಾಗಳಲ್ಲೇ ಇರುವ ಬಂಧುಗಳ ಮನೆ ಸೇರಿಕೊಳ್ಳುತ್ತಾರೆ. ಇನ್ನು ಕೆಲವರು- ಅಯ್ಯೋ ಹೋಗ್ರಿ, ಒಂದಿಡೀ ತಿಂಗಳು ಯಾರು ಒಂಟಿಯಾಗಿ ಬದುಕುತ್ತಾರೆ? ನಮಗೆ ಆಷಾಢವೂ ಬೇಡ, ಗೀಷಾಡವೂ ಬೇಡ' ಎಂದು ಉತ್ತರಿಸುತ್ತಾರೆ. ಒಂದು ವೇಳೆ ಸಂಪ್ರದಾಯದ ನೆಪದಲ್ಲಿ ಆಕೆ ತವರಿಗೆ ಹೋದರೆ, ಎರಡೇ ದಿನಗಳ ನಂತರ ಅವಳ ಪತಿರಾಯರೇ ಅತ್ತೆ ಮನೆಗೆ ಹೋಗಿಬಿಡುತ್ತಾರೆ. ಒಂದು ರೌಂಡ್ ಸುತ್ತಾಡಿ ಬರೋಣ ಎಂದು ಹೇಳಿ, ಅತ್ತೆಯ ವಿರೋಧಕ್ಕೆ ಗೋಲಿ ಹೊಡೆದು ಹೋಗಿಯೂಬಿಡುತ್ತಾರೆ. ಹೊರಗೆ ಬಂದ ಮೇಲೆ ಇನ್ನೇನಿದೆ? ಪರಸ್ಪರ ಭೇಟಿಯಾಗುತ್ತದೆ. ಬೇಕಿರುವುದೆಲ್ಲ ಲೂಟಿಯಾಗುತ್ತದೆ! ಆಮೇಲೆ, ಏನೂ ನಡೆದೇ ಇಲ್ಲ ಎಂಬಂತೆ ಇಬ್ಬರೂ ಹುಳ್ಳಗೆ ನಗುತ್ತಾ ಮನೆಗೆ ಬರುತ್ತಾರೆ. ಈಗಿನ ದಂಪತಿಯ ಪೈಕಿ ಹೆಚ್ಚಿನವರು ಸದ್ಯಕ್ಕೆ ಮಗು ಬೇಡ ಎಂದು ಮೊದಲೇ ನಿರ್ಧರಿಸುವುದರಿಂದ ಆಷಾಢದಲ್ಲಿ ಒಂದಾದರೆ ಮುಂದೆ ಕಷ್ಟ ಆಗುತ್ತೆ ಎಂಬುದೇ ಅರ್ಥ ಕಳೆದುಕೊಂಡಿದೆ.

ಪರಿಣಾಮ ಏನಾಗಿದೆಯೆಂದರೆ, ಈಗ, ಆಷಾಢ ಎಂದರೆ ಅವನಿ(ಳಿ)ಲ್ಲದೆ ಇರಬೇಕಿಲ್ಲ ಎಂಬ ಸಂಕಟವಿಲ್ಲ. ಇಬ್ಬರ ಬಳಿಯೂ ಮೊಬೈಲ್ ಇರುವುದರಿಂದ ಎಸ್ಟೀಡಿ ಫೋನ್ ಮಾಡುವ ಅಗತ್ಯವಿಲ್ಲ. ಪತ್ರ ಬರೆಯುವುದೇ ಇಬ್ಬರಿಗೂ ಮರೆತಿದೆಯಾದ್ದರಿಂದ ಅಕ್ಷರ ಪ್ರೀತಿಯ ರೋಮಾಂಚನ ಕೂಡ ಇಬ್ಬರಿಗೂ ಇಲ್ಲ. ಹೀಗೆ, ಬದಲಾಗಿ ಹೋದ ಕಾಲಮಾನವನ್ನು ಮರೆತು ಹೋಗುತ್ತಿರುವ ಸಂಪ್ರದಾಯವನ್ನು ಕಂಡಾಗ ಅನಿಸುವುದಿಷ್ಟೆ: ಕಾಲಾಯ ತಸ್ಮೈ ನಮಃ ಆಷಾಢ ಅಂದ್ರೆ ಸುಮ್ನೇನಾ?

<strong>« ಹಿಂದಿನ ಪುಟ : ಆಷಾಢ ಅಂದ್ರೆ ಸುಮ್ನೇನಾ?</strong>« ಹಿಂದಿನ ಪುಟ : ಆಷಾಢ ಅಂದ್ರೆ ಸುಮ್ನೇನಾ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X