ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಯಾಂಗ್-ಕ್ವಿನ್‌ರ ಅಮರ ಪ್ರೇಮದ ಕತೆ

By Staff
|
Google Oneindia Kannada News

Guo Jiang with his lover Qu Chao Quin
ಹತ್ತು ವರ್ಷ ದೊಡ್ಡವಳಾದ ಪ್ರಿಯತಮೆ ಬೆಟ್ಟ ಇಳಿಯಲು ಅನುವಾಗಲೆಂದು ಸಾವಿರಾರು ಮೆಟ್ಟಿಲುಗಳನ್ನು ಕಡಿದು ಎಲ್ಲ ವೈರುದ್ಧ್ಯಗಳನ್ನು ಮೆಟ್ಟಿನಿಂತ ಸಾಹಸಿಯ ಕಥೆಯಿದು. ಸಮಾಜದಿಂದ ದೂರವೇ ಉಳಿದು ಅರ್ಧ ಶತಮಾನ ಕಾಡಿನ ಗುಹೆಯಲ್ಲೇ ಪ್ರೇಮ ಜೀವನ ನಡೆಸಿದ ಅಮರ ಪ್ರೇಮಿಗಳ ಕಥಾನಕವಿದು. ಈ ಪ್ರೇಮಕ್ಕೆ ಸಾಕ್ಷಿಯಾಗಿ ಕಥಾನಾಯಕಿ ಇಂದಿಗೂ ಚೀನಾದಲ್ಲಿ ಜೀವಂತವಿದ್ದಾಳೆ. ಆಕೆಗೊಂದು ಪ್ರೇಮೋನ್ನಮಃ.

* ಎಆರ್ ಮಣಿಕಾಂತ್

ಪ್ರೀತಿಸಿದವಳಿಗಾಗಿ ಹೆತ್ತವರನ್ನು ತೊರೆದವರಿದ್ದಾರೆ. ಮನೆ-ಮಠ ಮರೆತವರಿದ್ದಾರೆ. ಅವಳನ್ನು ಪಡೆಯಬೇಕೆಂಬ ಒಂದೇ ಹಂಬಲದಿಂದ ಬಂಧುಗಳಿಂದ ದೂರಾದವರಿದ್ದಾರೆ. ಅವಳಿಗೋಸ್ಕರ' ಎಂದುಕೊಂಡೇ ಪಿರ್ತಾರ್ಜಿತ ಆಸ್ತಿಯನ್ನು ಎಡಗಾಲಲ್ಲಿ ಒದ್ದು ಬಂದವರಿದ್ದಾರೆ. ಅವಳ ಸಂತೋಷಕ್ಕೆ' ಎನ್ನುತ್ತಲೇ ಚಟಗಳನ್ನು ಬಿಟ್ಟವರಿದ್ದಾರೆ. ಗಡ್ಡ ಬಿಟ್ಟವರೂ ಇದ್ದಾರೆ! ಇಂಥವರ ಮಧ್ಯೆಯೇ ಅವಳಿಗೋಸ್ಕರ ಭವ್ಯ ದಿವ್ಯ ತಾಜ್‌ಮಹಲನ್ನೇ ನಿಲ್ಲಿಸಿದ ಷಹಜಹಾನ್‌ನಂಥ ಸಾಮ್ರಾಟ ಕೂಡ ಇದ್ದಾನೆ. ಈಗ ಹೇಳಲು ಹೊರಟಿರುವುದು ಒಂದರ್ಥದಲ್ಲಿ ಷಹಜಹಾನ್‌ಗಿಂತ ದೊಡ್ಡ ಸಾಹಸ ಮಾಡಿರುವ ಲಿಯೂ ಗುವೋ ಜಿಯಾಂಗ್ ಎಂಬ ಅಮರಪ್ರೇಮಿಯ ಕಥೆ. ಈ ಭೂಪ, ತನ್ನ ಪ್ರಿಯತಮೆ ಕಂ ಹೆಂಡತಿ ಓಡಾಡಲು ಅನುಕೂಲವಾಗಲೆಂದು ಕಡಿದಾದ ಗುಡ್ಡವನ್ನೇ ಕೆತ್ತಿ ಒಂದೆರಡಲ್ಲ, 6000 ಮೆಟ್ಟಿಲು ನಿರ್ಮಿಸಿದ್ದಾನೆ. ಹೊರಜಗತ್ತಿನ ಸಂಪರ್ಕವೇ ಇಲ್ಲದೆ, ಅವಳಿಗೋಸ್ಕರ ದಟ್ಟ ಕಾಡಿನ ಒಳಗಿದ್ದ ಗುಹೆಯೊಂದರಲ್ಲಿ ಭರ್ತಿ 50 ವರ್ಷ ಸಂಸಾರ ಮಾಡಿದ್ದಾನೆ. ಆ ಮೂಲಕ-ಪ್ರೇಮವೆಂಬುದು, ಎಂಥ ಬಲಹೀನರಿಂದಲೂ ಮಹಾನ್ ಸಾಹಸಗಳನ್ನು ಮಾಡಿಸುತ್ತದೆ ಎಂಬ ಮಾತಿಗೆ ಸಾಕ್ಷಿ ಒದಗಿಸಿದ್ದಾನೆ. ಹಾಗೆ ನೋಡಿದರೆ ಲಿಯೂ ಗುವೋ ಜಿಯಾಂಗ್‌ನ ಅಮರಪ್ರೇಮದ ಕಥೆ, ನಮ್ಮ ಜಾನಪದ ಕಥೆಗಳಿಗಿಂತ ಒಂದು ಕೈ ಮೇಲು ಎಂಬಂತೆಯೇ ಇದೆ.

