• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮತ್ತೆ ಮಳೆ ಹುಯ್ಯುತ್ತಿದೆ, ಎಲ್ಲ ನೆನಪಾಗುತ್ತಿದೆ...

By Staff
|

ಮಳೆಗಾಲ ಶುರುವಾಗಿದೆ! ಮಳೆ'ಯ ನೆನಪಾದರೆ ಸಾಕು-ತಂಗಾಳಿಯಂಥ ಆಹ್ಲಾದವೊಂದು ಮೈಮನವನ್ನು ಆವರಿಸಿಕೊಳ್ಳುತ್ತದೆ. ಅದರಲ್ಲೂ ದಶಕಗಳ ಹಿಂದೆ ಹಳ್ಳಿಗಳಲ್ಲೇ ತಮ್ಮ ಬಾಲ್ಯ ಕಳೆದವರಿಗಂತೂ-ಮಳೆ ಅಂದಾಕ್ಷಣ ಊರು, ಒಂದಿಡೀ ವಾರ ಕೆಂಪು ನೀರಿನಿಂದಲೇ ತುಂಬಿರುತ್ತಿದ್ದ ಅಲ್ಲಿನ ಕೆರೆ ನೆನಪಾಗುತ್ತದೆ. ಹಾಗೆಯೇ, ಹೊರಗೆ ಜುರ್ರೋ ಎಂದು ಮಳೆ ಸುರಿಯುತ್ತಿದ್ದರೆ- ಇದ್ಯಾಕೋ ಛಳಿಛಳಿ ಆಗ್ತಾ ಇದೆಯಲ್ಲ ಎನ್ನುತ್ತಲೇ ಬೀಡಿ ಹಚ್ಚಿಕೊಂಡು ಬೆಚ್ಚಗಾಗುತ್ತಿದ್ದ ಅಪ್ಪ/ಚಿಕ್ಕಪ್ಪನ ಚಿತ್ರ ಕಣ್ಮುಂದೆ ಬರುತ್ತದೆ ಮತ್ತು ಇದೆಲ್ಲಕ್ಕಿಂತ ಮುಖ್ಯವಾಗಿ ಮಳೆಗೆ ಸಂಬಂಧಿಸಿದಂತೆ, ಅಪ್ಪ-ಅಮ್ಮ, ತಾತ-ಅಜ್ಜಿಯವರು ಹೇಳಿದ್ದ ಚಂದಮಾಮ'ದ ಕಥೆಗಳಷ್ಟೇ ಮಜದಿಂದ ಕೂಡಿದ್ದ ಕಥೆಗಳು ನೆನಪಾಗುತ್ತಿವೆ. ಅಂಥ ಒಂದೆರಡು ಕತೆಗಳಿವೆ ಇಲ್ಲಿ; ಅವುಗಳನ್ನು ಈ ಹಿಂದೆ ಕೇಳಿರದಿದ್ದರೆ- ಈಗ ಓದಿ ಖುಷಿಪಡಿ. ಈಗಾಗಲೇ ಕೇಳಿದ್ದರೆ-ಬಾಲ್ಯವನ್ನು ಮತ್ತೆ ನೆನಪು ಮಾಡಿಕೊಂಡು ಇನ್ನಷ್ಟು ಖುಷಿಪಡಿ!

