ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವ ರಾಶಿಯವನ ವರ್ತನೆ ಹೇಗಿರುತ್ತೆ?

By Super
|
Google Oneindia Kannada News

Zodiac prediction only for workers
ರಾಶಿ ಭವಿಷ್ಯ' ಎಂಬುದರ ಮೋಡಿಯೇ ಅಂಥಾದ್ದು. ಅದು ಎಲ್ಲರನ್ನೂ ಆಕರ್ಷಿಸುತ್ತದೆ. ಕಟ್ಟಾ ನಾಸ್ತಿಕರೂ ಕೂಡ ಒಂದು ಕುತೂಹಲದಿಂದಲೇ ರಾಶಿ ಭವಿಷ್ಯ ಓದುತ್ತಾರೆ. ತಮ್ಮ ವರ್ತನೆಗೆ ಸಂಬಂಧಿಸಿದ ಸಾಲು ಕಂಡರೆ ಖುಷಿಯಾಗುತ್ತಾರೆ. ಈ ವಾರ, ನೌಕರರ ರಾಶಿ ಭವಿಷ್ಯವಿದೆ; ಅದರಲ್ಲಿರುವ ಒಳ್ಳೆಯ ಗುಣಗಳು ನಿಮಗೂ, ಕೆಟ್ಟ ಸಂಗತಿಗಳು ನಿಮ್ಮ ಶತ್ರುಗಳಿಗೂ ತಾಳೆಯಾಗಬಹುದು. ಇದು ಏಪ್ರಿಲ್ ಮೊದಲ ದಿನದ ವಿಶೇಷ!

* ಎಆರ್ ಮಣಿಕಾಂತ್

ಮಾರ್ಚ್ 21-ಏಪ್ರಿಲ್ 19 : ಈ ದಿನಾಂಕಗಳ ಮಧ್ಯೆ ಹುಟ್ಟಿದ ನೌಕರರು ಎಲ್ಲರೊಂದಿಗೂ ಫ್ರೆಂಡ್ಲಿ ಆಗಿರ್‍ತಾರೆ. ಆದರೆ, ಒಬ್ಬರ ಕೈ ಕೆಳಗೆ ಕೆಲಸ ಮಾಡಲು ಇಷ್ಟಪಡೋದಿಲ್ಲ. ಆದರೂ, ಅನಿವಾರ್ಯ ಅನ್ನಿಸಿದಾಗ, ಮುಖ ಸಿಂಡರಿಸಿಕೊಂಡೇ ಆ ಕೆಲಸ ಒಪ್ಪಿಕೊಳ್ತಾರೆ. ಇಷ್ಟು ಹೊತ್ತಿಗೇ ಬರಬೇಕು, ಇಂಥ ಟೈಮ್‌ಗೇ ಹೋಗ್ಬೇಕು ಅನ್ನೋ ರೂಲ್ಸ್ ಕಂಡ್ರೆ ಇವರಿಗೆ ಕೆಂಡಾಮಂಡಲ ಸಿಟ್ಟು. ನಾನು ಫ್ರೀ ಆಗಿರ್‍ಬೇಕು. ಅಂಥ ಕಂಡೀಷನ್ನೆಲ್ಲ ಹೇಳ್ಬೇಡಿ. ಅದೆಲ್ಲ ಕೇಳ್ತಿದ್ರೆ ತಲೆ ಚಿಟ್ಟು ಹಿಡಿಯುತ್ತೆ. ಯಾವುದಾದ್ರೂ ಹೊಸಾ ಪ್ರಾಜೆಕ್ಟ್ ವಹಿಸಿ ನಂಗೆ. ಆಗ ನನ್ನ ತಾಕತ್ತೇನು ಅಂತ ತೋರಿಸ್ತೀನಿ ಎಂದು ಈ ಜನ ಮೇಲಿಂದ ಮೇಲೆ ಹೇಳುತ್ತಿರುತ್ತಾರೆ. ಒಂದು ಶಿಸ್ತು, ಕಟ್ಟುಪಾಡಿಗೆ ಯಾವತ್ತೂ ಒಳಪಡದ ಇವರು, ಮಾಡಿದ ಕೆಲಸಕ್ಕೆ ತಕ್ಕ ಗೌರವ ಮತ್ತು ಸಂಬಳ ಸಿಗಬೇಕು ಅಂತ ವಾದ ಮಾಡ್ತಾರೆ. ತಮಗೆ ವಹಿಸಿದ ಕೆಲಸವನ್ನು ಶ್ರದ್ಧೆಯಿಂದ ಮಾಡಿ ಮುಗಿಸ್ತಾರೆ. ತಮ್ಮ ಕೆಲಸದಲ್ಲಿ ಯಾರಾದ್ರೂ ತಪ್ಪು ಹುಡುಕಲು ಬಂದ್ರೆ- ನಿಮ್ಮನ್ನು ಇಲ್ಲಿಗೆ ಬನ್ನಿ ಅಂತ ಕರೆದವರು ಯಾರು? ನೀನು ಯಾವ ಸೀಮೆ ದಾಸಯ್ಯ ನನ್ನ ತಪ್ಪು ಹುಡುಕೋಕೆ' ಎಂದು ಜಗಳಕ್ಕೇ ಹೋಗಿಬಿಡ್ತಾರೆ.