***
ನಮ್ಮ ಕಥಾನಾಯಕ, ಲಿಯೂ ಗುವೋ ಜಿಯಾಂಗ್. ಈತ ಚೀನಾದ ಜಿಯಾಂಗ್ ಜಿನ್ ಎಂಬ ಜಿಲ್ಲೆಗೆ ಸೇರಿದ ಒಂದು ಹಳ್ಳಿಯವನು. ನಮ್ಮ ನಿಮ್ಮಂತೆಯೇ, ಸ್ವಲ್ಪ ಪೆದ್ದು, ಜಾಸ್ತಿ ತರ್‍ಲೆ ಎಂಬ ಗುಂಪಿಗೆ ಸೇರಿದ ಜಿಯಾಂಗ್, ಶಾಲೆಯ ಮೆಟ್ಟಿಲು ಹತ್ತಲೇ ಇಲ್ಲ. ಬದಲಿಗೆ, ಜಮೀನಿನಲ್ಲಿ ಕೆಲಸ ಮಾಡಿಕೊಂಡು ಆರಾಮಾಗಿದ್ದ.

ಅದೇ ಊರಿನಲ್ಲಿ ಕ್ಯು ಚಾವೋ ಕ್ವಿನ್ ಎಂಬಾಕೆಯಿದ್ದಳು. ಆಕೆ ಮದುವೆಯಾದ ಒಂದೇ ವರ್ಷಕ್ಕೆ ಗಂಡನನ್ನು ಕಳೆದುಕೊಂಡಿದ್ದಳು. ಅವನ ನೆನಪಿಗೆ ಒಂದು ಮಗುವಿತ್ತು. ಚಿಕ್ಕ ವಯಸ್ಸಿಗೇ ವೈಧವ್ಯದ ಪಟ್ಟ ಅಂಟಿಸಿಕೊಂಡಿದ್ದ ಕ್ಯು ಚಾವೋ ಕ್ವಿನ್ ಹೊಟ್ಟೆಪಾಡಿಗೆಂದು ಕೂಲಿ ಕೆಲಸಕ್ಕೆ ಬಂದಳು. ಈ ಸಂದರ್ಭದಲ್ಲಿಯೇ ಅವಳಿಗೆ ಲಿಯೂ ಗುವೋ ಜಿಯಾಂಗ್‌ನ ಪರಿಚಯವಾಯಿತು. ಒಂಟಿ ಹೆಂಗಸು ಎಂಬ ಕಾರಣಕ್ಕೋ, ವಿಧವೆ ಎಂಬ ಅನುಕಂಪಕ್ಕೋ ಅಥವಾ ಅವಳ ಕಲರ್ ಕಲರ್ ಚೆಲುವಿಗೋ ಈ ಜಿಯಾಂಗ್ ಮರುಳಾಗಿಬಿಟ್ಟ. ತನ್ನ ಆಸೆಯನ್ನು ಅವಳಿಗೆ ಹೇಳಿಯೂ ಬಿಟ್ಟ.