* ಎಆರ್ ಮಣಿಕಾಂತ್

ತುಂಬ ಸಂದರ್ಭದಲ್ಲಿ ಈಗಿನಂತೆಯೇ, ಹೊತ್ತು ಗೊತ್ತಿಲ್ಲದೆ ಮಳೆ ಬರುತ್ತಿತ್ತು. ಆಗೆಲ್ಲ ಅವ್ವ ನಡುಮನೆಯಲ್ಲಿ ಕುಳಿತು, ಅಲ್ಲಲ್ಲಿ ಮಳೆ ಸೋರುತ್ತಿದ್ದ ಜಾಗಕ್ಕೆ ಪಾತ್ರಗಳನ್ನಿಟ್ಟು ಹೇಳುತ್ತಿದ್ದಳು: ತುಂಬ ವರ್ಷಗಳ ಹಿಂದೆ ಆಕಾಶ, ತುಂಬ ಹತ್ತಿರದಲ್ಲೇ, ಅಂದರೆ ತೆಂಗಿನಮರದ ಎತ್ತರದಲ್ಲೇ ಇತ್ತಂತೆ. ಆ ದಿನಗಳಲ್ಲಿ ಮಳೆ ಬೇಕು ಅನ್ನಿಸಿದರೆ, ಜನ ದೊಡ್ಡದೊಂದು ಕೋಲು ತಯಾರಿಸಿ, ಅದನ್ನು ಮೋಡಕ್ಕೆ ಚುಚ್ಚಿ ಮಳೆ ಬರಿಸಿಕೊಳ್ತಾ ಇದ್ರಂತೆ! ಒಂದು ಸಂದರ್ಭದಲ್ಲಿ ಘಟವಾಣಿ ಹೆಂಗಸೊಬ್ಬಳು ಭತ್ತ ಕುಟ್ಟುತ್ತಿದ್ದಳಂತೆ. ಆ ಸಂದರ್ಭದಲ್ಲಿ ಒಮ್ಮೆ ಅವಳ ಒನಕೆ ಮೇಲಿಂದ ಮೇಲೆ ಮೋಡಕ್ಕೆ ತಾಕಿತಂತೆ. ಇದರಿಂದ ಸಿಟ್ಟಿಗೆದ್ದ ಆಕೆ- ನಿನ್ ಮನೆ ಹಾಳಾಗ. ಯಾಕೆ ಇಲ್ಲಿದ್ದೀಯ? ಹೋಗ್ಬಾರ್‍ದಾ ಮೇಲಕ್ಕೆ' ಅಂದಳಂತೆ! ತಕ್ಷಣವೇ ಮೋಡ- ಮುನಿಸಿಕೊಂಡು ಮೇಲೆ ಮೇಲೆ ಹೋಗ್ತಾನೇ ಇತ್ತಂತೆ. ಅದೇ ವೇಳೆಗೆ ಆ ದಾರಿಯಲ್ಲಿ ಬರುತ್ತಿದ್ದ ದಾಸಯ್ಯನೊಬ್ಬ- ಅಯ್ಯಯ್ಯೋ, ಒಬ್ಬನೇ ಹೋಗ್ತಾ ಇದೀಯಲ್ಲ? ನಿಂತ್ಕೊ ನಿಂತ್ಕೊ, ನಾನೂ ಬರ್‍ತೀನಿ ಜತೆಗೆ' ಅಂದನಂತೆ. ತಕ್ಷಣವೇ ಮೋಡ ಅಲ್ಲಿಯೇ ನಿಂತುಕೊಂಡಿತಂತೆ. ಅವತ್ತಿಂದ ಆಕಾಶ ಅದೇ ಎತ್ತರದಲ್ಲಿದೆ! ಇದು, ಅಮ್ಮಂದಿರು ಹೇಳುತ್ತಿದ್ದ ಕತೆ.

ಈಗ ತೆಂಗಿನ ಮರದ ಎತ್ತರದಲ್ಲೇ ಆಕಾಶವಿತ್ತು ಎಂಬುದನ್ನು ನೆನಪು ಮಾಡಿಕೊಂಡರೆ- ಬೆರಗೂ, ಭಯವೂ, ವಿಸ್ಮಯವೂ ಒಮ್ಮೆಗೇ ಆಗುತ್ತದೆ. ಆದರೆ, ಬಾಲ್ಯದಲ್ಲಿ ಹಾಗೆಂದೂ ಅನ್ನಿಸಲೇ ಇಲ್ಲ! ಹೀಗೆ, ಅಮ್ಮನ ಕಥೆ ಸಾಗುತ್ತಿದ್ದ ಸಂದರ್ಭದಲ್ಲೇ ಗೋಡೆ, ಕಿಟಕಿ, ಮಾಳಿಗೆಯ ಕಿಂಡಿಯ ಮಧ್ಯೆ ಫಳಫಳಿಸುವ ಮಿಂಚು ಕಾಣಿಸುತ್ತಿತ್ತು. ಹಿಂದೆಯೇ ಭೂಮಂಡಲವೇ ನಡುಗಿ ಹೋಗಬೇಕು- ಅಂಥ ದೊಂದು ಭಾರೀ ಸದ್ದಿನ ಸಿಡಿಲು ಮೊರೆಯುತ್ತಿತ್ತು. ಆಗ ಅಮ್ಮ ಹೇಳುತ್ತಿದ್ದಳು: ಅರ್ಜುನ ಬಾಣ ಬಿಡ್ತಾ ಇದಾನೆ. ಆ ಬಾಣದ ಸದ್ದೇ ಈ ಸಿಡಿಲು. ಅವನು ಬಾಣ ಬಿಡಲು ಎದ್ದು ನಿಂತ ತಕ್ಷಣ ಅವನ ತಾಯಿ ಕುಂತಿ ದೇವಿ- ಹೆಂಗಸರು, ಮಕ್ಕಳು ಇರ್‍ತಾರೆ ಮಗೂ. ದೊಡ್ಡ ಸದ್ದು ಮಾಡದಂಥ ಬಾಣ ಬಿಡು' ಎಂದು ಬುದ್ಧಿಮಾತು ಹೇಳ್ತಾಳೆ. ಆದ್ರೂ ಅರ್ಜುನ ಕೇಳೋದಿಲ್ಲ. ಅವನು ಬಿಲ್ಲಿನ ದಾರವನ್ನು ಎಳೀತಾನಲ್ಲ? ಆಗ ಉಂಟಾಗುವ ಸದ್ದೇ ಗುಡುಗು. ಬಾಣ ಬಿಡ್ತಾನೆ ನೋಡಿ- ಅದು ಸಿಡಿಲು!' (ಈಗ ಯೋಚಿಸಿದರೆ- ಅಂಥ ಬಿರುಮಳೆಯ ಮಧ್ಯೆಯೇ ಬಾಣ ಬಿಡುವ ಹೀಗೆ ಬಾಣ ಬಿಟ್ಟು ಮರವನ್ನೋ, ಮನುಷ್ಯನನ್ನೋ ಸುಡುವ ಅರ್ಜೆಂಟು ಅರ್ಜುನನಿಗಾದರೂ ಏನಿತ್ತು ಅನಿಸುತ್ತದೆ.)

ಸಿಡಿಲಿನ ಕಥೆ ಹೇಳುತ್ತಲೇ ತಕ್ಷಣವೇ ಕುಡುಗೋಲನ್ನೋ, ಕತ್ತಿಯನ್ನೋ ಬಾಗಿಲಿನ ಮುಂದೆ ಎಸೆಯುವಂತೆ ಹೇಳುತ್ತಿದ್ದಳು ಅಮ್ಮ. ಅದು ಸಿಡಿಲಿನಿಂದ ಮನೆಯನ್ನು ಸಂರಕ್ಷಿಸಿಕೊಳ್ಳಲು ಇದ್ದ ಉಪಾಯ. ಮಕ್ಕಳು ತಕ್ಷಣವೇ ಮನೆಯ ಮುಂದೊಂದು, ಹಿಂದೊಂದು ಕುಡುಗೋಲನ್ನು ಎಸೆದು ಬಂದು, ಕಬ್ಬಿಣದ ವಸ್ತುವಿಗೆ ಸಿಡಿಲು ಹೊಡೆಯಲ್ಲ ಅನ್ನೋದು ನಿಜವೇನಮ್ಮ ಎಂದು ಮತ್ತೆ ಮತ್ತೆ ಅನುಮಾನದಿಂದ ಕೇಳಿದರೆ- ಶ್ರವಣ ಬೆಳಗೊಳದಲ್ಲಿ ಗೊಮ್ಮಟೇಶ್ವರನಿಗೆ ಸಿಡಿಲು ಹೊಡೆಯದಿರಲಿ ಎಂದು ನೆತ್ತಿಯ ಮೇಲೆ ಸಲಾಕೆ ಹೊಡೆದಿದ್ದಾರೆ ಗೊತ್ತಾ?' ಅನ್ನುತ್ತಿದ್ದಳು ಅಮ್ಮ!