ಏಪ್ರಿಲ್ 20- ಮೇ 20 :
ಶ್ರದ್ಧೆ -ಶಿಸ್ತು ಮತ್ತು ದಕ್ಷತೆ, ಏಪ್ರಿಲ್-ಮೇ ನಡುವೆ ಹುಟ್ಟಿದ ನೌಕರರ ಪ್ಲಸ್ ಪಾಯಿಂಟ್. ಹಿಡಿದ ಕೆಲಸವನ್ನು ಹತ್ತು ಜನ ಮೆಚ್ಚುವಂತೆ ಮಾಡುವುದು ಇವರ ಅಗ್ಗಳಿಕೆ. ಇಂಥ ಕೆಲಸ ಇಂತಿಷ್ಟೇ ಹೊತ್ತಲ್ಲಿ ಮುಗೀಬೇಕು ಎಂದು ಇವರು ಮೊದಲೇ ಪ್ಲಾನ್ ಹಾಕೋದುಂಟು. ಒಪ್ಪಿಕೊಂಡ ಕೆಲಸವನ್ನು ಅದೆಷ್ಟೇ ಕಷ್ಟವಾದ್ರೂ ಮಾಡೇ ಮಾಡ್ತಾರೆ ನಿಜ. ಆದರೆ ಇವರಿಗೆ ಟೈಂ ಸೆನ್ಸ್ ದೇವರಾಣೆಗೂ ಇರಲ್ಲ. ಅದೇ ಕಾರಣದಿಂದ ಬೆಳಗ್ಗೆ ಒಂಬತ್ತು ಗಂಟೆಗೆ ಮುಗೀಬೇಕಿದ್ದ ಕೆಲಸ ಸಂಜೆ ಆರೂವರೆ ತನಕ ಎಳೆಯುತ್ತೆ. ಇಷ್ಟಾದರೂ ಮಾಡಿದ ಕೆಲಸ ಖಡಕ್' ಆಗಿರುತ್ತಲ್ಲ- ಅದಕ್ಕೇ ಎಲ್ರೂ ಇವರನ್ನು ವಿಪರೀತ ಇಷ್ಟಪಡ್ತಾರೆ. ತಡವಾದ್ರೂ ಪರವಾಗಿಲ್ಲ. ಕಾಯ್ತಾ ಇರ್‍ತಾರೆ. ಒಂದು ಹೊಸ ಪ್ರಾಜೆಕ್ಟ್ ವಹಿಸಿಕೊಟ್ಟು, ಅದಕ್ಕೆ ಸೂಕ್ತ ಅನುಕೂಲ ಒದಗಿಸದಿದ್ರೆ ಈ ನೌಕರರು ವಿಪರೀತ ಬೇಸರ ಮಾಡ್ಕೋತಾರೆ. ನನ್ನ ಹಾಗೇನೇ ಉಳಿದವರೂ ದುಡಿಯಲಿ ಎಂದು ಆಸೆ ಪಡ್ತಾರೆ. ಜತೆಗಿದ್ದವರಿಗೂ ಅದನ್ನೇ ಹೇಳ್ತಾರೆ. ಈ ಕಾರಣದಿಂದಲೇ ಶತ್ರುಗಳನ್ನು ಸೃಷ್ಟಿಸಿಕೊಳ್ತಾರೆ. ತಮಾಷೆ ಕೇಳಿ: ಹಿಡಿದ ಕೆಲಸ ಮುಗಿಸಲು ಮೈಮರೆತು ದುಡಿಯುವ ಇವರು, ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದೇ ಹೋದಾಗ ಒಳಗೊಳಗೇ ಕೊರಗುತ್ತಾರೆ. ಜತೆಗಾರರೊಂದಿಗೆ ಕಷ್ಟ ಹೇಳಿಕೊಳ್ಳುತ್ತಾರೆ. ಹತ್ತು ಜನರಿಂದ ಅನುಕಂಪ ಬಯಸುತ್ತಾರೆ. ಆದರೆ- ಜಪ್ಪಯ್ಯಾ ಅಂದ್ರೂ ತಮ್ಮ ಬಾಸ್' ಜತೆ ಖಡಾಖಡಿಯ ಧ್ವನಿಯಲ್ಲಿ ಇಷ್ಟೆಲ್ಲ ದುಡೀತಿದೀನಲ್ಲ, ಸ್ವಲ್ಪ ಸಂಬಳ ಹೆಚ್ಚಿಸಬಾರ್‍ದಾ?' ಎಂದು ಕೇಳುವುದಿಲ್ಲ.