ಜಿಯಾಂಗ್‌ನ ನೇರಾನೇರ ನಡವಳಿಕೆ ಕ್ಯು ಚಾವೋ ಕ್ವಿನ್‌ಗೆ ಅದೆಷ್ಟು ಇಷ್ಟವಾಗಿ ಹೋಯ್ತು ಅಂದರೆ, ಆಕೆ ಹಿಂದೆ ಮುಂದೆ ನೋಡದೆ ಸರಿ ಕಣೋ, ನಾನು ನಿನ್ನನ್ನು, ನಿನ್ನ ಪ್ರೀತಿಯನ್ನೂ ಒಪ್ಕೊಂಡಿದೀನಿ' ಅಂದೇಬಿಟ್ಟಳು. ಅವತ್ತಿಂದ ಅವನು ರೋಮಿಯೊ ಆದ. ಈ ಕ್ಯು ಚಾವೋ ಕ್ವಿನ್ ಜೂಲಿಯಟ್ ಆಗಿ ಸಾಥ್ ಕೊಟ್ಟಳು. ಇಬ್ಬರ ಮಧ್ಯೆ ಪ್ರೀತಿಯ ಗುಲಾಬಿ ಅರಳಿ ನಿಂತಾಗ ಚಿಯಾಂಗ್‌ಗೆ ಬರೀ 19 ವರ್ಷ. ಚಾವೋ ಕ್ವಿನ್‌ಗೆ ಭರ್ತಿ 29!

ಮುಂದಿನ ಕೆಲವೇ ದಿನಗಳಲ್ಲಿ ಜಿಯಾಂಗ್-ಚಾವೋ ಕ್ವಿನ್‌ಳ ಪ್ರೇಮಪ್ರಸಂಗ ಊರಿಡೀ ಸುದ್ದಿಯಾಯಿತು. ಅದು 1950ರ ಜಮಾನಾ. ಆ ದಿನಗಳಲ್ಲಿ ಹುಡುಗ-ಹುಡುಗಿ ಪ್ರೀತಿಸುವುದೇ ಅಪರಾಧ ಎಂದು ಭಾವಿಸಲಾಗುತ್ತಿತ್ತು. ಹಾಗಿರುವಾಗ 19ರ ಹರೆಯದ ಹುಡುಗನೂ, 29ರ ವಿಧವೆಯೂ ಪ್ರೀತಿ-ಪ್ರೇಮ-ಪ್ರಣಯ ಎಂದು ಆಟ ಶುರು ಮಾಡಿದರೆ ಜನ ಸುಮ್ಮನಿದ್ದಾರೆಯೆ? ಜಿಯಾಂಗ್-ಚಾವೋ ಕ್ವಿನ್‌ರ ವಿಷಯದಲ್ಲೂ ಹಾಗೇ ಆಯಿತು. ಊರ ಜನ ಇಬ್ಬರನ್ನೂ ಪ್ರತ್ಯೇಕವಾಗಿ ಕರೆದು ಬುದ್ಧಿ ಹೇಳಿದರು, ಎಚ್ಚರಿಸಿದರು, ಗದರಿಸಿದರು. ಹೀಗೇ ಮುಂದುವರಿದರೆ ಕಾಲು ಮುರೀತೀವಿ ಹುಷಾರ್ ಎಂದೂ ಬೆದರಿಸಿದರು.

