ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಂತಿಗಾಗಿ ಹಂಬಲಿಸಿದ; ಅಶಾಂತಿಯೇ ಬದುಕಾಯಿತು!

By * ಎಆರ್ ಮಣಿಕಾಂತ್
|
Google Oneindia Kannada News

Alfred Nobel
ಶ್ರೀಮಂತಿಕೆಯೊಂದಿದ್ದರೆ ಸಾಕು; ಅದರಿಂದ ನಾವು ಬಯಸಿದ್ದನ್ನೆಲ್ಲ ಪಡೆಯಬಹುದು. ಖರೀದಿಸಬಹುದು, ಗೆಲ್ಲಬಹುದು! ಬಯಸಿದ್ದೆಲ್ಲ ಸಿಕ್ಕಿದ ಮೇಲೆ ಇನ್ನೇನಿದೆ? ನಂತರದ ದಿನಗಳಲ್ಲಿ ಸಂತೋಷವೆಂಬುದು ನಮ್ಮ ಬದುಕಾಗುತ್ತದೆ. ಸಂಭ್ರಮ ಜತೆಗಿರುತ್ತದೆ. ನೆಮ್ಮದಿ ಕೈ ಹಿಡಿಯುತ್ತದೆ. ಕೈ ತುಂಬ ಕಾಸಿದೆ ಎಂಬ ಕಾರಣದಿಂದಲೇ ಬಯಸಿದಂಥ ಮನೆ ಮಾತ್ರವಲ್ಲ, ಮನೆಯೊಡತಿ ಕೂಡ ಸಿಗುತ್ತಾಳೆ. ಹಣವಂತ' ಎಂಬ ಕಾರಣದಿಂದಲೇ ಸಮಾಜದಲ್ಲಿ ಗೌರವ ಸಿಗುತ್ತದೆ. ಬಂಧುಗಳ ಸಂಖ್ಯೆ ಸಾವಿರವಾಗುತ್ತದೆ. ಅಲ್ಲಲ್ಲಿ ಅಭಿಮಾನಿಗಳು ಹುಟ್ಟಿಕೊಳ್ಳುತ್ತಾರೆ. ಹೋದಲ್ಲಿ ಬಂದಲ್ಲಿ ನಮಸ್ಕಾರ ಮಾಡುವ, ಭೋಪರಾಕ್ ಕೂಗುವ ಜನ ಸಿಗುತ್ತಾರೆ. ಅಷ್ಟೇ ಅಲ್ಲ, ಶ್ರೀಮಂತ ಅನ್ನಿಸಿಕೊಂಡವನನ್ನು, ಆತ ಮಧ್ಯ ವಯಸ್ಸು ತಲುಪಿದ ನಂತರವೂ ಪ್ರೀತಿಸುವ, ಆಸೆ ಪಡುವ, ಅವನ ಒಂದೇ ಒಂದು ಅಪ್ಪುಗೆಗಾಗಿ, ಆಲಿಂಗನಕ್ಕಾಗಿ ಕಾತರಿಸುವ ಹೆಣ್ಣುಗಳ ಹಿಂಡೇ ಇರುತ್ತದೆ. ಅದಕ್ಕೇ ಹೇಳೋದು: ಶ್ರೀಮಂತಿಕೆಯೊಂದು ನಮ್ಮ ಜತೆಗಿದ್ದರೆ, ಸುಖದ ಬದುಕು ನಮ್ಮದಾಗುತ್ತದೆ...'

