ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವಳ ಮೇಲೆ ಸಾವಿಗೂ ಮೋಹವಿತ್ತು!

By Staff
|
Google Oneindia Kannada News

Beautiful Katie Kirkpatrick in a bridal dress
ಕೆಲವರ ಬದುಕಿನ ಕಥೆಗಳೇ ಹಾಗೆ ; ಅವು ವಿನಾಕಾರಣ ಇಷ್ಟವಾಗುತ್ತವೆ. ಪದೇ ಪದೆ ನೆನಪಾಗುತ್ತವೆ. ಅವರ ಕಷ್ಟಗಳಿಗೆ ಮರುಗುವಂತೆ, ಸಂತೋಷಕ್ಕೆ ನಲಿಯುವಂತೆ, ಸಂಕಟಕ್ಕೆ ಕಣ್ಣೀರಿಡುವಂತೆ ಮಾಡಿಬಿಡುತ್ತವೆ. ಹೀಗೆ, ಒಂದು ಕಥೆಯ ನೆಪದಲ್ಲಿ ಮನಸ್ಸಿಗೆ' ಬಂದವರು ನಮ್ಮ ಬಂಧುಗಳಲ್ಲ, ಗೆಳೆಯರಲ್ಲ, ಪರಿಚಿತರಲ್ಲ, ನೆಂಟರಲ್ಲ, ನಮ್ಮ ಕೇರಿಯವರಲ್ಲ, ಊರಿನವರೂ ಅಲ್ಲ. ಕಡೆಗೆ, ನಮ್ಮ ದೇಶದವರೂ ಸಹ ಆಗಿರುವುದಿಲ್ಲ. ಆದರೂ ಅಂಥ ಕೆಲವರು ನೆನಪಾದಾಗ ಮನಸ್ಸು- ಅಯ್ಯೋ ಪಾಪ' ಎನ್ನುತ್ತದೆ. We miss you ಎಂದು ಚೀರುತ್ತದೆ; ಸಂಕಟದಿಂದ!

* ಎಆರ್ ಮಣಿಕಾಂತ್

ನಮ್ಮ ಕಥಾನಾಯಕಿ ಅಮೆರಿಕಾದವಳು. ಹೆಸರು ಕಾಟಿ ಕಿರ್ಕ್ ಪ್ಯಾಟ್ರಿಕ್. ಆಕೆ ಎಂಥ ಅರಸಿಕನೂ ಒಮ್ಮೆ ಕದ್ದು ನೋಡಬೇಕು ಎಂದು ಹಂಬಲಿಸುವಂಥ ಸುಂದರಿ. ಇನ್ನೂ ವಿವರಿಸಿ ಹೇಳಬೇಕು ಅಂದರೆ, ಹತ್ತು ವರ್ಷದ ಹಿಂದೆ ನಮ್ಮ ಐಶ್ವರ್ಯಾ ರೈ ಇದ್ದಳಲ್ಲ; ಅಂಥ ಚೆಲುವು ಕಾಟಿ ರೆರ್ಕ್ ಪ್ಯಾಟ್ರಿಕ್‌ಳದ್ದು. ಹುಡುಗರಂತೂ ಅವಳನ್ನು ಕಾಟಿ' ಎಂದು ಕರೆಯುವ ಬದಲು you naughtyyyy ಎಂದು ಕರೆಯುತ್ತಿದ್ದರು. ತುಂಬು ಸೌಂದರ್ಯದ ಹುಡುಗಿಯರಿಗೆ, ಅದೇ ಕಾರಣಕ್ಕೆ ವಿಪರೀತ ಅನ್ನುವಷ್ಟು ಅಹಂಕಾರವಿರ್ತದಂತೆ. ಆದರೆ ಕಾಟಿ'ಯ ವಿಷಯದಲ್ಲಿ ಆ ಮಾತು ಸುಳ್ಳಾಗಿತ್ತು. ಆಕೆ ಕಡಿಮೆ ಮಾತಿನ, ವಿಪರೀತ ನಾಚಿಕೆಯ, ತುಂಬಾ ಸಂಕೋಚದ ಹುಡುಗಿ. ಆಕೆಯ ಬದುಕೆಂಬ ಡಿಕ್ಷನರಿಯಲ್ಲಿ ಅಹಂಕಾರ' ಎಂಬ ಪದಕ್ಕೆ ಜಾಗವೇ ಇರಲಿಲ್ಲ.