ಸುತ್ತಮುತ್ತಲಿನವರ ವಿರೋಧ ಹೆಚ್ಚಿದಷ್ಟೂ ಪ್ರೇಮಿಗಳ ನಿರ್ಧಾರ ಗಟ್ಟಿಯಾಗುತ್ತದಂತೆ! ಜಿಯಾಂಗ್-ಚಾವೋ ಕ್ವಿನ್‌ರ ವಿಷಯದಲ್ಲೂ ಹೀಗೇ ಆಯಿತು. ಈ ಮಧ್ಯೆಯೇ ಪಂಚಾಯಿತಿ ಸೇರಿಸಿ, ಎಲ್ಲರ ಮುಂದೆ ಛೀಮಾರಿ ಹಾಕಲು ಊರ ಮುಖಂಡರು ನಿರ್ಧರಿಸಿರುವುದೂ ಈ ಜೋಡಿಗೆ ಗೊತ್ತಾಯಿತು. ಅವತ್ತೇ ಒಂದು ನಿರ್ಧಾರಕ್ಕೆ ಬಂದ ಜಿಯಾಂಗ್, ಅದೊಂದು ಸಂಜೆ ಚಾವೋ ಕ್ವಿನ್‌ಳ ಮುಂದೆ ನಿಂತು ಹೇಳಿಯೇಬಿಟ್ಟ: ಈ ಊರಿನ ಜನ ನಮ್ಮನ್ನು ನೆಮ್ಮದಿಯಾಗಿ ಬದುಕಲು ಬಿಡಲ್ಲ. ನನ್ನ ಕಡೆಯುಸಿರು ಇರುವವರೆಗೂ ನಿನ್ನನ್ನು ಚೆನ್ನಾಗಿ ನೋಡ್ಕೋತೀನಿ. ಈ ಊರಿಂದ ನಲವತ್ತು ಮೈಲಿ ದೂರದಲ್ಲಿ ದಟ್ಟ ಕಾಡಿದೆಯಲ್ಲ? ಅಲ್ಲಿಗೆ ಹೋಗಿಬಿಡೋಣ. ಇವತ್ತು ರಾತ್ರಿಯೇ ಹೊರಡೋಣ...'

ಅವತ್ತೇ ಮಧ್ಯರಾತ್ರಿ ಚಾವೋ ಕ್ವಿನ್‌ಳ ಮಗನನ್ನು ಹೆಗಲಮೇಲೆ ಕೂರಿಸಿಕೊಂಡು ದಿನನಿತ್ಯದ ಬದುಕಿಗೆ ಅಗತ್ಯ ಎಂಬಷ್ಟು ವಸ್ತುಗಳನ್ನು ಜತೆಗಿಟ್ಟುಕೊಂಡು, ಚಾವೋ ಕ್ವಿನ್‌ಳ ಕೈ ಹಿಡಿದುಕೊಂಡು, ಜಿಯಾಂಗ್ ನಡೆದು ನಡೆದು ನಡೆದೂ ಕಡೆಗೊಮ್ಮೆ ಕಾಡು ತಲುಪಿಕೊಂಡ. ಕಡಿದಾದ ಪರ್ವತವೊಂದನ್ನು ಅದು ಹೇಗೋ ಹತ್ತಿ ಅಲ್ಲಿ ಗುಹೆಯೊಂದನ್ನು ಹುಡುಕಿದ. ಕಗ್ಗತ್ತಲಿನ ಆ ಮನೆ(!)ಯೊಳಗೆ ಪುಣ್ಯಕ್ಕೆ ಮೃಗಗಳಿರಲಿಲ್ಲ. ಅವರ ಊರಿನ ಜನ ಒಂದೆರಡು ವಾರ ಲೊಟಪಟ ಮಾತಾಡಿ, ಆಮೇಲೆ ತೆಪ್ಪಗಾದರು. ಇಲ್ಲಿ ಕಾಡೊಳಗೆ ಶುರುವಾದ ಹೊಸಬದುಕಿನಲ್ಲಿ ಚಾವೋ ಕ್ವಿನ್, ಅಕ್ಷರಶಃ ಕ್ವೀನ್ ಥರಾ ಮೆರೆದಳು. ಜಿಯಾಂಗ್, ಅವಳ ಸಾಮ್ರಾಜ್ಯದ ಅಧಿಪತಿಯಾದ, ಕಿಂಗ್ ಥರಾ!

