ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಂಗಲ್ ಡೈರಿ: ಬೆಂಗಳೂರಿನ 'ಆನೆಯ ಗೆಳೆಯರು' ಎಷ್ಟೊಂದು ಕೆಲ್ಸ ಮಾಡ್ತಾರೆ!

By ಗಗನ್ ಪ್ರೀತ್
|
Google Oneindia Kannada News

ಕಳೆದ ವಾರ ಫ್ರೆಂಡ್ಸ್ ಆಫ್ ಎಲಿಫೆಂಟ್ಸ್ ಅವರು ಬೆಂಗಳೂರಿನಲ್ಲಿಆಯೋಜಿಸಿದ್ದ ಕಾರ್ಯಕ್ರಮದ ಬಗ್ಗೆ ನಿಮಗೆ ಹೇಳಿದ್ದೆ. ಆನೆಗಳ ಬಗ್ಗೆ ಅರಿವು ಮೂಡಿಸುತ್ತಾ ಅವುಗಳ ಸಂರಕ್ಷಣೆಗೆ ಇವರು ಮುಂದಾಗಿದ್ದಾರೆ. ಫ್ರೆಂಡ್ಸ್ ಆಫ್ ಎಲಿಫೆಂಟ್ಸ್ ಒಂದು ಸಂಸ್ಥೆ ಅಲ್ಲ, ಅದೊಂದು ವೇದಿಕೆ. ಆನೆಯ ತಜ್ಞರು ಮತ್ತು ಅವುಗಳ ಸಂರಕ್ಷಣೆಗೆ ದುಡಿಯುತ್ತಿರುವವರನ್ನು ಇಲ್ಲಿ ಕರೆತರಲಾಗುತ್ತದೆ. ಆಸಕ್ತರೊಡನೆ ಅವರ ಅನುಭವವನ್ನು ಹಂಚಿಕೊಳ್ಳಲಾಗುತ್ತದೆ.

ಈ ರೀತಿ ಅರಿವು ಮೂಡಿಸುವ ಪ್ರಯತ್ನ ಇವರದ್ದು. ಆನೆಗಳ ಪ್ರಾಮುಖ್ಯ, ಅವುಗಳ ಗುಣ, ಇಂದಿನ ಪರಿಸ್ಥಿತಿ, ಮುಂದಿನ ಪರಿಣಾಮ, ಎಲ್ಲದರ ಬಗ್ಗೆ ಇಲ್ಲಿ ಚರ್ಚೆ ಮಾಡಲಾಗುತ್ತದೆ. ಸಾಮಾನ್ಯ ಜನರು ಕೂಡ ಅವುಗಳ ಸಂರಕ್ಷಣೆಗೆ ಹೇಗೆ ಪಾತ್ರ ವಹಿಸಬಹುದು ಎಂದು ಇಲ್ಲಿ ತಿಳಿಸಲಾಗುತ್ತದೆ.[ಜಂಗಲ್ ಡೈರಿ: ಹಬ್ಬಗಳಲ್ಲಿ ಆನೆಗಳೆಂದರೆ ಸಂಭ್ರಮವಲ್ಲ, ಸಂಕಟ]

ಮಕ್ಕಳಿಂದ ವೃದ್ಧರವರೆಗೆ ಎಲ್ಲರಿಗೂ ಭಾಗವಹಿಸುವ ಅವಕಾಶವಿದೆ. ಆನೆಗಳಿಗೆ ಸಂಬಂಧಪಟ್ಟ ವಿವಿಧ ಸಂಸ್ಥೆಗಳು ಜನರೊಡನೆ ಬೆರೆಯುವ ವೇದಿಕೆ ಈ 'ಫ್ರೆಂಡ್ಸ್ ಆಫ್ ಎಲಿಫೆಂಟ್ಸ್'. ನಾಟಕ, ನೃತ್ಯ , ಸಂಗೀತ, ಚಿತ್ರ ಪ್ರದರ್ಶನ ಮತ್ತಿತರ ರೀತಿಯಲ್ಲಿ ಆನೆಯ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಡ್ರಾಯಿಂಗ್, ಪೇಂಟಿಂಗ್, ಫೋಟೋಗ್ರಫಿಯಂತಹ ಸ್ಪರ್ಧಾತ್ಮಕ ಚಟುವಟಿಕೆಗಳನ್ನು ಕೂಡ ಹಮ್ಮಿಕೊಳ್ಳುತ್ತಾರೆ.

ಹೇಗೆ ಸ್ಥಾಪನೆ ಆಯಿತು?

ಹೇಗೆ ಸ್ಥಾಪನೆ ಆಯಿತು?