ಮೇ 21 - ಜೂನ್ 21 : ಈ ಜನರದ್ದು ವಾದ ಮತ್ತು ವಿತಂಡವಾದ. ಆಫೀಸಿನಲ್ಲಿ ಇವರು ಕೆಲಸ ಮಾಡೋದಕ್ಕಿಂತ ವಟವಟ ಅಂತ ಮಾತಾಡೋದೇ ಜಾಸ್ತಿ. ಈ ಜನ, ಕ್ಷಣ ಪಿತ್ತ ಡಿಪಾರ್ಟ್‌ಮೆಂಟಿನವರು. ಯಾವಾಗ ಹೇಗೆ ವರ್ತಿಸ್ತಾರೆ ಅಂತ ಹೇಳೋಕಾಗಲ್ಲ. ಸುತ್ತಾಡೋದು ಅಂದ್ರೆ, ಟೂರ್ ಹೋಗೋದು ಅಂದ್ರೆ ಇವರಿಗೆ ತುಂಬಾ ಇಷ್ಟ. ಹಾಗೇನೇ ಆಫೀಸೊಳಗೆ ಗಾಸಿಪ್ ಸುದ್ದಿ ಹಬ್ಬಿಸೋದು ಅಂದ್ರೂ ಇವರಿಗಿಷ್ಟ. ಇದು ಗುಟ್ಟಿನ ವಿಷಯ. ಯಾರಿಗೂ ಹೇಳ್ಬಾರ್‍ದು...' ಎಂದುಕೊಂಡೇ ಈ ಜನ ಆಫೀಸಿನ ತುಂಬಾ ಸುದ್ದಿ ಹಬ್ಬಿಸಿರುತ್ತಾರೆ. ಅದೇ ಕಾರಣಕ್ಕೆ ಆಲ್ ಇಂಡಿಯಾ ರೇಡಿಯೊ' ಎಂದು ಕರೆಸಿಕೊಳ್ಳುತ್ತಿರುತ್ತಾರೆ. ಹೆಚ್ಚಿನ ಸಮಯವನ್ನು ಇವರು ಹರಟೆಗೆ, ರಹಸ್ಯ ಸುದ್ದಿ ಸಂಗ್ರಹಣೆಗೆ ಬಳಸುವುದರಿಂದ ಆಫೀಸಿನಲ್ಲಿ ಅಂಥ ಕೆಲಸವನ್ನೇನೂ ಮಾಡುವುದಿಲ್ಲ. ಈ ಸಂಬಂಧವಾಗಿ ಅವರಿಗೆ ಗಿಲ್ಟಿ ಫೀಲಿಂಗ್ ಖಂಡಿತ ಇರುವುದಿಲ್ಲ. ಆದರೆ, ಹತ್ತು ಜನರ ಮುಂದೆ ಈ ಜನ ಹೇಗೆಲ್ಲ ಸ್ಕೋಪ್ ತಗೋತಾರೆ ಅಂದ್ರೆ- ಅದನ್ನು ಕಂಡು ಜತೆಗಿರುವ ಸಹೋದ್ಯೋಗಿಗಳು ಮಾತ್ರವಲ್ಲ; ಕಂಪನಿಯ ಬಾಸ್ ಕೂಡ ಹೊಟ್ಟೆಕಿಚ್ಚು ಪಡುವುದುಂಟು, ಛೀ, ಎಂದು ಅಸಹ್ಯ ಪಡುವುದೂ ಉಂಟು.

ಜೂನ್ 22- ಜುಲೈ 21 : ನಾವಾಯ್ತು, ನಮ್ಮ ಕೆಲಸ ಆಯ್ತು ಅನ್ನೋದು ಈ ಜನರ ಪಾಲಿಸಿ, ಇವರು ಯಾವತ್ತೂ ನಾಳೆ ಹೇಗೋ ಏನೋ ಎಂದು ಚಿಂತೆ ಮಾಡಲ್ಲ. ಮೇಲಿನವರಿಗೆ ಮೇಲಿಂದ ಮೇಲೆ ಸೆಲ್ಯೂಟ್ ಹೊಡೆಯುವುದು, ಅವರನ್ನು ಪ್ಲೀಸ್ ಮಾಡುವುದು ಅಂದರೆ, ಇವರಿಗೆ ಒಂಚೂರೂ ಇಷ್ಟವಿಲ್ಲ. ಅದೇ ಕಾರಣದಿಂದ ನೌಕರಿಯ ಅಭದ್ರತೆ ಎದುರಿಸ್ತಾರೆ. ಪ್ರೊಮೋಷನ್‌ನಿಂದ ವಂಚಿತರಾಗ್ತಾರೆ. ಕಷ್ಟಗಳಿಗೆ ಸಿಕ್ಕಿಕೊಳ್ತಾರೆ. ನೇರಾನೇರ ಮಾತು, ನಡವಳಿಕೆಯಿಂದ ಅಹಂಕಾರಿ ಎಂದು ಕರೆಸಿಕೊಳ್ತಾರೆ. (ಇವರಿಗೆ ಒಂದಿಷ್ಟು ಜಂಭ ಇರುತ್ತೆ ಅನ್ನೋದೂ ಸುಳ್ಳಲ್ಲ!) ಬೆಳಗ್ಗೆ ೧೦ ರಿಂದ ಸಂಜೆ ೫.೩೦ರ ತನಕ ಕೆಲಸ ಅಂದ್ರೆ-ಅಷ್ಟೂ ಹೊತ್ತು ಕತ್ತೆ ಥರಾನೇ ದುಡೀತಾರೆ. ತಮ್ಮ ಪಾಳಿ ಮುಗೀತು ಅಂದ ತಕ್ಷಣ ಎದ್ದು ಹೋಗ್ತಾ ಇರ್‍ತಾರೆ. ಆಡುವ ಮಾತುಗಳು ತುಂಬಾ ನೇರವಾಗಿರ್‍ತವೆ. ಕಟುವಾಗಿಯೂ ಇರ್‍ತವೆ. ಈ ಕಾರಣದಿಂದಲೇ ಇವರಿಗೆ ಗೆಳೆಯರು ಕಮ್ಮಿ.