ಇಂಥದೊಂದು ನಂಬಿಕೆ ನಮ್ಮಲ್ಲಿ ಹಲವರಿಗಿದೆ. ಆದರೆ ವಾಸ್ತವ ಏನೆಂದರೆ, ದುಡ್ಡಿದೆ ಎಂದ ಮಾತ್ರಕ್ಕೆ ಅದರಿಂದ ನೆಮ್ಮದಿಯನ್ನಾಗಲಿ, ಸಂತೋಷವನ್ನಾಗಲಿ, ಬಯಸಿದಂಥ ಹೆಂಡತಿಯನ್ನಾಗಲಿ (ಗಂಡನನ್ನಾಗಲಿ) ಪಡೆಯಲು ಸಾಧ್ಯವೇ ಇಲ್ಲ. ಈ ಮಾತಿಗೆ ಸಾಕ್ಷಿಯಾಗಿ ಬೇಕಾದಷ್ಟು ಪ್ರಸಂಗಗಳನ್ನು ಉದಾಹರಿಸಬಹುದು. ಅಂಥದೊಂದು ಪ್ರಯತ್ನವಾಗಿ ಈ ಲೇಖನ. ಇಲ್ಲಿ ಜಗತ್ತಿನ ಸರ್ವಶ್ರೇಷ್ಠ ಪ್ರಶಸ್ತಿ ಎಂದೇ ಹೆಸರಾದ ನೊಬೆಲ್ ಪ್ರಶಸ್ತಿಯ ಜನಕ ಆಲ್‌ಫ್ರೆಡ್ ನೊಬೆಲ್‌ನ ಬದುಕಿನ ಕಥೆಯಿದೆ. ಈ ನೊಬೆಲ್‌ನ ಬಳಿ ಏನಿರಲಿಲ್ಲ ಹೇಳಿ? ಅವನಿಗೆ ಒಂದೆರಡಲ್ಲ, ಹತ್ತು ತಲೆಮಾರು ಕೂತು ತಿಂದರೂ ಕರಗದಷ್ಟು ಆಸ್ತಿಯಿತ್ತು. ಹಣವಿತ್ತು. ಫ್ಯಾಕ್ಟರಿಯಿತ್ತು. ಅರಮನೆಯಂಥ ಮನೆಯಿತ್ತು. ಆಳು ಕಾಳುಗಳಿದ್ದರು. ಸಮಾಜದಲ್ಲಿ ದೊಡ್ಡ ಗೌರವವಿತ್ತು. ಇಷ್ಟೆಲ್ಲ ಇದ್ದರೂ ಆತ ಅಂಥ ಸುಖಿ' ಆಗಿರಲಿಲ್ಲ! ಬದುಕಿಡೀ ಒಂದು ಕೊರಗಿನೊಂದಿಗೇ ಆತ ಉಳಿದುಬಿಟ್ಟ. ಮೇಲಿಂದ ಮೇಲೆ ಸಂಭವಿಸಿದ ಭಗ್ನ ಪ್ರೇಮದ ಗಾಯ ಅವನಿಗೆ ಚೇತರಿಸಿಕೊಳ್ಳಲಾಗದಂಥ ಪೆಟ್ಟು ನೀಡಿತು.

ಮೊದಲೇ ವಿವರಿಸಿದಂತೆ, ಆಲ್‌ಫ್ರೆಡ್ ನೊಬೆಲ್‌ಗೆ ಹತ್ತು ಮಂದಿ ಮೆಚ್ಚುವಂಥ ರೂಪ. ಪಾಂಡಿತ್ಯ. ಸುಸಂಸ್ಕೃತ ಕುಟುಂಬದ ಹಿನ್ನೆಲೆ. ಶ್ರೀಮಂತಿಕೆ ಇದ್ದರೂ ಅವನು ಏಕೆ ನೋವಿನ ಮಧ್ಯೆಯೇ ಉಳಿದುಹೋದ? ಅಂಥ ಪ್ರತಿಭಾವಂತನನ್ನು ತಿರಸ್ಕರಿಸುವ ಕಾರಣ, ಅವನ ಮನಸ್ಸು ಗೆದ್ದ ಹುಡುಗಿಯರಿಗಾದರೂ ಏನಿತ್ತು? ಜಗತ್ತಿನಲ್ಲಿ ಶಾಂತಿ ಸ್ಥಾಪನೆಗೆ ತಮ್ಮದೇ ರೀತಿಯಲ್ಲಿ ಹೋರಾಡುವವರಿಗೆ ನೊಬೆಲ್ ಶಾಂತಿ ಪುರಸ್ಕಾರ ನೀಡುವಂತೆ ಮಾಡಿದ ವ್ಯಕ್ತಿಯೇ ಸಂಕಷ್ಟದ ಮಧ್ಯೆ ಬದುಕಿದ್ದಾದರೂ ಏಕೆ? ಇಂಥವೇ ಕುತೂಹಲಕರ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ.

