ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುವ ನಿರ್ದೇಶಕರುಗಳಿಗೆ ಒಂದು ಪತ್ರವು...

By Super
|
Google Oneindia Kannada News

Haage Summane director Preetam Gubbi
ಹಳೆಯ ಕಥೆ, ಬಡಕಲು ಹೀರೋ, ಕಡಿಮೆ ಬಟ್ಟೆಯ ಇಪ್ಪತ್ತೈದು ಕೇಜಿಯ ಹೀರೋಯಿನ್, ಮಧ್ಯೆ ಮಧ್ಯೆ ಲಾಂಗು-ಮಚ್ಚುಗಳ ಖಣಖಣ, ನಮ್ಮ ವಜ್ರಮುನಿಯ ಕಿರುಬೆರಳಿಗೂ ಸಾಟಿಯಾಗದಂಥ ವಿಲನ್ನು... ಇಂಥವರೇ ತುಂಬಿಕೊಂಡಿರೋ ನಿಮ್ಮ ಸಿನಿಮಾ ನೋಡೋಕೆ-ಜನಕ್ಕೇನಾದ್ರೂ ಹುಚ್ಚು ಹಿಡಿದಿದೆಯೇನ್ರಿ? ಮುಂಗಾರು ಮಳೆ ಸುರಿಸಲು ಬಂದು ಅರ್ಧದಾರಿಯಲ್ಲೇ ಆವಿಯಾಗಿ ಹೋದ ಯುವ ನಿರ್ದೇಶಕರಿಗೆ ಎರಡು ಕಿವಿಮಾತುಗಳು. ಆದರೆ ಇನ್ನೊಂದು ಮಾತು, ಈ ಕಿವಿಯಿಂದ ಕೇಳಿ ಆ ಕಿವಿಯಿಂದ ಬಿಡಬೇಡಿ, ಹಾಗೆ ಸುಮ್ಮನೆ!

* ಎಆರ್ ಮಣಿಕಾಂತ್

ಪ್ರೀತಿಯ ಯುವ ನಿರ್ದೇಶಕ ಬಂಧುಗಳಿಗೆ - ನಮಸ್ಕಾರ.

ಪ್ರಿಯರೆ, ಕಣ್ಮುಂದೆ ಹೊಸ ವರ್ಷದ ಎಳೆ ಬಿಸಿಲಿದೆ! ನಿಮಗೆಲ್ಲ ಹೊಸ ವರ್ಷದ ಶುಭಾಶಯವನ್ನು ಹೇಳಿ; ಕಳೆದು ಹೋದ ವರ್ಷದತ್ತ ಒಮ್ಮೆ ತಿರುಗಿ ನೋಡಿದರೆ-2008ರಲ್ಲಿ ಚಿತ್ರರಂಗದ ಯುವ ನಿರ್ದೇಶಕರುಗಳ ಬೆಳವಣಿಗೆ ಗಮನಿಸಿದರೆ- ನಿಜಕ್ಕೂ ಸಂಕಟವಾಗುತ್ತದೆ. ಬೇಸರವಾಗುತ್ತದೆ. ಒಂಥರಾ ಮುಜುಗರವಾಗುತ್ತದೆ. ಒಂದೊಂದು ಸಂದರ್ಭದಲ್ಲಿ ಸಮಸ್ತ ನಿರ್ದೇಶಕ ಸಮೂಹದ ಬಗೆಗೇ ಸಿಟ್ಟು ಬರುತ್ತದೆ. ಮನರಂಜನೆಯ ಪ್ರಮುಖ ಮಾಧ್ಯಮ ಎನಿಸಿಕೊಂಡಿರುವ ಚಿತ್ರರಂಗ-ಒಂದಿಷ್ಟು ಹೊಸತನ ಕಾಣದೆ ಇರುವುದಕ್ಕೆ ಪರೋಕ್ಷವಾಗಿ ನಿರ್ದೇಶಕರೇ ಕಾರಣ ಎಂದು ಆಣೆ-ಪ್ರಮಾಣ ಮಾಡಿಯೇ ಹೇಳಿಬಿಡಬೇಕು ಅನಿಸುತ್ತಿದೆ. ಚಿತ್ರರಂಗಕ್ಕೆ ಒಂದು ಹೊಸ ದಿಕ್ಕು ತೋರಿಸಬೇಕಾಗಿದ್ದ ಯುವ ನಿರ್ದೇಶಕರು ಬರೀ ತೋಪು ಚಿತ್ರಗಳನ್ನೇ ನೀಡಿದ್ದೇಕೆ? ನಿಜಕ್ಕೂ ಇಲ್ಲಿ ತಪ್ಪು ಯಾರದು? ಜನ ಥಿಯೇಟರಿನತ್ತ ಬರುವುದಿಲ್ಲ ಎಂಬುದು ನಿಜವೇ? ಕನ್ನಡದಲ್ಲಿ ಸಿನಿಮಾಕ್ಕೆ ಹೊಂದುವಂಥ ಕಥೆ-ಕಾದಂಬರಿಗಳೇ ಇಲ್ಲ ಎಂಬ ಆರೋಪ ದಿಟವೆ? ಭಾರೀ ಆತ್ಮವಿಶ್ವಾಸದೊಂದಿಗೆ ನಿರ್ದೇಶನಕ್ಕೆ ಬರುವವರೆಲ್ಲ ಕಡೆಗೆ ಬೋರ್ಡಿಗೇ ಇಲ್ಲದಂತಾಗುತ್ತಾರಲ್ಲ ಏಕೆ?