ಗಂಡ-ಹೆಂಡತಿ ನೆಮ್ಮದಿಯಾಗಿ ಬದುಕಬೇಕೆಂದರೆ ಆಹಾರ ಪದಾರ್ಥಗಳು ಬೇಕು. ಬಟ್ಟೆ, ಸೋಪು, ಸೀಮೆ ಎಣ್ಣೆ, ಖರ್ಚಿಗಿಷ್ಟು ದುಡ್ಡು, ಇಬ್ಬರಲ್ಲಿ ಒಬ್ಬರಿಗೆ ನೌಕರಿ... ಇದೆಲ್ಲ ಇರಬೇಕು. ಜಿಯಾಂಗ್-ಚಾವೋ ಕ್ವಿನ್‌ಗೆ ಈ ಯಾವ ಅನುಕೂಲವೂ ಇರಲಿಲ್ಲ. ಮದುವೆಯಾದ ಹೊಸದರಲ್ಲಿ ಬೇಗ ಕತ್ತಲಾಗಲಿ ಎಂದು ಎಲ್ಲ ದಂಪತಿಗಳೂ ಬಯಸುತ್ತಾರೆ. ಇವರು ಉಳಿದಿದ್ದುದೇ ಗುಹೆಯಲ್ಲವೆ? ಹಾಗಾಗಿ ಜಿಯಾಂಗ್-ಕ್ವಿನ್‌ರಿಗೆ ಹಗಲೂ ಬೆಳಕಿರುತ್ತಿರಲಿಲ್ಲ. ಸುತ್ತಲೂ ಕಾಡಿತ್ತಲ್ಲ? ಅಲ್ಲಿ ಯಥೇಚ್ಛವಾಗಿ ಸಿಗುತ್ತಿದ್ದ ಗೆಡ್ಡೆ-ಗೆಣಸು, ಹಣ್ಣುಗಳನ್ನೇ ಜಿಯಾಂಗ್ ದಿನವೂ ಕಿತ್ತು ತರುತ್ತಿದ್ದ. ಇಬ್ಬರೂ ಅದನ್ನೇ ಹಂಚಿಕೊಂಡು ತಿಂದರು. ನನಗೆ ನೀನೇ ಬಂಧು' ಎಂದು ಇಬ್ಬರೂ ಪರಸ್ಪರ ಹೇಳಿಕೊಂಡಿದ್ದರು ನೋಡಿ, ಅದೇ ಕಾರಣದಿಂದ ಅವರಿಗೆ ಬಂಧುಗಳ ಅಗತ್ಯ ಕಾಣಲಿಲ್ಲ. ಒಂಟಿತನ ಬಾಧಿಸಲಿಲ್ಲ. ಹಬ್ಬದ ನೆನಪಾಗಲಿಲ್ಲ. ಹಸಿವು ಕಂಗೆಡಿಸಲಿಲ್ಲ. ಆರಂಭದ ಒಂದು ವರ್ಷ, ಒಂದೇ ಒಂದು ರಾತ್ರಿಯೂ ಬೆಳಕನ್ನೇ ಕಾಣದೆ ಕಳೆದುಬಿಟ್ಟರು ಜಿಯಾಂಗ್-ಚಾವೋ ಕ್ವಿನ್. ಹೀಗಿದ್ದಾಗಲೇ ಅದೊಂದು ದಿನ ಚಾವೋ ಕ್ವಿನ್ ನಾಚುತ್ತಾ ಹೇಳಿದಳು: ನಾನು ಗರ್ಭಿಣಿ!'