***
ಆಲ್‌ಫ್ರೆಡ್ ನೊಬೆಲ್ ಹುಟ್ಟಿದ್ದು 1833ರಲ್ಲಿ. ಈತ ಇಮ್ಯಾನುವೇಲ್ ನೊಬೆಲ್ -ಆಂಡ್ರೆ ನೊಬೆಲ್ ದಂಪತಿಯ ಮೂರನೇ ಮಗ. ಇಮ್ಯಾನುವೇಲ್, ಅವತ್ತಿನ ಕಾಲಕ್ಕೆ ಹೆಸರಾಂತ ರಸಾಯನಶಾಸ್ತ್ರಜ್ಞ ಎನಿಸಿಕೊಂಡಿದ್ದ. ಇದನ್ನು ಕಂಡ ಆಲ್‌ಫ್ರೆಡ್ ನೊಬೆಲ್ ಕೂಡ ವಿಜ್ಞಾನ ವಿಷಯದಲ್ಲೇ ಆಸಕ್ತಿ ತೋರಿಸಿದ. ಪದವಿ ಪಡೆದ. ಒಂದೆರಡಲ್ಲ, ಸ್ವೀಡಿಷ್, ಫ್ರೆಂಚ್, ರಷಿಯನ್, ಇಂಗ್ಲಿಷ್, ಜರ್ಮನ್ ಹಾಗೂ ಇಟಾಲಿಯನ್ ಭಾಷೆಗಳಲ್ಲಿ ವ್ಯವಹರಿಸಲು ಕಲಿತ. ಈತನ ಸಾಧನೆಯನ್ನು, ವಿದ್ವತ್ತನ್ನು, ಅಂದ ಚೆಂದವನ್ನು ಎಲ್ಲರೂ ಹೊಗಳಿದ ಸಂದರ್ಭದಲ್ಲಿಯೇ ಅವನಿಗೇ ಗೊತ್ತಿಲ್ಲದಂತೆ ನೊಬೆಲ್‌ನ ಎದೆಯೊಳಗೆ ಹರೆಯ ಅರಳಿತು. ನಂತರದ ಕೆಲವೇ ದಿನಗಳಲ್ಲಿ ಅವನಿಗೆ ಒಂದು ಹುಡುಗಿಯ ಸಾನ್ನಿಧ್ಯ ಬೇಕೇ ಬೇಕು ಅನ್ನಿಸಿತು. ತನ್ನ ಮನಸ್ಸಿಗೆ ಇಷ್ಟವಾಗುವಂಥ ಬೆಡಗಿಯ ಹುಡುಕಾಟಕ್ಕೆ ನಿಂತು ಬಿಟ್ಟ ನೊಬೆಲ್.

ಪರಿಚಯವಾದಾಕೆಯೇ ಅಲೆಕ್ಸಾಂಡ್ರಾ. ಆಕೆ ಆಗಷ್ಟೇ ಹದಿನಾರಕ್ಕೆ ಕಾಲಿಟ್ಟಿದ್ದಳು. ನೊಬೆಲ್ ನಿಗಿನಿಗಿ ಯೌವನದ ಹದಿನೆಂಟರಲ್ಲಿದ್ದ. ಅಲೆಕ್ಸಾಂಡ್ರಾಳ ಪರಿಚಯದ ನಂತರ ಅವನ ಉಡುಗೆ-ತೊಡುಗೆ, ಮಾತಾಡುವ ಶೈಲಿ, ಹಾವ-ಭಾವ ಎಲ್ಲವೂ ಬದಲಾಯಿತು. ಗೆಳೆತನ ಗಾಢವಾದಾಗ ಅದೊಂದು ದಿನ ಆತ ಅಲೆಕ್ಸಾಂಡ್ರಾಳ ಮುಂದೆ ತನ್ನ ಮನಸ್ಸು ತೆರೆದಿಟ್ಟ. ನಿನ್ನನ್ನ ಪ್ರೀತಿಸ್ತಾ ಇದೀನಿ. ನಿನ್ನ ಅನುಮತಿಗಾಗಿ ಕಾಯ್ತಾ ಇದೀನಿ. ನೀನೂ ನನ್ನನ್ನು ಪ್ರೀತಿಸ್ತೀಯ ಅನ್ಕೊಂಡಿದೀನಿ' ಅಂದ.

ಅವನ ನಿರೀಕ್ಷೆಗೆ ವಿರುದ್ಧವಾಗಿ ಅಲೆಕ್ಸಾಂಡ್ರಾ- ಸಾರಿ. ಐ ಡೋಂಟ್ ಲವ್ ಯೂ' ಎಂದುಬಿಟ್ಟಳು. ನಂತರ ಅವನೊಂದಿಗೆ ಗೆಳೆತನ ಕಡಿದು ಕೊಂಡಳು. ಮುಂದಿನ ಎರಡು ತಿಂಗಳ ನಂತರ ಅಪಘಾತವೊಂದರಲ್ಲಿ ಸತ್ತೂ ಹೋದಳು. ಇದು ನೊಬೆಲ್‌ಗೆ ಬಹುದೊಡ್ಡ ಶಾಕ್. ಆತ ಅಲೆಕ್ಸಾಂಡ್ರಾಳ ನೆನಪಿನಲ್ಲಿಯೇ ಕಳೆದು ಹೋದ. ಅವಳ ನೆನಪಿಗೆಂದೇ ಕವನ ಬರೆದ. ಕತೆ ಬರೆದ. ಅವಳ ನೆನಪಾದಾಗಲೆಲ್ಲ ಸಂಕೋಚ ಬಿಟ್ಟು ಅತ್ತು ಹಗುರಾಗುವುದನ್ನು ರೂಢಿ ಮಾಡಿಕೊಂಡ.