ಮಳೆಗಾಲದ ಇನ್ನೊಂದು ಮಧುರ ನೆನಪೆಂದರೆ-ಕಪ್ಪೆಗಳ ವಟರ್‌ವಟರ್ ಸದ್ದು! ಮಳೆ ಹನಿಯುವ ಕ್ಷಣದವರೆಗೂ ಕಣ್ಣಿಗೆ ಬೀಳದಿದ್ದ ಕಪ್ಪೆಗಳು, ಮಳೆ ಬಿದ್ದ ಅರ್ಧಗಂಟೆಯೊಳಗೆ ಮನೆಯ ಆಚೀಚೆಯಿದ್ದ ಹೊಂಡಗಳಲ್ಲಿ ತುಂಬಿಕೊಂಡು ಭಜನೆ' ಆರಂಭಿಸುತ್ತಿದ್ದವು! ಅದಕ್ಕೆ ಹಿನ್ನೆಲೆಯಾಗಿಯೂ ಒಂದು ಕತೆ ಇರುತ್ತಿತ್ತು. ಅದು ಹೀಗೆ: ಒಂದೆರಡಲ್ಲ, ಮೂರು ತಿಂಗಳಿಗೂ ಹೆಚ್ಚು ಅವಯ ಬೇಸಿಗೆಯ ಬಿಸಿಲಿಂದ ಕಂಗಾಲಾದ ಕಪ್ಪೆಗಳು ಮೇಲಿಂದ ಮೇಲೆ ಮಳೆಗಾಗಿ ಪ್ರಾರ್ಥಿಸುತ್ತವಂತೆ. ಕಡೆಗೊಮ್ಮೆ ಮಳೆಬಿದ್ದು ಹೊಂಡಗಳೆಲ್ಲ ತುಂಬಿಕೊಂಡಾಗ ಅದರೊಳಗೆ ಖುಷಿಯಿಂದ ಈಜು ಹೊಡೆದು, ಮುಗಿಲಿಂದ ಬಿದ್ದ ಹೊಸನೀರು ಕುಡಿದು, ಕಡೆಗೊಮ್ಮೆ ಮಳೆರಾಯನನ್ನು ಸ್ತುತಿಸಲು ಅಹೋರಾತ್ರಿ ಸಂಗೀತ ಕಾರ್ಯಕ್ರಮ' ನಡೆಸುತ್ತವಂತೆ! ಅದರ ಪರಿಣಾಮವೇ ಇಡೀ ರಾತ್ರಿ ವಟರ್ ವಟರ್!

* * *

ಒಮ್ಮೊಮ್ಮೆ ಏನಾಗುತ್ತಿತ್ತೆಂದರೆ, ಬೆಳ್ಳಂಬೆಳಗಿನಿಂದಲೇ ಸೋನೆ ಮಳೆ ಶುರುವಾಗುತ್ತಿತ್ತು. ಅದರ ಮಧ್ಯೆಯೇ ಶಾಲೆ ತಲುಪಿಕೊಂಡರೆ- ಮಳೆಯ ಕಾರಣಕ್ಕೆ ದೂರದ ಊರಿಂದ ಬರುತ್ತಿದ್ದ ಶಿಕ್ಷಕರೇ ಚಕ್ಕರ್' ಹೊಡೆದಿರುತ್ತಿದ್ದರು. ಇನ್ನು ಕೆಲವೊಂದು ಸಂದರ್ಭಗಳಲ್ಲಿ ಮೇಸ್ಟ್ರು ಬರುವುದು ಬರೀ ಅರ್ಧಗಂಟೆ ತಡವಾದರೆ, ಓಹ್ ಮೇಸ್ಟ್ರು ಬರುವುದಿಲ್ಲ ಎಂದು ಅಂದಾಜು ಮಾಡಿಕೊಂಡು ಹುಡುಗರೇ ಮನೆಗೆ ಪೇರಿ ಕೀಳುತ್ತಿದ್ದರು! ಹಾಗೆ ಮನೆಗೆ ಹೋಗುವ ಹಾದಿಯಲ್ಲೇ ಆಗಷ್ಟೇ ಹರಿದು ಬರುತ್ತಿದ್ದ ಮಳೆ ನೀರಿನಲ್ಲಿ ಎಕ್ಸ್‌ರ್‌ಸೈಜ್ ಹಾಳೆಯಿಂದ ಮಾಡಿದ ಕಾಗದದ ದೋಣಿ ಮಾಡಿ ತೇಲಿ ಬಿಟ್ಟು; ಮಳೆ ನೀರಿನ ಕೊಚ್ಚೆಯಲ್ಲಿ ಬೇಕೆಂದೇ ಕಾಲು ಮುಳುಗಿಸಿ, ಆ ಸಂದರ್ಭದಲ್ಲೇ ಮೈಮೇಲೆ ಕೆಸರು ಹಾರಿಸಿದ ಸಹಪಾಠಿಯ ಮೇಲೆ ಮನೆಯಲ್ಲಿ ಒಮ್ಮೆ, ಶಾಲೆಯಲ್ಲಿ ಮತ್ತೊಮ್ಮೆ ಚಾಡಿ ಹೇಳಿ, ಅದೇ ಕಾರಣಕ್ಕೆ ಗೆಳೆಯ/ಗೆಳತಿಯೊಂದಿಗೆ ಕೋಳಿ ಜಗಳವನ್ನೂ ಆಡಿ... ಹೌದಲ್ಲವಾ? ದಶಕಗಳ ಹಿಂದೆ, ಶಾಲೆಗೆ ಹೋಗುತ್ತಿದ್ದ ಯಾರೊಬ್ಬರ ಬಳಿಯೂ ಛತ್ರಿ ಇರುತ್ತಿರಲಿಲ್ಲ. ಹಾಗಾಗಿ ಮಳೆ ಬಂದ ತಕ್ಷಣ ಎಲ್ಲರೂ ಪುಸ್ತಕಗಳನ್ನೇ ತಲೆಯ ಮೇಲಿಟ್ಟುಕೊಂಡು ಮನೆಯ ಕಡೆಗೆ ಅಥವಾ ಶಾಲೆಯ ಕಡೆಗೆ ಪೇರಿ ಕೀಳುತ್ತಿದ್ದರು. ಒಂದು ವೇಳೆ ಬಿರುಮಳೆಯ ಕಾರಣದಿಂದ ಪುಸ್ತಕವೆಲ್ಲ ತೊಯ್ದು ತೊಪ್ಪೆಯಾದರೂ ಅಂಥ ಸಂಕಟವೇನೂ ಯಾರಿಗೂ ಆಗುತ್ತಿರಲಿಲ್ಲ. ಮಕ್ಕಳು ಮನೆ ತಲುಪಿದ ಮರುಗಳಿಗೆಯೇ ರಪರಪನೆ ಸದ್ದು ಮಾಡುತ್ತಾ ಆಲಿಕಲ್ಲು ಬಿದ್ದರೆ, ಅದ್ಯಾವ ಮಾಯದಲ್ಲೋ ಬೀದಿಗೆ ಹೋಗಿ ಐದಾರು ಆಲಿಕಲ್ಲು ತಂದು- ಬೇಗ ಆಆಆಆ ....' ಅನ್ನು. ಆಲಿಕಲ್ಲು ನುಂಗು. ಇದು ತಿಂದ್ರೆ ಹಲ್ಲುಗಟ್ಟಿಯಾಗ್ತವೆ ಅನ್ನುತ್ತಿದ್ದಳು ಅವ್ವ.

ಹೀಗೆ ಮಳೆ ಬಂದ ಸಂದರ್ಭದಲ್ಲಿ ಒಂಟಿಯಾಗಿ ಹಳ್ಳವನ್ನೂ ದಾಟಬೇಕಾಗಿ ಬಂದರೆ, ತಕ್ಷಣವೇ - ಅಲ್ಲಿ ದೆವ್ವಗಳಿವೆಯಂತೆ' ಎಂದು ಯಾರೋ, ಎಂದೋ ಹೇಳಿದ್ದ ಮಾತು ನೆನಪಾಗುತ್ತಿತ್ತು. ಮರುಕ್ಷಣವೇ ಆ ಮಳೆಯ ಮಧ್ಯೆಯೂ ಮೈ ಬೆವರುತ್ತಿತ್ತು. ತಕ್ಷಣ ಮನೆದೇವರ ಹೆಸರನ್ನು ಜಪಿಸುತ್ತ ಜೈ ಹನುಮಾನ್, ಜೈರಾಮ್, ಜೈ ಚಾಮುಂಡೇ ಶ್ವರಿ... ಎಂದೆಲ್ಲ ಹೇಳಿಕೊಂಡರೂ ದೆವ್ವ'ದ ಭಯ ಹೋಗುತ್ತಲೇ ಇರಲಿಲ್ಲ! ಮತ್ತೆ ಕೆಲವೊಂದು ಸಂದರ್ಭಗಳಲ್ಲಿ ಸ್ಕೂಲಿಂದ ಬಂದು ಮೇಯಲು ಹೋಗಿರುತ್ತಿದ್ದ ಜಾನುವಾರುಗಳನ್ನು ಮನೆಗೆ ಹೊಡೆದುಕೊಂಡು ಬರಲು ಹೋದರೆ, ಆ ವೇಳೆಗೇ ಮಳೆ ಬಂದು ಬಿಡುತ್ತಿತ್ತು. ಮಳೆಗೆ ಬೆದರಿ ಕುರಿ, ಮೇಕೆ, ದನಗಳು ಮನೆಯ ಕಡೆಗೆ ಪೇರಿ ಕಿತ್ತರೆ, ಎಮ್ಮೆಗಳು ಸೀದಾ ಹೋಗಿ ಕೆರೆಯ ನೀರೊಳಗೆ ಮಲಗಿಬಿಡುತ್ತಿದ್ದವು! ಕೆರೆಯ ಈಚೆ ದಡದಿಂದ ಅದೆಷ್ಟೇ ಗದರಿಸಿದರೂ, ಅದೆಷ್ಟೇ ಕಲ್ಲು ಹೊಡೆದರೂ ಅವು ಏಳುತ್ತಲೇ ಇರಲಿಲ್ಲ!