ಹಗಲಿಡೀ ಆಹಾರ ಪದಾರ್ಥ ಹುಡುಕುತ್ತ ಈ ಜಿಯಾಂಗ್ ಕಾಡಲ್ಲಿ ಕಳೆದುಹೋಗುತ್ತಿದ್ದ. ಹೀಗಿದ್ದಾಗ, ಕುಡಿಯಲು ನೀರು ಬೇಕೆನಿಸಿದರೂ; ಮನೆಗೆ ಸಣ್ಣದೊಂದು ವಸ್ತು ಬೇಕೆನಿಸಿದರೂ, ಈ ಕ್ವಿನ್, ಗುಹೆಯ ಹೊರಗಿದ್ದ ಕಡಿದಾದ ಬೆಟ್ಟ ಇಳಿದು ಬರಬೇಕಿತ್ತು. ಹೆಂಡತಿ ಹೇಳಿ ಕೇಳಿ ಗರ್ಭಿಣಿ. ಹಾಗೆ ಇಳಿಯುವಾಗ ಆಕಸ್ಮಿಕವಾಗಿ ಆಯತಪ್ಪಿ ಬಿದ್ದರೆ ಗತಿಯೇನು ಅನ್ನಿಸಿತು ನೋಡಿ; ಅವತ್ತಿಂದಲೇ ಆ ಕಡಿದಾದ ಪರ್ವತದಿಂದ ಸಮತಟ್ಟಾದ ನೆಲ ಇರುವ ಜಾಗದವರೆಗೂ ಮೆಟ್ಟಿಲು ನಿರ್ಮಿಸಲು ಜಿಯಾಂಗ್ ನಿರ್ಧರಿಸಿಬಿಟ್ಟ. ಮುಂದಿನ ಐವತ್ತು ವರ್ಷದ ಅವಧಿಯಲ್ಲಿ ಆ ಬೆಟ್ಟವನ್ನೇ ಮಣಿಸಿ, ಹೆಂಡತಿಗಾಗಿ ಭರ್ತಿ 6000 ಮೆಟ್ಟಿಲುಗಳನ್ನು ಕೆತ್ತಿಯೇ ಬಿಟ್ಟ. ನಂತರ, ನಿನಗೆ ಈ ಬದುಕು ಬೇಸರ ಅನ್ನಿಸಿದ ದಿನ ಕೆಳಗಿಳಿದು ನಾಡಿನೊಳಗೆ ಹೋಗೋಣ ಎಂದು ಹೆಂಡತಿಗೆ ಭರವಸೆ ಕೊಟ್ಟ. ಆದರೆ ಅವಳು ಐವತ್ತು ವರ್ಷದ ಸುದೀರ್ಘ ದಾಂಪತ್ಯದಲ್ಲಿ ಒಂದು ದಿನವೂ ಅಷ್ಟೂ ಮೆಟ್ಟಿಲು ಇಳಿಯಲೇ ಇಲ್ಲ!

ಬಡವರಿಗೆ ಮಕ್ಕಳು ಜಾಸ್ತಿ' ಎಂಬ ಮಾತು ಜಿಯಾಂಗ್-ಕ್ವಿನ್‌ರ ವಿಷಯದಲ್ಲೂ ನಿಜವಾಯಿತು. ನಾಗರಿಕತೆಯಿಂದ ದೂರವೇ ಇದ್ದ, ಥೇಟ್ ಆದಿಮಾನವರ ಥರಾ ಬದುಕಿದ ಈ ದಂಪತಿಗೆ ಆರು ಮಕ್ಕಳಾದವು. ಮೊದಲ ಗಂಡನ ಮಗುವೂ ಸೇರಿ ಒಟ್ಟು ಏಳು! (ಸೂಲಗಿತ್ತಿಯರ ನೆರವಿಲ್ಲದೆ; ಡಾಕ್ಟರ್‌ರ ಎಚ್ಚರಿಕೆಯ ಮಾತೂ ಇಲ್ಲದೆ; ಇಂಜಕ್ಷನ್, ಟ್ಯಾಬ್ಲೆಟ್, ಸಿರಪ್‌ನ ಹೆಸರನ್ನೂ ಕೇಳದೆ ಈ ಚಾವೋ ಕ್ವಿನ್ ಆರು ಮಕ್ಕಳಿಗೆ ಜನ್ಮ ನೀಡಿದ್ದು; ಅಷ್ಟೂ ಮಕ್ಕಳನ್ನು ಉಳಿಸಿಕೊಂಡದ್ದು ಸಾಹಸವಲ್ಲವೆ?) ಈ ಮಧ್ಯೆ ಮಕ್ಕಳೆಲ್ಲ ಬೆಳೆದು ದೊಡ್ಡವರಾದರಲ್ಲ? ಅವರಿಗೆ ತಮ್ಮ ಪ್ರೇಮದ ಕತೆಯನ್ನು ಒಂದಿಷ್ಟೂ ಮುಚ್ಚಿಡದೆ ಈ ದಂಪತಿ ಹೇಳಿಕೊಂಡರು. ಬಂಧುಗಳಿಂದ ದೂರವೇ ಇರಬೇಕಾದ ಅನಿವಾರ್ಯತೆ, ಆ ಕಾರಣದಿಂದಲೇ ಗಟ್ಟಿಯಾದ ತಮ್ಮ ಬಾಂಧವ್ಯದ ಬಗೆಗೂ ಹೇಳಿಕೊಂಡರು.