ಇಂಥವೇ ಕುತೂಹಲದ ಪ್ರಶ್ನೆಗಳಿಗೆ ಉತ್ತರವಾಗಿ ಈ ಪತ್ರ. ಮೊದಲೇ ಹೇಳಿಬಿಡುತ್ತೇನೆ. ಇಲ್ಲಿನ ಉತ್ತರಗಳು ಮೊನಚಾಗಿವೆ. ಈ ಪತ್ರದಲ್ಲಿ ಕಿವಿಮಾತಿದೆ. ಸಂದೇಶವಿದೆ. ಬಯ್ಗುಳವಿದೆ. ಆಗಿ ಹೋದ ತಪ್ಪುಗಳ ಪಟ್ಟಿಯಿದೆ. ಗದರಿಕೆಯಿದೆ. ಪ್ರೀತಿಯ ಬೆದರಿಕೆಯೂ ಇದೆ. ಈವರೆಗೂ ನೀವು ನಡೆದ ದಾರಿ ಸರಿಯಿಲ್ಲ. ಮುಂದೆ ಹೀಗೆ ನಡ್ಕೊಳ್ರಪ್ಪಾ' ಎಂಬ ಹಿತವಚನವಿದೆ. ಓದ್ತಾ ಹೋಗಿ....

***
ಹೌದಲ್ಲವಾ? ಎರಡು ವರ್ಷಗಳ ಹಿಂದಿನವರೆಗೂ ಚಿತ್ರರಂಗದಲ್ಲಿ ಒಂದು ಸಿದ್ಧಾಂತವಿತ್ತು. ಏನೆಂದರೆ, ಆಗೆಲ್ಲ ಚಿತ್ರ ನಿರ್ದೇಶಕ ಪಟ್ಟ ಹಿರಿಯರಿಗೆ ಮಾತ್ರ ಮೀಸಲಿರುತ್ತಿತ್ತು. ವರ್ಷಕ್ಕೆ ಇಬ್ಬರು ಅಥವಾ ಮೂವರು ಹೊಸ ನಿರ್ದೇಶಕರು (ಅವರಿಗೂ ಹತ್ತಿರ 46 ವರ್ಷ ತುಂಬಿರುತ್ತಿತ್ತು!) ಬಂದರೆ ಅದೇ ದೊಡ್ಡ ಸುದ್ದಿ. ಸ್ವಾರಸ್ಯವೆಂದರೆ, ಹಳೆಯ ನಿರ್ದೇಶಕರು ತಮ್ಮ ಖ್ಯಾತಿಗೆ ತಕ್ಕಂತೆ ಸಿನಿಮಾ ನಿರ್ದೇಶಿಸುತ್ತಿದ್ದರು. ಪರಿಣಾಮ, ವರ್ಷಕ್ಕೆ ಐದಾದರೂ ಸೂಪರ್‍ಬ್ ಎಂಬಂಥ ಚಿತ್ರಗಳು ತಯಾರಾಗುತ್ತಿದ್ದವು. ಆದರೆ, ಎರಡು ವರ್ಷಗಳ ಹಿಂದೆ ಯೋಗರಾಜ್ ಭಟ್ ನಿರ್ದೇಶನದ ಮುಂಗಾರು ಮಳೆ' ಹಾಗೂ ಸೂರಿ ನಿರ್ದೇಶನದ ದುನಿಯಾ' ಬಂದು ಹೋದವು ನೋಡಿ- ಯೆಸ್, ಯುವ ನಿರ್ದೇಶಕರ ದರ್ಬಾರು ತುಂಬ ಜೋರಾಗಿ ಶುರುವಾದದ್ದೇ ಅವತ್ತಿನಿಂದ.