ಹುಡುಗಿಯ ತಂದೆಯ ಹೆಸರು ಡೇವ್ ಕಿರ್ಕ್ ಪ್ಯಾಟ್ರಿಕ್. ತಾಯಿ ನಿಕಿ. ಒಬ್ಬಳೇ ಮಗಳೆಂಬ ಕಾರಣಕ್ಕೋ ಏನೋ, ಅವರು ಕಾಟಿಯನ್ನು ವಿಪರೀತ ಮುದ್ದಿನಿಂದ, ಆದರೆ ಅಷ್ಟೇ ಶಿಸ್ತಿನಿಂದ ಬೆಳೆಸಿದ್ದರು. ಅವರ ಮನೆಯಲ್ಲಿ ಸಂತೋವೆಂಬುದು ಮಲ್ಲಿಗೆಯ ಪರಿಮಳದಂತೆ ಹರಡಿಕೊಂಡಿತ್ತು. ಅಮೆರಿಕದಂಥ ಸ್ವಚ್ಛಂದ ಮನೋಭಾವದ ದೇಶದಲ್ಲಿ ಹುಟ್ಟಿ ಬೆಳೆದರೂ ಹದಿಹರೆಯದ ಆಸೆಗಳಿಗೆ ಬಲಿಯಾಗದೇ ಉಳಿದುಬಿಟ್ಟಳು ಕಾಟಿ. ಹುಡುಗರ ಎಲ್ಲ ಬಗೆಯ ಮಾತುಗಳಿಗೂ ಆಕೆಯ ಮೌನವೇ ಉತ್ತರವಾಗಿತ್ತು. ಆಕೆ ನಮ್ಮನ್ನು ಪ್ರೀತಿಸದಿದ್ದರೆ, ನಮ್ಮ ಪ್ರೀತಿಯನ್ನು ಒಪ್ಪದೇ ಹೋದರೆ ಅಷ್ಟೇ ಹೋಯಿತು. ಸುಮ್ಮನೇ ಒಮ್ಮೆ ಬಯ್ದುಬಿಡಲಿ, ಏನಂತ ತಿಳ್ಕಂಡಿದೀಯೋ ನನ್ನಾ ...' ಎಂದು ಒಮ್ಮೆ ಜಗಳವನ್ನಾದರೂ ಮಾಡಲಿ ಎಂದು ಆಸೆಪಟ್ಟ ಹುಡುಗರಿದ್ದರು. ಆದರೆ ಅಂಥವರ ನೋಟಕ್ಕೆ, ರೇಗಿಸುವ ಮಾತುಗಳಿಗೆ, ಹೆಸರಿಲ್ಲದ ಪ್ರೇಮ ಪತ್ರಗಳಿಗೆ, ಈ ಕಾಟಿ ಎಂಬ ನಾಟಿ ಸುಂದರಿ' ಕನಸಲ್ಲೂ ಪ್ರತಿಕ್ರಿಯಿಸಲಿಲ್ಲ. ಈ ಮಧ್ಯೆಯೇ ಇವಳ ಹೈಸ್ಕೂಲು ಮುಗಿಯಿತು. ಕಾಲೇಜಿನ ಮೆಟ್ಟಿಲೇರುವ ಮೊದಲೇ ಕಾಟಿ, ಮೇಲಿಂದ ಮೇಲೆ ಅನಾರೋಗ್ಯಕ್ಕೆ ಈಡಾದಳು. ಜ್ವರ, ತಲೆನೋವು, ತಲೆ ಸುತ್ತು, ವಾಂತಿ- ಎಲ್ಲವೂ ವಿಪರೀತವೇ. ಇದನ್ನು ಕಂಡ ಅವಳ ತಂದೆ-ತಾಯಿ-ಅರರೆ, ಇಷ್ಟು ದಿನ ತೆಪ್ಪಗಿದ್ದ ಮಗಳು ಈಗ ಎಡವಟ್ಟು ಮಾಡಿಕೊಂಡಳಾ ಎಂದು ಯೋಚಿಸಿದರು. ಆಕೆಯನ್ನೇ ಹಾಗೆ ಕೇಳಲು ಇಬ್ಬರಿಗೂ ಧೈರ್ಯ ಬರಲಿಲ್ಲ. ಕಡೆಗೊಂದು ದಿನ ಡಾಕ್ಟರ್ ಬಳಿ ಚೆಕ್ ಮಾಡಿಸಿಯೇ ಅನುಮಾನ ಪರಿಹರಿಸಿಕೊಳ್ಳೋಣ ಎಂದುಕೊಂಡು ಮಿಚಿಗನ್‌ನ ಮೆಕ್ ಲಾರೆನ್ ಆಸ್ಪತ್ರೆಗೆ ಹೋದರು. ಕಾಟಿಯನ್ನು ಕೂಲಂಕಷವಾಗಿ ಪರೀಕ್ಷಿಸಿದ ವೈದ್ಯರು ಡೇವ್ ದಂಪತಿಯ ಬಳಿ ಬಂದು ತುಂಬ ನೋವಿನಿಂದ ಹೇಳಿದರು: ನಿಮ್ಮ ಮಗಳಿಗೆ ಬ್ರೈನ್ ಟ್ಯೂಮರ್ ಆಗಿದೆ. ತಕ್ಷಣವೇ ಚಿಕಿತ್ಸೆ ಆಗಬೇಕು. ಆಪರೇಷನ್ ಮಾಡ್ತೇನೆ. ಆದರೆ, ಆಕೆ ತುಂಬ ವರ್ಷ ಬದುಕ್ತಾಳೆ ಅಂತ ಗ್ಯಾರಂಟಿ ಕೊಡಲಾರೆ. ಕ್ಷಮಿಸಿ...'