1950ರಲ್ಲಿ ಶುರುವಾದ ಈ ಅಮರ ಪ್ರೇಮಿಗಳ ಗುಹೆವಾಸ, ಹೊರಜಗತ್ತಿನೊಂದಿಗೆ ಸಂಪರ್ಕವೇ ಇಲ್ಲದೆ 2001ರವರೆಗೂ ಸಾಗಿಬಂತು. ಇಡೀ ಜಗತ್ತು ವಿಜ್ಞಾನ, ಟೀವಿ, ಕಂಪ್ಯೂಟರ್ ಎಂದು ಸಂಭ್ರಮ ಪಡುತ್ತಿದ್ದಾಗ ಕೂಡ ಈ ದಂಪತಿ ಬುಡ್ಡಿ ದೀಪದ ಮಧ್ಯೆಯೇ ಉಳಿದು ಹೋಗಿದ್ದರು. ಅರ್ಧ ಶತಮಾನದ ಕಾಲ ಕಾಡಿನ ಗೆಡ್ಡೆ ಗೆಣಸು ತಿಂದೇ ಬದುಕಿದರು. ತಿಂಗಳು ಬದಲಾದದ್ದು, ವರ್ಷ ಉರುಳಿದ್ದು, ರಸ್ತೆ ಅಪಘಾತದಲ್ಲಿ ಬಂಧುಗಳು ತೀರಿಕೊಂಡದ್ದು... ಊಹುಂ, ಇಂಥ ಯಾವ ಸುದ್ದಿಯೂ ಅವರಿಗೆ ಗೊತ್ತಾಗಲೇ ಇಲ್ಲ. ಈ ಮಧ್ಯೆ ದೊಡ್ಡವರಾಗಿದ್ದ ಮಕ್ಕಳು ಕಾಡಿನ ಗೆಡ್ಡೆ-ಗೆಣಸು, ಹಣ್ಣುಗಳನ್ನು ಪೇಟೆಗೆ ಒಯ್ದು ಮಾರಿ, ಬಂದ ಹಣದಿಂದ ಬಿತ್ತನೆ ಬೀಜಗಳನ್ನು ತಂದು ಕೃಷಿಗೆ ತೊಡಗಿದ್ದರು.

ಹೀಗಿದ್ದಾಗಲೇ, 2001ರಲ್ಲಿ ಟ್ರಕ್ಕಿಂಗ್‌ಗೆಂದು ಬಂದ ತಂಡವೊಂದು, ಕಾಡಿನೊಳಗೆ ಬೆಟ್ಟಕ್ಕೆ ಹತ್ತುವಂಥ ಮೆಟ್ಟಿಲುಗಳನ್ನು ಕಂಡು ಅಚ್ಚರಿಯಿಂದ ತುದಿಯವರೆಗೂ ಹೋಗಿ ನೋಡಿದರೆ- ಅಲ್ಲಿ ಲಿಯೂ ಜಿಯಾಂಗ್- ಚಾವೊ ಕ್ವಿನ್ ಕಾಣಿಸಿದರು. ಎಲ್ಲ ಕಥೆಯನ್ನೂ ಅವರಿಂದಲೇ ಕೇಳಿದ ಚಾರಣಿಗರು, ನಾಡಿಗೆ ಬಂದು ಸಂಭ್ರಮದಿಂದಲೇ ಈ ಸುದ್ದಿಯನ್ನು ಬಹಿರಂಗಪಡಿಸಿದರು. ಸಾಕ್ಷಿಯಾಗಿ ತಾವು ತೆಗೆದಿದ್ದ ಫೋಟೋ; ವಿಡಿಯೋಗಳನ್ನು ಎಲ್ಲರ ಮುಂದಿಟ್ಟರು.