ಕಥೆ, ನಾಯಕ-ನಾಯಕಿ, ನಿರ್ಮಾಣದ ವಿಷಯಲ್ಲಿ ಸಂಪೂರ್ಣ ಸ್ವಾತಂತ್ರ್ಯ ನೀಡಿದರೆ ಯುವ ನಿರ್ದೇಶಕರು ಪವಾಡವನ್ನೇ ಮಾಡಿಬಿಡುತ್ತಾರೆ ಎಂಬುದನ್ನು ಆ ಎರಡೂ ಚಿತ್ರಗಳು ತೋರಿಸಿಕೊಟ್ಟವು. ಪರಿಣಾಮ ಏನಾಯಿತೆಂದರೆ, ನಿರ್ಮಾಪಕರುಗಳೆಲ್ಲ ಯುವ ನಿರ್ದೇಶಕರ ಬೆನ್ನು ಬಿದ್ದರು. ದುಬಾರಿ ಸಂಭಾವನೆಯ ಆಸೆ ತೋರಿಸಿದರು. ನೀವು ನಿರ್ದೇಶಿಸಿದ ಸಿನಿಮಾ ನೂರು ದಿನ ಓಡಿಬಿಟ್ರೆ ಒಂದು ಕಾರು ಕೊಡ್ತೀನಿ. ಇಪ್ಪತ್ತೈದು ವಾರ ಓಡಿಬಿಟ್ರೆ ಒಂದು ಫ್ಲಾಟ್ ಕೊಡಿಸ್ತೀನಿ' ಎಂದೆಲ್ಲ ಆಸೆ ಹುಟ್ಟಿಸಿದರು. ಮೈ ಡಿಯರ್ ಯಂಗ್ ಡೈರೆಕ್ಟರ್‍ಸ್... ಓದ್ತಾ ಇದೀರ ತಾನೆ?

ಪರಿಣಾಮ ಏನಾಯ್ತು ಅಂದ್ರೆ- ಒಬ್ಬರ ಹಿಂದೆ ಒಬ್ಬರು ಯುವ ನಿರ್ದೇಶಕರು ಬಂದುಬಿಟ್ರಿ. ನೋವಿನ ಸಂಗತಿಯೆಂದರೆ-ಈ ಪೈಕಿ ತುಂಬಾ ಮಂದಿಗೆ ಒಂದು ಸಿನಿಮಾ ನಿರ್ದೇಶನಕ್ಕೆ ಇರಬೇಕಲ್ಲ? ಅಂಥ ಅರ್ಹತೆ, ತಿಳಿವಳಿಕೆ ಖಂಡಿತ ಇರಲಿಲ್ಲ. ಕೆಲವರು ಫೋಟೊಗ್ರಫಿಯ ಬಗ್ಗೆ ವಿಪರೀತ ತಿಳ್ಕೊಂಡಿದ್ರು. ಮತ್ತೆ ಕೆಲವರು ಅದ್ಭುತವಾದ ಚಿತ್ರಕಥೆ-ಸಂಭಾಷಣೆ ಬರೆಯೋದ್ರಲ್ಲಿ ಎಕ್ಸ್‌ಪರ್ಟ್ ಅನ್ನಿಸಿಕೊಂಡಿದ್ರು. ಇನ್ನೊಂದಷ್ಟು ಮಂದಿ ಕಥೆ ಹೇಳುವುದರಲ್ಲಿ ಪ್ರಾವೀಣ್ಯತೆ ಪಡೆದಿದ್ರು. ಉಳಿದ ಒಂದಷ್ಟು ಮಂದಿ ಮಾತಿನಲ್ಲಿಯೇ ಎಂಥವರನ್ನೂ ಮರುಳು ಮಾಡುವ ಕಲೆಯನ್ನು ಒಲಿಸಿಕೊಂಡಿದ್ರು. ಆದರೆ, ಯಾರೊಬ್ಬರೂ ಅದೇ ಮುಂಗಾರು ಮಳೆ', ದುನಿಯಾ'ದ ಕತೆಯಿಂದಾಚೆಗೆ ಯೋಚಿಸಲೇ ಇಲ್ಲ! ಆ ಎರಡು ಸಿನಿಮಾದ ಕತೆಗಳನ್ನೇ ಹೋಲುವಂಥ ಒಂದು ಹಳಸಲು ಕಥೆ; ಒಂದು ಮಳೆ ಹಾಡು, ಒಂದಿಷ್ಟು ವಿರಹ, ಒಂದಿಷ್ಟು ಹಳಸಲು ಹಾಸ್ಯ, ಜತೆಗೆರಡು ಐಟಂ ಸಾಂಗು, ನಾಲ್ಕು ಫೈಟು, ಐದು ಕೊಲೆ, ಇದೆಲ್ಲದರ ಜತೆಗೆ ಬೋನಸ್ ಎನ್ನುವಂತೆ ನಾಯಕಿಯ ಧಾರಾಳ ಅಂಗಾಂಗ ಪ್ರದರ್ಶನ! ಇಷ್ಟಿದ್ದರೆ ಒಂದು ಸಿನಿಮಾ ನೂರು ದಿನ ಓಡಿಬಿಡುತ್ತೆ ಎಂದೇ ಎಲ್ಲ ಯುವ ನಿರ್ದೇಶಕರೂ ಯೋಚಿಸಿಬಿಟ್ರಿ!