ಈ ಸಂಕಟದ ಮಧ್ಯೆಯೇ ಅವನ ಸಂಶೋಧನೆ ಸಾಗುತ್ತಿತ್ತು. ಈ ಮಧ್ಯೆ ಪ್ಯಾರಿಸ್ ಮಹಾನಗರದಲ್ಲಿ ತನ್ನ ವಾಸ ಮತ್ತು ಸಂಶೋಧನೆಗೆ ಅನುಕೂಲವಾಗುವಂಥ ಒಂದು ದೊಡ್ಡ ಬಂಗಲೆ ಖರೀದಿಸಿದ. ಹಗಲಿಡೀ ದುಡಿದು ಹಣ್ಣಾದವನಿಗೆ, ಏನೋ ಕೊರತೆ ಕಾಡತೊಡಗಿತು. ತನ್ನ ಸಂತೋಷ, ಸಂಭ್ರಮ, ನೋವು, ದುಗುಡ, ಕನಸನ್ನೆಲ್ಲ ಹೇಳಿಕೊಳ್ಳಲು ಒಂದು ಹೆಣ್ಣು ಜೀವದ ಅಗತ್ಯವಿದೆ ಅನ್ನಿಸಿತು. ಯಾರಾದರೂ ಸುಂದರಿ, ಸುಶಿಕ್ಷಿತ ಹುಡುಗಿಯನ್ನು ತನ್ನ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡರೆ ಹೇಗೆ ಎಂದು ಯೋಚಿಸಿದ. ಈ ಸಂದರ್ಭದಲ್ಲಿಯೇ ಅವನಿಗೆ, ಕಾರ್ಯದರ್ಶಿಯಾದವಳೇ ಮುಂದೆ ಹೆಂಡತಿಯೂ ಆಗಿಬಿಟ್ಟರೆ ಎಷ್ಟು ಚೆಂದವಲ್ಲವೆ ಎಂಬ ಯೋಚನೆ ಬಂತು. ಹೀಗೆ ಯೋಚಿಸಿದ್ದಕ್ಕೆ ತನಗೆ ತಾನೇ ಶಹಭಾಷ್‌ಗಿರಿ ಕೊಟ್ಟುಕೊಂಡ. ಅಷ್ಟೇ ಅಲ್ಲ, ಒಂದೆರಡು ದಿನಗಳಲ್ಲಿ ಆಪ್ತ ಕಾರ್ಯದರ್ಶಿ ಹುದ್ದೆಗೆ ಪತ್ರಿಕೆಗಳಲ್ಲಿ ಪ್ರಕಟಣೆಯನ್ನೂ ನೀಡಿದ. ಈ ಸಂದರ್ಭದಲ್ಲಿ ಆಲ್‌ಫ್ರೆಡ್ ನೊಬೆಲ್‌ಗೆ ಪರಿಚಯವಾದಾಕೆಯೇ ವರ್ಥಾ. ಆಕೆ ಸೌಂದರ್ಯದ ಖನಿಯಾಗಿದ್ದಳು. ಅಸಾಧಾರಣ ಪ್ರತಿಭಾವಂತೆಯಾಗಿದ್ದಳು. ಕಾರ್ಯದರ್ಶಿಯಾಗಿ ಬಂದ ಮೇಲೆ ಅವಳ ಸಹವಾಸದಲ್ಲಿ ನೊಬೆಲ್ ಎಲ್ಲ ನೋವನ್ನೂ ಮರೆತ. ಅವಳೊಂದಿಗೆ ಗಂಟೆಗಟ್ಟಲೆ ಹರಟಿದ. ತನ್ನ ಕಷ್ಟ ಹೇಳಿಕೊಂಡ. ಕನಸು ಹಂಚಿಕೊಂಡ. ಭಗ್ನ ಪ್ರೇಮದಿಂದ ತತ್ತರಿಸಿದ ಕ್ಷಣದಲ್ಲಿ ಬರೆದಿದ್ದ ಕವನಗಳನ್ನು ಅವಳಿಗೆ ಓದಿ ಹೇಳಿದ. ವರ್ಥಾ ಎಲ್ಲವನ್ನೂ ಖುಷಿಯಿಂದ ಕೇಳಿಸಿಕೊಂಡು ಕಡೆಗೊಮ್ಮೆ ಖಿಲ್ಲನೆ ನಗುತ್ತಿದ್ದಳು. ಈ ನಗುವಿಗಾಗಿಯೇ ಕಾದಿದ್ದವನಂತೆ ನೊಬೆಲ್ ಅವಳ ನಗುವಿನ ಮೇಲೇ ಕವಿತೆ ಬರೆಯುತ್ತಿದ್ದ.

ಈ ಮಧ್ಯೆ ನೊಬೆಲ್ ತುಂಬ ಸೂಕ್ಷ್ಮವಾಗಿ ಗಮನಿಸಿದ್ದ. ಏನೆಂದರೆ, ಈತ ಪ್ರೇಮೋನ್ಮತ್ತನಾಗಿ ಒಂದರ ಹಿಂದೊಂದು ಪದ್ಯ ಬರೆದು ಓದಲು ತೊಡಗಿದರೆ, ವರ್ಥಾ ಬೇಕೆಂದೇ ನಿರಾಸಕ್ತಿ ತೋರುತ್ತಿದ್ದಳು. ನೊಬೆಲ್ ಹುಚ್ಚನಂತೆ ತನ್ನ ಭವಿಷ್ಯದ ಬಗ್ಗೆ, ತನ್ನದೇ ಸಂಸಾರದ ಬಗ್ಗೆ, ವರ್ಥಾಳ ಚೆಲುವಿನ ಬಗ್ಗೆ ಮಾತಾಡುತ್ತಿದ್ದರೆ ಆಕೆ ಬೇರೆಲ್ಲೋ ನೋಡುತ್ತ ಕೂತುಬಿಡುತ್ತಿದ್ದಳು. ಈತ ಒಂದೊಂದು ಬಾರಿ ವಾಕ್ ಹೊರಟಾಗ ತುಂಬ ಪ್ರೀತಿಯಿಂದ ಅವಳ ಕೈ ಹಿಡಿದುಕೊಂಡರೆ, ತಕ್ಷಣವೇ ಆಕೆ ಬಿಡಿಸಿಕೊಳ್ಳುತ್ತಿದ್ದಳು. ಈ ವರ್ತನೆಯಿಂದ ಅನುಮಾನಗೊಂಡ ನೊಬೆಲ್ ಕಡೆಗೊಂದು ದಿನ ಅವಳ ಕಣ್ಣಲ್ಲಿ ಕಣ್ಣಿಟ್ಟು ಕೇಳಿಯೇ ಬಿಟ್ಟ: ವರ್ಥಾ, ನಿಜ ಹೇಳು, ನೀನು ಯಾರನ್ನಾದ್ರೂ ಪ್ರೀತಿಸಿದೀಯ?'

ಹೀಗೆ ಕೇಳಿದ ಮರುಕ್ಷಣದಲ್ಲೇ ಅವಳ ಬಾಯಿಂದ ತನ್ನ ಹೆಸರೇ ಉತ್ತರವಾಗಿ ಬರಲಿ ಎಂದು ನೊಬೆಲ್ ಹಂಬಲಿಸಿದ್ದ. ಆದರೆ ವರ್ಥಾ ತುಂಬ ನಿಧಾನವಾಗಿ, ಆದರೆ ನಿರ್ವಿಕಾರ ಭಾವದಲ್ಲಿ ಹೇಳಿಬಿಟ್ಟಳು: ಸರ್, ನನ್ನ ಮಾತಿಂದ ನಿಮಗೆ ಬೇಸರ ಆಗುತ್ತೆ ಅಂತ ಗೊತ್ತು. ಆದರೆ, ಸುಳ್ಳು ಹೇಳಲು ನನಗೆ ಇಷ್ಟವಿಲ್ಲ. ನಾನು ಒಂದು ಹುಡುಗನನ್ನು ಪ್ರೀತಿಸ್ತಾ ಇದೀನಿ. ಅವನ ಹೆಸರು ಬರೋನ್ ಆರ್ಥರ್. ನಾವಿಬ್ರೂ ಮದುವೆ ಆಗಬೇಕು ಅಂತಿದೀವಿ...'