2014ನೇ ಇಸವಿಯ ಜನವರಿ ತಿಂಗಳಲ್ಲಿ 'ಎಲಿಫೆಂಟ್ ಅರ್ಥ್' ಎಂಬ ಅಂತಾರಾಷ್ಟ್ರೀಯ ಸಂಸ್ಥೆಯು ಬೆಂಗಳೂರಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಆ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿತ್ತು. ಪ್ರೇಕ್ಷಕರಲ್ಲಿ ಆನೆಗಳ ಸಂರಕ್ಷಣೆ ಮತ್ತು ಬೆಳವಣಿಗೆಗೆ ಕೆಲಸ ಮಾಡುವ ಆಸಕ್ತಿ ಮೂಡಿತು. ಆಗ ಶುರುವಾಗಿದ್ದೇ 'ಫ್ರೆಂಡ್ಸ್ ಆಫ್ ಎಲಿಫೆಂಟ್ಸ್'. ಆನೆಯ ಬಗ್ಗೆ ಅರಿವು ಮತ್ತು ವಿಜ್ಞಾನವನ್ನು ಪ್ರಚಾರ ಮಾಡುವುದು, ಅದರ ಸಂರಕ್ಷಣೆಗೆ ಸಹಕಾರಿಯಾಗಬೇಕು ಎಂಬುದು ಇವರ ವಿಚಾರ. ಈ ತಂಡದಲ್ಲಿ ಎಲ್ಲರೂ ಸ್ವಯಂ ಸೇವಕರು. ಈ ತಂಡದ ಮುಖ್ಯಸ್ಥರು ಸುರೇಂದರ್ ವರ್ಮಾ.

ಸುರೇಂದರ್ ವರ್ಮಾ ಅವರ ಬಗ್ಗೆ..

ಸುರೇಂದರ್ ವರ್ಮಾ ಅವರ ಬಗ್ಗೆ..

ಸುರೇಂದರ್ ವರ್ಮಾ ಬೆಂಗಳೂರಿನ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ನ ಏಷಿಯನ್ ಎಲಿಫೆಂಟ್ ರಿಸರ್ಚ್ ಅಂಡ್ ಕನ್ಸರ್ವೇಷನ್ ವಿಭಾಗದಲ್ಲಿ ಸೀನಿಯರ್ ರಿಸರ್ಚ್ ಸೈಂಟಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ 25 ವರ್ಷಗಳಿಂದ ಏಷಿಯಾಟಿಕ್ ಆನೆಗಳ ಬಗ್ಗೆ ಸಂಶೋಧನೆಯನ್ನು ನಡೆಸುತ್ತಿದ್ದಾರೆ. ಇವರ ಸಂಶೋಧನೆಗೆ ಪ್ರಪಂಚದೆಲ್ಲೆಡೆಯಿಂದ ಮೆಚ್ಚುಗೆ ಬಂದಿದೆ. ನಮ್ಮ ದೇಶದಲ್ಲಿ ಆನೆಗಳ ಮೊದಲನೆಯ ರಿಸರ್ವ್ ಸ್ಥಾಪನೆ ಮಾಡುವುದರಲ್ಲಿ ಇವರ ಪಾತ್ರ ಹೆಚ್ಚಿದೆ. ಬಹಳ ಮುಖ್ಯವಾದ ಆನೆಗಳ ಕಾರಿಡಾರ್ ಗಳನ್ನು ಇವರು ಪತ್ತೆ ಹಚ್ಚಿ, ಅದರ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಯಾವ ಕಾರ್ಯಕ್ರಮ ಮಾಡಿದ್ದಾರೆ?

ಯಾವ ಕಾರ್ಯಕ್ರಮ ಮಾಡಿದ್ದಾರೆ?

ಪ್ರತಿ ತಿಂಗಳ ಕೊನೆಯ ಶನಿವಾರ ಅಥವಾ ಭಾನುವಾರ ಬೆಂಗಳೂರಿನ ರಂಗೋಲಿ ಮೆಟ್ರೋ ಕಲಾ ಕೇಂದ್ರದ ರಂಗಸ್ಥಳ ಆವರಣದಲ್ಲಿ ಫ್ರೆಂಡ್ಸ್ ಆಫ್ ಎಲಿಫೆಂಟ್ಸ್ ನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಏಪ್ರಿಲ್ 2014ರಲ್ಲಿ ಇದು ಆರಂಭವಾಯಿತು. ಇವರ ಮೊದಲ ಕಾರ್ಯಕ್ರಮ, 'ಕಾಲಿಂಗ್ ಗಣೇಶ'. ಆನೆಗಳ ಸಂರಕ್ಷಣೆ ಮತ್ತು ಬೆಳವಣಿಗೆಯ ವಿಚಾರವಾಗಿ ಚರ್ಚೆ ಮಾಡಲಾಯಿತು. ಆ ನಂತರ 'ಎಲಿಫೆಂಟ್ ರೂಟ್ಸ್'. ಆನೆಗಳ ಹೆದ್ದಾರಿ ಮತ್ತು ಕುಗ್ಗುತ್ತಿರುವ ಕಾಡು ಆ ವಾರದ ವಿಷಯ. ಆ ನಂತರ 'ಹ್ಯೂಮನ್ ಅಂಡ್ ಎಲೆಫಂಟ್ಸ್'- ಮನುಷ್ಯ ಮತ್ತು ಆನೆಯ ನಡುವಿನ ಸಂಘರ್ಷ. ಹೀಗೆ ಈ ವರೆಗೆ 35 ಕಾರ್ಯಕ್ರಮಗಳನ್ನು ಮಾಡಲಾಗಿದೆ.