ಜಿಯಾಂಗ್-ಕ್ವಿನ್‌ರ ಅಮರ ಪ್ರೇಮದ ಕತೆ ಕೇಳಿ ಚೀನಾಕ್ಕೆ ಚೀನಾವೇ ಬೆರಗಾಯಿತು. ಹೀಗೆ, ಹೊರಜಗತ್ತಿಗೆ ಪರಿಚಯವಾದಾಗ ಜಿಯಾಂಗ್‌ಗೆ 72 ವರ್ಷವಾಗಿತ್ತು. ಕ್ವಿನ್‌ಗೆ 82 ತುಂಬಿತ್ತು. ಮುಂದೆ, ಈ ಜೋಡಿಯನ್ನು ನೋಡಲೆಂದೇ ಜನ ತಂಡೋಪತಂಡವಾಗಿ ಕಾಡಿಗೆ, ಗುಹೆಯೆಂಬ ಅರಮನೆಗೆ(?) ನಡೆದು ಬಂದರು. ಪರಿಣಾಮವಾಗಿ, ಈ ಅಮರ ಪ್ರೇಮಿಗಳ ಮನೆ(?!)ಗೂ ಒಂದಷ್ಟು ಹೊಸ ವಸ್ತುಗಳು ಬಂದವು. ಅವರ ಬದುಕೂ ಸ್ವಲ್ಪ ಬದಲಾಯಿತು.

ಈ ಮಧ್ಯೆ ಅದೊಂದು ದಿನ ಹೊಲದ ಕೆಲಸ ಮುಗಿಸಿ ಮನೆಗೆ (ಗುಹೆಗೆ!) ಬಂದ ಜಿಯಾಂಗ್, ಹೆಂಡತಿಯನ್ನು ಕರೆದು- ಯಾಕೋ ಸುಸ್ತಾಗ್ತಾ ಇದೆ. ಸ್ವಲ್ಪ ಹೊತ್ತು ಮಲಗ್ತೀನಿ. ಸ್ವಲ್ಪ ಗಾಳಿ ಬೀಸ್ತೀಯಾ' ಅಂದ. ಆಗ ಅಜ್ಜಜ್ಜಿಯಾಗಿದ್ದರೂ, ಕ್ವಿನ್ ಲಗುಬಗೆಯಿಂದಲೇ ಗಂಡನ ಸೇವೆಗೆ ನಿಂತಳು. ಸ್ವಲ್ಪ ಹೊತ್ತಿನ ನಂತರ-ಮಗುವಿನಂತೆ ಮಲಗಿದ್ದ ಜಿಯಾಂಗ್‌ನ ಹಣೆ ಮುಟ್ಟಿ ನೋಡಿದ ಕ್ವಿನ್ ಚೀರಿಕೊಂಡಳು- ಏಕೆಂದರೆ, ಜಿಯಾಂಗ್‌ನ ದೇಹ ಐಸ್‌ನಂತೆ ತಣ್ಣಗಿತ್ತು. ಹೆಂಡತಿಗೆಂದು ಪರ್ವತವನ್ನೇ ಕೆತ್ತಿ ಮೆಟ್ಟಿಲು ಮಾಡಿದ್ದ ಜಿಯಾಂಗ್, ಒಂದು ಮಾತೂ ಹೇಳದೆ ಸತ್ತು ಹೋಗಿದ್ದ!

ಒಂದು ಅಮರ ಪ್ರೇಮ ಕತೆಗೆ ಸಾಕ್ಷಿಯಾಗಿ ಕ್ವಿನ್ ಈಗಲೂ ಇದ್ದಾಳೆ. ಜಿಯಾಂಗ್-ಕ್ವಿನ್ ಅರ್ಧ ಶತಮಾನದ ಕಾಲ ಬದುಕಿದ್ದ ಗುಹೆಯನ್ನು ಚೀನಾ ಸರಕಾರ, ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿದೆ. ಈಗ ಹೇಳಿ, ನಮ್ಮ-ನಿಮ್ಮೆಲ್ಲರ ಪ್ರೇಮ ಕಥೆಗಿಂತ, ತಾಜ್‌ಮಹಲಿನ ಹಿಂದಿರುವ ಕತೆಗಿಂತ, ಜಿಯಾಂಗ್-ಕ್ವೀನ್‌ರ ಪ್ರೇಮಕಥೆ ದೊಡ್ಡದಲ್ಲವೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X