ಅಲ್ಲಿಗೆ, ನೊಬೆಲ್ ಬದುಕಿಗೆ ಬಂದಿದ್ದ ಎರಡನೇ ಪ್ರೀತಿಯ ಗುಲಾಬಿ ಕೂಡ ಅರಳುವ ಮೊದಲೇ ಬಾಡಿ ಹೋಯಿತು. ನಂತರದ ದಿನಗಳಲ್ಲಿ ಆತ ಅನ್ಯ ಮನಸ್ಕನಾದ. ವಿರಹ ಗೀತೆಗಳ ರಚನೆಯಲ್ಲಿ ಹೆಚ್ಚು ಕಾಲ ಕಳೆದ. ವರ್ಥಾಳೊಂದಿಗೆ ಮನಬಿಚ್ಚಿ ಮಾತಾಡುವುದನ್ನೇ ನಿಲ್ಲಿಸಿದ್ದ. ಮಾತಾಡಲೇಬೇಕು ಅನ್ನಿಸಿದರೆ ಹಾ, ಹೂ ಎಂದಷ್ಟೇ ಹೇಳಿ ಎದ್ದುಹೋಗಿಬಿಡುತ್ತಿದ್ದ.

ಇದಾದ ಕೆಲವೇ ದಿನಗಳಲ್ಲಿ ನೊಬೆಲ್ ಒಂದು ಸಮಾರಂಭದಲ್ಲಿ ಭಾಗವಹಿಸಲು ಸ್ವೀಡನ್‌ಗೆ ಹೋಗಬೇಕಾಗಿ ಬಂತು. ಆತ ಹಿಂದಿರುಗಿ ಬರುವಷ್ಟರಲ್ಲಿ- ರಾಜೀನಾಮೆ ಪತ್ರ ಬರೆದಿಟ್ಟು, ತನ್ನ ಪ್ರಿಯಕರನೊಂದಿಗೆ ವರ್ಥಾ ಹೋಗಿಬಿಟ್ಟದ್ದಳು. ಇವತ್ತಲ್ಲ ನಾಳೆ ವರ್ಥಾ ಮನಸ್ಸು ಬದಲಿಸಬಹುದು. ತನ್ನ ಪ್ರೀತಿಯನ್ನು, ತನ್ನ ಶ್ರೀಮಂತಿಕೆಯನ್ನು ಒಪ್ಪಬಹುದು ಎಂದು ಭಾವಿಸಿದ್ದ ನೊಬೆಲ್ ಈ ಘಟನೆಯಿಂದ ತುಂಬ ವಿಹ್ವಲಗೊಂಡ. ತನ್ನ ಮನದ ನೋವನ್ನೆಲ್ಲ ಹೇಳಿಕೊಂಡು ಸಮಾಧಾನ ಮಾಡಿಕೊಳ್ಳಬೇಕು ಅನ್ನಿಸಿದಾಗ ತನ್ನ ತಮ್ಮನಿಗೆ ಹೀಗೆ ಕಾಗದ ಬರೆದ:

ತಮ್ಮಾ, ನನ್ನ ಮತ್ತು ನಿನ್ನ ಜೀವನದಲ್ಲಿ ಅದೆಷ್ಟು ಅಂತರವಿದೆ ನೋಡು? ನಿನಗೆ ಸುಖ, ಶಾಂತಿ ಮತ್ತು ಸಂತೋಷಗಳು ದೊರಕಿವೆ. ಆದರೆ ನನ್ನ ಜೀವನವು ದಡ ಸೇರುವ ಭರವಸೆಯನ್ನೇ ಕಳೆದುಕೊಂಡ, ಚುಕ್ಕಾಣಿ ಇಲ್ಲದ ಹಡಗಿನಂತಿದೆ. ತನ್ನ ದೌರ್ಭಾಗ್ಯದಿಂದ ಅದು ನೀರಿನ ಸುಳಿಗೆ ಸಿಕ್ಕು ದಿಕ್ಕು ತೋಚದೆ ಸುತ್ತುತ್ತಿದೆ. ನೆನಪು ಮಾಡಿಕೊಳ್ಳೋಣವೆಂದರೆ, ನನ್ನ ಮನದಲ್ಲಿ ಮಧುರ ನೆನಪುಗಳೇ ಇಲ್ಲ. ಸಾವಿನ ನಂತರ ನಾನು ಬಿಟ್ಟು ಹೋಗಲು ಪ್ರೇಮದ ಕುರುಹು ಕೂಡ ಜತೆಗಿಲ್ಲ. ನಾನು ತುಂಬ ಆಸೆ ಇಟ್ಟುಕೊಂಡು ಯಾರನ್ನೋ ಪ್ರೀತಿಸಿದರೆ, ಅವರು ಸರಿಯಾದ ಕಾರಣವನ್ನೇ ನೀಡದೆ ಕೈಕೊಡುತ್ತಾರೆ. ಇಂಥ ಸಂದರ್ಭಗಳಲ್ಲೆಲ್ಲ- ಛೆ, ಇದೆಂಥ ಹೀನ ಬದುಕು ನನ್ನದು ಎನ್ನಿಸಿ ವ್ಯಥೆಯಾಗುತ್ತದೆ!'