ಇನ್ನು ಕೆಲ ಬಾರಿ ಆ ಭೋರ್ಗರೆವ ಮಳೆಯ ಮಧ್ಯೆ ಕೂಡ ಎಮ್ಮೆಗಳು ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಾ ಅತೀ ನಿಧಾನವಾಗಿ ನಡೆಯುತ್ತಿದ್ದವು. ಕಡೆಗೂ ಅವುಗಳೊಂದಿಗೆ ಮನೆ ತಲುಪುವ ವೇಳೆಗೆ ಮಳೆಗೆ ರಕ್ಷಣೆ ಕೊಡಲೆಂದು ಬಯ್ದಿರುತ್ತಿದ್ದ ಗೋಣಿ ಚೀಲದಿಂದ ಮಳೆ ನೀರು, ಧಾರೆಯಾಗಿ ಬೀಳುತ್ತಿತ್ತು. ಮಳೆಯಲ್ಲಿ ನೆಂದು ಪಜ್ಜಿಯಾಗಿ ಮನೆ ತಲುಪಿದ ಮಕ್ಕಳನ್ನು ಅಮ್ಮಂದಿರು ಒಳಗೆ ಕರೆದುಕೊಂಡು ಸೆರಗಿನಿಂದ ತಲೆಯೊರಸಿ, ಒಲೆ ಮುಂದೆ ಕೂರಿಸಿ- ಇಲ್ಲೇ ಸ್ವಲ್ಪ ಹೊತ್ತು ಇರು. ಮೈ ಬಿಸಿಯಾಗ್ಲಿ' ಎನ್ನುತ್ತಿದ್ದರು. ನಂತರ, ಸರಭರನೆ ಹೊರಗೆ ಬಂದು, ಒಮ್ಮೆ ಎರಡೂ ಕೈಗಳಿಂದ ಲಟಿಕೆ ಮುರಿದು- ಅದ್ಯಾವ ದಯ್ಯದ ಮಳೆಯೋ, ಇದರ ಮನೆ ಹಾಳಾಗ (?!) ನನ್ನ ಮಗು ಪೂರ್ತಿ ನೆಂದು ಹೋದ್ರೂ ಬಿಡಲಿಲ್ವಲ್ಲ? ಇದಕ್ಕೇನು ಕೇಡುಗಾಲವೋ ಕಾಣೆ' ಎಂದು ಬೈಯುತ್ತಿದ್ದರು! ಒಂದು ವೇಳೆ ಮಳೇಲಿ ನೆಂದ ಕಾರಣಕ್ಕೆ ಜ್ವರವೋ, ತಲೆನೋವೋ ಬಂದರೆ- ಹಣೆ, ಕಿವಿಯ ಸಂದು, ಕುತ್ತಿಗೆಯ ಸುತ್ತಲೂ ಅಮೃತಾಂಜನ ತಿಕ್ಕಿ, ಕೌದಿ ಹೊದಿಸಿ ಬೆಚ್ಚಗೆ ಮಲಗಿಸುತ್ತಿದ್ದರು. ಮಧ್ಯೆ ಮಧ್ಯೆ ಹಣೆ ಮುಟ್ಟಿ ಪರೀಕ್ಷಿಸುತ್ತಾ- ಈಗ ಪರವಾಗಿಲ್ಲ. ಜ್ವರ ಬಿಟ್ಟಿದೆ, ತಲೆನೋವೂ ಹೋಗಿದೆ' ಎಂದು ತಮಗೆ ತಾವೇ ಹೇಳಿಕೊಂಡು ಹಣೆಗೊಂದು ಮುತ್ತಿಡುತ್ತಿದ್ದರು.