ಮಾನವ-ಆನೆ ಸಂಘರ್ಷ

ಮಾನವ-ಆನೆ ಸಂಘರ್ಷ

ಆನೆಗಳು ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ಹಾಳು ಮಾಡುವ ಬಗ್ಗೆ ಓದಿರುತ್ತೀವಿ, ಕೇಳಿರುತ್ತೀವಿ. ಕಾಡು ಪ್ರಮಾಣ ಚಿಕ್ಕದಾಗುತ್ತಿರುವ ಕಾರಣ ಆನೆಗಳು ತೋಟ ಹಾಗೂ ಗದ್ದೆಗಳಿಗೆ ನುಗ್ಗಿಬಿಡುತ್ತವೆ. ಮಾನವ- ಆನೆ ಸಂಘರ್ಷ ಉಂಟಾಗುತ್ತದೆ. ಗುಂಡು, ಸಿಡಿ ಮದ್ದುಗಳನ್ನು ಹಾರಿಸಲಾಗುತ್ತಿದೆ. ಇದರಿಂದ ಕೆಲವೊಮ್ಮೆ ಆನೆಗಳು ಸಾಯುತ್ತವೆ. ಕಬ್ಬು, ಭತ್ತ, ಬಾಳೆಹಣ್ಣಿನಂತಹದ್ದನ್ನು ಹೆಚ್ಚಾಗಿ ಸೇವಿಸುವುದರಿಂದ ಅವುಗಳಲ್ಲಿ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಫ್ರೆಂಡ್ಸ್ ಆಫ್ ಎಲಿಫೆಂಟ್ಸ್ ಸ್ವಯಂ ಸೇವಕರು ಇಂತಹ ಕೆಲವು ಪ್ರದೇಶಗಳನ್ನು ಪತ್ತೆ ಮಾಡಿ, ಅಲ್ಲಿ ಎಲಿಫೆಂಟ್ ಬ್ಯಾರಿಯರ್ ಗಳನ್ನು ನಿರ್ಮಿಸಲು ಮುಂದಾಗಿದ್ದಾರೆ. ಇದು ಎಲ್ಲರಿಂದ ಮೆಚ್ಚುಗೆ ಪಡೆದಿದೆ.

ನೀವು ಹೇಗೆ ಭಾಗವಹಿಸಬಹುದು

ನೀವು ಹೇಗೆ ಭಾಗವಹಿಸಬಹುದು

ಈ ತಿಂಗಳ 26ನೇ ತಾರೀಕಿನಂದು (ಭಾನುವಾರ ) ಸಂಜೆ 6.30ಕ್ಕೆ ರಂಗೋಲಿ ಮೆಟ್ರೋ ಕಲಾಕೇಂದ್ರದ ರಂಗಸ್ಥಳ ಆವರಣದಲ್ಲಿ ಫ್ರೆಂಡ್ಸ್ ಆಫ್ ಎಲಿಫೆಂಟ್ಸ್ ಅವರ ಕಾರ್ಯಕ್ರಮವಿದೆ. ಬನ್ನೇರುಘಟ್ಟದ ಕಾಡಿನ ಬಗ್ಗೆ ವಿಡಿಯೋ ಚಿತ್ರಣ ಇರುತ್ತದೆ ಹಾಗೂ ಚರ್ಚೆ-ಮಾತುಕತೆ ಇರುತ್ತದೆ. ನೀವೂ ಭಾಗವಹಿಸಿ. ಪ್ರವೇಶ ಉಚಿತವಿರುತ್ತದೆ. ನಿಮಗೂ ಸ್ವಯಂ ಸೇವಕರಾಗುವ ಇಚ್ಛೆ ಇದ್ದಲ್ಲಿ ಸುರೇಂದರ್ ವರ್ಮಾ ಅವರಿಗೆ ಈ ಮೇಲ್ [email protected] ಮಾಡಿ ಅಥವಾ ರಂಗನಿಧಿ ಅವರಿಗೆ (ಮೊ. 9620169369) ಕರೆ ಮಾಡಬಹುದು.

English summary
Bengaluru's 'Friends of Elephants' team putting an effort to Elephant conservation. Here, columnist Gagan Preeth explains functions of 'Friends of Elephants' team.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X