ಇಂಥ ಸಂಕಟದ ಮಧ್ಯೆಯೇ ನೊಬೆಲ್‌ಗೆ ಐವತ್ತು ವರ್ಷ ಆಗಿ ಹೋಯಿತು. ಈ ಸಂದರ್ಭದಲ್ಲಿ ಕೂಡ ಆತ ಒಂದು ಹೆಣ್ಣು ಜೀವಕ್ಕಾಗಿ ಹಂಬಲಿಸಿದ. ಶ್ರೀಮಂತರ, ಮಧ್ಯಮ ವರ್ಗದ ಹುಡುಗಿಯರ ಬದಲು ಕಡು ಬಡತನದ ಹಿನ್ನೆಲೆಯಿರುವ ಹುಡುಗಿಯೊಬ್ಬಳನ್ನು ನೋಡಿ, ಅವಳನ್ನೇ ಮದುವೆಯಾದರೆ ಹೇಗೆ ಅಂದುಕೊಂಡ. ಈ ಸಂದರ್ಭದಲ್ಲಿಯೇ ಅವನಿಗೆ ಹೂ ಮಾರುವ ಹುಡುಗಿ ಸೋಫಿ ಹೇಜ್ ಎಂಬಾಕೆಯ ಪರಿಚಯವಾಯಿತು. ಆಕೆಯನ್ನು ಚೆನ್ನಾಗಿ ಓದಿಸಿ, ಉತ್ತಮ ಸಂಸ್ಕಾರ ಕಲಿಸಿ ನಂತರ ಮದುವೆಯಾಗಲು ನಿರ್ಧರಿಸಿದ. ಸೋಫಿಯನ್ನು ಪ್ಯಾರಿಸ್‌ನಲ್ಲಿ ಕಾಲೇಜಿಗೆ ಸೇರಿಸಿದ. ಅತ್ಯುತ್ತಮ ಹಾಸ್ಟೆಲ್‌ನಲ್ಲಿ ಆಕೆಗೆ ತಂಗುವ ಏರ್ಪಾಡು ಮಾಡಿಕೊಟ್ಟ.

ಆದರೆ ಸೋಫಿ ಹೇಜ್ ನೊಬೆಲ್‌ನ ನಿರೀಕ್ಷೆಗೆ ತದ್ವಿರುದ್ಧ ಎಂಬಂತಿದ್ದಳು. ಆಕೆ ಕಾಲೇಜಿಗೆ ಹೋದಳು ನಿಜ. ಆದರೆ ಪದವಿ ಪಡೆಯಲಿಲ್ಲ. ಪ್ರತಿ ತಿಂಗಳೂ ನೊಬೆಲ್ ತಪ್ಪದೇ ಕಳಿಸುತ್ತಿದ್ದ ಹಣವನ್ನು ನೀರಿನಂತೆ ಖರ್ಚು ಮಾಡ್ತಾ ಮೋಜು, ಮಜಾ ಉಡಾಯಿಸಿದಳು. ಅಷ್ಟೇ ಅಲ್ಲ, ತನ್ನ ಸ್ವೇಚ್ಛೆಯ ನಡವಳಿಕೆಯಿಂದ ಕೆಟ್ಟ ಹೆಸರನ್ನೂ ಪಡೆದುಕೊಂಡಳು. ಈ ಸುದ್ದಿ ಕೇಳಿ ನೊಬೆಲ್ ಚಿಂತೆಗೆ ಬಿದ್ದಿದ್ದಾಗಲೇ ಇನ್ನೊಂದು ಶಾಕಿಂಗ್ ನ್ಯೂಸ್ ಅವನಿಗಾಗಿ ಕಾಯುತ್ತಿತ್ತು. ಸೋಫಿ ಹೇಜ್, ತನ್ನ ಸಹಪಾಠಿಯನ್ನು ಮದುವೆಯಾಗುವುದಾಗಿ ತಿಳಿಸಿ, ನೊಬೆಲ್‌ಗೆ ಪತ್ರ ಬರೆದಿದ್ದಳು!