ಜುಲೈ 22-ಆಗಸ್ಟ್ 21 : ನಾನೇ ಬೇರೆ - ನನ್ನ ಸ್ಟೈಲೇ ಬೇರೆ' ಎಂಬುದು ಜುಲೈ-ಆಗಸ್ಟ್ ಮಧ್ಯಭಾಗದಲ್ಲಿ ಹುಟ್ಟಿದ ನೌಕರರ ಡೈಲಾಗ್. ಸ್ವತಂತ್ರವಾಗಿ ಕೆಲಸ ಮಾಡೋದೇ ಇವರಿಗಿಷ್ಟ. ತಮ್ಮ ಮಹತ್ವವನ್ನು ಹತ್ತು ಜನ ತಿಳಿಯಲಿ ಎಂದು ಇವರು ಆಸೆಪಡುವುದುಂಟು. ಅದೇ ಕಾರಣದಿಂದ ಅವರನ್ನು ಮೆಚ್ಚುವವರು ಹಾಗೂ ಟೀಕಿಸುವವರು ಸಮಾನ ಪ್ರಮಾಣದಲ್ಲಿರ್‍ತಾರೆ. ಒಪ್ಪಿಕೊಂಡ ಕೆಲಸವನ್ನು ಮಾಡ್ತಾರೆ ನಿಜ. ಆದರೆ ಅದೇ ಸಂದರ್ಭದಲ್ಲಿ ತಾವೂ ಒಂದಿಷ್ಟು ಬೆಳೆದಿರುತ್ತಾರೆ. ತಮ್ಮ ಕೈ ಕೆಳಗಿನವರಿಗೆ ಕೆಲಸ ಹೇಳಿಕೊಡುವುದು ಅಂದರೆ ಈ ಜನರಿಗೆ ಇನ್ನಿಲ್ಲದ ಉತ್ಸಾಹ. ಒಂದೇ ಬಾರಿಗೆ ನಾಲ್ಕೈದು ಕೆಲಸ ಮಾಡಲು ಹೋಗುವ ಇವರು, ಅದೇ ಕಾರಣದಿಂದ ನಾನು ಇಲ್ಲದೇ ಹೋದ್ರೆ ಆಫೀಸಿನಲ್ಲಿ ಕೆಲಸವೇ ಆಗೋದಿಲ್ಲ ಎಂಬಂತೆ ವರ್ತಿಸುವುದೂ ಉಂಟು. ಯಾವಾಗ್ಲೂ ಟೆನ್ಷನ್‌ನಲ್ಲೇ ಇರುವ ಈ ಜನ ಹೊಗಳಿಕೆಗೆ ಉಬ್ಬುವುದಿಲ್ಲ; ತೆಗಳಿಕೆಗೆ ಕುಗ್ಗುವುದೂ ಇಲ್ಲ. ಕೆಲಸದ ಹೊರೆ ಜಾಸ್ತಿಯಾದಾಗ ಮುಖ ಸಿಂಡರಿಸ್ತಾರೆ ನಿಜ. ಆದ್ರೆ, ನನ್ನಿಂದಾಗಲ್ಲಪ್ಪ ಅಂತ ಯಾವತ್ತೂ ಹೇಳೋದಿಲ್ಲ.

ಆಗಸ್ಟ್ 22- ಸೆಪ್ಟೆಂಬರ್ 22 : ಈ ಜನ ವಿಪರೀತ ಅನ್ನುವಷ್ಟು ಭಾವುಕರು. ತಮ್ಮ ಕೆಲಸವನ್ನು ವಿಪರೀತ ಪ್ರೀತಿಸ್ತಾರೆ. ಇಡೀ ಜಗತ್ತನ್ನೇ ಮೆಚ್ಚಿಸಬೇಕು ಅಂತ ಕೆಲಸ ಮಾಡ್ತಾರೆ. ಆದರೆ, ಅದೇ ವೇಳೆಯಲ್ಲಿ ಕೆಲವರ ಬಗ್ಗೆ ಮೊದಲೇ ಒಂದು ನಿರ್ಧಾರಕ್ಕೆ ಬಂದು ಬಿಟ್ಟಿರುತ್ತಾರೆ. ತುಂಬ ಸುಲಭವಾಗಿ ಸಿಟ್ಟಾಗ್ತಾರೆ. ಜಗಳವಾಡ್ತಾರೆ. ಅಷ್ಟೇ ಬೇಗ ಸಾರಿ' ಕೇಳ್ತಾರೆ. ಹಾಗಾಗಿ ಇವರನ್ನು ದೂರ ಮಾಡಲು ಮನಸ್ಸು ಬರೊಲ್ಲ. ಪ್ರಶಾಂತ ವಾತಾವರಣದಲ್ಲಿ ಕೂತು ಕೆಲಸ ಮಾಡಬೇಕು ಅನ್ನೋದು ಈ ಜನರಿಗಿಷ್ಟ. ಆದರೆ ಅತಿಯಾದ ಉತ್ಸಾಹದಲ್ಲಿ ಗಣಪತೀನ ಮಾಡಪ್ಪ ಅಂದ್ರೆ ಅವರ ಅಪ್ಪನನ್ನು ಮಾಡೋದೂ' ಉಂಟು. ತಮ್ಮ ಕೆಲಸಕ್ಕೆ ಒಂದಿಷ್ಟು ಕಡಿಮೆ ಸಂಬಳ ಸಿಕ್ಕಿದರೂ ಪರವಾಗಿಲ್ಲ. ಆದರೆ ಮಾಡಿದ ಕೆಲಸವನ್ನು ಎಲ್ಲರೂ ಒಪ್ಪಿಕೋಬೇಕು ಅನ್ನೋದು ಇವರ ವಾದ. ತುಂಬ ಇಷ್ಟವಾದವರ ಮುಂದೆ ಬದುಕಿನ ಎಲ್ಲ ರಹಸ್ಯವನ್ನೂ ಹೇಳಿಕೊಳ್ಳುವುದು, ಸಮಸ್ಯೆಗಳಿಗೆ ಸಲಹೆ ಕೇಳುವುದು ಇವರ ಗುಣವಿಶೇಷ.