ವಿಷಯ ಹೀಗಿದ್ದರೂ- ನಿಮ್ಮಲ್ಲಿ ಅನೇಕರಿಗೆ ಹತ್ತು ಊರಿಗೆ ಹಂಚಿದರೂ ಮಿಕ್ಕುವಷ್ಟೂ ಅಹಂಕಾರವಿತ್ತು! ಕೆಲಸಕ್ಕೆ ಬಾರದ ಒಣ ಪ್ರತಿಷ್ಠೆಯಿತ್ತು. ಬೆಳೆಯುವವರಿಗೆ ಇರಬಾರದು ನೋಡಿ; ಅಂಥ ಹಠಮಾರಿತನವಿತ್ತು. ಎಂಥ ಪ್ರತಿಭಾವಂತನನ್ನೂ ಅಡ್ಡಡ್ಡ ಮಲಗಿಸಿಬಿಡುವ ವಿಪರೀತದ ಆತ್ಮವಿಶ್ವಾಸವಿತ್ತು. ಹಾಗಾಗಿಯೇ ನೀವು, ಸಿನಿಮಾದ ಮುಹೂರ್ತದ ದಿನವೇ- ಇದು ಎಂಥ ಕಥೆ ಗೊತ್ತ ಸಾರ್. ಸೂಪರ್ ಸೂಪರ್ರಾಗಿದೆ. ಈ ಕತೇನ ರಜನಿಕಾಂತೇ ಕೇಳಿದ್ರು. ನಾನು ಕೊಡಲಿಲ್ಲ. ಹೇಳಿದ್ನಲ್ಲ? ನನ್ನ ಸಿನಿಮಾ ಫುಲ್ ಡಿಫರೆಂಟಾಗಿದೆ ಸಾರ್. ಇದು ನೂರು ದಿನ ಓಡೇ ಓಡುತ್ತೆ. ಓಡಲಿಲ್ಲ ಅಂದ್ರೆ ನಾನು ತಲೆಬೋಳಿಸ್ಕೊಳ್ತೀನಿ ಎಂದೆಲ್ಲ ಕೊಚ್ಚಿಕೊಳ್ತಿದ್ರಿ. ಈ ಮಾತು ಕೇಳಿದ ಜನ ಕೂಡ ಇದೆಲ್ಲ ನಿಜವಿದ್ರೂ ಇರಬಹುದು ಅಂದುಕೊಂಡ್ರು. ಹೀಗೆ ವಿಪರೀತ ನಿರೀಕ್ಷೆ ಹುಟ್ಟಿಸಿದ ಸಿನಿಮಾಗಳು ಬಿಡುಗಡೆಯಾಗುತ್ತವೆ ನೋಡಿ, ಅವೆಲ್ಲ ಭರ್ಜರಿಯಾಗಿ ಓಡುವುದು ಮೂರೇ ವಾರ-ಶುಕ್ರವಾರ, ಶನಿವಾರ ಮತ್ತು ಭಾನುವಾರ! ಸೋಮವಾರದ ಹೊತ್ತಿಗೆ ಥಿಯೇಟರಿನಲ್ಲಿ ಆ ಸಿನಿಮಾನೂ ಇರೋದಿಲ್ಲ. ಬೋರ್ಡಿನಲ್ಲಿ ನಿಮ್ಮ ಹೆಸರೂ ಇರೋದಿಲ್ಲ. ಇಷ್ಟಾದ ಮೇಲಾದ್ರೂ- ನಾನು ಎಲ್ಲೋ ತಪ್ಪು ಮಾಡಿಬಿಟ್ಟೆ ಅಂತ ನೀವು ಒಪ್ಪೋದೇ ಇಲ್ಲ. ಬದಲಿಗೆ ಹೀರೋ ಮೇಲೆ; ಹೀರೋಯಿನ್ ಮೇಲೆ; ನಿರ್ಮಾಪಕರ ಮೇಲೆ; ಪ್ರೇಕ್ಷಕರ ಮೇಲೆ ಗೂಬೆ ಕೂರಿಸ್ತೀರ. ಇಲ್ಲದಿದ್ರೆ ಯಾಕೋ ನಮ್ಮ ಟೈಮೇ ಸರೀಗಿರಲಿಲ್ಲ' ಅಂತ ಹಾರಿಕೆಯ ಮಾತಾಡಿ ಜಾರಿಕೊಳ್ತೀರ.