ಮಳೆ ಅಂದಾಕ್ಷಣ ಎಲ್ಲರ ಕಣ್ಮುಂದೆಯೂ ಹಾಗೇ ಸುಮ್ಮನೆ' ಸುಳಿದು ಹೋಗುವ ಇನ್ನೊಂದು ಚಿತ್ರ- ಛತ್ರಿ ಹಿಡಿದು, ಆ ಮಳೆಯಲ್ಲೇ ಸಂಭ್ರಮದಿಂದ ನಡೆದು ಹೋಗುವ ಪ್ರೇಮಿಗಳದು. ರಸ್ತೆಯಲ್ಲಿ ಇಡೀ ಅರ್ಧಗಂಟೆ, ಅವನೊಂದಿಗೆ ಕೈ ಕೈ ಹಿಡಿದು, ಮೈಗೆ ಮೈ ತಾಗಿಸಿಕೊಂಡು, ಯಾವುದೋ ಹಳೆಯ ಹಾಡು ಗುನುಗುತ್ತಾ ಅಥವಾ ಅವನಿಗಷ್ಟೇ ಕೇಳಿಸುವಂತೆ ಪಿಸುಮಾತನಾಡುತ್ತಾ ನಡೆದುಹೋಗಬೇಕು. ಆಗೊಮ್ಮೆ ಈಗೊಮ್ಮೆ ಮೈತಾಗುವ ಅವನ ಬಿಸಿಯುಸಿರಿಂದ ಖುಷಿಯಾಗಬೇಕು. ಅವನ ಕಣ್ಣೊಳಗೆ ಇಣುಕಿ ನೋಡಿ, ಕಣ್ಣು ಹೊಡೆಯಬೇಕು, ಹೇಗಿದ್ರೂ ಸುತ್ತಮುತ್ತ ಯಾರೂ ಇರಲ್ಲವಲ್ಲ? ಅದೇ ನೆಪದಲ್ಲಿ ಅವನಿಗೊಂದು ಮುತ್ತಿಡಬೇಕು ಎಂಬ ಹಪಹಪಿ ಪ್ರೀತಿಯ ಹೊಳಗೆ ಬಿದ್ದ ಅಷ್ಟೂ ಹುಡುಗಿಯರಿಗಿರುತ್ತದೆ. (ಇಂಥದೇ ಭಾವ ಹುಡುಗರಿಗೂ ಇರುತ್ತದೆ!) ಹಾಗೆ, ಅಂದುಕೊಂಡ ಕನಸೆಲ್ಲ ನನಸಾಗುತ್ತಿದ್ದುದು ಮಳೆ ಬಂದ ಸಂದರ್ಭದಲ್ಲೇ! ಹೀಗೆ ಮಳೆ ಬಂದ ಸಂದರ್ಭದಲ್ಲಿ ಈ ಪ್ರೇಮಿಗಳ ಬಳಿ ಇರುತ್ತಿದ್ದುದು ಒಂದೇ ಛತ್ರಿ. ಒಂದಿಷ್ಟು ಏಕಾಂತ ಬೇಕೆಂದು ಮೊದಲೇ ಬಯಸಿದ್ದ ಇಬ್ಬರೂ ಕೈ ಕೈ ಹಿಡಿದುಕೊಂಡು ರಸ್ತೆಗಿಳಿದು, ತುಂಟಾಟಕ್ಕೆ, ಸಣ್ಣ ಜಗಳಕ್ಕೆ, ರವಷ್ಟು ಪೋಲಿತನಕ್ಕೆ ನಿಂತರೆಂದರೆ, ಅದನ್ನು ಕಂಡು ಮಳೆಯೆಂಬ ಮಳೆಯೂ ಬೆಚ್ಚಗಾಗುತ್ತಿತ್ತು. ಅವರು ಇನ್ನಷ್ಟು ಹೊತ್ತು ಜತೆ ಜತೆಗೇ ನಡೆಯಲಿ ಎಂಬ ಮಹದಾಸೆಯಿಂದ ಹನಿ ಸುರಿಸುತ್ತಿತ್ತು...