ಸೆಪ್ಟೆಂಬರ್ 23 -ಅಕ್ಟೋಬರ್ 22 : ಹೇಗೆ ಮಾತಾಡಿದ್ರೆ ಏನಾಗಬಹುದು ಎಂದು ಮೊದಲೇ ಯೋಚಿಸಿ, ಆಮೇಲೆ ಮಾತಾಡುವುದು; ಒಂದು ಲಾಜಿಕ್ ಇಟ್ಟುಕೊಂಡೇ ಕೆಲಸ ಮಾಡುವುದು ಈ ಜನರ ಸ್ಪೆಶಾಲಿಟಿ. ಸ್ವಾರಸ್ಯ ಕೇಳಿ: ಇವರಿಗೆ ಕೆಲಸದ ಬಗ್ಗೆ ತುಂಬಾ ಗೊತ್ತಿರುತ್ತೆ. ಆದರೆ, ಮೂಡ್ ಇದ್ರೆ ಮಾಡ್ತಾರೆ. ಇಲ್ಲ ಅಂದ್ರೆ- ದೇವರು ಬಂದವರ ಥರಾ ಕೂತು ಬಿಡ್ತಾರೆ. ಆ ಸಂದರ್ಭ ಗೊತ್ತಿಲ್ಲದೆ ಯಾರಾದ್ರೂ ಕೆಣಕಿದ್ರೆ ಬೈದೇ ಬಿಡ್ತಾರೆ. ಇಲ್ಲಾಂದ್ರೆ-ಕೆಣಕಿದವನಿಗೂ ಉತ್ತರ ಕೊಡದೆ ಡೋಂಟ್ ಕೇರ್' ಎಂಬಂತೆ ಸುಮ್ಮನಿರ್‍ತಾರೆ. ಯಾರಾದ್ರೂ ಹೊಗಳಿದ್ರೆ ಖುಷಿಪಡ್ತಾರೆ ನಿಜ. ಆದ್ರೆ, ಅದರ ಹಿಂದೆ ವ್ಯಂಗ್ಯವಿದೆಯಾ? ಹೊಗಳಿದವನ ಸ್ವಾರ್ಥವಿದೆಯಾ ಅಂತ ಕೂಡ ಯೋಚಿಸ್ತಾರೆ. ಉಳಿದವರಿಗಿಂತ ಜಾಸ್ತಿ ತಿಳ್ಕೊಂಡಿರ್‍ತಾರೆ ನಿಜ. ಆದರೆ, ಮೂಡ್ ಬಂದರೆ ಮಾತ್ರ ಕೆಲಸ ಮಾಡುವುದರಿಂದ, ಇವರ ಪ್ರತಿಭೆಯ ಉಪಯೋಗ ಆಗುವುದೇ ಕಡಿಮೆ. ಸ್ವಾರಸ್ಯವೆಂದರೆ, ಹತ್ತು ಮಂದಿಯ ಮುಂದೆ ಹೀರೋ ಆಗಬೇಕು ಎಂಬ ಹಪಹಪಿ ಇವರಿಗೂ ಇರುವುದಿಲ್ಲ!