ಕಡೆಗಾಲದಲ್ಲಿ ತಮ್ಮ ಬದುಕಿಗೆ ಆಧಾರವಾಗುತ್ತಾಳೆ ಎಂದು ಕೊಂಡಿದ್ದಂಥ ಮಗಳಿಗೆ ಬ್ರೈನ್ ಟ್ಯೂಮರ್ ಎಂದು ಗೊತ್ತಾದಾಗ ಯಾವ ತಾಯ್ತಂದೆಯರಿಗೆ ತಾನೆ ಎದೆಯೊಡೆಯದಿರುತ್ತೆ ಹೇಳಿ? ವಿಷಯ ತಿಳಿದಾಕ್ಷಣ ಕಾಟಿಯ ಅಪ್ಪ-ಅಮ್ಮ ಕಣ್ಣೀರು ಬತ್ತಿ ಹೋಗುವಷ್ಟು ಅತ್ತರು. ಜೀಸಸ್, ಈ ಒಂದೇ ಒಂದು ವಿಷಯದಲ್ಲಿ ಕರುಣೆ ತೋರಲಾರೆಯಾ' ಎಂದು ಬೇಡಿಕೊಂಡರು. ಮಗಳ ಕಾಯಿಲೆ ಮಂಗಮಾಯವಾಗಲಿ ಎಂದು ಹರಕೆ ಕಟ್ಟಿಕೊಂಡರು. ದಿನಕ್ಕೆರಡು ಬಾರಿ ಪ್ರಾರ್ಥನೆಗೆ ನಿಂತರು. ಈ ಮಧ್ಯೆಯೇ ಕಾಟಿಗೆ ಆಪರೇಷನ್ ಆಗಿಹೋಯಿತು.