ಹೌದು. ಆಗೆಲ್ಲ ಮಳೆ ಶುರುವಾದರೆ ಸಾಕು, ಮಕ್ಕಳೆಲ್ಲ ರಾಗವಾಗಿ- ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ/ಬಾರೋ ಬಾರೋ ಮಳೆರಾಯ ಬಾಳೆಯ ಗಿಡಕೆ ನೀರಿಲ್ಲ' ಎಂದು ಹಾಡುತ್ತಿದ್ದರು. ಅಮ್ಮನ ಸೀರೆಯ ಸೆರಗೊಳಗೆ ಬೆಚ್ಚಗೆ ಮಲಗಿಕೊಂಡು ಇಡೀ ರಾತ್ರಿ ಸುರಿಯುತ್ತಿದ್ದ ಮಳೆ ಸದ್ದು ಕೇಳುತ್ತಿದ್ದರು. ಉಹುಂ, ಈಗ ಆ ಸಂಭ್ರಮವಿಲ್ಲ. ಹಳ್ಳಿಗಳ ಶಾಲೆಗಳಲ್ಲಿ ಈಗ ಹೆಚ್ಚಿನ ಮಕ್ಕಳಿಲ್ಲ. ಇರುವ ಮಕ್ಕಳನ್ನು ಕರೆದೊಯ್ಯಲು ಈಗ ಆಟೊಗಳಿವೆ. ಹಾಗಾಗಿ ಮಕ್ಕಳಿಗೆ ಮಳೆಯಲ್ಲಿ ನೆನೆವ ಸೌಭಾಗ್ಯವಿಲ್ಲ. ದೆವ್ವದ ಹೆದರಿಕೆಯಿಲ್ಲ. ಸಿಡಿಲಿನ ಕತೆ ಗೊತ್ತಿಲ್ಲ. ಹಳ್ಳಿಯ ಶಿಕ್ಷಕರೂ ಈಗ ರೈನ್‌ಕೋಟ್ ಧರಿಸಿ ಬೈಕ್‌ನಲ್ಲಿ ಬರುವುದರಿಂದ ಅವರು ಚಕ್ಕರ್ ಹೊಡೆವ ಸಂಭವವೂ ಇಲ್ಲ! ಮನೆಯ ಹಿಂಬದಿಯಿದ್ದ ಹೊಂಡ, ಊರಿನಾಚೆಗಿದ್ದ ಕೆರೆ ಏಕಕಾಲಕ್ಕೆ ಕಣ್ಮರೆಯಾಗಿರುವುದರಿಂದ ಕಪ್ಪೆಗಳ ಸಂಗೀತವೂ ಕೇಳಿಸುತ್ತಿಲ್ಲ.

ಇನ್ನು, ಬೆಂಗಳೂರಿನ ಮಳೆಗಾಲದ ಬಗ್ಗೆಯಂತೂ ಹೇಳುವುದೇ ಬೇಡ. ಇಲ್ಲಿ ಮಳೆ ಶುರುವಾದರೆ, ಮಕ್ಕಳಿರಲಿ, ದೊಡ್ಡವರಿಗೂ ಕೂಡ ಹೊರಗೆ ಹೋಗಲು ಭಯ. ಮಳೆ ನೀರಲ್ಲಿ ಸುಮ್ಮನೇ ಕಾಲಿಟ್ಟರೂ ಕೊಚ್ಚಿ ಹೋಗುವ ಭೀತಿ.... ಇದನ್ನೆಲ್ಲ ನೋಡಿದರೆ, ನಾವೆಲ್ಲ ಏನೋ ಬಹುಮುಖ್ಯವಾದುದನ್ನು ಕಳೆದುಕೊಂಡ ಸಂಕಟದ ಭಾವವೊಂದು ಮತ್ತೆ ಮತ್ತೆ ಕೈ ಜಗ್ಗಿದಂತಾಗುತ್ತದೆ; ಅಲ್ಲವೇ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more