ಅಕ್ಟೋಬರ್ 23-ನವೆಂಬರ್ 21 : ನಾನುಂಟು ಮೂರು ಲೋಕವುಂಟು' ಎಂಬಂತೆ ಮೆರೆಯುವುದು ಈ ಗುಂಪಿನ ಜನರ ಕೆಟ್ಟ ಗುಣ. ಇವರಿಗೆ ಅತೀ ಅನ್ನುವಷ್ಟು ಆತ್ಮವಿಶ್ವಾಸ. ನಾನು ಯಾವತ್ತೂ ತಪ್ಪೇ ಮಾಡೋದಿಲ್ಲ ಎಂದು ವಾದಿಸ್ತಾರೆ. ಮಾಡಿರುವ ತಪ್ಪು ಎದುರಿಗಿದ್ರೂ ಅದನ್ನು ಒಪ್ಪೋದಿಲ್ಲ. ಬದಲಿಗೆ ಇದಕ್ಕೆ ಬೇರೆ ಯಾರೋ ಕಾರಣ ಎಂದೆಲ್ಲ ವಾದ ಶುರು ಮಾಡ್ತಾರೆ. ಮೊದಲು ನಾನು ಉದ್ಧಾರ ಆಗಬೇಕು' ಅಂತ ಯೋಚಿಸ್ತಾರೆ. ಹಾಗೇ ನಡ್ಕೋತಾರೆ. ಮೇಲಿಂದ ಮೇಲೆ- ನನ್ನನ್ನು ಬಿಟ್ರೆ ಇಲ್ಲ ಎಂದು ವಾದಿಸಿ, ಹಲವರ ನಿಷ್ಟೂರ ಕಟ್ಟಿಕೊಳ್ತಾರೆ. ತಮ್ಮ ಕೆಲಸದಲ್ಲಿ ಯಾರಾದ್ರೂ ತಪ್ಪು ಹುಡುಕಿದ್ರೆ ಇವರಿಗೆ ಆಗಿಬರೋದಿಲ್ಲ. ತಪ್ಪು ತೋರಿಸಿದವರ ಮೇಲೆ ಜಗಳಕ್ಕೇ ನಿಂತುಬಿಡ್ತಾರೆ. ತಲೆ ಕೆಟ್ಟರೆ, ಒಂದೇಟು ಹಾಕಿಯೂ ಬಿಡ್ತಾರೆ. ಇವರ ವೀಕ್‌ನೆಸ್ಸು-ಹೊಗಳಿಕೆಗೆ ತುಂಬ ಬೇಗ ಪಡ್ಚಾ ಆಗುವುದು! ಈ ಗುಂಪಿನ ಜನರನ್ನು ವಿನಾಕಾರಣ ಹೊಗಳಿದ್ರೆ ಸುಲಭವಾಗಿ ಒಂದಕ್ಕೆರಡು ಕೆಲಸ ಮಾಡಿಕೊಡ್ತಾರೆ.

ನವೆಂಬರ್ 22-ಡಿಸೆಂಬರ್ 21 : ಈ ಜನ ಎಂಥ ಸಂದರ್ಭದಲ್ಲೂ ಸಂಯಮ ಕಳೆದುಕೊಳ್ಳೋದಿಲ್ಲ. ಯಾವಾಗ್ಲೂ ಅಂತರ್ಮುಖಿಗಳಾಗಿರ್‍ತಾರೆ. ನಮ್ಮ ಪಾಲಿಗೆ ಇವತ್ತೇ ಕೊನೆಯದಿನ ಅನ್ನುವವರಂತೆ ಕೆಲಸದ ಪ್ರತಿಯೊಂದು ಕ್ಷಣವನ್ನೂ ಎಂಜಾಯ್ ಮಾಡ್ತಾರೆ. ಜತೆಗಿರುವವರಿಗೆ ಸಹಾಯ ಮಾಡೋದು ಅಂದ್ರೆ ಇವರಿಗಷ್ಟ. ಈ ಸಹಾಯ ಮಾಡುವ ಗುಣವೇ ಅವರನ್ನು ಹತ್ತು ಮಂದಿ ಮೆಚ್ಚುವಂತೆ ಮಾಡುತ್ತೆ. ಯಾವುದೇ ವಿಷಯವಾದ್ರೂ ಇವರು ಅವಸರದಲ್ಲಿ ನಿರ್ಧಾರ ತಗೊಳ್ಳೋದಿಲ್ಲ. ದೂರದಿಂದ ಗಮನಿಸಿದ್ರೆ ಸೋಮಾರಿಗಳ ಥರ ಕಾಣ್ತಾರೆ ನಿಜ. ಆದರೆ, ಅವರು ಯಾವತ್ತೂ ಸೋಮಾರಿಗಳಾಗಿ ಬದುಕೋದಿಲ್ಲ. ಯಾವಾಗ್ಲೂ ಖುಷಿಯಿಂದಿರುವ ಕಾರಣದಿಂದಲೇ ಇವರನ್ನು ಸುತ್ತಮುತ್ತಲಿನವರು ಸಖತ್ ಶ್ರೀಮಂತ, ಕಷ್ಟ ಅಂದ್ರೆ ಏನೆಂದೇ ಗೊತ್ತಿಲ್ಲದ ಆಸಾಮಿ ಎಂದೆಲ್ಲಾ ಕರೆಯುವುದುಂಟು. ಆದರೆ ವಾಸ್ತವ ಹಾಗಿರುವುದಿಲ್ಲ. ಈ ಗುಂಪಿನ ಜನರ ಬದುಕಿನ ರಹಸ್ಯಗಳು, ಅವರದೇ ಬಳಗದ ಕೆಲವೇ ಮಂದಿಗೆ ಮಾತ್ರ ಗೊತ್ತಿರುತ್ತೆ. ಇನ್ನೂ ವಿವರಿಸಿ ಹೇಳಬೇಕೆಂದರೆ, ನವೆಂಬರ್-ಡಿಸೆಂಬರ್ ಮಧ್ಯ ಭಾಗದಲ್ಲಿ ಹುಟ್ಟಿದ ಜನ ಒಂಥರಾ ಒಳಮುಚ್ಚುಗ'ದ ಥರಾ ಬದುಕಿಬಿಡ್ತಾರೆ!