ಇನ್ನು, ಒಂದು ಸಿನಿಮಾಕ್ಕೆ ನೀವು ಇಡುವ ಹೆಸರು ಕೇಳಿದ್ರೆ-ನಿಮ್ಮನ್ನು ಅಟ್ಟಾಡಿಸಿಕೊಂಡು ಹೋಗಿ ಹೊಡೀಬೇಕು ಅನಿಸುತ್ತೆ. ಯಾಕೆಂದರೆ ಆ ಹೆಸರುಗಳು ಅಷ್ಟು ಅಸಹ್ಯವಾಗಿರ್‍ತವೆ. ವಿಚಿತ್ರವಾಗಿರ್‍ತವೆ, ತಲೆಕೆಟ್ಟವರು ಇಡ್ತಾರಲ್ಲ? ಹಾಗೇ ಇರ್‍ತವೆ. ನೀವು ಬರೆಸೋ ಸಂಭಾಷಣೆಗಳಿಗೂ, ಹಾಡುಗಳಿಗೂ ಅರ್ಥವೇ ಇರಲ್ಲ. ಇನ್ನು, ನನ್ನ ಕಥೆಗೆ ಇಂಥವನೇ ಹೀರೋ ಬೇಕು, ಇಂತಿಂಥ ಕಲಾವಿದರೇ ಬೇಕು ಅಂತ ನೀವು ಯೋಚಿಸುವುದೇ ಇಲ್ಲ. ಒಂದಿಷ್ಟು ದುಡ್ಡಿರುವ ಯಾವನೋ ಬಕ್ರಾ ಬಂದು ಅಣ್ಣೋ, ಒಂದ್ ಸಿನಿಮಾ ಮಾಡಪ್ಪಾ' ಅಂದ್ರೆ ಯೆಸ್' ಅಂದೇಬಿಡ್ತೀರ. ಕಾಸು ಹಾಕಿದ ಮಹರಾಯನಿಗೇ ಹೀರೋ ಪಾತ್ರ ಕೊಡ್ತೀರ. ಆ ಪುಣ್ಯಾತ್ಮನಿಗೆ ಡ್ಯಾನ್ಸ್ ಬಂದ್ರೆ ಆಕ್ಟಿಂಗ್ ಗೊತ್ತಿರಲ್ಲ, ಆಕ್ಟಿಂಗ್ ಬಂದ್ರೆ ಫೈಟಿಂಗ್ ತಿಳಿದಿರೊಲ್ಲ. ಒಂದೆರಡು ಡೈಲಾಗ್ ಹೇಳಯ್ಯಾ ಅಂದ್ರೆ ಬೆಬ್ಬೆಬ್ಬೆ! ಹೀಗಿದ್ರೂ ನೀವು ಹೇಗೋ ಸಿನಿಮಾ ಮುಗಿಸೇ ಬಿಡ್ತೀರ. ಆದರೆ ಹಳೆಯ ಕಥೆ, ಬಡಕಲು ಹೀರೋ, ಕಡಿಮೆ ಬಟ್ಟೆಯ ಇಪ್ಪತ್ತೈದು ಕೇಜಿಯ ಹೀರೋಯಿನ್, ಮಧ್ಯೆ ಮಧ್ಯೆ ಲಾಂಗು-ಮಚ್ಚುಗಳ ಖಣಖಣ, ನಮ್ಮ ವಜ್ರಮುನಿಯ ಕಿರುಬೆರಳಿಗೂ ಸಾಟಿಯಾಗದಂಥ ವಿಲನ್ನು... ಇಂಥವರೇ ತುಂಬಿಕೊಂಡಿರೋ ನಿಮ್ಮ ಸಿನಿಮಾ ನೋಡೋಕೆ-ಜನಕ್ಕೇನಾದ್ರೂ ಹುಚ್ಚು ಹಿಡಿದಿದೆಯೇನ್ರಿ?