ಒಂದರ ಹಿಂದೊಂದರಂತೆ ನಡೆದು ಹೋದ ವಿಫಲ ಪ್ರೇಮ ಪ್ರಸಂಗಗಳಿಂದ ನೊಬೆಲ್ ಕುಸಿದು ಹೋದ. ಒಂದು ಸಂತೋಷವೆಂದರೆ ವೈಯಕ್ತಿಕ ಜೀವನದ ಈ ಸೋಲುಗಳ ಮಧ್ಯೆಯೇ ವಿಜ್ಞಾನಿಯಾಗಿ ಆತ ದೊಡ್ಡ ಹೆಸರು ಮಾಡಿದ. ನೂರಾರು ಸಂಶೋಧನೆ ನಡೆಸಿ, ಯಶಸ್ಸು ಪಡೆದ. ಮುಖ್ಯವಾಗಿ ಡೈನಾಮೈಟ್ ಕಂಡುಹಿಡಿದ. ಅದರಿಂದ ಎಷ್ಟೆಲ್ಲ ಉಪಯೋಗಗಳಿವೆ ಎಂಬುದನ್ನು ಎಲ್ಲರಿಗೂ ಅರ್ಥವಾಗುವ ಭಾಷೆಯಲ್ಲಿ ವಿವರಿಸಿ ಹೇಳಿದ್ದ. ತನ್ನ ಸಂಶೋಧನೆಯಿಂದ ಮಹತ್ವದ ಸಾಧನೆಯಾಗುತ್ತದೆ. ಜಗತ್ತು ತನ್ನನ್ನು ತಾನಿರುವವರೆಗೂ ನೆನಪಿಟ್ಟುಕೊಳ್ಳುತ್ತದೆ ಎಂದು ಭಾವಿಸಿದ್ದ. ಆದರೆ, ಅವನ ಮನಸ್ಸಿಗೆ ಅತಿ ದೊಡ್ಡ ಶಾಕ್ ನೀಡುವಂಥ ಸುದ್ದಿಯೊಂದು ಅವನು ಬದುಕಿದ್ದಾಗಲೇ ಪತ್ರಿಕೆಯಲ್ಲಿ ಪ್ರಕಟವಾಗಿ ಹೋಯಿತು. ನೊಬೆಲ್ ತೀವ್ರ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾಗಲೇ, ಆತ ನಾಳೆ ಸಾಯಬಹುದೆಂದು ಭಾವಿಸಿದ ಫ್ರೆಂಚ್ ಪತ್ರಿಕೆಯೊಂದು ಸಾವಿನ ವ್ಯಾಪಾರಿ ಆಲ್‌ಫ್ರೆಡ್ ನೊಬೆಲ್ ನಿಧನ' ಎಂಬ ಹೆಡ್ಡಿಂಗು ಹಾಕಿ ಫೋಟೊ ಸಹಿತ ಸುದ್ದಿ ಪ್ರಕಟಿಸಿಬಿಟ್ಟಿತು. ಮರುದಿನ ಈ ಸುದ್ದಿ ನೋಡಿ ಕಂಗಾಲಾದ ನೊಬೆಲ್, ತನ್ನನ್ನು ಜನ ಸಾವಿನ ವ್ಯಾಪಾರಿ ಎಂದು ಕರೆದದ್ದಕ್ಕೆ ತುಂಬ ವ್ಯಾಕುಲಗೊಂಡ. ಜಗತ್ತಿನಲ್ಲಿ ಶಾಂತಿ ಸ್ಥಾಪನೆಗೆ ಹೋರಾಡಿದವರಿಗೆ ಪ್ರಶಸ್ತಿ ನೀಡಲು ಯೋಚಿಸಿದ...

***
ಈಗ ಹೇಳಿ: ಬದುಕಿಡೀ ಶಾಂತಿಗಾಗಿ ಹಂಬಲಿಸಿದವನ ಬಾಳು ಅಶಾಂತಿಯ ಮಧ್ಯೆಯೇ ಉಳಿದು ಹೋದದ್ದು ವಿಪರ್‍ಯಾಸವಲ್ಲವೆ? ತುಂಬ ಶ್ರೀಮಂತರು ತುಂಬ ದುಃಖಿಗಳೂ ಆಗಿರುತ್ತಾರೆ ಎಂಬುದು ಎಷ್ಟೊಂದು ನಿಜವಲ್ಲವೇ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X