ಡಿಸೆಂಬರ್ 22 - ಜನವರಿ 20 : ಕಾಯಕವೇ ಕೈಲಾಸ' ಎಂದು ನಂಬಿ ಬದುಕುವ ಜನ ಇವರು. ಇನ್ನೊಬ್ಬರ ಬಗ್ಗೆ ಹಗುರವಾಗಿ ಮಾತಾಡುವುದು, ಕಾಲೆಳೆಯುವ ರಾಜಕೀಯದಿಂದ ಇವರು ದೂರ ದೂರ. ಎಲ್ಲ ಕೆಲಸನ್ನೂ ನಾನೇ ಮಾಡ್ತೀನಿ ಎಂದು ಹಾತೊರೆಯುವುದು ಇವರ ಕೆಟ್ಟಗುಣ. ಹಾಗೆ, ಒಂದೊಂದೇ ಕೆಲಸ ಮಾಡ್ತಾರಲ್ಲ; ಅದಕ್ಕೆಲ್ಲಾ ವಿಪರೀತ ಅನ್ನುವಂಥ ಮರ್‍ಯಾದೆ ಹಾಗೂ ಸಂಬಳವನ್ನೂ ಕೊಡಬೇಕು ಅಂತ ವಾದಕ್ಕೇ ನಿಂತುಬಿಡ್ತಾರೆ. ಹಿಂದೆಯೇ - ಕತ್ತೆ ಥರಾ ದುಡಿದಿಲ್ವೆ? ಕೊಡೋರೇನು ಧರ್ಮಕ್ಕೆ ಕೊಡ್ತಾರಾ?' ಎಂದು ರೇಗಿದ ದನಿಯಲ್ಲಿ ಕೇಳುತ್ತಾರೆ. ಕೆಲಸ ಮಾಡ್ತಾ ಮಾಡ್ತಾ ಟೈಂಪಾಸ್ ಮಾಡಬೇಕೇ ಹೊರಟು ಕಾಡು ಹರಟೆಗೆ ನಿಂತು ಸಮಯ ಹಾಳು ಮಾಡಬಾರ್‍ದು ಅನ್ನೋದು ಇವರ ಪಾಲಿಸಿ. ಮಾಡಿದ ಕೆಲಸದಲ್ಲಿ ಯಶಸ್ಸು ಸಿಗಲಿಲ್ಲ ಅಂದ್ರೆ ಅಥವಾ ತಮ್ಮ ಕೆಲಸವನ್ನು ಬಾಸ್ ಒಪ್ಪಲಿಲ್ಲ ಅಂದ್ರೆ ತುಂಬಾ ನೊಂದ್ಕೋತಾರೆ. ಸೌಜನ್ಯಕ್ಕಾದ್ರೂ ಒಂದು ಒಳ್ಳೆಯ ಮಾತು ಹೇಳಲಿಲ್ವಲ್ಲ? ಇಷ್ಟು ದಿನದ ಶ್ರಮ ಹೊಳೇಲಿ ಹುಣಿಸೆಹಣ್ಣು ತೊಳೆದ ಹಾಗಾಯ್ತಲ್ಲ ಛೆ, ಎಂದು ಕೊರಗ್ತಾರೆ. ಅಷ್ಟೇ ಅಲ್ಲ, ಈ ಬೇಸರದಲ್ಲಿಯೇ ಇರುವ ಕಂಪನಿ ಬಿಟ್ಟು ಬೇರೊಂದು ಕಡೆ ಕೆಲಸಕ್ಕೆ ಸೇರುವ ಯೋಚನೆಯನ್ನೂ ಮಾಡ್ತಾರೆ.