ಕಷ್ಟವೆಂದರೆ ಏನೆಂದೇ ತಿಳಿಯದೆ ಬೆಳೆದಿದ್ದವಳು ಕಾಟಿ. ರೋಗಿಗಳ ಆರ್ತನಾದ, ಸಾವಿನ ಕ್ರೌರ್ಯ, ಔಷಗಳ ಕಮಟುವಾಸನೆ, ಶಸ್ತ್ರಚಿಕಿತ್ಸೆಗಳ ಅನಿವಾರ್ಯತೆ, ಆ ಕ್ಷಣದ ಹೃದಯ ಹಿಂಡುವಂಥ ಯಾತನೆ ಇದೆಲ್ಲಾ ಅವಳಿಗೆ ಹೊಸ ಅನುಭವ. ಆಪರೇಷನ್‌ನ ನೆಪದಲ್ಲಿ ಅವಳು ಐಸಿಯುನಲ್ಲಿ ಇದ್ದಳಲ್ಲ? ಆಗ ಅಕ್ಕಪಕ್ಕದ ಬೆಡ್‌ಗಳಲ್ಲೇ ಇದ್ದ ಒಂದಿಬ್ಬರು ನೋಡನೋಡುತ್ತಲೇ ಸತ್ತು ಹೋಗಿದ್ದರು. ಕಡೆಯ ಕ್ಷಣದ ತನಕ ಹೆಣಗಾಡುವುದು, ಕಡೆಯ ಕ್ಷಣದ ಬಳಿಕ ಹೆಣವಾಗುವುದು... ಬದುಕೆಂದರೆ ಇಷ್ಟೇನೇ' ಎಂದು ಅವಳಿಗೆ ಆಗಲೇ ಅರ್ಥವಾಗಿ ಹೋಯಿತು. ತನಗೆ ಬ್ರೈನ್ ಟ್ಯೂಮರ್ ಇದೆ. ಆದರೆ ಈ ಸಂಗತಿಯನ್ನು ಅಪ್ಪ-ಅಮ್ಮ, ಬೇಕೆಂದೇ ಮುಚ್ಚಿಟ್ಟಿದ್ದಾರೆ ಎಂಬ ವಿಷಯ ಕೂಡ ತಿಳಿದುಹೋಯಿತು. ಎದೆಯೊಳಗಿನ ನೋವು ಹಾಗೇ ಇರಲಿ, ಮೇಲ್ನೋಟಕ್ಕೆ ನಾನು ನಗುತ್ತಲೇ ಇರಬೇಕು ಅಂದುಕೊಂಡಳು ಕಾಟಿ. ಈ ಸಂಕಟವನ್ನೆಲ್ಲ ಮರೆಯಬೇಕಾದರೆ ಮೆಡಿಟೇಷನ್' ಕಲಿಯಬೇಕು ಅನ್ನಿಸಿತು, ಸಂತರೇ ಬೆರಗಾಗುವಂತೆ ಅದನ್ನು ಕಲಿತೂಬಿಟ್ಟಳು.

ಶಸ್ತ್ರಚಿಕಿತ್ಸೆಯ ನಂತರ, ಹೊಸ ಹುಟ್ಟು ಪಡೆದವಳಂತೆ ಕಾಲೇಜಿಗೆ ನಡೆದು ಬಂದಳು ಕಾಟಿ. ಆಗಲೂ ಅಷ್ಟೆ. ಅವಳ ಒಂದು ಕುಡಿ ನೋಟಕ್ಕೆ, ಪಿಸುಮಾತಿಗೆ, ಹುಡುಗರು ಕ್ಯೂ ನಿಂತಿದ್ದರು. ಆಕೆ ಒಮ್ಮೆ ಐ ಲವ್ ಯೂ' ಅಂದುಬಿಟ್ಟರೆ- ಜೀವ ಪಾವನವಾದಂತೆ ಎಂದು ಭಾವಿಸಿದ್ದ ಪಡ್ಡೆಗಳೂ ಇದ್ದರು. ಉಳಿದ ಹುಡುಗರೆಲ್ಲ ಕಾಟಿ ಎಂಬ ನಾಟಿ ಸುಂದರಿಗೆ ಪ್ರೊಪೋಸ್ ಮಾಡುವುದು ಹೇಗೆ ಎಂದು ಗೊತ್ತಾಗದೆ ಒದ್ದಾಡುತ್ತಿದ್ದಾಗಲೇ ಅವಳದೇ ತರಗತಿಯ ನಿಕ್‌ಗಾಡ್‌ವಿನ್ ಎಂಬ ಸುಂದರಾಂಗ 2002ರ ಫೆಬ್ರವರಿ 14ರಂದು ಒಂದೇ ಒಂದು ಗುಲಾಬಿಯೊಂದಿಗೆ ಅವಳೆದುರು ನಿಂತು ಹೇಳೇಬಿಟ್ಟ: i love you! ಅವತ್ತು, ಅವತ್ತು ಮಾತ್ರ ಅದೇನಾಯ್ತೋ ಏನೋ; ಕಾಟಿಯ ಎದೆಯೊಳಗಿದ್ದ ಆಸೆಯ ಕಾಮನಬಿಲ್ಲು ಝೇಂಕರಿಸಿತು. ಅವನೊಂದಿಗೆ' ಅವಳ ಕಣ್ಣು ಮಾತಾಡಿದವು. ತುಟಿಗಳು, ಅವಳಿಗೂ ಕೇಳಿಸದಷ್ಟು ಮೆತ್ತಗೆ ಐ ಲವ್ ಯು ಟೂ' ಅಂದೇ ಬಿಟ್ಟವು!

ಲೇಖನದ ಮುಂದಿನ ಭಾಗ : ನಾನು ಕಾಟಿಯನ್ನು ಮದುವೆಯಾಗ್ತೇನೆ »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X