ಇಷ್ಟಾಯ್ತು ಇವತ್ತು ಯುವ ನಿರ್ದೇಶಕರು ಅನ್ನಿಸಿಕೊಂಡ ಎಲ್ಲರಿಗೂ ಕಥೆ ಬರೆಯೋ ಇನ್ನೊಂದು ತೆವಲು ಶುರುವಾಗಿದೆ. ಆ ಮೂಲಕ ಎಲ್ಲವನ್ನೂ ನಾನೇ ಮಾಡಿದೆ ಅನ್ನಿಸಿಕೊಳ್ಳುವ ಅವಸರ ನಿಮ್ಮದು. ಆದರೆ ನೀವು ಬರೆಯೋ ಕಥೆಯಾದ್ರೂ ಯಾವುದು ಹೇಳಿ? ಐದಾರು ಸಿನಿಮಾಗಳಿಂದ ಕದ್ದಂಥದ್ದು! ಅಥವಾ ಜತೆಗೇ ಇರುವ ಗೆಳೆಯರಿಂದ ಹಾರಿಸಿಕೊಂಡಂಥಾದ್ದು! ಅಥವಾ ಯಾವುದೋ ಕಾದಂಬರಿಯಿಂದ ಸ್ಫೂರ್ತಿ ಪಡೆದಂಥಾದ್ದು. ಈ ಕಾರಣದಿಂದಲೇ ಯಾರಾದ್ರೂ ಯುವ ನಿರ್ದೇಶಕ ಹೊಸ ಕಥೆ ಬರೆದ ಅಂದರೆ-ಹೌದಾ? ಅದನ್ನು ಅವನು ಎಲ್ಲಿಂದ, ಯಾರಿಂದ ಕದ್ದಿರಬಹುದು ಎಂದು ವ್ಯಂಗ್ಯವಾಗಿ ಕೇಳುತ್ತೆ ಗಾಂಧಿನಗರ. ನಂತರದ ಒಂದೆರಡು ವಾರದಲ್ಲಿ ಆ ಕಥೆಯ ಮೂಲ ಎಲ್ಲಿಯದು ಅಂತ ಕೂಡ ಎಲ್ಲರಿಗೂ ಗೊತ್ತಾಗಿ ರಾಮಾರಂಪ ಆಗಿಬಿಡುತ್ತೆ. ವಿಪರ್‍ಯಾಸ ಕೇಳಿ: ಆಗ ಕೂಡ- ಹೌದು. ನನ್ನದು ಎಲ್ಲಿಂದಲೋ ಸ್ಫೂರ್ತಿ ಪಡೆದ ಕತೆ' ಅಂತ ನೀವು ತಮಾಷೆಗೂ ಒಪ್ಪೋದಿಲ್ಲ. ಬದಲಿಗೆ, ಇದನ್ನು ನಾನು ಹತ್ತು ವರ್ಷದ ಹಿಂದೆಯೇ ಬರೆದಿದ್ದೆ ಅಂತ ರೀಲು ಬಿಡಟ್ಟು ಎಲ್ಲರ ನಂಬಿಕೆ ಕಳ್ಕೋತೀರಿ. ಒಂದು ಗುಮಾನಿಗೆ ಕಾರಣ ಆಗ್ತೀರಿ.