ಜನವರಿ 21 - ಫೆಬ್ರವರಿ 19 : ಈ ಗುಂಪಿನ ಜನರಿಗೆ ಊರ ತುಂಬಾ ಗೆಳೆಯರು. ಇವರು ವಿಪರೀತ ಬುದ್ಧಿವಂತರಲ್ಲ ನಿಜ. ಆದರೆ ಪ್ರತಿಯೊಂದನ್ನು ಬೆರಗಿನಿಂದ ನೋಡುತ್ತಲೇ ಕಲಿತುಬಿಡ್ತಾರೆ. ಆ ಮೂಲಕ ಯಾರಿಗೇನೂ ಕಡಿಮೆ ಇಲ್ಲ ಅನ್ನಿಸಿಕೊಳ್ತಾರೆ. ದುಡ್ಡಿನ ಬಗ್ಗೆ ಇವರಿಗೆ ಅಂಥ ಕ್ರೇಜ್ ಇಲ್ಲ. ಮಾಡ್ತಾ ಇರುವ ಕೆಲಸದ ಬಗ್ಗೆ ಕೂಡ ಅಂಥ ದೊಡ್ಡ ಮೋಹ ಇರಲ್ಲ. ಇದಿಲ್ಲ ಅಂದ್ರೆ ಇದರಪ್ಪನಂಥ ಕೆಲಸ ಹಿಡಿಯಬಲ್ಲೆ ಎಂದು ಆರಾಮಾಗಿರ್‍ತಾರೆ. ನಮ್ಮ ಕೆಲಸದಿಂದ ಹತ್ತು ಜನಕ್ಕೆ ಒಳ್ಳೇದಾಗಲಿ' ಅಂತ ಆಸೆ ಪಡ್ತಾರೆ. ಕೆಲವರನ್ನು ವಿಪರೀತ ಹಚ್ಚಿಕೊಳ್ತಾರೆ. ಆರಾಧಿಸುತ್ತಾರೆ. ಹಾಗೆ ಆರಾಧಿಸುವವರ ಮೇಲೆ ಯಾರಾದ್ರೂ ಆರೋಪ ಮಾಡಿದ್ರೂ ನಂಬೋದಿಲ್ಲ. ಮಾಡ್ತಾ ಇದ್ದ ಕೆಲಸ ಬೋರ್ ಹೊಡೆಸಿತು ಅಂದ್ರೆ ಎರಡನೇ ಮಾತೇ ಇಲ್ಲದೆ ಅದನ್ನು ಅಷ್ಟಕ್ಕೇ ನಿಲ್ಲಿಸಿ ಎದ್ದು ಹೋಗ್ತಾರೆ. ವಿಪರೀತ ಅನ್ನುವಂಥ ಸಂಪರ್ಕ ಇರುತ್ತಲ್ಲ, ಅದೇ ಕಾರಣದಿಂದ ಯಾವುದಕ್ಕೂ ಕೇರ್ ಮಾಡದೇ ಬಿಡುಬೀಸಾಗಿ ವರ್ತಿಸುತ್ತಾರೆ. ಇವರ ಕೆಲಸದಲ್ಲಿ ತಪ್ಪು ಹುಡುಕೋದು ಕಷ್ಟ ಕಷ್ಟ.

ಫೆಬ್ರವರಿ 20 - ಮಾರ್ಚ್ 20 :
ಶಿಸ್ತು, ಶ್ರದ್ಧೆ, ಹಾರ್ಡ್ ವರ್ಕ್ ಎಂಬುದಕ್ಕೆ ಈ ಜನರಿಗೆ ಸರಿಸಾಟಿಯೇ ಇಲ್ಲ. ಈ ಜನ ಇಬ್ಬರ ಕೆಲಸವನ್ನು ಒಬ್ಬರೇ ಮಾಡಿ ಮುಗಿಸ್ತಾರೆ. ಹಗಲು ಗನಸು ಕಾಣೋದು, ಮುಂದಿನ ದಿನಗಳಲ್ಲಿ ಹಾಗಾಗುತ್ತೆ, ಹೀಗಾಗುತ್ತೆ ಎಂದು ಭವಿಷ್ಯ ಹೇಳೋದು ಇವರ ಇನ್ನೊಂದು ಗುಣ. ಫಜೀತಿ ಅಂದ್ರೆ-ಇವರಿಗೆ ವಿಪರೀತ ಸಿಟ್ಟು! ಬೇರೆಯವರ ಕೆಲಸದಲ್ಲಿ ಸುಲಭವಾಗಿ ತಪ್ಪು ಹುಡುಕ್ತಾರೆ. ಒಂದೊಂದು ಬಾರಿಯಂತೂ ಇಡೀ ಜಗತ್ತಿನಲ್ಲಿ ನಾನು ಮಾತ್ರ ಸತ್ಯವಂತ. ಉಳಿದವರೆಲ್ಲ ಅಷ್ಟಕ್ಕಷ್ಟೆ ಎಂದು ವಾದ ಶುರುಮಾಡ್ತಾರೆ. ಹೀಗೆ, ಬೇರೆಯವರ ಕೆಲಸವನ್ನು ಟೀಕಿಸಿದ ಕಾರಣಕ್ಕೇ ಹಲವರ ದ್ವೇಷ ಕಟ್ಟಿಕೊಳ್ತಾರೆ. ಈ ಜನರದ್ದು ಟೈಮು ಅಂದ್ರೆ ಟೈಮು. ನಿಗದಿತ ಸಮಯಕ್ಕಿಂತ ಹತ್ತು ನಿಮಿಷ ಜಾಸ್ತಿ ಇರೋಕೂ ಇವರು ಒಪ್ಪೋದಿಲ್ಲ. ಕೆಲಸವಿಲ್ಲದೆ ತುಂಬ ಹೊತ್ತು ಕೂತಿದ್ರೆ ಹುಚ್ಚು ಹಿಡಿದವರ ಥರಾ ಚಡಪಡಿಸ್ತಾರೆ. ಕೈಗೆತ್ತಿಕೊಂಡ ಕೆಲಸವನ್ನು ತುಂಬ ಬೇಗನೆ ಮುಗಿಸಿ, ಬೇರೆ ಕೆಲಸಕ್ಕೆ ಕೈ ಹಾಕ್ತಾರೆ.

ಇನ್ನಷ್ಟು ಓದಿಗೆ
ಇವರು ಅವಳನ್ನು ತುಂಬಾ ಹಚ್ಕೊಂಡುಬಿಟ್ಟಿದ್ದಾರೆ!

English summary
Zodiac predictions by AR Manikanth only for the workers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X