****
ಒಂದು ಸೂಕ್ಷ್ಮ ಅರ್ಥಮಾಡಿಕೊಳ್ರಪ್ಪಾ... ಇವತ್ತು ಶ್ರೇಷ್ಠ ನಿರ್ದೇಶಕರು ಅಂದಾಕ್ಷಣ ನೆನಪಾಗ್ತಾರಲ್ಲ ಪುಟ್ಟಣ್ಣ ಕಣಗಾಲ್, ದೊರೆ-ಭಗವಾನ್, ವಿ. ಸೋಮಶೇಖರ್, ಡಿ. ರಾಜೇಂದ್ರ ಬಾಬು, ಎಂ.ಎಸ್. ರಾಜಶೇಖರ್? ಇವರೆಲ್ಲ ಸ್ವತಂತ್ರ ನಿರ್ದೇಶಕರು ಅನ್ನಿಸಿಕೊಳ್ಳುವ ಮೊದಲು ಒಂದೆರಡಲ್ಲ, ಹದಿನೈದಿಪ್ಪತ್ತು ವರ್ಷ ಅಸಿಸ್ಟೆಂಟ್‌ಗಳಾಗಿ ದುಡಿದ್ರು. ಚಿತ್ರ ನಿರ್ಮಾಣದ ವಿವಿಧ ರಂಗದಲ್ಲಿ ಅನುಭವ ಪಡ್ಕೊಂಡಿದ್ರು. ಬಿಡುವು ಸಿಕ್ಕಾಗೆಲ್ಲ ವಿಪರೀತ ಓದಿಕೊಂಡಿದ್ರು. ಜನರಿಗೆ ಇಷ್ಟವಾಗಬೇಕಾದ್ರೆ ಒಂದು ಸಿನಿಮಾದ ಕಥೆ, ಸಂಭಾಷಣೆ ಹೀಗೇ ಇರಬೇಕು ಅಂತ ಅರ್ಥಮಾಡ್ಕೊಂಡಿದ್ರು. ಹಾಡುಗಳು ಹೇಗಿರಬೇಕು, ಅದಕ್ಕೆ ಸಂಗೀತ ಯಾರದಿರಬೇಕು ಎಂಬ ವಿಷಯವಾಗಿ ಅವರಿಗೆ ಒಂದು ಅಂದಾಜಿತ್ತು. ಒಂದೊಂದು ಸಿನಿಮಾದ ಕತೆಯೂ ಡಿಫರೆಂಟ್ ಆಗಿರಬೇಕು ಎಂದೇ ಅವರೆಲ್ಲ ಲೆಕ್ಕ ಹಾಕ್ತಿದ್ರು. ಮನೆ ಮಂದಿಯೆಲ್ಲ ಕೂತು ನೋಡುವಂಥ ಸಿನಿಮಾ ತೆಗೀಬೇಕು ಅಂತ ಅವರೆಲ್ಲ ಶಪಥ ಮಾಡಿದ್ರು. ಸಿನಿಮಾ ಬಿಡುಗಡೆಗೆ ಮುಂಚೆ ಅವರ್‍ಯಾರೂ ಪತ್ರಕರ್ತರ ಮುಂದೆ ಹೊಸೀತಾ ನಿಲ್ಲಲಿಲ್ಲ. ಒಂದರ ಹಿಂದೊಂದು ಹಿಟ್ ಸಿನಿಮಾ ಮಾಡಿದಾಗ ಕೂಡ ಅವರೆಲ್ಲ- ಇದೆಲ್ಲ ನನ್ನಿಂದಾನೇ ಆಗಿದ್ದು ಅಂತ ಜಂಭ ಹೊಡೆಯಲಿಲ್ಲ. ಯಶಸ್ಸು ಕೈ ಹಿಡಿದ ತಕ್ಷಣ ನೆಲದಿಂದ ನಾಲ್ಕು ಅಡಿ ಮೇಲೆ ನಡೆಯಲು ಶುರು ಮಾಡಲಿಲ್ಲ. ನಾನೇ ಕಥೆ ಬರೀತೀನಿ ಅಂತ ರಚ್ಚೆ ಹಿಡಿದು ಕೂರಲಿಲ್ಲ. ಬದಲಿಗೆ, ನಂಬಿಗಸ್ತರಿಗೆ ಆ ಹೊಣೆ ಹೊರಿಸಿ ತಾವು ನಿರ್ದೇಶನದ ಹೊಣೆ ಹೊರ್‍ತಾ ಇದ್ರು.

ಅದನ್ನೆಲ್ಲ ಈಗಾದ್ರೂ ಅರ್ಥಮಾಡ್ಕೊಳ್ರೋ ಮಾರಾಯ್ರಾ? ಇವತ್ತಿಗೂ ಜನರಿಗೆ ಸಿನಿಮಾದ ಕ್ರೇಜ್ ಇದೆ. ಸಿನಿಮಾ ನೋಡುವ ಹುಚ್ಚಿದೆ. ಬ್ಲಾಕ್ ಟಿಕೆಟ್ ತಗೊಂಡಾದ್ರೂ ಪಿಕ್ಚರ್ ನೋಡುವ ತಾಕತ್ತೂ ಇದೆ. ಆದರೆ ಅವರಿಗೆ ನಿಮ್ಮ ಹಳಸಲು ಕಥೆ ಕಂಡ್ರೆ ಆಗಲ್ಲ. ಥಳುಕು ಬೇಕಿಲ್ಲ. ಮಚ್ಚು-ಲಾಂಗು ಇಷ್ಟವಿಲ್ಲ. ಹಳಸಲು ಚಿತ್ರಾನ್ನದಂಥ ಐಟಂ ಸಾಂಗು-ಬಳುಕುವುದನ್ನೇ ಮರೆತ ನಾಯಕಿಯ ಸೊಂಟ ಮೆಚ್ಚುಗೆ ಆಗ್ತಾ ಇಲ್ಲ. ಅವರಿಗೆ ನಮ್ಮ ಮನೇಲೇ ನಡೀತಿರೋದು ಅನ್ನಿಸುವಂಥ ಕಥೆ ಬೇಕು. ಅದರೊಳಗೆ ನವರಸ ಅಂತಾರಲ್ಲ- ಅದಿರಬೇಕು. ಸಿನಿಮಾದ ಹೀರೊ ನಮ್ಮ ರಾಜ್‌ಕುಮಾರ್ ಥರಾ ಇರಬೇಕೇ ಹೊರತು, ಹಾದಿಬದಿಯ ದಾಸಯ್ಯನ ಥರಾ ಇರಬಾರದು...

ಗೊತ್ತಾಯ್ತಾ? ಮುಂದಾದ್ರೂ ಇದನ್ನೆಲ್ಲ ಅರ್ಥಮಾಡ್ಕೊಂಡು ಸಿನಿಮಾ ತೆಗೀರಿ. ಕನ್ನಡದಲ್ಲಿ ಇಡೀ ಭಾರತೀಯ ಚಿತ್ರರಂಗಕ್ಕೆ ಹಂಚಿದರೂ ಮಿಗುವಷ್ಟು ಕಥೆಗಳಿವೆ. ಮೊದಲು ಅವನ್ನೆಲ್ಲ ಓದುವ ಹವ್ಯಾಸ ಬೆಳೆಸಿಕೊಳ್ಳಿ. ಅದು ಬಿಟ್ಟು- ಎಲ್ಲಿದೇರೀ ಕಥೇ' ಎಂದು ಪೆದ್ದು ಪೆದ್ದಾಗಿ ಕೇಳಿ ಪೆದ್ದ ನನ್ಮಗ' ಅನ್ನಿಸ್ಕೋಬೇಡಿ. ನಿರ್ದೇಶಕ ಅನ್ನಿಸಿಕೊಂಡವರೆಲ್ಲ ಪವಾಡ ಮಾಡೋಕಾಗಲ್ಲ ನಿಜ. ಆದರೆ ಮನರಂಜನೆಯ ನೆಪದಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸುವಂಥ; ಅಸಹ್ಯ ಅನ್ನಿಸುವಂಥ ಸಿನಿಮಾಗಳನ್ನು ನೀಡಬೇಡಿ. ಆ ಮೂಲಕ ಕನ್ನಡ ಚಿತ್ರರಂಗವನ್ನು ಅಧಃಪತನದ ಹಾದಿಗೆ ಎಳೆದೊಯ್ಯಬೇಡಿ. ಮುಂದಿನ ದಿನಗಳಲ್ಲಿ-ನಿಮ್ಮ ಸಿನಿಮಾದ ಹೆಸರು ಹತ್ತು ಮಂದಿ ಮೆಚ್ಚುವಂತಿರಲಿ. ಸಿನಿಮಾಗಳು ಮನೆಮಂದಿಯೆಲ್ಲ ಒಪ್ಪುವಂತಿರಲಿ. ಟೀಮ್ ವರ್ಕ್' ಅಂತಾರಲ್ಲ? ಅದರಲ್ಲಿ ನಂಬಿಕೆ ಇದ್ದಾಗ ಮಾತ್ರ ಇದೆಲ್ಲ ಸಾಧ್ಯವಾಗುತ್ತೆ ಅನ್ನೋ ಸರಳ ಸತ್ಯ ನಿಮಗೆ ನೆನಪಿರಲಿ. ನಮಸ್ಕಾರ.

English summary
An open letter by AR Manikanth to young flop directors of Kannada film industry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X